ಗಾಯ ಗಾರುಡಿ | ಮಾತುಗಳು ಮರಣಿಸುತ್ತಿರುವ ಕಾಲದ ಮಾತುಗಳು

ಲೇಖಕರ ಟಿಪ್ಪಣಿ: ಈ ‘ಗಾಯ ಗಾರುಡಿ’ ನನ್ನದೊಂದು ಪದ್ಯದ ತಲೆಬರಹ. ಜಾತಿಯ ಕಾರಣಕ್ಕೆ ಅನುಭವಿಸಿದ ಗಾಯವು ನೆನಪಾಗಿ ಕೊಲ್ಲುವ, ವರ್ತಮಾನದಲ್ಲೂ ಕೀವುದುಂಬಿದಂತೆ ಜುಂವ್ಗುಡುವ, ಅದೆಷ್ಟು ಮುಲಾಮು ಹಚ್ಚಿದರೂ ಸತ್ತ ನಾಯಿಯ ವಾಸನೆಯಂತೆ ಕಾಡುವ ಗಾರುಡಿ ಅದು. ಇನ್ನು, ಇಲ್ಲಿ ನಿರೂಪಿಸಲು ಉಳಿದಿರುವುದು ಗಾಯಗೊಂಡವನ ಪ್ರಶ್ನೆಗಳಷ್ಟೇ

ಬಂಧುಗಳೇ...

ಮಾತುಗಳು ಮರಣಿಸುತ್ತಿರುವ ಕಾಲದಲ್ಲಿ ಮಾತುಗಳನ್ನೇ ಜೀವ ಉಳಿಸುವ ಸಂಜೀವಿನಿಯಂತೆ ಬಳಸಬೇಕಾದ ವೈರುಧ್ಯ ಎದುರಾಗಿದೆ. ಮಾನವ ಸಂಬಂಧಗಳನ್ನು ಉಳಿಸಿಕೊಳ್ಳುವ, ಆ ಮೂಲಕ ಸುತ್ತಲಿನ ಪರಿಸರವನ್ನು ಕಲುಷಿತವಾಗದಂತೆ ಕಾಪಿಡುವ ಮಾನವಪ್ರೇಮಿಗಳ ಎದುರು ಕಡಿಮೆ ಸಂಖ್ಯೆಯಲ್ಲಿರುವ ಮನುಷ್ಯ ವಿರೋಧಿಗಳು ಹೆಚ್ಚು ಶಕ್ತಿಶಾಲಿಗಳಂತೆ ಕಾಣುತ್ತಿದ್ದಾರೆ. ಇಲ್ಲಿವರೆಗೆ ನಮ್ಮ ಸಮಾಜ ನಂಬಿಕೊಂಡು ಬಂದಿದ್ದ ಮೌಲ್ಯಗಳ ಒಳಗಿನಿಂದಲೇ ಅಪಮೌಲ್ಯಗಳು ನುಸುಳಿ ದೊಡ್ಡ ಆಕಾರ ಪಡೆಯುತ್ತಿವೆ. ಯಾವುದರ ಬಗ್ಗೆ ಬುದ್ಧ, ಬಸವ, ಬಾಬಾ ಸಾಹೇಬರು ಎಚ್ಚರಿಸಿದ್ದರೋ, ಅವುಗಳು ನಮ್ಮ ಮೈಮರೆವಿನಿಂದ ನಮ್ಮನ್ನೇ ಕೊಲ್ಲುವ ಆಯುಧಗಳಾಗಿ ಮಾರ್ಪಾಡಾಗಿವೆ. ಧರ್ಮ, ಜಾತಿ ಬಗೆಗಿನ ನಂಬಿಕೆಗಳು ವೈಯಕ್ತಿಕ ನೆಲೆಯಿಂದ ಸಾರ್ವಜನಿಕ ನೆಲೆಗೆ ಜಿಗಿದು ಮನುಷ್ಯರ ನಡುವೆ ಗೋಡೆಗಳನ್ನು ನಿರ್ಮಿಸುತ್ತಿವೆ. ಶೋಷಿತರು ಮತ್ತು ಶೋಷಕರ ನಡುವಿನ ಅಂತರ ಹೆಚ್ಚುತ್ತಿದ್ದಂತೆಯೇ ಎರಡೂ ಕಡೆಯ ಸಂಖ್ಯೆಯೂ ವೃದ್ಧಿಸುತ್ತಿದೆ. ಸ್ವಾತಂತ್ರೋತ್ತರ ಭಾರತವನ್ನು ಕೈಹಿಡಿದು ನಡೆಸಬೇಕಿದ್ದ ಪ್ರಜಾತಂತ್ರ ತನ್ನನ್ನೇ ತನ್ನಿಂದ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ನ್ಯಾಯ ವ್ಯವಸ್ಥೆ ಮಕಾಡೆ ಮಲಗಿದೆ. ಕೊಲೆ-ಸುಲಿಗೆಗಳು, ಅತ್ಯಾಚಾರ-ದೌರ್ಜನ್ಯಗಳು ಮೌಲ್ಯಗಳ ಮುಸುಕು ಹೊದ್ದು ನಿಧಾನಕ್ಕೆ ಬಲಿಯುತ್ತಿವೆ. ನಾವು ನಡೆಯಬೇಕಾದ ದಾರಿಯಲ್ಲಿ ದೊಡ್ಡ ಡ್ರೈನೇಜುಗಳನ್ನು ತೋಡಿದಂತೆ ಅಕ್ಕಪಕ್ಕದಲ್ಲಿಯೇ ದ್ವೀಪಗಳು ನಿರ್ಮಾಣಗೊಳ್ಳುತ್ತಿವೆ. ನಾವು ಪರಸ್ಪರ ಸಂವಹನಕ್ಕೆ ಬಳಸಿಕೊಳ್ಳಬೇಕಾದ ಅಕ್ಷರಗಳು ನಮ್ಮ ನಡುವಿನ ಕಂದಕವನ್ನು ಹೆಚ್ಚೆಚ್ಚು ಅಗೆದು ಅಗಲಗೊಳಿಸುವ ಗುದ್ದಲಿಗಳ ಹಾಗೆ ಕೆಲಸ ಮಾಡುತ್ತಿವೆ.

ಈ ಸಂದರ್ಭದಲ್ಲಿ...

ಮಾತುಗಳು ನಮ್ಮನ್ನೆಲ್ಲ ಉಳಿಸಬಹುದೇನೋ ಅನ್ನುವ ಆಸೆಯಿಂದ ‘ಗೆರೆ ದಾಟಬಾರದ’ ನಮ್ಮಂಥವರು ಮಾತಿಗೆ ತೊಡಗಿದ್ದೇವೆ. ಅದರಲ್ಲೂ, ಈ ಸಮಾಜದ ಕಸದ ತೊಟ್ಟಿಗಳಿಂದ ಎದ್ದುಬಂದ ನಮ್ಮ ಪಾಲಿಗೆ ಈ ಅಕ್ಷರಗಳು ಗಾಯಗಾರುಡಿಯಂತೆ ಕಾಣುತ್ತವೆ. ಅದಕ್ಕಾಗಿ ಈ ಅಭಿವ್ಯಕ್ತಿ ಕ್ರಮವನ್ನು ‘ಗಾಯ ಗಾರುಡಿ’ ಎಂದು ಕರೆದುಕೊಂಡಿದ್ದೇನೆ.

Image
ಪ್ರಭಾ ಮೇಡಂ

ಈ ‘ಗಾಯ ಗಾರುಡಿ’ ನನ್ನದೊಂದು ಪದ್ಯದ ತಲೆಬರಹ. ಜಾತಿಯ ಕಾರಣಕ್ಕೆ ಅನುಭವಿಸಿದ ಗಾಯವು ನೆನಪಾಗಿ ಕೊಲ್ಲುವ, ವರ್ತಮಾನದಲ್ಲೂ ಕೀವುದುಂಬಿದಂತೆ ಜುಂವ್ಗುಡುವ, ಅದೆಷ್ಟು ಮುಲಾಮು ಹಚ್ಚಿದರೂ ಸತ್ತ ನಾಯಿಯ ವಾಸನೆಯಂತೆ ಕಾಡುವ ಗಾರುಡಿ ಅದು. ಈ ಗಾಯದ ನೆನಪಾದಾಗಲೆಲ್ಲ ಅಥವಾ ಒಳಗಿನಿಂದಲೇ ಜುಂವ್‍ಗುಟ್ಟಿದಾಗೆಲ್ಲ ‘ತಲಪರಿಗೆ’ ಪುಸ್ತಕಕ್ಕಾಗಿ ಹಿರಿಯ ರಾಜಕಾರಣಿ ಕೆ ಎಚ್ ರಂಗನಾಥ್ ಅವರು ಕೊಟ್ಟ ಸಂದರ್ಶನದಲ್ಲಿ ಜಾತಿ ಕುರಿತ ಪ್ರಶ್ನೆಗೆ, "ಗಾಯಗೊಂಡವರನ್ನು ಕೇಳುವ ಬದಲು ಗಾಯ ಮಾಡಿದವರನ್ನು ಕೇಳಿ," ಎಂದಿದ್ದು ನೆನಪಾಗುತ್ತದೆ. ಇಲ್ಲಿ ನಾನು ನಿರೂಪಿಸಲಿರುವ ಅನುಭವಗಳ ಬರೆಹವು ಗಾಯಗೊಂಡವನಾಗಿ ಈ ಗಾಯ ಮಾಡಿದವರ ಎದುರಿಗಿಡುವ ಪ್ರಶ್ನೆಗಳೇ ಆಗಿವೆ. ಈ ನೆಲದಲ್ಲಿ ಪ್ರತೀ ದಲಿತರು ಮತ್ತು ಮಹಿಳೆಯರ ಅನುಭವಗಳು ಗೋಳಿನಿಂದಲೇ ಕೂಡಿರುತ್ತವೆ ಎಂದು ಕೆಲವರಿಗೆ ಅನ್ನಿಸಿದೆ. ಅದು ಸತ್ಯವೂ ಆಗಿದೆ. ನಮ್ಮ ಹಾಗೆ ಅಂಚಿನಲ್ಲಿ ಬದುಕುವ ಸಮುದಾಯಗಳಿಗೆ ಖುಷಿಯ ನೆನಪುಗಳೇ ಇರುವುದಿಲ್ಲ; ಹಾಗೊಂದು ವೇಳೆ ಇದ್ದರೂ ನೋವಿನ ನೆನಪುಗಳಿಂದ ಮಸುಕಾಗಿಬಿಡುತ್ತವೆ. ಈ ನೋವಿನ ನೆನಪುಗಳು ಅಕ್ಷರಮುಖೀ ಸ್ವರೂಪದಲ್ಲಿ ಎದುರಿಗಿರುವ ‘ಮೇಲ್ಜಾತಿ ಎಂದು ಕರೆಯಲ್ಪಡುವ’ ಗೆಳತಿ-ಗೆಳೆಯರ ಎದೆಗಳಲ್ಲಿ ಇಳಿದು, ಅವರ ವರ್ತನೆಯಲ್ಲಿ ಮತ್ತು ಆಲೋಚನೆಯಲ್ಲಿ ‘ನಲಿವಿನ ನೆನಪು’ಗಳಾಗಿ ಅರಳುವ ಗಾರುಡಿಗಾಗಿ ಕಾಯಬೇಕಿದೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 10 | ಜಾತಿ ಎಂಬುದು ಮನುಷ್ಯನ ಚೈತನ್ಯವನ್ನು ಕಟ್ಟಿಹಾಕುವ ಕೆಡುಕು

ನಾನು ದೊಡ್ಡಬಳ್ಳಾಪುರ ತಾಲೂಕಿನವನಾಗಿದ್ದರೂ ನಮ್ಮ ಊರು ತಾಲೂಕು ಕೇಂದ್ರದಿಂದ ಇಪ್ಪತ್ತು ಕಿಲೋಮೀಟರ್ ದೂರ ಇದ್ದಿದ್ದರಿಂದ ಅಲ್ಲಿನ ಒಡನಾಟ ನಮಗೆ ಅಷ್ಟಾಗಿ ಇರಲಿಲ್ಲ. ಈ ಕಾರಣಕ್ಕೆ ನಮಗೆ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದ್ದ ದಲಿತ-ರೈತ ಹೋರಾಟಗಳು ಪಿಯುಸಿ ಮುಗಿಯುವವರೆಗೆ ಗಮನಕ್ಕೆ ಬಂದಿರಲಿಲ್ಲ. 1998ರಲ್ಲಿ ದೊಡ್ಡಬಳ್ಳಾಪುರಲ್ಲಿ ನಡೆದ ಎನ್‍ಎಸ್‍ಎಸ್ ಶಿಬಿರಕ್ಕೆ ‘ಸಂವಾದ' ಸಂಸ್ಥೆಯ ಒಂದಷ್ಟು ಜನ ಬಂದು ಪರಿಸರ ಗೀತೆಗಳನ್ನು ಹಾಡಿಹೋದರು. ಹೋಗುವಾಗ ನಮ್ಮ ವಿಳಾಸಗಳನ್ನೂ ಒಯ್ದರು. ಅದಾದ ಮೇಲೆ ಯಾಣ ಮತ್ತು ಕುಮಟಾ ಸುತ್ತಮುತ್ತಲೂ ಅಧ್ಯಯನಕ್ಕಾಗಿ ಒಂದಷ್ಟು ಯುವಜನರು ಹೋಗುತ್ತಿದ್ದು, ನಮ್ಮ ಕಾಲೇಜಿನಿಂದ ಯಾರನ್ನಾದರೂ ಕಳಿಸಬಹುದೆಂದು ನಮ್ಮ ಕನ್ನಡ ಉಪನ್ಯಾಸಕಿ ಪ್ರಭಾ ಮೇಡಂ ಅವರಲ್ಲಿ ಕೇಳಲಾಗಿ, ಅವರು ನನ್ನನ್ನು ಆಯ್ಕೆ ಮಾಡಿದರು. ನನಗದು ಹಲವು ಮೊದಲ ಅನುಭವಗಳ ಗುಚ್ಛ. ಈ ಪ್ರವಾಸದ ಕಾರಣಕ್ಕೆ ಜೀವನದಲ್ಲಿ ಮೊದಲ ಬಾರಿ ಟೆಲಿಫೋನಲ್ಲಿ ಪ್ರಭಾ ಮೇಡಂ ಜೊತೆ ಮಾತಾಡಿದೆ. ಮೊದಲು ಫೋನಲ್ಲಿ ಮಾತಾಡಿದ ಪುಳಕ. ಮೊದಲ ಸಲ ಪರಿಚಯವಿಲ್ಲದವರ ಜೊತೆ ದೂರದೂರುಗಳಿಗೆ ಪ್ರವಾಸ ಹೋಗಿದ್ದೆ. ಕುಮಟಾದ ಸ್ನೇಹಕುಂಜ, ಸುತ್ತಲಿನ ಸಾವಯವ ಕೃಷಿಕರು, ಪರಿಸರವಾದಿಗಳು ಎಲ್ಲರನ್ನೂ ಕಂಡು ಮಾತನಾಡಿಸಿ ಹಿಂದಿರುಗಿದಾಗ ನಾನೂ ಇತರರ ಹಾಗೆ ಮನುಷ್ಯನೇ ಅನ್ನಿಸಿತ್ತು. ಯಾಕೆಂದರೆ, ನಮ್ಮೂರಿನಿಂದ ನಲವತ್ತು ಕಿಲೋಮೀಟರ್ ಇರುವ ನಂದಿಬೆಟ್ಟಕ್ಕೆ ಶಾಲೆಯ ಸಹಪಾಠಿಗಳ ಜೊತೆ ಪ್ರವಾಸ ಹೋಗಲು ಬೇಕಾದ ಎಂಟು ರೂಪಾಯಿಗಳನ್ನು ನಮ್ಮಪ್ಪನಿಂದ ಕೊಡಲಾಗಿರಲಿಲ್ಲ; ನನ್ನ ಗೆಳೆಯರೆಲ್ಲ ಪ್ರತಿವರ್ಷ ಮುನ್ನೂರು ರೂಪಾಯಿ ಕೊಟ್ಟು ಮೂರು ದಿನಗಳ ಪ್ರವಾಸ ಹೋಗಿಬಂದರೆ, ಅವರ ಅನುಭವಗಳನ್ನು ಕೇಳುವುದಷ್ಟೇ ನನ್ನ ಪಾಲಿಗೆ ದಕ್ಕುತ್ತಿತ್ತು.

'ಸಂವಾದ'ದ ಯಾಣ ಪ್ರವಾಸ ನನ್ನೊಳಗೆ ನನ್ನ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸಿತು; ಅದು ನನ್ನನ್ನು ಇಲ್ಲಿಯವರೆಗೆ ಕೈಹಿಡಿದು ನಡೆಸಿತು. ಅದಾದ ಮೇಲೆ ಅದೆಷ್ಟು ಊರು ಸುತ್ತಿದೆನೋ, ಪ್ರವಾಸಕ್ಕೆ ಹೋಗಿ ಪ್ರಕೃತಿ, ದೇವಸ್ಥಾನ, ದರ್ಶನ ಎಂದು ಮಾತಾಡುತ್ತಿದ್ದ ಗೆಳೆಯರ ಮುಂದೆ ನಾನು ಹೇಳುತ್ತಿದ್ದ ಪ್ರವಾಸದ ಅನುಭವಗಳು ಅವರಿಗೆ ವಿಚಿತ್ರವಾಗಿ ಕಾಣುತ್ತಿದ್ದವು. ಈ ಪ್ರವಾಸಗಳಲ್ಲಿ ಮುಖ್ಯವಾದವುಗಳೆಂದರೆ, ‘ನರ್ಮದಾ ಬಚಾವೋ' ಆಂದೋಲನ ಮತ್ತು ‘ನೋ ಮೋರ್ ಭೋಪಾಲ್ಸ್’ ಆಂದೋಲನ. ಹಾಗೆ ನೋಡಿದರೆ ಇವು ಪ್ರವಾಸಗಳಲ್ಲ; ಅಲ್ಲಲ್ಲಿ ನಡೆಯುತ್ತಿದ್ದ ಆಂದೋಲವನ್ನು ಅಧ್ಯಯನ ಮಾಡುವ ಹಾಗೂ ಅದರ ಭಾಗವಾಗುವ ಪ್ರಕ್ರಿಯೆ.

Image
'ನರ್ಮದಾ ಬಚಾವೋ' ಆಂದೋಲನ ಸಂಘಟನೆ ವೇಳೆ, ಸಂತ್ರಸ್ತ ಹಳ್ಳಿಗಳ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ಮೇಧಾ ಪಾಟ್ಕರ್

ಮೇಧಾ ಪಾಟ್ಕರ್ ನೇತೃತ್ವದಲ್ಲಿ ನರ್ಮದೆಯ ತಟದಲ್ಲಿ ನಡೆಯುತ್ತಿದ್ದ ಆಂದೋಲನದಲ್ಲಿ ಭಾಗವಹಿಸುವಾಗ ನನಗೆ ಜಾತಿ ಅಸಮಾನತೆಯ ಅನುಭವ ಬಿಟ್ಟರೆ, ರಾಜ್ಯ-ದೇಶದ ದಲಿತರ ಮೇಲಿನ ದೌರ್ಜನ್ಯಗಳ ಅರಿವಿರಲಿಲ್ಲ. ಸಣ್ಣ ಹಳ್ಳಿಯಲ್ಲಿ ನಲವತ್ತು ಕಿಲೋಮೀಟರ್ ದೂರಕ್ಕೂ ಪ್ರಯಾಣಿಸದೆ ಬದುಕುತ್ತಿದ್ದ ನನಗೆ ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳು ಜಗತ್ತಿನ ಕಣ್ಣೀರಿನ ಸಮುದ್ರವನ್ನೇ ಪರಿಚಯಿಸಿದವು. ಎರಡು ವಾರ ನರ್ಮದಾ ತೀರದಲ್ಲಿ ಅಲ್ಲಿನ ಆದಿವಾಸಿಗಳೊಟ್ಟಿಗೆ ಇದ್ದು ಬಂದು ಒಂದು ಲೇಖನ ಬರೆದೆ. ನರ್ಮದೆಯ ಮಡಿಲಿನ ಲಕ್ಷಾಂತರ ಕುಟುಂಬಗಳು, ಲಕ್ಷಾಂತರ ನಂಬಿಕೆಗಳು, ಲಕ್ಷಾಂತರ ನಿರೀಕ್ಷೆಗಳು ನನ್ನೊಳಗೆ ತುಂಬಿಕೊಂಡು ನನ್ನನ್ನು ಹಿಗ್ಗಿಸಿದವು.

ಅದಾದ ಮೇಲೆ ನನ್ನ ಹಾಗೆಯೇ ಒಡಲಿನಲ್ಲಿ ಕಿಚ್ಚು ಹೊತ್ತು ತಿರುಗುತ್ತಿದ್ದ ಯುವಜನರನ್ನು ಸೇರಿಸಿಕೊಂಡು ದೊಡ್ಡಬಳ್ಳಾಪುರದಲ್ಲಿ ಒಂದು ಯುವಜನ ಸಂಘಟನೆ ಕಟ್ಟಿ, ತನ್ನ ಫ್ಯಾಕ್ಟರಿಯ ವಿಷವನ್ನು ಭೂಮಿಯ ಒಡಲಿಗೆ ಸುರಿಯುತ್ತಿದ್ದ ಬಂಡವಾಳಿಗರ ಮೇಲೆ ಯುದ್ಧ ಸಾರಿದಾಗ, ಇದೇ ರೀತಿ ಬಂಡವಾಳಿಗರ ಅತ್ಯಾಚಾರಕ್ಕೆ ಒಳಗಾದ ಭಾರತದ ಇತರ ಭೂಪ್ರದೇಶಗಳಿಗೆ ನಮ್ಮನ್ನು ಕರೆದೊಯ್ದದ್ದು ‘ಗ್ರೀನ್ ಪೀಸ್ ಇಂಟರ್ ನ್ಯಾಷನಲ್ ಸಂಘಟನೆ.' ಇದು ನನ್ನ ಓದನ್ನು ಒಂದು ವರ್ಷದ ಕಾಲ ನಿಲ್ಲಿಸಿತಾದರೂ ಹತ್ತು ವರ್ಷಕ್ಕಾಗುವಷ್ಟು ಕಲಿಸಿತು. ಆ ಕಲಿಕೆಯ ಫಲಿತಗಳನ್ನು ಮುಂದಿನ ಬರೆಹಗಳಲ್ಲಿ ದಾಖಲಿಸಲು ಪ್ರಯತ್ನಿಸುವೆ.

ಮುಖ್ಯ ಚಿತ್ರ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ, ಮಹಾರಾಷ್ಟ್ರದ ನಾನಾ ಭಾಗದಿಂದ ಮುಂಬೈವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದ ರೈತ ಮಹಿಳೆಯೊಬ್ಬರ ಪಾದದ ಸ್ಥಿತಿ-ಕಲಾಕೃತಿ
ನಿಮಗೆ ಏನು ಅನ್ನಿಸ್ತು?
3 ವೋಟ್