ಮುಳ್ಳುಹಾದಿಗೆ ಮಣ್ಣು ಹೊತ್ತವರು | ಮರೆವಿಗೆ ಸಲ್ಲಬಾರದ ಚೇತನ - ಉಮಾಬಾಯಿ ಕುಂದಾಪುರ

Umabai Kundapur 9

ಈಗಲೂ ಸ್ವಾತಂತ್ರ್ಯ ಹೋರಾಟಗಾರರು ಎಂದೊಡನೆ ಉಮಾಬಾಯಿ ಹೆಸರು ಯಾರಿಗೂ ನೆನಪಾಗುವುದಿಲ್ಲ! ಶಾಲಾ ಪಠ್ಯದಲ್ಲೂ ಅಂಥವರು ಯಾಕಿರಬೇಕೆಂದು ಪಠ್ಯ ಪರಿಷ್ಕರಿಸುವ ದೇಶಭಕ್ತ ವಿದ್ವಾಂಸರಿಗೆ ಹೊಳೆಯುತ್ತಿಲ್ಲ. ಎಂದೇ, ಅವರ ಬಗೆಗಿರುವ ಉಲ್ಲೇಖಗಳು ಅಳಿಸಲ್ಪಟ್ಟಿವೆ. ಆದರೆ, ಅವರಂಥ ನಿಸ್ವಾರ್ಥಿಗಳು ಎಲ್ಲ ಕಾಲದಲ್ಲೂ ರೂಪುಗೊಳ್ಳುವುದಿಲ್ಲ

ಇವತ್ತಿಗೂ ಹೆಣ್ಣು ಜೀವಗಳನ್ನು ಮನೆಯಿಂದ ಹೊರಗೆ ಕರೆತಂದು ಹೋರಾಟದಲ್ಲಿ ತೊಡಗಿಸಲು ಮಹಿಳಾ ಸಂಘಟನೆಗಳು ಹೆಣಗಾಡಬೇಕಾದ ಪರಿಸ್ಥಿತಿಯಿದೆ. ತಮಗೊಪ್ಪಿಸಿದ ಕೊನೆಮೊದಲಿರದ ಸೇವೆಯ ಜವಾಬ್ದಾರಿಗಳನ್ನು ಪೂರೈಸದೆ ಕೌಟುಂಬಿಕ ಮಹಿಳೆ ಹೊರಬರಲು ಮನಸ್ಸು ಮಾಡುವುದೇ ಇಲ್ಲ. ಮನೆಯ ಚೌಕಟ್ಟಿನಿಂದಾಚೆ ಬಂದು ಸಾಮೂಹಿಕತೆಗೆ ಒಡ್ಡಿಕೊಳ್ಳದಿರುವುದೇ ತನ್ನ ನಿಜ ಸ್ವರೂಪ, ಶಕ್ತಿಗಳನ್ನು ಹೆಣ್ಣು ಅರಿಯದಿರಲು ಕಾರಣವಾಗಿದೆ.

ಹೀಗಿರುತ್ತ, ನೂರು ವರ್ಷ ಕೆಳಗೆ ಸಾಂಪ್ರದಾಯಿಕ ಭಾರತೀಯ ಕುಟುಂಬದ ಹೆಣ್ಣುಗಳು ಬೀದಿಗಿಳಿದು, "ಬ್ರಿಟಿಷರೇ ಭಾರತ ಬಿಟ್ಟು ತೊಲಗಿ. ಸ್ವಾತಂತ್ರ್ಯ ನಮ್ಮ ಆಜನ್ಮಸಿದ್ಧ ಹಕ್ಕು," ಎಂದು ಘೋಷಣೆ ಕೂಗುತ್ತ ಹೋರಾಟದಲ್ಲಿ ಭಾಗಿಯಾದದ್ದು, ಬೃಹತ್ ಸಂಖ್ಯೆಯಲ್ಲಿ ರಾಷ್ಟ್ರೀಯ ಹೋರಾಟಗಳಲ್ಲಿ ಭಾಗವಹಿಸಿದ್ದು ಸಾಮಾನ್ಯ ಸಂಗತಿಯಲ್ಲ. ಸಾರ್ವಜನಿಕವಾಗಿ ತೆರೆದುಕೊಂಡದ್ದೇ ಹಕ್ಕು ಜಾಗೃತಿ ಪಡೆದುಕೊಂಡರು. ಅನ್ಯಾಯವನ್ನು ಪ್ರಶ್ನಿಸಿದರು. ಅವಕಾಶಗಳನ್ನು ಕೇಳಿದರು. ರಾಜಕೀಯ ಪ್ರಾತಿನಿಧ್ಯ ಪಡೆದರು. ದೇಶದ ಆಗುಹೋಗುಗಳ ಬಗೆಗೆ ಸ್ಪಷ್ಟ ಅಭಿಪ್ರಾಯ ಹೊಂದಿದರು. ಸೆರೆವಾಸ ಅನುಭವಿಸಿದರು. ಅವರಿಗೆ ಬೆಂಬಲವಾಗಿ ಗಾಂಧೀಜಿ, ಸುಭಾಶ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಸಮಸಮಾಜ ಕನಸುವ ನೇತಾರರಿದ್ದರು. ಅದರಲ್ಲೂ, ಗಾಂಧಿಯವರ ಅಹಿಂಸೆ-ಸತ್ಯಾಗ್ರಹಗಳ ಸ್ವಾತಂತ್ರ್ಯ ಹೋರಾಟವು ಭಾರತದ ಮೂಲೆಮೂಲೆಯ ಮಹಿಳೆಯರನ್ನು ದೇಶಕ್ಕಾಗಿ ತೆತ್ತುಕೊಳ್ಳುವಂತೆ ಪ್ರೇರೇಪಿಸಿತು.

"ಮಹಿಳೆಯರು ತಮಗಿರುವ ಅವಕಾಶ, ಸವಲತ್ತುಗಳನ್ನು ಅರಿತು ಅದನ್ನು ಮಾನವ ಕುಲಕ್ಕಾಗಿ ಬಳಸಿದ್ದೇ ಹೌದಾದಲ್ಲಿ ನಮ್ಮ ನಾಳೆಗಳು ಮತ್ತಷ್ಟು ಸುಂದರವಾಗುವುದರಲ್ಲಿ ಅನುಮಾನವಿಲ್ಲ. ಆದರೆ, ಪುರುಷ ಸಮಾಜ ನಿಮ್ಮನ್ನು ಗುಲಾಮರಾಗಿಸುವುದರಲ್ಲಿ ಖುಷಿ ಕಂಡಿದೆ. ನೀವೂ ಸ್ವ ಇಚ್ಛೆಯ ಗುಲಾಮರಾಗಲು ಸಿದ್ಧರೆಂದು ಸಾಧಿಸುತ್ತಿದ್ದೀರಿ. ಅದು ಮನುಷ್ಯತ್ವವನ್ನು ಕ್ಷುದ್ರಗೊಳಿಸುವ ಕೆಲಸ. ಹಿಂದಿನ ಕಾನೂನು-ಕಟ್ಟಲೆಗಳನ್ನೆಲ್ಲ ಮಾಡಿದವರು ಗಂಡಸರೇ ಆಗಿದ್ದರಿಂದ ಅವರಿಗೆ ಹೆಂಗಸರ ಬಗ್ಗೆ ಸರಿಯಾದ ಮಾಹಿತಿಯಾಗಲೀ, ಅಭಿಪ್ರಾಯವಾಗಲೀ ಇರಲಿಲ್ಲ. ನಿಜ ಹೇಳಬೇಕೆಂದರೆ, ಯಾರೂ ಮೇಲು-ಕೀಳಲ್ಲ. ಗಂಡು-ಹೆಣ್ಣಿನ ಮಧ್ಯೆ ವ್ಯತ್ಯಾಸವಿದೆ; ಆದರೆ, ಇಬ್ಬರೂ ಸಮಾನರು. ನೈತಿಕತೆ, ಪಾವಿತ್ರ್ಯ, ತ್ಯಾಗ, ಉದಾತ್ತತೆ ಮೊದಲಾದ ಗುಣಗಳಿಂದ ಹೆಣ್ಣು-ಗಂಡಿಗಿಂತ ಶ್ರೇಷ್ಠಳು," ಎಂದು ತಮ್ಮ ಮಾತು-ಬರಹಗಳಲ್ಲಿ ಹೇಳುತ್ತ ಗಾಂಧೀಜಿ ಮಹಿಳೆಯರನ್ನು ಹುರಿದುಂಬಿಸಿದರು. ಸ್ವರಾಜ್ಯ ಮಹಿಳೆಯರಿಂದಲೇ ಸಾಧ್ಯ ಎಂದರು. ಸ್ವಾತಂತ್ರ್ಯ ಚಳವಳಿಯ ನಿರ್ಣಾಯಕ ಘಟ್ಟಗಳಲ್ಲಿ ಹೋರಾಟದ ಸಾಗರಕ್ಕೆ ಸಾವಿರಾರು ಹೆಣ್ಣು ತೊರೆಗಳು ಹರಿದುಬಂದವು. ಅವರಲ್ಲಿ ತಾನು ನಿರಂತರವಾಗಿ ಹರಿಯುತ್ತ, ತನ್ನೊಡನೆ ಇರುವವರಿಗೂ ಚಲನಶೀಲತೆಯನ್ನು ಕೊಟ್ಟ ಉಮಾಬಾಯಿ ಕುಂದಾಪುರ ಸ್ಮರಣೀಯವೆನಿಸಿದ್ದಾರೆ.

* * *

Image
Umabai Kundapur 7

ಮಂಗಳೂರಿನ ತುಂಗಾಬಾಯಿ ಮತ್ತು ಗೋಳಿಕೇರಿ ಕೃಷ್ಣರಾವ್ ಅವರ ಮಗಳು ಭವಾನಿ, ಐವರು ಗಂಡುಮಕ್ಕಳ ಬಳಿಕ 1892ರಲ್ಲಿ ಹುಟ್ಟಿದಳು. ಹುಡುಗಿ ನಡೆ-ನುಡಿಗಳಲ್ಲಿ ಚುರುಕಾಗಿ ಮನೆಯವರ ಕಣ್ಮಣಿಯಾಗಿದ್ದಳು. ಮಂಗಳೂರಿನಲ್ಲಿ ಸಣ್ಣ ಉದ್ಯೋಗ ನಡೆಸುತ್ತಿದ್ದ ಅಪ್ಪ, ಮಗಳನ್ನು ಶಾಲೆಗೆ ಸೇರಿಸಿದ್ದರು. ಎಲ್ಲ ಸುಲಲಿತವಾಗಿ ನಡೆಯುತ್ತಿದೆ ಎನ್ನುವಾಗ ಇದ್ದಕ್ಕಿದ್ದಂತೆ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು. ಸಾಲದ ಸುಳಿಯಲ್ಲಿ ಸಿಲುಕಿ ಹೊಟ್ಟೆ-ಬಟ್ಟೆಗೂ ಕಷ್ಟವಾಯಿತು. ಬೇರೆ ದಾರಿ ಕಾಣದೆ ಉದ್ಯೋಗ ಅರಸುತ್ತ ಕುಟುಂಬ ಮುಂಬಯಿಗೆ ಹೊರಟಿತು.

ಭವಾನಿಯ ವಿದ್ಯಾಭ್ಯಾಸ ಮುಂಬಯಿಯಲ್ಲಿ ಮುಂದುವರಿಯಿತು. ಅವಳಿಗೆ 13 ವರ್ಷ ವಯಸ್ಸಾಗಿರುವಾಗ 1905ರಲ್ಲಿ, ದಕ್ಷಿಣ ಕನ್ನಡದವರೇ ಆಗಿದ್ದ, ಮುಂಬಯಿಯಲ್ಲಿ ನೆಲೆಸಿದ್ದ ಸಮಾಜ ಸೇವಕ ಆನಂದ ರಾವ್ ಅವರ ಮಗ ಸಂಜೀವ ರಾವ್ ಜೊತೆಗೆ ಮದುವೆಯಾಯಿತು. ಕರಾವಳಿಯ ಸಾರಸ್ವತ ಬ್ರಾಹ್ಮಣ ಪಂಗಡದ ವಾಡಿಕೆಯಂತೆ ಆನಂದ ರಾವ್ ಅವರು ತಮ್ಮೂರು ಕುಂದಾಪುರ ಎಂಬ ಹೆಸರನ್ನು ಸರ್‌ನೇಮ್ ಆಗಿ ಇಟ್ಟುಕೊಂಡಿದ್ದರು. 'ಭವಾನಿ ಗೋಳಿಕಟ್ಟೆ' ಮದುವೆಯ ಬಳಿಕ 'ಉಮಾಬಾಯಿ ಕುಂದಾಪುರ' ಆದಳು. ಸ್ಥಿತಿವಂತರಾಗಿದ್ದ ಆನಂದ ರಾವ್ ಸಮಾಜ ಸೇವಕರೆಂದು ಹೆಸರಾಗಿದ್ದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು. ಮಹಿಳಾ ಜಾಗೃತಿ, ಶಿಕ್ಷಣ ಅವಶ್ಯವೆನ್ನುತ್ತಿದ್ದರು. ಅದರಂತೆ ತಮ್ಮ ಸೊಸೆಯನ್ನು ಪುಣೆಯ ಅಣ್ಣಾ ಸಾಹೇಬ್ ಕರ್ವೆ ಶಾಲೆಗೆ ಸೇರಿಸಿದರು. ಮನೆಯಲ್ಲಿ ಒಬ್ಬರಾದ ಮೇಲೊಬ್ಬರು ಅನಾರೋಗ್ಯಕ್ಕೆ ಈಡಾಗುತ್ತಿದ್ದ ಕಾರಣ ಉಮಾಳ ಶಿಕ್ಷಣ ಕುಂಟುತ್ತ ಸಾಗಿತು. 27 ವರ್ಷ ತುಂಬುವಾಗ 1919ರಲ್ಲಿ ಅವಳ ಮೆಟ್ರಿಕ್ಯುಲೇಷನ್ ಮುಗಿಯಿತು. ಮಾವ, ಗಂಡನ ಸಹಕಾರದಿಂದ ಮನೆಯಲ್ಲೇ ಹೆಣ್ಣುಮಕ್ಕಳಿಗೆ ಪಾಠ ಹೇಳಿಕೊಡುವ 'ಗೌರಾದೇವಿ ಶಿಕ್ಷಣ ಕೇಂದ್ರ' ಆರಂಭಿಸಿದಳು.

ಕೆಲವು ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸಬಲ್ಲಷ್ಟು ಶಕ್ತಿ ಹೊಂದಿರುತ್ತವೆ. 1920ರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಮಹಾರಾಷ್ಟ್ರದ ಜನಪ್ರಿಯ ನೇತಾರರೂ ಆಗಿದ್ದ ಬಾಲಗಂಗಾಧರ ತಿಲಕರು ಮುಂಬಯಿಯಲ್ಲಿ ಮರಣ ಹೊಂದಿದರು. ಅವರ ಶವಯಾತ್ರೆಯ ವೇಳೆ ಐದು ಲಕ್ಷ ಜನರು ಸೇರಿದ್ದರು. ಸಾಗರೋಪಾದಿಯಲ್ಲಿ ಹಿರಿಕಿರಿಯರೆನ್ನದೆ ಜನ ಅವರ ಹಿಂದೆ ನಡೆದದ್ದು, ಅಗಲಿದ ನೆಚ್ಚಿನ ನಾಯಕನಿಗೆ ದೇಶಾದ್ಯಂತ ಜನರು ತೋರಿದ ಗೌರವ, ಪ್ರೀತ್ಯಾದರಗಳು ಉಮಾಳ ಮನಸ್ಸನ್ನು ಅಲುಗಾಡಿಸಿದವು. ಅವರಂತೆ ತಾನೂ ದೇಶಕ್ಕಾಗಿ ಬದುಕನ್ನು ಮುಡಿಪಾಗಿಡಬೇಕು ಎಂದು ನಿರ್ಧರಿಸಿದಳು. ಗಂಡ, ಮಾವ, ಸೋದರರ ಬಳಿ ವಿಚಾರ ಪ್ರಸ್ತಾಪಿಸಿದಾಗ ಅವರ ಬೆಂಬಲ ದೊರೆಯಿತು. ಅಂದಿನಿಂದ ಉಮಾಬಾಯಿಯ ಗಮನ ದೇಶದ ಆಗುಹೋಗುಗಳ ಮೇಲೆ ನೆಟ್ಟಿತು.

Image
Umabai Kundapur 6

ಅದು ದೇಶಾದ್ಯಂತ ಸ್ವಾತಂತ್ರ್ಯ ಹೋರಾಟ ಕಾವೇರಿದ್ದ ಸಮಯ. ಜಲಿಯನ್‍ ವಾಲಾಬಾಗ್ ಹತ್ಯಾಕಾಂಡದ ತರುವಾಯ 1920ರ ಆಗಸ್ಟ್ 12ರಂದು ಶುರುವಾದ ಅಸಹಕಾರ ಚಳವಳಿ ವಿದೇಶಿ ವಸ್ತುಗಳನ್ನು ನಿರಾಕರಿಸಿ, ಸಾರಾಯಿ ಅಂಗಡಿ ಮೇಲೆ ದಾಳಿ ನಡೆಸಿ, ಸ್ಥಳೀಯ ಉತ್ಪನ್ನಗಳನ್ನು ಬಳಸುವಂತೆ ದೇಶವಾಸಿಗಳನ್ನು ಪ್ರೇರೇಪಿಸಿತು. ಬ್ರಿಟಿಷರ ಫ್ಯಾಕ್ಟರಿಗಳಿಂದ ಭಾರತೀಯರು ಹೊರಬಂದರು. ಅವರ ವಸ್ತುಗಳನ್ನು ನಿರಾಕರಿಸಿದರು. ಶಾಲೆಗಳಿಂದ ಹೊರಗುಳಿದರು. ಪೊಲೀಸ್, ಮಿಲಿಟರಿ, ಕೋರ್ಟು ಮುಂತಾದ ಬ್ರಿಟಿಷರ ಸಾಂಸ್ಥಿಕ ರಚನೆಗಳಿಂದ ಭಾರತೀಯರು ದೂರ ಉಳಿದರು. ಅವರು ಕೊಟ್ಟ ಬಿರುದು, ಗೌರವ ಹಿಂದಿರುಗಿಸಿದರು. ವಿದೇಶಿ ಉಡುಪಿನ ಬದಲು ಖಾದಿ ಧರಿಸಿ ಎಂಬ ಒತ್ತಾಯ ಮಾಡುತ್ತ ಚರಕದಲ್ಲಿ ನೂಲು ನೇಯುವಂತೆ ಗಾಂಧೀಜಿ ದೇಶವಾಸಿಗಳಿಗೆ ಕರೆ ಕೊಟ್ಟರು.

ಸೇವಾಭಾವ ಉದ್ದೀಪನಗೊಂಡಿದ್ದ ಉಮಾಬಾಯಿ, ಗಾಂಧಿಯವರ ಅನುಯಾಯಿಯಾಗಿ ಚಳವಳಿಗೆ ಧುಮುಕಿದರು. ಸೋದರ ರಘುನಾಥ ರಾವ್, ಪತಿ ಸಂಜೀವ ರಾವ್ ಅವರ ಜೊತೆ ಮನೆ-ಮನೆ ತಿರುಗಿ ಚರಕದಲ್ಲಿ ನೂಲುವಂತೆ, ತಮ್ಮ ಬಟ್ಟೆ ತಾವೇ ನೇಯ್ದು ಖಾದಿ ಧರಿಸುವಂತೆ ಜನರ ಮನವೊಲಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಏಕೆ ಕೈಜೋಡಿಸಬೇಕೆಂದು ಮಹಿಳೆಯರಿಗೆ ಎಳೆ-ಎಳೆಯಾಗಿ ತಿಳಿಸಿ ಹೇಳಿದರು.

ಆ ವೇಳೆಗೆ ಅವರ ಪತಿ ಅನಾರೋಗ್ಯಕ್ಕೊಳಗಾದರು. ಜ್ವರ, ಕೆಮ್ಮು ಎಡೆಬಿಡದೆ ಕಾಡತೊಡಗಿತು. ವೈದ್ಯರು ಅದು ಕ್ಷಯರೋಗವೆಂದೂ, ಪರಿಸ್ಥಿತಿ ಕೈಮೀರಿದೆಯೆಂದೂ ತಿಳಿಸಿ ಕೈಚೆಲ್ಲಿದರು. ಆಗಿನ್ನೂ ಕ್ಷಯರೋಗಕ್ಕೆ ಔಷಧಿ ಕಂಡುಹಿಡಿದಿರಲಿಲ್ಲ; ಬಂದರೆ ಸಾವೇ ಗತಿ ಎನ್ನುವಂತಹ ಪರಿಸ್ಥಿತಿ. ಒಬ್ಬರಿಂದ ಒಬ್ಬರಿಗೆ ಹರಡುವ ಕ್ಷಯ ಬಂತೆಂದರೆ, ರೋಗಿಯನ್ನು ಊರಾಚೆ ಒಯ್ದು ಬಿಟ್ಟುಬರುವುದು ಅಥವಾ ಸ್ಯಾನಿಟೋರಿಯಮ್ಮಿನಲ್ಲಿ ಇಡುವುದು ಎಂದೇ ಅರ್ಥ. ಅಂತಹ ಕಾಲದಲ್ಲಿ ಉಮಾ ಹೆದರದೆ ಗಂಡನ ಬಳಿಯೇ ಇದ್ದು, ಅವರ ಅಂತಿಮ ದಿನಗಳು ಹಿತಕರವಾಗಲು ಶ್ರಮಿಸಿದರು. 1923ರ ಮಾರ್ಚ್‍ನಲ್ಲಿ ಸಂಜೀವ ರಾವ್ ತೀರಿಕೊಂಡರು. 31ರ ಹರೆಯದ ಉಮಾಗೆ ವಿಧವೆ ಪಟ್ಟ ಬಂತು. ಆದರೆ, ತಲೆ ಬೋಳಿಸುವಂತಹ ಅಮಾನವೀಯ ಪದ್ಧತಿ ನಡೆಯದಂತೆ ಅವರ ಮನೆಯವರು ತಡೆದರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಧೈರ್ಯವೇ ಮೈವೆತ್ತ ದಾರಿದೀಪ - ಶಾಂತಮ್ಮ

ಕ್ಷಯದ ರೋಗಿ ತೀರಿಕೊಂಡ ಮನೆ ಎಂದರೆ ಅಲ್ಲಿಗೆ ಯಾರೂ ಹೋಗುವುದಿಲ್ಲ, ಬರುವುದಿಲ್ಲ. ಸಾಮಾಜಿಕ ಬಹಿಷ್ಕಾರದಂತಹ ಸ್ಥಿತಿಯಲ್ಲಿ ಬದುಕುವುದೇ ಕಷ್ಟವಾಯಿತು. ವೃದ್ಧರಾಗಿದ್ದ ಆನಂದ ರಾವ್ ತಮ್ಮ ಕುಟುಂಬದವರೊಂದಿಗೆ ಸಮಾಲೋಚಿಸಿ, ಮುಂಬಯಿ ಬಿಟ್ಟು ಹುಬ್ಬಳ್ಳಿಗೆ ಬಂದರು. ತನ್ನ ಬಳಿಕವೂ ಸೊಸೆಯ ಜೀವನೋಪಾಯಕ್ಕೆ ತೊಂದರೆಯಾಗಬಾರದೆಂದು ಉಮಾಬಾಯಿಯವರಿಗಾಗಿ 'ಕರ್ನಾಟಕ ಮುದ್ರಣಾಲಯ’ ಆರಂಭಿಸಿದರು.

ಆ ಸಮಯದಲ್ಲಿ ದಕ್ಷಿಣ ಭಾರತದ, ಅದರಲ್ಲೂ, ಕರ್ನಾಟಕ-ಆಂಧ್ರ-ಮಹಾರಾಷ್ಟ್ರಗಳ ಮಧ್ಯಬಿಂದುವಾಗಿ ಹುಬ್ಬಳ್ಳಿ ನಗರ ಬೆಳೆಯತೊಡಗಿತ್ತು. ಕಾಂಗ್ರೆಸ್‍ನ ರಾಷ್ಟ್ರೀಯ ಹೋರಾಟ, ನಿಮ್ನ ವರ್ಗಗಳ ಹೋರಾಟ, ಅಬ್ರಾಹ್ಮಣ ಚಳವಳಿ ಮುಂತಾಗಿ ಎಲ್ಲ ನ್ಯಾಯ ಸಂಘರ್ಷಗಳಿಗೂ ಅದು ತವರು ನೆಲವಾಗಿತ್ತು. ವ್ಯಾಪಾರ, ಸಾಮಾಜಿಕ ಚಟುವಟಿಕೆಗಳೆರಡೂ ಸಮ-ಸಮವಾಗಿ ಮುನ್ನೆಲೆಗೆ ಬಂದಿದ್ದವು. ಹುಬ್ಬಳ್ಳಿಗೆ ಡಾ. ನಾ ಸು ಹರ್ಡೀಕರ್ ಎಂಬ ವಿಶಿಷ್ಟ ವ್ಯಕ್ತಿ ಬಂದರು. ಅವರು ಕೊಲ್ಕತ್ತಾದಲ್ಲಿ ವೈದ್ಯಕೀಯ ವ್ಯಾಸಂಗ ಮುಗಿಸಿ, ಅಮೆರಿಕದಲ್ಲಿ ಸಾರ್ವಜನಿಕ ಆರೋಗ್ಯದ ಬಗೆಗೆ ಸ್ನಾತಕೋತ್ತರ ಪದವಿ ಪಡೆದು, ಲಾಲಾ ಲಜಪತರಾಯರ ಪ್ರಭಾವದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು 1921ರಲ್ಲಿ ಭಾರತಕ್ಕೆ ಮರಳಿದ್ದರು. 1923ರ ಕಾಕಿನಾಡ ಕಾಂಗ್ರೆಸ್ ಅಧಿವೇಶನದ ಬಳಿಕ ತರುಣರನ್ನು ಜಾಗೃತಗೊಳಿಸುವ, ಯುವ ಸ್ವಯಂಸೇವಕರನ್ನು ರೂಪುಗೊಳಿಸುವ 'ಹಿಂದೂಸ್ತಾನ್ ಸೇವಾ ಮಂಡಲ'ವನ್ನು ಆರಂಭಿಸಿದ್ದರು. ಹುಬ್ಬಳ್ಳಿಯಲ್ಲಿ ಅದರ ಕೇಂದ್ರ ಆರಂಭವಾಯಿತು. ದಕ್ಷಿಣ ಹುಬ್ಬಳ್ಳಿ ಚಟುವಟಿಕೆಗಳ ತಾಣವಾಯಿತು. ಅದೇ ವರ್ಷ ಬಿರುಸಿನಿಂದ ನಡೆದ ಧ್ವಜ ಸತ್ಯಾಗ್ರಹದಲ್ಲಿ ಸೇವಾ ಮಂಡಲದ ತರುಣರು ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಕ್ಷಮೆ ಕೇಳಿದರೆ ಶಿಕ್ಷೆ ಕಡಿತವಾಗುತ್ತದೆ ಎಂದರೂ, ಕ್ಷಮೆ ಯಾಚಿಸಲು ನಿರಾಕರಿಸಿ ಸತ್ಯಾಗ್ರಹಿಗಳ ಕಡೆಗೆ ಸಮಾಜದ ಗಮನ ಸೆಳೆದಿದ್ದರು.

ಹುಬ್ಬಳ್ಳಿಗೆ ಬಂದ ಉಮಾಬಾಯಿಯವರ ಕುಟುಂಬ ಹರ್ಡೀಕರರ ಸಂಪರ್ಕಕ್ಕೆ ಬಂತು. ಗಂಡನ ಮರಣಕ್ಕೆ ದುಃಖಿಸುತ್ತ ಕೂರದೆ, ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಲು ಸಿದ್ಧರಾಗಿದ್ದ ಉಮಾಬಾಯಿಯವರಲ್ಲಿ ಬದ್ಧತೆಯ ಕಾರ್ಯಕರ್ತೆಯನ್ನು, ದಿಟ್ಟ ಹೋರಾಟಗಾರ್ತಿಯನ್ನು ಹರ್ಡೀಕರರು ಗುರುತಿಸಿ, ಸೇವಾ ಮಂಡಲದ ಮಹಿಳಾ ಘಟಕವನ್ನು ಮುನ್ನಡೆಸಲು ಕೋರಿದರು. ಮಹಿಳೆಯರಿಗಾಗಿ 'ಭಗಿನಿ ಮಂಡಲ' ಆರಂಭವಾಯಿತು. 'ತಿಲಕ್ ಕನ್ಯಾ ಶಾಲೆ’ಯನ್ನು ಆರಂಭಿಸಿ, ಅದರ ಪೂರ್ಣ ಉಸ್ತುವಾರಿಯನ್ನು ಉಮಾಬಾಯಿಯವರಿಗೆ ವಹಿಸಿದರು. ಹುಬ್ಬಳ್ಳಿ-ಧಾರವಾಡದ ಮನೆ-ಮನೆಗೆ ತೆರಳಿ, ಮಹಿಳೆಯರನ್ನು ಭಗಿನಿ ಮಂಡಲಕ್ಕೆ ಸೇರಿಸಿದ ಉಮಾಬಾಯಿ, ಕರಪತ್ರ, ಬೀದಿನಾಟಕ, ಹಾಡುಗಳ ಮೂಲಕ ಸಾಂಪ್ರದಾಯಿಕ ಜನರನ್ನೂ ತಲುಪಿದರು. ವಿಧವೆಯರನ್ನೂ ಮಂಡಲಕ್ಕೆ ಸೇರಿಸಿಕೊಂಡರು. ಮಹಿಳೆಯರಲ್ಲಿ ರಾಜಕೀಯ ಆಸಕ್ತಿ ಬೆಳೆಸಲು ಯತ್ನಿಸಿದ ಉಮಾಬಾಯಿ, ತಮ್ಮ ಕೆಲಸ-ಕಾರ್ಯಗಳಿಂದ ಕರ್ನಾಟಕದ ಕಾಂಗ್ರೆಸ್ ವಲಯದಲ್ಲಿ ಜನಪ್ರಿಯರಾದರು. "ವಿದೇಶಿ ಉಡುಪುಗಳನ್ನು ತ್ಯಜಿಸಬೇಕು. ಭಾರತದ ಕೈಮಗ್ಗದ ಬಟ್ಟೆ ನಾಜೂಕಲ್ಲದಿರಬಹುದು. ಆದರೆ, ಬಟ್ಟೆಯನ್ನು ಆಮದು ಮಾಡಿಕೊಂಡು ನಾವು ಸಾವಿರಾರು ಜನರನ್ನು ನಿರ್ಗತಿಕರನ್ನಾಗಿಸಿದ್ದೇವೆ. ಖಾದಿ ತೊಡುವುದು ಬರಿಯ ದೇಶಪ್ರೇಮವಲ್ಲ. ಅದೊಂದು ಆಂದೋಲನ," ಎಂಬ ಗಾಂಧಿಯವರ ನಿಲುವನ್ನು ಅನುಮೋದಿಸಿ, ಖಾದಿ ಸೀರೆ ಉಡತೊಡಗಿದರು. ಮೈಮೇಲಿದ್ದ ಚೂರು-ಪಾರು ಒಡವೆ ಚೂರುಗಳನ್ನು ಸ್ವರಾಜ್ಯ ನಿಧಿಗೆ ಕೊಟ್ಟುಬಿಟ್ಟರು.

Image
Umabai Kundapur 4

1924ರಲ್ಲಿ ಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನ ನಡೆಯಲಿತ್ತು. ಅದಕ್ಕಾಗಿ 150 ಸ್ವಯಂಸೇವಕಿಯರನ್ನು ಉಮಾಬಾಯಿ ಸಿದ್ಧಗೊಳಿಸಿದರು. ಪಾದರಸದಂತೆ ಕೆಲಸ ಮಾಡುವ, ತೆರೆಮರೆಯ ಹಿಂದೆ ನಿಂತೇ ಚುರುಕಾಗಿ ಸಂಘಟಿಸುವ ಉಮಾಬಾಯಿಯವರಿಂದ ಕಮಲಾದೇವಿ ಚಟ್ಟೋಪಾಧ್ಯಾಯ ಗಾಢ ಪ್ರಭಾವಕ್ಕೊಳಗಾದರು.

1930. ಕಾಯ್ದೆ ಭಂಗ ಚಳವಳಿ ಶುರುವಾಯಿತು. ಇದು ಉಪ್ಪಿನ ಸತ್ಯಾಗ್ರಹವೆಂದು ಜನಪ್ರಿಯವಾಯಿತು. ಚಳವಳಿಗಾಗಿ ನಿಧಿ ಕೂಡಿಸಲು ಗಾಂಧೀಜಿ ಕರೆ ಕೊಟ್ಟಾಗ ಉಮಾಬಾಯಿಯವರು ಕಾರ್ಯಕರ್ತರ ಜೊತೆಗೆ ವಂತಿಗೆ ಎತ್ತಿದರು. ಸಿರಿವಂತ ಮನೆಯವರಾದರೂ ಹಣವಿಲ್ಲದವರಾಗಿದ್ದ ಮಹಿಳೆಯರಿಂದ ಒಡವೆ ಪಡೆಯುತ್ತಿದ್ದರು. ಅದನ್ನು ಮಾರಿ ಆಂದೋಲನಕ್ಕೆ ಬಳಸಲಾಗುತ್ತಿತ್ತು. ನೂರಕ್ಕೆ ಎಂಟು ಜನ ಆಹಾರ ಕೊರತೆಯಿಂದ ಬಳಲುವ ಭಾರತದಲ್ಲಿ, ಒಂದು ಪೈಸೆ ಗಳಿಸಲು ಮೈಲಿಗಟ್ಟಲೆ ನಡೆಯಬೇಕಿರುವಾಗ, ಚಿನ್ನದ ಒಡವೆ ಧರಿಸುವುದು ಅಪರಾಧ ಎನ್ನುವುದು ಗಾಂಧಿಯವರ ನಿಲುವಾಗಿತ್ತು. ಒಡವೆ ತೆಗೆದುಕೊಳ್ಳುವಾಗ ಮತ್ತೆ ಮಾಡಿಸಿಕೊಳ್ಳಬಾರದು ಎಂಬ ಷರತ್ತು ಹಾಕುತ್ತಿದ್ದರು. "ಪ್ರಾಣಿಗಳ ಸೌಂದರ್ಯ ದೇಹದಲ್ಲಿದೆ. ಮನುಷ್ಯ ಸೌಂದರ್ಯ ಗುಣದಲ್ಲಿದೆ," ಎಂದು ಹೇಳುತ್ತಿದ್ದ ಗಾಂಧೀಜಿ, ಆಭರಣಪ್ರಿಯ ಭಾರತೀಯ ಮಹಿಳೆಯರಿಗೆ ಸರಳತೆಯನ್ನು ಕಲಿಸಿದರು. ಅತ್ತ, ಎತ್ತರ-ದಪ್ಪಗಳ ಅಳತೆ ನೋಡಿ ಸೈನ್ಯವು ಗಂಡಸರನ್ನು ಸೇರಿಸಿಕೊಳ್ಳುತ್ತಿದ್ದರೆ, ಗಾಂಧಿಯವರ ಕಾಂಗ್ರೆಸ್ಸು ಸತ್ಯ ಮತ್ತು ಅಹಿಂಸೆಯ ಮನಸ್ಸುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತ ಹೋಯಿತು. ಗಾಂಧಿಯವರ ಪ್ರತಿಪಾದನೆಗಳ ಜೀವಂತ ಮಾದರಿಯಾಗಿ ಉಮಾಬಾಯಿ ಕಾಣಿಸುತ್ತಿದ್ದರು.

ದಂಡಿ ಸತ್ಯಾಗ್ರಹದಲ್ಲಿ ಸಾವಿರಾರು ಮಹಿಳೆಯರು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಉಪ್ಪು ತಯಾರಿಸಿ ಮಾರತೊಡಗಿದರು. ಸ್ವಾತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ ದಾಖಲಿಸಿರುವಂತೆ, ವಯಸ್ಸಾದ ಮಹಿಳೆಯರೂ ತಮ್ಮ ಮನೆಗಳಿಗೆ ಉಪ್ಪು ನೀರು ಹೊತ್ತು ತಂದು, ಮನೆಯಲ್ಲೇ ಉಪ್ಪು ತಯಾರಿಸಿ, ಹೆಚ್ಚುವರಿಯಾದದ್ದನ್ನು ಮಾರತೊಡಗಿದರು. ನಂತರ, "ನಿಮ್ಮ ಉಪ್ಪಿನ ಕಾನೂನನ್ನು ನಾವು ಮುರಿದಿದ್ದೇವೆ," ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ಗವರ್ನರ್ ಜನರಲ್ ಲಾರ್ಡ್ ಇರ್ವಿನ್ ತನ್ನ ವರದಿಯಲ್ಲಿ, "ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆ ಒಂದು ಹೊಸ, ಗಂಭೀರ, ಎಚ್ಚರಿಕೆಯ ವಿಷಯವಾಗಿ ತೋರುತ್ತದೆ," ಎಂದು ಹೇಳಿದ. "ತಮ್ಮ ಮನೆಗಳ ನಾಲ್ಕು ಗೋಡೆಗಳ ನಡುವಿನ ಕತ್ತಲಿನಿಂದ ಸಾವಿರಾರು ಜನ ಎದ್ದು ಬಂದರು. ಕಾಂಗ್ರೆಸ್ ಹರತಾಳ ಸೇರಿಕೊಂಡರು, ಪಿಕೆಟಿಂಗ್ ನಡೆಸಿದರು. ಇದು ಪೊಲೀಸರಿಗೆ ಕರ್ತವ್ಯ ನಿಭಾಯಿಸಲು ತುಂಬ ತೊಡಕುಂಟುಮಾಡಿತು," ಎಂದು ಸರ್ಕಾರಿ ವರದಿ ಬರೆಯಲ್ಪಟ್ಟಿತು. ಮಧ್ಯಮ ವರ್ಗದ ಮಹಿಳೆಯರು ಖಾದಿಯುಟ್ಟು, ಜೈಲಿಗೆ ಹೋಗಿ, ಚಳವಳಿ ರಾಜಕೀಯದಲ್ಲಿ ಭಾಗವಹಿಸಿದರು.

Image
Umabai Kundapur 2

ಉಪ್ಪು ತಯಾರಿಸಿದ ಅಪರಾಧಕ್ಕಾಗಿ 1932ರಲ್ಲಿ ಉಮಾಬಾಯಿ ನಾಲ್ಕು ತಿಂಗಳು ಯರವಾಡಾ ಜೈಲು ಸೇರಿದರು. ಇತ್ತ ಅದೇ ವೇಳೆಗೆ ಅವರ ಮಾವ ಅನಾರೋಗ್ಯದಿಂದ ತೀರಿಹೋದರು. ತಂದೆಯಾಗಿ, ಗುರುವಾಗಿ, ತನಗೆ ಶಿಕ್ಷಣ ನೀಡಿ ಪ್ರೋತ್ಸಾಹಿಸಿದ್ದ ಮಾವ ತೀರಿಹೋದ ದುಃಖ ಒಂದೆಡೆಯಿದ್ದರೂ, ಜೈಲುಶಿಕ್ಷೆಯ ಅವಧಿ ಪೂರೈಸಿ ಬಂದರು. ಬಿಡುಗಡೆಯಾಗಿ ಬರುವ ಹೊತ್ತಿಗೆ ಅವರಿಗೆಂದೇ ಮಾವ ಆರಂಭಿಸಿದ್ದ ಕರ್ನಾಟಕ ಮುದ್ರಣಾಲಯವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಕನ್ಯಾಶಾಲೆಯನ್ನು ಮುಚ್ಚಲಾಗಿತ್ತು. ಭಗಿನಿ ಮಂಡಲವನ್ನು ಕಾನೂನು ಬಾಹಿರವೆಂದು ಘೋಷಿಸಲಾಗಿತ್ತು.

ಆಪ್ತಜೀವಗಳಾಗಲೀ, ಸಾಂಸ್ಥಿಕ ಸಹಾಯವಾಗಲೀ ಅಲಭ್ಯವಿದ್ದ ಸಂಕಷ್ಟದ ಕಾಲದಲ್ಲಿ ಚಿಕ್ಕ ಮನೆಯಿಂದಲೇ ಉಮಾಬಾಯಿ ಕೆಲಸ ಮಾಡತೊಡಗಿದರು. ನಿರಾಶ್ರಿತ, ಅನಾಥ, ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡಿದರು. ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಹುಬ್ಬಳ್ಳಿಯ ಜೈಲಿನಿಂದ ಬಿಡುಗಡೆಯಾದ ಮಹಿಳಾ ಕೈದಿಗಳನ್ನು ಟಾಂಗಾವಾಲಾಗಳು ಇವರ ಮನೆಗೆ ತಂದು ಬಿಡುತ್ತಿದ್ದರು. ಬಂದವರು ಯಾರು, ಎಲ್ಲಿಯವರು ಮುಂತಾಗಿ ವಿಚಾರಿಸಿ, ಅವರಿವರಲ್ಲಿ ಹಣ ಎತ್ತಿ ಮನೆಗೆ ಕಳಿಸುವ ಏರ್ಪಾಟನ್ನು ಉಮಾಬಾಯಿ ಮಾಡುತ್ತಿದ್ದರು. ಭೂಗತರಾಗಿ ಸಂಘಟನೆ, ಸಮಾಜ ಸೇವೆಯ ಕೆಲಸ ಮುಂದುವರಿಸಿದರು.

1934. ಬಿಹಾರದಲ್ಲಿ ಭಾರೀ ಭೂಕಂಪವಾಯಿತು. ಸಾವಿರಾರು ಜನ ಮರಣ ಹೊಂದಿದರು. ಲಕ್ಷಾಂತರ ಜೀವಗಳ ಬದುಕು ಮೂರಾಬಟ್ಟೆಯಾಯಿತು. ಕಾಂಗ್ರೆಸ್ ತನ್ನ ಕಾರ್ಯಕರ್ತರನ್ನು, ಸ್ವಯಂಸೇವಕರನ್ನು ಅಲ್ಲಿಗೆ ಕಳಿಸಿತು. ಸತ್ಯಾಗ್ರಹಿಗಳು ದೇಶದೆಲ್ಲೆಡೆಯಿಂದ ಅಲ್ಲಿಗೆ ಧಾವಿಸಿ ಹೋಗಬೇಕೆಂದು ಕರೆ ನೀಡಿದ ಗಾಂಧೀಜಿ, ತಾವೂ ಹೋದರು. ಹುಬ್ಬಳ್ಳಿಯಿಂದ ಸತ್ಯಾಗ್ರಹಿಗಳ ತಂಡದೊಡನೆ ಹೋದ ಉಮಾಬಾಯಿ, ಪರಿಹಾರ ಶಿಬಿರಗಳಲ್ಲಿ ಕೆಲಸ ಮಾಡಿದರು. ಸಂತ್ರಸ್ತ ಕುಟುಂಬಗಳನ್ನು ಕಂಡು, ಧೈರ್ಯ ತುಂಬಿ, ಅಗತ್ಯ ಸಹಾಯ ಮಾಡಿದರು. ಜೆ ಬಿ ಕೃಪಲಾನಿ, ಬಾಬು ರಾಜೇಂದ್ರ ಪ್ರಸಾದ್ ಮೊದಲಾದ ರಾಷ್ಟ್ರೀಯ ನಾಯಕರ ಪರಿಚಯವಾದದ್ದು ಆಗಲೇ. ಸ್ವಲ್ಪವೂ ಹಿಂಜರಿಯದೆ ಯಾವ ಕೆಲಸಕ್ಕೂ, ಎಷ್ಟು ಹೊತ್ತಿಗೂ ಸಿದ್ಧವಿದ್ದ ಉಮಾಬಾಯಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 1938ರಲ್ಲಿ ಬಾಂಬೆ ಪ್ರಾಂತೀಯ ವಯಸ್ಕರ ಶಿಕ್ಷಣ ಮಂಡಳಿಯ ಮಹಿಳಾ ಪ್ರತಿನಿಧಿಯಾಗಿ ನೇಮಿಸಲ್ಪಟ್ಟರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಪದವಿ ಪಡೆದ ಭಾರತದ ಮೊದಲ ದಲಿತ ಮಹಿಳೆ ದಾಕ್ಷಾಯಿಣಿ ವೇಲಾಯುಧನ್

ನಿರಂತರ ಕೆಲಸ ಮಾಡುತ್ತ, ಜನರನ್ನು ಸಂಘಟಿಸುತ್ತ ಇರುತ್ತಿದ್ದ ಅವರನ್ನು ಕರ್ನಾಟಕ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿ ನೇಮಿಸಿತು. ಆಗ 1942ರ ಕ್ವಿಟ್ ಇಂಡಿಯಾ ಚಳವಳಿ ಬಂತು. ಅನಾರೋಗ್ಯಕ್ಕೊಳಗಾದರೂ ಭೂಗತ ಹೋರಾಟಗಾರರಿಗೆ ನಿಧಿ ಸಂಗ್ರಹಿಸುವುದು, ಆಹಾರ ಸರಬರಾಜು ಮಾಡುವುದೇ ಮೊದಲಾದ ಕೆಲಸಗಳನ್ನು ಮನೆಯಲ್ಲಿದ್ದು ನಿರ್ವಹಿಸಿದರು. ಹಲವಾರು ನಾಯಕರು ಬಂಧಿತರಾದಾಗ ಗುಪ್ತವಾಗಿ, ಸಮರ್ಥವಾಗಿ ಮಹಿಳೆಯರೇ ಕಾಂಗ್ರೆಸ್ ಚಟುವಟಿಕೆಗಳನ್ನು ನಿಭಾಯಿಸಿದರು. ಅವರಲ್ಲಿ ಉಮಾಬಾಯಿ ಕರ್ನಾಟಕದ ಮುಂಚೂಣಿ ಹೆಸರಾಗಿದ್ದರು. ಇದನ್ನೆಲ್ಲ ಗಮನಿಸಿದ ಗಾಂಧೀಜಿ, 1945ರಲ್ಲಿ ಕಸ್ತೂರಬಾ ನಿಧನದ ಬಳಿಕ ಆರಂಭವಾದ ರಾಷ್ಟ್ರೀಯ ಕಸ್ತೂರಬಾ ಟ್ರಸ್ಟ್‌ನ ಕರ್ನಾಟಕ ಪ್ರಾಂತ್ಯ ಮುಖ್ಯಸ್ಥೆಯಾಗಿ ಉಮಾಬಾಯಿಯವರನ್ನು ನೇಮಿಸಿದರು. ಗ್ರಾಮೀಣ ಆರೋಗ್ಯ, ಮಕ್ಕಳ ಹಿತರಕ್ಷಣೆ, ಶಿಕ್ಷಣ ಜಾಗೃತಿಗಾಗಿ ಟ್ರಸ್ಟ್ ಕೆಲಸ ಮಾಡಬೇಕೆನ್ನುವುದು ಗಾಂಧಿಯವರ ಅಭಿಮತವಾಗಿತ್ತು. ಆರಂಭದಲ್ಲಿ ಮಹಿಳಾ ಅಭ್ಯುದಯ ಕಾರ್ಯ ಕೈಗೊಳ್ಳಲು ಟ್ರಸ್ಟ್ ಬಳಿ ಹಣವಿರಲಿಲ್ಲ. ಮನೆ-ಮನೆ ತಿರುಗಿ ಭಿಕ್ಷೆ ಎತ್ತಿದ ಉಮಾ, ಸಂಸ್ಥೆಯನ್ನು ನಿಲ್ಲಿಸಲು ಹರಸಾಹಸ ಮಾಡಿದರು. ಹುಡುಕಿ-ಹುಡುಕಿ ಬಡ, ನಿರ್ಗತಿಕ, ಅನಾಥ, ಅವಿವಾಹಿತ, ವಿಧವೆ ಮಹಿಳೆಯರನ್ನೆಲ್ಲ ಕಸ್ತೂರಬಾ ಕೇಂದ್ರಗಳಿಗೆ ಕರೆತಂದರು. ಕರಕುಶಲ ವಸ್ತುಗಳ ತಯಾರಿ ಮಾಡುವ ತರಬೇತಿ ನೀಡಿದರು. ಅವರ ಕೆಲಸ, ಕಾರ್ಯದ ವೈಖರಿ ಕಂಡ ನಾ ಸು ಹರ್ಡೀಕರರು, "ಕರ್ನಾಟಕದ ಯಾವ ಮಹಿಳೆಯೂ ಇಷ್ಟು ನಿಸ್ವಾರ್ಥವಾಗಿ, ಸ್ವಯಂಸೇವಕಿಯಾಗಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತರವಾಗಿ ಕೆಲಸ ಮಾಡಿದ್ದನ್ನು ನಾನು ನೋಡಲಿಲ್ಲ," ಎಂದು ಪ್ರತಿಕ್ರಿಯಿಸಿದರು.

ಬಹುನಿರೀಕ್ಷಿತ ರಾಜಕೀಯ ಸ್ವಾತಂತ್ರ್ಯವನ್ನು 1947ರ ಆಗಸ್ಟ್ 15ರಂದು ಭಾರತವು ಪಡೆಯಿತು. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಬಹುಪಾಲು ಸ್ವಯಂಸೇವಕ-ಸೇವಕಿಯರು ನಂತರದ ದಿನಗಳಲ್ಲಿ ರಾಜಕಾರಣಿಗಳಾಗಿ ಬದಲಾದರು. ಸ್ವತಂತ್ರ ಭಾರತವು ಯಾವ ದಿಕ್ಕಿನಲ್ಲಿ ನಡೆಯಬೇಕು ಎಂಬ ಮುನ್ನೋಟಗಳಿದ್ದ ಅವರು ಶಾಸನಸಭೆಯಲ್ಲಿ ಇರಬಯಸಿದ್ದು ಸಹಜ ಬೆಳವಣಿಗೆ ಎಂಬಂತೆ ಕಾಣಿಸುತ್ತಿತ್ತು. ಕರ್ನಾಟಕದ ಯಶೋಧರಮ್ಮ ದಾಸಪ್ಪ, ಭಾಗೀರಥಿ ಬಾಯಿ, ಕಮಲಾದೇವಿ, ನಾ ಸು ಹರ್ಡೀಕರರೂ ಸೇರಿದಂತೆ ನೂರಾರು ಮುಂಚೂಣಿ ಹೋರಾಟಗಾರರು ಚುನಾವಣೆಗೆ ನಿಂತು ಶಾಸನಸಭೆ ಪ್ರವೇಶಿಸಿದರು. ಆದರೆ, ವಿನೋಬಾ ಭಾವೆ, ಉಮಾಬಾಯಿ ಕುಂದಾಪುರ ಅವರಂತಹ ಕೆಲವು ಗಾಂಧಿವಾದಿಗಳು ಇದಕ್ಕೆ ಅಪವಾದವೆಂಬಂತೆ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷ ಮತ್ತು ಅಧಿಕಾರ ರಾಜಕಾರಣದಿಂದ ದೂರವೇ ಉಳಿದರು. ಶಿಸ್ತು ಮತ್ತು ಅಹಿಂಸೆಯೇ ಕಾಂಗ್ರೆಸ್ ಮೌಲ್ಯ ಎಂದು ನಂಬಿದ ಉಮಾಬಾಯಿಯವರಿಗೆ, ಪಕ್ಷದ ನಾಯಕರು ಅದನ್ನೆಲ್ಲ ಕಳೆದುಕೊಂಡು ಸ್ವಾರ್ಥಿಗಳಂತೆ ವರ್ತಿಸತೊಡಗಿದ್ದು ಅತೀವ ಬೇಸರ ತರಿಸಿತು. ಪಕ್ಷ ಬಿಡಲಿಕ್ಕೂ ಆಗದೆ, ಗುರುತಿಸಿಕೊಳ್ಳಲೂ ಇಷ್ಟವಾಗದೆ ತಟಸ್ಥರಾಗುಳಿದರು. ಒಮ್ಮೆ ಹೋರಾಟಗಾರರ ಕಣ್ಮಣಿಯಾಗಿದ್ದವರು ಅಧಿಕಾರ ರಾಜಕಾರಣದ ತುರುಸಿನ ಸ್ಪರ್ಧೆಯಲ್ಲಿ ಅಪ್ರಸ್ತುತರಾಗಿಬಿಟ್ಟರು.

Image
Umabai Kundapur 3

ಅನಾರೋಗ್ಯ, ವಿಷಾದ, ಗುರುತಿಸುವವರಿಲ್ಲದ ಅಪರಿಚಿತತೆಗೆ ಒಳಗಾಗಿ ವರುಷಗಳು ಸರಿಯತೊಡಗಿದವು. ಆದರೂ ತನ್ನ ಕೈಲಾದಷ್ಟು ಸಮಾಜ ಸೇವೆಯ ಕೆಲಸಗಳನ್ನು ಸದ್ದಿಲ್ಲದೆ ಮಾಡುತ್ತ ಬಂದ ಉಮಾಬಾಯಿ, ನಿಧಾನವಾಗಿ ನೇಪಥ್ಯಕ್ಕೆ ಸರಿದರು. ಜನಮಾನಸದಿಂದಷ್ಟೇ ಅಲ್ಲ, ಕಾಂಗ್ರೆಸ್ ವಲಯದಲ್ಲೂ ಅವರ ಹೆಸರು ಮರೆಯಾಗತೊಡಗಿತು. ತಮ್ಮ ನೂರನೆಯ ವಯಸ್ಸಿನಲ್ಲಿ 1992ರಲ್ಲಿ ಹುಬ್ಬಳ್ಳಿಯ 'ಆನಂದ ಸ್ಮೃತಿ’ಯಲ್ಲಿ ಅವರು ತೀರಿಕೊಂಡಾಗ, ಸಂಪೂರ್ಣ ಏಕಾಂಗಿಯಾಗಿದ್ದರು.

ಈಗಲೂ ಸ್ವಾತಂತ್ರ್ಯ ಹೋರಾಟಗಾರರು ಎಂದೊಡನೆ ಉಮಾಬಾಯಿ ಕುಂದಾಪುರ ಎಂಬ ಹೆಸರು ಫಕ್ಕನೆ ನೆನಪಿಗೆ ಬರುವುದಿಲ್ಲ. ಶಾಲಾ ಪಠ್ಯದಲ್ಲೂ ಅಂಥವರು ಯಾಕಿರಬೇಕೆಂದು ಪಠ್ಯ ಪರಿಷ್ಕರಿಸುತ್ತಿರುವ ದೇಶಭಕ್ತ ವಿದ್ವಾಂಸರಿಗೆ ಹೊಳೆಯುತ್ತಿಲ್ಲ. ಎಂದೇ ಅವರ ಬಗೆಗಿರುವ ಪಾಠಗಳು, ಉಲ್ಲೇಖಗಳು ಅಳಿಸಲ್ಪಟ್ಟಿವೆ. ಆದರೆ, ಅವರಂತಹ ನಿಸ್ವಾರ್ಥ ಜೀವಗಳು ಎಲ್ಲ ಕಾಲದಲ್ಲಿಯೂ ರೂಪುಗೊಳ್ಳುವುದಿಲ್ಲ. ಅವರನ್ನು ಮರೆತರೆ ನಾವು ನಮ್ಮ ಹೆಜ್ಜೆ ಗುರುತುಗಳ ಅಳಿಸಿ ಹಿನ್ನಡೆದ ಹಾಗೆಯೇ ಆದೀತು. ಎಂದೇ ಉಮಾಬಾಯಿ ಕುಂದಾಪುರ ಅವರು ಭಾರತ ದೇಶವು ರಾಜಕೀಯ ಸ್ವಾತಂತ್ರ್ಯ ಪಡೆದು 75 ವರ್ಷ ಸಲ್ಲುತ್ತಿರುವ ಈ ಹೊತ್ತಿನಲ್ಲಿ ಪಕ್ಷ, ಸಿದ್ಧಾಂತಗಳ ಮರೆತು ಪ್ರತಿಯೊಬ್ಬರೂ ಸ್ಮರಿಸಲೇಬೇಕಾದ ಚೇತನ.

ನಿಮಗೆ ಏನು ಅನ್ನಿಸ್ತು?
2 ವೋಟ್