ಪಾಟಿ ಚೀಲ | ಈ ಪತ್ರಕ್ಕೊಂದು ವಿಳಾಸ ಹುಡುಕುತ್ತೀರಾ?

ನಿಮ್ಮ ಬಳಿ ನಾನಾಡದೆ ಉಳಿದಿರುವ ಮಾತುಗಳೇ ಇಲ್ಲ ಎಂದು ನನಗನ್ನಿಸುವ ಹಾಗೆ ನನ್ನೊಡನೆ ಮಾತನಾಡಿದ್ದೀರಿ. ನನ್ನೆಲ್ಲ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿರದಿದ್ದರೂ ಕೇಳುವ ಕಿವಿಗಳಿದ್ದವು. ಕೆಲವೊಮ್ಮೆ ಉತ್ತರ ನೀಡುವ ಬದಲು ಇನ್ನೊಂದಿಷ್ಟು ಪ್ರಶ್ನೆಗಳನ್ನೇ ನೀಡುತ್ತಿದ್ದಿರಿ. ನೀವೆಷ್ಟು ಶಾಂತವಾಗಿ ಆಲಿಸುತ್ತಿದ್ದಿರೆಂದರೆ, ಇನ್ನಷ್ಟು ಪ್ರಶ್ನೆ ಕೇಳಲು ಉತ್ಸಾಹ ಬರುತ್ತಿತ್ತು

ಬಹುಶಃ ನಾನು ಆಗ ಒಂದನೆಯ ತರಗತಿಯಲ್ಲಿದ್ದಿರಬೇಕು. ಬೆಳಗ್ಗೆ ನಾನು ಶಾಲೆಗೆ ಬಂದಾಗ ಇನ್ನೂ ಎಲ್ಲರೂ ಬಂದಿರಲಿಲ್ಲ. ಮೊರ್ಬದ ಗಣಪತ್ ಮಾಸ್ತರರು ಎಲ್ಲರನ್ನೂ ಕರೆದು ಮಾತನಾಡಿಸುತ್ತಿದ್ದರು. ನನ್ನಲ್ಲಿ ಬಂದು, "ಬೆಳಗ್ಗೆ ಏನು ತಿಂಡಿ ತಿಂದಿದ್ದಿಯಾ?" ಎಂದು ಕೇಳಿದರು. ನಾನು ಅದನ್ನು ಹೇಳುವ ಬದಲು, "ಇವತ್ತು ರಾತ್ರಿ ನಮ್ಮನೇಲಿ ಕೋಳಿ ಸಾರು," ಎಂದೆ. "ನನ್ನನ್ನು ಕರೆಯೋದಿಲ್ವಾ?" ಎಂದು ಮರುಪ್ರಶ್ನಿಸಿದರು. ನಾನು ಏನು ಹೇಳಿದೆನೋ, ಮನೆಗೆ ಬಂದು ಅದನ್ನು ಹೇಗೆ ವರದಿ ಮಾಡಿದೆನೋ ಒಂದೂ ನೆನಪಿಲ್ಲ. ರಾತ್ರಿ ನಮ್ಮನೆಯಲ್ಲಿ ಗಣಪತ್ ಮಾಸ್ತರರಿದ್ದರು. ಆ ಅಚ್ಚರಿ ನನ್ನ ಸ್ಮರಣೆಯಲ್ಲಿ ಅಚ್ಚೊತ್ತುಬಿಟ್ಟಿದೆ.

Eedina App

ಸುಬ್ರಾಯ ಭಂಡಾರಿ ಎಂಬ ಇನ್ನೊಬ್ಬರು ಮಾಸ್ತರರು ಕತೆಗಳನ್ನು ಹೇಳುವ ಪರಿ ಈಗಲೂ ಬೆರಗು. ಪುಸ್ತಕದಲ್ಲಿರುವ ಕತೆಗಳನ್ನೇ ಅವರು ಅನುಭವವಾಗಿಸಿ ನಮಗೆ ವರ್ಗಾಯಿಸುತ್ತಿದ್ದರು. ಪಂಜರದ ಸಿಂಹವು ತನ್ನನ್ನು ಬಿಡಿಸಿದ ಬ್ರಾಹ್ಮಣನನ್ನು ತಿನ್ನಲು ಹೊರಟ 'ಪಂಚತಂತ್ರ'ದ ಕತೆಯನ್ನು ತನ್ನ ಇಡೀ ಶರೀರವನ್ನೇ ಮಾಧ್ಯಮವಾಗಿಸಿ ಹೇಳುತ್ತಿದ್ದ ನೆನಪು. "ಎಲೈ ಬ್ರಾಹ್ಮಣೋತ್ತಮ..." ಎಂಬುದನ್ನು, "ಎಲಾ ಬ್ರಾಹ್ಮಣ ತಮ್ಮಾ..." ಎಂದು ತಪ್ಪಾಗಿ ಉಚ್ಚರಿಸುತ್ತಿದ್ದರೋ ಅಥವಾ ಬೇಕೆಂತಲೇ ಹಾಗೆ ಬದಲಾಯಿಸಿಕೊಂಡಿದ್ದರೋ ಎಂಬ ಗೊಂದಲವೂ ಅಷ್ಟೇ ಹಸುರು.

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ಆಗ ಒಂದು ಪದ್ಯವನ್ನೂ ಬಾಯಿಪಾಠ ಮಾಡದಿದ್ದವ ಈಗ ಪ್ರಸಂಗ ಪುಸ್ತಕ ನೋಡದೆ ಭಾಗವತಿಕೆ ಮಾಡುತ್ತಿದ್ದ!

AV Eye Hospital ad

ಹೈಸ್ಕೂಲಿನಲ್ಲಿ ಬೆಣ್ಣೆಹೊಂಡದ ಕೇಶವ ಮಾಸ್ತರರು 'ಸಂತಾನೋತ್ಪತ್ತಿ' ಪಾಠ ಮಾಡುತ್ತಿದ್ದರು. ಪುಸ್ತಕದಲ್ಲಿದ್ದ ಖಾಸಗಿ ಭಾಗಗಳ ಚಿತ್ರ ನೋಡಿಯೇ ಹುಡುಗಿಯರು ತಲೆ ತಗ್ಗಿಸಿಕೊಂಡಿದ್ದರೂ, ಯಾರೂ ಕಿಸಕ್ಕೆಂದು ನಗದ ಹಾಗೆ ಅವರು, "ನನ್ನ ಅಪ್ಪನ ಗಂಡು ಲಿಂಗಾಣು ಮತ್ತು ನನ್ನ ಅಮ್ಮನ ಹೆಣ್ಣು ಲಿಂಗಾಣು," ಎನ್ನುತ್ತ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ರೀತಿಯೂ ಅಷ್ಟೇ ಕೌತುಕದ್ದು.

ಸಮಾಜ ವಿಜ್ಞಾನ ಪಾಠ ಮಾಡುತ್ತಿದ್ದ ವನಿತಾ ಟೀಚರ್, "ಅತ್ಯಂತ ಅಗ್ಗದ ಸಾಗಾಣಿಕಾ ಮಾರ್ಗ ಯಾವುದು?" ಎಂದು ಕೇಳಿದರು. ಅವರ ಪ್ರಶ್ನೆ ಮುಗಿಯುವ ಮೊದಲೇ ಚಂದ್ರಹಾಸ ಜಾಲಿಸತ್ಗಿ ಎಂಬ ಹುಡುಗ, "ವಾಯು ಮಾರ್ಗ," ಎಂದ. "ನಾಲ್ಕಾಣೆ ಶೇಂಗಾ ತಕ್ಕೊಂಡರಾಯ್ತು," ಎಂದೂ ಸೇರಿಸಿದ. ಇಡೀ ತರಗತಿಯೇ ನಗೆಗಡಲಲ್ಲಿ ತೇಲಿಹೋದಾಗ ವನಿತಾ ಟೀಚರ್ ಕೆಂಡಾಮಂಡಲರಾಗಿರುತ್ತಾರೆಂದು ಭಾವಿಸಿ ಅವರತ್ತ ನೋಡಿದೆ. ಅವರೂ ಕಣ್ಣೀರು ಬರುವಂತೆ ನಗುತ್ತಿದ್ದರು.

ಇವರೆಲ್ಲರನ್ನೂ ಶಿಕ್ಷಕರ ದಿನದಂದು ನೆನಪಿಸಿಕೊಂಡು ಪತ್ರ ಬರೆಯಬೇಕೆನಿಸಿತು. ನಿಮ್ಮೊಡನೆ ಹಂಚಿಕೊಂಡಿರುವ ಈ ಪತ್ರವನ್ನು ನಿರ್ದಿಷ್ಟವಾಗಿ ಯಾರಿಗೆ ಬರೆದದ್ದೆಂದು ಹೇಳುವುದು ಕಷ್ಟ. ಏಕೆಂದರೆ, ಯಾವ ಒಬ್ಬ ಗುರುವಿನಲ್ಲಿ ಈ ಪತ್ರದಲ್ಲಿ ಉಲ್ಲೇಖವಾದ ಎಲ್ಲವನ್ನೂ ನಾನು ಕಂಡಿಲ್ಲ. ಹಾಗೆ ನೋಡಿದರೆ, ಹಲವು ಸಂಗತಿಗಳು ಸಂಭವಿಸಲೇ ಇಲ್ಲ. ಇದೊಂದು ಆಶಯ. ನಾನೇ ಕಲ್ಪಿಸಿಕೊಂಡ ಗುರುವಿಗೆ, ನಾನು ಹಂಬಲಿಸಿದ ಗುರುವಿನಲ್ಲಿರಬೇಕಾದ ಗುಣಗಳೆಲ್ಲವನ್ನೂ ಆರೋಪಿಸಿರುವೆ. ಆದರೆ, ಇಂತಹ ಗುಣಗಳು ಯಾರಲ್ಲೂ ಇಲ್ಲವೆಂದಲ್ಲ. ಆಂಶಿಕವಾಗಿ ಹಲವರಿಂದ ಇಲ್ಲಿನ ಕೆಲವು ಒಡನಾಟಗಳು ನನ್ನ ಅನುಭವಕ್ಕೆ ದಕ್ಕಿವೆ. ನಿಮಗೂ ದೊರೆತಿರಬಹುದು. ಇದು ನಿಮ್ಮ ಪತ್ರವೂ ಆಗಿರಬಹುದು.

* * *

ಸಾಂದರ್ಭಿಕ ಚಿತ್ರ

ಗುರುಗಳಿಗೆ ನಮಸ್ಕಾರ...

ನನ್ನ ಬದುಕಿನ ಪ್ರತಿ ಕದಲುವಿಕೆಯಲ್ಲೂ ನಿಮ್ಮ ಶಕ್ತಿ, ನಿಮ್ಮ ನೆನಪುಗಳು ಹಾಗೂ ನೀವೇ ಒದಗಿಸಿದ ಪ್ರಾರಂಭಿಕ ನೆಗೆತ ಇರುವುದರಿಂದ ನೀವು ನನ್ನ ವ್ಯಕ್ತಿತ್ವದ ಭಾಗವೇ ಆಗಿದ್ದೀರಿ. ನನ್ನೊಳಗೆ ನೀವು ಇರುವುದರಿಂದಲೋ ಅಥವಾ ನೀವು ನನ್ನಿಂದ ಹೊರತಾದ ಸಂಗತಿ ಎಂದು ಅನ್ನಿಸದ ಕಾರಣದಿಂದಲೋ ಗೊತ್ತಿಲ್ಲ, ನಿಮ್ಮ ನೆನಪು ನನಗೆ ಆಗುವುದೇ ಇಲ್ಲ. ಆದರೆ, ನನ್ನ ನಡೆಯಲ್ಲಿ, ನುಡಿಯಲ್ಲಿ, ಬರೆವ ಬೆರಳುಗಳ ತುದಿಯಲ್ಲಿ ನಿಮ್ಮ ನೆರಳಿದೆ. ನನ್ನ ಆಲೋಚನೆಗಳಲ್ಲಿ ನೀವಿದ್ದೀರಿ. ನನ್ನೊಳಗೆ ನೀವು ನನಗೇ ಗೊತ್ತಿಲ್ಲದಂತೆ ಆವರಿಸಿಕೊಂಡಿದ್ದೀರಿ. ನಿಮ್ಮ ನೆನಪುಗಳು ಬಾರದಷ್ಟು ನೀವು ನನ್ನೊಳಗೆ ಸೇರಿಕೊಂಡಿದ್ದೀರಿ. ಈ ದಿನ ಎಲ್ಲರೂ ಶಿಕ್ಷಕರನ್ನು ನೆನೆವಾಗ ಇದೆಲ್ಲ ಹೇಗಾಯಿತು ಎಂದು ಅಚ್ಚರಿಪಡುತ್ತಿದ್ದೇನೆ.

ನೀವಂದುಕೊಂಡಂತೆ ನಾ ನಡೆಯಬೇಕೆಂದು ನೀವೆಂದೂ ಒತ್ತಡ ಹೇರಿದವರಲ್ಲ. ನಿಮ್ಮ ಆಲೋಚನೆಗಳೆಂದೂ ನನ್ನ ಭುಜದ ಮೇಲೆ ಕುಳಿತು ನನ್ನನ್ನು ಉಸಿರುಗಟ್ಟಿಸಲಿಲ್ಲ. ನಿಮ್ಮ ಅಭಿಪ್ರಾಯಗಳನ್ನು ನನ್ನ ಮೇಲೆ ಹೇರುವುದಿರಲಿ, ನೀವೇ ನನ್ನ ಅಭಿಪ್ರಾಯಗಳನ್ನು ಮನ್ನಿಸಿದ್ದೀರಿ, ಒಪ್ಪಿ ನಡೆದಿದ್ದೀರಿ. ಹೀಗೆ ನಡೆಯುತ್ತಲೇ ನೀವು ಹಿಂಬಾಲಿಸಿದಂತೆ ಆಗ ಅನ್ನಿಸಿದ್ದರೂ ನಾನೇ ನಿಮ್ಮನ್ನು ಅನುಸರಿಸುತ್ತಿದ್ದೆ ಎಂಬುದು ಈಗ ಹೊಳೆಯುತ್ತಿದೆ. ನನಗೆ ಕಲಿಸುವ ನೆಪದಲ್ಲಿ ನೀವೇ ನನ್ನಿಂದ ಕಲಿಯುತ್ತಿದ್ದೀರಿ ಎಂದು ಆಗ ನಾನು ಎಣಿಸಿಕೊಂಡಿದ್ದೆ. ನೀವು ಕಲಿಸುತ್ತಿದ್ದೀರೋ ನಾನೇ ನಿಮಗೆ ಕಲಿಸುತ್ತಿದ್ದೇನೋ ಅಥವಾ ನಾವು ಪರಸ್ಪರ ಒಡನಾಡುತ್ತ ಒಬ್ಬರಿಗೆ ಇನ್ನೊಬ್ಬರು ನೆರವಾಗುತ್ತಿದ್ದೇವೋ ಎಂದು ನಾನು ಗೊಂದಲಗೊಳ್ಳುವ ಹಾಗೆ, ನೀವು ಗುರುವಾಗಿ ದೂರ ನಿಲ್ಲದೆ ನನ್ನ ಒಡನಾಡಿಯಾಗಿ ಹತ್ತಿರವಾದಿರಿ. ಹಾಗೆ ನೋಡಿದರೆ, ನೀವು ನನಗೆ ಕಲಿಸಲೇ ಇಲ್ಲ; ನಾನೇ ಕಲಿಯುವಂತೆ ಮಾಡಿದ್ದೀರಿ. ಗುರುಗಳನ್ನು ಎಲ್ಲರೂ ದಾರಿದೀಪವೆನ್ನುತ್ತಾರೆ. ನೀವು ನನಗೆ ದಾರಿದೀಪವಾಗಲಿಲ್ಲ. ನನ್ನನ್ನೇ ನೀವು ದೀಪವಾಗಿಸಿದಿರಿ, ನೀವು ದಾರಿಯಾದಿರಿ.

ನನಗೆ ಆಟವಾಡುವುದನ್ನು ಕಲಿಸುವ ಬದಲು ನನ್ನೊಡನೆ ಆಟವಾಡಿದ್ದೀರಿ. ನಾನು ಗೆದ್ದಾಗ ನಿಮ್ಮದೇ ಗೆಲುವು ಎಂಬಂತೆ ಸಂಭ್ರಮಿಸಿ ದಿಗಿಲು ಹುಟ್ಟಿಸಿದ್ದೀರಿ. ನಾನು ಸೋತಾಗ ಹೆಗಲ ಮೇಲೆ ಕೈಯಿಟ್ಟು ನನಗೆ ಗೆಲುವಿನಂಥದ್ದೇ ಖುಷಿ ಕೊಟ್ಟಿದ್ದೀರಿ.

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ಪರೀಕ್ಷೆಯ ಮೌಲ್ಯಮಾಪನ ನಡೆಸಿದ ಬಚ್ಚಲುಮನೆ ಪ್ರಕರಣ

ಕವಿತೆಯನ್ನೂ ಗಣಿತವನ್ನೂ ನೀವದೆಷ್ಟು ಸುಂದರವಾಗಿ ಬೆಸೆಯುತ್ತೀರೆಂದರೆ, ಕುಮಾರವ್ಯಾಸನ ಪ್ರತಿ ಸಾಲಿನಲ್ಲೂ ನಾನು ಗಣಿತವನ್ನೂ, ಸಂಖ್ಯೆಗಳ ಬಂಧಗಳ ನಡುವೆ ಕವಿತೆಯನ್ನೂ ಕಾಣುವಂತೆ ಮಾಡಿದ್ದೀರಿ. ವಿಜ್ಞಾನವನ್ನು ಬದುಕಿ ತೋರಿಸಿದ್ದೀರಿ, ಸಾಹಿತ್ಯವನ್ನು ನಮ್ಮೊಡನೆ ಉಸಿರಾಡಿದ್ದೀರಿ.

ನೀವು ತಿಳಿ ಹೇಳಲಿಲ್ಲ; ನನಗೇ ಹೆಚ್ಚು ತಿಳಿದಿದೆಯೆಂದು ಮನವರಿಕೆ ಮಾಡಿದಿರಿ ಅಥವಾ ನಾನು ಹಾಗೆಂದುಕೊಳ್ಳುವಂತೆ ಆತ್ಮವಿಶ್ವಾಸ ತುಂಬಿದಿರಿ. ನೀವು ನನಗೆ ಕಲಿಸುವ ಗುರುವೆಂದು ಆಗ ಅನ್ನಿಸಿರಲಿಲ್ಲ. ನೀವೂ ಹಾಗೆ ನಡೆದುಕೊಳ್ಳಲಿಲ್ಲ. ನಿಮಗೂ ಗೊತ್ತಿರದ ಸಂಗತಿಗಳು ಬಹಳಷ್ಟಿವೆ ಎಂಬುದು ನನಗೆ ಗೊತ್ತಾಗುವ ಹಾಗೆ, "ಓ ಹೌದಾ?" "ನಿನಗೆ ಗೊತ್ತಾ?" "ಓಹ್, ನೀನು ಹೇಳಿದ ಮೇಲೆಯೇ ನನಗೆ ಹೊಳೆಯಿತು ನೋಡು!" ಎಂದು ಚಕಿತರಾಗುವುದು ನನಗೆ ಆಶ್ಚರ್ಯವನ್ನೂ ಆತ್ಮವಿಶ್ವಾಸವನ್ನೂ ನೀಡುತ್ತಿತ್ತು. ನೀವು ನನ್ನಲ್ಲಿ ಕೇಳುವ ಅನೇಕ ಪ್ರಶ್ನೆಗಳು ಪರೀಕ್ಷಾರ್ಥವೆನಿಸುತ್ತಿರಲಿಲ್ಲ; ನಿಮಗೆ ನನ್ನಿಂದ ಕಲಿಯುವ ಅನೇಕ ವಿಷಯಗಳಿವೆ ಎಂದು ಅನ್ನಿಸುತ್ತಿತ್ತು, ಅನ್ನಿಸಿ ಖುಷಿಯಾಗುತಿತ್ತು ಕೂಡ.

ನನ್ನ ತಪ್ಪುಗಳನ್ನು ನೀವು ಕಂಡಿದ್ದೀರಿ, ಕೆಲವನ್ನು ಕಂಡೂ ಕಾಣದಂತೆ ಅವಗಣಿಸಿದ್ದೀರಿ. ಇನ್ನು ಕೆಲವನ್ನು ಸರಿಪಡಿಸಿದ್ದೀರಿ. ಆದರೆ, ಅವುಗಳನ್ನೆಂದೂ ನೀವು ಗುಡ್ಡ ಮಾಡಿ ಅವಮಾನಿಸಲಿಲ್ಲ ಅಥವಾ ಆ ಗುಡ್ಡದೆದುರು ನಿಲ್ಲಿಸಿ ನನ್ನನ್ನು ಕುಬ್ಜನನ್ನಾಗಿಸಿರಲಿಲ್ಲ. ನನ್ನ ಒಳ್ಳೆಯ ಗುಣಗಳನ್ನು ಎತ್ತಿ ಹೇಳಿದ್ದೀರಿ. ನನ್ನ ತಾಯಿ-ತಂದೆ, ಬಂಧುಗಳು ನನ್ನ ಕುರಿತು ಹೆಮ್ಮೆಪಟ್ಟುಕೊಳ್ಳುವಂತೆ ಮಾಡಿದ್ದೀರಿ. ಹಾಗೆ ಮಾಡುತ್ತಲೇ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಹುರಿದುಂಬಿಸಿದ್ದೀರಿ.

ಸಾಂದರ್ಭಿಕ ಚಿತ್ರ

ನಿಮ್ಮ ಬಳಿ ನಾನಾಡದೆ ಉಳಿದಿರುವ ಮಾತುಗಳೇ ಇಲ್ಲ ಎಂದು ನನಗನ್ನಿಸುವ ಹಾಗೆ ನನ್ನೊಡನೆ ಮಾತನಾಡಿದ್ದೀರಿ. ನನ್ನ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿರದಿದ್ದರೂ ಕೇಳುವ ಕಿವಿಗಳು ಯಾವಾಗಲೂ ಇದ್ದವು. ನನ್ನ ಪ್ರಶ್ನೆಗಳಿಗೆ ಕೆಲವೊಮ್ಮೆ ಉತ್ತರ ನೀಡುವ ಬದಲು ಇನ್ನೊಂದಿಷ್ಟು ಪ್ರಶ್ನೆಗಳನ್ನೇ ನೀಡುತ್ತಿದ್ದಿರಿ. ನೀವೆಷ್ಟು ಶಾಂತವಾಗಿ ನನ್ನನ್ನು ಆಲಿಸುತ್ತಿದ್ದಿರೆಂದರೆ, ಇನ್ನೊಂದಷ್ಟು ಪ್ರಶ್ನೆಗಳನ್ನು ಕೇಳಲು ಉತ್ಸಾಹವುಂಟಾಗುತಿತ್ತು. ನಾನೇ ಕೇಳಿದ ಹಿಂದಿನ ಪ್ರಶ್ನೆಗಳ ಉತ್ತರವು ನನ್ನದೇ ಮುಂದಿನ ಪ್ರಶ್ನೆಗಳಲ್ಲಿ ಅವಿತಿರುವುದು ಅರಿವಾಗಿ ಕುಣಿದು ಕುಪ್ಪಳಿಸುತ್ತಿದ್ದೆ.

ಕತೆಗಳನ್ನು ನಿಮ್ಮ ದೇಹದ ಮೂಲಕವೂ, ಕವಿತೆಗಳನ್ನು ನಿಮ್ಮ ಕಣ್ಣುಗಳ ಮೂಲಕವೂ ಹೇಳುತ್ತ, ನಿಮ್ಮ ಇಡೀ ದೇಹ ನನಗಾಗಿ ಇದೆಯೆಂದು ಅನ್ನಿಸುವಂತೆ ಮಾಡಿದ್ದೀರಿ.

ಗುರುವು ಮಗುವಿಗೆ ಎಷ್ಟು ಹತ್ತಿರವಾಗಬಹುದು? ಎಣಿಸಿದರೆ, ನಾನು ಚಕಿತನಾಗುತ್ತೇನೆ. ನೀವು ಎಷ್ಟು ಹತ್ತಿರವಾಗಿದ್ದೀರಿ ಎಂದರೆ, ನನ್ನಿಂದ ಪ್ರತ್ಯೇಕಿಸಲಾಗದಷ್ಟು ನನ್ನ ವ್ಯಕ್ತಿತ್ವದಲ್ಲಿ ಬೆಸೆದುಹೋಗಿದ್ದೀರಿ - ನನಗೆ ಗೊತ್ತಿಲ್ಲದಂತೆ.

ನಿಮ್ಮನ್ನು ನೆನಪಿಸಿಕೊಳ್ಳುವ ಅಗತ್ಯವೇ ಇಲ್ಲ. ಏಕೆಂದರೆ, ನೀವು ಮತ್ತು ನಾನು ಬೇರೆ-ಬೇರೆ ಅಲ್ಲವಲ್ಲ!

ವಂದನೆಗಳು...

ಮುಖ್ಯ ಚಿತ್ರ: ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
3 ವೋಟ್
eedina app