ಹೊಸಿಲ ಒಳಗೆ-ಹೊರಗೆ | ಮೀಸೆ ಎಂಬುದು 'ಗಂಡಸುತನ'ದ ಗುರುತಾಗುವ ಸೋಜಿಗ

ಸಹಜೀವಿಯಾದ ಹೆಣ್ಣನ್ನು ‘ದೇಹ’ ಎಂದು ಪರಿಗಣಿಸದೆ, ಸಮಾನ ಜೀವಿ ಎಂದು ಸಂಪೂರ್ಣ ಒಪ್ಪಿಕೊಳ್ಳಲು ಸಾಧ್ಯವಾಗಿದೆಯೇ? – ಈ ಬಗ್ಗೆ ಗಂಡುಮಕ್ಕಳು ಸ್ವಲ್ಪವಾದರೂ ಚಿಂತಿಸಬೇಕು. ಇನ್ನೊಂದೆಡೆ, ಅಧೀನತೆಯ ಪಾತ್ರದಿಂದ ಹೊರಬಂದು ಹೊಸ ಅವಕಾಶ ತೆರೆದುಕೊಂಡಾಗ ಅಧಿಕಾರ ಮೆರೆಯುವ ಚಪಲ ಆಗುತ್ತಿದೆಯೇ? - ಹೆಣ್ಣುಮಕ್ಕಳು ಈ ಬಗ್ಗೆ ಯೋಚಿಸಬೇಕು

ಪಿತೃಪ್ರಧಾನತೆಯ ಒಟ್ಟು ವಿನ್ಯಾಸ, ಅದರ ವಿಡಂಬನೆ ಮತ್ತು ಅದರಲ್ಲಿ ಅಡಗಿರುವ ಶ್ರೇಷ್ಠತೆಯ ವ್ಯಸನವನ್ನು ಅರ್ಥ ಮಾಡಿಸುವುದು ಬಹಳ ಕಷ್ಟದ ಕೆಲಸ. ತರಬೇತಿ ವಿನ್ಯಾಸ ಮಾಡುವಾಗ ಹೀಗೇ ಒಂದು ಚಿಂತನಾ ಲಹರಿ ಸಿಕ್ಕಿತು. ಈ ಪ್ರಕ್ರಿಯೆ ಪಿತೃಪ್ರಧಾನತೆಯ ಪೊಳ್ಳುತನವನ್ನು ಎಳೆಎಳೆಯಾಗಿ ಅನಾವರಣಗೊಳಿಸುತ್ತ ಹೋಗುವಲ್ಲಿ ಒಂದಷ್ಟು ಮಟ್ಟಿಗೆ ಸಹಕಾರಿಯಾಗಿದೆ. ಮೀಸೆಯನ್ನು ಒಂದು ಉಪಮೆಯಾಗಿ ಮುಂದಿಡುತ್ತ ಮಾತುಕತೆ ಶುರುವಾಗುತ್ತದೆ.

'ಮೀಸೆ’ ಎಂದಾಗ ಯಾವ ಹೋಲಿಕೆಗಳು, ಚಿತ್ರಣಗಳು, ಗುಣಗಳು ಮನಸ್ಸಿಗೆ ಬರುತ್ತವೆ - ಪ್ರಶ್ನೆ ಮುಂದಿಟ್ಟರೆ, ಇದೆಂತಹ ಪ್ರಶ್ನೆ ಅನ್ನುವ ಮುಖಭಾವ ಕಾಣುತ್ತದೆ. ಈ ಪ್ರಶ್ನೆ ಎಲ್ಲಿಗೆ ತೆಗೆದುಕೊಂಡು ಹೋಗಬಹುದು ಎಂಬ ಕಲ್ಪನೆಯೇ ಇರುವುದಿಲ್ಲ. ಆಮೇಲೆ ತಿಳಿನಗುವಿನೊಂದಿಗೆ – ಮೀಸೆಯ ಕುರಿತು ಪದಗಳು ಹೊರಹೊಮ್ಮುತ್ತವೆ. "ಸುಂದರ, ಲಕ್ಷಣ, ವೀರ, ಪ್ರಬುದ್ಧ, ದರ್ಪ, ಒರಟುತನ, ಭಯ, ಪುರುಷತನ, ಅಹಂಕಾರ, ಹಾಸ್ಯ, ಹಿರಿಮೆ..." ಸಾಮಾನ್ಯವಾಗಿ ಬರುವ ಉತ್ತರಗಳು. ಆಮೇಲೆ, "ಚಪ್ಪರವಿದ್ದ ಹಾಗೆ, ವಿಷದ ಹಲ್ಲು ಇದ್ದ ಹಾಗೆ, ವೀರಪ್ಪನ್ ಹಾಗೆ..." ಎಂದು ಹೇಳುವವರೂ ಇದ್ದಾರೆ. “ಮೀಸೆ ಹೊತ್ತ ಗಂಡಸು ನಾನು," "ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪ," "ಸೋತರೆ ಮೀಸೆ ಬೋಳಿಸಬೇಕು," "ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ...” - ಸಾಮಾನ್ಯವಾಗಿ ಕೇಳಿಬರುವ ಮಾತುಗಳೂ ನೆನಪಾಗುತ್ತವೆ. ಇನ್ನು, ಪವರ್ ತೋರಿಸಲು ಮೀಸೆ ಮೇಲೆ ಕೈ ಇಟ್ಟುಕೊಳ್ಳುವುದು ತೀರಾ ಸಾಮಾನ್ಯ ದೃಶ್ಯ.

Image
ಸಾಂದರ್ಭಿಕ ಚಿತ್ರ

ಆಮೇಲೆ ಚಿಂತನೆ ಈ ದಾರಿಯಲ್ಲಿ ಸಾಗುತ್ತದೆ...

ಹೆಣ್ಣು-ಗಂಡು ಮಕ್ಕಳು ಬೆಳೆಯುತ್ತಿದ್ದಾರೆ, ಅವರ ಇಬ್ಬರ ದೇಹದಲ್ಲೂ ಒಂದಷ್ಟು ಬದಲಾವಣೆಗಳು ಆಗುತ್ತಿವೆ:

 1. ಹೆಣ್ಣಿನ ದೇಹದಲ್ಲಿ ಎದ್ದುಕಾಣುವ ಬದಲಾವಣೆ ಏನು? – ಮೂಡುತ್ತಿರುವ ಸ್ತನಗಳು.
 2. ಗಂಡಿನ ದೇಹದಲ್ಲಿ ಎದ್ದುಕಾಣುವ ಬದಲಾವಣೆ ಏನು? – ಮೂಡುತ್ತಿರುವ ಚಿಗುರು ಮೀಸೆ.
 3. ಸ್ತನಗಳು ಬೆಳೆಯುತ್ತಿದ್ದ ಹಾಗೆ ಅವಳನ್ನು ಹೇಗೆ ನೋಡಿಕೊಳ್ಳುತ್ತಾರೆ? – ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ, ಎದೆ ಮುಚ್ಚಿಕೊಂಡು ನಡೆ, ಕತ್ತಲೆಗೆ ಮುಂಚೆ ಮನೆ ಸೇರು, ಹುಡುಗರ ಜೊತೆಗೆ ಹೆಚ್ಚು ಮಾತು ಬೇಡ, ನಿನ್ನ ಜವಾಬ್ದಾರಿ ನಮ್ಮದು - ಹೀಗೆ ಕಡಿವಾಣಗಳು ಹತ್ತು ಹಲವು ರೀತಿಯಲ್ಲಿ ಕೆಲಸ ಮಾಡುತ್ತವೆ.
 4. ಮೀಸೆ ಬೆಳೆಯುತ್ತಿರುವಂತೆಯೇ ಅವನನ್ನು ಹೇಗೆ ನೋಡಿಕೊಳ್ಳುತ್ತಾರೆ? – ಅಲ್ಲಿ ಹೋಗು, ಇಲ್ಲಿ ಹೋಗು, ವ್ಯವಹಾರ ಕಲಿತುಕೋ, ನಿನಗೆ ನೀನೇ ಜವಾಬ್ದಾರ, ಹುಡುಗಿಯರ ತರಹ ಕಣ್ಣೀರು ಹಾಕಬೇಡ - ಹೀಗೆ ಹಿರಿಮೆಯ ಅನುಭವ ಕೊಡಲಾಗುತ್ತದೆ.
 5. ಅವಳ ಪಾಲಿಗೆ, ‘ಮನೆಯೇ ಜಗತ್ತು’ ಆಗಬೇಕು; ಅವನ ಪಾಲಿಗೆ ‘ಜಗತ್ತೇ ಮನೆ’ ಆಗಬೇಕು – ಇಂತಹ ಒತ್ತಾಸೆ ಸಿಗುತ್ತದೆ.

ಹೆಣ್ಣಿನ ದೇಹದಲ್ಲಿ ಇರುವ ‘ಸ್ತನಗಳು’ ಯಾತಕ್ಕಾಗಿ ಇವೆ?

 1. ಪೋಷಣೆಯ ಕೆಲಸ, ಮಗುವಿಗೆ ಹಾಲೂಡಿಸಿ ಪೋಷಿಸುವ ಮಹತ್ತರ ಕೆಲಸ.
 2. ಹೆಣ್ತನದ ಸಂಕೇತ, ಮಾನವ ಸಂತತಿಯ ಉಳಿವಿಗೆ ಬೇಕಾಗಿರುವ ಮೌಲ್ಯ.
 3. ಅಂತೆಯೇ ಲೈಂಗಿಕ ಆನಂದಕ್ಕೂ ಸಹಕಾರಿ

ಗಂಡಿನ ದೇಹದಲ್ಲಿ ‘ಮೀಸೆ' ಯಾತಕ್ಕಾಗಿ ಇದೆ?

 1. ಅರೆ, ಏನು ಕೆಲಸವಾ? ಗಂಡಸುತನದ ಗುರುತು ಇದು! ನೋಡಲು ಸೊಗಸು ಇರಬಹುದು. ಗತ್ತು ನೀಡಬಹುದು. ಆಕರ್ಷಣೆ ಅನಿಸಬಹುದು. ಅದಕ್ಕಿಂತ ಹೆಚ್ಚೇನಿದೆ?

ಹೀಗಿರುವಾಗ...

 1. ಸ್ತನಗಳು - ಪೋಷಣೆಯ, ಹೆಣ್ತನದ ಗುರುತು
 2. ಮೀಸೆ - ಸೊಗಸಿನ, ಗಂಡಸುತನದ ಗುರುತು
 3. ಸ್ತನಗಳು – ಜೀವವಾಹಿನಿ
 4. ಮೀಸೆ – ಪೊಳ್ಳು ಪ್ರತಿಷ್ಠೆ

ಈ ಚಿಂತನೆಯ ದಾರಿಯಲ್ಲಿ ಸಹಜವಾಗಿಯೇ ಕೆಲವು ಪ್ರಶ್ನೆಗಳು ಎದುರಾಗುತ್ತವೆ. ಯಾವುದೇ ‘ಕೆಲಸಕ್ಕೆ ಬಾರದ’ ಮೀಸೆಯನ್ನು ಗಂಡಸುತನದ ಗುರುತಾಗಿ ಯಾಕೆ ಇಟ್ಟಿದ್ದಾರೆ? ಸ್ತನಗಳು ಮೂಡುವಾಗ, ಕಡಿವಾಣ ಹಾಕುತ್ತ ಅಧೀನತೆ ಕಲಿಸುವುದು ಯಾಕೆ, ಮೀಸೆ ಮೂಡುವಾಗ ಅವಕಾಶ ಕೊಡುತ್ತ ಅಧಿಕಾರದ ರುಚಿ ಬೆಳೆಸುವುದು ಯಾಕೆ?

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | "ನಾನು ಹುಡುಗ ಆಗಬೇಕಾಗಿತ್ತು...”

ನಿಜಕ್ಕೂ ಬೇಸರದ ವಿಷಯವೆಂದರೆ, ಅದೆಷ್ಟೋ ಗಂಡಸರು, ಬಡಪಾಯಿ ಗಂಡಸರು, ಪೊಳ್ಳು ರಿವಾಜು, ದರ್ಪ-ಧಿಮಾಕುಗಳನ್ನೇ ಮಹಾ ಗಂಡಸುತನವೆಂದು ತಿಳಿದು ಅದಕ್ಕೆ ಬಲಿಯಾಗಿ, ಬದುಕಿನ ಸಹಜ ಸ್ವಾರಸ್ಯ ಕಳೆದುಕೊಳ್ಳುತ್ತಿದ್ದಾರೆ, ಈ ಪೊಳ್ಳುತನವನ್ನು ಕಾಪಾಡಲು ಒಂದು ರಾಶಿ ಆತಂಕ, ಭಯ ಇಟ್ಟುಕೊಂಡಿರುತ್ತಾರೆ. ಈ ಮೀಸೆಯನ್ನು ಕಾಪಾಡಿಕೊಳ್ಳುವ ಭರದಲ್ಲಿ ಎಂತೆಂತಹ ಆನಂದಗಳನ್ನು ಕಳೆದುಕೊಳ್ಳುತ್ತಾರೆ! ಇದು ದೊಡ್ಡ ವಿಪರ್ಯಾಸ. ಪಾಪ ಅನಿಸುತ್ತೆ. ಅದಕ್ಕಾಗಿ ಮೀಸೆ ಕಳಚಿಕೊಳ್ಳುವ, ಅಲ್ಲ, ಮೀಸೆ ಜೊತೆ ಅಂಟಿಸಿಕೊಂಡಿರುವ ಒಣಜಂಬ ಕಳಚಿಕೊಳ್ಳುವ ಅಗತ್ಯವಿದೆ. ಜೀವ ಹಗುರವಾಗಬಹುದು; ನಿರಾಳ ಆಗಬಹುದು.

ಈ ಮಾತುಕತೆಗಳು ಸಾಗುವಾಗ ತರಬೇತಿಯಲ್ಲಿ ಸಹಭಾಗಿಗಳು, ಅದರಲ್ಲೂ ಗಂಡುಮಕ್ಕಳು ಒಂದೆರಡು ಕ್ಷಣ ಪೆಚ್ಚು ಪೆಚ್ಚಾಗಿಬಿಡುತ್ತಾರೆ, ಶಾಕ್ ಟ್ರೀಟ್‍ಮೆಂಟ್ ಕೊಟ್ಟ ಹಾಗೆ ಆಗುತ್ತದೆ, ಮೌನವಾಗಿಬಿಡುತ್ತಾರೆ. ಕೆಲವರು ಅರಿವಿಲ್ಲದೆ ಮೀಸೆ ಮುಟ್ಟಿ ನೋಡಿಕೊಳ್ಳುತ್ತಾರೆ. "ಛೇ, ಮೇಡಂ... ಇಷ್ಟು... ತೀರಾ ಹೇಳಿಬಿಟ್ಟರೆ ಹೇಗೆ ಮೇಡಂ?" ಅಂತ ಚಡಪಡಿಸುತ್ತ ಹೇಳುತ್ತಾರೆ. ಎಷ್ಟೋ ಸಾರಿ ಗಂಡುಮಕ್ಕಳು ಪಿತೃಪ್ರಧಾನತೆ ಬಗ್ಗೆ ಒಂದಷ್ಟು ಅರ್ಥ ಆಯಿತು ಅಂದಾಗ, ಬಹಳ ಸಂವೇದನೆಯಿಂದ, "ಓಹ್, ನಾವು ಹೆಚ್ಚು ಉದಾರವಾಗಬೇಕು, ಸಮಾನತೆಯನ್ನು ನೀಡಬೇಕು, ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಕೊಡಬೇಕು," ಅನ್ನುವ ಭಾವ ಬಂದಿರುತ್ತದೆ. ಆದರೆ, ಈ ಪಿತೃಪ್ರಧಾನತೆ ಕೊಟ್ಟಿರುವ ಹಿರಿಮೆಯೇ ಸುಳ್ಳು, ಪೊಳ್ಳು ಅಂತ ಅನಿಸಿದಾಗ, "ಸಮಾನತೆ, ಸ್ವಾತಂತ್ರ್ಯ ಕೊಡೋದಕ್ಕೆ ನಾನು ಯಾರು?" ಅನ್ನುವ ಜ್ಞಾನೋದಯ ಕೆಲವರಿಗೆ ಆಗುತ್ತದೆ. ಮತ್ತೆ ಕೆಲವರಿಗೆ ಇದನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗಿ ಸಮರ್ಥನೆಗೆ ತೊಡಗುತ್ತಾರೆ, ಮುನಿಸು ತೋರಿಸುತ್ತಾರೆ, ದಬ್ಬಾಳಿಕೆ ಮಾಡುವ ಮಹಿಳೆಯರ ಕತೆ ಹೇಳಲು ತೊಡಗುತ್ತಾರೆ.

Image
ಸಾಂದರ್ಭಿಕ ಚಿತ್ರ

ಸಾಧಾರಣವಾಗಿ ತರಬೇತಿಗಳಲ್ಲಿ ಅತ್ಯಂತ ಡಿಪ್ಲೊಮ್ಯಾಟಿಕ್ ಆಗಿ ಮನಸ್ಸಿಗೆ ವಿಚಾರಗಳನ್ನು ಸಿಂಪಡಿಸುತ್ತ, ಹದಪಡಿಸುತ್ತ ಇಳಿಸುವ ಪ್ರಯತ್ನ ಮಾಡುತ್ತೇವೆ. ಆಕ್ರಮಣಕಾರಿಯಾಗಿ ಏನನ್ನೂ ಹೇಳುವುದಿಲ್ಲ, ಅವರ ಪುರುಷ ಅಹಂಗೆ ಧಕ್ಕೆ ಆಗದಂತೆ ಮುಲಾಮು ಸವರುತ್ತ-ಸವರುತ್ತ, ಹೆಣ್ಣುಮಕ್ಕಳೂ ಸಮಾನತೆ, ಸ್ವಾತಂತ್ರ್ಯಕ್ಕೆ ಅರ್ಹರು ಎಂದು ಹೇಳುವ ಪ್ರಯತ್ನ ಮಾಡುತ್ತೇವೆ. ಅಪರೂಪಕ್ಕೆ ಒಮ್ಮೊಮ್ಮೆ, ಸಹಭಾಗಿಗಳು ವಿನೋದದಿಂದ ನೋಡಬಲ್ಲರು ಅನಿಸಿದಾಗ ಮಾತ್ರ ಇಂತಹ ಖಡಕ್ ಚಿಂತನೆಗಳನ್ನು ಒಡ್ಡುತ್ತೇವೆ. ಏನೇ ಇರಲಿ, ಪಿತೃಪ್ರಧಾನತೆಯ ಜಾಲದಿಂದ ಹೊರಬರಬೇಕೆಂದರೆ ಪ್ರತಿಯೊಬ್ಬರೂ ತಮ್ಮನ್ನು ತಾವು ತಟ್ಟಿ, ತಡವಿ ನೋಡಿಕೊಳ್ಳಬೇಕಾಗುತ್ತದೆ.  

ಮನೆಗೆಲಸವನ್ನು ನಿರಾಳವಾಗಿ ಮಾಡಲು ಆಗುತ್ತದೆಯೇ? ಹೆಂಡತಿ ತನಗಿಂತ ಹೆಚ್ಚು ಓದಿದವಳಾಗಿದ್ದು, ಹೆಚ್ಚು ಸಂಪಾದನೆ ಮಾಡುವವಳಾಗಿದ್ದರೂ ಆರಾಮವಾಗಿ ಇರಬಲ್ಲರೇ? ಲೈಂಗಿಕ ವಿಚಾರಗಳ ಕುರಿತು (ಲೈಂಗಿಕ ಆನಂದ ಇರಬಹುದು, ಕಾಂಡೋಮ್ ಬಳಕೆಯ ಮಾಹಿತಿ ಇರಬಹುದು) ತನಗಿಂತ ಹೆಚ್ಚು ಮಾಹಿತಿ ಹೊಂದಿದ್ದರೆ ಕಸಿವಿಸಿಯಾಗದೆ ಇರಬಲ್ಲರೇ? ಗಂಡನಾದವನಿಗೆ ಹೆಂಡತಿಯನ್ನು ಹೊಡೆಯುವ ಹಕ್ಕು ಇದೆ ಎನಿಸುತ್ತದೆಯೇ? ಹೆಂಡತಿಯನ್ನು ಹದ್ದುಬಸ್ತಿನಲ್ಲಿ ಇಡಲಾರದೆ ಹೋದರೆ ಅಂತಹವನು ಗಂಡಸಲ್ಲ ಅನಿಸುತ್ತದೆಯೇ? ಸಹಜೀವಿಯಾದ ಹೆಣ್ಣನ್ನು ಒಂದು ‘ದೇಹ’ ಎಂದು ಪರಿಗಣಿಸದೆ, ತನಗೆ ಸಮಾನವಾದ ಒಬ್ಬ ಜೀವಿ ಎಂದು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿದೆಯೇ? – ಇವೆಲ್ಲದರ ಬಗ್ಗೆ ಗಂಡುಮಕ್ಕಳು ಸ್ವಲ್ಪವಾದರೂ ಚಿಂತಿಸಬೇಕು. ‘ಗಂಡಸುತನ’ ಅನ್ನುವುದಕ್ಕೆ ಹೊಸ ಅರ್ಥ ರೂಪಿಸಬೇಕು.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಅದೊಂದು ದಿನ ಇದ್ದಕ್ಕಿದ್ದಂತೆ ತನ್ನ ಹೆಸರನ್ನೇ ಮರೆತವಳ ಕತೆ

ಮಹಿಳೆಯರಿಗೂ ಎಲ್ಲ ಹಕ್ಕುಗಳು ಸಿಗಬೇಕು ಅನ್ನಿಸುತ್ತದೆಯೇ? ಮಹಿಳೆಯರ ಮೇಲಿನ ಹಿಂಸೆ ದೌರ್ಜನ್ಯಗಳಿಗೆ ಮಹಿಳೆಯರು ತಗ್ಗಿ-ಬಗ್ಗಿ ಅನುಸರಿಸಿಕೊಂಡು ನಡೆಯದಿರುವುದೇ ಕಾರಣ ಎಂದು ಅನ್ನಿಸುತ್ತದೆಯೇ? ಅಧೀನತೆಯ ಪಾತ್ರದಿಂದ ಹೊರಬಂದು ಹೊಸ ಅವಕಾಶ ತೆರೆದುಕೊಂಡಾಗ, ಅಧಿಕಾರವನ್ನು ಮೆರೆಯುವ ಚಪಲ ಆಗುತ್ತಿದೆಯೇ? ಅಧಿಕಾರ ಉಳಿಸಲು ನಿಯಂತ್ರಣ, ದಬ್ಬಾಳಿಕೆ ಅಗತ್ಯ ಎಂದು ಅನಿಸುತ್ತಿದೆಯೇ? ತಳ ಸಮುದಾಯದ ಅಥವಾ ಹೆಚ್ಚು ಓದಿಲ್ಲದ ಮಹಿಳೆಯರ ಸಮಾನತೆ, ಸ್ವಾತಂತ್ರ್ಯದ ಬಗ್ಗೆ ತನ್ನ ಬದುಕಿನ ಬಗ್ಗೆ ಇರುವಂತಹ ಕಾಳಜಿ ಇದೆಯೇ? ತನ್ನ ಸಂಗಾತಿಗಿಂತ ತಾನೇ ಹೆಚ್ಚು ಓದಿದವಳಾಗಿದ್ದಕ್ಕಾಗಿ, ಹೆಚ್ಚು ಸಂಪಾದನೆ ಮಾಡುವುದಕ್ಕಾಗಿ ತಾನು ಹೇಳುವ ಹಾಗೆ ಎಲ್ಲವೂ ನಡೆಯಬೇಕು ಅನಿಸುತ್ತಿದೆಯೇ? - ಹೆಣ್ಣುಮಕ್ಕಳು ಹೀಗೆ ಸ್ವಲ್ಪ ತಮ್ಮನ್ನು ತಾವು ಕೇಳಿಕೊಳ್ಳಬೇಕು.

ಎಷ್ಟೋ ಸಾರಿ ಎಷ್ಟೋ ಹೆಣ್ಣುಮಕ್ಕಳು ತಮಗೆ ಬಿಡುಗಡೆ ಸಿಕ್ಕಾಗ ಅಥವಾ ತಾವು ಅಧಿಕಾರದ ಸ್ಥಾನ ಪಡೆದಾಗ ಮೀಸೆ ಹೊತ್ತ ಗಂಡಸರಂತೆಯೇ ವರ್ತಿಸುತ್ತಾರೆ. ಇದು ದಬ್ಬಾಳಿಕೆಯ ಅಧಿಕಾರವನ್ನು ಒಳಗೊಳಗೇ ಒಪ್ಪಿಕೊಂಡ ಹಾಗೆಯೇ ಆಯಿತು. ಪಿತೃಪ್ರಧಾನತೆಯ ಒಂದು ಸೂತ್ರ ಹೀಗೆ ಕಾಣುತ್ತದೆ: ಅಧೀನತೆಯನ್ನು ಒಪ್ಪಿಕೊಂಡು ಅನುಸರಿಸುವ ಒಂದು ಮನಸ್ಥಿತಿ; ಅಧಿಕಾರವನ್ನು ಮೆರೆಯುವ ಒಂದು ಮನಸ್ಥಿತಿ. ಈ ಎರಡೂ ಮನಸ್ಥಿತಿಯಿಂದ ಹೊರಬಂದರೆ ಮಾತ್ರ ಪಿತೃಪ್ರಧಾನತೆಯ ಜಾಲದಿಂದ ಹೊರಗೆ ಕಾಲಿಡಲು ಸಾಧ್ಯವಾಗಬಹುದು.

ಮುಖ್ಯ ಚಿತ್ರ - ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
5 ವೋಟ್