ಅಪ್ರಮೇಯ | 20 ವರ್ಶ ಕಳೆದ ಮೇಲೆ ದೈರ್ಯ ಬಂತು - ನಾನು ಆಮಿರ್ ಅಂತ ಹೇಳಲು!

ಗಾಡಿಯ ವೇಗ ಅವಳ ಗೊಂದಲವನ್ನೆಲ್ಲ ಹೊತ್ತು ಒಂದು ಸ್ತಳದಲ್ಲಿ ನಿಂತಿತು. ಅವಳು ಗಾಡಿ ಸ್ಟಾಂಡ್ ಹಾಕಿ ಹೆಲ್ಮೆಟ್ ತೆಗೆದು ಅಂಗಡಿಯ ಬೋರ್ಡ್ ನೋಡಿದಳು. 'ಸ್ಟೈಲ್ ಸಲೂನ್' ಅಂತ ಬರೆದಿತ್ತು. ಒಳಗೆ ಹೋಗಿ ಬ್ಯಾಗ್ ಒಂದ್ ಕಡೆ ಬಿಸಾಕಿ, ಸಲೂನಿನ ಚೇರ್ ಮೇಲೆ ಕೂತು ಕಣ್ಮುಚ್ಚಿ, ಸ್ಟೈಲಿಸ್ಟ್‌ಗೆ ಹೇಳಿದಳು, "ಕೂದಲು ಫುಲ್ ಕಟ್ ಮಾಡಿ.” ಸ್ಟೈಲಿಸ್ಟ್ ದಿಗ್ಮೂಢನಾದ

ಆಗ ಇನ್ನೂ ಅವಳು ಅವಳಾಗೇ ಇದ್ದಳು. ಆಗಶ್ಟೇ ಒಂದು ಸಂಬಂದದಿಂದ ಆಚೆ ಬರಲು ತೀವ್ರವಾಗಿ ಶ್ರಮಿಸುತ್ತಿದ್ದಳು. ಅಂತಹ ಸಮಯದಲ್ಲಿ ಅವಳ ಸ್ನೇಹಿತ ಐಯಪ್ಪ ಒಂದು ದಿನ ಹೇಳಿದ, “ಮಾನ್ವಿ, ನಾನು ಮದುವೆ ಆಗ್ಬೇಕು ಅಂತ ಇದ್ದೀನಿ.” ಅವಳಿಗೆ ಏನು ಹೇಳ್ಬೇಕು ಅಂತ ಗೊತ್ತಾಗಿಲ್ಲ. ಕೋಪ ನೆತ್ತಿಗೇರಿತ್ತು. "ಥೋ... ಈ ಮದ್ವೆ ಅನ್ನೊ ನಾನ್ಸೆಸ್‍ ಬಗ್ಗೆ ಜೀವನವಿಡೀ ಅಸಹ್ಯ ಪಟ್ಕೊಂಡು ಬಂದಿರೋ ನನ್ನನ್ನು ನೆನೆದು ಇವನು ಮದ್ವೆ ಬಗ್ಗೆ ಯೋಚ್ನೆ ಮಾಡ್ತಿದ್ದಾನೆ ಅಂದ್ರೆ...!” ಅಂತ ಮನಸ್ಸಿನಲ್ಲೇ ಅನ್ಕೊತಿರುವಾಗ್ಲೇ ಐಯಪ್ಪ ಮಾತು ಮುಂದುವರಿಸಿದ: "ನಾನಾದ್ರೂ ಅವಳನ್ನ ಮದ್ವೆ ಮಾಡ್ಕೊಂಡು ಈ ಕಾನೂನಲ್ಲಿ ಒಂದು ಇತಿಹಾಸ ಸ್ರುಶ್ಟಿಸಬೇಕು ಅಂತ ಇದ್ದೀನಿ. ನೀನು ಜೊತೆಗಿರ್ಬೇಕು. ನಾನು ಎಲ್ಲರಿಗೂ ಅಣ್ಣ, ಬಾವ, ಅಂತೆಲ್ಲಾ ಆದ್ರೂ ನಿನಗೆ ಮಾತ್ರ ಯಾವತ್ತಿಗೂ ಅಪ್ಪಟ ಸ್ನೇಹಿತ. ಅವಳ ಬಗ್ಗೆ ನಿಂಗೆ ಚೆನ್ನಾಗಿ ಗೊತ್ತು. ಅವಳಿಗೆ ಈ ಮದ್ವೆ ತುಂಬಾ ಇಂಪಾರ್ಟೆಂಟು.”

ಐಯಪ್ಪ ಟ್ರಾನ್ಸ್ ಮೆನ್. ಅವನು ಸರ್ಜರಿ ಮಾಡಿಸಿಕೊಂಡು ಸುಮಾರು ವರ್ಶಗಳೇ ಆಗಿದ್ದವು. ನಮ್ಮ ಕಾನೂನಲ್ಲಿ ಆಗಿನ್ನೂ ಟ್ರಾನ್ಸ್‍ಜೆಂಡರ್‌ಗಳಿಗೆ ಮದುವೆಯ ಹಕ್ಕು ಇರಲಿಲ್ಲ. ಬರೀ ಬಾಯ್ಮಾತಿನಲ್ಲಿ ಜನರು ಅದರ ಬಗ್ಗೆ ಮಾತಾಡ್ತಾ ಇದ್ರೇ ಹೊರತು, ಇದನ್ನು ಹೇಗೆ ಸಾದಿಸಬಹುದು ಅಂತ ಯಾರೂ ಯೋಚನೆ ಮಾಡಿಲ್ಲ.

ಈ ಲೇಖನ ಓದಿದ್ದೀರಾ?: ಎಲ್ಲರನ್ನೂ ಸುಡುತ್ತಿರುವ ಸಾವು ನನ್ನನ್ನಾದರೂ ಸುಡದಿರಲಿ

ಅವಳು ನಿಟ್ಟುಸಿರು ಬಿಟ್ಟು ಸಮಾದಾನ ಮಾಡ್ಕೊಂಡು, “ಸರಿ ಕಣೊ. ಏನ್ ಬೇಕಾದ್ರು ಮಾಡ್ತೀನಿ,” ಅಂದ್ಲು. ಒಂದ್ಕಡೆ ಅವನ ಬಗ್ಗೆ ಕುಶಿ ಇದ್ರೂ, ಅವಳು ಏನೋ ಆತಂಕದಲ್ಲಿ ಇದ್ದಂತೆ ಎಲ್ಲರಿಗೂ ಕಾಣ್ತಿತ್ತು. ಅಶ್ಟು ಹೊತ್ತಿಗಾಗ್ಲೇ ಅವಳಿಗೆ 43 ವಯಸ್ಸು. ಐಯಪ್ಪನಿಗೆ ಬೈ ಹೇಳಿ ಗಾಡಿ ಹತ್ತಿ ಬರುತ್ತಿದ್ದಾಗ ಅವಳು ರಸ್ತೆ ಮೇಲೆ ಕಣ್ಣಿದ್ದರೂ ಆಲೋಚನೆಗಳಲ್ಲಿ ಮುಳುಗಿಹೋದಳು: “ಬೂತ ಕಾಲ ಬೂತದ ತರನೇ ಬೆನ್ನಿಗೆ ಬೀಳುತ್ತೆ. ಬೂತಕಾಲ ಎನ್ನುವ ಬೂತಕ್ಕೆ ನೋವು ಕೊಡುವ ನಶೆ. ಅದಕ್ಕೆ ಬೇಡದ ಕಹಿ... ಅಲ್ಲ, ಕಹಿ ನಂಗೆ ತುಂಬಾ ಇಶ್ಟ. ಬೇಡದ ಹುಳೀ ಉರಿ ನೋವುಗಳನ್ನು ಮೆಲುಕು ಹಾಕಲು ಇಶ್ಟ." ಗರ್‌ರ್‌ರ್‍ರ್ ಅಂತ ಬ್ರೇಕ್ ಹಾಕಿ ಗಾಡಿ ನಿಲ್ಲಿಸಿದಳು. “ಏನ್ ಆಂಟಿ...! ಎಲ್ಲಿ ಯೋಚನೆ ಮಾಡ್ಕೊಂಡು ಓಡುಸ್ತೀರ!” ಅಂತ ಎದುರುಗಡೆ ಗಾಡಿಯವನು ಹೇಳಿದ. ಅದಕ್ಕೆ ಇವಳು, "ಆಂಟಿ ಅಂತೆ ಆಂಟಿ, ನಿಮ್ ತಾತ...!” ಅಂತ ಜೋರಾಗಿ ಕೂಗಿ, ವೇಗವಾಗಿ ಗಾಡಿ ಬಿಟ್ಕೊಂಡು ಮುಂದೆ ಹೋಗ್ಬಿಟ್ಳು. ಆ ಗಾಡಿಯವನು ಏನೇನೋ ಕೂಗ್ತಿದ್ದ. ಇವಳು ಆ ಕಡೆ ಗಮನ ಕೊಡದೆ ಹೋಗ್ಬಿಟ್ಳು. ಸುಮಾರು ದೂರ ಹೋಗಿ ಗಾಡಿಯನ್ನು ಒಂದ್ಕಡೆ ನಿಲ್ಲಿಸಿ, ಯಾರೂ ಇಲ್ಲದ ಒಂದ್ ಜಾಗ ನೋಡಿ ಹೋಗಿ ನಿಂತ್ಲು. ಅಶ್ಟೊತ್ತಿಗೆ ಅವಳ ಕಣ್ ತುಂಬಿ ಬಂದಿತ್ತು. ಜೋರಾಗಿ ಬಿಕ್ಕಿ-ಬಿಕ್ಕಿ ಅಳಲು ಶುರು ಮಾಡಿದ್ಲು.

Image
ಸಾಂದರ್ಭಿಕ ಚಿತ್ರ

ಮನಸ್ಸಿನಲ್ಲಿ ಯೋಚನೆಗಳ ಯುದ್ದ ನಡೆಯುತ್ತಿತ್ತು. “ಅವನು ಯಾಕೆ ನನ್ನ ಬಿಟ್ಟ? ಅವನಿಗೆ ನನಗೆ ವಯಸ್ಸಾಯ್ತು ಅಂತ ಅನಿಸಿದ್ದಾ? ಇಲ್ಲಾ... ಅವನಿಗೆ ಹುಡುಗಿ ಅಂದ್ರೆ ಹೆಣ್ಣು ಬೇಕಿತ್ತು... ನಾನಲ್ಲ. ಹೋಗ್ಲಿ ನಾನು ಹೆಣ್ಣಲ್ಲ ಅಂತ ಯಾರಿಗಾದ್ರೂ ಹೇಳಿದ್ರೆ ಒಪ್ತಾರಾ? ಇಶ್ಟು ವರ್ಶ ಏನ್ ಮಾಡ್ತಿದ್ದೆ, ಹೆಂಗಸಿನ ತರ ಬದುಕಿದ್ದೀಯ, ಈಗೇನ್ ಬಂತು ರೋಗ ಅಂತಾರಾ? ಯಾರಾದ್ರೂ ನನ್ನ ಒಪ್ತಾರ?” ಅಂತ ಕೂಗಿಕೊಂಡು ಅಳ್ತಿದ್ಲು. ಉಸಿರುಗಟ್ಟಿದಂತಾಗಿ ಅಲ್ಲೇ ನೆಲಕ್ಕೆ ಕುಸಿದಳು. ಆ ಎದೆ ಬಿರಿಯುವ ಗೋಳು ಜೀವನದಲ್ಲಿ ಮೊದಲ ಬಾರಿಗೆ ಕಟ್ಟೆ ಒಡೆದು ಬಂದಿತ್ತು.

ಆ ಕಾಲಿತನ, ಆ ಒಂಟಿತನ ಅವಳ ಮೂಳೆಯನ್ನೆಲ್ಲ ಒಡೆಯುವ ಅನುಬವ. ಆ ನಿಮಿಶದಲ್ಲಿ ಅವಳಿಗೆ ಯಾರಾದರೂ ಬಂದು ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು, ತನ್ನೆಲ್ಲ ಕಣ್ಣೀರು ಮುಗಿಯುವಶ್ಟು ಹೊತ್ತು ಜೊತೆಗೆ ಇದ್ದರೆ ಸಾಕಾಗಿತ್ತು. ಸಮುದಾಯದಲ್ಲಿ (ಕ್ವಿಯರ್ ಮತ್ತು ಟ್ರಾನ್ಸ್‌ಜೆಂಡರ್) ಅಶ್ಟೆಲ್ಲ ಕೆಲಸ ಮಾಡಿದ ಅವಳಿಗೆ ಸ್ನೇಹಿತರು ಕಮ್ಮಿ. ಐಯಪ್ಪನಿಗೆ ಫೋನ್ ಮಾಡಿದಳು. ಐಯಪ್ಪ ಫೋನ್ ತೆಗೆದು, "ಓಯ್, ನಾನು ಮಾಯ ನೋಡಕ್ಕೆ ಹೋಗ್ತಿದ್ದೀನಿ, ನೀನು ಬರ್ತಿಯಾ?” ಎಂದ. ಇವಳು ಸೈಲೆಂಟಾಗಿ ಕಾಲ್ ಕಟ್ ಮಾಡಿದಳು. ಯಾಕೋ ಕಾಲುಗಳು ಸೋಲಲು ತೊಡಗಿದವು. ತುಂಬಾ ಸುಸ್ತಾಯ್ತು. ಆಗ ಅವಳು ಎಶ್ಟು ಕಾಲಿಯಾಗಿದ್ದಳೆಂದರೆ, ಅವಳ ದ್ರುಶ್ಟಿ ಕೂಡ ಏನು ನೋಡುತ್ತಿದೆಯೋ ಅದನ್ನು ಗ್ರಹಿಸುತ್ತಿರಲಿಲ್ಲ. ಅವಳ ಕೈ ತನ್ತಾನೇ ಅವನಿಗೆ ಫೋನ್ ಮಾಡಿತು.

ಅವನೊಂದು ವಿಚಿತ್ರ. ಅವಳೊಡನೆ ಎಶ್ಟೇ ಜಗಳವಾಡಿದರೂ ಅವಳು ಕರೆದಾಗಲೆಲ್ಲ ತಪ್ಪದೆ ಸಿಗುತ್ತಿದ್ದ. ಫೋನ್ ರಿಂಗ್ ಆಗ್ತಿದ್ದಾಗ ಅವಳ ಎದೆ ಬಡಿತ ತಣ್ಣಗಾಗುತ್ತ, ಕಣ್ಣು ಹನಿಗಳಲ್ಲಿ ಮುಳುಗಿತು. ಆ ಕಡೆಯಿಂದ, “ಹಲೋ, ಹೇಳು...” ಇವಳು ಬರೀ ಅಳುತ್ತಿದ್ದಳು. ಅವನು ಫೋನ್ ಕಟ್ ಮಾಡದೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ.

ಕನಸುಗಳೆಶ್ಟು ಕಂಡದ್ದು
ಅವನದ್ದು ಬೇರೆ, ಅವಳದ್ದು ಬೇರೆ
ಒಂದು ನಗೆ ಸಾಕು
ಹ್ರುದಯ ಸಮಾದಾನದ ಉಸಿರು
ಇರುವಿಕೆ ಸಾಕು
ನಂಬಿಕೆ ಕಾಲುಗಳಲ್ಲಿ
ಗುಂಪಿನಲ್ಲಿದ್ದಾಗ ಒಂದು ನೋಟ ಸಾಕು
ಗುಂಪೇ ಇಲ್ಲವಾಗಲು
ಸೇರಲು ಸಾದ್ಯವೇ ಇಲ್ಲ
ಏಕೆಂದರೆ ನಾವು
ಸಮನಾಂತರ ರೇಖೆ

ಈ ಲೇಖನ ಓದಿದ್ದೀರಾ?: ಅಪ್ರಮೇಯ | ಉಪ್ಪಾರ್ ಪೇಟೆ ಪೊಲೀಸ್ ಠಾಣೆಯ 'ಟು ಸ್ಟಾರ್' ಜೊತೆಗಿನ ಒಂದು ವಾಗ್ವಾದ

ಅವಳು ಏನೋ ತೀರ್ಮಾನ ಮಾಡಿದಂತೆ ಅಲ್ಲಿಂದ ಹೊರಡುತ್ತಾಳೆ. ಗಾಡಿ ಸ್ಲೋ ಆಗಿತ್ತು. ಗಾಡಿಯ ವೇಗ ಅವಳ ಗೊಂದಲವನ್ನೆಲ್ಲ ಹೊತ್ತು ಒಂದು ಸ್ತಳದಲ್ಲಿ ನಿಂತಿತು. ಅವಳು ಗಾಡಿ ಸ್ಟಾಂಡ್ ಹಾಕಿ ಹೆಲ್ಮೆಟ್ ತೆಗೆದು ಅಂಗಡಿಯ ಬೋರ್ಡ್ ನೋಡಿದಳು. 'ಸ್ಟೈಲ್ ಸಲೂನ್' ಅಂತ ಬರೆದಿತ್ತು. ಒಳಗೆ ಹೋಗಿ ಬ್ಯಾಗ್ ಒಂದ್ ಕಡೆ ಬಿಸಾಕಿ, ಸಲೂನಿನ ಚೇರ್ ಮೇಲೆ ಕೂತು ಕಣ್ಮುಚ್ಚಿ, ಸ್ಟೈಲಿಸ್ಟ್‌ಗೆ ಹೇಳಿದಳು, "ಕೂದಲು ಫುಲ್ ಕಟ್ ಮಾಡಿ.” ಸ್ಟೈಲಿಸ್ಟ್ ಕೇಳಿದ, "ಬಾಯ್ ಕಟ್ಟಾ ಮ್ಯಾಡಂ?” “ಇಲ್ಲ... ಹುಡುಗರಿಗೆ ಕ್ರಾಪ್ ಮಾಡ್ತಿರಲ್ಲ ಹಾಗೇ ಮಾಡಿ. ಮತ್ತೆ ಶೇವಿಂಗೂ ಮಾಡಿ.” ಸ್ಟೈಲಿಸ್ಟ್ ದಿಗ್ಮೂಢನಾದ. ಆಮೇಲೆ ಮಾತಿಲ್ಲದೆ ಕತ್ರಿ ತಗೊಂಡು, ಅರ್ದ ಬುಜದವರೆಗೆ ಇದ್ದ ಕೂದಲನ್ನು ಒಮ್ಮೆಗೇ ಕಿವಿಯವರೆಗೆ ಕಟ್ ಮಾಡಿದ. ಅದನ್ನೇ ನೋಡುತ್ತಿದ್ದ ಅವಳು ಕನ್ನಡಿಯಲ್ಲಿ ಅವನನ್ನು ನೋಡಿದಳು. ಅವಳಂದುಕೊಂಡಳು, "ನಾನು ನಾನಾಗಲು ನಿನ್ನ ಬಲ ಬೇಕು ಅಂತ ಎಲ್ಲೆಲ್ಲೂ ಕಾಣುತ್ತಾನೆ.” ಒಂದು ಸಣ್ಣ ನಗೆ ಅವಳಿಂದ ಬಂದು ಕನ್ನಡಿಯಲ್ಲಿದ್ದ ಅವನ ಮುಖವನ್ನು ನೋಡಿ ಮತ್ತೆ ಬೆರಗಾದವು. “ಅವನು ನಿಜವಾಗ್ಲೂ ಅಲ್ಲಗೆ ಬಂದನೇ?”

ಅವನು ಸ್ಟೈಲಿಸ್ಟ್ ಪಕ್ಕ ನಿಂತು, “ಹೀಗೆ ಕಟ್ ಮಾಡಿ, ಹಾಗೆ ಕಟ್ ಮಾಡಿ, ಇಲ್ಲಿ ತೆಗೆಯಿರಿ,” ಎಂದು ಹೇಳತೊಡಗಿದ. ಅವಳ ಬೆರಗಿಗೆ ಮತ್ತೊಂದು ಬೆರಗು. ಅವಳ ಪ್ರೇಮಿಯಾಗಿದ್ದ ಅವನು ಇಂದು ಅವಳು ಅವನಾಗುವ ಕ್ರಿಯೆಯಲ್ಲಿ ಬದ್ದವಾಗಿ ನಿಂತು ಹೀಗೆ ಮಾಡಿ ಹಾಗೆ ಮಾಡಿ ಎಂದು ಸಮಾದಾನವಾಗಿ ಹೇಳುತ್ತಿದ್ದುದನ್ನು ಕಂಡು ಇವಳಿಗೆ ತುಂಬಾ ನೋವಾಯ್ತು, ಸಂತೋಶವಾಯ್ತು, ಮತ್ತೆ ಕಣ್ಣೀರು...

Image
ಸಾಂದರ್ಭಿಕ ಚಿತ್ರ

“ಏಯ್ ಕತೆ ಹೇಳೋವ್ರೇ, ಸಾಕು ನನ್ನ ಅವಳು ಅವಳು ಅಂತ ಕೆರೆದಿದ್ದು. ನಾನು ಅವಳಲ್ಲ ಅವನು. ನನ್ನ ಜೊತೆ ಯಾರು ನಿಲ್ಲದಿದ್ದರೂ ನನ್ನ ಜೀವದ ಜೀವವಾಗಿರುವ ನನ್ನ ಗೆಳೆಯ, ನನ್ನ ಪ್ರೇಮಿ, ನನ್ನ ಉಸಿರು ಅವನು ನಿಂತಿದ್ದಾನೆ. ಇನ್ನ ನಾನೇ ನನ್ನ ಕತೆ ಹೇಳ್ತೀನಿ. ಲೈಫಿನಲ್ಲಿ 43 ವರ್ಶ ತುಂಬಾ ಬಾರವಾದದನ್ನು ಹೊತ್ತೂ ಹೊತ್ತೂ ನನಗೂ ತುಂಬಾ ಸುಸ್ತಾಗಿದೆ. ನಾನು ನಾನಾಗುವ ಸಮಯ. ನಾನು ಆಮಿರ್. ಇವತ್ತು ನಾನು ಹುಟ್ಟಿದ್ದೇನೆ. ಹೇರ್ ಕಟ್ ಮುಗಿದ ನಂತರ ಅವನು ನನ್ನ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ಶರ್ಟು ಪ್ಯಾಂಟು ಕೊಡಿಸುತ್ತಾನೆ. ಅದನ್ನು ಹಾಕಿಕೊಂಡು ನಾನು ನಾನಾಗುತ್ತೇನೆ. ನಾನು ಆಮಿರ್. ನಾನು ಟ್ರಾನ್ಸ್‌ಜೆಂಡರ್, ನಾನು ಕ್ವಿಯರ್. ಈ ಹೋರಾಟದ ಜೊತೆ 20 ವರ್ಶಗಳು ಕಳೆದ ಮೇಲೆ ನನಗೆ ನನ್ನ ದೈರ್ಯ ಬಂತು - ನಾನು ಆಮಿರ್ ಅಂತ ಹೇಳಲು. ಅದನ್ನು ಹೇಳಲು ನನ್ನ ಮಾಜಿ ಪ್ರೇಮಿ ನನ್ನ ಜೊತೆ ಕಲ್ಲುಗಂಬದ ತರ ನಿಂತಿದ್ದಾನೆ. ಅವನಿಗೆ ಮಾತ್ರ ಗೊತ್ತು ಈ 43 ವರ್ಶಗಳು ನಾನು ಒಲ್ಲದ ದೇಹದಲ್ಲಿದ್ದು ಅನುಬವಿಸಿದ್ದು. ಈಗ ನಾನು ಆಮಿರ್. ನನಗೆ ಬೇಕಾದ ಹಾಗೆ ನನ್ನ ದೇಹವನ್ನು ರೂಪಿಸಿಕೊಳ್ಳುತ್ತೇನೆ. ನನ್ನಷ್ಟಕ್ಕೆ ನಾನು ಜೀವನ ನಡೆಸಿಕೊಳ್ಳುತ್ತೇನೆ. ದಾಡಿ, ಮೀಸೆ ಬೆಳೆಸಿಕೊಂಡು ನಗರದಲ್ಲಿ ಬಿನ್ದಾಸ್ ಓಡಾಡುತ್ತೇನೆ. ನಾನು ಆಮಿರ್..."

'ಎಲ್ಲರ ಕನ್ನಡ' ಎಂದು ಹೇಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
1 ವೋಟ್