ಊರೇ ದ್ಯಾವ್ರು | 'ಶೌಚಾಲಯ ಬೇಕಿಲ್ಲ' ಎಂದವರೇ ಮುಂದಾಗಿ ಶೌಚಾಲಯ ಕಟ್ಟಿಸಿದ ಕತೆ

Toilet Story 2

ಎಂಟು ಹಳ್ಳಿಗಳ 1,358 ಕುಟುಂಬ. 6,069 ಜನಸಂಖ್ಯೆ. ನಿರ್ಮಿಸಬೇಕಿದ್ದ ಶೌಚಾಲಯಗಳು 2,000ಕ್ಕೂ ಹೆಚ್ಚು. ಆರು ತಿಂಗಳಲ್ಲಿ ಗುರಿ ಮುಟ್ಟುವ ಸಂಕಲ್ಪವನ್ನೇನೋ ಮಾಡಿದೆವು. ಆದರೆ, ಮನೆ-ಮನೆಗೆ ಭೇಟಿ ಕೊಟ್ಟು ಜನರೊಂದಿಗೆ ಮಾತನಾಡಿದಾಗಲೇ ಗೊತ್ತಾಗಿದ್ದು - ನಾವು ಅಂದುಕೊಂಡಷ್ಟು ಸುಲಭದ ಕೆಲಸ ಅಲ್ಲ ಇದು! ಮುಂದೇನಾಯಿತು?

ಗ್ರಾಮೀಣ ಪ್ರದೇಶದ ಪ್ರತೀ ಕುಟುಂಬಕ್ಕೂ ಶೌಚಾಲಯ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡಿದ್ದ, 'ನಿರ್ಮಲ ಭಾರತ್ ಅಭಿಯಾನ್' ಹೆಸರಿನ ಯೋಜನೆಯೊಂದು ಆಗಷ್ಟೇ ಶುರು ಆಗಿತ್ತು. ಬೆಳಗಿನ ಹೊತ್ತು ದಾರಿಯ ಇಕ್ಕೆಲಗಳಲ್ಲಿ ಕಾಣಸಿಗುತ್ತಿದ್ದ 'ಮನಮೋಹಕ ದೃಶ್ಯಗಳು' ಮುಂದಿನ ದಿನಗಳಲ್ಲಿ ಕಣ್ಮರೆಯಾಗುವ ಲಕ್ಷಣಗಳು ಗೋಚರಿಸತೊಡಗಿದವು. ಹಿಂಡು-ಹಿಂಡು ಶೌಚಾಲಯಗಳು ನಿರ್ಮಾಣಗೊಂಡು, ಹಳ್ಳಿಗಳು ಸ್ವಚ್ಛಗೊಂಡು, ತಾಜಾ ಗಾಳಿ ಬೀಸುವ ದಿನಗಳು ಹತ್ತಿರವಾಗುತ್ತಿವೆ ಎಂದು ನಾವು ಸಂಭ್ರಮಿಸತೊಡಗಿದೆವು. ಅದೇ ಉತ್ಸಾಹದಲ್ಲಿ, ತಂಡೋಪತಂಡವಾಗಿ ಮನೆ-ಮನೆಗೆ ಎಡತಾಕಿ, ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವೊಲಿಸತೊಡಗಿದೆವು. ಆದರೆ, ಯುದ್ಧಭೂಮಿಗೆ ಇಳಿದಾಗಲೇ ಎದುರು ಸೈನ್ಯದ ಪರಾಕ್ರಮಗಳು ಗೊತ್ತಾಗಿದ್ದು!

"ಅಯ್ಯಾ... ಜಾಗ ಎಲ್ಲಿದೆ ಮೇಡಂ ಕಟ್ಟೋಕೆ…?"

"ದುಡ್ಡೆಲ್ಲಿದೆ ಮೇಡಮ್ಮೂ ಕಟ್ಟೋಕೆ...?"

"ಕಕ್ಕಸ್ ರೂಮನ್ನು ಮನೇಲಿ ಕಟ್ಟಿದ್ರೆ ನಮ್ ದೇವ್ರಿಗೆ ಆಗಲ್ಲ..."

Image
Toilet Story 3

- ಹೀಗೆ ಒಂದು ಕಾದಂಬರಿಗಾಗುವಷ್ಟು ಕತೆಗಳು ಸಿಕ್ಕವು. ತಮಾಷೆ ಎಂದರೆ, ಹೀಗೆಲ್ಲ ಸಬೂಬು ಹೇಳಿದವರ ಮನೆಗಳಲ್ಲಿ ಎರಡೆರಡು ಬೈಕ್, ಟಿವಿ, ಮೊಬೈಲ್ ಇದ್ದವು. ನಾವು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ನಾನಾ ಕತೆಗಳನ್ನು ಕಟ್ಟಿ ಮನವೊಲಿಸುವ ಪ್ರಯತ್ನ ಮಾಡುತ್ತಲೇ ಇದ್ದೆವು. ಆದರೆ, ಹೇಳಿಕೊಳ್ಳುವಂಥ ಪರಿಣಾಮ ಕಾಣಿಸಲಿಲ್ಲ. ನಮ್ಮ ಮನೆ-ಮನೆ ಭೇಟಿ, ಚರ್ಚೆ, ಸಭೆ ಎಲ್ಲವೂ ಬರೀ ಕಾಫಿ, ಬಿಸ್ಕತ್ತುಗಳಿಗೆ ಸೀಮಿತವಾಯ್ತು.

ನಮ್ಮ ಮುಂದೆ ಎಂಟು ಹಳ್ಳಿಗಳು, 1,358 ಕುಟುಂಬಗಳು, 6,069 ಜನಸಂಖ್ಯೆ ಇತ್ತು. 2,000ಕ್ಕೂ ಹೆಚ್ಚು ಶೌಚಾಲಯ ಅವಶ್ಯಕತೆ ಇತ್ತು. ಮುಂದಿನ ಆರು ತಿಂಗಳಲ್ಲಿ ನಮ್ಮ ಗುರಿ ಮುಟ್ಟಬೇಕೆಂದು ಸಂಕಲ್ಪ ಮಾಡಿದೆವು. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಗಲು-ರಾತ್ರಿ ದುಡಿಯಲು ನಿಂತರು. ಅವರ ಜೊತೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೈಜೋಡಿಸಿದರು. 'ನಾವು ಬದಲಾಗಲ್ಲ' ಅಂತ ಹಣೆಪಟ್ಟಿ ಕಟ್ಟಿಕೊಂಡವರನ್ನು ಬದಲಾಯಿಸುವುದು ಅದೆಷ್ಟು ಕಷ್ಟವೆಂದು ಆಗಲೇ ಅರಿವಿಗೆ ಬಂದಿದ್ದು.

ಈ ಲೇಖನ ಓದಿದ್ದೀರಾ?: ಊರೇ ದ್ಯಾವ್ರು | ಕುಡಿಯುವ ನೀರಿನ ಸಂಕಷ್ಟದಿಂದ ಪಾರಾಗಲು ಮಾಲಂಗಿ ಮಾದರಿ

ಮೊದಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶೌಚಾಲಯ ನಿರ್ಮಿಸಿದೆವು. ಬಾಯಿಮಾತಿಗೆ ಬಗ್ಗದ ಜನರಿಗೆ ಕಠಿಣ ಕ್ರಮಗಳ ಮೂಲಕ ಒತ್ತಡ ಹೇರತೊಡಗಿದೆವು. ಕುಡಿಯುವ ನೀರು, ರೇಷನ್, ವಿದ್ಯುತ್ ನಿಲ್ಲಿಸಿದೆವು. ನಿಧಾನವಾಗಿ ಶೌಚಾಲಯಗಳು ತಲೆ ಎತ್ತತೊಡಗಿದೆವು.

ನಾವು ನಿಟ್ಟುಸಿರು ಬಿಡುವ ಸಮಯದಲ್ಲೇ ಧುತ್ತೆಂದು ಸಮಸ್ಯೆಯೊಂದು ಎದುರಾಯಿತು. ಇದ್ದಕಿದ್ದ ಹಾಗೆ, ಸ್ವಯಂಘೋಷಿತ 'ಮಾನವ ಹಕ್ಕುಗಳ ಹೋರಾಟಗಾರರು' ಹುಟ್ಟಿಕೊಂಡರು. ನೀರು, ರೇಷನ್ ನಿಲ್ಲಿಸದಂತೆ ಹರತಾಳ ಮಾಡತೊಡಗಿದರು. ಜನರಿಗೆ ಇದೊಂದು ನೆಪವಾಗಿ, 'ಶೌಚಾಲಯ ಅಗತ್ಯವೇನಿಲ್ಲ' ಎಂಬ ದಾರಿಗೆ ಹೊರಳಿಬಿಟ್ಟರು. ನಮ್ಮೆಲ್ಲ ಉಪಾಯಗಳು ಠುಸ್ ಪಟಾಕಿ ಆಗತೊಡಗಿದವು. 2-3 ತಿಂಗಳ ನಮ್ಮ ಶ್ರಮದಲ್ಲಿ ನಿರ್ಮಾಣವಾಗಿದ್ದು ಬರೀ ಬೆರಳೆಣೆಕೆಯಷ್ಟು ಶೌಚಾಲಯಗಳು. ಆದರೂ ನಾವ್ಯಾರೂ ಧೃತಿಗೆಡಲಿಲ್ಲ. ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಸಿದ್ಧರಾದೆವು. ಈಗಾಗಲೇ ನಮಗೆ ಒಳಿತು-ಕೆಡುಕುಗಳ ಸಾಕಷ್ಟು ಅನುಭವ ಜೊತೆಗಿದ್ದಿದ್ದರಿಂದ, ಗೆಲ್ಲುವ ವಿಶ್ವಾಸವಿತ್ತು.

Image
Toilet Story 9

ಈ ಬಾರಿ ವಿಭಿನ್ನ ಯೋಜನೆಯೊಂದಿಗೆ ಕಣಕ್ಕಿಳಿದೆವು. ಶಾಲಾ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಹತ್ತು ಹಲವು ಯೋಜನೆ ರೂಪಿಸಿದೆವು. ಶಾಲೆಗಳಿಗೆ ತೆರಳಿ, ಮಕ್ಕಳಿಗೆ ಶೌಚಾಲಯದ ಮಹತ್ವದ ಕುರಿತು ಹೇಳತೊಡಗಿದೆವು. ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಹಾಡು, ನಾಟಕಗಳನ್ನು ಪ್ರದರ್ಶಿಸಿದೆವು. ಬಯಲು ಬಹಿರ್ದೆಸೆ ಒಳ್ಳೆಯದಲ್ಲವೆಂದು ಅವರಿಗೆ ಮನದಟ್ಟು  ಮಾಡಿದೆವು.

ಹೆಣ್ಣುಮಕ್ಕಳನ್ನು ನಮ್ಮೆಡೆಗೆ ಸೆಳೆದರೆ ಕೆಲಸ ಸಲೀಸು ಎಂದೆಣಿಸಿ, ಸಣ್ಣ-ಸಣ್ಣ ಗುಂಪುಗಳನ್ನು ರಚಿಸಿ, ಬಯಲು ಮಲ ವಿಸರ್ಜನೆ ಆರೋಗ್ಯಕ್ಕೆ ಅದೆಷ್ಟು ಮಾರಕ ಎಂದು ಮನವರಿಕೆ ಮಾಡಿದೆವು. ಮಹಿಳೆಯ ಘನತೆ ಮತ್ತು ಗೌರವದ ಬಗ್ಗೆ ವಿಷಯತಜ್ಞರಿಂದ ತಿಳಿವಳಿಕೆ ನೀಡಿದೆವು. ಸ್ವಸಹಾಯ ಸಂಘಗಳ ಸದಸ್ಯರು ಈ ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡರು.

Image
Toilet Story 6

ಇನ್ನೊಂದೆಡೆ, ಶೌಚಾಲಯ ಕಟ್ಟುವ ಮನಸ್ಸಿದ್ದರೂ ದುಡ್ಡಿಲ್ಲದ ಕುಟುಂಬಗಳನ್ನು ಗುರುತಿಸಿ, ಕೆಲವು ಸ್ವಯಂಸೇವಾ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಘಗಳಿಂದ ಸಾಲದ ವ್ಯವಸ್ಥೆ ಮಾಡಲಾಯಿತು. ಕಟ್ಟಡಗಳಿಗೆ ಬೇಕಾದ ಸಾಮಗ್ರಿಗಳನ್ನು ಸಾಲದ ರೂಪದಲ್ಲಿ ನೀಡಲು ಕೆಲವು ಸಂಸ್ಥೆಗಳು ಮುಂದೆ ಬಂದವು.

ಈಗ ನಿಜವಾದ ಕ್ರಾಂತಿ ಶುರುವಾಯಿತು. ಒಂದು ಕಡೆ ಶಾಲಾ ಮಕ್ಕಳು, ಇನ್ನೊಂದೆಡೆ ಮಹಿಳೆಯರು ಅವರವರ ಕುಟುಂಬಗಳಲ್ಲಿ ಜಿದ್ದಿಗೆ ಬಿದ್ದಂತೆ ಶೌಚಾಲಯ ನಿರ್ಮಿಸಲು ಒತ್ತಡ ಹೇರತೊಡಗಿದರು. ಮನೆಗಳಲ್ಲಿ ಉಪವಾಸ, ಸತ್ಯಾಗ್ರಹಗಳು ಶುರುವಾದವು. ಒಂದೊಂದಾಗಿ ಶೌಚಾಲಯಗಳು ತಲೆ ಎತ್ತತೊಡಗಿದವು. ಶೌಚಾಲಯ ನಿರ್ಮಿಸಿಕೊಂಡವರಿಗೆ ಸಾರ್ವಜನಿಕವಾಗಿ ಗೌರವ ಸಮರ್ಪಣೆ, ಸನ್ಮಾನಗಳನ್ನು ಮಾಡಿದೆವು. ಇದರಿಂದ ಇತರರಿಗೆ ಪ್ರೇರಣೆ ಸಿಗತೊಡಗಿತು.

Image
Toilet Story 11

ಶೌಚಾಲಯಗಳ ನಿರ್ಮಾಣ ಶುರುವಾಗಿತ್ತಾದರೂ, ಗುರಿ ಮುಟ್ಟುವಲ್ಲಿ ಹಿಂದೆಯೇ ಇದ್ದದ್ದು ಕಾಡುವ ಸಂಗತಿ ಆಗಿತ್ತು. ಹಾಗಾಗಿ, ಇನ್ನೊಂದು ಹೆಜ್ಜೆ ಮುಂದಿಟ್ಟು, ಹೊಸದೊಂದು ಯೋಜನೆಗೆ ಅಣಿಯಾದೆವು. ಗ್ರಾಮ ವಾಸ್ತವ್ಯಕ್ಕೆ ರೂಪುರೇಷೆ ಸಿದ್ಧಪಡಿಸಿದೆವು. ಈ ಮೊದಲೇ, ರಾತ್ರೋರಾತ್ರಿ ಹಳ್ಳಿಗಳಿಗೆ ತೆರಳಿ ಠಿಕಾಣಿ ಹೂಡಿ, ಜನರು ಬಯಲು ಮಲ ವಿಸರ್ಜನೆಗೆ ತೆರಳುವ ಸ್ಥಳಗಳ ಮಾಹಿತಿ ಕಲೆ ಹಾಕಲಾಗಿತ್ತು. ಇದೀಗ, ಸೂರ್ಯ ಹುಟ್ಟುವ ಮುಂಚೆಯೇ ಅಲ್ಲಿಗೆ ತೆರಳಿ ಹೊಂಚು ಹಾಕಿ ಕೂರಲು ಶುರು ಮಾಡಿದೆವು. ಜನರು ಆ ಕಡೆಗೆ ಬಂದಾಗ, ನಾನಾ ರೀತಿಯಲ್ಲಿ ಅವರಿಗೆ ಮುಜುಗರ ಉಂಟು ಮಾಡುವ ಪ್ರಯತ್ನ ನಡೆಯಿತು. ಅವರು ಕುಳಿತಿರುತ್ತಿದ್ದ ಜಾಗಕ್ಕೆ ತೆರಳಿ ಗುಲಾಬಿ ಹೂವು ಕೊಡುವುದು, ಸಿಳ್ಳೆ ಹೊಡೆಯುವುದು... ಹೀಗೆ ಹತ್ತು ಹಲವು ಹಂಚಿಕೆ ಹೂಡಲಾಯಿತು. ಹೀಗೆಲ್ಲ ಮಾಡುವಾಗ, ಹೋಗಬಾರದ ಜಾಗಗಳಿಗೆಲ್ಲ ಹೋಗಿ ಕಾದಿದ್ದೇವೆ, ಸೊಳ್ಳೆಗಳಿಂದ ಕಚ್ಚಿಸಿಕೊಂಡಿದ್ದೇವೆ. ಒಟ್ಟಿನಲ್ಲಿ ಇಡೀ ತಂಡ ಪಡಿಪಾಟಲು ಪಟ್ಟಿದ್ದಾಯ್ತು.

ಬದಲಾಗುವುದಿಲ್ಲ ಎಂದು ಹಠ ಹಿಡಿದಿದ್ದವರೆಲ್ಲ ಕೊನೆಗೂ ಬದಲಾದರು. ಮಕ್ಕಳು ಮತ್ತು ಹೆಣ್ಣುಮಕ್ಕಳ ಒತ್ತಾಯದ ಕಾರಣಕ್ಕೆ ಎಂಟೂ ಹಳ್ಳಿಗಳು ಹೊಸ ರೂಪ ತಾಳಿದವು. ಅಂದುಕೊಂಡಂತೆ, ಆರೇ ತಿಂಗಳಲ್ಲಿ 2,000ಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣ ಮುಗಿಯಿತು. ನಮ್ಮ ಗ್ರಾಮ ಪಂಚಾಯಿತಿಯು, 'ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ' ಎನಿಸಿಕೊಂಡು, ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇವತ್ತಿನವರೆಗೆ ವೃತ್ತಿಜೀವನದಲ್ಲಿ ಅತಿ ಹೆಚ್ಚು ತೃಪ್ತಿ ನೀಡಿದ ಕೆಲಸವಿದು.

ನಿಮಗೆ ಏನು ಅನ್ನಿಸ್ತು?
2 ವೋಟ್