ಜತೆಗಿರುವನೇ ಚಂದಿರ? | ಮೈಸೂರಿನ ಟಿಪ್ಪು ಸುಲ್ತಾನ ಅಬ್ಬನ 'ಟಿಪ್ಪು'ವಾದ ಸೋಜಿಗ

Dog 1

ಅಬ್ಬ ಒಮ್ಮೆ ಮೈಸೂರಿಗೆ ಹೋಗಿದ್ದಾಗ, ಟಿಪ್ಪು ಹುಲಿಯ ಬಾಯಿ ಸೀಳುತ್ತಿರುವ ಚಿತ್ರಪಟ ತಂದು ಗೋಡೆಗೆ ನೇತುಹಾಕಿಕೊಂಡಿದ್ದನು. ಅದನ್ನೇ ನೋಡುತ್ತ ಬೆಳೆದ ನಮಗೂ, ಗೋಡೆ ಮೇಲಿದ್ದ ಟಿಪ್ಪು ಹೀರೋನಂತೆಯೇ ಭಾಸವಾಗುತ್ತಿದ್ದ. ಆದರೆ, ಕುಡಿದು ಬಂದ ದಿನಗಳಲ್ಲಿ ಮಾತ್ರ ಅಬ್ಬನೇ ಹೀರೋ ಆಗಿಬಿಡುತ್ತಿದ್ದ. ಅಬ್ಬನ ಅಟ್ಟಹಾಸದ ಪ್ರದರ್ಶನಕ್ಕೆ ಟಿಪ್ಪು ಮೂಕ ಪ್ರೇಕ್ಷಕನಷ್ಟೇ!

ರಾಣಿ ಅಬ್ಬನ ಬಳಿ ಹೇಗೆ ಬಂದು ಸೇರಿಕೊಂಡಳೋ ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಅಬ್ಬನಿಗೆ ಅವಳೆಂದರೆ ಪಂಚಪ್ರಾಣ. ರಾಣಿಗೂ ಅಬ್ಬನನ್ನು ಕಂಡರೆ ಅಷ್ಟೇ ಅಕ್ಕರೆ. ಅಬ್ಬ ಹೋದ ಕಡೆಯಲ್ಲೆಲ್ಲ ಅವನ ನೆರಳಿನಂತೆ ಅಲೆಯುತ್ತಿದ್ದಳು. ಕೆಲವೊಮ್ಮೆ ಲೋಡಿಂಗ್ ಕೆಲಸದ ಲಾರಿಯಲ್ಲಿ ಅಬ್ಬನನ್ನು ಕಂಡರೆ ಸಾಕು, ಆ ಲಾರಿಯ ಹಿಂದೆಯೇ ಮೈಲುಗಟ್ಟಲೆ ಓಡುತ್ತಿದ್ದಳು. ಅಬ್ಬ ಲಾರಿ ನಿಲ್ಲಿಸಿ ಅವಳನ್ನು ಮತ್ತೆ ಮನೆಯ ಕಡೆಗೆ ಒಡಿಸುತ್ತಿದ್ದನಂತೆ.

ಅಬ್ಬ ಕೆಲಸ ಮುಗಿಸಿ ಮನೆಗೆ ಬಂದರೆ ಸಾಕು, ಕಂಡು ಎಷ್ಟೋ ದಿನಗಳಾಗಿವೆ ಎಂಬಂತೆ ಮೈಮೇಲೆಲ್ಲ ಹಾರಿ ಮೈ-ಕೈಯನ್ನೆಲ್ಲ ನೆಕ್ಕುತ್ತಿದ್ದಳು. ತನ್ನ ಊಟದ ಮುಂಚೆ ಅಬ್ಬ ಅಮ್ಮಿಯನ್ನು ಕರೆದು, "ಲೇ... ಸಾವತ್ರಿ, ರಾಣಿಗೊಂಚೂರು ಊಟ ಹಾಕೇ..." ಅನ್ನುತ್ತಿದ್ದನು. ಗಿಡ-ಮರಗಳಲ್ಲಿ ಕಾಲಕಾಲಕ್ಕೆ ತಕ್ಕಂತೆ ಹೂವು-ಹಣ್ಣು ಬಿಡುವಂತೆ ರಾಣಿಯೂ ಪ್ರತೀ ವರ್ಷ ಒಡಲು ತುಂಬಿಕೊಂಡು ಒಂದೈದಾರು ಮುದ್ದಾದ ಹೂಮರಿಗಳಿಗೆ ಜನ್ಮ ಕೊಡುತ್ತಿದ್ದಳು. ಅವು ಬೆಳ್ಳಗೆ, ಕರ್ರಗೆ ಉಣ್ಣೆಯ ಮೆದುವಿನಂತೆ ನಮ್ಮನ್ನು ತಮ್ಮ ಮೈ ಸವರಲು ಪ್ರೇರೇಪಿಸುತ್ತಿದ್ದವು. ಪ್ರತೀ ಸಾರಿ ರಾಣಿ ಮರಿ ಹಾಕಿದಾಗಲೂ ದಿನಣ್ಣನೇ ನನ್ನನ್ನು ಕರೆದುಕೊಂಡು ಹೋಗಿ, ಮರಿಗಳೊಂದಿಗೆ ಬೆಚ್ಚಗೆ ಮಲಗಿರುತ್ತಿದ್ದ ರಾಣಿಯನ್ನೂ  ಮರಿಗಳನ್ನೂ ನನಗೆ ತೋರಿಸುತ್ತಿದ್ದ. ನಮಗಂತೂ ಸಂಭ್ರಮವೋ ಸಂಭ್ರಮ. ಇಡೀ ದಿನ ಲವಲವಿಕೆಯಿಂದ ಓಡಾಡುತ್ತ ಅಕ್ಕಪಕ್ಕದ ಮನೆಯಲ್ಲಿದ್ದ ಗೆಳೆಯರನ್ನು ಕರೆತಂದು ತಾಯಿ ಮತ್ತು ಮರಿಗಳಿಗೆ ಮರೆಮಾಡಿದ್ದ ಗೋಣಿಚೀಲ ಸರಿಸಿ ಮರಿಗಳನ್ನು ತೋರಿಸುವುದರಲ್ಲೇ  ಕಳೆದುಹೋಗಿರುತ್ತಿದ್ದೆವು.

Image
Dog 4
ಸಾಂದರ್ಭಿಕ ಚಿತ್ರ

ಮರಿಗಳು ಹುಟ್ಟಿದ ದಿನವೇ ನಾನು ದಿನಣ್ಣ ಇಬ್ಬರೂ ಅವುಗಳನ್ನು ಹಂಚಿಕೊಂಡು ಬಿಡುತ್ತಿದ್ದೆವು. ದಿನಣ್ಣ ಅವುಗಳ ತೊಡೆ ಸಂದಿಯಲ್ಲೊಮ್ಮೆ ಕಣ್ಣಾಡಿಸಿ ಗಂಡು ಮರಿಗಳನ್ನೆಲ್ಲ ತಾನಿಟ್ಟುಕೊಳ್ಳುತ್ತಿದ್ದನು. ಹೆಣ್ಣು ಮರಿಗಳೆಲ್ಲವೂ ನನ್ನ ಪಾಲಿಗೆ ಬರುತ್ತಿದ್ದವು. ಗೆಳತಿಯರಂತೆ ಸಾಥ್ ಕೊಡುತ್ತಿದ್ದ ಅವುಗಳ ಕುತ್ತಿಗೆಗೆ ನಾನು ಹಗ್ಗ ಕಟ್ಟಿಕೊಂಡು ದಿನವಿಡೀ ಆಟವಾಡುತ್ತಿದ್ದೆ. ಮರಿಗಳಿಗೆ ಓಡಾಡುವಷ್ಟು ಬಲ ಬಂದಾಗ ಅಬ್ಬ ಒಂದನ್ನು ಮಾತ್ರ ತನ್ನ ಬಳಿ ಇಟ್ಟುಕೊಂಡು ಉಳಿದ ಮರಿಗಳನ್ನು ತನ್ನ ಸ್ನೇಹಿತರಿಗೆ ಕೊಟ್ಟುಬಿಡುತ್ತಿದ್ದ. ಆಗೆಲ್ಲ ನಮ್ಮ ದುಃಖದ ಕಟ್ಟೆಯೊಡೆದು ಅಳುತ್ತಿದ್ದೆವು. ಹೀಗೆ ಅಬ್ಬ ತನ್ನ ಬಳಿ ಉಳಿಸಿಕೊಂಡ ಒಂದು ಮರಿಯೇ 'ಟಿಪ್ಪು.'

ಅಬ್ಬ ಒಮ್ಮೆ ಮೈಸೂರಿಗೆ ಹೋಗಿದ್ದಾಗ, ಟಿಪ್ಪು ಹುಲಿಯ ಬಾಯಿಯನ್ನು ಸೀಳುತ್ತಿರುವ ಚಿತ್ರಪಟವನ್ನು ತಂದು ಗೋಡೆಗೆ ಮೊಳೆ ಹೊಡೆದು ನೇತುಹಾಕಿಕೊಂಡಿದ್ದನು. ಅದನ್ನೇ ನೋಡುತ್ತ ಬೆಳೆದ ನಮಗೂ, ಗೋಡೆಯ ಮೇಲಿದ್ದ ಟಿಪ್ಪು ಹೀರೋನಂತೆಯೇ ಭಾಸವಾಗುತ್ತಿದ್ದ. ಆದರೆ, ಕುಡಿದು ಬಂದ ದಿನಗಳಲ್ಲಿ ಮಾತ್ರ ಅಬ್ಬನೇ ಹೀರೋ ಆಗಿಬಿಡುತ್ತಿದ್ದ. ಅಬ್ಬನ ಅಟ್ಟಹಾಸದ ಪ್ರದರ್ಶನಕ್ಕೆ ಟಿಪ್ಪು ಮೂಕ ಪ್ರೇಕ್ಷಕನಷ್ಟೇ!

ಪ್ರತೀ ವರ್ಷ ಅಬ್ಬ ದಸರಾ ನೋಡಲು ಅಸ್ಲಾಂ ದಾದ ಮತ್ತು ದಿನಣ್ಣ ಇಬ್ಬರನ್ನೂ ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದನಂತೆ. ಅಸ್ಲಾಂ ದಾದಾ ಹೊರಟುಹೋದ ಮೇಲೆ ದಿನಣ್ಣನೇ ಕಾಯಂ ಆಗಿ ಅಬ್ಬನ ಬಾಲವಾಗಿಬಿಟ್ಟ. ಹೀಗೆ ಪ್ರತೀ ವರ್ಷ ದಸರಾಕ್ಕೆಂದು ಹೋದಾಗ, ಇಬ್ಬರನ್ನೂ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪುವಿನ ಸಮಾಧಿಯ ಬಳಿ ಕರೆದುಕೊಂಡು ಹೋಗಿ, ಇಬ್ಬರ ಕೈಯಲ್ಲೂ ಚಿಲ್ಲರೆ ಅಥವಾ ನೋಟುಗಳನ್ನು ಕೊಟ್ಟು, ಟಿಪ್ಪುವಿನ ಸಮಾಧಿಯ ಮೇಲೆ ಹಾಕಿಸುತ್ತಿದ್ದನಂತೆ ಅಬ್ಬ. ಹೀಗೆ, ಅಬ್ಬನ ಮೆಚ್ಚಿನ ಹೀರೋ ಟಿಪ್ಪು ಸುಲ್ತಾನನ ಹೆಸರು ಅಕ್ಕರೆಯಿಂದ ಬಂದು ತನ್ನ ಪ್ರೀತಿಯ ನಾಯಿಮರಿಗೆ ಅಂಟಿಕೊಂಡಿತ್ತು.

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಮಂಡ್ಯ ಜಿಲ್ಲೆಯ ಸಂತೆ ಮೊಗನಳ್ಳಿಯಲ್ಲಿ ಕುಡಿಯೊಡೆದ ಪ್ರೇಮಕತೆ

ಟಿಪ್ಪು ರಾತ್ರಿಯೆಲ್ಲ ಬಾಗಿಲ ಹೊರಗೆ ಗೋಣಿಚೀಲದ ಮೇಲೆ ಬೆಚ್ಚಗೆ ಮಲಗಿರುತ್ತಿದ್ದ. ಬೆಳಗ್ಗೆ ಅಮ್ಮಿ ಎದ್ದು ಬಾಗಿಲು ತೆರೆದ ತಕ್ಷಣ ಒಳಗೆ ನುಗ್ಗಿ, ಬಾಗಿಲ ಬಳಿಯಲ್ಲಿಯೇ ಸುತ್ತಿಕೊಂಡು ಮಲಗಿರುತ್ತಿದ್ದ ನನ್ನ ಬಳಿಗೆ ಬಂದು, ನನ್ನ ಹೊದಿಕೆಯೊಳಗೆ ಬೆಚ್ಚಗೆ ಮುದುರಿಕೊಳ್ಳುತ್ತಿದ್ದ. ದಿನಣ್ಣ ಎದ್ದವನೇ ಟಿಪ್ಪುವನ್ನು ಹುಡುಕುತ್ತಿದ್ದ. ಟಿಪ್ಪು ಒಂದು ಕ್ಷಣ ನಮ್ಮ ಕಣ್ಣಿಂದ ಮರೆಯಾದರೂ ಅಬ್ಬ ಅಮ್ಮಿಯಾದಿಯಾಗಿ ಎಲ್ಲರೂ ಆತಂಕಗೊಂಡು ಸಿಕ್ಕಸಿಕ್ಕಲ್ಲೆಲ್ಲ ಹುಡುಕತೊಡಗುತ್ತಿದ್ದೆವು. ನಮ್ಮ ಬದುಕಿನ ಹೆಣಿಗೆಯಂತೆ ಸೇರಿಹೋಗಿದ್ದ ಟಿಪ್ಪು, ನಾವೆಲ್ಲೇ ಹೋದರೂ ಹಿಂದೆಯೇ ಇರುತ್ತಿದ್ದ.

ಕೂಡಿಗೆ ಸರ್ಕಲ್ಲಿನಿಂದ ಸೋಮವಾರಪೇಟೆಯ ರಸ್ತೆಯಲ್ಲಿ ಒಂದೆರಡು ಕಿಲೋಮೀಟರ್ ಹೋದರೆ ಸಿಗುತ್ತಿದ್ದದ್ದು ಕೂಡಿಗೆ ಕೊಪ್ಪಲು. ಕಾನ್ವೆಂಟ್, ಆಲಿಕಾಕನ ಅಂಗಡಿ, ಮಸೀದಿ ಮತ್ತು ನಮ್ಮೂರಿನ ಸಾರಾಯಿ ಅಂಗಡಿ ದಾಟಿಹೋದರೆ ಕೊಪ್ಪಲು ಸಿಗುತ್ತಿತ್ತು. ನಾವಾಗ ಸುಬ್ಬಣ್ಣ ಎಂಬುವವರ ಮನೆಯಲ್ಲಿ ಬಾಡಿಗೆಗಿದ್ದೆವು. ಅಬ್ಬನ ಕುಡಿತದ ಆರ್ಭಟಕ್ಕೆ ತಿಂಗಳಿಗೊಂದು ಹೊಸ ಬಾಡಿಗೆ ಮನೆಯ ಭಾಗ್ಯ ನಮಗೆ ದೊರಕುತ್ತಿತ್ತು. ಒಮ್ಮೊಮ್ಮೆ ಅಬ್ಬ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕುಡಿದು ಮತ್ತನಾಗಿ, ಬೀದಿಯ ತಿರುವಿನಲ್ಲೇ ಓಲಾಡುತ್ತ, ದೊಡ್ಡ ಧ್ವನಿಯಲ್ಲಿ ಅಸಭ್ಯ ಶಬ್ದಗಳಲ್ಲಿ ಅರಚುತ್ತ ಬರುತ್ತಿದ್ದನು. ಆಗೆಲ್ಲ ನಾವು ಎಂಥ ಗಾಢ ನಿದ್ದೆಯಲ್ಲಿದ್ದರೂ ಎದ್ದು ಅಳುತ್ತ, ನಡುಗುತ್ತ ಮೂಲೆ ಸೇರಿಬಿಡುತ್ತಿದ್ದೆವು. ಅಮ್ಮನಿಗೆ ಹೊಡೆದು ಬಡಿದು, ಅನ್ನ-ಸಾರಿನ ಸಮೇತ ಅಡುಗೆ ಕೋಣೆಯಲ್ಲಿದ್ದ ಪಾತ್ರೆಗಳನ್ನು ಬೀದಿಗೆ ಎಸೆಯುತ್ತಿದ್ದನು. ಅಷ್ಟೂ ಸಾಲದೆಂಬಂತೆ ಬೀದಿಯಲ್ಲಿ ಚೆಲ್ಲಾಪಿಲ್ಲಿಯಾಗಿರುತ್ತಿದ್ದ ಪಾತ್ರೆಗಳ ಮೇಲೆ ದೊಡ್ಡ-ದೊಡ್ಡ ಸೈಜುಗಲ್ಲುಗಳನ್ನು ಎತ್ತಿಹಾಕಿ ಜಜ್ಜಿಬಿಡುತ್ತಿದ್ದನು. ಹೀಗೆ ಜಜ್ಜಿರುತ್ತಿದ್ದ ಪಾತ್ರೆಗಳನ್ನು ಅಮ್ಮಿ ಎತ್ತಿಟ್ಟುಕೊಂಡು, ಮರುದಿನ ಬೆಳಗ್ಗೆ ಮಚ್ಚು ಕಲ್ಲುಗಳಲ್ಲಿ ತಗ್ಗಿರುವ ಜಾಗಗಳನ್ನು ಕುಟ್ಟಿ-ಕುಟ್ಟಿ, ವಿರೂಪಗೊಂಡಿದ್ದ ಪಾತ್ರೆಗಳಿಗೆ ರೂಪ ಕೊಟ್ಟು ಮತ್ತೆ ಬಳಸುತ್ತಿದ್ದಳು. ಅಬ್ಬನ ಪೌರುಷಕ್ಕೆ ಸಾಕ್ಷಿ ಎಂಬಂತೆ, ಒಂದಷ್ಟು ಪಾತ್ರೆಗಳ ಮೇಲಿರುವ ತಗ್ಗಿದ ಮುರಿದ ಗುರುತುಗಳು ಈಗಲೂ ಕಳೆದುಹೋದ ನೆನಪಿನ ಪುಟ ತಿರುಗಿಸುತ್ತಲೇ ಇವೆ.

ಹೀಗೆ, ಮಧ್ಯರಾತ್ರಿಯವರೆಗೂ ನಡೆದೇ ಇರುತ್ತಿದ್ದ ಜಗಳಕ್ಕೆ ಬಾಡಿಗೆಮನೆಯ ಯಜಮಾನನ ಪ್ರವೇಶವಾಗಿ, ಮನೆಯಲ್ಲಿದ್ದ ನಾಲ್ಕೈದು ಪಾತ್ರೆಗಳು, ಒಂದೆರಡು ಬಿಂದಿಗೆ, ಚಾಪೆ-ದಿಂಬುಗಳನ್ನು ಬೀದಿಗೆಸೆದು, ಮನೆಗೆ ಬೀಗ ಜಡಿಯುವುದರೊಂದಿಗೆ ಅಂದಿನ ಸನ್ನಿವೇಶಕ್ಕೆ ತೆರೆ ಬೀಳುತ್ತಿತ್ತು. ಇಂಥದ್ದೇ ಸನ್ನಿವೇಶದಲ್ಲಿ ಹಲವು ಪುಟ್ಟ-ಪುಟ್ಟ ಗೂಡುಮನೆಗಳು ನಮಗೆ ಪ್ರಾಪ್ತವಾಗಿದೆ. ಈ ಮನೆಯೂ ಹೀಗೆಯೇ ನಮಗೆ ದಕ್ಕಿದ್ದು.

Image
Dog 5
ಸಾಂದರ್ಭಿಕ ಚಿತ್ರ

ಅವತ್ತು ಬೆಳಗಿನ ಜಾವ ನಾನಿನ್ನೂ ಎದ್ದಿರಲಿಲ್ಲ. "ಟಿಪ್ಪು ಮರ್ ಗಯಾ..." ಎಂದು ಅರಚುತ್ತ ಓಡಿಬಂದ ದಿನಣ್ಣನ ಧ್ವನಿಯಲ್ಲಿದ್ದ ಆರ್ದ್ರತೆ ನಿದ್ದೆಯಲ್ಲಿದ್ದ ನನ್ನನ್ನು ಕಂಗೆಡಿಸಿತು. ನಾನು ಎಚ್ಚೆತ್ತು ಕಣ್ಣುಜ್ಜಿಕೊಂಡು ಬಂದು ನೋಡಿದಾಗ, ಪ್ರೀತಿಯ ಟಿಪ್ಪುವಿನ ಉಸಿರು ನಿಂತ ದೇಹವು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕುಶಾಲನಗರದಿಂದ ಸೋಮವಾರಪೇಟೆಗೆ ಹೋಗುತ್ತಿದ್ದ ಬೆಳಗ್ಗಿನ ಜಾವದ ಗೌರ್ನಮೆಂಟ್ ಬಸ್ಸೊಂದು ರಸ್ತೆ ದಾಟುತ್ತಿದ್ದ ನಮ್ಮ ಟಿಪ್ಪುವಿನ ಮೇಲೆ ಹರಿದಿತ್ತು. ನಾವು ಜೊತೆಗಾರನನ್ನು ಕಳೆದುಕೊಂಡ ನೋವಲ್ಲಿ ಅದೆಷ್ಟು ದುಃಖಿಸಿದೆವೋ... ಅವಾಚ್ಯ ಶಬ್ದಗಳಿಂದ ಅದೆಷ್ಟು ಬೈದುಕೊಂಡೆವೋ... ಕೊನೆಗೆ ಅಳುತ್ತ, ರಸ್ತೆಯ ಮೇಲೆ ಚೆಲ್ಲಿಕೊಂಡಿದ್ದ ಟಿಪ್ಪುವಿನ ನಿಸ್ತೇಜ ದೇಹವನ್ನು ರಸ್ತೆಯಿಂದ ಎತ್ತಿ ಕೊಂಡೊಯ್ದು, ಮನೆಯ ಸಮೀಪದಲ್ಲೇ ಒಂದು ಗುಂಡಿ ತೋಡಿ ಅದರೊಳಗೆ ಮಲಗಿಸಿ ಮಣ್ಣು ಮುಚ್ಚಿದೆವು. ನಮ್ಮ ಓನರ್ ಭಾಗ್ಯಾಂಟಿಯ ಮಕ್ಕಳಾದ ಪುಪ್ಪಕ್ಕ, ಚೈತ್ರಕ್ಕ, ಮಂಜ ಎಲ್ಲರ ನಿರ್ದೇಶನದಂತೆ ಟಿಪ್ಪುವಿನ ಸಮಾಧಿಯ ಮೇಲೊಂದು ಹೂಗಿಡವನ್ನು ಚುಚ್ಚಿದೆವು. ಮೂರನೇ ದಿನ ಅವರು ತಮ್ಮ ಮನೆಯಿಂದಲೇ ತಂದ ಹಾಲು-ತುಪ್ಪವನ್ನು ಬಿಟ್ಟು, ಪೂಜೆ ಮಾಡಿ, ಸತ್ತ ಟಿಪ್ಪುವಿನ ಆತ್ಮಕ್ಕೆ ಮೋಕ್ಷ ದೊರಕಿಸಿದೆವೆಂಬ ಹಿಗ್ಗಿನಲ್ಲಿ ಸಮಾಧಾನಪಟ್ಟೆವು.

ಅಂದಿನಿಂದ ಯಾಕೋ ಪ್ರಾಣಿಗಳೊಂದಿಗಿನ ಒಡನಾಟ ನನಗೆ ಸಾಧ್ಯವೇ ಆಗುತ್ತಿಲ್ಲ. ಭಾರವಾಗಿದ್ದ ಹೃದಯ, ಒಳಗೆ ಕುದಿಯುತ್ತಿದ್ದ ನೋವು, ಸಂಕಟಗಳ ತಾಳಲಾರದೆ, ಆದದ್ದಾಗಲಿ ಆ ಗೌರ್ನಮೆಂಟ್ ಬಸ್ಸಿಗೆ ಕಲ್ಲು ಹೊಡೆಯುವುದೇ ಸೈ ಎಂದು ಎಲ್ಲರೂ ನಿಶ್ಚಯಿಸಿಕೊಂಡೆವು. ಅಂದು ಕ್ರಾಂತಿಯ ಕಿಡಿಯೊಂದು ನಮ್ಮೊಳಗೆ ಹೊತ್ತಿಕೊಂಡಂತೆ ರಸ್ತೆಯಲ್ಲಿ ಓಡಾಡುತ್ತಿದ್ದ ಗೌರ್ನಮೆಂಟ್ ಬಸ್ಸುಗಳನ್ನೆಲ್ಲ ಸಂಶಯಿಸಿದೆವು. ಮರುದಿನ ಬೆಳಗ್ಗೆ ಬೇಗನೆ ಎದ್ದ ನಾವು, ದಪ್ಪ-ದಪ್ಪ ಕಲ್ಲುಗಳನ್ನು ಹಿಡಿದು ರಸ್ತೆಯ ಬದಿಯಲ್ಲಿ ನಿಂತಿದ್ದೆವು, ಯಾವ ಬಸ್ಸೆಂದು ಗುರುತಿಸಲಾಗದ ಅಸಹಾಯಕತೆಯಲ್ಲಿ. ಅಂದು ಆ ಬಸ್ಸು ಬಂದಿದ್ದು, ಹೋದದ್ದು ಯಾವುದೂ ತಿಳಿಯಲಿಲ್ಲ. ಪ್ರಾಣಿಗಳ ಮೇಲೆ ಇದ್ದ ಒಂದು ಅತೀವ ರೀತಿಯ ಸೆಳೆತ ನನ್ನೊಳಗೆ ಇಂಗಿಯೇಹೋಯ್ತು. ಅಂದಿನಿಂದ ಪ್ರಾಣಿಗಳನ್ನು ಸಾಕುವುದೆಂದರೆ ನನಗಾಗದು.

ಮುಂದುವರಿಯುವುದು...
ನಿಮಗೆ ಏನು ಅನ್ನಿಸ್ತು?
3 ವೋಟ್