ಅನುದಿನ ಚರಿತೆ | ಪಠ್ಯಪುಸ್ತಕ ಎನ್ನುವುದು ರಾಜಕೀಯ ಪಕ್ಷದ ಪ್ರಣಾಳಿಕೆಯೇ?

Ambedkar Gandhi N

ಚರಿತ್ರೆ, ಸಂಸ್ಕೃತಿ, ರಾಜಕಾರಣ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ನ್ಯಾಯ-ನೀತಿ ಮೊದಲಾದ ವಿದ್ಯಮಾನಗಳ ಮೂಲಕ, ಬದುಕಿನ ಏಳಿಗೆಯನ್ನು ಸಮಚಿತ್ತದಿಂದ ಅರ್ಥೈಸುವ ಪ್ರಾಯೋಗಿಕ ಚಟುವಟಿಕೆಗಳು ಪಠ್ಯಪುಸ್ತಕಗಳ ಮೂಲಕ ನೆರವೇರುತ್ತವೆ. ಆದರೆ, ಈಗ ನಡೆಯುತ್ತಿರುವುದೇನು? ರಾಜಕೀಯ ಪಕ್ಷಗಳ ದೃಷ್ಟಿಯಲ್ಲಿ ಪಠ್ಯಪುಸ್ತಕ ಎಂದರೇನು?

ಶಿಕ್ಷಣದ ಆಶಯಗಳನ್ನು ಈಡೇರಿಸುವಲ್ಲಿ ಪಠ್ಯಪುಸ್ತಕದ ಪಾತ್ರ ಮಹತ್ವದ್ದು. ಶಿಕ್ಷಣದ ಗುರಿ ಮತ್ತು ದಾರಿಯನ್ನು ಸಾಧಿಸುವಲ್ಲಿ ಅತ್ಯಂತ ಪ್ರಮುಖ ಮಾನದಂಡವಾಗಿ ಒದಗಿ ಬರಬೇಕಿದ್ದ ಪಠ್ಯಪುಸ್ತಕ, ಇವತ್ತು ಪಕ್ಷ ರಾಜಕಾರಣದ ಅಸ್ತ್ರವಾಗಿದೆ. ತಮ್ಮ ರಾಜಕೀಯ ಪಕ್ಷದ ಒಳ ಅಜೆಂಡಾಗಳನ್ನು ಚಲಾವಣೆಗೆ ತರುವಲ್ಲಿ ಈ ರಾಜಕೀಯ ಪಕ್ಷಗಳು ಎಂತಹದೇ ಸಮೂಹ ವಿರೋಧಿ ನಿಲುವುಗಳನ್ನು ತಾಳುವುದಕ್ಕೆ ಹಿಂಜರಿವುದಿಲ್ಲ. ಈ ನಿಲುವುಗಳು ಈಗಾಗಲೇ ರುಜುವಾತಾಗಿವೆ.

ಬಹುಸಾಂಸ್ಕೃತಿಕ ಮತ್ತು ಬಹುಭಾಷಿಕ ಸಮೂಹಗಳಿಂದ ಕೂಡಿರುವಂತಹ ಭಾರತದ ಸನ್ನಿವೇಶದಲ್ಲಿ, ಸಮಾಜ ಮತ್ತು ಶಿಕ್ಷಣದ ನಡುವಣ ಅನುಸಂಧಾನದ ಮಾದರಿಗಳು ಹೇಗಿರಬೇಕು ಅನ್ನುವುದು, ಯಾವುದೇ ಪಕ್ಷದ ನಿಲುವುಗಳಿಗೆ ಮಾತ್ರ ಸಂಬಂಧಿಸಿದ ವಿದ್ಯಮಾನವಲ್ಲ. ಸಮಾಜದ ವ್ಯಾಪ್ತಿಗೂ ಮತ್ತು ರಾಜಕೀಯ ಪಕ್ಷದ ವ್ಯಾಪ್ತಿಗೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಇಡೀ ದೇಶದ ಎಲ್ಲ ಸಮೂಹಗಳ ಏಳಿಗೆಯನ್ನು ಬಯಸುವ ರಾಜಕೀಯ ಮುತ್ಸದ್ದಿಗಳು ನಮ್ಮ ಯಾವ ರಾಜಕೀಯ ಪಕ್ಷಗಳಲ್ಲಿಯೂ ಇವತ್ತು ಇಲ್ಲ. ಕೇವಲ ಅಧಿಕಾರ ರಾಜಕಾರಣದ ಬೆನ್ನು ಹತ್ತಿದ ಮತ್ತು ನಿರಂತರವಾಗಿ ಅಧಿಕಾರದಲ್ಲಿಯೇ ಇರಬೇಕು ಎನ್ನುವ ಹಪಾಹಪಿತನ ಈ ರಾಜಕಾರಣಿಗಳಿಗೆ ಅಂಟಿಕೊಂಡಿದೆ. ಇವರ ಮೂಲಕ ಹೊರಹೊಮ್ಮುವ ಶೈಕ್ಷಣಿಕ ಆಶಯಗಳು ಆಯಾ ರಾಜಕೀಯ ಪಕ್ಷಗಳ ಹುನ್ನಾರಕ್ಕೆ ತುತ್ತಾಗುತ್ತವೆ. ಇಂತಹ ಬಲಿಪಶುತನಕ್ಕೆ ಈಡಾದ ನಮ್ಮ ಸಮೂಹಗಳು ಜಾತೀಯತೆ, ಸ್ವಜನ ಪಕ್ಷಪಾತ, ಧರ್ಮಾಂಧತೆ ಹಾಗೂ ಎಲ್ಲ ಬಗೆಯ ಅಸಮಾನತೆಗಳನ್ನು ಯಥಾವತ್ತಾಗಿ ಮುಂದುವರಿಸುವ ಗೀಳನ್ನೇ ಹೊಂದಿವೆ. ಇವತ್ತು ನಾವು ನೋಡುತ್ತಿರುವ ಪ್ರತಿಯೊಂದು ರಾಜಕೀಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹುನ್ನಾರಗಳು ಇಂತಹ ಗೀಳಿನ ಪರಿಣಾಮವೇ ಆಗಿರುತ್ತವೆ.

ಈ ಲೇಖನ ಓದಿದ್ದೀರಾ?: ತೀವ್ರಗೊಂಡ ಪಠ್ಯ ಪುಸ್ತಕ ವಿವಾದ | ಇಂತಹ ಪಠ್ಯದಲ್ಲಿ ನನ್ನ ಬರಹ ಬೇಡವೆಂದ ದೇವನೂರ ಮಹಾದೇವ

ನಮ್ಮ ದೇಶಕ್ಕೆ ಸ್ವತಂತ್ರವನ್ನು ಪಡೆಯುವ ಸನ್ನಿವೇಶದಲ್ಲಿ ಗಾಂಧಿ, ಅಂಬೇಡ್ಕರ್, ವಿವೇಕಾನಂದ, ಟ್ಯಾಗೋರ್ ಮೊದಲಾದವರು ಪರಿಕಲ್ಪಿಸಿದ ಶಿಕ್ಷಣದ ಸ್ವರೂಪವನ್ನು ಮರುಪರಿಶೀಲಿಸಿ ನೋಡಿದರೆ, ಶಿಕ್ಷಣದ ಮಹತ್ವ ಮತ್ತು ಇಂತಹ ಮಹತ್ವವನ್ನು ಎತ್ತಿಹಿಡಿಯಲು ರೂಪಿಸಿಕೊಂಡ ಪಠ್ಯಪುಸ್ತಕದಂತಹ ಪರಿಕರಗಳ ಸ್ವರೂಪ ನಮಗೆ ನಿಚ್ಚಳವಾಗುತ್ತದೆ. ಸಮೂಹ ಮತ್ತು ವ್ಯಕ್ತಿಗಳ ನಡುವಣ ಸಂಬಂಧವನ್ನು ಅರ್ಥೈಸುವ ಬಗೆಯನ್ನು ಅತ್ಯಂತ ವೈಚಾರಿಕ ನೆಲೆಯಿಂದ ಈ ಮಹನೀಯರು ನಿರೂಪಿಸಿರುವುದನ್ನು ಕಾಣುತ್ತೇವೆ. ಹಾಗಾಗಿಯೇ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅನುಷ್ಠಾನಗೊಳಿಸಲು ಮತ್ತು ಈ ಮೌಲ್ಯಗಳನ್ನು ಪಡೆಯುವುದಕ್ಕೆ ಪ್ರೇರೇಪಿಸುವ ಸಂಘಟನಾತ್ಮಕ ಹೋರಾಟಕ್ಕೂ ಶಿಕ್ಷಣವೇ ಮೂಲಮಂತ್ರ ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು. ಅದಕ್ಕಾಗಿಯೇ 'ಶಿಕ್ಷಣ, ಸಂಘಟನೆ ಮತ್ತು ಹೋರಾಟ' ಎನ್ನುವ ತಾತ್ವಿಕ ಸೂತ್ರಗಳನ್ನು ಇವರು ರೂಪಿಸಿದರು. ಈ ಸೂತ್ರಗಳು ಪ್ರಜಾಸತ್ತಾತ್ಮಕವಾಗಿ ನಮ್ಮ ಹಕ್ಕು, ಅವಕಾಶ ಹಾಗೂ ಸಮಾನತೆಯನ್ನು ಒಗ್ಗೂಡಿಸುವ ಬಗೆ ಎನ್ನುವುದನ್ನು ನಾವು ಅರಿಯಬೇಕಿದೆ. ನಮ್ಮ ಪಠ್ಯಪುಸ್ತಕಗಳ ಮೂಲಕ ಇಂತಹದೇ ಅರಿವಿನ ಕ್ರಾಂತಿಯನ್ನು ನೆಲೆಗೊಳಿಸುವುದಾಗಿದೆ.

ಶಿಕ್ಷಣದ ಮೂಲಕ ಸಂಘಟಿತರಾಗುವುದು ಮತ್ತು ಆ ಮೂಲಕ ನಮ್ಮ ಬದುಕಿನ ಅವಕಾಶ, ಹಕ್ಕು ಹಾಗೂ ಸಂಪನ್ಮೂಲಗಳ ಹಂಚಿಕೆಗಾಗಿ ಹೋರಾಡುವುದೆಂದರೆ, ಇಡೀ ಸಮೂಹಗಳ ಏಳಿಗೆಯನ್ನು ಬಯಸುವುದಾಗಿದೆ. ಭಗತ್ ಸಿಂಗ್ ಮತ್ತು ನಾರಾಯಣ ಗುರು ಅವರಂಥವರು ಇಡೀ ಸಮೂಹಗಳ ಏಳಿಗೆಯನ್ನು ಬಯಸಿದ ವ್ಯಕ್ತಿಗಳು; ಇವರನ್ನು ಕುರಿತ ಪಠ್ಯಗಳು ವಿದ್ಯಾರ್ಥಿಗಳಲ್ಲಿ ಅರಿವಿನ ಪಲ್ಲಟಕ್ಕೂ ಮತ್ತು ಕ್ರಾಂತಿಗೂ ಪ್ರೇರಣೆಯನ್ನು ನೀಡುತ್ತವೆ. ಇಂತಹ ಪಠ್ಯಗಳನ್ನು ನಿರಾಕರಿಸುವುದೆಂದರೆ, ಇವುಗಳ ಮೂಲಕ ಒದಗಿಬರುವ ತಿಳಿವನ್ನು ನಿರಾಕರಿಸುವುದೆಂದೇ ಅರ್ಥ.

ಜ್ಞಾನಕೇಂದ್ರಿತ ಸಮಾಜಗಳನ್ನು ಸೃಷ್ಟಿಸುವುದು ಶಿಕ್ಷಣದ ಮಹತ್ತರ ಉದ್ದೇಶಗಳಲ್ಲಿ ಒಂದಾಗಿದೆ. ಸಮೂಹಗಳಲ್ಲಿ ಪ್ರತ್ಯೇಕತೆಯನ್ನು ಪ್ರಚೋದಿಸುವ ಕೇಡುಗಳು ಮತ್ತು ನಿರಂತರವಾಗಿ ಈ ಪ್ರತ್ಯೇಕತೆಯನ್ನು ನೆಲೆಗೊಳಿಸುವ ಸಮೂಹ ವಿರೋಧಿ ತಂತ್ರಗಳನ್ನು ಅರಿಯುವ, ಅರ್ಥೈಸುವ ಹಾಗೂ ಬದುಕಿನ ಹೊಸ ದಾರಿಗಳನ್ನು ನಿರ್ಮಿಸುವ ವೈಶಾಲ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಒಡಮೂಡಿಸುವ ಕಾರ್ಯಸೂಚಿಗಳಾಗಿ ಪಠ್ಯಗಳು ಒದಗಿಬರಬೇಕು.

Image
rohith chakrathirtha
ಪಠ್ಯಪುಸ್ತಕ ಪರಿಷ್ಕರಣೆ ಪರಿಶೀಲನಾ ಸಮಿತಿಯ ವಿವಾದಿತ ಅಧ್ಯಕ್ಷ ರೋಹಿತ್ ಚಕ್ರತೀರ್ಥ

ಜಾತಿ ಎಂದರೇನು? ಜಾತೀಯತೆಯಿಂದ ಏರ್ಪಡುವ ಸಾಮಾಜಿಕ, ಶೈಕ್ಷಣಿಕ ಅಪಾಯಗಳು ಎಂತಹವು? ಈ ಅಪಾಯಗಳನ್ನು ಅರಿತು ವಿಶ್ಲೇಷಿಸಿ, ಈ ಜಾತೀಯತೆಯನ್ನು ಮೀರಿ ಸಮೂಹಗಳಲ್ಲಿ ಸಹಬಾಳ್ವೆಯ ವಾತಾವರಣವನ್ನು ರೂಪಿಸುವ ಮಾರ್ಗಗಳನ್ನು ಅಂಬೇಡ್ಕರ್ ಅವರ 'ಜಾತಿ ವಿನಾಶ' ('ಅನಿಹಿಲೇಶನ್ ಆಫ್ ಕಾಸ್ಟ್') ಎಂಬಂತಹ ಪಠ್ಯಗಳಲ್ಲಿ ಕಾಣುತ್ತೇವೆ. ಆಧುನಿಕತೆ, ಯಂತ್ರೋಪಕರಣಗಳ ಹಾವಳಿ ಹಾಗೂ ಅವುಗಳ ಜೊತೆಗಿನ ಹದವಾದ ಅನುಸಂಧಾನ ಹೇಗಿರಬೇಕು ಮತ್ತು ಗ್ರಾಮಗಳ ಬೆಳವಣಿಗೆಯಲ್ಲಿ ಬಿಡಿ-ಬಿಡಿ ಆರ್ಥಿಕ ನೀತಿಗಳು (ಮೈಕ್ರೋ-ಇಕಾನಿಮಿಕ್ ಪಾಲಿಸಿಸ್) ಎಷ್ಟು ಮುಖ್ಯ ಎನ್ನುವುದನ್ನು ಗಾಂಧಿ ಅವರ 'ಹಿಂದ್ ಸ್ವರಾಜ್' ಪಠ್ಯ ಸಾಬೀತುಪಡಿಸುತ್ತದೆ. 'ವಡ್ಡಾರಾಧನೆ'ಯಂತಹ ಪಠ್ಯಗಳು ಬದುಕಿನ ಒಳಿತು ಮತ್ತು ಕೆಡುಕುಗಳನ್ನು ಮುಖಾಮುಖಿ ಮಾಡುತ್ತವೆ. ಈ ಮೂಲಕ ನಮಗೆ ಬೇಕಾದ ಧನಾತ್ಮಕ ಚಿಂತನೆಯನ್ನು ನೆಲೆಗೊಳಿಸಲು ಪೂರಕವಾಗುವ ವಿಮರ್ಶಾತ್ಮಕ ಚಿಂತನಗೆ (ಕ್ರಿಟಿಕಲ್ ಥಿಂಕಿಂಗ್) ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತವೆ. ಪಠ್ಯಪುಸ್ತಕಗಳ ಪರಿಷ್ಕರಣೆಯ ಹೆಸರಿನಲ್ಲಿ ಇವತ್ತು ನಡೆಯುತ್ತಿರುವ ಹುನ್ನಾರ ಈ ನಿಲುವುಗಳಿಗೆ ವ್ಯತಿರಿಕ್ತವಾದ ಬೌದ್ಧಿಕತೆಯನ್ನು ಅಡಕಗೊಳಿಸುವ ಪ್ರಯತ್ನವನ್ನು ಮಾಡುತ್ತವೆ. ಒಟ್ಟಾರೆಯಾಗಿ, ಸನಾತನ ಧರ್ಮದ ಧರ್ಮಾಂಧತೆಯ ಹುನ್ನಾರಗಳನ್ನು ಈ ಯಥಾಸ್ಥಿತಿ ನಿಲುವುಗಳಲ್ಲಿ ಕಾಣುತ್ತೇವೆ. ಈ ನಿಲುವುಗಳು ಪುರೋಹಿತಶಾಹಿ, ಊಳಿಗಮಾನ್ಯ ಧೋರಣೆಗಳನ್ನು ಒಪ್ಪಿ, ಸಾಮಾಜಿಕ ಅರಾಜಕತೆಯನ್ನು (ಈ ಪದವನ್ನು 'ಅನಾರ್ಕಿ'ಗೆ ಸಂವಾದಿಯಾಗಿ ಬಳಸಿಲ್ಲ) ಮುಂದುವರಿಸುವುದೇ ಆಗಿದೆ.

ಚರಿತ್ರೆ, ಸಂಸ್ಕೃತಿ, ರಾಜಕಾರಣ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ನ್ಯಾಯ-ನೀತಿ ಮೊದಲಾದ ವಿದ್ಯಮಾನಗಳ ಮೂಲಕ, ಬದುಕಿನ ಏಳಿಗೆಯನ್ನು ಸಮಚಿತ್ತದಿಂದ ಅರ್ಥೈಸುವ ಪ್ರಾಯೋಗಿಕ ಚಟುವಟಿಕೆಗಳು ನಮ್ಮ ಶಿಕ್ಷಣದಲ್ಲಿ ನಾವು ಅಳವಡಿಸುವ ಪಠ್ಯಪುಸ್ತಕಗಳ ಮೂಲಕ ನೆರವೇರುತ್ತವೆ. ಅಂದರೆ, ಮನುಷ್ಯ ಸಮುದಾಯದ ಅಸ್ತಿತ್ವ, ಅಸ್ಮಿತೆ, ಪ್ರಜ್ಞೆ ಹಾಗೂ ಪ್ರತಿನಿಧೀಕರಣವನ್ನು ನೆಲೆಗೊಳಿಸುವಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾತಿನಿಧ್ಯವಿದೆ ಎಂದರ್ಥ. ಈ ಮೌಲ್ಯಗಳನ್ನು ಕಂಡರಿಸುವಲ್ಲಿ ಪಠ್ಯಪುಸ್ತಕಗಳೇ ನಿಜವಾದ ಕ್ರಿಯಾಯೋಜನೆಗಳು.

ಈ ಲೇಖನ ಓದಿದ್ದೀರಾ?: 'ಈ ದಿನ' ವಿಶೇಷ | ಪೋಷಕರೇ, ಇಂತಹ ಪಠ್ಯವನ್ನು ನಿಮ್ಮ ಮಕ್ಕಳು ಓದಬೇಕೇ?

ಶಿಕ್ಷಣ ಎಂದರೆ ಕೇವಲ ಸಾಕ್ಷರತೆ ಮತ್ತು ಓದು, ಬರಹ ಹಾಗೂ ಗಣಿತದ ಚಳಕಗಳನ್ನು ಮಾತ್ರ ನೆಲೆಗೊಳಿಸುವುದಲ್ಲ. ಬದಲಾಗಿ, ಇಡೀ ಬದುಕನ್ನು ಅರಿಯುವುದಕ್ಕೆ ಬೇಕಾದ ಅನುಭವ ಕಥನವಾಗಿದೆ. ಸಮೂಹಗಳು ತಮ್ಮ ಬದುಕಿನುದ್ದಕ್ಕೂ ಅನುಸರಿಸಬೇಕಾದ ಮೌಲ್ಯಗಳು, ಆಚರಣೆಗಳು ಹಾಗೂ ಪಾಲಿಸಬೇಕಾದ ನೀತಿಗಳು ಇಡಿಯಾಗಿ ನಮಗೆ ಲಭ್ಯವಾಗಬೇಕಿರುವುದು ಶಿಕ್ಷಣದ ಪ್ರಕ್ರಿಯೆಯಲ್ಲಿ ಮಾತ್ರ. ಅಂದರೆ, ಇವುಗಳು ಬದುಕಿನ ಚೌಕಟ್ಟನ್ನು ಮೀರಿದ ಇಲ್ಲವೇ ಹೊರತಾಗಿರುವ ವಿನ್ಯಾಸಗಳಲ್ಲ. ಹಲವು ತಲೆಮಾರುಗಳ ಬದುಕಿನ ಬದುಕಿನ ಅನುಭವದಿಂದ ನೇರ್ಪುಗೊಂಡ ನಿಲುವುಗಳು. ಇಂತಹ ಅನುಭವದ ವಿನ್ಯಾಸಗಳನ್ನು ಸಾಹಿತ್ಯ, ಚರಿತ್ರೆ, ಸಂಸ್ಕೃತಿ, ಪುರಾಣಗಳ ಮೂಲಕ ಕ್ರೂಢೀಕರಿಸಲಾಗುತ್ತದೆ. ಇವುಗಳು ಭಟ್ಟಿ ಇಳಿದು ಸಮೂಹಗಳ ಉದ್ಧಾರಕ್ಕೆ ಪೂರಕವಾಗುವ ಅರಿವು ಮತ್ತು ತಿಳಿವಿನ ರೂಪಗಳಾಗಿ ಮೈದಾಳಿರುತ್ತವೆ. ಚರಿತ್ರೆ, ಪುರಾಣ, ಸಾಹಿತ್ಯದಂತಹ ವಿದ್ಯಮಾನಗಳು ಏಕಪಕ್ಷೀಯವಾಗಿರದೆ, ಒಳಿತು ಮತ್ತು ಕೆಡುಕಿನ ನಡುವಣ ಅನುಸಂಧಾನದ ಸ್ಪಷ್ಟ ಮಾದರಿಗಳಾಗಿ ಒದಗಿಬರುತ್ತವೆ.

ನಮ್ಮ ದೇಶದ ಶಿಕ್ಷಣವು ಪಠ್ಯಪುಸ್ತಕ ಕೇಂದ್ರಿತವಷ್ಟೇ ಅಲ್ಲ, ಬದಲಾಗಿ ಪಠ್ಯಪುಸ್ತಕಗಳೇ ಇಲ್ಲಿ ಪ್ರಾಬಲ್ಯವನ್ನು ಪಡೆದಿರುತ್ತವೆ. ಶಿಕ್ಷಕರು ಈ ಪಠ್ಯಪುಸ್ತಕಗಳನ್ನೇ ಇಡಿಯಾಗಿ ಆಶ್ರಯಿಸಿಕೊಂಡಿರುವುದು ಗಮನಾರ್ಹ. ಪ್ರತಿಯೊಂದು ನುಡಿಯ ಶಿಕ್ಷಕರು ಸಂಪೂರ್ಣವಾಗಿ ಪಠ್ಯಪುಸ್ತಕವನ್ನು ತಮ್ಮ ಬೋಧನೆಯ ಮೂಲ ಆಕರವನ್ನಾಗಿ ಬಳಸುತ್ತಾರೆ. ಹಾಗೆಯೇ, ವಿದ್ಯಾರ್ಥಿಗಳು ಕೂಡ ಈ ಪಠ್ಯಪುಸ್ತಕದ ಮೂಲಕ ಒದಗಿಬರುವ ವಿಚಾರಗಳನ್ನೇ ಬಲವಾಗಿ ನಂಬುತ್ತಾರೆ. ಹಾಗಾಗಿ, ಭಾಷಾ ಶಿಕ್ಷಣ ಪ್ರಕ್ರಿಯೆಯಲ್ಲಿ ಪಠ್ಯಪುಸ್ತಕಗಳ ಪಾತ್ರ ಅಗಾಧವಾಗಿದೆ ಮತ್ತು ಇಂತಹದೊಂದು ನಂಬಿಕೆ ನಮ್ಮಲ್ಲಿ ನೆಲೆ ನಿಂತಿದೆ. ಆದ್ದರಿಂದ ಈ ಪಠ್ಯಪುಸ್ತಕಗಳ ಪಠ್ಯವಸ್ತು ಏನಾಗಿರಬೇಕು? ಯಾರನ್ನು ಪ್ರತಿನಿಧಿಸಬೇಕು? ಯಾರ ಹಿತಾಸಕ್ತಿಗಳು ಇಂತಹ ಪಠ್ಯಪುಸ್ತಕಗಳ ಮುನ್ನೆಲೆಗೆ ಬರಬೇಕು? ಸಮೂಹಗಳ ಯಾವ ಹಿತಾಸಕ್ತಿಯನ್ನು ಈ ಪಠ್ಯಪುಸ್ತಕಗಳು ಹೊಂದಿರಬೇಕು? ಎಂಬೆಲ್ಲ ಪ್ರಶ್ನೆಗಳು ಇವತ್ತಿನ ಚರ್ಚೆಯಲ್ಲಿ ಮುಖ್ಯವಾಗುತ್ತವೆ. ಏಕೆಂದರೆ, 'ಪೆಡಾಗಜಿಕಲ್' ಮತ್ತು 'ಎಪಿಸ್ಟಿಮಾಜಿಕಲ್ ನೆಲೆ'ಗಳು ಈ ಹೊತ್ತಿನ ಶಿಕ್ಷಣದ ಆಶಯಗಳನ್ನು ಪೂರೈಸುವ ಮಾನದಂಡಗಳಾಗಿವೆ.

Image
Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶಿಕ್ಷಣ ಎಂಬ ಪರಿಕಲ್ಪನೆ ಮೈದಾಳಿರುವುದೇ ಶತಶತಮಾನಗಳಿಂದ ಕ್ರೂಢೀಕರಣಗೊಂಡ ಹಲವು ಬಗೆಯ ತಿಳಿವಿನ ಮಾದರಿಗಳಿಂದ ಎಂಬುದು ಗಮನಾರ್ಹ. ಶಿಕ್ಷಣಶಾಸ್ತ್ರಗಳ ಪ್ರಕಾರ ಕಲಿಕೆ, ಬೋಧನೆ ಪಠ್ಯಪುಸ್ತಕ, ಪಠ್ಯವಸ್ತು ಹಾಗೂ ಶಿಕ್ಷಣದ ವಿಧಿ ವಿಧಾನಗಳು ಅಸ್ತಿತ್ವಕ್ಕೆ ಬಂದಿರುವುದು ಶತಮಾನಗಳ ಹರವಿನಲ್ಲಿ. ಆದ್ದರಿಂದ ನಮ್ಮ ಶಿಕ್ಷಣ ನೀತಿ, ಪಠ್ಯಪುಸ್ತಕ, ಪಠ್ಯಕ್ರಮ, ಪಠ್ಯವಸ್ತುಗಳು ಮುಖ್ಯವಾಗಿ ಮೂರು ನಿಯೋಗಗಳ ನಡುವಣ ಅನುಸಂಧಾನವಾಗಿರಬೇಕು. ಸಂವಿಧಾನದ ಆಶಯಗಳು, ಸಾಮಾಜಿಕ ಏಳಿಗೆಗೆ ಪೂರಕವಾದ ವಿನ್ಯಾಸಗಳು ಹಾಗೂ ಶಿಕ್ಷಣ ನೀತಿ ಇವೇ ಮೊದಲಾದ ವಿದ್ಯಮಾನಗಳು ಅನುಸಂಧಾನದ ಬಗೆಗಳು.

ಭಾಷಾ ಪಠ್ಯಗಳ ಮೂಲಭೂತ ಉದ್ದೇಶವೇ ಗ್ರಹಿಕೆ, ಸೃಜನಶೀಲತೆ, ಸಾಮಾಜಿಕತೆ ಹಾಗೂ ಬದುಕಿನ ಸಾಂಗತ್ಯವನ್ನು ಬಲಪಡಿಸುವುದಾಗಿದೆ. ಈ ಪರಿಕಲ್ಪನೆಗಳನ್ನೇ ಬದುಕಿನ ಉದ್ದೇಶಗಳನ್ನಾಗಿ ರೂಪಿಸುವುದಾಗಿದೆ. ಆದರೆ, ಕಾವ್ಯ, ಕತೆ, ಕಾದಂಬರಿ, ಆತ್ಮಕತೆ, ಉಪನ್ಯಾಸ, ಜೀವನ ಚರಿತ್ರೆ ಮುಂತಾದ ಪ್ರಕಾರಗಳ ಮೂಲಕ ತಿಳಿವಿನ ಮಾದರಿಗಳನ್ನು ಮಂಡಿಸುವ ಬದಲಾಗಿ, ಕೇವಲ ಮಾಹಿತಿಯನ್ನು ರವಾನಿಸಲಾಗುತ್ತದೆ. ಭಾಷಾ ಶಿಕ್ಷಣದ ಮೂಲಕ ಪೂರೈಸುವ ಯಾವುದೇ ವಿಷಯ ಮತ್ತು ವಿಚಾರವು ನಮ್ಮ ನಡೆ-ನುಡಿಗಳ ನಡುವಣ ಕಂದಕಗಳನ್ನು ಅಳಿಸುವ ಬಗೆಗಳಾಗಿ ಒದಗಿಬರದೆ, ಅವುಗಳನ್ನು ಇನ್ನಷ್ಟು ಬಿಗಡಾಯಿಸುತ್ತವೆ; ಇಲ್ಲವೇ, ಕೇವಲ ಉಪದೇಶದ ರೂಪಗಳಾಗಿರುತ್ತವೆ. ನಾವು ಉಪದೇಶಿಸುವ ಮೌಲ್ಯಗಳಿಗೂ ಮತ್ತು ನಮ್ಮ ದೈನಂದಿನ ಬದುಕಿನಲ್ಲಿ ನಾವು ಅನುಸರಿಸುತ್ತಿರುವ ಆಚರಣೆಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಸತ್ಯ, ನ್ಯಾಯ, ಧರ್ಮ, ಅಹಿಂಸೆ, ಲಿಂಗ ಸಮಾನತೆ, ಸಹೋದರತ್ವ ಮುಂತಾದ ಮೌಲ್ಯಗಳನ್ನು ದಿನನಿತ್ಯದ ಬದುಕಿನಲ್ಲಿ ಅನುಸರಿಸುವ ವಿಧಾನವೇ ಬೇರೆ ಮತ್ತು ನಮ್ಮ ಶಿಕ್ಷಣ ಮಂಡಿಸುವ ಕ್ರಮವೇ ಬೇರೆ. ಹಾಗಾಗಿ, ಭಾಷಾ ಪಠ್ಯಗಳ ಮೂಲಕ ಯಾವ ವೈಚಾರಿಕ ಮೌಲ್ಯಗಳನ್ನು ನೆಲೆಗೊಳಿಸಬೇಕು ಎಂದು ಉದ್ದೇಶಿಸಲಾಗುತ್ತದೆಯೋ, ಆ ಉದ್ದೇಶಗಳು ಈಡೇರುವುದಿಲ್ಲ. ಅಂದರೆ, ಬದುಕು ಮತ್ತು ಶಿಕ್ಷಣ ಇವುಗಳ ನಡುವಣ ನಂಟಸ್ತಿಕೆ ಪರಸ್ಪರ ವ್ಯಾಖ್ಯಾನಿಸುವ, ಅರ್ಥೈಸುವ ಹಾಗೂ ವಿಸ್ತರಿಸುವ ನೆಲೆಯಲ್ಲಿ ಇರುವುದಿಲ್ಲ.

ಈ ಲೇಖನ ಓದಿದ್ದೀರಾ?: ಪಠ್ಯಪುಸ್ತಕ ಪರಿಷ್ಕರಣೆ ಹೊಸ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಗುಣವಾಗಿಲ್ಲ (ಭಾಗ1): ಪುರುಷೋತ್ತಮ ಬಿಳಿಮಲೆ

ವಿಚಿತ್ರವೇನೆಂದರೆ, ಬಲಪಂಥ ವಿಚಾರಧಾರೆಯ ಬಹುತೇಕ ಪಠ್ಯಗಳು ಸಂವಿಧಾನದ ಆಶಯ, ವೈಚಾರಿಕತೆ ಅಥವಾ ಸೆಕ್ಯುಲರ್ ಮೌಲ್ಯಗಳಿಗೆ ವ್ಯತಿರಿಕ್ತವಾದ ಆಶಯಗಳನ್ನು ಹೊಂದಿರುತ್ತವೆ. ನಮ್ಮ ಸಮೂಹಗಳನ್ನು ನಿರ್ವಹಿಸಿದ ವಿನ್ಯಾಸಗಳೇ ಈ ಬಲಪಂಥೀಯ ನೆಲೆಗಳಾಗಿರುತ್ತವೆ. ಆದ್ದರಿಂದ ಸಾಮರಸ್ಯ, ಬಹುಳತೆ, ಸಾಂಸ್ಕೃತಿಕ ವೈವಿಧ್ಯತೆ ಮೊದಲಾದವು ಅಪಕಲ್ಪನೆಗಳಾಗಿ ತಲೆದೋರುತ್ತವೆ. ಹೀಗೆ ಹಾಸುಹೊಕ್ಕಾದ ಮೂಢನಂಬಿಕೆಗಳನ್ನು ಇನ್ನಷ್ಟು ತೀವ್ರಗೊಳಿಸಲು, ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ ಹುನ್ನಾರಗಳು ಪೂರಕವಾಗಿವೆ. ವಸಾಹತು ನೀತಿಗಳನ್ನು ವಿರೋಧಿಸಿದ ಮಟ್ಟದಲ್ಲಿ ಬಲಪಂಥೀಯತೆಯನ್ನು ವಿರೋಧಿಸುವ ಜನಾಂದೋಲನವು ನಡೆಯಬೇಕಿದೆ. ಇಲ್ಲವಾದಲ್ಲಿ ನಮ್ಮ ನಿಲುವುಗಳು ಉಪದೇಶಗಳಾಗಿಯೇ ಉಳಿಯತ್ತವೆ.

ಗಾಂಧಿ, ಅಂಬೇಡ್ಕರ್, ವಿವೇಕಾನಂದ, ನಾರಾಯಣಗುರು ಮೊದಲಾದ ಮಹಾಪುರುಷರ ವಿಚಾರಗಳು ಆಚರಣೆಯಾಗಿ ರೂಪಾಂತರಗೊಂಡಿಲ್ಲ. ಇವು ಕೇವಲ ಉಪದೇಶಗಳಾಗಿಯೇ ನೆಲೆ ನಿಂತಿವೆ. ನಮ್ಮ ಶಿಕ್ಷಣ ಎನ್ನುವುದು ವೈಚಾರಿಕ ನಿರ್ವಾತವನ್ನು ಸೃಷ್ಟಿಸಿದೆ. ಇಂತಹ ನಿರ್ವಾತದಲ್ಲಿ ಎಲ್ಲ ಬಗೆಯ ಅನುಪಯುಕ್ತ (ಜಂಕ್) ವಿಚಾರಗಳನ್ನು ತುಂಬುವುದಕ್ಕೆ ಸಾಧ್ಯವಾಗಿದೆ.  

ಚರಿತ್ರೆ, ಸಮಾಜ, ಸಂಸ್ಕೃತಿ ಹಾಗೂ ವಿಜ್ಞಾನ ಕುರಿತಾದ ನಮ್ಮ ನಿಲುವುಗಳೇನು? ಟಿಪ್ಪು, ಕೃಷ್ಣದೇವರಾಯ, ಅಕ್ಬರ್, ಬಹುಮನಿ ಸುಲ್ತಾನರ ಬಗೆಗಿನ ನಮ್ಮ ನಿಲುವುಗಳನ್ನು ರೂಪಿಸಿಕೊಂಡ ಬಗೆ ಯಾವುದು? ನಮ್ಮ ಆಹಾರ ಪದ್ಧತಿ, ಉಡುಗೆ ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆ ನಮ್ಮ ಸ್ಪಂದನೆ, ಪ್ರತಿಕ್ರಿಯೆ ಯಾವ ಸ್ವರೂಪವನ್ನು ಪಡೆದುಕೊಂಡಿದೆ? ಇದುವರೆಗೂ ವೈಚಾರಿಕತೆಯನ್ನು ಪ್ರೇರೇಪಿಸುವ ಪಠ್ಯಪುಸ್ತಕಗಳ ಮೂಲಕ ಶಿಕ್ಷಣ ಪಡೆದವರು ಯಾಕೆ ಧರ್ಮಾಂಧತೆಯನ್ನು ವಿಜೃಂಭಿಸುವುದಕ್ಕೆ ಸಾಧ್ಯವಾಗಿದೆ? ಅಂದರೆ, ನಮ್ಮ ಶಿಕ್ಷಣದ ಆಶಯಗಳು ಇಂದಿಗೂ ನಮ್ಮ ಬದುಕಿನ ಆಚರಣೆಗಳಾಗಿ ರೂಪಾಂತರಗೊಂಡಿಲ್ಲ. ನಮ್ಮ ನಡೆ-ನುಡಿಗಳು ಇಂದಿಗೂ ಬೇರೆ-ಬೇರೆಯಾಗಿಯೇ ಮುಂದುವರೆದಿವೆ. ಹಾಗಾದರೆ, ಬಲಪಂಥೀಯ ಧೋರಣೆಗಳನ್ನು ಬಿತ್ತುವುದಕ್ಕೆ ನಮ್ಮ ಸಮಾಜಗಳು ಹದಗೊಂಡಿವೆ?

ನಿಮಗೆ ಏನು ಅನ್ನಿಸ್ತು?
0 ವೋಟ್