ಊರ್ಬದಿ | ಕರಿಕಲ್ಲು ಬಂಡೆಯ ನಿರ್ಲಿಪ್ತ ನಿಟ್ಟುಸಿರ ನಗು ಮತ್ತು ಸರಕ್ಕನೆ ಬಿಚ್ಚಿಕೊಂಡ ಗೋಜಲ ಗಂಟು

ಬೀರಜ್ಜ ಬಾಲ್ಯದ ಕತೆ ಹೇಳುತ್ತ ಅಚಾನಕ್ಕಾಗಿ, "ಹರ್ದೂರು, ಹುಡ್ಲಿಕೇವಿ ಗದ್ದೆ ಬಯಲು ಎಂದರೆ ಎಂಥ ಭೂಮಿ... ಎಂತಹ ಫಸಲು...!" ಎಂದು ಉದ್ಗಾರ ತೆಗೆದರು. ಅವರ ಮಾತುಗಳಿಗೆ ಮೂಕನಾಗಿ ಕಿವಿಗೊಟ್ಟು ಕೂತಿದ್ದ ನನಗೆ, 'ಹುಡ್ಲಿಕೇವಿ' ಎನ್ನುತ್ತಲೇ ಮೈ ಜುಮುಗುಟ್ಟಿದ ಅನುಭವ! ಅದೇ ನಮ್ಮನೆಯ ಹೆಸರು...! ಕೂಡಲೇ, "ಹುಡ್ಲಿಕೇವಿನಾ?" ಎಂದೆ...

ವಿಶೇಷ ವರದಿಯೊಂದರ ಕಾರಣಕ್ಕೆ ಅವತ್ತು, ಶಿವಮೊಗ್ಗದಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯದ ಒಳಗಿರುವ ಚಿತ್ರಶೆಟ್ಟಿಹಳ್ಳಿಗೆ ಹೋಗಿದ್ದೆ. ಹಳ್ಳಿಯನ್ನು ಒಂದು ಸುತ್ತು ಹಾಕಿ, ಸಂಜೆ ಹೊತ್ತಿಗೆ ಹೆಬ್ಬೂರು ಬೀರಾ ನಾಯ್ಕರ ಮನೆಯ ಕಟ್ಟೆಯ ಮೇಲೆ ಕೂತು ಮಾತನಾಡುತ್ತಿದ್ದೆ. ಬೀರಾ ನಾಯ್ಕರ ಎಲೆಯಡಿಕೆ ಸಂಚಿ ನೋಡುತ್ತಲೇ ನನಗೂ ಕವಳ ಹಾಕುವ ಮನಸ್ಸಾಗಿ ಕೇಳಿದೆ. "ಹಾಕೊಳ್ಳಿ..." ಎಂದು ಸಂಚಿಯನ್ನು ನನ್ನತ್ತ ತಳ್ಳಿದರು. ನಾನು ಚಂದದ ಬೆಟ್ಟಡಿಕೆ ತೆಗೆದು ಹಲ್ಲಿಗೆ ಕೊಟ್ಟು, ಎಲೆ ಆರಿಸಿ, ಅದರ ಬೆನ್ನುಜ್ಜಿ ಸುಣ್ಣು ಸವರುತ್ತ, "ಯಜಮಾನ್ರೇ... ನಿಮ್ಮ ಮೂಲ ಊರು ಯಾವುದು?" ಎಂದೆ. 

ಅಷ್ಟು ಕೇಳುತ್ತಲೇ ಬೀರಾ ನಾಯ್ಕರು ತಮ್ಮ ಮುಳುಗಡೆಯ ಚರಿತ್ರೆಯ ಟೇಪು ಬಿಚ್ಚಿದರು. 1938-40ರ ಹೊತ್ತಿನ ಶರಾವತಿ ನದಿಯ ಮೊದಲ ಜಲಾಶಯ ಹಿರೇಭಾಸ್ಕರ ಅಣೆಕಟ್ಟು ನಿರ್ಮಾಣದ ವೇಳೆ ಮುಳುಗಡೆ ಸಂತ್ರಸ್ತರಾದವರು ಬೀರಾ ನಾಯ್ಕರ ಕುಟುಂಬ. ಆಗ ಮೈಸೂರು ಮಹಾರಾಜರು ಸಾಗರಕ್ಕೆ ಬಂದು, "ನಾಡಿಗೆ ಬೆಳಕು ಕೊಡಲು ಶರಾವತಿ ನದಿಗೆ ಅಡ್ಡಲಾಗಿ ಜಲಾಶಯ ಕಟ್ಟುತ್ತಿದ್ದೇವೆ. ನೀವೆಲ್ಲ ನಾಡಿಗಾಗಿ ತ್ಯಾಗ ಮಾಡಬೇಕು," ಎಂದು ಕೈಜೋಡಿಸಿ ಮನವಿ ಮಾಡಿದ್ದರಂತೆ. ಒಡೆಯರ್ ಬಂದು ಕೈಜೋಡಿಸಿ ಕೋರಿದ್ದಕ್ಕೆ ಕರಗಿಹೋದ ಮಲೆನಾಡಿನ ಅಮಾಯಕ ಜನ, ಒಂದು ಬಿಡಿಗಾಸಿನ ಪರಿಹಾರ-ಪ್ರಯೋಜನವೂ ಇಲ್ಲದೆ, ಶತಮಾನಗಳ ಕಾಲ ಉತ್ತಿ-ಬಿತ್ತಿದ ಜಮೀನು, ತೋಟ, ಮನೆ ಎಲ್ಲವನ್ನೂ ನೀರಿಗೆ ಬಿಟ್ಟು ದಡ ಸೇರಿದ್ದರು!

ಹಿರೇಭಾಸ್ಕರ ಅಣೆಕಟ್ಟು

ಆದರೆ, ಅವರ ಆ ತ್ಯಾಗ ಅಷ್ಟಕ್ಕೇ ಮುಗಿಯಲಾರದು ಎಂಬುದು ಆಗ ಆ ಜನಗಳಿಗೆ ಗೊತ್ತೇ ಇರಲಿಲ್ಲ. ಆ ತ್ಯಾಗವೇ ತಲೆಮಾರುಗಳ ನಿರಂತರ ತ್ಯಾಗಕ್ಕೆ ಮುನ್ನುಡಿಯಾಗಲಿದೆ, ಮತ್ತೆ-ಮತ್ತೆ ಮುಳುಗಡೆ, ಮತ್ತೆ-ಮತ್ತೆ ಎತ್ತಂಗಡಿ, ಮತ್ತೆ-ಮತ್ತೆ ಬೀದಿಪಾಲಾಗುವ ಶತಮಾನದ ಮಹಾ ವಲಸೆಗೆ, ಮುಗಿಯದ ಮಹಾ ಅನ್ಯಾಯದ ಪರಂಪರೆಗೆ ನಾಂದಿ ಹಾಡಲಿದೆ ಎಂಬುದು ಆಗ ಆ ಅಮಾಯಕ ತಲೆಮಾರಿಗೆ ತಿಳಿದೇ ಇರಲಿಲ್ಲ. ಅಂತಹದ್ದೊಂದು ದುರಂತಗಾಥೆಗೆ ತಮ್ಮ ಆ ತ್ಯಾಗವೇ ಅಡಿಪಾಯವಾಗುತ್ತದೆ ಎಂಬ ಸಣ್ಣ ಊಹೆ ಕೂಡ ಅವರಿಗಿರಲಿಲ್ಲ.

1940ರಲ್ಲಿ ಹಿರೇಭಾಸ್ಕರದ ಹೆಸರಲ್ಲಿ ನಿಂತ ಶರಾವತಿ, 12 ಹಳ್ಳಿಗಳನ್ನು ಮುಳುಗಿಸಿದರೆ; ಅದಾಗಿ ಕೇವಲ 20 ವರ್ಷದಲ್ಲೇ ಇನ್ನಷ್ಟು ವಿಸ್ತಾರ ಕಣಿವೆಯಲ್ಲಿ ತಲೆ ಎತ್ತಿದ ಲಿಂಗನಮಕ್ಕಿ ಜಲಾಶಯದ ಹೆಸರಲ್ಲಿ 152 ಗ್ರಾಮಗಳ 12 ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಮುಳುಗಿಸಿತು. ಆ ಬಳಿಕ, 300 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಬ್ಬಿ ನಿಂತ ನೀರು ಸಾಲದು ಎಂದು, ಚಕ್ರಾ ಮತ್ತು ಸಾವೆಹಕ್ಲು ಹೊಳೆಗಳನ್ನು ಕಟ್ಟಿ ನಿಲ್ಲಿಸಿ ಶರಾವತಿಯ ಒಡಲು ಸದಾ ತುಂಬಿತುಳುಕುವಂತೆ ಮಾಡಲಾಯಿತು. ಅದಾಗಿ ಹತ್ತಾರು ವರ್ಷದಲ್ಲೇ ಘಟ್ಟದ ಮೇಲಿನ ನೀರು ಕೆಳಗೆ ವೃಥಾ ಹರಿದುಹೋಗುತ್ತದೆ ಎಂದು ವರಾಹಿ ಜಲಾಶಯ ನಿರ್ಮಿಸಲಾಯಿತು. ಈ ನಡುವೆ, ತಳಕಳಲೆ ಸಮಾನಾಂತರ ಜಲಾಶಯ ಮತ್ತು ಗೇರುಸೊಪ್ಪ ಅಣೆಕಟ್ಟು ಕೂಡ ನಿರ್ಮಾಣವಾದವು. ಹೀಗೆ, ಇಡೀ ಶರಾವತಿ ಕೊಳ್ಳದಲ್ಲಿ ಪೈಪೋಟಿಯ ಮೇಲೆ ಎದ್ದ ಅಣೆಕಟ್ಟುಗಳಲ್ಲಿ ಮತ್ತೆ-ಮತ್ತೆ ಮುಳುಗಡೆಯಾಗಿದ್ದು ಬಹುತೇಕ ಅದದೇ ಸಂತ್ರಸ್ತರ ಬದುಕೇ.

ಈ ಲೇಖನ ಓದಿದ್ದೀರಾ?: ಊರ್ಬದಿ | ಕಾಡುದಾರಿಯಲ್ಲಿ ದಿಕ್ಕು ತಪ್ಪಿಸುವ ದಾಟುಬಳ್ಳಿಯ ಕತೆ

ಬೀರಾ ನಾಯ್ಕರದ್ದು ಕೂಡ ಅದೇ ಕತೆ. ಹಿರೇಭಾಸ್ಕರದಲ್ಲಿ ಮುಳುಗೆದ್ದು ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ಲಿಂಗನಮಕ್ಕಿಯ ನೀರು ಕುತ್ತಿಗೆಗೆ ಏರಿತು. ಅಲ್ಲಿಂದ ಮೇಲೆದ್ದು ಶಿವಮೊಗ್ಗದ ಕಾಡಿನಂಚಿನಲ್ಲಿ ಸರ್ಕಾರವೇ ತೋರಿದ ಜಾಗದಲ್ಲಿ ನೆಲೆ ಕಂಡುಕೊಂಡವರಿಗೆ, ಕಳೆದ 60 ವರ್ಷದಲ್ಲಿ ತುಂಡು ಭೂಮಿಯ ಹಕ್ಕು ಸಿಕ್ಕಿಲ್ಲ. ಈಗ ಅಭಯಾರಣ್ಯ ಮತ್ತು ಅರಣ್ಯ ಕಾಯ್ದೆಯ ಕತ್ತಿ ಝಳಪಿಸಿ ಅವರನ್ನು ಅಲ್ಲಿಂದಲೂ ಎತ್ತಂಗಡಿ ಮಾಡಲು ಕೋರ್ಟ್ ಹುಕುಂ ಹೊರಬಿದ್ದಿದೆ.

ಈ ನಿರಂತರ ಎತ್ತಂಗಡಿಯ ಕತೆ ಹೇಳುತ್ತ ಬೀರಜ್ಜ, ತಮ್ಮ ಬಾಲ್ಯದ ದಿನಗಳಲ್ಲಿನ ಮೊದಲ ಮುಳುಗಡೆಯ ದಿನಗಳ ಗೋಳನ್ನು ನೆನೆಯುತ್ತ, ಆಡಿ ಬೆಳೆದ ಅಂಗಳ, ಅಪ್ಪ-ಚಿಕ್ಕಪ್ಪಂದಿರು ಉತ್ತಿ-ಬಿತ್ತಿದ ಗದ್ದೆ ಬಯಲು, ಈಜು ಕಲಿತ ಶರಾವತಿಯ ಒಡಲು, ದನ ಮೇಯಿಸಿದ ಹೊಳೆದಂಡೆಗಳು, ಆಗಿನ ಮಕ್ಕಳಾಟ, ಆ ಗೆಳೆತನಗಳ ನೆನೆದು ಕಣ್ಣೀರಾದರು. ಆ ಗದ್ಗದಿತ ದನಿಯ ಬೆನ್ನಲ್ಲೇ, ಹೊಳೆಕಣಿವೆಯಲ್ಲಿ ಮುಳುಗಿ, ಬೆಟ್ಟಕಣಿವೆಯ ಕಾಡಿನಲ್ಲಿ ಬದುಕು ಮರುಹುಟ್ಟು ಪಡೆದ ಸುದೀರ್ಘ ಪಯಣ ಕುರಿತು ಒಂದು ವಿಷಣ್ಣ ನಗೆಯೂ ತಂತಾನೇ ಸರಿದುಹೋಯಿತು ಅವರ ಸುಕ್ಕುಗಟ್ಟಿದ ಮುಖದ ಮೇಲೆ.

ಸಾವೆಹಕ್ಲು ಅಣೆಕಟ್ಟು

ಉಕ್ಕೇರುವ ಹೊಳೆಯ ಹರಿವಿಗೆ ಸಿಕ್ಕೂ ಕರಗದೆ-ಕದಲದೆ ಅವಡುಗಚ್ಚಿ, ನೀರ ಸೊಕ್ಕಿನ ಏಟುಗಳಿಗೆ ಮೈಯೊಡ್ಡಿ ಗೀರುಗೀರಾದ ಕರಿಕಲ್ಲ ಬಂಡೆಯೊಂದು ನಿರ್ಲಿಪ್ತ ನಿಟ್ಟುಸಿರಿನ ತುದಿಗೆ ಅನಾಯಾಸವಾಗಿ ತುಟಿ ಬಿರಿದು ನಕ್ಕಂತಹ ನಗೆ ಅದು. ಆ ನಗೆಯಲ್ಲಿ ಬೀರಜ್ಜನೊಬ್ಬನ ಬದುಕಿನ ವಿಷಾದ ಮತ್ತು ವ್ಯಂಗ್ಯವನ್ನಷ್ಟೇ ಕಂಡರೆ ನೀವು ಕುರುಡು. ಅದು ಶರಾವತಿ ಕಣಿವೆಯಲ್ಲಿ ಮುಳುಗೆದ್ದ ತಲೆಮಾರುಗಳ ತಲ್ಲಣದ, ಹತಾಶೆಯ ಹಾಗೂ ಅದೇ ಹೊತ್ತಿಗೆ ಬದುಕಿಗೆ ವಿಮುಖರಾಗದೆ ಅವಡುಗಚ್ಚಿ ಸರ್ಕಾರ ಮತ್ತು ವ್ಯವಸ್ಥೆಯ ಕೊನೆಯಿರದ ಅಟ್ಟಹಾಸಕ್ಕೆ ಎದೆಗೊಟ್ಟ ಛಾತಿಯ 'ನೀನೇನೆ ಮಾಡು ಬದುಕುವೆನು ನೋಡು...' ಎಂಬ ಛಲದ ನಗು ಕೂಡ.

ಹೀಗೆ ಬೀರಜ್ಜ ತನ್ನ ಬಾಲ್ಯದ ಕತೆ ಹೇಳುತ್ತಲೇ ಅಚಾನಕ್ಕಾಗಿ, "ಹರ್ದೂರು, ಹುಡ್ಲಿಕೇವಿ ಗದ್ದೆ ಬಯಲು ಎಂದರೆ ಎಂಥ ಭೂಮಿ...! ಎಂತಹ ಫಸಲು...!" ಎಂದು ಉದ್ಗಾರ ತೆಗೆದರು. ಅವರ ಮಾತುಗಳಿಗೆ ಮೂಕನಾಗಿ ಕಿವಿಗೊಟ್ಟು ಕೂತಿದ್ದ ನನಗೆ, 'ಹುಡ್ಲಿಕೇವಿ' ಎನ್ನುತ್ತಲೇ ಮೈ ಜುಮುಗುಟ್ಟಿದ ಅನುಭವ! ಅದೇ ನಮ್ಮನೆಯ ಹೆಸರು...! ಎಂದುಕೊಂಡವನೇ, ಕೂಡಲೇ, "ಹುಡ್ಲಿಕೇವಿನಾ?" ಎಂದೆ. "ಹೌದು ತಮ್ಮಾ... ಹುಡ್ಲಿಕೇವಿ. ನಮ್ಮ ಪಕ್ಕದ ಊರೇ. ಅದು ಹೊಳೆ ಆಚೆಬದಿ, ನಮ್ಮ ಹರ್ದೂರು ಈಚೆ ಬದಿ," ಎಂದು ದೃಢಪಡಿಸಿದರು.

ಈ ಲೇಖನ ಓದಿದ್ದೀರಾ?: ಊರ್ಬದಿ | ಗುಡ್ಲು ಕಾವಲಿನ ರೋಚಕ ರಾತ್ರಿ ಮತ್ತು ಹೊಳಗೋಡು ಸಾಬರ ಮೋಡಿ ಬೇಟೆ

ಅಷ್ಟು ಕೇಳುತ್ತಲೇ ನನಗೆ, ಎಷ್ಟೋ ವರ್ಷಗಳಿಂದ ಗಂಟುಗಂಟಾಗಿ ಗೋಜಲುಬಿದ್ದು ಕುಳಿತಿದ್ದ ಒಗಟೊಂದು ಸರಕ್ಕನೆ ಬಿಚ್ಚಿಕೊಂಡು ಗುಟ್ಟುಗಳನ್ನು ಬಟಾಬಯಲು ಮಾಡಿದಂತಹ ಭಾವ. "ಹೌದಾ...? ನಿಜವಾಗ್ಲೂ ಹುಡ್ಲಿಕೇವಿ ನಿಮ್ಮೂರು ಹತ್ರಾನೇ ಇತ್ತಾ?" ಎಂದೆ. ಅದಕ್ಕೆ ಅಜ್ಜ, "ಹೂಂ ಕಣಾ ತಮ್ಮಾ... ಯಾಕೋ...?" ಎಂದರು. "ನಮ್ಮಜ್ಜನ ಊರೂ ಹುಡ್ಲಿಕೇವಿ ಅಂತೆ. ನಮ್ಮ ಮನೆ ಹೆಸರು 'ಹುಡ್ಲಿಕೇವಿಯವರ ಮನೆ' ಅಂತ. ಅದ್ಯಾಕೆ ಆ ಹೆಸರು ಎಂದು ಚಿಕ್ಕವನಿರುವಾಗ ಅಜ್ಜನ ಕೇಳಿದಾಗ, 'ಹುಡ್ಲಿಕೇವಿ ಅಂತಹ ಊರಿಂದ ಮುಳುಗಡೆಯಾಗಿ ಬಂದವರು ನಾವು' ಎಂದು ಅಜ್ಜ ಹೇಳಿದ್ದರು..." ಎಂದೆ. "ಹೌದಾ... ನಿಮ್ಮ ಅಜ್ಜನ ಹೆಸರು ಏನು? ಎಷ್ಟು ಜನ ಅಣ್ಣ-ತಮ್ಮಂದ್ರು ಅವರು?" ಎಂದು ಬೀರಜ್ಜ ಕೇಳಿದರು. "ನಮ್ಮಜ್ಜನ ಹೆಸರು ಸಿದ್ದಪ್ಪ. ಅವರು ಐದು ಜನ ಅಣ್ಣ-ತಮ್ಮಂದ್ರು... ಮಂಜ, ಪುಟ್ಟ, ಸಣ್ಣ..." ಅಷ್ಟರಲ್ಲಿ ಅಜ್ಜನ ಕಣ್ಣಲ್ಲಿ ಮಿಂಚು! "ಒಹೋ... ಸಿದ್ದಣ್ಣನ ಮೊಮ್ಮಗನೇನೋ ನೀನು! ಎಲ್ಲಾ ಊರ್ಬದಿಯೋರೆ ತಗಾಳಾ..." ಎಂದರು. "ಪುಟ್ಟ, ಸಣ್ಣ ಎಲ್ಲಾ ನನ್ನ ವಾರಿಗೆಯೋರೆ ಹೆಚ್ಚೂಕಮ್ಮಿ. ನಿಮ್ಮ ಅಜ್ಜ ನನಗಿಂತ ದೊಡ್ಡೋರು. ನಿಮ್ಮ ಅಜ್ಜನ ಚಿಕ್ಕಪ್ಪನ ಮಕ್ಕಳು ಈಗ ಹೆಬ್ಬೈಲು ಹತ್ರ ಇರಬೇಕಲ್ಲನಾ?" ಎಂದು ಕೇಳಿದರು.

ಅಷ್ಟು ಹೊಳವು ಸಿಕ್ಕ ಮೇಲೆ ನೆನಪಿನ ನದಿಗೆ ಹರಿಯಲು ತಾವು ತೋರಿಸಬೇಕೇ? ಸಂಜೆಯಿಂದ ರಾತ್ರಿ ಊಟ ಮಾಡಿ, ಊಟದ ಬಳಿಕ ಎಲೆಯಡಿಕೆ ಹಾಕಿ, ಹತ್ತು ಗಂಟೆಯ ಸುಮಾರಿಗೆ ಕತ್ತಲ ದಾರಿ ತುಳಿಯುವವರೆಗೆ ಅಜ್ಜನ ಬಾಯಲ್ಲಿ ಹುಡ್ಲಿಕೇವಿ, ಹರ್ದೂರು ಮತ್ತು ನಡುವೆ ಹರಿವ ಶರಾವತಿಯ ಮಡಿಲ ಮಕ್ಕಳ ಏಳುಬೀಳಿನ ನೆನಪುಗಳು ಹರಿಯುತ್ತಲೇ ಇದ್ದವು. 

ಸರಿಸುಮಾರು ಮೂರು ದಶಕದ ನನ್ನ ಮೂಲ ಊರಿನ ಹುಡುಕಾಟಕ್ಕೆ ಒಂದು ಉತ್ತರವೂ ಸಿಕ್ಕಿತ್ತು. ಹುಡ್ಲಿಕೇವಿ ಎಂಬ ಮನೆಯ ಹೆಸರು ಹೊತ್ತ ಮೂಲ ಊರು ಮುಳುಗಡೆಯಾಗಿದ್ದು ಮಾತ್ರ ಗೊತ್ತಿದ್ದ ನನಗೆ, ನನ್ನಜ್ಜನ ಬಾಯಲ್ಲಿ ಹೆಚ್ಚಿನ ವಿವರ ಕೇಳುವ ಕುತೂಹಲ, ಅರಿವು ಆ ಎಳೆವೆಯಲ್ಲಿ ಇರಲಿಲ್ಲ. ನನಗೆ ತಿಳಿವಳಿಕೆ ಬಂದು ಮೂಲ ಊರಿನ ಬೆನ್ನು ಹತ್ತುವ ಮಟ್ಟಿನ ಆಸ್ಥೆ ಹುಟ್ಟುವ ಹೊತ್ತಿಗೆ ಅಜ್ಜನೇ ಇರಲಿಲ್ಲ. ಹಾಗಾಗಿ ಪ್ರತೀ ಬಾರಿ ಹೊಳೆ ದಾಟುವಾಗ, ಪ್ರತೀ ಬಾರಿ ಗೆಳೆಯ ಸತ್ಯನ ಕರೆಗೆ ಓಗೊಟ್ಟು ತುಮರಿ ದ್ವೀಪಕ್ಕೆ ಹೋಗುವಾಗ, "ಕಣ್ಣ ಅಳೆಯುದ್ದಕ್ಕೂ ಹಬ್ಬಿದ ನೀರ ರಾಶಿಯಡಿ ಎಲ್ಲಿದೆ ನಮ್ಮೂರು?" ಎಂಬ ಪ್ರಶ್ನೆ ಮತ್ತೆ-ಮತ್ತೆ ಕಣ್ಣ ಕಾತರವಾಗಿ ಕಾಡುತ್ತಲೇ ಇತ್ತು. 

ಅಂತೂ ಆ ಪ್ರಶ್ನೆಗೆ ಉತ್ತರ ಬೀರಜ್ಜನ ಬಳಿ ಇತ್ತು. ಕಳೆದ ಮುಂಗಾರಿನಲಿ ಮಗಳೊಂದಿಗೆ ಸತ್ಯನ ಮನೆಗೆ ಹೋಗುವಾಗ ಅವಳಿಗೆ ಹಳೇ ಊರಿನ ಹೆಸರು ಹೇಳಿ, "ಇಲ್ಲಿದ್ದ ನಮ್ಮಜ್ಜ..." ಎಂದು ತುಂಬಿದ ಶರಾವತಿಯ ಒಡಲ ತೋರಿದೆ. ಆಕೆಗೆ ಏನೊಂದೂ ಅರ್ಥವಾಗಲೇ ಇಲ್ಲ. ಆಗ ಮತ್ತೆ ಬೀರಜ್ಜ ಹೇಳಿದ ಕತೆ ಮರುಕಳಿಸಿತು.

ಈ ಲೇಖನ ಓದಿದ್ದೀರಾ?: ಊರ್ಬದಿ | ಕುಪ್ಪಳಿಯಲ್ಲಿ ಕಂಡೂ ನಿಗೂಢವಾಗಿಯೇ ಉಳಿದ ಕ್ವಾಟ!

ಹಿರೇಭಾಸ್ಕರದಲ್ಲಿ ಮುಳುಗಡೆಯಾಗಿ ಬರಿಗೈಲಿ ವಲಸೆ ಹೋದ ನನ್ನಜ್ಜನ ಗೇಣಿದಾರ ಕುಟುಂಬ, ಅಲ್ಲಿಂದ ಉಳ್ಳೂರು ಬಳಿಯ ನಂದೀಕರೆಯಲ್ಲಿ ನೆಲೆ ಕಂಡುಕೊಂಡು, ಮತ್ತಿಕೊಪ್ಪ ಹೆಗಡೇರ ತೋಟದಲ್ಲಿ ಕೂಲಿ ಮಾಡಿದ್ದು, ಅಲ್ಲಿಂದ ಹುತ್ತಾದಿಂಬದಲ್ಲಿ ಗೇಣಿಗದ್ದೆ ಮಾಡಿದ್ದು, ಕೊನೆಗೆ 1945-50ರ ಹೊತ್ತಿಗೆ ಈಗಿರುವ ಸಂಪಳ್ಳಿಗೆ ಹೋಗಿ ನೆಲೆ ಕಂಡುಕೊಂಡ ಮಹಾ ವಲಸೆಯ ಕತೆ ವಿವರಿಸಿದೆ.

"ಬೀರಜ್ಜ-ನಿಮ್ಮಜ್ಜ ಚಡ್ಡಿದೋಸ್ತ್‌ಗಳು ಹಾಗಾದ್ರೆ?" ಎಂದಳು ಮಗಳು ನಕ್ಕು. ನಿಂತ ಶರಾವತಿಯ ಜಲರಾಶಿಯ ಮೇಲೆ ಹಾಯುತ್ತಿದ್ದ ಲಾಂಚಿನ ಸದ್ದಿನಲ್ಲಿ ಆಕೆಯ ಆ ಮಾತು ಕೂಡ ಬೀರಜ್ಜನ ನೆನಪುಗಳಂತೆಯೇ ಸರಿದುಹೋಯಿತು. ಕೆಳಗೆ ಶರಾವತಿ ಮಾತ್ರ ಎಲ್ಲ ನೆನಪುಗಳ ಮುಳುಗಿಸಿ ಒಳಸುಳಿಗಳಲ್ಲಿ ಹುದುಗಿಸಿ ಮೇಲೆ ಪ್ರಶಾಂತ ಸಾಗರದಂತೆಯೇ ಇದ್ದಳು!

ನಿಮಗೆ ಏನು ಅನ್ನಿಸ್ತು?
0 ವೋಟ್
eedina app