ಅಪ್ರಮೇಯ | ಹೌದು... ನಾನು ನನ್ನಿಷ್ಟದಂತೆ ಬದುಕುತ್ತ ಒಳ್ಳೆಯ ನರಕದಲ್ಲಿದ್ದೇನೆ!

Trance Gender

ಬೇರೆಯವರಿಗೂ ಸ್ವಲ್ಪ ಇರ್ಬೇಕು ಅನ್ನೋ ಬಾವನೆ ಇಲ್ದೆ, ನಿಮಿಶ ನಿಮಿಶಕ್ಕೂ ಎಂಜಲು, ಮುಸ್ರೆ ಅದ್ಕೊಂಡು, ಬರೀ ಊಟಕ್ಕೋಸ್ಕರ ಬದ್ಕಿರೋರಂತೆ, ಒಂದ್ ಚಾನ್ಸ್ ಸಿಕ್ರೆ ಸಾಕು ಪಪ್ಪು, ಮಜ್ಜಿಗ್, ಪುಲ್ಕ ಮಾಡ್ಕೊಂಡು - ಅಲ್ಲ, ಅವರ ಹೆಂಗ್ಸರ ಕೈಲಿ ಮಾಡಿಸ್ಕೊಂಡು ತಿಂತಾ, "ತ್ಚ್ ತ್ಚ್ ತ್ಚ್ ದೇಶ ಕೆಟ್ಟೋಗಿದೆ," ಅಂತ ತೇಗಿನ ಜೊತೆಗೆ ಮಾತನಾಡೋರನ್ನು ನಾನು ನನ್ನವ್ರನ್ನಾಗಿಸ್ಕೊಳಕ್ಕೆ ಆಗಲ್ಲ

ನಾನು ನನ್ನ ಜೀವನದಲ್ಲಿ ಬದುಕಕ್ಕೆ ಏನೇನೋ ಕೆಲಸ ಮಾಡಿದ್ದೀನಿ. ಸಂಗೀತ ಕಲಿಸಿ ಅದರಲ್ಲೇ ಬದುಕೋಕ್ಕೆ ನೋಡಿದಾಗ 28 ಆದ್ರೂ ಮದುವೆ ಆಗ್ತಿಲ್ಲ, ಕಡೆಗೆ ಸಲಿಂಗಕಾಮಿ ಅಂದ ಮೇಲೆ ಹಾಡುವ ಅವಕಾಶಗಳೂ ಕಡಿಮೆ ಆಯ್ತು. ಮದುವೆ ಆಗಲ್ಲ, ಆಗಿಲ್ಲ ಅನ್ನೋದು ಒಬ್ಬರು ಹಾಡುಗಾರರ ಡಿಸ್ ಕ್ವಾಲಿಫಿಕೇಶನ್ ಅಂತ ಗೊತ್ತಿರಲಿಲ್ಲ. ಶಾಸ್ತ್ರೀಯ ಸಂಗೀತಕ್ಕೂ ನನ್ನ ವೈಯಕ್ತಿಕ ಪ್ರೇಮದ ಅರಸಿಕೆಗೂ ಏನು ಸಂಬಂದ? ನನಗಿದ್ದರೂ ಇರಬಹುದು ಆದ್ರೆ, ಹೊರಗಿನವರಿಗೆ ಅತವಾ ಕೇಳುಗರಿಗೆ ಅದು ಹೇಗಾದ್ರು ಗೊತ್ತಾಗುತ್ತೆ?

ನಾನು ಶಂಕರನೋ ಬಿಹಾಗೋ ರಾಗ ಹಾಡುವಾಗ ನನ್ನ ಆವಾಜಿನ ಜೊತೆ ಮತ್ತೊಂದು ಆವಾಜು “ಇವನು ಸಲಿಂಗಿ, ಇವನು ಸಲಿಂಗಿ” ಅಂತ ಕಹಳೆ ಊದುತ್ತೋ ಎಂತದೋ ಗೊತ್ತಿಲ್ಲಾಪ್ಪ. ಹಾಡೋದ್ರ ಜೊತೆಗೆ ಬೇರೆ ಕೆಲ್ಸ ಮಾಡೋದು ಅನಿವಾರ್ಯ ಆಯ್ತು. ಮದ್ವೆ ಆಗೋ ಶೋಕಿಗೆ ಕುಟುಂಬ ಹಾಡಲ್ಲಾ ಎನ್ ಬೇಕಾದ್ರೂ ಕಲಿಸಿಬಿಡುತ್ತೆ. ನನ್ ಫ್ರೆಂಡ್ ಒಬ್ಳು (ಉಳ್ಳವರು) ತಾನು ಮಾಡಿದ ಎಲ್ಲಾ ಕಲಾಕೃತಿಗಳ ಎಕ್ಸಿಬಿಶನ್ ಇಟ್ಟಿದ್ಲು ತನ್ ಮದ್ವೆಲಿ.‌ ಮನೆಯವರಿಗೆ ಇಲ್ಲಿ ತಂಕ ಕಲಿತ್ರೆ ಸಾಕು. ಮದ್ವೆ ಆಗ್ದೆ ಇರಕ್ಕೆ. ನನ್ ಪ್ರಕಾರ ಒಳ್ಳೆ ಕ್ವಾಲಿಫಿಕೇಶನ್ ಕುಟುಂಬದವರಿಗೆ ಅತ್ಯಂತ ಅವಮಾನಕರ ಸಂಗತಿ ಎಂದರೆ ನಾನು ದಪ್ಪ ಇದ್ದದ್ದು. ನಾನು ಯಾರ್ ಮೇಲೂ ಬಾರ ಹಾಕದೇ ನನ್ನ ಸ್ವಂತ ಕಾಲಲ್ಲಿ ನಿಂತು ಸ್ವಂತ ದೇಹಾನ ಎತ್ಕೊಂಡು ಕೆಲ್ಸ ಮಾಡಿದ್ರೂ, ಏನೋ ಸಮಾಜ, ಕುಟುಂಬ, ಅಪರಿಚಿತರು ಎಲ್ಲಾ ಸೇರಿ ನನ್ನ ಬಾರ ಎತ್ಕೊಂಡಂಗೆ ಊರ್ಗೆಲ್ಲಾ ಉಸಾಬರಿ.

Image
Trance Gender

ಪರಿಚಯವೇ ಇಲ್ದವರು ನನ್ನ ನೋಡಿದ್ ತಕ್ಶಣ ಹೇಗೆ ಸಣ್ಣ ಆಗ್ಬೇಕು ಅಂತ ಉಪದೇಸ ಕೊಡೋವ್ರು, ಎನೋ ಅವರೇ ನನ್ನ ಬಕಾಸುರ ಹೊಟ್ಟೆಗೆ ಊಟ ಕೊಡೊ ಹಾಗೆ. ಇಡೀ ಸಮಾಜಕ್ಕೇ ಒಂದು ಪಕ್ಕಾ ಅನಿಸಿಕೆ ವಿತೌಟ್ ಕಾನ್‍ಫ್ಲಿಕ್ಟ್  “ದಪ್ಪ ಇರೋರು ತುಂಬಾ ತಿನ್ತಾರೆ, ಸಣ್ಣ ಇರೋರು ತಿನ್ನೋದೇ ಇಲ್ಲ.” ನನ್ನ ಇಡೀ ಯೌವನ ಈ ವಿಶಯದಲ್ಲಿ ಜಸ್ಟಿಫೈ ಮಾಡೋದೇ ಆಗೋಗಿತ್ತು. ಇದ್ರಲ್ಲಿ ಪ್ರಗತಿಪರರೇನೂ ಕಡಿಮೆ ಇಲ್ಲ. ಎಶ್ಟು ಮೈ ಮುರಿದು ಕೆಲಸ ಮಾಡಿದ್ರೂ ಸೋಂಬೇರಿ ಅನ್ನೋ ಪಟ್ಟ. “ಹೂ ದುಡಿಬೇಕು, ಬೆವರು ಸುರಿಸಬೇಕು,” ಅಂತ ಅಡ್‍ವೈಸ್, ಅದೂ ಫ್ರೀ ಅಡ್‍ವೈಸ್.

ಏನೇ ಇರ್ಲಿ, ಅಂತೂ ಕುಟುಂಬದವರು ಅನ್ಕೊಂಡಂಗೆ ನಂಗೆ ಮದ್ವೆ ಆಗಕ್ಕೆ ಆಗ್ಲಿಲ್ಲ. ಅದಕ್ಕೆ ನಾನೂ ಕಾರಣಾನೆ. ನೋಡಕ್ ಬರೋ ಹುಡ್ಗರ್ನೆಲ್ಲ ಹೆದ್ರಿಸಿ ಓಡಿಸ್ತಿದ್ದೆ. ಒಂದು, ನನ್ ಕೆಲ್ಸ ಸೆಕ್ಸ್ ವರ್ಕರ್ಸ್ ಜೊತೆ ಅಂದ್ರೆ, ಸಾಕು ಓಡೋಗ್ಬಿಡೋರು. ಎರಡು, ನಂಗೆ ಮಕ್ಳಾಗಲ್ಲ ಪಿಸಿಒಡಿ ಇದೆ ಅಂದ್ರೆ ಕೇಳ್ಳೆ ಬೇಡಿ ಬಂದಿದ್ ನಿಶಾನೆ ಇಲ್ದೆ ಓಡೋಗೋರು. ಮೂರು, ನಂಗೆ ಬಂದ ಗಂಡಿಗಿಂತ ಅವರ ಅಮ್ಮ ಇಶ್ಟಾ ಆಗೋರು. ಅದನ್ನೂ ಓಪನ್ನಾಗಿ ಹೇಳ್ತಿದ್ದೆ. ಆಗ್ಲೂ ಓಡೋಗೋರು. ಒಂದ್ ಸರಿ ಅಂತೂ ಒಂದು ಗಂಡಿನ ತಾಯಿ ನನ್ ಹತ್ರ ಹೇಳಿದ್ರು “ರಾತ್ರಿ ಮಾತ್ರ ಮಗನ ಜೊತೆ ಇರುದಲ್ವ, ಬೆಳಿಗ್ಗೆ ಎಲ್ಲಾ ನನ್ ಜೊತೆನೇ ಇರ್ಬೇಕು,” ಅಂದ್ರು. ಅದಕ್ಕೆ ನಾನು “ನಂಗೆ ಎರಡೆರಡು ಲಾಯಲ್ಟಿಗಳನ್ನು ಇಟ್ಕೊಳಕ್ಕಾಗಲ್ಲ. ನಾನು ಯಾರಾದರು ಒಬ್ಬರ ಜೊತೆ ಇರ್ತೀನಿ, ಸುಮ್ನೆ ರಾತ್ರಿ ಬೆಳಿಗ್ಗೆ ಯಾಕೆ, ನಾನು ನಿಮ್ ಜೊತೆನೆ ಮದ್ವೆ ಆಗ್ತೀನಿ,” ಅಂತ ಆಯಮ್ಮಂಗೆ ಹೇಳ್ದೆ. ಆವತ್ತು ಮನೇನೇ ಉಳ್ಟಾಪಳ್ಟಾ ಆಗೋಗಿತ್ತು. ಬಂದೌರು ಕುಟುಂಬದೌರು ಎನೇನೋ ಮಾತಾಡ್ತಾ ಇದ್ರು. ನಮ್ ಅಮ್ಮ ಮಾತ್ರ ಆರಾಮಕ್ಕೆ “ಬಾ ಒಂದ್ ರೈಡ್‍ಗೆ ಹೋಗೋಣ,” ಅಂತ ಕರ್ಕೊಂಡು ಹೋದ್ರು.

ಈ ಲೇಖನ ಓದಿದ್ದೀರಾ?: ಅಪ್ರಮೇಯ | 'ಅಮ್ಮೋರೆ ನಮ್ಮನೆ ಪರ್ಕೆ ಚೆನ್ನಾಗೇ ಇದೆ - ದೊಡ್ಡಮ್ನೋರು ಹೊಸ್‍ದಾಗೆ ತರ್ಸಿದ್ದು'

ನಾನೊಂದ್ ಸರಿ ನನ್ ಆಂಟಿ ಹತ್ರ ಹೇಳ್ದೆ “ನಂಗೆ ಮದ್ವೆ, ಪ್ರೆಗ್‍ನೆಂಟಾಗೋದು, ಮಕ್ಳನ ಹೆರೋದು ಅಂದ್ರೆ ಹೇಸಿಗೆ, ನನ್ ದೇಹದಿಂದ ಏನೋ ಹರ್ಕೊಂಡ್ ಬರುತ್ತೆ ಅಂದ್ರೆ ಅಸಹ್ಯ, ಇರೋ ದೇಹಾನೆ ನಂಗೆ ಇಶ್ಟ ಇಲ್ಲ,” ಅದಕ್ಕೆ ಅವರು “ಏನ್ ಮಾತೂಂತ ಆಡ್ತಿಯ, ನೀನೂ ಒಂದ್ ಹೆಂಗ್ಸಾ? ಶಾಂತಂ ಪಾಪಂ, ದೇವ್ರು ಕೊಟ್ಟಿರೋದನ್ನ ಹೀಗೆಲ್ಲ ಮಾತಾಡಿ ಪಾಪ ಕಟ್ಕೊಬಾರ್ದು, ಎಲ್ಲಿ ರಾಗ್ವೆಂದ್ರ ಸ್ವಾಮಿ ಮಂತ್ರ ಹೇಳು ಸರೋಗ್ತೀಯ,” ಅಂದ್ರು. “ಆಯಪ್ಪನ್ ಮಂತ್ರ ಹೇಳಿ ನಂಗೆ ಇರ್ರೆಸ್ಪಾನ್‍ಸಿಬಲ್ ಆಗಕ್ಕೆ ಇಶ್ಟ ಇಲ್ಲ,” ಅಂದೆ, ತಗೋ ಇಡೀ ಪ್ರಪಂಚವನ್ನೇ ಮೇಲೆ ಕೆಳಗೆ ಮಾಡಿ ನನ್ನ ಹುಟ್ಲಿಲ್ಲಾನ್ಸಿ ಬಿಟ್ರು. ಅವತ್ತು ನಂಗೆ ಗೊತ್ತಾಯ್ತು, ನಾನು “ಬಯಂಕರ ಪಾಪಿಶ್ಟೆ,” ಅನ್ನೋದು. ಇದು ಪಾಪಾ ಆದ್ರೆ, ಸಾವಿರಾರು ಸರಿ ಮಾಡ್ಬೋದು ಅಂತ ಮನ್ಸ್ ನಾಗ್ ಅಂದ್ಕಂಡೆ.

ಇದೆಲ್ಲದರ ಮೇಲೆ ನಾನು ಇನ್ನಾ ಒಂದು ಪಾಪಾ ಮಾಡ್ದೆ. ಅದೇನೆಂದ್ರೆ, ಹಿಜ್ರಾ ಸಮುದಾಯದ ಜೊತೆ ಕೆಲ್ಸ ಮಾಡೋದು. ಅದೂ ಫಮೀಲ ನಂಗೆ ತುಂಬಾ ಕ್ಲೋಸಾಗಿದ್ದಾಗ, ಯಾವಾಗ್ಲೂ ಅವ್ಳ ಜೊತೆ ಕ್ರೈಸಿಸ್ ಅಂತ ಪೊಲೀಸ್ ಸ್ಟೇಶನ್‍ಗಳಿಗೆ ಸುತ್ತಾಡ್ತಾ ಇದ್ದೆ. ನೋಡಿ ಇದಕ್ಕಿಂತ ಮಹಾ ಪಾಪಾ ಇಲ್ಲ. ಇದ್ರಿಂದಾಗಿ, ನಾನು ಇಂಪೊಟೆಂಟ್ ಆಗಿ ಮದ್ವೆ ಆಗಲು ಅನ್ ಫಿಟ್ ಆದೆ. ಅಂದ್ರೆ, ಹಿಜ್ರಾಗಳ ಜೊತೆ ಸುತ್ತಿದ್ರೆ ‘ನಾನು’ ಒಂದು ಹೆಣ್ ದೇಹ ಇದ್ದೋನು ಗಂಡಸಿನಂತೆ ‘ಇಂಪೊಟೆಂಟ್’ ಮಕ್ಳ ಮಾಡಕ್ಕಾದೋನು ಆಗ್ಬಿಟ್ಟೆ. ಇದನ್ನ ಕೇಳಸ್ಕೊಂಡಾಗ ನಾನು ಹೊರಳಾಡ್ಕೊಂಡು ನಕ್ಕಿದ್ದೀನಿ. ಹೆಣ್ಣು ದೇಹ ಇರೋರು ಇನ್‍ಫರ್ಟೈಲ್ ಆಗ್ತಾರೆ, ಇಂಪೊಟೆಂಟ್ ಅಲ್ಲ. ಅಂದ್ರೆ, ನಾನು ಯೋಚನೆ ಮಾಡೋ ಮುಂಚೆನೇ ನನ್ ಕುಟುಂಬದೋರು ನನ್ನ ಗಂಡಸಾಗಿ ಮಾಡ್ಬಿಟಿದ್ರು. ಈ ಪಾಪಾ ಮಾಡಿ ವಂಶ ಉದ್ದಾರ ಮಾಡದೆ ನಾನು ಇವತ್ತು ಗೋರ ನರಕದಲ್ಲಿದ್ದೀನಿ ಅಂದ್ಕೊಂಡಿದ್ದಾರೆ.

Image
Trance Gender

ತುಂಬಾ ಸಂತೋಸ. ಹೌದು ನಾನು ಒಳ್ಳೆ ನರಕದಲ್ಲಿ ನನಗೆ ಬೇಕಾದ್ದನ್ನ ಮಾಡ್ಕೊಂಡು, ನನ್ನಿಶ್ಟಕ್ಕೆ ಜೀವಿಸ್ತಾ ಇದ್ದೀನಿ ಯಾರಿಗೂ ತೊಂದ್ರೆ ಕೊಡದೆ. ಅವರಿಗೆ ನಾನು ಇಂತಾ ಅನ್ಯಾಯಾ ಮಾಡಿದ್ಮೇಲೂ ನಾನ್ಯಾಕೆ ಅವ್ರು ನನ್ನವ್ರು ಅಂತ ಹೇಳ್ಬೇಕು? ಇದೊಂದೇ ಕಾರಣ ಅಲ್ಲ ಅವ್ರು ನನ್ನೋರು ಅಂತ ಹೇಳ್ದೆ ಇರಕ್ಕೆ. ನಾನು ಇನ್ನೂ ಈ ತರದ ಸಾವಿರಾರು ಪಾಪಗಳನ್ನ ಮಾಡ್ತೀನೇ ಹೊರ್ತು ಅವರ ತರ ಬದುಕಲು ರೆಡಿ ಇಲ್ಲ. ಯಾವ್ ಪಾಪಾನೂ ಮಾಡ್ದೇ, ಅಸ್ಪೃಶ್ಯತೆ ಅಬ್ಯಾಸ ಮಾಡ್ಕೊಂಡು, ಸಿಕ್ಕಿದ್ದನ್ನೆಲ್ಲಾ ಬಾಚ್ಕೊಂಡು ಬೇರೆಯವರಿಗೂ ಸ್ವಲ್ಪ ಇರ್ಬೇಕು ಅನ್ನೋ ಬಾವನೆ ಇಲ್ದೆ, ನಿಮಿಶ ನಿಮಿಶಕ್ಕೂ ಎಂಜಲು, ಮುಸ್ರೆ ಅದ್ಕೊಂಡು, ಬರೀ ಊಟಕ್ಕೋಸ್ಕ್ರ ಬದ್ಕಿರೋರಂತೆ, ಒಂದ್ ಚಾನ್ಸ್ ಸಿಕ್ರೆ ಸಾಕು ಪಪ್ಪು, ಮಜ್ಜಿಗ್, ಪುಲ್ಸು ಮಾಡ್ಕೊಂಡು (ಮಾಡ್ಕೊಂಡು ಅಲ್ಲ) ಅವರ ಹೆಂಗ್ಸರ ಕೈಲಿ ಮಾಡಿಸ್ಕೊಂಡು, ತಿಂತಾ ತ್ಚ್ ತ್ಚ್ ತ್ಚ್ ದೇಸ ಎಲ್ಲಾ ಕೆಟ್ಟೋಗಿದೆ ಅಂತ ತೇಗಿನ ಜೊತೆಗೆ ಮಾತನಾಡೋರನ್ನು ನಾನು ನನ್ನವ್ರನ್ನಾಗಿಸ್ಕೊಳಕ್ಕೆ ಆಗಲ್ಲ.

ಅವರ ದೇವ್ರನ್ನ ಅವ್ರು ರಕ್ಶಣೆ ಮಾಡ್ಲಿ, ನಾನು ನನ್ ಬಂದುಗಳಾದ ಹಿಜ್ರಾ, ಕೋಥಿ, ಟ್ರಾನ್ಸ್ ಮ್ಯಾನ್, ಟ್ರಾನ್ಸ್ ವುಮೆನ್, ಗೇ, ಲೆಸ್ಬಿಯನ್, ತುಳಿತಕ್ಕೆ ಒಳಗಾದವರು, ಸೆಕ್ಸ್ ವರ್ಕರ್ಸ್ ಜೊತೆ ನನ್ ಜೀವ್ನ ಹಂಚ್ಕೊಂಡಿರ್ತೀನಿ. ಇದೆಲ್ಲಾ ಬರೀತಿರೋದು ಯಾಕೆ ಅಂದ್ರೆ, ಮೊನ್ನೆಯಶ್ಟೇ ಕುಟುಂಬದೋರು ನಾನೆಶ್ಟು ಹಾಳಾಗಿ, ಎಂತಾ ಪಾಪಿಯಾಗಿ, ಬದುಕು ವೇಸ್ಟ್ ಮಾಡ್ಕೊಂಡಿದ್ದೀನಿ ಅಂತ ಎದುರಿಗೆ ಹೇಳದೆ ನನ್ನ ಕಿವಿಗೆ ಬೀಳ್ಸಿದ್ರು. ನನಗನ್ನಿಸಿತು, ಅವರಿಗೆ ಮಾತ್ರವಲ್ಲ, ಅವರಂತಿರೋ ಸಾವಿರಾರು ಜನಕ್ಕೆ ನನ್ನ ಉತ್ತರ ಹೇಳ್ಬೇಕು, ದೇವರ ಕ್ರುಪೆ ಇಲ್ದೇನೂ ನನ್ನಂತ ಸಾವಿರಾರು ಪಾಪಿಗಳು ಸ್ವಸ್ತವಾಗಿ, ಸಮಾದಾನದಿಂದ ನಮಗೆ ಬೇಕಾದಂಗೆ ಬದುಕಬಹುದು ಅಂತ ತಿಳಿಸ್ಬೇಕು ಅನ್ನಿಸ್ತು.

'ಎಲ್ಲರ ಕನ್ನಡ' ಎಂದು ಹೇಳಿಕೊಳ್ಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
0 ವೋಟ್