ಜತೆಗಿರುವನೇ ಚಂದಿರ? | ಭದ್ರಮ್ಮನ ಮೊಮ್ಮಗಳು ಭವ್ಯಳ ಬೂಟು ಕದ್ದ ಪ್ರಸಂಗ

ಅಂದು ನಮ್ಮ ತರಗತಿಯವರನ್ನು ನೆಲದ ಮೇಲೆ ಕೂರಿಸಿದ್ದರು. ಎಲ್ಲರೂ ತಮ್ಮ-ತಮ್ಮ ಚಪ್ಪಲಿಗಳನ್ನು ತಮ್ಮ ಬಳಿ ಬಿಟ್ಟುಕೊಂಡು ಪಾಠ ಕೇಳುತ್ತಿದ್ದರು. ಅವಳು ಚಪ್ಪಲಿ ಬಿಟ್ಟು ಕೂತಿದ್ದನ್ನು ಗಮನಿಸಿದ ನಾನು, ಕ್ಲಾಸ್ ಮುಗಿಯುವಷ್ಟರಲ್ಲಿ ಯಾರಿಗೂ ತಿಳಿಯದಂತೆ ಅದನ್ನು ಎಗರಿಸಿ ಬ್ಯಾಗಲ್ಲಿಟ್ಟುಕೊಂಡೆ. ಕ್ಲಾಸ್ ಮುಗಿದಾಗ ಅವಳು ಅಳುತ್ತ ಎಲ್ಲ ಕಡೆ ಚಪ್ಪಲಿ ಹುಡುಕತೊಡಗಿದಳು

ಎಷ್ಟು ಸಲ ಬಿಟ್ಟುಹೋದರೂ ನಮ್ಮನ್ನು ಮತ್ತೆ-ಮತ್ತೆ ಆಪತ್ಭಾಂದವನಂತೆ ಮಡಿಲೊಡ್ಡಿ ಕರೆಯುತ್ತಿದ್ದದ್ದು ಶಿವರಾಮಣ್ಣನವರ ವಠಾರ. ಯಾವಾಗಲೂ ಅದರ ಯಾವುದಾದರೊಂದು ಮನೆ ಖಾಲಿ ಇದ್ದೇ ಇರುತ್ತಿತ್ತು. ನಾವು ಈ ವಠಾರದ ಎರಡು-ಮೂರು ಮನೆಗಳಲ್ಲಿ ವಾಸವಿದ್ದ ನೆನಪಿದೆ ನನಗೆ. ತಮಿಳರು, ಮಲಯಾಳರು, ಗೌಡರು, ಮುಸಲ್ಮಾನರು ಮೊದಲಾದ ಜಾತಿ-ಧರ್ಮಗಳ ಅನ್ಯೋನ್ಯತೆ ಸಮ್ಮಿಳಿತಗೊಂಡಿದ್ದ ಆ ವಠಾರವು ಒಂದು ಇರುವೆ ಗೂಡಿನಂಥ ಅನೂಹ್ಯ ಲೋಕವೇ ಅಂತ ಅನ್ನಿಸುತ್ತದೆ ನನಗೆ. ಬೆಳಗ್ಗೆಯಾದರೆ, ಸಂಜೆಯಾದರೆ ತನ್ನದೇ ಆದ ಅನನ್ಯತೆಯೊಂದಿಗೆ ತೆರೆದುಕೊಳ್ಳುತ್ತಿದ್ದ ಈ ವಠಾರದಲ್ಲಿ ಪ್ರೀತಿ, ಪ್ರಣಯ, ಕುಡಿತ, ಹೊಡೆದಾಟ, ಹಾದರ, ಬಯ್ಗುಳ, ಹಬ್ಬ, ಹಸಿವು, ಬಡತನ, ಸಾಲ ಎಲ್ಲದರೊಳಗೂ ಮಿಂದೆದ್ದ ಭಾವಗಳು ಸಮೃದ್ಧವಾಗಿದ್ದವು.

ಇನ್ನು, ಈ ವಠಾರದ ಚಿತ್ರಣಕ್ಕಿಳಿದರೆ, ಒಂದು ತುಂಡುಗೋಡೆ, ಅಡುಗೆ ಕೋಣೆ ಹಾಗೂ ವಾಸದ ಕೋಣೆಗಳನ್ನು ವಿಭಾಗಿಸಿದ್ದ ಒಂದೈದಾರು ಪುಟ್ಟ-ಪುಟ್ಟ ಮನೆಗಳು. ಸುತ್ತಲೂ ಇದ್ದ ಆ ಮನೆಗಳ ಮಧ್ಯೆ ಒಂದು ದೊಡ್ಡ ತೆರೆದ ತೊಟ್ಟಿ. ಆ ತೊಟ್ಟಿಯ ಮಧ್ಯದಲ್ಲೊಂದು ಕಲ್ಲುಚಪ್ಪಡಿಯನ್ನು ಹಾಕಿ, ಮೂಲೆಯಲ್ಲೊಂದು ತೂತು ಕೊರೆದಿದ್ದು, ಎಲ್ಲ ಮನೆಯವರೂ ಆ ತೊಟ್ಟಿಯನ್ನು ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಸ್ನಾನ ಮಾಡಲು, ಉಚ್ಚೆ ಹುಯ್ಯಲು, ಕಕ್ಕಸ್ಸಿಗೆ ಹೋಗಿ ಬಂದು ತೊಳೆದುಕೊಳ್ಳಲು... ಹೀಗೆ ವಿವಿಧ ಉದ್ಧೇಶಗಳಿಗೆ ಬಳಸುತ್ತಿದ್ದರು. ವಠಾರದ ಮಕ್ಕಳು ದನ್ನೋಣಿ (ದನಗಳನ್ನು ಮೇಯಲು ಅಟ್ಟಿಕೊಂಡು ಹೋಗುತ್ತಿದ್ದ ಓಣಿಯಂಥ ಕಿರಿದಾದ ದಾರಿ) ಕಡೆ ಕಕ್ಕಸ್ಸಿಗೆ ಹೋಗಿಬಂದು, ಬಾಗಿಲಲ್ಲಿ ಗಂಟೆಗಟ್ಟಲೆ, "ಅಮ್ಮೌ... ತಿಕ್ನೀರೂ..." ಎಂದು ಅಳುವ ದನಿಯಲ್ಲಿ ಕಿರುಚುತ್ತ ನಿಲ್ಲುತ್ತಿದ್ದರು. ಎಷ್ಟೋ ಹೊತ್ತಿನ ಮೇಲೆ ಅಮ್ಮಂದಿರು ಒಳಗಿನಿಂದ ಒಂದು ಚೊಂಬಲ್ಲಿ ನೀರು ತಂದು ಇವರ ನಡುಬಗ್ಗಿಸಿ ನೀರು ಉಯ್ಯುತ್ತಿದ್ದರೆ, ಮಕ್ಕಳು ಎಟುಕದ ಕೈಯಿಂದ ಎಟುಕಿಸಿ ಚಪಚಪನೆ ಶಬ್ದ ಮಾಡುತ್ತ ತೊಳೆದುಕೊಳ್ಳುತ್ತಿದ್ದರು. ಪಾಯಿಖಾನೆಗೆ ಅದರಲ್ಲೂ, ಎಡೆಬಿಡದೆ ಸುರಿಯುತ್ತಿದ್ದ ಮಳೆಗಾಲದಲ್ಲಿ ಹೋಗುವುದೊಂದು ಬಲುಹಿಂಸೆಯ ಕೆಲಸವಾಗಿತ್ತು. ಸಂಜೆಯ ಹೊತ್ತು ಅಮ್ಮಿ ದನ್ನೋಣಿಯ ಎರಡೂ ಬದಿಗಳಲ್ಲಿದ್ದ ತಿಪ್ಪೆಗುಂಡಿಗಳ ಮರೆಯಲ್ಲಿ ಕೂರಿಸಿ ತಾನು ಕಾಯುತ್ತ ನಿಲ್ಲುತ್ತಿದ್ದಳು. ಒಮ್ಮೊಮ್ಮೆ ಯಾರೂ ಇಲ್ಲದ್ದನ್ನು ನೋಡಿಕೊಂಡು ರಸ್ತೆ ಬದಿಯಲ್ಲೇ ಕೂರಿಸುತ್ತಿದ್ದಳು.

Image
ಕಲಾಕೃತಿ ಕೃಪೆ: unsplash ಜಾಲತಾಣ

ಸಂಜೆ ವಠಾರದ ಗಂಡಸರು ಕೆಲಸ ಮುಗಿಸಿ ವಾಪಸ್ ಬರುವಷ್ಟರಲ್ಲಿ ಹೆಂಗಸರು ವಠಾರದ ಅಗುಳಿ ಹಾಕಿ ಸ್ನಾನ ಮುಗಿಸುತ್ತಿದ್ದರು. ವಾರಕ್ಕೊಮ್ಮೆ ಒಂದೊಂದು ಮನೆಯವರು ಆ ತೊಟ್ಟಿಯನ್ನು ತೊಳೆಯುವ ರೂಢಿಯಿತ್ತು. ಮಳೆಗಾಲದಲ್ಲಿ ಜರ್ರನೆ ಒಂದೇ ಸಮನೆ ಸುರಿಯುತ್ತಿದ್ದ ಮಳೆಯಲ್ಲಿ ನಾವು ಆ ತೊಟ್ಟಿಯೊಳಗಿಳಿದು, ಸ್ವಿಮ್ಮಿಂಗ್ ಫೂಲಿನಲ್ಲಿ ಈಜುವಂತೆ ಮನಸೋ ಇಚ್ಛೆ ಹೊರಳಾಡಿ ಆಡಿಕೊಳ್ಳುತ್ತಿದ್ದೆವು. ಇಡೀ ವಠಾರಕ್ಕೆ ಒಂದೇ ರುಬ್ಬುವ ಕಲ್ಲಿತ್ತು. ಅದರಲ್ಲಿ ಒಬ್ಬರ ನಂತರ ಮತ್ತೊಬ್ಬರ ಮನೆಯವರು ಸರದಿಯಂತೆ ಖಾರ ರುಬ್ಬಿಕೊಳ್ಳುತ್ತಿದ್ದೆವು. ಆ ವಠಾರಕ್ಕೆ ಒಂದು ದೊಡ್ಡ ಮರದ ಬಾಗಿಲಿತ್ತು. ಅದಕ್ಕೆ ಹೊರಗೆ ಸರಪಳಿಯ ಚಿಲಕವಿದ್ದರೆ, ಒಳಗೆ ದಪ್ಪನೆಯ ಮರದ ಚಿಲಕವಿತ್ತು. ಆ ಬಾಗಿಲಿನ ಮೇಲೆ ದಿನಣ್ಣ, 'ನಾಳೆ ಬಾ' ಎಂದು ದೊಡ್ಡದಾಗಿ ಬರೆದು, ಅದು ಅಳಿಸಿಹೋಗದಂತೆ ಅದರ ಮೇಲೆ ದಿನಾ ತಿದ್ದುತ್ತಿದ್ದೆವು. ದೆವ್ವಗಳು ಮನೆಯ ಬಾಗಿಲಿಗೆ ಬಂದು ಬಾಗಿಲಿನ ಮೇಲೆ ಬರೆದಿರುವುದನ್ನು ಓದಿ ನಾಳೆ ಬರುತ್ತವೆ; ಪ್ರತಿದಿನ ಇದು ಪುನರಾವರ್ತನೆ ಆಗುತ್ತದೆ ಎಂಬುದು ನಮ್ಮ ಗಾಢ ನಂಬಿಕೆಯಾಗಿತ್ತು. ಈ ನಂಬಿಕೆಯಿಂದಲೇ ದೆವ್ವದ ಭಯವಿಲ್ಲದೆ ನಾವು ರಾತ್ರಿಯನ್ನು ನೆಮ್ಮದಿಯಿಂದ ಕಳೆಯುತ್ತಿದ್ದೆವು. ನಮ್ಮ ವಠಾರದಲ್ಲಷ್ಟೇ ಅಲ್ಲದೆ ಊರಿನ ಎಲ್ಲರ ಮನೆಯ ಬಾಗಿಲ ಮೇಲೂ ಈ ಘೋಷವಾಕ್ಯವೊಂದನ್ನು ತಿದ್ದಲಾಗಿದ್ದು, ಇಡೀ ಊರು ದೆವ್ವಗಳಿಂದ ಮುಕ್ತವಾಗಿರುವ ಸರ್ಟಿಫಿಕೆಟ್ ಪಡೆದಂತೆ ತೋರುತ್ತಿತ್ತು. ಆ ಬಾಗಿಲಿನ ಎಡ-ಬಲಗಳಲ್ಲಿ ದೊಡ್ಡ-ದೊಡ್ಡ ಜಗುಲಿಗಳಿದ್ದು, ಮಧ್ಯೆ ಆ ವಠಾರಕ್ಕೆ ಹತ್ತಿ ಹೋಗಲು ಎಂಟತ್ತು ಅಡಿ ಉದ್ದದ ಕಲ್ಲಿನ ಮೆಟ್ಟಿಲುಗಳಿದ್ದವು. ಕೊಪ್ಪಲಿನಲ್ಲಿ  ವಾಸವಾಗಿದ್ದ ಶಿವರಾಮಣ್ಣ ತಿಂಗಳಿಗೊಮ್ಮೆ ಬಂದು ಬಾಡಿಗೆ ತೆಗೆದುಕೊಂಡು ಹೋಗುತ್ತಿದ್ದರು.

ನಾನಾಗ ಫಾರಂ ಸ್ಕೂಲಿನಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದೆ. ಕೊಪ್ಪಲಿನಿಂದ ಬರುತ್ತಿದ್ದ ಪವಿ ನನ್ನ ಆಪ್ತ ಗೆಳತಿ. ನಾವಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಬೆಳ್ಳಗೆ, ಗುಂಡಗೆ, ಮುದ್ದಾಗಿದ್ದ ಅವಳಿಗೆ ದೇವರ ಬಗ್ಗೆ ತುಸು ಹೆಚ್ಚೇ ಭಕ್ತಿ. ಅಪ್ಪ-ಅಮ್ಮ ಇಬ್ಬರೂ ಬೇರೆ ಊರಿನಲ್ಲಿದ್ದರು. ಅವಳು ಕೂಡಿಗೆ ಕೊಪ್ಪಲಿನ ಅವಳ ಅಜ್ಜಿ ಮನೆಯಿಂದ ಬರುತ್ತಿದ್ದಳು.

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಅಮ್ಮಿ ರಾರಾಜಿಸುತ್ತಿದ್ದಾಳೆ - ಕೆಲವೊಮ್ಮೆ ಶಾಹಿರಾಬಾನು, ಕೆಲವೊಮ್ಮೆ ಸಾವಿತ್ರಮ್ಮ

ಫಾರಂ ಸ್ಕೂಲಿನ ಮೈದಾನದಲ್ಲಿ ಒಂದು ಸಣ್ಣ ಹುತ್ತವಿತ್ತು. ಆಟವಾಡುವಾಗ ಅದರೊಳಗೆ ಒಂದು ಕಪ್ಪೆ ಪಿಳಿಪಿಳಿ ಕಣ್ಣು ಬಿಟ್ಟು, ಅದರ ಮೂತಿಯಷ್ಟೇ ಕಾಣುವಂತೆ ಕೂತಿದ್ದನ್ನು ಕಂಡು ಹಾವೆಂದುಕೊಂಡು ನಾವು ಆ ಹುತ್ತಕ್ಕೆ ಪೂಜೆ ಮಾಡಲು ತೀರ್ಮಾನಿಸಿದೆವು. ಮಾರನೆಯ ದಿನ ಅವಳೊಂದು ಡಬ್ಬಿಯಲ್ಲಿ ಹಾಲು, ಅರಿಶಿಣ-ಕುಂಕುಮ, ಊದುಗಡ್ಡಿ ತಂದಳು. ಆಟದ ಪೀರಿಯಡ್‌ನಲ್ಲಿ ನಾವಿಬ್ಬರೂ ಆ ಹುತ್ತದ ಬಳಿ ಹೋಗಿ, ಅದರ ಸುತ್ತಲಿನ ಕಳೆಯನ್ನೆಲ್ಲ ಕಿತ್ತು ಶುಚಿಗೊಳಿಸಿ, ಅರಿಶಿಣ-ಕುಂಕುಮವಿಟ್ಟು, ಊದುಗಡ್ಡಿ ಹಚ್ಚಿ ಪೂಜೆ ಮಾಡಿದೆವು. ಈ ಕಾರ್ಯಕ್ರಮ ವಿಸ್ತಾರವಾಗಿ ಪ್ರತಿದಿನದ ಕಾರ್ಯಕ್ರಮವಾಗಿ ಜಾರಿಗೆ ಬಂತು. ನಾನು ಮನೆಯಲ್ಲಿದ್ದ ಸಕ್ಕರೆ, ಬೆಲ್ಲ ಕದಿಯತೊಡಗಿದೆ. ಅಡುಗೆ ಪದಾರ್ಥಗಳನ್ನು ಆ ಹೊತ್ತಿಗೆ ತಂದು ಬಳಸುತ್ತಿದ್ದ ಅಮ್ಮಿ ಖಂಡಿತ ಶಾಲೆಗೆ ಕೊಂಡೊಯ್ಯಲು ಬಿಡುವುದಿಲ್ಲವೆಂದು ಆಕೆಗೆ ತಿಳಿಯದಂತೆ ಕೊಂಡೊಯ್ಯುತ್ತಿದ್ದೆ. ಪವಿ ಅವಲಕ್ಕಿ,ಪುರಿ, ಬಾಳೆಹಣ್ಣು, ಮೊಸರು ತಂದು ಅವೆಲ್ಲವನ್ನೂ ಪ್ರಸಾದದಂತೆ ಬೆರೆಸಿ ಪೂಜೆಯ ಕೊನೆಯಲ್ಲಿ ಅದನ್ನು ತಿನ್ನುತ್ತಿದ್ದೆವು. ಕೆಲವೊಮ್ಮೆ ಸಿಹಿಯಾದ ರುಚಿ-ರುಚಿಯಾದ ಗಿಣ್ಣು ತರುತ್ತಿದ್ದಳು. ರುಚಿಯ ಬಗ್ಗೆ ಬಹಳ ಉತ್ಸುಕಳಾಗಿದ್ದ ನಾನು, ಮನಸೋ ಇಚ್ಛೆ ಅದನ್ನು ತಿಂದು ಆನಂದಪಡುತ್ತಿದ್ದೆ.

ಬಾಲ್ಯದ ಬೇರುಗಳು ಬಹುವೇಗವಾಗಿ ಹಬ್ಬುತ್ತ ಹಲವು ಅನುಭವಗಳನ್ನು ಗಾಢವಾಗಿಸುತ್ತಿದ್ದ ಕಾಲವದು. ಆಸೆ, ಕನಸುಗಳನ್ನು ಕಣ್ಣೆದುರಲ್ಲಿ ರಾಶಿ ಹಾಕಿಕೊಂಡು ಆ ಕೆಂಡವನ್ನು ದಾಟಿಕೊಳ್ಳಲು ಹೆಣಗಾಡುತ್ತಿದ್ದೆ. ಬಾಲ್ಯದಲ್ಲಿ ಯಾರೊಂದಿಗೂ ಬೇಗನೆ ಬೆರೆಯದ, ಮಾತನಾಡದ ನಾನು, ನಿಗೂಢ ಮೌನಿಯಾಗಿದ್ದೆ. ಕಂಡಿದ್ದೆಲ್ಲವೂ ಬೇಕೆನ್ನುವ ಆಸೆ ಇನ್ನಿಲ್ಲದಂತೆ ಕಾಡಿಸುತ್ತಿದ್ದರೂ ಈಡೇರದ ಬಯಕೆಗಳು ಮನವನ್ನು ಕೆಂಡದಂತೆ ಸುಡುತ್ತಿದ್ದವು.

Image
ಕಲಾಕೃತಿ ಕೃಪೆ: unsplash ಜಾಲತಾಣ

ಅಬ್ಬ-ಅಮ್ಮಿಗೆ ಕಷ್ಟವೆಂದಾಗ ಬಡ್ಡಿಗೆ ಸಾಲ ಕೊಡುತ್ತಿದ್ದ ಕೂಡಿಗೆ ಸರ್ಕಲ್ಲಿನಲ್ಲಿದ್ದ ಭದ್ರಮ್ಮನ ಮೊಮ್ಮಗಳು ಭವ್ಯ ನನ್ನ ಕ್ಲಾಸಲ್ಲೇ ಓದುತ್ತಿದ್ದಳು. ಒಳ್ಳೊಳ್ಳೆ ಬಟ್ಟೆ ತೊಟ್ಟು ಶಾಲೆಗೆ ಬರುತ್ತಿದ್ದ ಅವಳು, ಅವಳದ್ದೇ ಸ್ಟ್ಯಾಂಡರ್ಡ್ ಹುಡುಗಿಯರೊಂದಿಗೆ ಬೆರೆಯುತ್ತ ಜಂಬದಿಂದ ಓಡಾಡುತ್ತಿದ್ದಳು. ನಮ್ಮಂಥವರ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಎಲ್ಲರಿಗಿಂತ ವಿಶೇಷವಾಗಿ ಕಾಣುತ್ತಿದ್ದ ಅವಳ ಬಗ್ಗೆ ನನಗೆ ಒಂದು ರೀತಿಯ ಮತ್ಸರ ತುಂಬಿದ ಆಕರ್ಷಣೆ ಇತ್ತು. ಒಂದು ದಿನ ಅವಳು ಕಾಲು ತುಂಬಾ ಬೆಲ್ಟ್‌ಗಳಿದ್ದ ಕಪ್ಪನೆಯ ಹೈಹೀಲ್ಡ್ ಚಪ್ಪಲಿ ಧರಿಸಿ ಶಾಲೆಗೆ ಬಂದಳು. ಅವಳು ಧರಿಸಿದ್ದ ಆ ಚಪ್ಪಲಿ ನನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿತು. ಹೇಗಾದರೂ ನಾನು ಆ ಚಪ್ಪಲಿಯನ್ನು ಒಮ್ಮೆಯಾದರೂ ಹಾಕಿಕೊಳ್ಳಬೇಕೆಂದು ಮನಸ್ಸಾಯಿತು. ಆದರೆ, ಅವಳನ್ನು ಮಾತನಾಡಿಸುವುದೂ ಕಷ್ಟವಿದ್ದ ಸ್ಥಿತಿಯಲ್ಲಿ ಅದು ಅಸಾಧ್ಯದ ಯೋಚನೆಯಾಗಿತ್ತು. ನಾನು ಆ ಚಪ್ಪಲಿ ಧರಿಸಿ ಓಡಾಡುತ್ತಿರುವ ಕಲ್ಪನೆಯಲ್ಲಿ ಮುಳುಗಿದೆ.

ಅಂದು ಕಂಬೈನ್ಡ್ ಕ್ಲಾಸ್ ಇದ್ದಿದ್ದರಿಂದ ನಮ್ಮ ತರಗತಿಯವರನ್ನು ನೆಲದ ಮೇಲೆ ಕೂರಿಸಿದ್ದರು. ನೆಲದ ಮೇಲೆ ಕೂತವರೆಲ್ಲ ತಮ್ಮ-ತಮ್ಮ ಚಪ್ಪಲಿಗಳನ್ನು ತಮ್ಮ ಬಳಿಯಲ್ಲಿ ಬಿಟ್ಟುಕೊಂಡು ಪಾಠ ಕೇಳುತ್ತಿದ್ದರು. ಅವಳು ಚಪ್ಪಲಿ ಬಿಟ್ಟು ಕೂತಿದ್ದನ್ನು ಗಮನಿಸಿದ ನಾನು, ಕ್ಲಾಸ್ ಮುಗಿಯುವಷ್ಟರಲ್ಲಿ ಯಾರಿಗೂ ತಿಳಿಯದಂತೆ ಅದನ್ನು ಎಗರಿಸಿ ಬ್ಯಾಗಲ್ಲಿಟ್ಟುಕೊಂಡೆ. ಕ್ಲಾಸ್ ಮುಗಿದಾಗ ಅವಳು ಅಳುತ್ತ ಎಲ್ಲ ಕಡೆ ತನ್ನ ಚಪ್ಪಲಿ ಹುಡುಕತೊಡಗಿದಳು. ನಾನು ಏನೂ ತಿಳಿಯದಂತೆ ಅಲ್ಲಿಂದ ಹೊರಟುಹೋದೆ. ನನಗೆ ಮಾತ್ರ ಸ್ವಲ್ಪವೂ ಭಯವಾಗಲೀ, ಬೇಸರವಾಗಲೀ ಆಗಲಿಲ್ಲ. ಬದಲಿಗೆ, ಚಪ್ಪಲಿಗೆ ಈಗ ನಾನೇ ಒಡತಿ ಎಂಬ ಹಮ್ಮು ತುಂಬಿಕೊಂಡಿತ್ತು. ಅದನ್ನು ಧೈರ್ಯವಾಗಿ ಮನೆಗೆ ತಂದೆ. ಕಾಲಿಗೆ ಹಾಕಿಕೊಂಡು ಮನೆಯಲ್ಲೆಲ್ಲ ಓಡಾಡಿದೆ. ನಾನೇ ಸಿನಿಮಾ ತಾರೆಯೇನೋ ಅನ್ನುವ ಭಾವ ಮನದಲ್ಲಿ ಉಕ್ಕಿ ಹರಿಯಿತು. ಯಾವುದೇ ಕಾರಣಕ್ಕೂ ಅದು ಅವಳದ್ದೆಂದು ಗುರುತು ಸಿಗಬಾರದೆಂದುಕೊಂಡು ಬ್ಲೇಡ್ ತೆಗೆದುಕೊಂಡು ಅದರ ಒಂದೊಂದೇ ಬೆಲ್ಟ್ ಕತ್ತರಿಸಿ ವಿರೂಪಗೊಳಿಸಿದೆ. ಅಕಸ್ಮಾತ್ ಅಬ್ಬ-ಅಮ್ಮಿಗೆ ಗೊತ್ತಾದರೆ ನನ್ನ ಉಳಿಗಾಲವಿಲ್ಲ ಅಂದುಕೊಂಡು ಅದನ್ನು ಮನೆಯ ಹಿಂದಿನ ಬೇಲಿಯೊಳಗೆ ಬಚ್ಚಿಟ್ಟೆ. ರಾತ್ರಿಯೆಲ್ಲ ಆ ಚಪ್ಪಲಿಯದ್ದೇ ಗ್ಯಾನ. ಮಾರನೆಯ ದಿನ ಧೈರ್ಯವಾಗಿ ಆ ಚಪ್ಪಲಿ ಧರಿಸಿ ಶಾಲೆಗೆ ಹೋದೆ. ವಿರೂಪಗೊಂಡಿದ್ದ ಆ ಚಪ್ಪಲಿಯನ್ನು ಅವಳು ಗುರುತಿಸಲಾರಳು ಎಂದುಕೊಂಡಿದ್ದೆ. ಆದರೆ, ಅದನ್ನು ನೋಡಿದ ಕೂಡಲೇ ಅವಳು ಎಲ್ಲರಿಗೂ ಗೊತ್ತಾಗುವಂತೆ ಅದು ತನ್ನದೆಂದು ಅತ್ತು ಕರೆದು ರಂಪ ಮಾಡಿ ಮೇಷ್ಟ್ರಿಗೂ ಹೇಳಿಬಿಟ್ಟಳು. ನಾನು ಮೊದಮೊದಲು ವಾದ ಮಾಡಿದವಳು, ಕೊನೆಗೆ ಸೋಲೊಪ್ಪಿಕೊಂಡು ಅವಳ ಚಪ್ಪಲಿಯನ್ನು ಅವಳಿಗೆ ವಾಪಸ್ ಕೊಟ್ಟೆ. ಜೊತೆಗೆ ಮೇಷ್ಟ್ರು ಕಡೆಯಿಂದ ಒಂದೆರಡು ಒದೆಯೂ ಬಿತ್ತು. ಅವಳು ಅದೆಷ್ಟು ಬಯ್ದಳೆಂದರೆ, ಕದ್ದದ್ದಲ್ಲದೆ ಅದರ ಬೆಲ್ಟ್ ಕುಯ್ದುಹಾಕಿದ್ದಕ್ಕೆ ಅವಳಿಂದ ಬೋನಸ್ ಬಯ್ಗುಳವೂ ಸಿಕ್ಕಿತು. ಏನೇ ಆದರೂ, ಹಿಂದಿರುಗಿಸುವಾಗ ನನಗೇನೂ ಬೇಸರವಾಗಲಿಲ್ಲ. ಮನಸ್ಸು ಸ್ವಲ್ಪ ಹೊತ್ತಾದರೂ ಆ ಚಪ್ಪಲಿಯನ್ನು ತೊಟ್ಟ ಸಮಾಧಾನವನ್ನು ಅನುಭವಿಸಿತ್ತು.

ಅಂದು ಕದ್ದಾದರೂ ತೊಟ್ಟುಕೊಂಡ ಆ ಚಪ್ಪಲಿಯ ನುಣುಪು ನನ್ನ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್