ಅಪ್ರಮೇಯ | ಪುರುಶ ಪ್ರದಾನ ದಬ್ಬಾಳಿಕೆಗಳನ್ನೆಲ್ಲ ಕಾನೂನಿನ ಕಟಕಟೆಗೆ ತಂದು ನಿಲ್ಲಿಸುವುದು ಅತ್ಯವಶ್ಯ

Transgenders life 3

ಪುರುಶ ಪ್ರದಾನ ಮನಸ್ತಿತಿಯ ಇರಾದೆಗಳು, ದೌರ್ಜನ್ಯ ಎಸಗುವವರ ಹಿನ್ನೆಲೆ, ಇತರರ ಮನಸ್ಸು-ದೇಹಗಳನ್ನು ತಮ್ಮ ಜಾಗೀರು ಎಂದುಕೊಳ್ಳುವ ಊಳಿಗಮಾನ್ಯ ಮನೋಬಾವ, ಬಲಹೀನ ವ್ಯಕ್ತಿಯನ್ನು ಯಾವಾಗ-ಹೇಗೆ ಬೇಕಾದರೂ ಉಪಯೋಗಿಸುವ ದುರ್‍ವರ್‍ತನೆ... ಇದೆಲ್ಲವೂ ಕಾನೂನಡಿಯಲ್ಲಿ ಬರದೆ ಒಬ್ಬ ಮನುಶ್ಯನಿಗೂ ನ್ಯಾಯ ಸಿಗುವುದಿಲ್ಲ

ಕಳೆದ ಬಾರಿ ಅಂಕಣ ಬರೆದಾಗ ಒಂದು ಹುರುಪಿನಲ್ಲಿ ಬರೆದುಬಿಟ್ಟೆ. ಆಮೇಲೆ ಎರಡು ದಿವ್ಸ ನಿದ್ದೆ ಬಂದಿಲ್ಲ. ಆದ್ರೆ ಇದನ್ನ ಹಾಗೇ ಬಿಡಲೂ ಅಗಲ್ಲ. 'ಪರ್ಸನಲ್ ಈಸ್ ಪೊಲಿಟಿಕಲ್' ಎನ್ನುವುದನ್ನು ಪಾಲಿಸೋ ನನಗೆ, ಕಳೆದ ಬಾರಿ ನನ್ನ ವೈಯಕ್ತಿಕ ಅನುಬವವನ್ನು ನಿಮ್ಮ ಮುಂದೆ ತೆರೆದಿಟ್ಟೆ. ಲೈಂಗಿಕ ಹಿಂಸೆಯ ಬಗ್ಗೆ ನಾನು ಮೊದಲು ಓದಿದ್ದು ಆಗ ಇದ್ದ 'ರೇಪ್ ಲಾ ಐಪಿಸಿ 375.' ಆಗ ನಾನು ಹೆಂಗಸರ ಹಕ್ಕಿನ ಸಂಗವೊಂದರಲ್ಲಿ ಕೆಲಸ ಮಾಡುತ್ತಿದ್ದೆ.

2005ರಲ್ಲಿ ನಾನು ಸುನಿಲನಿಗೆ, ಇದನ್ನು ಒಂದು ದೊಡ್ಡ ತಮಾಶೆಯಂತೆ ಓದಿ ತೋರಿಸುತ್ತಿದ್ದೆ. ಆ ರಾತ್ರಿ ನಾನು ಸುನಿಲ ಕುಡೀತಾ, ಲೈಂಗಿಕ ಹಿಂಸೆಯನ್ನು 'ರೇಪ್' ಎಂದು ಕರೆಯಬೇಕೋ ಬೇಡವೋ ಅಂತ ಚರ್ಚೆ ಮಾಡ್ತಾ ಇದ್ವಿ. ಇದರ ಜೊತೆಗೆ, 2001ರಲ್ಲಿ ಫಮಿಲ ಒಂದು ವಿಶಯವನ್ನು ನಮ್ಮೆಲರ ಜೊತೆ ತುಂಬಾ ಗಾಡವಾಗಿ ಚರ್ಚಿಸಿದ್ದಳು. ಲೈಂಗಿಕ ಹಿಂಸೆಯ ವಿಶಯದಲ್ಲಿ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಕ್ಯಾತರನ್ನು ಒಳಗೊಳ್ಳಲು ಆ ಕಾನೂನನ್ನು ಜೆಂಡರ್ ನ್ಯೂಟ್ರಲ್ ಮಾಡಬೇಕು ಅನ್ನೋದು ಆ ವಿಶಯ. ಅಂದರೆ, ಅಪರಾದ ಎಸಗುವವರು ಮತ್ತು ಸಂತ್ರಸ್ತರು ಇಬ್ಬರೂ ಗಂಡಸೂ ಆಗಬಹುದು ಅತವಾ ಹೆಂಗಸೂ ಆಗಬಹುದು ಎಂದು. ಆ ಚರ್ಚೆ ಒಂದು ಸಮುದಾಯವನ್ನು ಒಳಗೊಳ್ಳಲು ಈಗಾಗಲೇ ಇರುವ ಅನೇಕ ಶೋಶಿತ ಸಮುದಾಯಗಳನ್ನು ಅಪಾಯಕ್ಕೆ ಒಡ್ಡುವಂತೆ ಇತ್ತು. ಫಮೀಲ ಸ್ಪಶ್ಟವಾಗಿ ಹೇಳಿದ್ದಳು: "ಈ ರೀತಿಯಾದರೆ ದಲಿತ, ಆದಿವಾಸಿ, ಮುಸ್ಲಿಮ್ ಮತ್ತು ಇತರ ಶೋಶಿತ ಸಮುದಾಯದ ಮಹಿಳೆಯರನ್ನು ತೀವ್ರ ಅಪಾಯಕ್ಕೆ ಒಡ್ಡಿದಂತಾಗುತ್ತದೆ." ಕಸ್ಟಡಿ ಅಂದ್ರೆ ಪೋಲೀಸ್ ಕಸ್ಟಡಿಯಲ್ಲಿ ಈ ರೀತಿ ಜೆಂಡರ್ ನ್ಯೂಟ್ರಾಲಿಟಿ, ಅಂದ್ರೆ, ಗಂಡಸಾದರೂ ಹೆಂಗಸಾದರೂ, ಅಪರಾಧ ಎಸಗುವ ಮತ್ತು ಸಂತ್ರಸ್ತರಾಗುವುದ್ರಲ್ಲಿ ಸ್ವಲ್ಪ ನಮ್ಮ ಸಮುದಾಯವನ್ನು ಸೇರಿಸಬಹುದು ಎಂದು ಆಕೆ ಹೇಳುತ್ತಿದ್ದಳು. ನಂತರ ಹಲವು ಸಬೆಗಳು ನಡೆದು, ಕೆಲವೇ ಫೆಮಿನಿಸ್ಟರು ಮಾತ್ರ ಈ ಸಬೆಗಳಿಗೆ ಹೋಗಿ, ಮತ್ಯಾರಿಗೂ ಈ ವಿಶಯಗಳು ಹೆಚ್ಚು ತಲುಪಲಿಲ್ಲ.

Image
Transgenders life 5
ಸಾಂದರ್ಭಿಕ ಚಿತ್ರ

ಆ ರಾತ್ರಿ ಸುನಿಲು, ನಾನು ಈ ವಿಶಯಗಳ ಬಗ್ಗೆ ತುಂಬಾ ಬರೆದೆವು. ಸುಮಾರು ಎರಡು ವರ್ಶದವರೆಗೆ ನೋಟ್ಸ್ ಮಾಡ್ತಾ ಇದ್ವಿ. ಒಂದು ಸಾರಿ, ನಮ್ ಅರ್ವಿಂದ್ ನಾರಾಯ್ನ್ (ವಕೀಲ ಮತ್ತು ಸಾಮಾಜಿಕ ಹೋರಾಟಗಾರ, ಪರ್ಯಾಯ ಕಾನೂನು ವೇದಿಕೆಯ ಸಂಸ್ಥಾಪಕ ಸದಸ್ಯ ಮತ್ತು ನನಗೂ ಸುನಿಲನಿಗೂ ಆಪ್ತ ಸ್ನೇಹಿತ) ಹತ್ರ ಮಾತನಾಡಿದಾಗ ಅವನು, ಅಲ್ಲಿ ಚರ್ಚೆ ಇಶ್ಟರವರೆಗೆ ಬಂದಿತ್ತು ಎಂದು ವಿವರಿಸಿದ. ಅದೇನೆಂದರೆ, ಸಂತ್ರಸ್ತ ಗಂಡಸು, ಹೆಂಗಸು ಅತವಾ ಲಿಂಗತ್ವ, ಲೈಂಗಿಕ ಅಲ್ಪಸಂಕ್ಯಾತ ಸಮುದಾಯದವರು ಆಗಿರಬಹುದು, ಆದ್ರೆ ಅಪರಾದ ಎಸಗುವವನು ಗಂಡಸು ಮಾತ್ರವೆಂದು ತೀರ್ಮಾನಿಸಿದ್ದರು ಮತ್ತು ಲಾ ಕಮಿಶನ್‍ಗೆ ಅವರುಗಳ ಶಿಫಾರಸುಗಳನ್ನು ಕೊಡಲಾಗಿತ್ತು ಕೂಡ.

ಆದ್ರೆ, ನಾನು ಮತ್ತು ಸುನಿಲ್ ಮಾಡಿದ್ದು ಬೇರೆ. ಅವನ ಮಾತನ್ನು ಕೇಳಿ ಮತ್ತಶ್ಟು ನೋಟ್ಸ್ ಮಾಡಿಕೊಂಡೆವು. ಕಾನೂನು ತಜ್ಞರಿಗೆ ಇದು ಅನವಶ್ಯ ಎನಿಸಬಹುದು. ಆದ್ರೆ, ಎಲ್ಲಿಯತನಕ ನಾವು ಈ ಲೈಂಗಿಕ ಹಿಂಸೆಯ ಉದ್ದೇಶ ಅರ್ತ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯತನಕ ಇಂತಹ ಹಿಂಸೆಯನ್ನು ಬುಡದಿಂದ ತೆಗೆದುಹಾಕಲು ಸಾದ್ಯವಿಲ್ಲ. ಆಗಲೇ ನಮಗೆ ತಿಳಿದಿದ್ದು - ಎಲ್ಲ ಲೈಂಗಿಕ ಹಿಂಸೆ ಒಂದೇ ತರ ಇರುವುದಿಲ್ಲ ಮತ್ತು ಒಂದೇ ರೀತಿಯಲ್ಲಿ ನಡೆಯುವುದಿಲ್ಲ ಎಂದು. ಆಗ ನಾವು ಹಳೇ ವರದಿಗಳನ್ನ ತೆಗೆದು ಓದಲು ಶುರು ಮಾಡಿ, ನಮ್ಮ ಸಮುದಾಯದವರ ಹತ್ರನೂ ಮಾತಾಡಿ, ನಮ್ಮ ಅನುಬವಗಳನ್ನು ಬರೆದು, ಒಂದೊಂದರ ಹಿಂದೆಯೂ ಇರುವ ಇರಾದೆಯ ಬಗ್ಗೆ ಯೋಚನೆ ಮಾಡಿದೆವು.

ಹುಟ್ಟಿನಲ್ಲಿ ಹೆಣ್ಣು ಎನ್ನುವ ತಾವು, ಗಂಡಸರು ಎಂದು ಗುರುತಿಸುವ ಟ್ರಾನ್ಸ್‌ಜೆಂಡರ್ ಜನರಿಗೆ ‘ನಿಜವಾದ ಗಂಡಸುತನ’ ತೋರಿಸಲು ಲೈಂಗಿಕ ಹಿಂಸೆ ಕೊಡುವುದು, ಅದರಲ್ಲೂ ಆ ವ್ಯಕ್ತಿ ದಲಿತ ಆಗಿದ್ದರೆ, ಲೈಂಗಿಕ ಹಿಂಸೆಯ ಜೊತೆಗೆ ಬೆತ್ತಲೆ ಮಾಡಿ ಊರೆಲ್ಲ ಮೆರವಣಿಗೆ ಮಾಡುವುದು, ಕೇಸು ದಾಕಲಿಸದೆ ಇರುವುದು... ಇದೆಲ್ಲ ಅದೆಂತ ಹಿಂಸೆ! ಜೊತೆಗೆ, ಇಂತಹ ವ್ಯಕ್ತಿಗಳಿಗೆ ಬಲವಂತವಾಗಿ ಮದುವೆ ಮಾಡುವ ಮೂಲಕ ದಿನನಿತ್ಯದ ಲೈಂಗಿಕ ಹಿಂಸೆ ಅನುಬವಿಸಬೇಕಾಗುತ್ತದೆ ಅವರ ಗಂಡಂದಿರಿಂದ. ಅವರು ಮುಸ್ಲಿಮೋ ಆದಿವಾಸಿನೋ ಆಗಿದ್ದರೆ, ಅವರ ಲೈಂಗಿಕತೆ ಬಹಳ ಸುಲಭವಾಗಿ ಸಿಗುವ ದ್ವೇಶ ಸೇರಿರುವ ಬುದ್ದಿ ಕಲಿಸುವ, ಪಾಟ ಕಲಿಸುವ ಎಲ್ಲ ಅದಿಕಾರಗಳನ್ನೂ ಪುರುಶ ಪ್ರದಾನ ವ್ಯವಸ್ತೆಯ ಗಂಡಸರು ತಮ್ಮ ಡ್ಯೂಟಿಯಾಗಿ ತೆಗೆದುಕೊಳ್ಳುತ್ತಾರೆ.

ಈ ಲೇಖನ ಓದಿದ್ದೀರಾ?: 'ಎಲ್ಲರ ದೇಹ ನಿನ್ನ ಆಸ್ತಿ-ಜಮೀನು ಅಲ್ಲ' ಅಂತ ಕೂಗಬೇಕೆನಿಸಿತ್ತು...

ಹುಟ್ಟಿನಲ್ಲಿ ಗಂಡಸಾಗಿದ್ದು ಹೆಣ್ಣು ಎಂದು ಗುರುತಿಸುವ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಲೈಂಗಿಕ ಹಿಂಸೆ ಇನ್ನೂ ಹೆಚ್ಚು. ಏಕೆಂದರೆ, ಅವರಿಗೆ ಬೇಡದ ಗಂಡಸುತನದ ಪರಿಚಯ ಮಾಡಲು ಜನ ತುತ್ತತುದಿಯಲ್ಲಿ ಕಾಯುತ್ತಿರುತ್ತಾರೆ. ಇಲ್ಲದಿದ್ದರೆ ಅವರ 'ಗಂಡಸುತನ'ಕ್ಕೆ ಆಗುವ ‘ಅವಮಾನ’ ಹೇಗೆ ಸಹಿಸಿಯಾರು? ಆ ವ್ಯಕ್ತಿ ಮುಸ್ಲಿಮ್ ಆಗಿದ್ದರೆ ಅವರ ಸುನ್ನತನ್ನು ತರುವುದು, ಆದಿವಾಸಿಯಾಗಿದ್ದರೆ ಲೈಂಗಿಕವಾಗಿ ಸಮಾಜವನ್ನು ಕೆಡಸುವ ಕೆಲಸ ನಿಲ್ಲಿಸಲು ಲೈಂಗಿಕ ಹಿಂಸೆ ಕೊಟ್ಟು ಬುದ್ದಿ ಹೇಳುವ ನೆಪ ಹುಡುಕುವುದು... ಈ ಎಲ್ಲ ಇರಾದೆಗಳನ್ನು ಕಾನೂನಡಿಯಲ್ಲಿ ತರುವುದು ಬಹಳ ಮುಕ್ಯ.

ಊನಾ, ಹತ್ರಾಸ್, ಕತುವಾ, ಜಿಶಾ, ದಾನಮ್ಮ ಮುಂತಾದ ಎಲ್ಲ ಲೈಂಗಿಕ ಹಿಂಸೆಯ ಹಿಂದೆ ಇಂತಹ ಇರಾದೆಗಳು, ಸಹಜವಾಗಿ ಸಿಗುತ್ತಾರೆ ಎನ್ನುವ ಅನಿಸಿಕೆ, ಬುದ್ದಿ ಕಲಿಸುವ ಹುಂಬತನ, ದುರ್ಬಲ ಜೆಂಡರ್ ಎಂದುಕೊಂಡು ಅವರಿಗೆ ಅವರ ಜಾಗ ತೋರಿಸುವ, ಹೆಣ್ಣು ಗಂಡಸಾಗುವ ಮೂಲಕ ‘ಗಂಡಸುತನ'ಕೆ ದಕ್ಕೆ ಬಂದಾಗ, ಅದು 'ಇಗೋ' ಪ್ರಶ್ನೆಯಾಗಿ, ಗಂಡು ದೇಹ ಇರುವವರು ಹೆಂಗಸು ಎಂದು ಗುರುತಿಸಿಕೊಳ್ಳುವಾಗ ಪುರುಶ ಪ್ರದಾನ ಸಮಾಜದವರಿಗೆ ಅದು ಅವಮಾನವಾಗಿ, ತಾವು ಎಶ್ಟಾದರೂ ಜಾತಿಯಲ್ಲಿ ಶ್ರೇಶ್ಟರು ಎಂದು ಬೇರೆ ‘ಶ್ರೇಶ್ಟ’ವಲ್ಲದ ದೇಹಗಳನ್ನು ಲೈಂಗಿಕ ಹಿಂಸೆಯಿಂದ ಉದ್ದರಿಸುವ ಮನಸ್ತಿತಿಯ ಹಿನ್ನೆಲೆ, ತಮ್ಮ ದರ್ಮ ದರ್ಮ ಜಯಿಸುವುದಕ್ಕಾಗಿ ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಉಪಯೋಗಿಸುವ ಮನಸ್ತಿತಿ ಈ ಪುರುಶ ಪ್ರದಾನ ರಚನೆಯನ್ನು ಕಾನೂನಡಿಯಲ್ಲಿ ತಂದು ನಿಲ್ಲಿಸುವುದು ತೀರಾ ಅವಶ್ಯಕ.

Image
Transgenders life 6

ಪುರುಶ ಪ್ರದಾನ ಮನಸ್ತಿತಿಯ ಇರಾದೆಗಳು ಜನರ ಮನಸ್ಸುಗಳ ‘ಮಾಡಬಹುದು/ ಮಾಡಬಾರದು’ಗಳನ್ನು ತೀರ್ಮಾನಿಸುತ್ತದೆ. ಹಾಗೆಯೇ, ದೌರ್ಜನ್ಯ ಎಸಗುವವರ ಲೊಕೇಶನ್, ಇರಾದೆ, ಎಸಗಿದ ರೀತಿ, ಮನಸ್ಸು-ದೇಹಗಳನ್ನು ತಮ್ಮ ಆಸ್ತಿ/ ಜಾಗೀರು ಎಂದುಕೊಳ್ಳುವ ಮನೋಬಾವ, ಬಲಹೀನವಾಗಿರುವ (ಜಾತಿ, ದರ್ಮ, ವರ್ಗ, ಜೆಂಡರ್, ಜನಾಂಗ, ಏರಿಯಾ, ರೀಜನ್, ಅಂತಸ್ತು, ಬಾಶೆ, ಕಲರ್, ಕಲಾಚಾರ, ಆರ್ತಿಕತೆ, ಬಟ್ಟೆ, ಕೆಲಸ, ಟೈಮು, ದಿನ, ರಾತ್ರಿ... ಇತ್ಯಾದಿ ಪಟ್ಟಿ ಮುಂದುವರಿಯುತ್ತದೆ) ವ್ಯಕ್ತಿಯನ್ನು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಉಪಯೋಗಿಸುವ ಮನೋಬಾವ... ಇದೆಲ್ಲವೂ ಕಾನೂನು ಅಡಿಯಲ್ಲಿ ಬರದೆ ಒಬ್ಬ ಮನುಶ್ಯನಿಗೂ ನ್ಯಾಯ ಸಿಗುವುದಿಲ್ಲ.

ದೌರ್ಜನ್ಯ ಎಸಗುವವರು, ಸಂತ್ರಸ್ತರು ಹಾಗೂ ಇದನ್ನು ಎದುರಿಸುವವರೆಲ್ಲರೂ ಈ ವಿಶಯದಲ್ಲಿ ಯೋಚನೆ ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ, ನಾವು ಮಾನಸಿಕವಾಗಿ, ದೈಹಿಕವಾಗಿ ಇದೆಲ್ಲ ಅನುಬವಿಸುತ್ತ ಇನ್ನೆಶ್ಟು ಶತಮಾನ ಬದುಕಬೇಕು? 

ಚಿಕ್ಕ ವಯಸ್ಸಿನಲ್ಲಿ
ಕನ್ನಡಿಯಲ್ಲಿ ಮುಖ ನೋಡಲು
ಹರಿದೆಲೆಗಳು ಕಂಡು,
ಒಣಗಿದೆಲೆಗಳ ಕನಸ ಕಾಣುತ್ತಿದ್ದೆ.
ಅಯ್ಯೋ ತುಟಿ, ಅಯ್ಯೋ ಹುಬ್ಬು ಎಂಬ
ಗೋಜಿಲ್ಲದೆ, ಕನ್ನಡಿ ನೋಡದೆ
ಜಡೆ ಹಾಕಿ ತಲೆ ಸವರಿ
ಮುಂದೋಗುತ್ತಿದ್ದ ನನಗೆ
ಈಗ ದಿನಕ್ಕೊಂದು ಸಾರಿ
ಕನ್ನಡಿ ನೋಡಿ
ಮೀಸೆ ಬಂದಿತೇ, ದಾಡಿ ಬೆಳೆಯಿತೇ
ನೋಡೋ ಕುತೂಹಲ.
ದೇಹದಲ್ಲಿ ರೋಮ
ರೋಮದಲ್ಲಿ ಪುರುಶತ್ವ
ಪುರುಶತ್ವದಲ್ಲಿ ಯೋನಿಯ ನೋವು
ಮೊಲೆಗಳು ತೆಗೆದ ರೇಕೆಗಳು
ಶರ್ಟಿಲ್ಲದ ಚಾತಿಯಲ್ಲಿ
ಗಂಡಸಿನಂತೆ ನಿಂತು
ಗಂಡಸುತನ ಮೆರೆವುದು ಹೇಗೆ?
ದೇಹ, ಮನಸ್ಸು ಎಲ್ಲ
ಚರ್ಮದ ಗೊಂದಲದಲ್ಲಿರುವಾಗ
ನಾನು ಯಾರು?

'ಎಲ್ಲರ ಕನ್ನಡ' ಎಂದು ಹೇಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
1 ವೋಟ್