ಕರುಣೆಯ ಕೃಷಿ | ಟೆನ್ಜಿನ್ ತ್ಸುನದು ಕವಿತೆ 'ನಾನು ದಣಿದಿದ್ದೇನೆ'

ನಾನು ದಣಿದಿದ್ದೇನೆ,

ನಾನು ದಣಿದಿದ್ದೇನೆ ಮಾರ್ಚ್ ಹತ್ತರ ಆಚರಣೆ* ಮಾಡುತ್ತ

ಧರ್ಮಶಾಲಾ*ದ ಗುಡ್ಡಗಳಿಂದ ಚೀರಾಡುತ್ತ.

 

ನಾನು ದಣಿದಿದ್ದೇನೆ,

ನಾನು ದಣಿದಿದ್ದೇನೆ ಹಾದಿಬದಿ ಸ್ವೆಟರುಗಳನ್ನು ಮಾರಾಟ ಮಾಡುತ್ತ

ನಲ್ವತ್ತು ವರ್ಷಗಳ ಕಾಲ

ಧೂಳು, ಎಂಜಲುಗಳ ನಡುವೆ ಕುಳಿತುಕೊಳ್ಳುತ್ತ.

 

ನಾನು ದಣಿದಿದ್ದೇನೆ

ಅನ್ನ, ದಾಲ್ ತಿನ್ನುತ್ತ

ಕರ್ನಾಟಕದ ಜಂಗಲ್ಲುಗಳಲ್ಲಿ ದನ ಕಾಯುತ್ತ.

 

ನಾನು ದಣಿದಿದ್ದೇನೆ

ಮಂಜು-ತಿಲಾ*ದ ಕೊಳಚೆಯಲ್ಲಿ

ನನ್ನ ಧೋತಿಯ ಎಳೆದಾಡುತ್ತ.

 

ನಾನು ದಣಿದಿದ್ದೇನೆ, ನಾನು ನೋಡೇ ಇಲ್ಲದ

ನನ್ನ ನಾಡಿಗಾಗಿ ಹೋರಾಡುತ್ತ.

* * *

* ಮಾರ್ಚ್ ಹತ್ತು: ಟಿಬೆಟಿಯನ್ ಕ್ರಾಂತಿ ದಿನ

* ಧರ್ಮಶಾಲಾ: ವಲಸೆಯಲ್ಲಿರುವ ಟಿಬೆಟಿಯನ್ ಸರಕಾರದ ಕೇಂದ್ರ

* ಮಂಜು-ತಿಲಾ: ದೆಹಲಿಯ ಟಿಬೆಟಿಯನ್ ಕಾಲನಿ

* * * * *

“Every beautiful poem is an act of resistance” - Mahmoud Darwish

Image

ಹಲವಾರು ನಗರಗಳಲ್ಲಿ ಸ್ವೆಟರ್ ಮಾರಾಟದ ಹಾಕರ್ಸ್ ಝೋನ್ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ನಾವು ಅನೇಕರು ಚಳಿಗಾಲ ಬಂದಾಗ ಅಲ್ಲಿ ಖರೀದಿ ಮಾಡುತ್ತೇವೆ. ಚೌಕಾಸಿ, ಖರೀದಿ ಮುಗಿಸಿ ಮುನ್ನಡೆಯುವ ನಮಗೆ ಆ ಸ್ವೆಟರ್ ಅಂಗಡಿಗಳ ವಲಸಿಗ ಟಿಬೆಟಿಯನ್ನರ ಕುರಿತಾಗಿ ಅತ್ಯಲ್ಪ ಅರಿವು ಇರುತ್ತೆ. ಆದರೆ, ಅವರ ವಲಸೆಯ ಹಿಂದಿರುವ ಅಗಾಧ ಸಂಕಟ, ಅವರ ಪ್ರಸ್ತುತ ವಲಸಿಗ ಬದುಕಿನ ಸಂಕಷ್ಟಗಳು, ತಮ್ಮ ತಾಯಿನಾಡಿನ ಕುರಿತಾಗಿ ಅವರು ನಡೆಸಿರುವ ಪ್ರತಿರೋಧಗಳ ಕುರಿತಾಗಿ ಏನೇನೂ ತಿಳಿದಿರುವುದಿಲ್ಲ. ತಿಳಿಯುವುದಕ್ಕೆ ಪ್ರಯತ್ನಿಸುವವರು ಕೂಡ ಬಲು ವಿರಳ. ಹಲವು ವರುಷಗಳಿಂದ ಇಂತಹ ಅನೇಕ ಟಿಬೆಟಿಯನ್ ಸ್ವೆಟರ್ ಅಂಗಡಿಗಳಿಗೆ ಹೋಗಿದ್ದರೂ, ಅವರ ವಲಸೆಯ, ನಿರ್ವಸತಿಯ ಸಮಸ್ಯೆಗಳ ಕುರಿತು ಎಳ್ಳಷ್ಟೂ ಮಾಹಿತಿ ಇರದವರಲ್ಲಿ ನಾನೂ ಒಬ್ಬ. ಬಹುಶಃ ಸಂವೇದನಾಶೀಲತೆಯ ಈ ಕೊರತೆಯಿಂದಾಗಿಯೇ ಟೆನ್ಜಿನ್ ತ್ಸುನದು ಅವರ 'ನಾನು ದಣಿದಿದ್ದೇನೆ' ಕವನ ನನ್ನನ್ನು ಸ್ವನಿರೀಕ್ಷಣೆಗೆ ತೊಡಗಿಸಿತು.

ಟೆನ್ಜಿನ್ ತ್ಸುನದು ಓರ್ವ ದಣಿವಿರದ ಹೋರಾಟಗಾರ. ಟಿಬೆಟ್ ದೇಶದ ಮೇಲೆ ಚೀನಾ ನಡೆಸುತ್ತ ಬಂದಿರುವ ಅಕ್ರಮ ಆಳ್ವಿಕೆ, ಆಕ್ರಮಣಗಳನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ವಿರೋಧಿಸುತ್ತ ಬಂದಿರುವ ದಿಟ್ಟ ಕಾರ್ಯಕರ್ತ. ಅದಕ್ಕಾಗಿ ಹಲವು ಬಾರಿ ಭಾರತದ ಜೈಲುಗಳ ಅನುಭವವನ್ನೂ ಅವರು ಪಡೆದಿದ್ದಾರೆ. ಟೆನ್ಜಿನ್ ತ್ಸುನದು ಅವರ ಕಾವ್ಯ, ಬರವಣಿಗೆ, ಸಾರ್ವಜನಿಕ ಉಪನ್ಯಾಸ ಮತ್ತಿತರ ಚಟುವಟಿಕೆಗಳೆಲ್ಲವೂ ಟಿಬೆಟ್ ದೇಶದ ಮೇಲೆ ಚೀನಾ ನಡೆಸುತ್ತಿರುವ ದಬ್ಬಾಳಿಕೆಯ ಕುರಿತಾಗಿ ಜನಾಭಿಪ್ರಾಯ ವಿಸ್ತರಿಸುವ ಗುರಿ ಹೊಂದಿರುತ್ತವೆ.

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಗೂಗಿ ವಾ ತಿಯೊಂಗೋ ಕವಿತೆ 'ಇರುಳ ಕಳೆವ ಬೆಳಗು'

ಟಿಬೆಟ್ ಸ್ವಾತಂತ್ರ ಸಂಗ್ರಾಮದ ಕುರಿತಾಗಿ ಟೆನ್ಜಿನ್ ಬರೆದಿರುವ ಪುಸ್ತಕದ ಹೆಸರು 'ಸೆಮ್ ಶೂಕ್' – ಅಂದರೆ, ಸತ್ಯ ಸ್ಥಾಪನೆಗೆ ಬೇಕಾದ ಧೈರ್ಯ. ಈ ಸಂಗ್ರಹದಲ್ಲಿ ಅವರು ಸೂಚಿಸಿರುವಂತೆ, ಅವರ ಜೀವನದ ಧ್ಯೇಯವೇ ಟಿಬೆಟ್ ದೇಶದ ಸ್ವಾತಂತ್ರ್ಯಕ್ಕಾಗಿ ಅಗತ್ಯ ತ್ಯಾಗ ಮಾಡುತ್ತ, ಅವಶ್ಯ  ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವುದು. ಟೆನ್ಜಿನ್ ಅವರ ಧ್ಯೇಯ ಎಲ್ಲ ಬಗೆಯ ಹೋರಾಟಗಾರರ ಧ್ಯೇಯವೇ ಎನ್ನುವುದು ನಿಜ. ನನ್ನನ್ನು ಕಾಡಿದ ಸಂಗತಿಯೆಂದರೆ, ನನ್ನ ಅನುಭವವಿಶ್ವದಲ್ಲಿ ಬರುವ ಜನರೊಂದಿಗಿನ ಸಂಪರ್ಕ-ಸಂವಹನದ ಬದಲಾಗಿ ಕಾವ್ಯ-ಬರಹಗಳ ಮೂಲಕ ಇವೆಲ್ಲವೂ ನನಗೆ ವೇದ್ಯವಾಗಬೇಕಾದ ಪರಿಸ್ಥಿತಿ... ನನ್ನ ಪರಿಸ್ಥಿತಿ!

ಈ ಪರಿಸ್ಥಿತಿಯ ಕುರಿತಾಗಿ ಯೋಚಿಸುತ್ತಲಿರುವಾಗ ನನಗೆ ಎರಡು ವಿಷಯಗಳು ಗಮನಾರ್ಹವೆನಿಸಿದವು. ಮೊದಲನೆಯದು, ಅನ್ಯರ ಕುರಿತಾಗಿ ನಮ್ಮಲ್ಲಿ ಉಳಿದೇ ಇರುವ ಸಂವೇದನಾಶೀಲತೆಯ ಕೊರತೆ ವೈಯಕ್ತಿಕ ನಿರ್ಲಕ್ಷ್ಯವಾಗಿರದೆ ನಮ್ಮ ಸಾಂಸ್ಕೃತಿಕ ವರ್ತನೆಯ ಭಾಗವೇ ಆಗಿದೆಯೆನ್ನುವುದು. ಇದು ನಮ್ಮ ಸಂಸ್ಕೃತಿಯನ್ನೂ ಸೇರಿಸಿಕೊಂಡು ಅನೇಕ ಸಮಾಜದಲ್ಲಿ ಸಾರ್ವತ್ರಿಕವಾಗಿರುವ ಸಂವೇದನಾರಾಹಿತ್ಯ.

ಪ್ರತಿ ಸಂಸ್ಕೃತಿಯೂ ತನ್ನ ಅಸ್ಮಿತೆಯ ಕುರಿತಾಗಿ ವಹಿಸುವ ಅತೀವ ಕಾಳಜಿಯಿಂದಾಗಿ ಬಹುಶಃ ಜನರಲ್ಲಿ ಈ ಸಂವೇದನಾರಾಹಿತ್ಯ ಅಧಿಕವಾಗುತ್ತದೆ. ಅಥವಾ, ನಾವು-ನಮ್ಮೊಳಗೆ ಎಂಬ ಅಂತರ್ಮುಖತೆ, ಸ್ವ-ಲೋಲುಪತೆಯು ಯಾವುದೇ ಸಂಸ್ಕೃತಿಯೂ ಅತಿಯಾಗಿ ಪ್ರೋತ್ಸಾಹಿಸುವ, ಅಂತೆಯೇ ಆಯಾ ಸಂಸ್ಕೃತಿಯ ಅತ್ಯಂತ ಕೀಳು ಲಕ್ಷಣವೆನಿಸುತ್ತದೆ. ಈ ಸ್ವ-ಲೋಲುಪತೆ ಮತ್ತು ಅದರ ಪರಿಣಾಮವಾದ ಸಂವೇದನಾರಾಹಿತ್ಯದಿಂದಾಗಿಯೇ ಅನ್ಯರ ಕುರಿತಾಗಿ ಅಜ್ಞಾನ ಮಾತ್ರವಲ್ಲದೆ ಪೂರ್ವಗ್ರಹಗಳನ್ನು, ದ್ವೇಷಾಸೂಯೆಗಳನ್ನು, ನಿರ್ಲಕ್ಷವನ್ನೂ ಸಕ್ರಿಯವಾಗಿ ಬೆಳೆಸಲಾಗುತ್ತದೆ. ಸ್ವಂತಿಕೆಯ ಕುರಿತ ಆತಂಕದಿಂದಾಗಿ ಸಂಸ್ಕೃತಿಗಳು ಅನ್ಯರನ್ನು ಅಮಾನ್ಯರನ್ನಾಗಿಸುತ್ತಾರೆ. ಅನ್ಯರ ಕುರಿತಾದ ಈ ನಿರಾಸಕ್ತಿ ಮತ್ತು ಉದಾಸೀನತೆಯಿಂದಾಗಿಯೇ ಪ್ರತಿ ಸಮಾಜದಲ್ಲಿಯೂ ಅನ್ಯರ ಕುರಿತಾದ ದ್ವೇಷ-ಹಿಂಸೆಗಳನ್ನು ಜನರು ಸಹಜವೆಂಬಂತೆ ಒಪ್ಪಿಕೊಳ್ಳುತ್ತಾರೆ.

ಎರಡನೆಯದು, ಅನ್ಯರ ಕುರಿತಾದ ಇಂತಹ ನಿರಾಸಕ್ತಿಯನ್ನು ಹೋಗಲಾಡಿಸುವಲ್ಲಿ ಕಾವ್ಯದ ಪಾತ್ರದ ಕುರಿತಾದದ್ದು. ಅನುಭವ ವಿಶ್ವ ಮೂಡಿಸದ ಸಂವೇದನಾಶೀಲತೆಯನ್ನು ಮೂಡಿಸಲು ಕಾವ್ಯಕ್ಕೆ-ಕಲೆಗೆ ಸಾಧ್ಯ. ಹಾಗಾಗಿಯೇ, ಕಲೆ-ಸಾಹಿತ್ಯದಿಂದ ಸಾಮಾಜಿಕ ಜವಾಬ್ದಾರಿಯ ಅಪೇಕ್ಷೆ ಒಪ್ಪಬೇಕಾದುದೇ ಆಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180