ಅಪ್ರಮೇಯ | ಸಂಬಂದ ಅನ್ನೋದು ದೊಡ್ದು ಕನಾ!

trance gender

“ಹಮಾಲಿ ನನ್ನ ಮಗನೆ ನಿಂಗೆ ನನ್ನ ಮಗಳೇ ಬೇಕಾಯ್ತಾ? ಏನಿಟ್ಕೊಂಡು ಮಾಡ್ತೀಯ?” ಅಂತ ಶುರು ಮಾಡಿದ್ದು ಅವನ ದೇಹಾಂಗಗಳನ್ನು ಹಿಂಸಿಸಿ, ಅವನಿಗೆ ಮೊಟ್ಟೆ ಹೊಡೆದು, ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದರು. ಅವರ ಕಡೆಯವರು ಹಿಂಸೆಯ ಒಂದೊಂದು ಪದರಕ್ಕೂ ಅವಳ ಕಡೆಯವರು ಹೆಚ್ಚಾಗುತ್ತಿದ್ದರು. ಆದ್ರೇ ಅವಳು ಮಾತ್ರ ಕೊನೆಯವರೆಗೂ ಕಾಣಲೇ ಇಲ್ಲ

ನಂಗ್ ತುಂಬಾ ಇರ್ಸುಮುರ್ಸು, ಯಾರಾದ್ರೂ ನನ್ನ ನೋಡ್ತಾ ಇದ್ದಾರ ಅಂತ? ಎಲ್ಲಿ ನೋಡ್ತಾ ಇದ್ದಾರೆ? ಏನ್ನ ದುರ್ಗುಟ್ಕೊಂಡು ನೋಡ್ತಾರೆ ಅಂತ ಆತಂಕ. ಮಾಂಜಿ ಬಗ್ಗಿ ಜಲ್ಲಿ ಕಲ್ಲನ್ನು ಆ ಕಟ್ಟಡ ಕಟ್ಟುವ ಸೈಟಿನಲ್ಲಿ ಎತ್ತುವಾಗ ಯೋಚನೆ ಮಾಡ್ತಿದ್ದಾನೆ. ಆದ್ರೆ ಆ ಹುಡ್ಗಿ ಮಾತ್ರ ಯಾಕೆ ಅವನನ್ನು ದುರ್ಗುಟ್ಕೊಂಡು ನೋಡ್ತಿದ್ಲು ಅಂತ, ತಲೆ ಮೇಲಿರುವ ಜಲ್ಲಿ ಕಲ್ಲನ್ನು ಸಿಮೆಂಟಿನ ರಾಶಿಗೆ ಸುರೀತಾ ನಿಟ್ಟುಸಿರು ಬಿಟ್ಟ. ಮಾಂಜಿಗೆ ಒಂದೇ ಒಂದು ಬಯ. ಮನೆಮಂದಿಯನ್ನೆಲ್ಲಾ ಬಿಟ್ಟು ಎಲ್ಲಿ ಬೇಕಾದರೂ, ರಸ್ತೆ ಬದಿಯಲ್ಲಿಯೂ ಮಲಗಿ ಜೀವನ ಮಾಡೋ ಗಟ್ಟಿತನ ಎದೆಗಾರಿಕೆ ಇತ್ತು. ಮಾಂಜಿ ಮನೆ ಬಿಟ್ಟು ಓಡಿ ಬಂದಿದ್ದು ಮನೆಯವರು ಅವನಿಗೆ ಮದುವೆ ಮಾಡಕ್ಕೆ ನಿಶ್ಚಯ ಮಾಡಿದ್ರು ಅಂತ.

ವಲಸೆ ಬಂದೂ ವಲಸೆ ಬಂದೂ ಎಶ್ಟು ದೂರ ಬಂದ್ಬಿಟ್ಟಿದ್ದ ಅವರ ಮನೆಯಿಂದ ಅಂದ್ರೆ, ಈಗ ವಾಪಸ್ಸು ಹೋಗ್ಬೇಕು ಅಂದ್ರೆ ಎರಡು ಬಸ್ಸು ಒಂದು ರೈಲು ಹತ್ಬೇಕು, ಅಂತ ಅವನ ಮ್ಯಾನೇಜರ್ ಹೇಳಿದನಂತೆ. ಮಾಂಜಿ ಆ ಜಲ್ಲಿ ಕಲ್ಲನ್ನು ತುಂಬಿಸಿಕೊಂಡ ಮಂಕ್ರಿಯನ್ನು ಎತ್ಕೊಂಡು, ಜಲ್ಲಿ ಕಲ್ಲನ್ನು ತುಂಬಿಸ್ಕೊಂಡು ಬರಕ್ಕೆ ತಿರುಗಿದಾಗ ಆ ಹುಡ್ಗಿ ಅವನನ್ನೇ ನೋಡ್ತಿದ್ಲು. ಮಾಂಜಿ ಯಾವ ಊರಿನಲ್ಲೂ ಒಂದು ವರ್ಶಕಿಂತ ಮೇಲೆ ಕಳೆದಿಲ್ಲ. ಅವನು ಕೂಲಿ ಕೆಲಸದಿಂದ ಶುರು ಮಾಡಿ ಒಂದೇ ಊರಿನಲ್ಲಿ ಇದ್ದಿದ್ರೆ ಇಶ್ಟೊತ್ತಿಗೆ ಮೇಸ್ತ್ರಿ ಆಗ್ಬಿಡ್ತಿದ್ದ. ಆದ್ರೆ, ಮಾಂಜಿ ಯಾಕೋ ಅವನು ಕೆಲಸ ಮಾಡ್ತಿದ್ದ ಕಡೆಯಲ್ಲಿ ಯಾರಾದ್ರು ಅವನ ಜೊತೆ ಸ್ವಲ್ಪನಾದ್ರೂ ಸ್ನೇಹ ಬೆಳೆಸಿದ್ರೆ ಅವನು ಅಲ್ಲಿಂದ ಪರಾರಿ. ಆದ್ರೆ, ಈ ಊರಿಂದ ಹೋಗಲು ಅವನಿಗೆ ಯಾಕೋ ಮನಸ್ಸಿರಲಿಲ್ಲ. ಆ ನೋಟದಲ್ಲೆ ಆ ಹುಡ್ಗಿ ಜೊತೆ ಸ್ನೇಹ ಬಿಳೆಸಿಕೊಂಡ ಮಾಂಜಿ. ಅವರಿಬ್ಬರ ನಡುವೆ ಬೇರೆ ಮಾತು ಕತೆ ಏನೂ ಇರಲಿಲ್ಲ. ಬರೀ ಒಬ್ಬರನ್ನೊಬ್ಬರು ನೋಡೋದು.

Image
prameya

ಆ ನೋಟದಲ್ಲಿ ಅದೇನು ಸುಕ ಅನುಬವಿಸುತ್ತಿದ್ದ ಮಾಂಜಿ ಅಂತ ಗೊತ್ತಿಲ್ಲ. ಆದ್ರೆ, ಮಾಂಜಿ ಮತ್ತು ಅವಳು ಅವರ ಸುತ್ತ ಒಂದು ಜೀವನ ಕಟ್ಟಿಕೊಂಡರು. ಇತ್ತೀಚೆಗೆ ಮಾಂಜಿಗೆ ಬೇರೆ ಒಂದು ಚಿಂತೆ. ಅದಕ್ಕೆ ಬಜಾರಿಗೆ ಹೋದಾಗ ಅವನು ಏನೇನೋ ಟಿಶರ್ಟು, ಬನಿಯನ್ನು, ಪ್ಯಾಂಟು ಎಲ್ಲಾ ತಗೋತಿದ್ದ. ಗಾರೆ ಕೆಲ್ಸ ಮಾಡೋ ಕಡೆ ಎಲ್ಲರೂ ಮಾಸಿದ ಬಟ್ಟೆ ಹಾಕಿದರೆ ನಮ್ಮ ಮಾಂಜಿ ದಿನಾ ತುಂಬಾ ನೀಟಾಗಿ ಪ್ಯಾಂಟು ಶರ್ಟು ಹಾಕಿಕೊಂಡು ಕೈ ಸ್ಲೀವ್ ಮಡಸಿ, ಪ್ಯಾಂಟ್ ಕಾಲಿನಲ್ಲಿ ಮಡಸಿ ತಲೆಗೆ ಒಂದು ಟವೆಲ್ ಸುತ್ತಿ ವ್ಯಾಯಾಮ ಮಾಡಿದಂತ ದೇಹವನ್ನು ಅತೀ ಸುಲಬವಾಗಿ ಹೇಗೆ ಬೇಕಾದರೂ ಬಗ್ಗಿಸಿ ಕೆಲಸ ಚಕಚಕಾ ಅಂತ ಮಾಡುತ್ತಿದ್ದ.

ಅವಳು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಬಾಯಲ್ಲಿ ಮುತ್ತು ಕೊಡಲು ಶುರು ಮಾಡಿದಳು. ಮಾಂಜಿಗೆ ದೇಹದಲ್ಲೆಲ್ಲಾ ಒಂದು ಸಿಡಿಲು ಬಡಿದಂಗಾಗಿ ಅವಳನ್ನು ತಳ್ಳಿ ದೂರ ನಡುಗುತ್ತಾ ನಿಂತ. ಅವಳು ಅವನ ದೇಹವನ್ನು ಮುಟ್ಟಿದ್ದು ಸಂತೋಶವೂ ಆಯಿತು ನಡುಕಾನೂ ತಂದಿತು. ನಡುಕ ಯಾಕೆ ಅಂತ ಅವನು ತುಂಬಾ ಯೋಚಿಸಿದ. ದಿನಾ ದಿನಾ ಅವಳು ಅವನ ಕೆಲಸ ಮುಗಿಯುವ ವೇಳೆಗೆ ಅಲ್ಲಿ ಹತ್ತಿರದ ಝಾಡಿಯಲ್ಲಿ ಬಂದು ಸುಮ್ಮನೇ ನಿಂತು ಒಂದು ಕಿರುನಗೆ ತಗುಲಾಕ್ಕೊಂಡು ಅವನನ್ನೇ ಗುರಾಯಿಸುತ್ತಿದ್ದಳು. ಒಂದು ದಿನ ಮಾಂಜಿಗೆ ತಡೆಯಲಾರದೆ ಅವಳ ಹತ್ತರ ಹೋದಾಗ ಯಾರೂ ಕಾಣದಂತೆ ಅವಳು ಅವನನ್ನು ಅಪ್ಪಿ ಹಿಡಿದಳು. ಅಲ್ಲಿಂದ ಅವರ ಸಂಬಂದ ಶುರುವಾಯಿತು.

ಈ ಲೇಖನ ಓದಿದ್ದೀರಾ?: ಅಪ್ರಮೇಯ | ತಪ್ಪು ತಿಳ್ಕೊಳಲ್ಲಾ ಅಂದ್ರೆ ನಿಮ್ಮನ್ನ ಒಂದು ಮಾತು ಕೇಳ್ಲಾ?

ಮಾತಿಲ್ಲ. ನೋಟ ಮಾತ್ರ. ಈಗ ಸ್ಪರ್ಶ. ಆದ್ರೆ ಅವನಿಗೆ ಸ್ಪರ್ಶ ಇನ್ನೂ ಇರ್ಸುಮುರ್ಸು. ಅವಳನ್ನು ತನ್ನ ದೇಹವನ್ನು ಅಶ್ಟು ಸುಲಬವಾಗಿ ತಡವಲು ಬಿಡುತ್ತಿರಲಿಲ್ಲ. ಮೊದಮೊದಲು ಅವಳು ಅವನ ಹಿಂಜರಿಕೆಯನ್ನು ಅರ್ತ ಮಾಡ್ಕೊಳಕ್ಕೆ ಆಗಿಲ್ಲ. ಆದ್ರೆ ಈ ರೀತಿಯಲ್ಲಿ ಅವರು ಬೇಟಿ ಮಾಡುತ್ತಾ ಮಾಡುತ್ತಾ ಒಂದು ದಿವಸ, ಅವನು ತಾನೇನು ಅನ್ನೋದನ್ನು ಅವಳಿಗೆ ತಿಳಿಸಿದ. ಅಂದು ಅವನನ್ನು ಅವಳ ಮನೆಯವರು ಕರೆದಿದ್ದರು. ಅವಳ ಅವನ ಏನೋ ಒಂದು ರೀತಿಯಾದ ನಂಟು ಅವಳ ಮನೆಯವರಿಗೆ ತೀವ್ರ ಆತಂಕ ಹುಟ್ಟಿಸಿ, ಅವಳನ್ನು ಹೆದರಿಸಿದಾಗ ಅವಳು ಅವರನ್ನು ಹೆದರಿಸಿದಳು. ನೇಣು ಹಾಕ್ಕೋತಾಳೆ ಅಂತ. ಅದಕ್ಕೆ ಹೆದರಿ ಅವರು ಅವನನ್ನು ಕರೆದು ಮಾತನಾಡಿಸಲು ತೀರ್ಮಾನಿಸಿದರು.

ಅಸಲಿಗೆ ಅವರು ಸ್ತಿತಿವಂತರಾಗಿದ್ದು ತಮ್ಮ ಮಗಳು ಇಂತವನ ಜೊತೆ ಸಂಬಂದ ಮಾಡಿದ್ದು ಸಿಕ್ಕಪಟ್ಟೆ ಕೋಪ ತರಿಸಿತ್ತು. ಆದ್ರೂ, ಮಗಳೂ ಅಂತ ಕರೆದಿದ್ರು. ಅವನ ಮಾತು ತೀರಾ ಮಾತಿಲ್ಲ. ಕೆಲಸದ ಸ್ತಳದಲ್ಲೂ ಯಾರ ಕೋಡೆ ಮಾತನಾಡುತ್ತಿರಲಿಲ್ಲ. ತನ್ನ ಕೆಲಸ ತಾನು ಅಂತ ಇದ್ದವನು. ಆದ್ರೆ, ಈ ಮನೆಗೆ ಕರೆದಾಗ ಅವನೂ ತೀವ್ರ ಆತಂಕದಲ್ಲಿದ್ದ. ಅವನ ವಾಯ್ಸ್ ಗೊತ್ತಾಗಿ ಬಿಟ್ರೆ. ಅವನು ಅನ್ಕೊತಿದ್ದ, ಪ್ರೇಮಕ್ಕೆ ಹೋರಾಡಲೋ, ಜೀವಕ್ಕೆ ಹೋರಾಡಲೋ? ಅವನ ದೇಹ ಅವನ ವಾಯ್ಸು ಅವನ ಇಡೀ ಜೀವನದಲ್ಲಿ, ಮನೆಯಲ್ಲಿ, ಕೆಲಸದ ಸ್ತಳದಲ್ಲಿ, ಸರ್ವಬದುಕು ಹೋರಾಟದ ಪ್ರಶ್ನೆಯಾಗಿತ್ತು. ಇಲ್ಲಿ ಈಗ ಮತ್ತೊಂದು ಪ್ರಶ್ನೆ. ತಾನು ಯಾರು ಅಂತ ಹೇಳಬೇಕು.

Image
Gender

ಮಾಂಜಿಯ ತಲೆಯ ಮೇಲೆ ಬಲವಾದ ಪೆಟ್ಟು ಬಿದ್ದಿತ್ತು. ರಕ್ತ ಸುರಿಯುತ್ತಿತ್ತು. ಆದ್ರೆ, ಅವನು ಜೋರಾಗಿ ಅತ್ತಿದ್ದು ಅದಕ್ಕಲ್ಲ. ಅವಳ ಮನೆಯವರು ಅವನ ವಾಯ್ಸ್ ಕೇಳಿ ಅವನು ಹಾಕಿದ್ದ ಶರ್ಟನ್ನು ಕಿತ್ತು ಹಾಕಿ ಅವನು ಅರೆ ಬೆತ್ತಲೆ ನಿಂತಿದ್ದ. ಇದಕ್ಕೆ ಕಾರಣ ಅವನು ಚೆಂದ ಡ್ರೆಸ್ ಮಾಡಿ ಅವಳ ಮನೆಗೆ ಬಂದ. ಅವರು ಅವನನ್ನು ಕೂರಿಸಿದರು. ಅವನಿಗೆ ಚಹ ತರಲು ಮನೆಯವರಿಗೆ ಹೇಳಿದರು. ಅವನ ಮುಂದೆ ಇಬ್ಬರು ದಾಂಡಿಗರು ಕೂತಿದ್ದು ಎಲ್ಲಾ ಪ್ರಶ್ನೆಗಳೂ ಅವರೇ ಕೇಳುತ್ತಿದ್ದರು. ಆದ್ರೆ, ಅವಳು ಎಲ್ಲೂ ಕಾಣಲಿಲ್ಲ. ಅವರು ಮೊದಲು ಕೇಳಿದ್ದು “ನೀನು ಯಾವ ಜಾತಿ? ನಿಮ್ ಮನೆಯವರು ಎಲ್ಲಿಯವರು?” ಈ ಪ್ರಶ್ನೆಗೆ ಹೇಗೆ ಉತ್ತರಿಸಲಿ ಎಂದು ಯೋಚಿಸಿ ಅವನು ತನ್ನ ಅವಾಜನ್ನು ಉಪಯೋಗಿಸಿದ. ಆವಾಜು ಮತ್ತು ಮತ್ತು ತನ್ನ ಮನೆಯವರ ಹಿನ್ನೆಲೆ ಹೇಳಿದ್ದೇ ತಡ ಅವರು ಮಾರಕ ಹಲ್ಲೆ ಮಾಡ ತೊಡಗಿದ್ದರು. ಒಂದು ತನ್ನ ಮನೆಯವರು ತನ್ನ ಊರಲ್ಲಿ ಹಮಾಲಿಗಳು ಎಂದು ಹೇಳಿದ್ದು ಮತ್ತು ತನ್ನ ಆವಾಜು ತಾನು ಗಂಡಲ್ಲ ಎನ್ನುವ ವಿಶಯ.

ಅವಳ ಮನೆಯವರು ಅವನ ಬೆತ್ತಲಾಗಿಸಿ “ನೀನು ಗಂಡಸಾ?”, “ನಿಂಗೆ ಶಿಶ್ನ ಎಲ್ಲಿ”, ಅಂತೆಲ್ಲಾ ಹೇಳಿ “ಹಮಾಲಿ ನನ್ನ ಮಗನೆ ನಿಂಗೆ ನನ್ನ ಮಗಳೇ ಬೇಕಾಯ್ತಾ? ಏನಿಟ್ಕೊಂಡು ಮಾಡ್ತೀಯ?” ಅಂತ ಶುರು ಮಾಡಿದ್ದು ಅವನ ದೇಹಾಂಗಗಳನ್ನು ಹಿಂಸಿಸಿ, ಅವನಿಗೆ ಮೊಟ್ಟೆ ಹೊಡೆದು, ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದರು. ಅವರ ಕಡೆಯವರು ಹಿಂಸೆಯ ಒಂದೊಂದು ಪದರಕ್ಕೂ ಅವಳ ಕಡೆಯವರು ಹೆಚ್ಚಾಗುತ್ತಿದ್ದರು. ಆದ್ರೇ ಅವಳು ಮಾತ್ರ ಕೊನೆಯವರೆಗೂ ಕಾಣಲೇ ಇಲ್ಲ.

ಈಗ ಅವನು ಜೈಲಿನಲ್ಲಿದ್ದಾನೆ. ಅವನನ್ನು ಹೊರ ತರಲು ಯಾರೂ ಇಲ್ಲ. ಅವನ ಮೇಲೆ ದೂರು – ಅವಳಾಗಿ ಅವನು ಎಂದು ಹೇಳಿ ಗಾರೆ ಕೆಲಸ ಮಾಡುತ್ತಾ ಹಣ ಸಂಪಾದನೆ ಮಾಡಿ, ಹೆಣ್ಣು ಮಕ್ಕಳನ್ನು ಅನೈತಿಕ ಸಂಬಂದಕ್ಕೆ ದೂಡಿ ಹೆಣ್ಣು ಮಕ್ಕಳ ಚಾರಿತ್ರ್ಯ ಮತ್ತು ಜಾತಿ ಕೆಡಿಸುವ ಕೆಲಸ. ಮಾಂಜಿ ಒಬ್ಬ ಟ್ರಾನ್ಸ್ ಮ್ಯಾನ ದಲಿತ ಕೂಲಿ ಕೆಲಸಗಾರ ಮತ್ತು ವಲಸೆ ಬಂದ ಕರ್ಮಿಕ.

'ಎಲ್ಲರ ಕನ್ನಡ' ಎಂದು ಹೇಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
2 ವೋಟ್