ಹೆಣ್ಣೆಂದರೆ... | ಆ್ಯಕ್ಷನ್-ಕಟ್ ಹೇಳುವ ಕನಸು ಮತ್ತು ತೃಪ್ತಿ

Thrupti Abhikar 1.jpg

ಕಡಿಮೆಯಲ್ಲ ಅನ್ನಿಸುವಷ್ಟು ಮಾತು. ಸಿನಿಮಾ ಬಗ್ಗೆ ವಿಪರೀತ ಪ್ರೀತಿ, ಹುಚ್ಚು, ವ್ಯಾಮೋಹ. ಏನೇ ಸವಾಲು ಎದುರಾದರೂ ಅಂದುಕೊಂಡಿದ್ದನ್ನು ಸಾಧಿಸುವ ಛಲ. ಈ ಮೂರೂ ಗುಣ ಸೇರಿಸಿದರೆ 'ತೃಪ್ತಿ ಸುಂದರ್ ಅಭಿಕರ್.' ಇವರು ಕ್ಯಾಮೆರಾ ಹಿಂದೆ ಕೂರುವ ಕನಸು ಕಾಣುತ್ತಿದ್ದಾಗಿಂದ ಹಿಡಿದು, ಆ್ಯಕ್ಷನ್-ಕಟ್ ಹೇಳಿದವರೆಗಿನ ಸಂಕ್ಷಿಪ್ತ ಮಾತು-ಕತೆ ಇಲ್ಲುಂಟು

"ಬಣ್ಣದ ಪ್ರಪಂಚದಲ್ಲಿ ಗೆದ್ದು ಬೀಗುವಾಗ, ಸೋತು ಸುಣ್ಣಾದಾಗ ಮತ್ತೆ ಕೆಲಸ ಮಾಡಬೇಕು ಎಂಬ ಹುಕಿ ಹುಟ್ಟಲು ಸಾಧ್ಯವಾಗುವುದು, ಸಿನಿಮಾ ಮೇಲಿನ ಮೋಹ ಮತ್ತು ಬಣ್ಣದ ಲೋಕದ ಮೇಲಿನ ಅದಮ್ಯ ಹುಚ್ಚುತನದಿಂದ ಮಾತ್ರ," ಎಂಬುದು ತೃಪ್ತಿ ಸುಂದರ್ ಅಭಿಕರ್ ಮಾತು. ಹುಟ್ಟಿದ್ದು ಮಂಗಳೂರಿನಲ್ಲಿ. ಮಾವನ ಹೋಂ ಥಿಯೇಟರಿನಲ್ಲಿ ಸಿನಿಮಾ ನೋಡುತ್ತ ಬೆಳೆದಿದ್ದು ಸುಬ್ರಹ್ಮಣ್ಯದಲ್ಲಿ.

ಟಿ ಎನ್ ಸೀತಾರಾಂ, ಸುನೀಲ್ ಕುಮಾರ್ ದೇಸಾಯಿ, ಗಿರಿರಾಜ್ ಬಿ ಎಂ ಮೊದಲಾದವರ ಧಾರಾವಾಹಿ ಮತ್ತು ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿ, ಸ್ರಿಪ್ಟ್ ರೈಟರ್, ಅಸಿಸ್ಟೆಂಟ್ ಕ್ಯಾಮೆರಾ ವುಮನ್. ಕಿರುತೆರೆ ಮತ್ತು ಹಿರಿತೆರೆಯ ಜೊತೆ 11 ವರ್ಷಗಳ ಸುದೀರ್ಘ ನಂಟು. ಕೈಯಲ್ಲಿ ಕಾಸು ಕಾಣದಾದಾಗ ಸಿನಿಮಾದಿಂದ ಕೆಲ ವರ್ಷ ದೂರವಿದ್ದದ್ದೂ ಹೌದು. ಬಣ್ಣದ ಲೋಕದ ಸೆಳೆತ ಬಿಡದಾದಾಗ ಡಾಕ್ಯುಮೆಂಟರಿಗಳನ್ನು ಮಾಡಿದರು. ಈಗ ತಮ್ಮದೇ ಕನಸಿನ 'ನಲ್ಕೆ' ಸಿನಿಮಾ ಮೂಲಕ ನಮ್ಮ ಮುಂದೆ ಬಂದಿದ್ದಾರೆ. ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಎಲ್ಲವನ್ನೂ ತಮ್ಮ ಬ್ಯಾನರ್‌ನಿಂದಲೇ ಮಾಡಿದ ಗಟ್ಟಿಗಿತ್ತಿ. ನಿರ್ಮಾಪಕಿ ಆಗುವ ಕನಸೇನೂ ಇದ್ದಿಲ್ಲ. ಆದರೆ, ಕೆಲವು ನಿರ್ಮಾಪಕರು ಕಾಫಿಯಲ್ಲೇ ಚರ್ಚೆ ಮುಗಿಸಿ, ಆಷಾಢ, ಶ್ರಾವಣ, ಗೌರಿ ಹಬ್ಬ ಎಂದು ಮುಹೂರ್ತ ಮುಂದೂಡಿದಾಗ, ಇದು ಆಗದು ಎಂದು ತಾನೇ ನಿರ್ಮಾಣ ಸಂಸ್ಥೆ ತೆರೆದ ಕನಸುಗಾರ್ತಿ ತೃಪ್ತಿ.

Image
TRUPTHI ABHIKAR 2

ಬಾಲ್ಯದಿಂದ ಸಿನಿಮಾ, ಯಕ್ಷಗಾನ ಸೆಳೆತ. ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್ ಓದುವಾಗ ನಾಟಕದ ಪ್ರೀತಿ. ಇತಿಹಾಸ ಮತ್ತು ಪ್ರಾಕ್ತನ ಶಾಸ್ತದಲ್ಲಿ ಸ್ನಾತಕೋತ್ತರ ಪದವಿ ಮಾಡುವಾಗಲೂ ಬಣ್ಣದ ಲೋಕದ ಕನಸು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎರಡು ವರ್ಷದ ಸಿನಿಮಾ ಕೋರ್ಸ್ ಮುಗಿಸಿ, ಸಿನೆಮಾ ರಂಗಕ್ಕೆ ಕಾಲಿಡಲು ಸಜ್ಜು. ಚಿಕ್ಕಂದಿನಲ್ಲಿ ಮಾಲಾಶ್ರೀಯವರ ಬೋಲ್ಡ್ ಅಭಿನಯ, ಯಾರಿಗೂ ತಲೆಬಾಗದ ಪಾತ್ರಗಳನ್ನು ನೋಡುತ್ತ, ತಾನೂ ಅಷ್ಟೇ ಗಟ್ಟಿಯಾಗಬೇಕು ಎಂದು ತನ್ನನ್ನು ಸಿನೆಮಾ ರಂಗಕ್ಕೆ ತಯಾರು ಮಾಡಿಕೊಂಡರು. ಸಿನಿಮಾ ನಿರ್ದೇಶನದ ಕೋರ್ಸ್ ಕಲಿಯುವಾಗ ತಾನೊಬ್ಬಳೇ ಹುಡುಗಿ ಹುಡುಗರೊಂದಿಗೆ ಹೇಗೆ ಕಲಿಯಲಿ ಎಂದು ಹಿಂದೇಟು ಹಾಕದೆ, ಕ್ಯಾಮೆರಾ, ಸ್ಕ್ರಿಪ್ಟ್, ಸ್ಕ್ರೀನ್ ಪ್ಲೇ ಕಲಿತದ್ದಾಯಿತು. ಜೊತೆಗೆ, ಸಿನಿಮಾ ರಂಗದಲ್ಲಿ ಕೆಲಸ ಮಾಡಲು ಬೇಕಾದ ಬೋಲ್ಡ್ ವ್ಯಕ್ತಿತ್ವಕ್ಕೆ ಅಲ್ಲಿಂದಲೇ ತಳಪಾಯವೂ ಸಿಕ್ಕಿತು. "ನನ್ನ ಜೊತೆ ಕಲಿಯುತ್ತಿದ್ದ ಹುಡುಗರಾಗಲೀ, ಕಲಿಸುವ ಪ್ರಾಧ್ಯಾಪಕರಾಗಲೀ, ನಾನೂ ಅವರಲ್ಲಿ ಒಬ್ಬಳು ಎಂದು ನೋಡಿದ್ದೇ ನನ್ನ ಧೈರ್ಯ ಹೆಚ್ಚಲು ಕಾರಣ," ಎನ್ನುತ್ತಾರೆ ತೃಪ್ತಿ.

ಚಿತ್ರರಂಗದಲ್ಲಿ ಕಂಡು, ಕೇಳಿದ ಅನುಭಗಳನ್ನು ಬಿಚ್ಚಿಡುತ್ತ...

"ಸೆಟ್‌ನಲ್ಲಿ ಹುಡುಗಿಯೊಬ್ಬಳು ಓಡಾಡಿಕೊಂಡಿದ್ದರೆ ಅಲ್ಲಿ ಕೆಲಸ ಮಾಡುವ ಹುಡುಗರೂ ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಹುಡುಗಿಯರನ್ನು ಕೆಲಸಕ್ಕೆ ತೆಗೆದುಕೊಳ್ಳುವ ನಿರ್ದೇಶಕರು ಇದ್ದಾರೆ. ಹಿರಿಯ ನಿರ್ದೇಶಕರೊಬ್ಬರ ಬಳಿ ಕೆಲಸ ಕೇಳಿದಾಗ, ನನ್ನ ಕೌಶಲ್ಯದ ಬಗ್ಗೆ ಮಾತನಾಡುವುದು ಬಿಟ್ಟು, ಸಿನಿಮಾ ಕಮಿಟ್‌ಮೆಂಟ್ ಅಂದ್ರೆ ಗೊತ್ತಾ ನಿಮಗೆ? ಇಂಡಸ್ಟ್ರಿ ಎಂದರೆ ಗೊತ್ತಾ ನಿನಗೆ? ಸಿನಿಮಾ ಕೆಲಸದ ಮೇಲೆ ಹೊರಗಡೆ ಹೋಗ್ಬೇಕು ಅಂತ ಗೊತ್ತಲ್ವಾ? ಎಂದು ಬೇರೆ ಭಾವದಲ್ಲಿ ಕೇಳಿದ್ದಿದೆ. ಇವರು ತಮ್ಮ ಕೊಳಕುತನವನ್ನು ಮರೆಮಾಚಲು ಇಂಡಸ್ಟ್ರಿ ಇರುವುದೇ ಹೀಗೆ ಎಂಬ ಕತೆ ಕಟ್ಟುತ್ತಿದ್ದಾರೆ ಎಂದು ಈಗಾಗಲೇ ಹಲವೆಡೆ ಕೆಲಸ ಮಾಡಿದ ನನಗೆ ಅನಿಸಿತ್ತು," ಎಂದು ಹೆಣ್ಣಿನ ಜಾಗೃತ ಮನಸ್ಥಿತಿಯನ್ನು ಬಿಚ್ಚಿಟ್ಟರು.

Image
TRUPTHI ABHIKAR 3

"ನನಗೆ ಹಠ ಇದ್ದರೆ, ಪ್ರತಿಭೆ ಇದ್ದರೆ ನನ್ನ ಕನಸುಗಳು ಈಡೇರಿಯೇ ಈಡೇರುತ್ತವೆ. ಅದಕ್ಕಾಗಿ ನನ್ನ ಪ್ರತಿಭೆ ಪಕ್ಕಕ್ಕಿಟ್ಟು ಯಾವುದೇ ರಾಜಿ ಮಾಡಿಕೊಳ್ಳಬೇಕಿಲ್ಲ ಎಂದು ನಂಬಿದವಳು ನಾನು. ಇದನ್ನೇ ಎಲ್ಲ ಹುಡುಗಿಯರಿಗೂ ಹೇಳ್ತೇನೆ," ಎಂಬುದು ಅವರ ಖಡಕ್ ಮಾತು. ಹೀಗೆ, ವೃತ್ತಿಬದುಕಿನ ಸವಾಲುಗಳ ನಡುವೆಯೂ, ಬದುಕಿನ ಘಟ್ಟಗಳನ್ನು ದಾಟುತ್ತ, ಒಂದು ಹೆಣ್ಣುಮಗುವಿನ ಅಮ್ಮನಾಗಿ ಮನೆಯನ್ನೂ ಸಂಭಾಳಿಸುತ್ತಿರುವುದು ಅವರ ಹೆಚ್ಚುಗಾರಿಕೆ.  

ಹುಡುಗಿಯರನ್ನು ಅಸಿಸ್ಟೆಂಟ್ ಆಗಿ ತೆಗೆದುಕೊಂಡಾಗ, ಅವರಿಗೇ ಅಂತಲೇ ಪ್ರತ್ಯೇಕ ಒಂದು ರೂಮ್ ಕೊಡಬೇಕಾಗತ್ತೆ. ಸಿನಿಮಾದವರಿಗೆ ಅದೊಂದು ಕೊಠಡಿಯ ಖರ್ಚು ದೊಡ್ಡದಾಗಿ ಕಾಣೋದು ತೀರಾ ವಿಚಿತ್ರ. ಈ ಕಾರಣಕ್ಕೇ ಹುಡುಗಿಯರನ್ನು ತಿರಸ್ಕರಿಸಲಾಗುತ್ತೆ. ಲೊಕೇಷನ್ ನೋಡಲು ಹೋಗುವಾಗಲೂ ಇದೇ ಸಮಸ್ಯೆ. 'ನಾವು ಎಲ್ಲೇಲ್ಲೊ ಮನ್ಕೊತಿವಿ, ಇನ್ನೇಲ್ಲೋ ತಿಂತೀವಿ, ಆದರೆ ಹುಡುಗಿಯರಿಗೆ ಹಾಗಾಗಲ್ಲ. ಆದ್ದರಿಂದ ಬೇಡ' ಅಂತ ಬಿಟ್ಟುಬಿಡ್ತಾರೆ. ಇಷ್ಟೇ ಅಲ್ಲದೆ, ಹಣಕಾಸಿನ ವಿಚಾರದಲ್ಲೂ ಇಂಥದ್ದೇ ತರತಮ. ಒಮ್ಮೆ 57 ದಿನ ಕೆಲಸ ಮಾಡಿದ್ದಕ್ಕೆ ನನಗೆ ಎರಡೂವರೆ ಸಾವಿರ ರುಪಾಯಿ ಸಿಕ್ಕಿತ್ತಷ್ಟೆ. ಆಗ ಹಿಂದೆ ಸರಿಯುವುದೋ ಮುಂದೆ ಹೋಗುವುದೋ ಎಂಬ ಗೊಂದಲ ಆಗುವುದು ಸಹಜ," ಎಂಬುದು ಅನುಭವದ ಮಾತು.

Image
TRUPTHI ABHIKAR 4

"ಸಿನಿಮಾ ಕೆಲಸ ಕಲಿಯಬೇಕು, ಕಲಿಯುವ ಆಸೆ ಇದೆ ಎಂದರೆ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಜೀವನವಿಡೀ ಕಲಿಸೋದಕ್ಕೂ ಇಲ್ಲಿ ತಯಾರಿದ್ದಾರೆ. ಆದರೆ, ಸಂಬಳ ಮಾತ್ರ ಅರ್ಧ ಹೊಟ್ಟೆಗಾಗುವಷ್ಟು. ಸಿನಿಮಾ ರಂಗದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವಷ್ಟು ಸಂಬಳ ಪಡೆಯುವುದು ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ದೊಡ್ಡ ಸವಾಲು. ಹೊಟ್ಟೆ ತುಂಬುವಷ್ಟು ಸಂಬಳ ಕೊಡುವವರು ಇದ್ದಾರಾದರೂ ಸಂಖ್ಯೆ ಕಡಿಮೆ. ಮಾತನಾಡಿದ್ದನ್ನು ಮೀರಿ, ಸಂಜೆಗೆ ಚೌಕಾಸಿ ಮಾಡಿ, ಆಗ ಹೇಳಿದ್ದರಲ್ಲೂ ಹಣ ಮುರಿದುಕೊಂಡು ಕಳಿಸಿದ ಸಾಕಷ್ಟು ಸಂದರ್ಭಗಳನ್ನು ನಾನು ಕಂಡಿದ್ದೇನೆ," ಎನ್ನುತ್ತಾರವರು.

"ಮದುವೆ ಆಗದ ಹುಡುಗಿಯರಿಗೆ ಒಂದು ರೀತಿಯ ಸಮಸ್ಯೆಗಳಾದರೆ, ಮದುವೆ ಆದವರಿಗೆ ಇನ್ನೊಂದು ರೀತಿಯ ಸಮಸ್ಯೆ. ತಾನು ಎರಡೂ ಹಂತಗಳನ್ನು ನೋಡುತ್ತಿದ್ದೇನೆ. ಸಾಧುಕೋಕಿಲ ಅವರ ಸ್ಟುಡಿಯೋದಲ್ಲಿ 'ನಲ್ಕೆ' ಸಿನೆಮಾಗೆ ಡಬ್ಬಿಂಗ್ ನಡೆಯುತ್ತಿರುವಾಗ, ಜೊತೆಜೊತೆಗೇ ವಾರ್ತಾ ಇಲಾಖೆಗೆ ಡಾಕ್ಯುಮೆಂಟರಿ ಕೂಡ ಮಾಡುತ್ತಿದ್ದೆ. ಅದೊಂದು ದಿನ ಮಗಳಿಗೆ ತೀರಾ ಜ್ವರ. ಆದರೆ, ಡಬ್ಬಿಂಗ್ ಬಿಟ್ಟು ಬರಲಾಗದ ಅನಿವಾರ್ಯತೆ. ಅಂದು ನಾನು ಭಾವನಾತ್ಮಕವಾಗಿ ತುಂಬಾ ಸೋತುಹೋದ ದಿನ. ಒತ್ತಡದಲ್ಲಿ ಬದುಕುವುದು ಈಗ ರೂಢಿಯಾಗಿದೆ. ಒತ್ತಡವೇ ಸಹಜ ಎಂಬಷ್ಟು ಒಗ್ಗಿಹೋಗಿದೆ," ಎಂದು ಮುಗುಳ್ನಗುತ್ತಾರೆ.

ತಮ್ಮದೇ ಸಿನೆಮಾದ ಬಗ್ಗೆ ಹೇಳುತ್ತ...

Image
TRUPTHI ABHIKAR 5

"ಹೆಣ್ಣುಮಕ್ಕಳೇನು, ಬರೀ ಆ್ಯಕ್ಷನ್-ಕಟ್ ಅಷ್ಟೇ ಹೇಳ್ತಾರೆ, ಟೆಕ್ನಿಕಲಿ ಏನೂ ಗೊತ್ತಿರಲ್ಲ - ಮುಂತಾದ ಕಮೆಂಟ್‌ಗಳು ಬರುವ ಕಾರಣಕ್ಕೆ ಎಲ್ಲ ವಿಭಾಗದಲ್ಲೂ ನಾನು ಕೆಲಸ ಕಲಿತೆ. ಗಂಡ ಸಿನಿಮಾ ರಂಗದಲ್ಲಿ ಇರುವುದರಿಂದ, ಅವರ ನೆರಳಿನಲ್ಲಿ ಆಸರೆ ಕಂಡುಕೊಂಡವಳು ಎಂದು ಕೇಳಿಸಿಕೊಳ್ಳಲು ಇಷ್ಟವಿಲ್ಲದ ಕಾರಣ, ಅವರ ಹೆಸರನ್ನು ನಾನೆಲ್ಲಿಯೂ ಬಳಸುವುದಿಲ್ಲ. ಹುಡುಗಿಯರ ಯಶಸ್ಸಿನ ಮುಂದೆ ಒಂದು ಗಂಡನ್ನು ನಿಲ್ಲಿಸಿಬಿಡುವ ಚಾಳಿ ಸಮಾಜಕ್ಕಿದೆ. ಅದರಿಂದ ದೂರ ಉಳಿಯಬೇಕು..."

ಇದನ್ನು ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಪದವಿ ಪಡೆದ ಭಾರತದ ಮೊದಲ ದಲಿತ ಮಹಿಳೆ ದಾಕ್ಷಾಯಿಣಿ ವೇಲಾಯುಧನ್

"ನನ್ನದು ಚೊಚ್ಚಲ ನಿರ್ದೇಶನ ಎಂಬ ಯೋಚನೆ ಹಿರಿಯ ಕಲಾವಿದರಿಗೆ ಇದ್ದೇ ಇತ್ತು. ಇವಳೇನು ಮಾಡಬಲ್ಲಳು ಎಂಬ ಗೊಂದಲ ಕೂಡ. ಆಮೇಲೆ ಅವರೇ ಬೆನ್ನು ತಟ್ಟಿದ್ದಾರೆ. ಅದಕ್ಕಿಂತ ಖುಷಿಯೇನಿದೆ? ಸಿನಿಮಾ ಮಾಡುವಾಗ ಆರ್ಥಿಕ ವಿಚಾರಗಳ ಬಗ್ಗೆ ಬಹಳ ಗಮನ ಕೊಡಬೇಕಾಗುತ್ತೆ. ಸಾಲ ಮಾಡಿ ಸಿನಿಮಾ ಮಾಡುವುದಕ್ಕೆ ನನಗೆ ಇಷ್ಟವಿಲ್ಲದ ಕಾರಣ, ನಿಧಾನವಾಗಿಯೇ ಶುರು ಮಾಡಿದ್ದು. ಸಿನಿಮಾ ರಂಗದಿಂದ ಬದುಕು ಹಾಳುಮಾಡಿಕೊಂಡೆ ಎಂದು ಚಿತ್ರರಂಗಕ್ಕೆ ಪಟ್ಟ ಕಟ್ಟಲು ಇಷ್ಟವಿಲ್ಲ..."

"ಅಸಿಸ್ಟೆಂಟ್‌ಗಳು ಅಂದ್ರೆ ಊಟಕ್ಕೆ ಬರೋರು, ಖಾಲಿ ಹರಟೆಗೆ ಬರೋದು ಎಂಬ ರೀತಿಯಲ್ಲಿ ಕೆಲವರು ಸಿನಿಮಾ ರಂಗದಲ್ಲಿ ನೋಡ್ತಾರೆ. ಬೇರೆ-ಬೇರೆಯವರಿಗೆ ಬೇರೆ-ಬೇರೆ ರೀತಿ ಉಪಚಾರ ನಡೆಯುತ್ತದೆ. ಇದನ್ನೆಲ್ಲ ನೋಡಿದ ಮೇಲೆ, ನನ್ನ ಸೆಟ್‌ನಲ್ಲಾದರೂ ನಾನು ಬದಲಾವಣೆ ಮಾಡಬೇಕು ಎಂಬ ಆಸೆ ಇತ್ತು. ಹಾಗಾಗಿ, ಮುಖ್ಯ ಪಾತ್ರದವರಿಂದ ಹಿಡಿದು ಯುನಿಟ್‌ನ ಎಲ್ಲರಿಗೂ ಒಂದೇ ಬಗೆಯ ಊಟ, ಉಪಚಾರ ಮಾಡಿದೆ," ಎಂದು ಖುಷಿಯಾದರು.

Image
TRUPTHI ABHIKAR 6

"ಹುಡುಗಿಯರು ಸಿನಿಮಾ ರಂಗಕ್ಕೆ ಬಂದು ಎಲ್ಲೂ ಸಲ್ಲದವರಾಗಬಾರದು ಎಂಬುದು ನನ್ನ ಕಿವಿಮಾತು. ಫೀಮೇಲ್ ಅಸಿಸ್ಟೆಂಟ್ ಅಸೊಸೀಯೆಟ್‌ಗಳು ತುಂಬಾ ಕಡಿಮೆ. ಯಾಕಂದ್ರೆ, ಹುಡುಗರ ರೀತಿ ಬಯ್ಯಿಸ್ಕೊಂಡು, ಎಲ್ಲವನ್ನೂ ಸಹಿಸಿಕೊಂಡು ಇರೋದಕ್ಕೆ ಆಗದೆ, ಕೆಲವು ಸಿನಿಮಾದ ನಂತರ ಬಿಟ್ಟು ಹೋಗಿಬಿಡ್ತಾರೆ. ಹಣಕಾಸಿನ ಸಮಸ್ಯೆಯಂತೂ ಇದ್ದೇ ಇರುತ್ತೆ. ಆದರೆ, ನಮ್ಮತನ ಬಿಟ್ಟುಕೊಡದೆ ಕನಸುಗಳನ್ನು ಜೀವಂತವಾಗಿಟ್ಟುಕೊಂಡು ನೆಲೆಯೂರಬೇಕು," ಎಂಬುದು ಅವರ ಸಲಹೆ.

ರಾತ್ರಿ ಯಕ್ಷಗಾನ ನೋಡಿ ಚಕ್ಕರ್ ಹೊಡಿಯದೆ ಬೆಳಿಗ್ಗೆ ಶಾಲೆಗೆ ಓಡುತ್ತ, ಅಲ್ಲೂ ಇಲ್ಲೂ ನಿಭಾಯಿಸುತ್ತಿದ್ದ ತೃಪ್ತಿ ಅವರಿಗೆ, ಈಗ ಸಿನೆಮಾ ಮತ್ತು ಮನೆ ಎರಡನ್ನೂ ನಿಭಾಯಿಸುವ ಕೌಶಲ್ಯ ಬಂದಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಅವರ 'ನಲ್ಕೆ' ಸಿನಿಮಾ ಯಶಸ್ಸು ಕಾಣಲಿ. ಅವರ ನಿರ್ಮಾಣ ಸಂಸ್ಥೆಯಿಂದ ಉತ್ತಮ ಸಿನೆಮಾಗಳು ಬರಲಿ ಎಂಬುದು ಎಲ್ಲರ ಆಶಯ.

ನಿಮಗೆ ಏನು ಅನ್ನಿಸ್ತು?
19 ವೋಟ್