ಹೊಸಿಲ ಒಳಗೆ-ಹೊರಗೆ | ಅದೊಂದು ದಿನ ಇದ್ದಕ್ಕಿದ್ದಂತೆ ತನ್ನ ಹೆಸರನ್ನೇ ಮರೆತವಳ ಕತೆ

ಚರಿತೆಯ ಪುಟಗಳನ್ನು ಬಿಡಿಸಿ ಸರಿಯಾಗಿ ನೋಡಿದರೆ, 'ಅವನು’ ಏನು ಮಾಡಿದ, 'ಅವನು' ಏನನ್ನು ಕಂಡುಹಿಡಿದ ಎಂಬುದರ ಉದ್ದಾನುದ್ದ ವಿವರಣೆ ಇದೆಯೇ ಹೊರತು, 'ಅವಳ' ಹೆಜ್ಜೆ ಗುರುತುಗಳೇ ದಾಖಲಾಗಿಲ್ಲ. ಕೃಷಿಯನ್ನು ಕಂಡುಹಿಡಿದದ್ದು ‘ಹೆಣ್ಣು’ ಎಂದು ಅನೇಕ ಸಂಶೋಧನೆಗಳು ಸಾಬೀತು ಮಾಡಿವೆ. ಆದರೆ, ಇಂತಹ ನಿಜಗಳು ಎಷ್ಟು ಮಂದಿಗೆ ಗೊತ್ತು?

ಇದು ಒಂದು ಕತೆ. ಸಾಮಾನ್ಯ ಕತೆ. ಒಂದೂರಿನಲ್ಲಿ ಒಬ್ಬಳು ಮಹಿಳೆ, ಎಲ್ಲರ ಹಾಗೆ ಇರುತ್ತಾಳೆ. ಎಲ್ಲರ ಹಾಗೆ ಬೆಳೆಯುತ್ತಾಳೆ. ಮದುವೆಯೂ ಆಗುತ್ತದೆ. ಆಮೇಲೆ ಮಕ್ಕಳೂ ಹುಟ್ಟುತ್ತಾರೆ. ಮನೆಗೆಲಸ, ಮಕ್ಕಳ ಲಾಲನೆ-ಪಾಲನೆಯಲ್ಲಿ ಬದುಕು ಸವೆಯುತ್ತಿರುತ್ತದೆ. ಒಂದಷ್ಟು ವರುಷಗಳು ಹೀಗೇ ಕಳೆದಿರುತ್ತದೆ. ಒಂದು ದಿನ ಅವಳು ತನ್ನ ಪಾಡಿಗೆ ಏನೋ ಕೆಲಸ ಮಾಡುತ್ತಿದ್ದಾಗ, ಚಕ್ಕಂತ ಅವಳಿಗೆ ತನ್ನ ಹೆಸರೇ ಮರೆತುಹೋಗುತ್ತದೆ!

...ಹೇಗನಿಸಬಹುದು? ಯೋಚಿಸಿ... ಕಷ್ಟ ಅನಿಸುತ್ತದೆ ಅಲ್ಲವೇ? ಅವಳಿಗೂ ತುಂಬಾನೇ ದಿಗಿಲಾಯಿತು. ದಿಕ್ಕು ತೋಚದ ಹಾಗೆ ಅನಿಸಿತು. ಶಾಲೆಗೆ ಹೋದ ಮಕ್ಕಳು ಮನೆಯೊಳಗೆ ಕಾಲಿರಿಸುತ್ತಿದ್ದಂತೆಯೇ ಕೇಳುತ್ತಾಳೆ, "ಮಕ್ಕಳೇ ನನ್ನ ಹೆಸರು ಏನು?” ಅವರಿಗೆ ಆಶ್ವರ್ಯ. ಆಮೇಲೆ ಹೆಚ್ಚು ತಲೆಕೆಡಿಸಿಕೊಳ್ಳದೆ, "ಅಮ್ಮ," ಅಂತ ಹೇಳಿ ಆಟಕ್ಕೆ ಓಡುತ್ತಾರೆ. ಅವಳು ಗಂಡನಿಗಾಗಿ ಕಾಯುತ್ತಾಳೆ. ಪ್ರೀತಿಸುವ ಗಂಡ. ವಿಷಯ ಹೇಳಿದ ತಕ್ಷಣ, "ಅಯ್ಯೋ... ಅದಕ್ಕೆ ಯಾಕೆ ಬೇಸರ! ಹೆಸರು ಕಟ್ಟಿಕೊಂಡು ಏನಾಗಬೇಕಾಗಿದೆ? ನೀನು ನನ್ನ ಹೃದಯದ ಅರಸಿ, ಯಾವ ಹೆಸರು ಬೇಕೋ ಅದನ್ನೇ ಇಟ್ಟುಕೊಳ್ಳೋಣ. ಈಗ ಒಂದು ಬಿಸಿ-ಬಿಸಿ ಕಾಫಿ ಹಿಡ್ಕೊಂಡು ಬಾ,” ಅಂತ ಉತ್ತರಿಸುತ್ತಾನೆ.

ಅವಳಿಗೆ ಅಂದು ನಿದ್ದೆಯೇ ಇಲ್ಲ. ಮರುದಿನ ಹೀಗೇ ತುರ್ತು ಕೆಲಸಗಳನ್ನು ಮುಗಿಸಿ ಗೆಳತಿ ಮನೆಗೆ ಹೋಗುತ್ತಾಳೆ. ಕದ ತಟ್ಟುತ್ತಾಳೆ. ಕದ ತೆರೆದ ಗೆಳತಿ, "ಓಹೋ ಶಾರದಾ, ಎಷ್ಟೊಂದು ದಿನಗಳಾದವು ಕಾಣದೆ, ಹೇಗಿದ್ದೀಯಾ?” ಅಂತ ಆದರದಿಂದ ಕರೆಯುತ್ತಾಳೆ. ಶಾರದಾಳ ಸಂತೋಷಕ್ಕೆ ಎಣೆಯೇ ಇಲ್ಲ.

Image

ಇಲ್ಲಿಗೆ ಕತೆ ಮುಗಿಯಿತು. ಹೇಗಿತ್ತು ಕತೆ? ತೆಲುಗು ಲೇಖಕಿಯೊಬ್ಬರು ಬರೆದ ಈ ಕತೆ ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ಕಿವಿಗೆ ಬಿದ್ದಿತ್ತು. ನೇರ ಎದೆಗೆ ನಾಟಿತ್ತು. ಅಂದಿನಿಂದ ಇಂದಿನವರೆಗೂ ಈ ಕತೆಯನ್ನು ಲೆಕ್ಕವಿಲ್ಲದಷ್ಟು ಸಾರಿ ಹೇಳಿದ್ದೇನೆ. ಯಾವುದೇ ಹಿನ್ನೆಲೆಯ ಮಂದಿಗೂ ಈ ಕತೆ ಅರ್ಥವಾಗಲಿಲ್ಲ ಅಂತ ಅನಿಸಲೇ ಇಲ್ಲ. ಈ ಕತೆ ಬಹಳ ಸಾಂಕೇತಿಕವಾಗಿ, ಸೃಜನಶೀಲವಾಗಿ ಮಹಿಳೆಯರ ಅಸ್ಮಿತೆಯ ಪ್ರಶ್ನೆಯನ್ನು ಎತ್ತುತ್ತದೆ. ಕತೆ ಹೇಳಿದಾಗ, “ಓಹ್, ಇದು ನಮ್ಮದೇ ಕತೆ; ಅವಳು ತನ್ನನ್ನೇ ಮರೆತ ಹಾಗೆ ಆಯಿತು; ಪಾತ್ರೆ ಉಜ್ಜೀ ಉಜ್ಜೀ ಬಟ್ಟೆ ಒಗೆದೂ ಒಗೆದೂ ಅದರಲ್ಲೇ ಆಯಿತು,” ಎಂಬ ಪ್ರತಿಕ್ರಿಯೆಗಳು ಬಂದಿವೆ. ಈ ಕತೆಯಲ್ಲಿ ಮಕ್ಕಳು ಅವಳನ್ನು, ‘ಅಮ್ಮ’ ಆಗಿ, ಗಂಡ ‘ಹೆಂಡತಿ’ಯಾಗಿ ಗುರುತಿಸಿದ್ದು. ಅಮ್ಮ ಆಗಲೀ ಹೆಂಡತಿಯಾಗಲೀ ಬದುಕಿನ ಮಹತ್ತರ ಪಾತ್ರಗಳೇ ಇರಬಹುದು. ಆದರೆ, ಅವಳು ಒಬ್ಬ ಅಮ್ಮ ಅಥವಾ ಹೆಂಡತಿ ಮಾತ್ರ ಅಲ್ಲವಲ್ಲ? ಅವಳು ಒಬ್ಬ ವ್ಯಕ್ತಿಯೂ ಹೌದಲ್ಲವಾ? ಅಮ್ಮ, ಹೆಂಡತಿ, ತಂಗಿ, ಅಕ್ಕ ಎಲ್ಲವೂ ಅವಳ ಅಸ್ಮಿತೆಯ ಕೆಲವು ಆಯಾಮಗಳು, ಅಷ್ಟೇ. ಈ ಪಾತ್ರಗಳು ಅವಳ ಅಸ್ಮಿತೆಯನ್ನು ಎಷ್ಟು ಆವರಿಸಿಕೊಂಡಿವೆ ಅಂದರೆ, ಈ ಪಾತ್ರಗಳೇ ಅವಳ ಅಸ್ಮಿತೆಯಾಗಿವೆ.

ಹೆಣ್ಣುಮಕ್ಕಳನ್ನು ಬೆಳೆಸುವಾಗಲೇ ಅವರನ್ನು ಈ ಪಾತ್ರಗಳಿಗಾಗಿಯೇ ಬೆಳೆಸುವುದು ಇಂದಿಗೂ ಕಂಡುಬರುತ್ತದೆ. ಅವಳಿಗೆ ಆಯ್ಕೆಯ ಅವಕಾಶ ಬಹಳ ಕಡಿಮೆ. ಅವಳೊಳಗೆ ಎಂತೆಂತಹ ಆಲೋಚನೆ, ಆಕಾಂಕ್ಷೆ, ಸಾಮರ್ಥ್ಯಗಳು ಇದ್ದರೂ ಈ ಪಾತ್ರಗಳಿಗಾಗಿ ಅವುಗಳನ್ನು ಅವಳು ತ್ಯಾಗ ಮಾಡಬೇಕು. ಆಗ ಅವಳು ಒಬ್ಬ ‘ಒಳ್ಳೆಯ ಹೆಣ್ಣುಮಗಳು’ ಆಗುತ್ತಾಳೆ. ಅವಳಿಗೆ ಈ ಪಾತ್ರಗಳಿಂದ ಆಚೀಚೆ ಸರಿಯುವುದು ದೊಡ್ಡ ಸವಾಲೇ ಆಗಿಬಿಡುತ್ತದೆ. ಆದರೆ, ಗಂಡುಮಕ್ಕಳನ್ನು ಬೆಳೆಸುವಾಗ ಅವರಿಗೆ, ಅವನು ಒಬ್ಬ ಒಳ್ಳೆಯ ‘ತಂದೆ’ ಆಗಬೇಕು, ‘ಗಂಡ’ ಆಗಬೇಕು ಅಂತ ಸ್ಪಷ್ಟ ಸಂದೇಶ ಕೊಡುವುದು ಕಂಡುಬರುವುದಿಲ್ಲ. ಅವನನ್ನು ಬೆಳೆಸುವುದು ಒಬ್ಬ ವ್ಯಕ್ತಿಯಾಗಿ. ಈ ಪಾತ್ರಗಳು ಅವರ ಅಸ್ಮಿತೆಯನ್ನು ಆಕ್ರಮಿಸಿಕೊಂಡಿಲ್ಲ. ಹೆಣ್ಣು-ಗಂಡು ಮಕ್ಕಳನ್ನು ಬೆಳೆಸುವಾಗಿನ ತಾರತಮ್ಯದ ಎಳೆ ಇದರಲ್ಲಿ ಬಹಳ ಸೂಕ್ಷ್ಮವಾಗಿ ಹೆಣೆದುಕೊಂಡಿದೆ. ಹೆಣ್ಣು, ಗಂಡು ಯಾರೇ ಇರಲಿ, ಎಲ್ಲರನ್ನೂ ಒಬ್ಬ ವ್ಯಕ್ತಿಯಾಗಿಯೂ, ಕುಟುಂಬದ ಹಾಗೂ ಸಮಷ್ಟಿಯ ಭಾಗವಾಗಿಯೂ ಗುರುತಿಸುವ, ಬೆಳೆಸುವ ದಾರಿ ಕಂಡುಕೊಳ್ಳಬೇಕಾಗಿದೆ.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಭಿನ್ನದನಿ ಕೇಳುವ ನೆಲವಷ್ಟೇ ಸ್ವತಂತ್ರ: ಅರುಣಾ ರಾಯ್

ದಿನನಿತ್ಯದ ಅನೇಕ ರೀತಿ, ರಿವಾಜುಗಳಲ್ಲಿ ಹೆಸರುಗಳು ಕಾಣೆಯಾಗುವುದನ್ನು ನಾವು ನೋಡಬಹುದು. ಎಷ್ಟೋ ಮಹಿಳೆಯರ ಹೆಸರು ಗಂಡನ ಹೆಸರಿನೊಂದಿಗೆ ಬೆರೆತು ಆಹ್ವಾನ ಪತ್ರಿಕೆ ನೀಡುವಾಗ, 'ಮಿಸೆಸ್ ಪ್ರವೀಣ್...' ಇತ್ಯಾದಿ ಆಗಿಬಿಡುತ್ತಾರೆ ಅಥವಾ 'ಶ್ರೀಯುತ ಉಮಾಶಂಕರ್ ಮತ್ತು ಕುಟುಂಬದವರು' ಆಗುತ್ತದೆ. ಕುಟುಂಬದ ಪರವಾಗಿ ಎಲ್ಲಾದರೂ ದೇಣಿಗೆ ಕೊಡುವಾಗ ರಶೀದಿಯಲ್ಲಿ ಆ ಮನೆಯ ‘ಯಜಮಾನ’ನ ಹೆಸರೇ ಹಾಕುತ್ತಾರೆ. ಮದುವೆಯಾಗಿ ಹೆಣ್ಣೊಬ್ಬಳು ‘ಗಂಡನ ಮನೆ’ ಎಂದು ಕರೆಯಲಾಗುವ ತನ್ನ ಹೊಸ ಮನೆಗೆ ಹೋಗುವಾಗ ಅವಳ ಹೆಸರು ಬದಲಾಯಿಸುವ ರೂಢಿ ಇದೆ. (ಇದು ಈಗ ಕಡಿಮೆ ಆಗಿರುವ ಹಾಗೆ ಕಾಣುತ್ತದೆ.) ಜಾತಕದಲ್ಲಿ ಗಂಡಿನ ಹೆಸರಿನೊಂದಿಗೆ ಹೊಂದಿಕೆ ಆಗದಿದ್ದರೆ, ಗಂಡಿನ ಮನೆಯಲ್ಲಿ ಈಗಾಗಲೇ ಆ ಹೆಸರಿನವರು ಇದ್ದರೆ, ಗಂಡಿನ ಮನೆಯವರಿಗೆ ಅವಳ ಹೆಸರು ಹಿಡಿಸದೆ ಇದ್ದರೆ - ಹೀಗೇ ಅದೇನೇನೋ ಕಾರಣ ನೀಡಿ ಹೆಸರು ಬದಲಾಯಿಸುವುದು ಬಹಳ ವ್ಯಾಪಕವಾಗಿಯೇ ಇತ್ತು. ಈಗಲೂ ಹೆಣ್ಣುಮಕ್ಕಳ ಹೆಸರಿನ ಜೊತೆ ಅಪ್ಪನ ಅಥವಾ ಗಂಡನ ಹೆಸರು ಜೋಡಿಸುವ ಹಾಗೆ ತಾಯಿ ಹೆಸರು ಜೋಡಣೆಯಾಗುವುದು ಬಹಳ ಕಡಿಮೆ. ಈ ಪರಿಪಾಠಗಳಂತೂ ತನ್ನ ಹೆಸರಿನ ಮೇಲೆ ಕೂಡ ಅವಳಿಗೆ ಹಕ್ಕು ಇಲ್ಲದಿರುವುದನ್ನು ಸೂಚಿಸುತ್ತದೆ. (ಕೆಲವು ಮಾತೃಮೂಲ ಸಮುದಾಯಗಳಲ್ಲಿ ಕುಟುಂಬದ ಹೆಸರು ತಾಯಿ ಕಡೆಯಿಂದ ಬರುತ್ತದೆ.) ಇಂದಿನ ದಿನಗಳಲ್ಲಿ ಕೆಲವು ಆಸ್ತಿ, ಮನೆ ಸಂಬಂಧಿತ ದಾಖಲೆಗಳಲ್ಲಿ, ಶಾಲಾ-ಕಾಲೇಜುಗಳ ದಾಖಲೆಗಳಲ್ಲಿ ಹೆಣ್ಣುಮಕ್ಕಳ ಹೆಸರು ನಮೂದಿಸುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ.

ಹೆಸರಿಗಾಗಿ ಇಷ್ಟೊಂದು ಪರಿತಪಿಸಬೇಕೇ, ಹೆಸರಿನ ಪರಿವೆಯಿಲ್ಲದೆ ಬದುಕುವುದು ಶ್ರೇಷ್ಠ ಅಲ್ಲವೇ ಎಂಬ ದೊಡ್ಡ ಪ್ರಶ್ನೆ ಎದುರಾಗುತ್ತದೆ. ಅಥವಾ, ಇದನ್ನೊಂದು ನೈತಿಕ ಪ್ರಶ್ನೆಯಾಗಿ ಎದುರಿಗಿಡಲಾಗುತ್ತದೆ ಎಂದೂ ಹೇಳಬಹುದು. ಈ ಪ್ರಶ್ನೆ ಒಳಗೊಳಗೇ ಕಾಡುವಾಗ, ಹಕ್ಕಿನಿಂದ ಸಿಗಬೇಕಾದ ಹೆಸರನ್ನು ಪಡೆದುಕೊಳ್ಳಲು ಕೂಡ ಹೆಣ್ಣುಮಕ್ಕಳಿಗೆ ಮುಜುಗರ ಅನಿಸಿಬಿಡುತ್ತದೆ. ಆದರೆ ಈ ಹೆಸರಿನೊಂದಿಗೆ ಅಧಿಕಾರ ಬೆರೆತುಕೊಂಡಿದೆ. ಈ ಹೆಸರು ಅಧಿಕಾರದ ಸಂಕೇತವಾಗಿದೆ. ಹೆಸರು ಮರೆಸುವ ಮೂಲಕ ಅವಳಿಗೆ ಸಿಗಬೇಕಾದ ಹಕ್ಕುಗಳಿಂದಲೇ ಅವಳನ್ನು ವಂಚಿತಗೊಳಿಸುವ ವ್ಯವಸ್ಥಿತ ವಿನ್ಯಾಸ ಇದು. ಇನ್ನೊಂದು ವಿಚಾರ ಗಮನಿಸಬೇಕು. ಇಲ್ಲಿ ಹೆಸರು ಬೇಕೇ ಅಥವಾ ಬೇಡವೇ ಅನ್ನುವುದು ಅವಳ ಆಯ್ಕೆ ಅಲ್ಲ, ಆಕೆಯ ಹೆಸರನ್ನು ಮರೆಸುವ ರಾಜಕೀಯ ಪ್ರಕ್ರಿಯೆ ಇದು. ಅವಳ ಹೆಸರು ‘ಮಾಯ’ವಾಗುವ ಜೊತೆಗೇ ಅವಳ ಅಸ್ತಿತ್ವವೂ ಮಾಯವಾಗುವುದು ಗೊತ್ತೇ ಆಗುವುದಿಲ್ಲ.

Image

ಇತಿಹಾಸದ ಪುಟಗಳನ್ನು ಬಿಡಿಸಿ ನೋಡಿದರೆ, ಕಣ್ಣು ಬಿಟ್ಟು ಸರಿಯಾಗಿ ನೋಡಿದರೆ, ಅದರಲ್ಲಿ ‘ಅವನು’ ಏನು ಮಾಡಿದ, ಅವನು ಏನನ್ನು ಕಂಡುಹಿಡಿದ ಎಂಬುದರ ವಿವರಣೆ ಇದೆಯೇ ಹೊರತು, ಅವಳ ಹೆಜ್ಜೆ ಗುರುತುಗಳೇ ದಾಖಲಾಗಿಲ್ಲ. ಕೃಷಿಯನ್ನು ಕಂಡುಹಿಡಿದವಳು ‘ಹೆಣ್ಣು’ ಎಂದು ಅನೇಕ ಸಂಶೋಧನೆಗಳು ತೋರಿಸಿಕೊಡುತ್ತಿವೆ. ಕೆ ರಾಮಯ್ಯ ಅವರ 'ಅವ್ವ' ಗೀತನಾಟಕದ ಸಾಲುಗಳು ಈ ಸತ್ಯವನ್ನು ಸೊಗಸಾಗಿ ಚಿತ್ರಿಸುತ್ತವೆ. 'ಬೀಜ ಬೆಳೆವ ಗುಟ್ಟು ತಿಳಿದು, ಉತ್ತು ಬಿತ್ತು ಕಳೆ ಕಿತ್ತಳು, ಕಾಳು ಬೆಳೆದು ಕಣಜವಾಯಿತು...' – ಈ ಸಾಲುಗಳು ಅವಳ ದುಡಿಮೆಯನ್ನು, ಅವಳ ಸಂಶೋಧನೆಯನ್ನು ಹೇಳುತ್ತವೆ. ಮುಂದಿನ ವಾಕ್ಯದಲ್ಲಿ ಇದರ ಸ್ವಾರಸ್ಯ ಅಡಗಿದೆ. 'ಕಣಜದೊಡೆಯ ಬೇರೆಯಾದ' – ಅಂದರೆ, ಅವಳ ದುಡಿಮೆಗೆ ಯಾವುದೇ ಗುರುತಿಲ್ಲ, ಆದರೆ ಕಣಜದ ‘ಒಡೆತನ’ ಅವನ ಪಾಲಾಯಿತು. ಇದು ಹೆಸರಿನ ರಾಜಕೀಯ. ಇಲ್ಲಿ ‘ಹೆಸರು’ ಬೇಕಾಗುವುದು ತಮ್ಮ-ತಮ್ಮ ಹಕ್ಕು ಪಡೆದುಕೊಳ್ಳುವುದಕ್ಕೇ ಹೊರತು ಪ್ರತಿಷ್ಠೆಗಾಗಿ ಅಲ್ಲ, ಅಹಂಕಾರ ಸಾಧಿಸುವುದಕ್ಕೂ ಅಲ್ಲ.

ಹೆಸರು ಮರೆತ ಈ ಕತೆಯನ್ನು ಅದೆಷ್ಟು ಸಾರಿ ಹೇಳುವುದಕ್ಕೂ ನನಗೆ ಬೇಸರ ಬಂದಿಲ್ಲ; ಕತೆಯ ಮೂಲಕ ವಿಚಾರಗಳು ವಿಸ್ತಾರವಾಗಿ ತೆರೆದುಕೊಳ್ಳುತ್ತವೆ. ಆದರೆ ಈ ಕತೆ ಇಂದಿಗೂ ಅರ್ಥ ಕಳೆದುಕೊಂಡಿಲ್ಲವಲ್ಲ ಅನ್ನುವ ಬೇಸರವಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್