ಪಕ್ಷಿನೋಟ | ಕೆಂಜಿಗ ಎಂಬ ಸೋಜಿಗದ ಜೊತೆಗೊಂದು ದಿನ

Kenjiga 1

ಕೆಲವು ಕೆಂಜಿಗಗಳು ಒಂದಕ್ಕೊಂದು ಎಲೆಯನ್ನು ಹಿಡಿದು ಎಳೆದು ಜೋಡಿಸಿದರೆ, ಮತ್ತೆ ಕೆಲವು ಕೆಂಜಿಗಗಳು ತಮ್ಮ ಬಾಯಿಯಲ್ಲಿ ಹಿಡಿದ ಲಾರ್ವಾಗಳ ಸಹಾಯದಿಂದ ಹೊಲಿಗೆ ಹಾಕುತ್ತವೆ. ಲಾರ್ವಾಗಳನ್ನು ಹಿಡಿದು ಒತ್ತುತ್ತ, ಅವುಗಳಿಂದ ಬರುವ ರೇಷ್ಮೆ ನೂಲಿನಲ್ಲಿ ಒಂದು ಎಲೆಯಿಂದ ಮತ್ತೊಂದು ಎಲೆಗೆ ಅತ್ತ-ಇತ್ತ ಮುಟ್ಟುತ್ತ, ಬಿಡಿಸಲಾಗದ ಬಲೆ ಹೆಣೆಯುತ್ತವೆ

ಎಂದಿನಂತೆ ಬೆಳಗ್ಗೆ ಎದ್ದವನೇ ತೋಟದ ಸಾಲು ಹಿಡಿದು ಸಾಗಿದೆ. ಮನೆಯ ಹಿಂದಿನ ತೋಟ ದಾಟಿ ಸಾಲು ತೇಗದ ಮರಗಳ ಬಳಿ ನಡೆಯುತ್ತಿದ್ದವನನ್ನು ತಡೆದು ನಿಲ್ಲಿಸಿದ್ದು ಒಂದು ಸಣ್ಣ ಕೆಂಜಿಗ. ಅದೇನೋ ಬಿಳಿ ಮೊಟ್ಟೆಯೋ ಅಥವಾ ಮರಿಯನ್ನೋ ಹೊತ್ತು ಸಾಗುತ್ತಿದ್ದ ಕೆಂಜಿಗನನ್ನು ನೋಡುತ್ತಲೇ ನಿಂತವನಿಗೆ ಎಂಥದ್ದೂ ಅರ್ಥವಾಗದೆ ಮುಂದೆ ನಡೆದೆ.

ಇದಾಗಿ ಕೆಲವು ತಿಂಗಳ ಬಳಿಕ ಆಗಸ್ಟ್‌ನಲ್ಲಿ ಮಳೆ ಬಂದು ತೋಟದ ಬೇಲಿಗಳೆಲ್ಲ ಯಥೇಚ್ಚವಾಗಿ ಬೆಳೆದು ನಿಂತಿದ್ದವು. ನಾವು ಕ್ಯಾಮೆರಾ ಹಿಡಿದು ತೋಟದ ಸಾಲುಗಳನ್ನು ಸುತ್ತುತ್ತ, ಎಂಥದಾದರೂ ಹಕ್ಕಿ ವಿಶೇಷಗಳು ಸಿಕ್ಕರೆ 'ದೂರದರ್ಶನ'ಕ್ಕೆ ಡಾಕ್ಯುಮೆಂಟರಿ ತಯಾರಿಸಲು ಪರದಾಡುತ್ತಿದ್ದೆವು. ಇತ್ತ ಸಂಜೆಯಾಗುತ್ತ ಬಂದಿತ್ತು. ಆದರೆ, ಎಲ್ಲೋ ಮಾಂಸದ ಅಡಿಗೆಯಂತಹ ವಾಸನೆ ಬಂದು ನನ್ನ ಮೂಗು ಅರಳಿತು. ಸುತ್ತಲೂ ನೋಡಿದೆ, ಏನೂ ಕಾಣಲಿಲ್ಲ. ನನ್ನ ಬಲಕ್ಕೆ ಹೊಂಗೆ ಮರವೊಂದನ್ನು ಮೇಲಿನಿಂದ ಕೆಳಗಿನವರೆಗೆ ಕಣ್ಣಾಡಿಸಿದೆ. ದೊಡ್ಡ-ದೊಡ್ಡ ಹಕ್ಕಿಗಳನ್ನು ಗುರುತಿಸಲಷ್ಟೇ ನನ್ನ ಕಣ್ಣುಗಳು ಟ್ಯೂನ್ ಆಗಿದ್ದ ಕಾರಣ, ಸಣ್ಣ-ಪುಟ್ಟ ಕೀಟಗಳು ಕಾಣಿಸುತ್ತಿರಲಿಲ್ಲ.

Image
Kenjiga 2

ಆದರೆ, ಸೂಕ್ಷ್ಮವಾಗಿ ಗಮನಿಸಿದ ನನಗೆ ಅಲ್ಲೊಂದು ಸರಪಳಿ ಕಾಣಿಸಿತು. ಅರೆ... ಅದು ಮಾನವ ಸರಪಳಿಯೋ, ಕಬ್ಬಿಣದ ಸರಪಳಿಯೋ ಅಲ್ಲ, ಕೆಂಜಿಗಗಳ ಸರಪಳಿ! ಮೊದಲ ಬಾರಿಗೆ ಹೀಗೆ ಕೀಟಗಳು ಒಂದನ್ನೊಂದು ಹಿಡಿದು ಸರಪಳಿ ನಿರ್ಮಾಣ ಮಾಡಿದ್ದು ಕಂಡಿದ್ದೆ. ಈ ಕೆಂಜಿಗಗಳು ಹೊಂಗೆಮರದ ಸಣ್ಣ ರೆಂಬೆಯೊಂದನ್ನು ಎಳೆದು ಈಗಾಗಲೇ ಅರ್ಧ ತಯಾರಾಗಿರುವ ತಮ್ಮ ಗೂಡಿಗೆ ಸೇರಿಸಲು ಪ್ರಯತ್ನಿಸುತ್ತಿದ್ದವು. ಮನೆಗೆ ಬಂದವನೇ ಇವುಗಳ ಬಗ್ಗೆ ಓದಿದಾಗ ಕೆಂಜಿಗಗಳ ಬದುಕು ಬಹಳ ಅಚ್ಚರಿ ಎನಿಸಿತ್ತು.

ಮರುದಿನ ಮತ್ತೆ ಆ ಜಾಗಕ್ಕೆ ಬಂದು ನಿಂತಾಗ, ಕೆಂಜಿಗಗಳ ಗೂಡು ಸಂಪೂರ್ಣ ಕಟ್ಟಿಯಾಗಿತ್ತು. ಆದರೆ, ಆ ಮರದಲ್ಲೇ ಮತ್ತೊಂದು ಕೆಂಜಿಗಗಳ ಗುಂಪು ಹೊಸ ಗೂಡಿನ ತಯಾರಿ ಶುರುಮಾಡಿಕೊಂಡಿದ್ದವು. ಗೂಡಿನ ಬಳಿ ನಿಂತು ಇದನ್ನು ಶೂಟ್ ಮಾಡಲು ತೊಡಗಿದ ನಮ್ಮನ್ನು, ಅರ್ಧ ಗಂಟೆಯೊಳಗೆ ಸೊಳ್ಳೆಗಳು ಅರೆದು ತಿನ್ನಲು ಆರಂಭಿಸಿದವು. ಆಗಸ್ಟ್ ತಿಂಗಳ ಮಳೆಯೂ ಬೆಳೆದ ಬೇಲಿಗಳೂ ಸೊಳ್ಳೆಗಳಿಗೆ ಮೊಟ್ಟೆ ಇಡಲು ಒಳ್ಳೆಯ ಕಾಲವಿರಬೇಕು, ತೋಟದ ಕೋಟ್ಯಂತರ ಹೆಣ್ಣು ಸೊಳ್ಳೆಗಳು ನಮ್ಮ ರಕ್ತಕ್ಕೆ ಹಾತೊರೆದಿದ್ದವು.

ಸೊಳ್ಳೆಗಳಿಗೆ ಅದರಲ್ಲೂ ಹೆಣ್ಣು ಸೊಳ್ಳೆಗಳಿಗೆ ರಕ್ತ ಅವಶ್ಯ. ಪ್ರಾಣಿಗಳ ರಕ್ತದಲ್ಲಿ ಸಿಗುವ ಹಲವು ಪೋಷಕಾಂಶಗಳನ್ನು ಹೀರಿಕೊಂಡು ಈ ಹೆಣ್ಣು ಸೊಳ್ಳೆಗಳು ಮೊಟ್ಟೆಗಳನ್ನು ಇಡುತ್ತವೆ. ಆದರೆ, ಗಂಡು ಸೊಳ್ಳೆಗಳಿಗೆ ಈ ರಕ್ತದ ಅವಶ್ಯಕತೆ ಇರುವುದಿಲ್ಲ. ತಮ್ಮ ಚೂಪಾದ ಮೂತಿಯಿಂದ ನಿಮ್ಮ ರಕ್ತನಾಳಗಳಿಂದ ರಕ್ತ ಹೀರಿ ತಮ್ಮ ಜೊಲ್ಲನ್ನು ಅಲ್ಲಿ ಬಿಡುತ್ತವೆ. ಆ ಜೊಲ್ಲು ಬಿಡುವ ಕಾರಣ - ನಮ್ಮ ರಕ್ತ ಅವುಗಳ ಮೂತಿಯಲ್ಲಿಯೇ ಹೆಪ್ಪುಗಟ್ಟಬಾರದು ಎಂದು. ಆದರೆ, ಈ ಜೊಲ್ಲನ್ನು ನಮ್ಮ ದೇಹ ಯಾವುದೋ ಅಲರ್ಜಿನ್ ಎಂದು ಪರಿಗಣಿಸಿ ಹಿಸ್ಟಮೈನ್ ಎಂಬ ರಾಸಾಯನಿಕ ಬಿಡುಗಡೆ ಮಾಡುತ್ತದೆ. ಇದರ ಕಾರಣವಾಗಿ, ಕಡಿದ ಜಾಗದಲ್ಲಿ ತುರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಅರ್ಧ ಗಂಟೆಯ ಹೊತ್ತಿಗೆ ನಮ್ಮ ಮೈ-ಕೈ ತುಂಬಾ ಹಿಸ್ಟಮೈನ್ ತುಂಬಿ ತುಳುಕುತ್ತಿತ್ತು ಅಂದರೆ, ಆ ಯಮಯಾತನೆ ಅಂದಾಜಿಸಿಕೊಳ್ಳಿ. ತುರಿಕೆ ತಡೆಯಲಾಗದೆ ಮನೆಗೆ ಓಡಿದೆವು.

ಮತ್ತಷ್ಟು ಮುಖಗವಸು, ದೇಹದ ಮೇಲೊಂದು ಜರ್ಕಿನ್, ಅಡಿಯಿಂದ ಮುಡಿಯವರಗೆ ಎಲ್ಲ ಮುಚ್ಚಿಕೊಂಡು ಕಣ್ಣಿನ ಜಾಗದಲ್ಲಿ ಮಾತ್ರ ತೆರೆದು ವಾಪಸಾಗಿ ಶೂಟಿಂಗ್ ಶುರು ಮಾಡಿದಾಗ, ಆ ಗೂಡಿನಲ್ಲಿ ಕೆಲವು ಕೆಂಜಿಗಗಳು ನಾನು ಈ ಮೊದಲಿಗೆ ಕಂಡಿದ್ದ ರೀತಿಯೇ ಬಿಳಿ ವಸ್ತುವನ್ನು ಹೊತ್ತು ತಿರುಗುತ್ತಿರುವುದು ಕಾಣಿಸಿತು. ಈ ಬಿಳಿ ಜೀವ ಏನೆಂದರೆ, ಕೆಂಜಿಗಗಳ ಕುಟುಂಬದ ಅತೀ ಕಿರಿಯ ಸದಸ್ಯನಾದ ಕೋಶಾವಸ್ಥೆಯಲ್ಲಿ ಇರುವ ಲಾರ್ವಾಗಳು.

ಈ ಲೇಖನ ಓದಿದ್ದೀರಾ?: ಪಕ್ಷಿನೋಟ | ಮರಿಗಳಿಗೆ ಗಂಡು ಹಕ್ಕಿ ತಂದು ಕೊಟ್ಟ ಸೂರ್ಯನ ಕುದುರೆಯನ್ನು ಹೆಣ್ಣು ಹಕ್ಕಿ ಕಿತ್ತೊಯ್ದಿದ್ದೇಕೆ?

ಕೆಲ ಕೆಂಜಿಗಗಳು ಒಂದಕ್ಕೊಂದು ಎಲೆಯನ್ನು ಹಿಡಿದು ಎಳೆದು ಜೋಡಿಸಿದರೆ, ಮತ್ತೆ ಕೆಲವು ಕೆಂಜಿಗಗಳು ತಮ್ಮ ಬಾಯಿಯಲ್ಲಿ ಹಿಡಿದ ಲಾರ್ವಾಗಳ ಸಹಾಯದಿಂದ ಹೊಲಿಗೆ ಹಾಕುತ್ತವೆ.  ಲಾರ್ವಾಗಳನ್ನು ಹಿಡಿದು ಒತ್ತುತ್ತ, ಅವುಗಳಿಂದ ಬರುವ ರೇಷ್ಮೆ ನೂಲಿನಲ್ಲಿ ಒಂದು ಎಲೆಯಿಂದ ಮತ್ತೊಂದು ಎಲೆಗೆ ಅತ್ತ-ಇತ್ತ ಮುಟ್ಟುತ್ತ, ಬಿಡಿಸಲಾಗದ ಬಲೆ ಹೆಣೆಯುತ್ತವೆ. ಅದರೊಳಗೆ ಆಗಲೇ ರಾಣಿ ಕೆಂಜಿಗ ಒಂದೆಲೆ ಮೇಲೆ ಮೊಟ್ಟೆ ಇಟ್ಟಿರುತ್ತಾಳೆ. ಆ ರಾಣಿ ಮತ್ತು ಮೊಟ್ಟೆಗಳ ಸುತ್ತಲೂ ಎಲೆಗಳನ್ನು ಎಳೆದು ರೇಷ್ಮೆ ನೂಲಿನಿಂದ ಹೊಲೆದು ಭದ್ರ ಕೋಟೆ ನಿರ್ಮಿಸಿ ಹೊರಗೆ ಕಾವಲುಗಾರ ಕೆಂಜಿಗಗಳು ಕಾಯುತ್ತ ನಿಲ್ಲುತ್ತವೆ. ಕೆಂಜಿಗಗಳು ತಮ್ಮ ಬದುಕು ಕಟ್ಟಿಕೊಳ್ಳಲು ಹಾಕುವ ಪರಿಶ್ರಮ ಮತ್ತು ಶ್ರದ್ಧೆ ಅಪ್ರತಿಮ.

ಹಲವು ಬಾರಿ ನಮ್ಮ ರೈತರು ತಮ್ಮ ತೋಟಗಳಲ್ಲಿ ಕಾಣುವ ಕೆಂಜಿಗಗಳಿಗೆ ಹೆದರಿ ನಾಶ ಮಾಡುತ್ತಾರೆ. ಆದರೆ, ಕೆಂಜಿಗಗಳು ನಮ್ಮ ತೋಟದಲ್ಲಿ ಇರುವುದರಿಂದ ಅನೇಕ ಲಾಭಗಳಿವೆ. ನಮ್ಮ ತೋಟವನ್ನು ಕಾಯುವ ಸೈನಿಕರು ಇವು. ಅವುಗಳಿಗೆ ತೊಂದರೆ ಎನಿಸಿದಾಗ ಮಾತ್ರ ನಮ್ಮನ್ನು ಕಚ್ಚುತ್ತವೆಯಷ್ಟೇ. ಆದರೆ, ತೋಟದಲ್ಲಿ ಸಿಗುವ ಅನೇಕ ಕೀಟಗಳನ್ನು ಹಿಡಿದು ತಿನ್ನುತ್ತ ನಮ್ಮ ತೋಟದ ಕೀಟ ನಿರ್ವಹಣೆಯಲ್ಲಿ ಪಾಲ್ಗೊಳ್ಳುತ್ತವೆ. ಕೆಂಜಿಗಗಳು ಗೂಡು ಮಾಡುವ ಮರದಲ್ಲಿ ಒಳ್ಳೆ ಫಸಲು ಕೂಡ ಬರುತ್ತದೆ ಎಂಬ ನಂಬಿಕೆ ಇದೆ. ಆದರೆ, ಇವುಗಳ ಸಂಖ್ಯೆ ಹೆಚ್ಚಾದರೆ ತೋಟದಲ್ಲಿ ಕೆಲಸ ಮಾಡುವುದು ಹೇಗೆ ಎಂದರೆ ಅದಕ್ಕೂ ಪ್ರಕೃತಿಯಲ್ಲಿ ಉತ್ತರವಿದೆ.

Image
Kenjiga 4

ಒಮ್ಮೆ ತೋಟದಲ್ಲಿ ಕ್ಯಾಮೆರಾ ಹಿಡಿದು ಕೂತಿದ್ದೆ. ತಿಪಟೂರು ತೆಂಗಿನ ತೋಟಗಳಲ್ಲಿ ಸಾಮಾನ್ಯವಾಗಿ ಕಾಣುವ ಬಣ್ಣಬಣ್ಣದ ಹಕ್ಕಿಯಾದ ಸುವರ್ಣ ಬೆನ್ನಿನ ಮರಕುಟಿಗ ಹಾರುತ್ತ ಬಂದು ತೇಗದ ಮರವೊಂದರ ಮೇಲೆ ಕುಳಿತಿತು. ನಾನು ಕ್ಯಾಮೆರಾ ತಿರುಗಿಸಿ ಸೆರೆಹಿಡಿಯುವಲ್ಲಿ ಮಗ್ನನಾದೆ. ಮರವೊಂದಕ್ಕೆ ಒರಗಿ ಕುಳಿತಿದ್ದವನ ಕತ್ತಿಗೆ ಎರಡು ಕೆಂಜಿಗಗಳು ಸರಿಯಾಗಿ ಕಚ್ಚಿದ್ದರಿಂದ ಕ್ಯಾಮೆರಾ ಬಿಟ್ಟು ಎದ್ದು ನಡೆದೆ. ತಿಳಿಯದೆ ಕೆಂಜಿಗಗಳ ಸಾಲಿಗೆ ಅಡ್ಡ ಕೂತಿದ್ದ ನನ್ನ ಮೇಲೆ ಈ ಕೆಂಜಿಗಗಳ ಗುಂಪು ಎರಗಿತ್ತು. ಅತ್ತ ನಿಧಾನವಾಗಿ ಮರಕುಟಿಗ ಮರ ಏರುತ್ತಿತ್ತು. ತೋಟದಲ್ಲಿ ಸುಮಾರು ಹತ್ತದಿನೈದು ತೇಗದ ಮರಗಳಿದ್ದು, ಎಲ್ಲ ಮರಗಳಲ್ಲೂ ಕೆಂಜಿಗಗಳು ಗೂಡು ಮಾಡಿದ್ದವು. ಬೇರೆಡೆಗಿಂತ ಇಲ್ಲಿ ಹೆಚ್ಚೇ ಕೆಂಜಿಗನ ಗೂಡು ಇರುವುದು ಗಮನಿಸಿದ್ದೆ. ಆದರೆ, ಇಂದು ಆಶ್ಚರ್ಯವೊಂದು ಕಾದಿತ್ತು. ಈ ಮರಕುಟಿಗ ಮರದ ತುದಿ ತಲುಪಿದ್ದೇ ತಡ, ಈ ಕೆಂಜಿಗಗಳ ಗೂಡಿಗೆ ದಾಳಿ ಮಾಡಿತು. ದಾಳಿ ಮಾಡಿದ ತಕ್ಷಣ ಕೆಂಜಿಗಗಳು ಎದುರು ನಿಂತು ಹೋರಾಟ ಮಾಡುತ್ತಿದ್ದರೆ, ಈ ಕುಟಿಗ ಸಿಕ್ಕ-ಸಿಕ್ಕ ಕೆಂಜಿಗಗಳನ್ನು ಬಾಯಿಗೆ ಹಾಕಿಕೊಳ್ಳುತ್ತ, ಇಡೀ ಗೂಡನ್ನೇ ಧ್ವಂಸ ಮಾಡಿದ್ದು ಅಚ್ಚರಿ ತರಿಸಿತ್ತು. ಇದರ ದಾಳಿಗೆ ಹೆದರಿದ ಹಲವು ಕೆಂಜಿಗಗಳು ದಿಕ್ಕಾಪಾಲಾಗಿ ಮರದ ಕೆಳಗೆ ಇಳಿದು ಓಡತೊಡಗಿದವು. ಮತ್ತೆ ಅವುಗಳ ಸಾಲಿಗೆ ಅಡ್ಡಗಟ್ಟಿ ಈ ಮರಕುಟಿಗ ಹೊಟ್ಟೆ ತುಂಬಿಸಿಕೊಂಡಿತ್ತು.

ಕೀಟಗಳು ಹೆಚ್ಚಾದರೆ ಕೆಂಜಿಗಗಳು ಹಿಡಿದು ತಿನ್ನುತ್ತವೆ ಅಥವಾ ಕೆಂಜಿಗಗಳೇ ಹೆಚ್ಚಾದರೆ ಮರಕುಟಿಗಗಳು ಅವುಗಳನ್ನು ನಿಯಂತ್ರಣ ಮಾಡುತ್ತವೆ. ಹೀಗೆ, ಈ ಪರಿಸರದಲ್ಲಿ ಬಿಡಿಸಲಾರದ ನಂಟು ಬಿಗಿದುಕೊಂಡಿರುತ್ತದೆ.

ನಿಮಗೆ ಏನು ಅನ್ನಿಸ್ತು?
5 ವೋಟ್