ತರ್ಕ | ಹಿಂದೂಗಳು 'ಹಿಂದುತ್ವ'ದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರೇ?

Yogi Adithyanath

ಬಿಜೆಪಿ ಜನಪ್ರತಿನಿಧಿಗಳ ದ್ವೇಷದ ಹೇಳಿಕೆಗಳಿಂದಾಗಿ ಮೋದಿ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾದ ಬೆನ್ನಲ್ಲೇ, ಉತ್ತರ ಪ್ರದೇಶದಲ್ಲಿ ಬುಲ್ಡೋಝರ್ ದಾಳಿ ಶುರು. ಅಸಲಿಗೆ ಈ ಘಟನೆ ಹಿಂದೂಗಳ ಆತ್ಮಸಾಕ್ಷಿಗಂಟಿದ ಕಳಂಕ. ತಮ್ಮನ್ನು ಅಧೋಗತಿಗೆ ದೂಡುತ್ತಿರುವ ವಿಷಯಗಳಿಂದ ಬಿಡಿಸಿಕೊಳ್ಳಲು ಹಿಂದೂಗಳಿಗೆ ಎಂದು ಸಾಧ್ಯವಾದೀತು?

ಇತ್ತೀಚೆಗೆ ಸುಪ್ರಸಿದ್ಧ ರಂಗಭೂಮಿ ನಿರ್ದೇಶಕರೊಬ್ಬರು ಸಂದರ್ಶನವೊಂದರಲ್ಲಿ ಮಾತನಾಡುತ್ತ, ಬಿಹಾರದ ಸಣ್ಣ ಪಟ್ಟಣದಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಅಂತಹ ಹಲವು ನೆನಪುಗಳಲ್ಲಿ ಹೋಳಿಯಾಟದಲ್ಲಿ ಪ್ರಮುಖವಾಗಿ ಮುಸ್ಲಿಂ ಕುಟುಂಬಗಳು ಭಾಗಿಯಾಗುತ್ತಿದ್ದದ್ದು ಮತ್ತು ತಮ್ಮ ಮನೆಯಿಂದಲೇ ಮೊಹರಂ ಮೆರವಣಿಗೆ ಹೊರಡುತ್ತಿದ್ದ ವಿಚಾರವನ್ನು ಹಂಚಿಕೊಂಡಿದ್ದರು. ಅವರು ಬೆಳೆದುಬಂದ ಪರಿಸರದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಕಳೆದುಕೊಳ್ಳುತ್ತಿರುವ ಸಾಮಾಜಿಕ ಮುಗ್ಧತೆಯಿಂದ ತಮಗೆ ವೈಯಕ್ತಿಕವಾಗಿ ಆಗುತ್ತಿರುವ ನಷ್ಟದ ಜೊತೆಗೆ, ತಮ್ಮ ಸ್ವಂತ ನಗರ ಮತ್ತು ದೇಶಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ದುಃಖ ವ್ಯಕ್ತಪಡಿಸಿದ್ದರು.

ಭಾರತದ ಅನೇಕ ಜನರು ತಮ್ಮ ಸುತ್ತಮುತ್ತಲಿನಲ್ಲಿ ನಡೆದ ಇಂತಹ ಹಲವಾರು ಘಟನೆಗಳನ್ನು, ಅನುಭವಗಳನ್ನು ನೆನಪಿಸಿಕೊಳ್ಳಬಹುದು. ಆದರೆ, ಹಾಗೆ ಹೇಳಿಕೊಂಡಾಗ ಅದು ಕೇವಲ 'ರಂಜನೀಯ ಕಲ್ಪನೆ' ಎಂದು ನಿಂದಿಸಲಾಗುತ್ತಿದೆ. ಆದರೆ ವಾಸ್ತವವೇ ಬೇರೆ. ಹಿಂದೂಗಳು ಮತ್ತು ಮುಸ್ಲಿಮರು ಯಾವಾಗಲೂ ಪ್ರತ್ಯೇಕ ಮೊಹಲ್ಲಾಗಳಲ್ಲಿ ವಾಸ ಮಾಡುತ್ತಿದ್ದರು. ಪರಸ್ಪರ ಅಪನಂಬಿಕೆ ಮತ್ತು ಪೂರ್ವಗ್ರಹ, ಅನುಮಾನದಿಂದ ನೋಡುತ್ತಿದ್ದರು. ಸಂಬಂಧಗಳ ವಸ್ತುಸ್ಥಿತಿಯನ್ನು ಅರಿಯಲು ಇಂತಹ ರಂಜನೀಯ ಕತೆಗಳೇ ತಡೆಯಾಗುತ್ತವೆ.

2014ರ ನಂತರದ ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳ ನಡುವೆ ನಡೆದ ಯಾವುದಾದರೂ ಒಂದು ಸಹೋದರತ್ವ ಭಾವದಿಂದ ಆರಂಭಿಸಿದ ಕಾರ್ಯಕ್ರಮ, ಗ್ರಾಮೀಣ ಆಚರಣೆಯ ಬಗ್ಗೆ ಜನರನ್ನು ಕೇಳಿದರೆ, ಅವರು ಒಂದು ಉದಾಹರಣೆ ಕೊಡಲೂ ಹೆಣಗಬಹುದು ಎಂದು ನಾನು ಭಾವಿಸುತ್ತೇನೆ. ಭೂತಕಾಲವನ್ನು ರಂಜನೀಯ ಮಾಡಿದರೂ, ಹೇಳಿದ ಘಟನೆಗಳು ನಿಜವಾಗಿರುತ್ತವೆ. ಅದು ಕಾಲ್ಪನಿಕವಾಗಿದ್ದರೂ, ಸಂದೇಹವಾದಿಗಳ ವಾದವನ್ನು ಒಪ್ಪಿದರೂ ಈಗ ಯಾಕೆ ಅಂತಹ ಉದಾಹರಣೆಗಳು ಕಂಡುಬರುತ್ತಿಲ್ಲ?

ಈ ಲೇಖನವನ್ನು ಓದಿದ್ದೀರಾ?: ಅರ್ಥ ಪಥ | ಢಾಕಾದ ಖಾದರ್ ಮಿಯಾ ಮತ್ತು ದೆಹಲಿಯ ಹಿಂದು ವ್ಯಾಪಾರಿ

ಸಂದೇಹವಾದಿಗಳೊಂದಿಗೆ ನನ್ನ ವಾದವು ಅನುಭವ ಆಧಾರಿತವಾಗಿರುತ್ತದೆ. ಮೇಲೆ ಉಲ್ಲೇಖಿಸಿದ ರಂಗನಿರ್ದೇಶಕರು ಹೇಳಿದಂತೆ, ನಾನು ಕೂಡ ಹಿಂದೂ-ಮುಸ್ಲಿಂ ಒಂದಾಗಿ ಬದುಕಿದ್ದ ಪರಿಸರದಲ್ಲೇ ಬೆಳೆದವನು. ಆದರೆ, ಅದು ವಿವಾದದ ವಿಷಯವಾಗಿರಲಿಲ್ಲ. ನನ್ನ ಕಾಲೇಜು ದಿನಗಳಲ್ಲಿ ಮುಸ್ಲಿಂ ಕುಟುಂಬ ಅಥವಾ ಆಡಳಿತ ಮಂಡಳಿ ಇರುವ ಕ್ಲಬ್‌ಗಾಗಿ ಫುಟ್ಬಾಲ್ ಆಡಿದ್ದೇನೆ. ಹಿಂದೂ ಆಟಗಾರರು ಮತ್ತು ಆಡಳಿತ ಮಂಡಳಿ ಇದ್ದ ಕ್ಲಬ್‌ಗೆ ವಿರುದ್ಧವಾಗಿ ಆಡಿದ್ದೇನೆ. ಹಿಂದೂ-ಮುಸ್ಲಿಂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದ ಕಾಲೇಜಿನಲ್ಲಿ ಓದಿದ್ದೇನೆ. ಅದು ವಿವಾದದ ವಿಷಯವಾಗಿರಲಿಲ್ಲ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಮಾತನಾಡುವ ಸಂದೇಹವಾದಿಗಳ ವಾದಗಳ ಸಮರ್ಥನೆಯನ್ನು ಒಪ್ಪಿಕೊಳ್ಳಲು ನನ್ನಲ್ಲಿ ಅನುಭವಗಳ ಅಡಿಪಾಯವಿಲ್ಲ.

ತಿಂಗಳುಗಳು ಉರುಳುತ್ತಿದ್ದಂತೆ ಈ ಬದಲಾವಣೆಯ ವೇಗ ತೀವ್ರಗೊಳ್ಳುತ್ತದೆ. ಮುಸಲ್ಮಾನರು ಮತ್ತು ದಲಿತರ ವಿರುದ್ಧ ಏನೇ ಅಕ್ರಮವೆಸಗಿದರೂ ನಡೆಯುತ್ತದೆ ಎನ್ನುವ ಕಟುಸತ್ಯ ಸಾಬೀತಾಗುತ್ತದೆ. ಈ ಬೆಳವಣಿಗೆಗಳು ಬಿಗಿ ನೀತಿ ರೂಪಿಸುವವರ ಅಡಿಪಾಯವನ್ನು ಭದ್ರಗೊಳಿಸುತ್ತವೆ.

ತನ್ನ ಪಕ್ಷದ ವಕ್ತಾರೆ ಮತ್ತು ಶಾಸಕರೊಬ್ಬರು ಪ್ರವಾದಿ ಬಗ್ಗೆ ನೀಡಿದ ದ್ವೇಷದ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರವನ್ನು ಮುಜುಗರಕ್ಕೆ ತಳ್ಳಿದೆ. ಅದರ ಬೆನ್ನಲ್ಲೇ, ಹೋರಾಟಗಾರ್ತಿ ಅಫ್ರೀವ್‌ ಫಾತಿಮಾ ಅವರ ಮನೆಯನ್ನು ಕೆಡವಲಾಯಿತು. ಪ್ರವಾದಿಯವರ ಕುರಿತ ಪಕ್ಷದ ಶಾಸಕರ ಹೇಳಿಕೆಯನ್ನು ಮೋದಿ ಬೆಂಬಲಿಗರು ಮತ್ತು ಕೆಲವು ಮುಖ್ಯವಾಹಿನಿಯ ಮಾಧ್ಯಮಗಳು ʼಹಸಿ ಸತ್ಯʼ ಎಂದು ವಾದಿಸಿದವು. ಆದರೆ, ಸಾರ್ವಜನಿಕ ಸಂಬಂಧದ ವಿಚಾರದಲ್ಲಿ ಇದು ಭಾರೀ ಪ್ರಮಾಣದಲ್ಲಿ ಸರ್ಕಾರ ಮುಜುಗರ ಅನುಭವಿಸುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರ ಸ್ಪಷ್ಟೀಕರಣ ಕೊಟ್ಟು, ಇವರೆಲ್ಲ 'ಗೌಣ ವ್ಯಕ್ತಿಗಳು' ಎಂದು ಬಿಂಬಿಸುತ್ತ, ತಮ್ಮದೇ ವಕ್ತಾರೆ ಮತ್ತು ಶಾಸಕನಿಂದ ಅಂತರವನ್ನು ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿ ಒದಗಿಬಂತು.

Image
UP Bulldozer

ಉತ್ತರ ಪ್ರದೇಶವನ್ನು ಸರಿಯಾಗಿ ಗಮನಿಸುವ ಯಾರಿಗೇ ಆದರೂ, ಅದು ಹೊಸ ಗುಜರಾತ್‌ ಆಗುತ್ತಿರುವುದು ಅರಿವಿಗೆ ಬರುತ್ತದೆ (ಬೊಮ್ಮಾಯಿ ನೇತೃತ್ವದ ಸರ್ಕಾರವಿರುವ ಕರ್ನಾಟಕವೂ ಅದೇ ಹಾದಿಯಲ್ಲಿದೆ). ಪೂರ್ಣ ಬಹುಮತವು ತನ್ನ ನಿರಂಕುಶಾಧಿಕಾರದ ಮುಖ್ಯ ಕಾರ್ಯಸೂಚಿಯೆಡೆಗೆ ತಳ್ಳುತ್ತದೆ. ಪಕ್ಷದ ವಕ್ತಾರರ ಹೇಳಿಕೆಗಳು ಗಲಭೆಗೆ ಕಾರಣವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾದ ನಂತರವಷ್ಟೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು.

ಅಫ್ರೀನ್‌ ಫಾತಿಮಾ ಅವರ ಮನೆಯನ್ನು ಕೆಡವಿದ ನಂತರವೂ, ಬಿಜೆಪಿಯ ನಾಯಕರು ಆಕೆಯ ವಿರುದ್ಧ ನೀಡಿದ ಹೇಳಿಕೆಗಳು ಧಾರ್ಮಿಕ ಅಸಹಿಷ್ಣುತೆಯಿಂದ ಕೂಡಿದ್ದವು. ಅಷ್ಟೇ ಅಲ್ಲ, ಬಹುಮತವಿರುವ ಸರ್ಕಾರವೊಂದು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶವನ್ನು ಆಕೆಯ ಮನೆ ದ್ವಂಸ ಪ್ರಕರಣದ ಮೂಲಕ ನೀಡಲಾಯಿತು.

ಸದ್ಯದಲ್ಲೇ ಫಾತಿಮಾ ಅವರು ಅಪಾಯಕಾರಿ ಭಯೋತ್ಪಾದಕಿ ಎಂಬ ಸುದ್ದಿ ಬರಬಹುದು (ಈಗಾಗಲೇ ಆಕೆಯ ಮನೆ ಕೆಡಹುವ ವೇಳೆ ಬಂದೂಕುಗಳು ಸಿಕ್ಕಿವೆ ಎಂದು ಸರ್ಕಾರ ಹೇಳಿಕೊಂಡಿದೆ). ಆಕೆಗೆ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಹಲವು ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಆದರೆ, ಮೋದಿ ಸರ್ಕಾರ ಇದನ್ನು ಮುಸ್ಲಿಮರ ಬಿಕ್ಕಟ್ಟು ಅಥವಾ ಇಸ್ಲಾಂನ ಬಿಕ್ಕಟ್ಟು ಎಂದು ಬಿಂಬಿಸುವ ಕಾರ್ಯತಂತ್ರವನ್ನು ರೂಪಿಸಲು ಹೊರಟಿದೆ.

'ಇಸ್ಲಾಂ ಬಿಕ್ಕಟ್ಟು' ಎಂಬ ಪರಿಕಲ್ಪನೆ ರೂಪುಗೊಂಡಿದ್ದು, ಅಮೆರಿಕದ ಅಧ್ಯಕ್ಷನಾಗಿದ್ದ ಮೊದಲನೇ ಬುಷ್‌ನ ಕಾಲದಲ್ಲಿ. ಅದು ಎಡ, ಬಲ, ಮಧ್ಯ ಮತ್ತು ಮಾರುಕಟ್ಟೆ ಪರ ಹಲವು ಆಯಾಮಗಳಿಗೆ ನಾಂದಿ ಹಾಡಿತು. ಇಸ್ಲಾಂ ಬಿಕ್ಕಟ್ಟನ್ನು ಸ್ವಾತಂತ್ರ್ಯ ಹೋರಾಟದೊಂದಿಗೆ ಬೆಸೆಯುವ ಪ್ರಯತ್ನಗಳೂ ನಡೆದವು. ಪ್ಯಾಲೆಸ್ತೀನ್‌ ಮತ್ತು ಕಾಶ್ಮೀರ ಭಯೋತ್ಪಾದಕ ಸಂಘಟನೆಗಳಾದ ಅಲ್‌ಖೈದಾ ಮತ್ತು ಜಿಇಎಂ ನಡೆಸುವ ಎಲ್ಲ ಹೋರಾಟಗಳು ಇಸ್ಲಾಂ ಧರ್ಮವನ್ನು ಭದ್ರಪಡಿಸುವ ಸಲುವಾಗಿ ನಡೆಸುವ ಹೋರಾಟ, ವಿಶ್ವದ ಯಾವುದೇ ಭಾಗದಲ್ಲಿದ್ದರೂ ಅದು ಅವರ ಅಸ್ತಿತ್ವವನ್ನು ಸ್ಥಾಪಿಸುವ ಮತ್ತು ರಾಷ್ಟ್ರೀಯವಾದಿ ಕಾರ್ಯಸೂಚಿಯ ವಿರುದ್ಧದ ನಿಲುವು ಎಂದು ಬಿಂಬಿಸಲಾಗುತ್ತಿದೆ. ಆದರೆ, ಇದು ಸತ್ಯಕ್ಕೆ ದೂರ ಎಂಬುದನ್ನು ಸ್ವಾತಂತ್ರ್ಯೋತ್ತರ ಇಸ್ಲಾಮಿಕ್‌ ದೇಶಗಳು ಸಾಬೀತುಪಡಿಸುತ್ತವೆ. ಈಜಿಪ್ಟ್, ಟ್ಯುನಿಷಿಯಾ, ಪ್ಯಾಲೆಸ್ತೀನ್‌, ಮೊರಾಕ್ಕೊ ಹಾಗೂ ಕಾಶ್ಮೀರಗಳಲ್ಲಿ ಪ್ಯಾನ್‌ ಇಸ್ಲಾಮಿಕ್‌ ಮತ್ತು ರಾಷ್ಟ್ರೀಯವಾದಿ ಇಸ್ಲಾಮಿಕ್‌ ವಾದಗಳ ನಡುವೆ ನಡೆಯುತ್ತಿರುವ ಸಂಘರ್ಷಗಳನ್ನು ಗಮನಿಸಬಹುದು. ಇಸ್ಲಾಂ ವಿರುದ್ಧದ ನಿರೂಪಣೆಗಳು ಅದನ್ನು ಒಂದು ಕಲ್ಪನೆಯಾಗಿ ಚಿತ್ರಿಸಲು ಪ್ರಯತ್ನಿಸುತ್ತಿವೆ.

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಪ್ರೀತಿ, ಸಹನೆ ನಮ್ಮ ಆರ್ಥಿಕತೆಯ ಬುನಾದಿ ಆಗದಿದ್ದರೆ ಮುಂದಿನ ಹಾದಿ ಕಠಿಣ

ಭಾರತದ ಸನ್ನಿವೇಶದಲ್ಲಿ ನಾನು ಹೇಳಬಯಸುವುದೇನೆಂದರೆ, ಬಹುತೇಕ ಹಿಂದೂಗಳು ಮೋದಿಯನ್ನು ಒಪ್ಪಿದರೂ, ಹಿಂಸೆಯನ್ನು ಬೆಂಬಲಿಸದಿದ್ದರೂ, ಮೋದಿಯನ್ನು ಕ್ಷಮಿಸುವ ಗುಣವುಳ್ಳವರು. ಮುಸ್ಲಿಮರ ವಿರುದ್ಧ ಹಿಂಸೆ ಮಾಡಲು ಬಯಸುವವರು ಈಗಾಗಲೇ ಹಿಂದುತ್ವದ ಬಲೆಗೆ ಬಿದ್ದು, ಅದರೊಳಗಿನ ಭೀಕರ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಿದ್ದಾರೆ.  

ಹಿಂದುತ್ವ ಎನ್ನುವುದೇ ಒಂದು ಪ್ರಶ್ನಾರ್ಹ ಕಲ್ಪನೆ. ಅದರಲ್ಲಿ ಒಳ್ಳೆಯ ಮೌಲ್ಯಗಳಿರುವಂತೆಯೇ ಕೆಟ್ಟ ಮೌಲ್ಯಗಳೂ ಇವೆ. ಅವು ಅದರ ಅವಿಭಾಜ್ಯ ಅಂಗವಾಗಿವೆ. ಜೀವನದ ಎಲ್ಲ ಸ್ತರಗಳಲ್ಲಿನ ಸಂಪ್ರದಾಯ, ಪದ್ಧತಿ, ಪರಂಪರೆ, ನಂಬಿಕೆ, ಆಚರಣೆಗಳಲ್ಲಿ ಆ ಮೌಲ್ಯಗಳು ಪ್ರಜ್ಞಾಪೂರ್ವಕವಾಗಿ ಕಂಡುಬರುತ್ತವೆ. ಇದು ಜಾತಿ ಪದ್ಧತಿಯ ತಾರತಮ್ಯದಿಂದ ಹಿಡಿದು ಖಾಸಗಿ ಬದುಕಿನಲ್ಲಿ ಮದುವೆ, ಸಂಪನ್ಮೂಲಗಳಾದ ನೀರು, ಭೂಮಿ, ಆಸ್ತಿಯ ಬಳಕೆ ಹಾಗೂ ಮರಣದಾಚೆಗಿನ ಆಚರಣೆಯವರೆಗೂ ಆವರಿಸಿದೆ.

ಜಾತಿ, ಪಂಗಡ, ಒಳಗುಂಪುಗಳ ನಡುವೆ ಸಾಕಷ್ಟು ವೈರುಧ್ಯಗಳಿದ್ದರೂ ಅವರೆಲ್ಲರನ್ನೂ ಒಂದುಗೂಡಿಸಿ ಹಿಂದೂಗಳನ್ನು ಏಕತೆಯೆಡೆಗೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಇದರ ತಿರುಳಾಗಿ ವ್ಯಕ್ತಿಗತ ಸಂಗತಿಗಳಿಗೂ ಸಾಕಷ್ಟು ಒತ್ತು ನೀಡಲಾಗುತ್ತಿತ್ತು. ಉದಾಹರಣೆಗೆ, 11ನೇ ಶತಮಾನದಿಂದ ನವ್ಯ ನ್ಯಾಯ ಹಿಂದೂ ಪಂಥವು ಪ್ರಮಾಣಶಾಸ್ತ್ರದ ಮೂಲಕ ನೀತಿಶಾಸ್ತ್ರವನ್ನು ಬೋಧಿಸುತ್ತಿತ್ತು. ವಾದ ಸರಣಿಯೇ ಅದರ ಕೇಂದ್ರಬಿಂದು. ಇದರ ಪ್ರಕಾರ, ಜ್ಞಾನವನ್ನು ನಾಲ್ಕು ಪ್ರಮುಖ ಮಾರ್ಗಗಳಲ್ಲಿ ಪಡೆಯಬಹುದು: ಪ್ರತ್ಯಕ್ಷ (ಗ್ರಹಿಕೆ), ಅನುಮಾನ (ತೀರ್ಮಾನಕ್ಕೆ ಬರುವುದು), ಉಪಮಾನ (ಹೋಲಿಕೆ), ಪ್ರಮಾಣ (ಋಜುವಾತು). ಕನಿಷ್ಠ ಐದು ಶತಮಾನಗಳಷ್ಟು ಪ್ರಾಚೀನವಾದ ಬೌದ್ಧ ಮತದಿಂದ ಇದು ಸಾಕಷ್ಟು ವಿಚಾರಗಳನ್ನು ಎರವಲು ಪಡೆದಿದೆ.

ಹಿಂದುತ್ವವನ್ನು ಈ ರೀತಿ ಪರಾಮರ್ಶಿಸುವುದು ಸಮಂಜಸವಲ್ಲ ಎಂದು ಕೆಲವರಿಗೆ ಅನ್ನಿಸಬಹುದು. ಆದರೂ, ಹಿಂದೂಗಳಲ್ಲಿ ಜಾತಿ ಪದ್ಧತಿಯ ಒಳಜಗಳ ಮತ್ತು ಕ್ರೌರ್ಯ ಇದೆ ಎಂಬುದನ್ನು ನಾನು ಒಪ್ಪುತ್ತೇನೆ. ಅದರಲ್ಲೂ, ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಎತ್ತಿ ತೋರಿಸಲು ಬಯಸುತ್ತೇನೆ. ಆಂತರಿಕ ವೈರುಧ್ಯಗಳು ಹಿಂದುತ್ವದ ಅವಿಭಾಜ್ಯ ಅಂಗವಾಗಿವೆ. ಇಲ್ಲದಿದ್ದರೆ, ದೇವರ ಬಗ್ಗೆ ಇಷ್ಟೊಂದು ಕಲ್ಪನೆಗಳು ಇರಲು ಸಾಧ್ಯವಿಲ್ಲ.

Image
UP Bulldozer 2

ಎರಡನೇ ಶತಮಾನದ ಆದಿಭಾಗದಿಂದ ಪುಷ್ಯಮಿತ್ರ ರಾಜನಿಂದ ಬೌದ್ಧರ ಸಾಮೂಹಿಕ ಕೊಲೆಯಾದ ನಂತರ, ಹಿಂದೂಗಳ ಮನಸ್ಸಿನಿಂದ ಆಂತರಿಕ ಪ್ರಾಮುಖ್ಯತೆಯನ್ನು ಕಿತ್ತು ಹಾಕಲಾಗಿತ್ತು. ಹಿಂದುತ್ವದ ಆರು ಆಸ್ತಿಕ ಪಂಥಗಳ ಪೈಕಿ ನವ್ಯನ್ಯಾಯ ಪಂಥವೂ ಒಂದು. ನಾಲ್ಕು ಇತರೆ ಆಸ್ತಿಕ ಪಂಥಗಳಿದ್ದವು.

ಚುನಾವಣೆಯ ದೃಷ್ಟಿಯಿಂದ ಬಿಜೆಪಿಯು ಹಲವು ವರ್ಷಗಳಿಂದ ಅನುಸರಿಸುತ್ತಿರುವ ಸೂತ್ರವೆಂದರೆ, ಅಲ್ಪಸಂಖ್ಯಾತರನ್ನು ಯಾವತ್ತೂ ಗಣನೆಗೆ ತೆಗೆದುಕೊಳ್ಳದಿರುವುದು. ಬಹುಸಂಖ್ಯಾತರಲ್ಲಿಯೇ ಅಲ್ಪಸಂಖ್ಯಾತರಿದ್ದರೂ ಸುಲಭವಾಗಿ ಅಧಿಕಾರಕ್ಕೆ ಬರಬಹುದೆಂಬ ನಂಬಿಕೆ. ಆದರೆ, ಅಧಿಕಾರದಲ್ಲಿ ಮುಂದುವರಿಯಲು ಅದು ಸದಾ ಕಾರ್ಯಪ್ರವೃತ್ತವಾಗಿರಬೇಕು.

ಬಾಬ್ರಿ ಮಸೀದಿ ಕೆಡವಿದ್ದು ಹಿಂದೂಗಳಲ್ಲಿ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಹುಟ್ಟುಹಾಕಿತು. ಆ ಹೊತ್ತಿನ ಭಾರತದಲ್ಲಿ ಹಿಂದುತ್ವದ ಬಗೆಗೆ ಹುಟ್ಟಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಗಮನವನ್ನು ಬೇರೆಡೆಗೆ ಸೆಳೆಯಲಾಯಿತು.

ಕಮ್ಯುನಿಸಂ ಎಂಬ ದೈತ್ಯ ಚಿಂತನೆಗಳ ಪತನ ಹೊಸ ಚಿಂತನೆಗಳಿಗೆ ನಾಂದಿ ಹಾಡಿತು. ಅವುಗಳಲ್ಲಿ ಹಿಂದುತ್ವ ಎಂಬುದೂ ಒಂದು. ಹಂಗೇರಿ, ಟರ್ಕಿ ಹಾಗೂ ಜಗತ್ತಿನ ಇತರ ಭಾಗಗಳಲ್ಲಿ ಇದರ ಪ್ರತಿಧ್ವನಿ ಕೇಳಿಬರುತ್ತಿದೆ. ವ್ಯಕ್ತಿಗತ ಸಾಧನೆಗಳ ಇತಿಹಾಸವನ್ನು ತೊಡೆದುಹಾಕಿ ವಸ್ತುನಿಷ್ಠ ಸರಳತೆಯಿಂದ ಭವ್ಯ ಇತಿಹಾಸವನ್ನು ರೂಪಿಸುವುದು.

ಫಾತಿಮಾಳ ಮನೆಯನ್ನು ಕೆಡವಿರುವುದು ಹಿಂದೂಗಳ ಆತ್ಮಸಾಕ್ಷಿಯಲ್ಲಿರುವ ಒಂದು ಕಳಂಕದ ಕರೆ. ಹಿಂದೂಗಳು ಇಸ್ಲಾಂ ಅನ್ನು ತಪ್ಪಾಗಿ ಅರ್ಥೈಸಿಕೊಂಡರೂ, ಹಿಂದೂಗಳು ಹಿಂದುತ್ವದಿಂದ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬಲ್ಲರು?

ನಿಮಗೆ ಏನು ಅನ್ನಿಸ್ತು?
1 ವೋಟ್