ಹೊಸಿಲ ಒಳಗೆ-ಹೊರಗೆ | ಹೆಣ್ಣುಮಕ್ಕಳ ಮನೆಗೆಲಸಕ್ಕೆ ರಜೆ ಸೌಲಭ್ಯ ಉಂಟೇ?

Woman

"ನಿಮ್ಮ ಅಮ್ಮ/ಹೆಂಡತಿ ಏನು ಮಾಡುತ್ತಾರೆ?" ಎಂದು ಕೇಳಿದರೆ ತಕ್ಷಣ ಬರುವ ಉತ್ತರ, "ಏನೂ ಇಲ್ಲ, ಮನೆಯಲ್ಲಿದ್ದಾರೆ." ಅಂದರೆ, ಅವರು ಮನೆಯಲ್ಲಿ ಮಾಡುವ ಕೆಲಸಗಳಿಗೆ ಗುರುತೇ ಇಲ್ಲ ಅಂದ ಹಾಗಾಯಿತು. ಅವರ ಶ್ರಮಕ್ಕೆ ಹಣದ ಮೌಲ್ಯ ಇಲ್ಲ, ಹಾಗಾಗಿಯೇ ಅವರ ಕೆಲಸಕ್ಕೂ ಬೆಲೆ ಇಲ್ಲ! ಒಂದು ವೇಳೆ, ಈ ಕೆಲಸಗಳನ್ನು ಅವರು ಒಂದೆರಡು ದಿನ ಮಾಡದಿದ್ದರೆ?

"ಮನೆಯೊಳಗೆ ಏನೇನು ಕೆಲಸಗಳಿರುತ್ತವೆ? ಈ ಕೆಲಸಗಳನ್ನು ಸಾಧಾರಣವಾಗಿ ಯಾರು ಮಾಡುತ್ತಾರೆ?" ಅಂತ ಕೇಳಿದರೆ ಏನೂ ಯೋಚಿಸದೆ ಉತ್ತರ ಕೊಟ್ಟೇಬಿಡಬಹುದು: "ಅಡುಗೆ ಮಾಡುವುದು, ಮುಸುರೆ ತಿಕ್ಕುವುದು, ಗುಡಿಸುವುದು, ಒರೆಸುವುದು, ಮಕ್ಕಳ ಲಾಲನೆ-ಪಾಲನೆ ಮಾಡುವುದು, ಬಟ್ಟೆ ಒಗೆಯುವುದು, ನೀರು ತರುವುದು, ಉರುವಲು ತರುವುದು, ಅಂಗಡಿಯಿಂದ ಸಾಮಾನು ತರುವುದು... ಹೀಗೇ ಇನ್ನೊಂದಷ್ಟು. ಇವೆಲ್ಲವೂ ‘ಹೆಣ್ಣುಮಕ್ಕಳ ಕೆಲಸ’ ಎಂಬುದು ಅತ್ಯಂತ ಸಹಜ ವಿಷಯ; ಅವರು ಹುಟ್ಟಿರುವುದೇ ಈ ಕೆಲಸಗಳನ್ನು ಮಾಡುವುದಕ್ಕೆ ಎಂದು ಒಪ್ಪಿಕೊಂಡು ತಲತಲಾಂತರದಿಂದ ಹಾಗೆಯೇ ನಡೀತಾ ಬಂದಿದೆ. ಇದರಲ್ಲಿ ವಿಶೇಷವೇನಿದೆ?"

ಲಿಂಗತ್ವದ ಆಳ-ಅಗಲ ಅರಸುತ್ತ ಹೋಗುವಾಗ ಮನೆಗೆಲಸದ ಬಗ್ಗೆ, ಕುಟುಂಬದ ಪಾಲನೆ-ಪೋಷಣೆ ಬಗ್ಗೆ ಮಾತಾಡದಿರುವುದು ಸಾಧ್ಯವೇ ಇಲ್ಲ. ಅಂತೆಯೇ, 'ಘನತೆಯ ಬದುಕು' ತರಬೇತಿಯಲ್ಲಿ ಈ ಕುರಿತು ಬಹಳ ದೀರ್ಘ ಮಾತುಕತೆ ನಡೆಯುತ್ತದೆ. ಮೇಲಿನ ಪ್ರಶ್ನೆಯೊಂದಿಗೆ ಚಿಂತನೆ ಶುರುವಾಗುತ್ತದೆ. ಆಮೇಲೆ ಈ ಕೆಲಸದ ಪ್ರಮಾಣವನ್ನು ಅಂದಾಜು ಮಾಡುವ ಪ್ರಯತ್ನ ನಡೆಯುತ್ತದೆ. ಉದಾಹರಣೆಗೆ, "ಮುಸುರೆ ತಿಕ್ಕುವ ಕೆಲಸ ತೆಗೆದುಕೊಳ್ಳೋಣ. ಇದಕ್ಕೆ ಹತ್ತು ಅಂಕಗಳನ್ನು ಇಟ್ಟುಕೊಂಡರೆ ಯಾರು, ಎಷ್ಟು ಈ ಕೆಲಸ ಮಾಡುತ್ತಾರೋ ಅದರ ಅಂದಾಜಿನಂತೆ ಹತ್ತು ಅಂಕಗಳನ್ನು ವಿಭಾಗಿಸೋಣ," ಅಂತ ಕೇಳಿದರೆ, ತಕ್ಷಣ ಅವರವರ ಅನುಭವಗಳ ಆಧಾರದ ಮೇಲೆ ಸಹಭಾಗಿಗಳು ಉತ್ತರ ಕೊಡತೊಡಗುತ್ತಾರೆ. “ಹತ್ತಕ್ಕೆ ಹತ್ತೂ ಹೆಣ್ಣುಮಕ್ಕಳಿಗೆ..." "ಇಲ್ಲ, ಇಲ್ಲ, ಈ ಕೆಲಸ ಮಾಡುವ ಗಂಡುಮಕ್ಕಳೂ ಇದ್ದಾರೆ; ಎರಡು ಅಂಕವಾದರೂ ಅವರಿಗೆ ಹೋಗಬೇಕು..." "ಐದು... ಐದು ಆಗಬೇಕು...” ಹೀಗೆ ಪ್ರತಿಕ್ರಿಯೆಗಳು, ವಾಗ್ವಾದಗಳು ಬೆಳೆಯುತ್ತವೆ.

Image
Woman 2
ಸಾಂದರ್ಭಿಕ ಚಿತ್ರ

"ಇದು ಒಬ್ಬಿಬ್ಬರ ಮನೆಯ ಕತೆ ಅಲ್ಲ ಅಥವಾ ಒಂದು ಆದರ್ಶಮಯ ಚಿತ್ರಣವೂ ಅಲ್ಲ. ನಮ್ಮ ಸುತ್ತಮುತ್ತ ನೋಡಿಕೊಂಡು ಒಂದು ಸಹಮತಕ್ಕೆ ಬರಬೇಕಾಗುತ್ತದೆ," ಎಂಬ ವಿನಂತಿ ಮೇರೆಗೆ, ಹೆಣ್ಣಿಗೆ 9, ಗಂಡಿಗೆ 1 ಅಂಕ ಎಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ. ಇದೇ ರೀತಿ ಪ್ರತಿಯೊಂದು ವಿಚಾರವೂ ಘನವಾದ ಚರ್ಚೆಯೊಂದಿಗೆ ಸಾಗಿ, ಅಂಕಗಳು ನಿರ್ಧಾರವಾಗುತ್ತವೆ. ಈ ಮೂಲಕ, ಈ ಕೆಳಗೆ ತೋರಿಸಿರುವಂತಹ ಟೇಬಲ್‌ವೊಂದು ಸಿದ್ಧವಾಗುತ್ತದೆ. ಈ ಚಿತ್ರಣವನ್ನು ನೋಡುತ್ತ, ಸಹಭಾಗಿಗಳೊಂದಿಗೆ ಒಳನೋಟಗಳನ್ನು ಗುರುತಿಸುತ್ತ ಹೋಗುತ್ತೇವೆ. (ಸಹಭಾಗಿಗಳ ಸಾಮಾಜಿಕ, ಆರ್ಥಿಕ ಹಿನ್ನೆಲೆಗೆ ತಕ್ಕಂತೆ ವಿಷಯಗಳು ಸ್ವಲ್ಪ ವ್ಯತ್ಯಾಸ ಆಗುತ್ತವೆ. ಉರುವಲು ತರುವುದು, ನೀರು ಹಿಡಿಯುವುದು ಎಲ್ಲರಿಗೂ ಅನ್ವಯಿಸದೆ ಹೋಗಬಹುದು; ಅಂತಹ ಸಂದರ್ಭಗಳಲ್ಲಿ ಆಯಾಯ ಹಿನ್ನೆಲೆಗೆ ತಕ್ಕಂತೆ ವಿಷಯಗಳನ್ನು ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳುತ್ತೇವೆ):
 

ವಿಷಯ ಗಂಡು ಹೆಣ್ಣು
ಮುಸುರೆ ತಿಕ್ಕುವುದು 1 9
ಅಡುಗೆ ಮಾಡುವುದು 2 8
ಗುಡಿಸುವುದು  3 7
ನೆಲ ಒರೆಸುವುದು  1 9
ಮಗುವಿನ ಲಾಲನೆ ಪಾಲನೆ  2 8
ಬಟ್ಟೆ ಒಗೆಯುವುದು 2 8
ನೀರು ತರುವುದು 4 6
ಉರುವಲು ತರುವುದು 4 6
ಅಂಗಡಿಯಿಂದ ಸಾಮಾನು ತರುವುದು 4 6
ಆಹಾರ ಸೇವನೆ  6 4
ಶಿಕ್ಷಣದ ಅವಕಾಶ  7 3
ಆಟ ಮತ್ತು ಮನರಂಜನೆ  8 2


"ಮನೆಗೆಲಸ ಹೆಣ್ಣುಮಕ್ಕಳೇ ಹೆಚ್ಚು ಮಾಡುತ್ತಾರೆ..." - ಮೇಲಿನ ಪಟ್ಟಿ ನೋಡಿದ ತಕ್ಷಣ ಬರುವ ಮೊದಲ ಪ್ರತಿಕ್ರಿಯೆ ಇದು. ನಿಜ, ಆದರೆ ಇದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೇ. ಗೊತ್ತಿರುವ ಪರಿಸ್ಥಿತಿಯ ಚಿತ್ರಣವನ್ನು ಹಿಡಿದಿಟ್ಟಿದ್ದೇವೆ. ಇದನ್ನು ನೋಡುವಾಗ ಏನೇನು ಅನಿಸುತ್ತದೆ ಎಂಬ ಚಿಂತನೆ ಒಂದಷ್ಟು ಪ್ರಶ್ನೆಗಳ ಜೊತೆಗೆ ಮುಂದುವರಿಯುತ್ತದೆ.

ಇವು ಎಲ್ಲವೂ ಕೆಲಸಗಳೇ ತಾನೇ, ಇವನ್ನು ಮಾಡಲು ಶ್ರಮ, ಸಮಯ ಬೇಕೇ ಬೇಕು ತಾನೇ? ಆದರೂ ಈ ಕೆಲಸಗಳಿಗೆ 'ಕೆಲಸ’ ಅನ್ನುವ ಗುರುತು ಇದೆಯೇ? "ನಿಮ್ಮ ಅಮ್ಮ/ಹೆಂಡತಿ ಏನು ಮಾಡುತ್ತಾರೆ?" ಅಂತ ಕೇಳಿದರೆ ಸಾಧಾರಣವಾಗಿ ತಕ್ಷಣಕ್ಕೆ ಬರುವ ಉತ್ತರ, "ಏನೂ ಇಲ್ಲ, ಮನೆಯಲ್ಲಿದ್ದಾರೆ." ಅಂದರೆ, ಈ ಕೆಲಸಗಳಿಗೆ ಗುರುತೇ ಇಲ್ಲ ಅಂದ ಹಾಗಾಯಿತು. ಈ ಶ್ರಮಕ್ಕೆ ಹಣದ ಮೌಲ್ಯ ಇಲ್ಲ. ಅದಕ್ಕಾಗಿ ಇದಕ್ಕೆ ಬೆಲೆಯೇ ಇಲ್ಲ. ಈ ಕೆಲಸಗಳನ್ನು ಮಾಡಬೇಕಾದವರು ಒಂದೆರಡು ದಿನ ಮಾಡದೆಹೋದರೆ ಏನಾಗಬಹುದು ಅಂತ ಯೋಚಿಸಿದರೆ ಮನೆಯ ಸ್ಥಿತಿ ಹೇಗಾಗಬಹುದು ಅಂತ ಕಲ್ಪಿಸಿಕೊಳ್ಳಬಹುದು. ಆದರೂ ಈ ಕೆಲಸಗಳಿಗೆ ಗುರುತೂ ಇಲ್ಲ, ಗೌರವವೂ ಇಲ್ಲ. "ದಿನವಿಡೀ ಮನೆಯಲ್ಲಿ ಕುಳಿತು ಏನು ಮಾಡುತ್ತೀಯ!" ಎಂಬ ಟೀಕೆ ಬೇರೆ ಕೇಳಿಸಿಕೊಳ್ಳಬೇಕಾಗುತ್ತದೆ.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೃದಯವಂತಿಕೆಯ ಚಂದದ ಮುಂದೆ ಕಪ್ಪು ಬಣ್ಣ, ಮೊಂಡು ಮೂಗು ಯಾವ ಲೆಕ್ಕ?

ಹೊರಗೆ 'ದುಡಿದು ಬರುವ’ ಬರುವ ಗಂಡಸರನ್ನು ಮನೆಯಲ್ಲಿ ದಿನವಿಡೀ ಏನೂ ಮಾಡದೆ ಇರುವ ಮಹಿಳೆಯರು (ಹಾಗೆ ಅಂದುಕೊಳ್ಳಲಾಗಿದೆ) ಚೆನ್ನಾಗಿ ಉಪಚರಿಸಬೇಕು, ಸಿಟ್ಟಿಗೇಳದಂತೆ ನೋಡಿಕೊಳ್ಳಬೇಕು, ವಿರಾಮ ಒದಗಿಸಬೇಕು, ಮಕ್ಕಳು ಅವನಿಗೆ ರಗಳೆ ಮಾಡದಂತೆ ನೋಡಿಕೊಳ್ಳಬೇಕು. ಅವನು ದುಡಿದರೆ ತಾನೇ ಮನೆಮಂದಿಯ ಬದುಕು ಸಾಗುವುದು? "ಅವಳು ದಿನವಿಡೀ ಏನು ತಾನೇ ಮಾಡುತ್ತಾಳೆ? ಅಡುಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದೆಲ್ಲಾ ಒಂದು ಕೆಲಸವೇ? ತನ್ನ ಮನೆಗಾಗಿ, ಮಕ್ಕಳಿಗಾಗಿ ತಾನೇ ಮಾಡುವುದು?" ಇಂತಹ ಧೋರಣೆಗಳು ಇಂದಿಗೂ ಸಾಕಷ್ಟು ಕಂಡುಬರುತ್ತವೆ. ಕಣ್ಣಿಗೆ ಕಾಣದ ದುಡಿಮೆ ಇದು. ಇದರ ಜೊತೆಗೆ ಒಂದಷ್ಟು ಹೆಚ್ಚಿನ ಸಂಪಾದನೆಗಾಗಿ ಹೊರಗೆ ದುಡಿಯುವ ಮಹಿಳೆಯರೂ ಗಣನೀಯ ಪ್ರಮಾಣದಲ್ಲಿ ಇದ್ದಾರೆ, ಇವರಿಗೂ ಮನೆಗೆಲಸದ ಜವಾಬ್ದಾರಿ ತಪ್ಪಿದ್ದಲ್ಲ. ಇಂತಹವರ ಮಟ್ಟಿಗೆ ಕೆಲಸ ಎರಡು ಪಟ್ಟು.

ಮನೆಗೆಲಸಕ್ಕೆ ರಜೆ ಇದೆಯೇ? ಎಲ್ಲಿಯ ರಜೆ? ಭಾನುವಾರ ಎಲ್ಲರಿಗೂ ರಜೆಯಾದರೆ ಹೆಣ್ಣುಮಕ್ಕಳಿಗೆ ಅಂದು ಹೆಚ್ಚಿನ ಕೆಲಸ. ಈ ಕೆಲಸಕ್ಕೆ ಸಂಬಳ ಇದೆಯೇ? ಸಂಬಳ ಇದ್ದಿದ್ದರೆ ಹೀಗಿರುತ್ತಿತ್ತೇ? ಈ ಕೆಲಸಕ್ಕೆ ನಿವೃತ್ತಿ ಇದೆಯೇ? ಬಹುಶಃ ನಿವೃತ್ತಿ ಒಂದೇ ಬಾರಿ ಎನ್ನಿಸುತ್ತದೆ!

ಈ ವಿಚಾರಗಳು ಚರ್ಚೆ ಇಲ್ಲದೆ ಸಾಗುವುದಿಲ್ಲ. ಬಹಳ ವಾಗ್ವಾದಗಳು ನಡೆಯುತ್ತವೆ. "ಮಕ್ಕಳ ಲಾಲನೆ-ಪಾಲನೆಯನ್ನು ಪುರುಷರೂ ಮಾಡುತ್ತಾರೆ," ಅನ್ನುತ್ತಾರೆ; "ಉಚ್ಚೆ, ಕಕ್ಕ ಬಟ್ಟೆ ಮುಟ್ಟುತ್ತಾರೆಯೇ? ಹಿಡಿದಿಟ್ಟು ಊಟ ಮಾಡಿಸುತ್ತಾರೆಯೇ?" ಅಂದಾಗ ದನಿ ತಗ್ಗುತ್ತದೆ. "ಪುರುಷರು ಬಟ್ಟೆ ಒಗೆದುಕೊಳ್ಳುತ್ತಾರಲ್ಲ?" ಅನ್ನುವ ಪ್ರಶ್ನೆಯನ್ನು ಸಹಭಾಗಿಗಳು ಸಾಧಾರಣವಾಗಿ ಎತ್ತುತ್ತಾರೆ. ಹೌದು, ಆದರೆ ಮನೆಯವರೆಲ್ಲರ ಬಟ್ಟೆ ಒಗೆಯುತ್ತಾರೆಯೇ? ಬಹಳ ಕಡಿಮೆ. ಕೆಲವೊಮ್ಮೆ ಹಾಸ್ಟೆಲ್‍ನಲ್ಲಿ ಇರುವ ಮಕ್ಕಳು ವಾರದ ಕೊನೆಯಲ್ಲಿ, ಒಗೆಯುವ ಬಟ್ಟೆಯನ್ನು ಮನೆಗೆ ತಂದು ರಾಶಿ ಹಾಕುವುದು ಕೂಡ ಇದೆ. ಇವೆಲ್ಲವನ್ನೂ ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

Image
Woman 4
ಸಾಂದರ್ಭಿಕ ಚಿತ್ರ

ನೀರು, ಉರುವಲು ತರುವುದು, ಅಂಗಡಿಗೆ ಹೋಗುವುದು – ಇಂತಹ ಕೆಲಸಗಳಲ್ಲಿ ಪುರುಷರ ಸಂಖ್ಯೆ ಸ್ವಲ್ಪ ಹೆಚ್ಚು ಕಾಣುತ್ತದೆ. ಯಾಕಿರಬಹುದು? ಎಲ್ಲಿ ನಾಲಕ್ಕು ಗೋಡೆಗಳ ದಾಟಿ ಹೋಗುವ ಅವಕಾಶ ಇದೆಯೋ, ಎಲ್ಲಿ ಹಣಕಾಸಿನ ವ್ಯವಹಾರ ಇದೆಯೋ ಅಲ್ಲಿ ಪುರುಷರ ಭಾಗವಹಿಸುವಿಕೆ ಸ್ವಲ್ಪ ಹೆಚ್ಚಾಗಿರುವುದು ಸಹಜವೇ.

ಮನೆಗೆಲಸದ ಬಗ್ಗೆ ಮಾತಾಡುವಾಗ, ಪುರುಷರಿಗೆ ಹೊರಗೆ ಇರುವ ಕೆಲಸದ ಹೊಣೆಗಾರಿಕೆಯನ್ನು, ಒತ್ತಡಗಳನ್ನು ಅಲ್ಲಗೆಳೆಯುವ ಯಾವುದೇ ಇರಾದೆ ಇಲ್ಲ. ಅವು ಮುಖ್ಯವೇ. ಜೊತೆಗೆ, ಅವಕ್ಕೆ ಸಲ್ಲಬೇಕಾದ ಗೌರವ ಸಲ್ಲಲೇಬೇಕು, ಈಗಾಗಲೇ ಸಲ್ಲುತ್ತಿದೆ. ಹಾಗೆಯೇ, ಹೊರಗಿನ ಯಾವುದೇ ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೆಣ್ಣು, ಗಂಡು, ಟ್ರಾನ್ಸ್‌ಜೆಂಡರ್ – ಎಲ್ಲರಲ್ಲೂ ಇದೆ ಎಂಬುದನ್ನೂ ಒಪ್ಪಿಕೊಳ್ಳಬೇಕಿದೆ.

ಇವೆಲ್ಲವನ್ನೂ ನೋಡುವಾಗ ಗಮನ ಸೆಳೆಯುವುದು ಪಟ್ಟಿಯಲ್ಲಿನ ಕೊನೆಯ ಮೂರು ಸಂಗತಿಗಳು. ಆಹಾರ ಸಿಗುವಲ್ಲಿ, ಶಿಕ್ಷಣ ಪಡೆಯುವಲ್ಲಿ, ಮನರಂಜನೆ ಅನುಭವಿಸುವಲ್ಲಿ ಮಾತ್ರ ಪುರುಷರಿಗೆ ಹೆಚ್ಚಿನ ಅವಕಾಶ ಇದೆ. ಇದು ನ್ಯಾಯವೇ ಎಂದು ಯೋಚಿಸಬೇಕಾಗಿದೆ.

ಒಟ್ಟಿನಲ್ಲಿ, ಮನೆಗೆಲಸಕ್ಕೆ ಸಿಗಬೇಕಾದ ಮಾನ್ಯತೆ ಸಿಗಬೇಕು. ಈ ಕೆಲಸ ಮಹಿಳೆಯರಿಗೇ ಸೀಮಿತ ಎಂಬ ಚಿಂತನೆ ಹೋಗಬೇಕು. ಈ ಕೆಲಸವನ್ನು ಹೆಣ್ಣು-ಗಂಡು ಯಾರು ಕೂಡ 'ತಮ್ಮದೇ ಕೆಲಸ’ ಎಂಬಂತೆ ಒಪ್ಪಿಕೊಂಡು, ಹಂಚಿಕೊಂಡು ಮಾಡುವಂತೆ ಆಗಬೇಕು. ಬೆಳೆಯುವ, ಆನಂದಿಸುವ ಅವಕಾಶ ಎಲ್ಲರಿಗೂ ಸಿಗಬೇಕು ಅನ್ನುವುದೇ ಈ ಚರ್ಚೆಯ ಆಶಯ.

ನಿಮಗೆ ಏನು ಅನ್ನಿಸ್ತು?
8 ವೋಟ್