ಹಳ್ಳಿ ಹಾದಿ | ಅಂಗನವಾಡಿ ಮಕ್ಕಳಿಗೂ ಆಧಾರವೇ?

ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಅಂಗನವಾಡಿಯ ಆಹಾರ ಲೋಪವಿಲ್ಲದೆ ಸಿಗಬೇಕು. ಅದರಲ್ಲೂ ಕೂಲಿಕಾರರು ಇಂದು ಒಂದೂರು, ಇಲ್ಲಿ ಉದ್ಯೋಗ ಸಿಗದಿದ್ದರೆ ಬೇರೆ ಊರು. ಹಸಿದು ಆ ಕೂಲಿಕಾರರ ಮಕ್ಕಳು ಅಂಗನವಾಡಿಯ ಬಾಗಿಲಿಗೆ ಬಂದರೆ, ಊಟ ಕೊಡುವ ಬದಲು ಆಧಾರ್ ಕೇಳುತ್ತಾರೆಂದರೆ ಅದಕ್ಕಿಂತ ಅಮಾನವೀಯತೆ ಇನ್ನೊಂದಿದೆಯೇ?

‘ಅಂಗನವಾಡಿ ಮಕ್ಕಳಿಗೂ ಆಧಾರ್ ಕಡ್ಡಾಯ’ ನಾನು ಎಲ್ಲರಿಗೂ ಕೇಳಿಸುವಂತೆ ದೊಡ್ಡದಾಗಿ ಓದಿದಾಗ ಎಲ್ಲರ ಹುಬ್ಬು ಮೇಲೇರಿತು. ನಮ್ಮಲ್ಲಿ ಯಾವಾಗಲೂ ಮಕ್ಕಳಿಗೆ ಆಧಾರ್ ಕಡ್ಡಾಯವೇ ಇದೆಯಲ್ಲ? ಮಗುವನ್ನು ಅಂಗನವಾಡಿಗೆ ಹೆಸರು ಹಚ್ಚಲು, ಬ್ಯಾಂಕ್‌ನಲ್ಲಿ ಪಾಸ್‌ಬುಕ್‌ ಮಾಡಿಸಲು, ಎಲ್ಲದಕ್ಕೂ ಆಧಾರ್ ಬೇಕೇ ಬೇಕು. ‘ತಾಯಂದಿರ ಆಧಾರ್ ಇದ್ದರೆ ಸಾಕಿತ್ತಲ್ಲವೇ?’ ತಾಯಂದಿರ ಹೆಬ್ಬೆರಳು, ಆಧಾರ್ ನಂಬರಿನ ಜೊತೆಗೆ ಮಗುವಿನ ಆಧಾರ್ ಅನ್ನೂ ಮಾಡಿಸಲೇಬೇಕು. "ಇನ್ನೂ ಮೂರು ತಿಂಗಳ ಕೂಸನ್ನು ಕಟ್ಟಿಕೊಂಡು ಆ ನೋಂದಣಿ ಕೇಂದ್ರದಲ್ಲಿ ಸರದಿ ಸಾಲಲ್ಲಿ ಕೂರುವ ಕಷ್ಟ ಯಾರಿಗೂ ಬೇಡ ನೋಡ್ರಿ," ಮಹಾನಂದಾ ಹೇಳಿದಾಗ ನನಗಿನ್ನೂ ಅಚ್ಚರಿ.

ಆದರೆ, ಕೇಂದ್ರ ಸರ್ಕಾರ ಜುಲೈ 8ಕ್ಕೆ ನೋಟಿಫಿಕೇಶನ್ ಹೊರಡಿಸಿದೆಯಲ್ಲ, ʼಪೋಷಣ್ ಅಭಿಯಾನʼದಲ್ಲಿ ಕೊಡುವ ಆಹಾರ ಎಲ್ಲಿ ಹೋಯಿತೆಂದು ತಿಳಿಯಲು ಆಧಾರ್ ಕಡ್ಡಾಯ ಎಂದು? ಸರಕಾರ ಈಗ ಆದೇಶ ಹೊರಡಿಸಿರಬಹುದು. ಆದರೆ, ಆ ಆದೇಶ ಆಧಾರ್ ಬಂದಾಗಿನಿಂದ ಎಲ್ಲ ಅಧಿಕಾರಿಗಳ ಬಾಯಲ್ಲೂ ಗಟ್ಟಿ ನೆಲೆ ನಿಂತುಬಿಟ್ಟಿದೆ. ಹೆಣ್ಣುಮಗುವಿಗೆ ʼಭಾಗ್ಯಲಕ್ಷ್ಮಿ ಯೋಜನೆʼ ಮಾಡಿಸಲು, ಶಾಲೆಯಲ್ಲಿ ದಾಖಲಾತಿ ಮಾಡಿಸಲು, ಪ್ರತಿಯೊಂದಕ್ಕೂ ಆಧಾರ್ ಇಲ್ಲವೆಂದರೆ ಹಿಂದಕ್ಕೆ ಕಳಿಸುವುದು ರೂಢಿ ಆಗೋಗಿದೆ. ಯಾವ ತಾಯಿಯನ್ನು ಕೇಳಿದರೂ ಇದೇ ಉತ್ತರ. ಕೇಂದ್ರ ಸರ್ಕಾರಕ್ಕಿಂತ ತಾನು ಅನೇಕ ಹೆಜ್ಜೆ ಮುಂದೆ ಎಂದು ಕರ್ನಾಟಕವು ತೋರಿಸಿಕೊಟ್ಟಿದೆ. ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿ ಕಾರ್ಯಕ್ರಮದಲ್ಲಿ ವಲಸೆ ಕಾರ್ಮಿಕರಿಗೂ ಅವಕಾಶ ಕಲ್ಪಿಸುವುದಕ್ಕಾಗಿ ಆಧಾರ ಜೋಡಣೆಯನ್ನು ಕಡ್ಡಾಯ ಮಾಡುತ್ತಿದ್ದೇನೆಂದು ಹೇಳಿಕೊಳ್ಳುತ್ತಿದೆ.

ಅಂಗನವಾಡಿ ಕಾರ್ಯಕ್ರಮವು ‘ರಾಷ್ಟ್ರೀಯ ಆಹಾರ ಭದ್ರತಾ ಕಾನೂನು 2013ʼರ ಒಳಗೆ ಬರುತ್ತದೆ. ಗರ್ಭಿಣಿ ಮತ್ತು ಹಾಲೂಡಿಸುವ ತಾಯಂದಿರು, ಆರು ವರ್ಷದೊಳಗಿನ ಮಕ್ಕಳು ಈ ಕಾರ್ಯಕ್ರಮದೊಳಗೆ ಬರುವವರು. ಪಡಿತರವು ಆಯ್ದ ಕುಟುಂಬಗಳಿಗೆ ಮಾತ್ರವಾಗಿದ್ದರೂ, ಅಂಗನವಾಡಿಯ ಆಹಾರ ಮಾತ್ರ ಸಾರ್ವತ್ರೀಕರಣವಾಗಿದೆ. ಅಲ್ಲಿ ಬರುವ ಎಲ್ಲಾ ಮಕ್ಕಳಿಗೂ ಭೇದವಿಲ್ಲದೇ ಅದು ಸಿಗಬೇಕು ಎನ್ನುತ್ತದೆ ಕಾನೂನು. 2001ರಲ್ಲಿ  ‘ಆಹಾರದ ಹಕ್ಕಿಗಾಗಿ ಆಂದೋಲನ’ದ ಸುಪ್ರೀಂ ಕೋರ್ಟ್ ಕೇಸಿನಿಂದ ಹೊರಬಂದ ತೀರ್ಪಿಗನುಗುಣವಾಗಿ ಅಂಗನವಾಡಿಗಳು ಸ್ಥಾಪಿತವಾಗಿವೆ.

Image
Adhar card
ಸಾಂದರ್ಭಿಕ ಚಿತ್ರ

ಈ ಕೇಸಿನಲ್ಲಿ "ಪ್ರತಿಯೊಬ್ಬ ಗರ್ಭಿಣಿ ಅಥವಾ ಹಾಲೂಡಿಸುವ ತಾಯಿಗೂ, ಆರು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಹಾಗೂ ಪ್ರತಿಯೊಬ್ಬ ಕಿಶೋರಿಗೂ ಅಂಗನವಾಡಿ ಸೇವೆಗಳು ಲಭ್ಯವಾಗಬೇಕು. ಪ್ರತಿಯೊಂದು ಹಳ್ಳಿಯಲ್ಲೂ, ಹಳ್ಳಿಯ ಜನವಸತಿಗಳಲ್ಲೂ, ಬಡಜನರು ವಾಸಿಸುವ ಪ್ರದೇಶದಲ್ಲೂ ಅಂಗನವಾಡಿಗಳು ಇರಲೇಬೇಕೆಂದು ಸ್ಪಷ್ಟವಾಗಿ ಹೇಳಿತ್ತು. ಯಾವುದೇ ಪ್ರದೇಶದಲ್ಲಿ 40ಕ್ಕಿಂತ ಹೆಚ್ಚು ಆರು ವರ್ಷದೊಳಗಿನ ಮಕ್ಕಳಿದ್ದರೆ, ಅವರಿಗೆ ಅಂಗನವಾಡಿ ಸೌಲಭ್ಯ ಸಿಗುತ್ತಿಲ್ಲವಾದರೆ, ಅವರು ಅಂಗನವಾಡಿಗಾಗಿ ಬೇಡಿಕೆ ಇಡಬೇಕು. ಬೇಡಿಕೆ ಇಟ್ಟ 90 ದಿನಗಳೊಳಗಾಗಿ ಅವರಿಗೆ ಅಂಗನವಾಡಿ ದೊರೆತಿರಬೇಕು," ಎಂದೂ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿತ್ತು. ಅಂಗನವಾಡಿಗಳಲ್ಲಿ ಏನೇನು ಪೂರಕ ಆಹಾರವನ್ನು ಕೊಡಬೇಕೆಂದು ಆಹಾರ ಭದ್ರತಾ ಕಾನೂನಿನಲ್ಲಿ ಹೇಳಿದೆ. ಕಾನೂನಾತ್ಮಕವಾಗಿ ಸಾರ್ವತ್ರಿಕವಾಗಿ ದೊರಕುವ ಸೇವೆಯದು.

ಆಧಾರ್ ವಿಚಾರದ ತೀರ್ಪು ಕೊಡುವಾಗ ಸರ್ವೋಚ್ಚ ನ್ಯಾಯಾಲಯವು "ಪುಟ್ಟ ಮಕ್ಕಳ ವಿಚಾರದಲ್ಲಿ ಆಧಾರ್ ಅನ್ನು ಕಡ್ಡಾಯಗೊಳಿಸಬಾರದು. ಒಂದೊಮ್ಮೆ ಮಾಡಿಸಿದ್ದರೆ, ಅವರು ದೊಡ್ಡವರಾದಾಗ ಆಧಾರ್ ನಿಂದ ಹೊರಬರಲು ಇಚ್ಛಿಸಿದರೆ ಅದಕ್ಕೆ ಅವಕಾಶವಿರಬೇಕು," ಎಂದಿತ್ತು. ನಮ್ಮ ಅಂಗನವಾಡಿಗಳ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದಾಗ "ಮಗುವಿನ ಆಧಾರ್ ಕಾರ್ಡ್ ಕಡ್ಡಾಯ ಎಂಬ ಆದೇಶವೂ ಇಲ್ಲ, ನಾವು ಮಾಡಿಯೂ ಇಲ್ಲ, ತಾಯಿ ಅಥವಾ ತಂದೆಯ ಆಧಾರ್ ಇದ್ದರೆ ಸಾಕು. ತಾಯ್ತಂದೆಗಳೇ ಮುಂದೆಬಿದ್ದು ಮಾಡಿಸುತ್ತಿದ್ದಾರೆ," ಎಂದು ತಪ್ಪಿಸಿಕೊಳ್ಳುತ್ತಾರೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರಿಂದ ತಾಯಂದಿರ ಮೇಲೆ ಸತತವಾಗಿ ಮಗುವಿಗೆ ಆಧಾರ್ ಮಾಡಿಸಲು ಪ್ರೋತ್ಸಾಹ ಮತ್ತು ಒತ್ತಾಯ ನಡೆದೇ ಇದೆ. ತಾಯಂದಿರಿಗೆ ಕಷ್ಟವಾದರೆ ಇಲಾಖೆಯವರು ಸ್ವತಃ ಹಳ್ಳಿಗೆ ಬಂದು ಆಧಾರ್ ಮಾಡಿಸಲು ಸಹಾಯ ಮಾಡುತ್ತಾರೆ.

ಈ ಲೇಖನ ಓದಿದ್ದೀರಾ?: ಹಳ್ಳಿ ಹಾದಿ | ಕೃಷಿ ಕಸಕ್ಕೆ ಸಮವಾಗಿ ಹೋಯಿತೇ?

2013ರ ಸಪ್ಟೆಂಬರ್ 26ರಂದು ಆಧಾರ ಕುರಿತು ತನ್ನ ತೀರ್ಪನ್ನು ಪ್ರಕಟಿಸುವಾಗ ಸುಪ್ರೀಂ ಕೋರ್ಟ್ ಮಕ್ಕಳ ಶಾಲಾ ಪ್ರವೇಶಕ್ಕಾಗಿ, ಸ್ಕಾಲರ್‌ಶಿಪ್ ಪಡೆಯುವುದಕ್ಕಾಗಿ ಮಗುವಿನ ಆಧಾರ್ ಕೇಳಬಾರದು ಎಂದು ಹೇಳಿತ್ತು. ಅದಕ್ಕಿಂತಲೂ ಮೊದಲೇ ಇಲಾಖೆ ಆಧಾರನ್ನು ಕಡ್ಡಾಯ ಮಾಡಿದ್ದರಿಂದ ಅನೇಕ ಬಡ ಮತ್ತು ಹಿಂದುಳಿದ ಮಕ್ಕಳಿಗೆ ಸ್ಕಾಲರ್‌ಶಿಪ್ ದೊರಕದೇ ಹೋಗುತ್ತಿರುವುದನ್ನು ಗಮನಿಸಿಯೇ ಸರ್ವೋಚ್ಛ ನ್ಯಾಯಾಲಯವು ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಯೋಜನೆ ಪಡೆಯಲು ಆಧಾರ್ ಬೇಕಿಲ್ಲ ಎಂದು (ಸೆಪ್ಟೆಂಬರ್‌ 3, 22ಸಿ) ತೀರ್ಪು ಕೊಟ್ಟಿತ್ತು.

ಯುಐಎಡಿಐ ಮಾರ್ಗದರ್ಶಿಯಲ್ಲಿ ಚಿಕ್ಕಮಕ್ಕಳ ಬೆರಳಚ್ಚು ಮತ್ತು ಕಣ್ಣುಪಾಪೆಯ ಅಚ್ಚನ್ನು ಸಂಗ್ರಹಿಸಬಾರದೆಂದು ಸ್ಪಷ್ಟವಾಗಿ ಹೇಳಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಆಧಾರ್ ಸ್ಯಾಚುರೇಷನ್ ಶೇಕಡ 35ಕ್ಕಿಂತ ಕಡಿಮೆ. ಹೀಗಿರುವಾಗ, ಅಂಗನವಾಡಿ ಮಕ್ಕಳಿಗೆ ಆಧಾರ್ ಮಾಡಿಸಿ ತಾನು ಕಳಿಸಿದ ಆಹಾರವನ್ನು ಯಾವ ಯಾವ ಮಗು ತಿಂದಿತು ಎಂದು ಟ್ರಾಕ್ ಮಾಡುವ ವಿಚಾರ ತೀರಾ ಅಮಾನವೀಯ, ಕಾನೂನಿಗೆ ವಿರುದ್ಧವಾದುದು.

Image
Anganvadi
ಸಾಂದರ್ಭಿಕ ಚಿತ್ರ

ಸರ್ವೋಚ್ಚ ನ್ಯಾಯಾಲಯದ ಆಜ್ಞೆಗಳು ಮತ್ತು ಕಾನೂನಿನ ಬೆಂಬಲದಿಂದ ಬಹಳ ಸ್ಪಷ್ಟವಾಗಿ ‘ಎಲ್ಲರಿಗೂ’ ಎಂದು ಬರೆದಿರುವಾಗ, ಆ ಮಗು ಅಥವಾ ತಾಯಿ ಅಂಗನವಾಡಿಗೆ ಬಂದರೆ ಸಾಕು ಎಂದಿರುವಾಗ, ನಿವಾಸದ ವಿಳಾಸ ಮತ್ತು ಆಧಾರ್ ಜೋಡಣೆ ಇವ್ಯಾವು ಅವಶ್ಯಕತೆಯೇ ಇಲ್ಲದಿರುವಾಗ ಕೂಡ ನಮ್ಮ ಅಂಗನವಾಡಿಗಳಲ್ಲಿ ಹೋದವರಿಗೆಲ್ಲ ಊಟ ಸಿಗುತ್ತದೆಂಬುದು ಸುಳ್ಳು. ಆಯಾ ಕುಟುಂಬಗಳು ನೋಂದಣಿ ಮಾಡಿದ ನಂತರವೇ ಅವರಿಗೆ ಆಹಾರ ಸಿಗುತ್ತಿತ್ತು. ಈಗ ಆಧಾರ, ನಿವಾಸದ ವಿಳಾಸವನ್ನು ಕಡ್ಡಾಯ ಮಾಡುವ ಮೂಲಕ ಸರ್ಕಾರವು ಅಂಗನವಾಡಿಯ ಹೊರಗೆ ಇನ್ನೊಂದು ಬೇಲಿಯನ್ನು ಕಟ್ಟುತ್ತಿದೆ.

ನಮ್ಮ ದೇಶದ ಮಕ್ಕಳಲ್ಲಿ ಅಪೌಷ್ಟಿಕತೆಯು ತಾಂಡವವಾಡುತ್ತಿರುವಾಗ ಅಂಗನವಾಡಿಯ ಆಹಾರವು ಮಕ್ಕಳಿಗೆ, ಅದರಲ್ಲೂ ಬಡ ಮತ್ತು ಭೂಹೀನ, ಕೂಲಿಕಾರರ ಮಕ್ಕಳಿಗೆ ಯಾವುದೇ ಲೋಪವಿಲ್ಲದೆ ಸಿಗಬೇಕಾದ್ದು ಅತಿ ಅವಶ್ಯವಾಗಿದೆ. ಕೂಲಿಕಾರರೆಂದರೆ ಇಂದು ಒಂದೂರು, ಇಲ್ಲಿ ಉದ್ಯೋಗ ಸಿಗಲಿಲ್ಲವೆಂದರೆ ಬೇರೆ ಊರು. ಹಸಿದು ಬಸವಳಿದ ಆ ಕೂಲಿಕಾರರ ಮಕ್ಕಳು ಅಂಗನವಾಡಿಯ ಬಾಗಿಲಿಗೆ ಬಂದರೆ ಊಟ ಕೊಡುವ ಬದಲು ಆಧಾರ್ ಕೇಳುತ್ತಾರೆಂದರೆ ಅದಕ್ಕಿಂತ ಅಮಾನವೀಯತೆ ಇನ್ನೊಂದಿದೆಯೇ?

ಕೊರೊನಾ ಸೃಷ್ಟಿಸಿದ ಅನಾಹುತಗಳಿಂದ ಇನ್ನೂ ಚೇತರಿಸಿಕೊಳ್ಳದ ಬಡ ಕುಟುಂಬಗಳಿಗೆ ಜೀವತಂತುವಾದ ಅಂಗನವಾಡಿಯಲ್ಲಿ, ಕೈಯಲ್ಲಿ ಊಟದ ತಾಟು ಕೊಟ್ಟು, ಆಧಾರ್ ನಂಬರ್ ಹೇಳದಿದ್ದರೆ ಕೊಟ್ಟಿದ್ದನ್ನು ಕಸಿದುಕೊಳ್ಳುವ ಯಾವುದೇ ಬದಲಾವಣೆ ಆಗದಿರಲಿ. ಇದು ಕಾನೂನಿನಲ್ಲಿ ಮಾಡುವ ಬದಲಾವಣೆ, ಸುಪ್ರೀಂ ಕೋರ್ಟಿನ ಆದೇಶದ ಉಲ್ಲಂಘನೆ. ಇಂಥ ಬದಲಾವಣೆ ಮಾಡುವುದಕ್ಕೂ ಮೊದಲು ಸರ್ಕಾರವು ಸಂಸತ್ತಿನಲ್ಲಿ ಚರ್ಚಿಸಿ, ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತಂದು ಕಾನೂನಿನ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು.

ನಿಮಗೆ ಏನು ಅನ್ನಿಸ್ತು?
1 ವೋಟ್