ದಾರಿಹೋಕ | ಅಂಬೇಡ್ಕರ್ ಹೇಳಿದಂತೆ, ನಿಜವಾದ 'ಲೋಕಮಾನ್ಯ' ತಿಲಕರಲ್ಲ - ಅವರ ಮಗ ಶ್ರೀಧರ

TILAK PANTH AMBEDKAR

ಅಂಬೇಡ್ಕರ್ ಹುಟ್ಟುಹಾಕಿದ 'ಸಮಾಜ ಸಮತಾ ಸಂಘ'ದ ಪುಣೆ ಶಾಖೆ ಆರಂಭಿಸಿದ ಶ್ರೀಧರ ಪಂಥ್, ಆ ಕಾಲದ ಅತಿ ದೊಡ್ಡ ನಾಯಕ ಬಾಲಗಂಗಾಧರ ತಿಲಕ್ ಅವರ ಮಗ. "ವರ್ಣಾಶ್ರಮ ಜಾತಿ ವ್ಯವಸ್ಥೆ ಪಾಲಿಸುತ್ತಿದ್ದ ಸಮೂಹದ ನಡುವಿನಿಂದ ಓರ್ವ ಅಂಬೇಡ್ಕರ್‌ವಾದಿ ತಲೆಯೆತ್ತಿ ನಿಂತದ್ದು ಪವಾಡ," ಎನ್ನುತ್ತಾರೆ - ಈ ಕುರಿತು ಪುಸ್ತಕ ಬರೆದ ಶತ್ರುಘ್ನ ಜಾಧವ್

ಕೇವಲ ಶಿಕ್ಷಣದ ಮೂಲಕ ಅರಿವು ಮೂಡಿಸುವುದು ಮತ್ತು ಶಾಸ್ತ್ರಗಳ ಪೊಳ್ಳುತನವನ್ನು ಬಹಿರಂಗಗೊಳಿಸುವುದರಿಂದ ಮಾತ್ರ ಅಸ್ಪೃಶ್ಯತೆ ನಾಶ ಮಾಡಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರಿಗೆ ಆಗಲೇ ಅರಿವಾಗಿತ್ತು. ಆದರೆ, ಅವರ ಬೆಂಬಲಕ್ಕೆ ನಿಂತಿದ್ದ ಕೆಲವರೇ, ಅವರ ನಿರ್ಧಾರ ಮತ್ತು ನಡೆ ಸ್ವಲ್ಪ ಅವಸರದ್ದಾಯಿತೇನೋ, ಅತಿರೇಕದ್ದಾಯಿತೇನೋ ಎಂದು ಸಂದೇಹ ವ್ಯಕ್ತಪಡಿಸಲು ಆರಂಭಿಸಿದಾಗ, ಅಂಬೇಡ್ಕರ್, "ಪ್ರಾಣಾಂತಕವಾದ ಕಾಯಿಲೆಯನ್ನು ಗುಣಪಡಿಸಲು ಕಠಿಣವಾದ ಮದ್ದು ಮಾಡಬೇಕಾಗಿಬರುತ್ತದೆ," ಎಂದು ಹೇಳಿ, ಆ ದಿಕ್ಕಿನಲ್ಲಿ ಕಾರ್ಯನಿರ್ವಹಿಸಲು ಯೋಜನೆಯೊಂದನ್ನು ಸಹ ರೂಪಿಸಿದರು. ಮತ್ತೆ ಮಹಾಡ್‌ಗೆ ಹೋಗಿ, ಅಲ್ಲೊಂದು ಬೃಹತ್ ಸಮಾವೇಶ ನಡೆಸುವುದು ಮತ್ತು ದಲಿತ ಜನರ ಹಕ್ಕಿನ ಸಂರಕ್ಷಣೆಗಾಗಿ ಸತ್ಯಾಗ್ರಹ ಚಳವಳಿ ಆರಂಭಿಸುವುದು ಅವರ ನಿರ್ಧಾರವಾಗಿತ್ತು. ಇದು ಜೂನ್ 1927ರ ಮಾತು.

ಅವರ ಈ ನಿರ್ಧಾರಕ್ಕೆ ಬ್ರಾಹ್ಮಣೇತರ ನಾಯಕರುಗಳಾದ ದಿನಕರ ರಾವ್ ಜವಾಲ್ಕರ್ ಮತ್ತು ಕೇಶವ ರಾವ್ ಜೇಡೆ ಬೆಂಬಲ ಸಿಕ್ಕಿತು. ಆದರೆ, ಈ ದಿಗ್ಗಜರು ತಮ್ಮ ಸಹಕಾರ ಸೂಚಿಸುವ ಹೊತ್ತು ಒಂದು ಷರತ್ತು ಹಾಕಿದರು; ಅದೇನೆಂದರೆ, ಮಹಾಡ್ ಸಮಾವೇಶದಲ್ಲಿ ಬ್ರಾಹ್ಮಣರ್ಯಾರೂ ಪಾಲ್ಗೊಳ್ಳಬಾರದು ಮತ್ತು ಪ್ರಜ್ಞಾಪೂರ್ವಕವಾಗಿಯೇ ಬ್ರಾಹ್ಮಣರನ್ನು ಈ ಸತ್ಯಾಗ್ರಹದಿಂದ ಹೊರಗಿಡಬೇಕು. ಅವರ ಈ ಮಾತನ್ನು ಶಾಂತಚಿತ್ತರಾಗಿ ಕೇಳಿಸಿಕೊಂಡ ಅಂಬೇಡ್ಕರ್ ಉತ್ತರವಾಗಿ ಹೇಳಿದ್ದು- "ಬ್ರಾಹ್ಮಣರೆಲ್ಲರೂ ಶತ್ರುಗಳು ಎಂಬ ಅಭಿಪ್ರಾಯ ಸರಿಯಲ್ಲ. ಜನರಲ್ಲಿ ಮೇಲು-ಕೀಳು ಭಾವನೆ ಹುಟ್ಟಿಸಿ, ಸಮಾಜದಲ್ಲಿ ಅಸಮಾನತೆ ಹುಟ್ಟುಹಾಕುವ ಬ್ರಾಹ್ಮಣ್ಯ ನಮ್ಮ ನಿಜವಾದ ಶತ್ರು. ಅಂಥ ದೃಷ್ಟಿಯನ್ನು, ಮೌಲ್ಯವನ್ನು ಹೊಂದಿದ ಬ್ರಾಹ್ಮಣೇತರರು ಕೂಡ ತನ್ನಲ್ಲಿ ಜಿಗುಪ್ಸೆ ಹುಟ್ಟಿಸುತ್ತಾರೆ ಮತ್ತು ಅಂಥ ದೃಷ್ಟಿ ಹೊಂದಿರದ, ಆ ಮೌಲ್ಯವನ್ನು ಪಾಲಿಸದ ಬ್ರಾಹ್ಮಣರು ಕೂಡ ತನಗೆ ಪ್ರಿಯರು ಎಂದು ಅಂಬೇಡ್ಕರ್ ತನ್ನ ನಿಲುವನ್ನು ಹೇಳಿ, ಜವಾಲ್ಕರ್ ಮತ್ತು ಜೇಡೆ ಜೊತೆಗಿನ ಭಿನ್ನಾಭಿಪ್ರಾಯವನ್ನು ಸ್ಪಷ್ಟಪಡಿಸಿದರು.

ಜವಾಲ್ಕರ್ ಮತ್ತು ಜೇಡೆ ಅವರ ಬೇಡಿಕೆ ದ್ವೇಷಪೂರಿತವಾದದ್ದು ಆಗಿರಲಿಲ್ಲ. ಆ ಬೇಡಿಕೆಯ ಹಿಂದೆ ಕಾರಣವಿತ್ತು, ಸಕಾರಣವಿತ್ತು. ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ಅಂಬೇಡ್ಕರ್ ಸಾವಿರಾರು ದಲಿತರ ಜೊತೆಗೂಡಿ ಮಹಾಡ್‌ನಲ್ಲಿ ಚೌಡಾರ್ ಕೆರೆಯ ನೀರನ್ನು ಕುಡಿದು ಕ್ರಾಂತಿ ನಡೆಸಿದ ಬೆನ್ನಿಗೇ, ಮಹಾಡ್‌ ಮೇಲ್ಜಾತಿಯ ಜನರು ದಲಿತರ ಮೇಲೆ ಪ್ರಹಾರ ನಡೆಸಿದ್ದರು. ಅಷ್ಟೇ ಅಲ್ಲ, ದೂರದೂರಿಂದ ಬಂದಿದ್ದ ದಲಿತರ ಮೇಲೆ ಅವರವರ ಊರಿನಲ್ಲಿ ಆಯಾಯ ಊರಿನ ಮೇಲ್ಜಾತಿಯವರು ಹಿಂಸೆ ನಡೆಸಲು ಪ್ರೇರೇಪಿಸಲಾಗಿತ್ತು. ಅಷ್ಟಕ್ಕೇ ಸುಮ್ಮನಾಗದ ಮಹಾಡ್‌ನ ಮೇಲ್ಜಾತಿಯವರು, ಚೌಡಾರ್ ಕೆರೆಯನ್ನು ವೈದಿಕ ರೀತಿಯಲ್ಲಿ ಶುದ್ಧೀಕರಿಸಿದ್ದರು. ಈ ಎಲ್ಲ ಸಂಗತಿಗಳು ಸಹಜವಾಗಿಯೇ ಜವಾಲ್ಕರ್ ಮತ್ತು ಜೇಡೆ ಅವರನ್ನು ಸಿಟ್ಟಾಗಿಸಿದ್ದವು. ಅವೇ ಸಂಗತಿಗಳು ಬಾಬಾ ಸಾಹೇಬರನ್ನು ಸಹ ಆಳವಾಗಿ ನೋಯಿಸಿದ್ದವು ಮತ್ತು ಆಕ್ರೋಶಿತಗೊಳಿಸಿದ್ದವು ಕೂಡ. ಅದಕ್ಕಾಗಿಯೇ ಅವರು ಮತ್ತೆ ಮಹಾಡ್ ಕಡೆಗೆ ಹೆಜ್ಜೆ ಹಾಕುವ ನಿರ್ಧಾರ ಕೈಗೊಂಡಿದ್ದರು.

Image
Mahad Lake
ಮಹಾಡ್ ಕೆರೆ ಕ್ರಾಂತಿ - ಕಲಾವಿದನ ಕಣ್ಣಲ್ಲಿ. ಕೃಪೆ: ವೇಳಿವಾಡ ಜಾಲತಾಣ

ಅಷ್ಟಾದರೂ ಅವರು, ಜವಾಲ್ಕರ್ ಮತ್ತು ಜೇಡೆ ಅವರಿಗಿಂತ ಭಿನ್ನವಾದ ನೋಟ ಹೊಂದಿದ್ದು, ವಿಶಾಲ ದೃಷ್ಟಿ ಮತ್ತು ವೈಚಾರಿಕ ಸ್ಪಷ್ಟತೆಯನ್ನು ಸೂಚಿಸುತ್ತದೆ. ಬಹುಶಃ ಅದರೊಂದಿಗೆ ಅವರ ಅನುಭವ ಪ್ರಪಂಚವೂ ಆ ನಿಲುವಿಗೆ ಕಾರಣ ಆಗಿದ್ದಿರಬಹುದು. ಅದಕ್ಕೆ ಪುರಾವೆ - ಅವರಿಗೆ ಇದ್ದ ಕೆಲವು ಬ್ರಾಹ್ಮಣ ಸ್ನೇಹಿತರು ಮತ್ತು ಅವರ ಚಳವಳಿಗಳಿಗೆ ಮನಸಾರೆ ಬೆಂಬಲ ನೀಡಿ ಸಂಗಾತಿಗಳಾದ ಬ್ರಾಹ್ಮಣರು. ಅಂಥ ಸ್ನೇಹವರ್ಗದಲ್ಲಿ ಪ್ರಮುಖರು ಶ್ರೀಧರ್ ಬಲವಂತ್ ತಿಲಕ್ ಉರ್ಫ್ ಶ್ರೀಧರ ಪಂಥ್.

ಅಂಬೇಡ್ಕರ್ ಹುಟ್ಟುಹಾಕಿದ 'ಸಮಾಜ ಸಮತಾ ಸಂಘ'ದ (ಮುಂದೆ ಸಮತಾ ಸೈನಿಕ ದಳ ಎಂದು ಕರೆಯಲಾದ ಸಂಘಟನೆ) ಪುಣೆ ಶಾಖೆಯನ್ನು ಆರಂಭಿಸಿದ್ದಲ್ಲದೆ, ಅದರ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಶ್ರೀಧರ ಪಂಥ್, ಆ ಕಾಲದ ಅತಿ ದೊಡ್ಡ ನಾಯಕ ಆಗಿದ್ದ ಬಾಲಗಂಗಾಧರ ತಿಲಕ್ ಅವರ ಮಗ. "ಬ್ರಾಹ್ಮಣೀಯ ಆಲೋಚನಾ ಕ್ರಮ ಹೊಂದಿದ್ದ, ವರ್ಣಾಶ್ರಮ ಜಾತಿ ವ್ಯವಸ್ಥೆಯನ್ನು ಪಾಲಿಸುತ್ತಿದ್ದ ಸಮೂಹದ ನಡುವಿನಿಂದ ಓರ್ವ ಅಂಬೇಡ್ಕರ್‌ವಾದಿ ತಲೆಯೆತ್ತಿ ನಿಂತದ್ದು ಒಂದು ಪವಾಡದಂತೆ ಕಾಣಿಸುತ್ತದೆ," ಎನ್ನುತ್ತಾರೆ - ಶ್ರೀಧರ ಪಂಥ್ ಮತ್ತು ಅಂಬೇಡ್ಕರ್ ಸ್ನೇಹ ಸಹಚರ್ಯದ ಕುರಿತು ಪುಸ್ತಕ ಬರೆದ ಶತ್ರುಘ್ನ ಜಾಧವ್.

ತಂದೆಯ ಹಾದಿಯಲ್ಲೇ ಮಗ ಚಲಿಸಬೇಕು ಎಂಬ ನಿಯಮವೇನೂ ಇಲ್ಲದಿದ್ದರೂ, ಬಾಲಗಂಗಾಧರ ತಿಲಕರ ಮನೆಯೊಳಗೇ ಅಂಬೇಡ್ಕರ್‌ವಾದಿ ಚಿಂತನೆ ಮನೆ ಮಾಡಿದ್ದು ಪವಾಡದಂತೆ ಕಾಣಲು ಕಾರಣ, ಆ ಕಾಲಕ್ಕೆ ಈ ಎರಡೂ ಪಂಥದ ನಡುವೆ ಇದ್ದ ಬೌದ್ಧಿಕ, ಸಾಮಾಜಿಕ ಹಾಗೂ ರಾಜಕೀಯ ಸಮರ. ಈ ಸಮರಗಳು ಕೋರ್ಟ್ ಮೆಟ್ಟಿಲು ಹತ್ತಿದ ನಿದರ್ಶನಗಳು ಹಲವು.

Image
ganesh chaturthi
ಗಣೇಶೋತ್ಸವ

ಇದಕ್ಕೆ ಒಳ್ಳೆಯ ಒಂದು ಉದಾಹರಣೆ ಎಂದರೆ, ತಿಲಕರು ಜನಪ್ರಿಯಗೊಳಿಸಿದ ಸಾರ್ವಜನಿಕ ಗಣೇಶೋತ್ಸವಗಳು. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಸರ್ದಾರ್ ಕೃಷನ್ಜಿ ಕಾಶಿನಾಥ್ ಉರ್ಫ್ ನಾನಾಸಾಹೇಬ್ ಖಜಗಿವಾಲೆ ಅವರು ಗ್ವಾಲಿಯರ್‌ನಲ್ಲಿ ಕಂಡ ಸಾರ್ವಜನಿಕ ಗಣೇಶೋತ್ಸವದಿಂದ ಪ್ರೇರೇಪಿತರಾಗಿ ಪುಣೆಯಲ್ಲಿಯೂ ಅದೇ ರೀತಿಯ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ನಿರ್ಧರಿಸಿ, ಮುಂದಿನ ವರ್ಷದಿಂದಲೇ ಶುರುಮಾಡಿಕೊಂಡರು. ಆ ವರ್ಷ ಪುಣೆಯಲ್ಲಿ ಮೂರು ಸಾರ್ವಜನಿಕ ಗಣೇಶೋತ್ಸವ ಕಂಡ ತಿಲಕರು, ಆ ಕುರಿತು ತಮ್ಮ ಪತ್ರಿಕೆಯಾದ 'ಕೇಸರಿ'ಯಲ್ಲಿ ಬರೆದರು. ಅವರಾಡಿದ ಮೆಚ್ಚುಗೆಯ ಮಾತುಗಳ ಪರಿಣಾಮ ಎಂದರೆ, ಅದರ ಮುಂದಿನ ವರ್ಷ ಪುಣೆಯಲ್ಲಿ ಏರ್ಪಟ್ಟ ಸಾರ್ವಜನಿಕ ಗಣೇಶೋತ್ಸವದ ಸಂಖ್ಯೆ ನೂರೈವತ್ತು!

ಈ ಗಣೇಶೋತ್ಸವಗಳನ್ನು ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಬಳಸಿದ್ದು ಬಹಳ ಪ್ರಸಿದ್ಧಿ ಪಡೆದ ಕತೆ. ಆದರೆ, ಗಣೇಶೋತ್ಸವವನ್ನು ರಾಜಕೀಯ ಎಚ್ಚರ ಮೂಡಿಸಲು ಬಳಸಿದ್ದಕ್ಕಿಂತ ರಾಜಕೀಯ ಅಸ್ತ್ರವಾಗಿ ಬಳಸಿದ್ದೇ ಹೆಚ್ಚು ಅನ್ನಬಹುದು. ಈ ಮಾತನ್ನು ಹೇಳಲು ಕಾರಣ, ಆ ಸಮಯದಲ್ಲಿ ತಿಲಕರ ರಾಜಕೀಯದ ಕೃಪೆಯಿಂದ ಗಣೇಶೋತ್ಸವ ಸಂದರ್ಭದಲ್ಲಿ ಹಾಡಲೆಂದು ಹುಟ್ಟಿಕೊಂಡ ಸನ್ಮಿತ್ರ ಮೇಳದ ಹಾಡುಗಳು. ಸನ್ಮಿತ್ರ ಮೇಳದ ಹಾಡುಗಳಲ್ಲಿ ತಿಲಕರ ರಾಜಕೀಯ ಶತ್ರುಗಳಾದ ಗೋಪಾಲಕೃಷ್ಣ ಗೋಖಲೆ, ಫೀರೋಜ್ ಶಾ ಮೆಹತಾ, ರಾಜಾರಾಮ ಶಾಸ್ತ್ರಿ ಭಾಗವತ್ ಅವರ ಕುರಿತು ಅವಹೇಳನಕಾರಿ ಅಂಶಗಳಿರುತ್ತಿತ್ತು. ಅಷ್ಟೇ ಅಲ್ಲ, ಸನ್ಮಿತ್ರ ಮೇಳದ ಹಾಡುಗಳು ದಲಿತ ವಿರೋಧಿ, ಶಿಕ್ಷಣ ಪಡೆಯುತ್ತಿದ್ದ ಹೆಣ್ಣುಮಕ್ಕಳನ್ನು ನಿಂದಿಸುವ, ಅವಮಾನಿಸುವ ಕೀಳು ಅಭಿರುಚಿಯ ಹಾಡುಗಳನ್ನೂ ಹೊಂದಿರುತ್ತಿದ್ದವು. ಆಗಷ್ಟೇ ಶಿಕ್ಷಣಕ್ಕೆ ತೆರೆದುಕೊಂಡಿದ್ದ ಕೆಳಜಾತಿಯ ಮಕ್ಕಳು, ಹೆಣ್ಣುಮಕ್ಕಳು ಈ ಹಾಡುಗಳನ್ನು ಗಣೇಶೋತ್ಸವ ಸಂದರ್ಭದಲ್ಲಿ ಮಾತ್ರವಲ್ಲ, ಅದನ್ನು ಕೇಳಿ ಬಾಯಿಪಾಠ ಮಾಡಿಕೊಂಡ ತಮ್ಮ ಸಹಪಾಠಿಗಳಿಂದ ಗಣೇಶೋತ್ಸವ ಮುಗಿದ ಮೇಲೂ ಕೇಳಿಸಿಕೊಳ್ಳಬೇಕಾಗಿತ್ತು. ಈ ಮಾನಸಿಕ ಹಿಂಸೆಗೆ ಕುಗ್ಗಿದ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿದ್ದಂತೆ ಬೆನ್ನು ಮಾಡಿದರು. ಇಂಥದ್ದು ಹಲವು ವರ್ಷಗಳ ಕಾಲ ನಡೆಯುತ್ತಲೇ ಹೋಯಿತು.

ಇದಕ್ಕೆ ಪ್ರತ್ಯುತ್ತರವಾಗಿ ಜೇಡೆ ನೇತೃತ್ವದಲ್ಲಿ 'ಛತ್ರಪತಿ ಮೇಳ' ಅದೆಷ್ಟೋ ವರ್ಷಗಳ ನಂತರ ಹುಟ್ಟಿಕೊಂಡು, ಫುಲೆ, ಶಾಹು ಮಹರಾಜ್, ಶಿವಾಜಿ ಇವರ ಗುಣಗಾನ ಮಾಡುವ ಮತ್ತು ಅವರ ತತ್ವಾದರ್ಶಗಳನ್ನು ಎತ್ತಿಹಿಡಿಯುವ ಹಾಡುಗಳನ್ನು ಹಾಡಲಾರಂಭಿಸಿದರು. ಇದರೊಂದಿಗೆ ತಿಲಕರ ರಾಜಕೀಯ ದರ್ಶನ ಮತ್ತು ಅವರ ಅನುಯಾಯಿಗಳ ಕೃತ್ಯಗಳ ಟೀಕೆಯೂ ಹಾಡುಗಳಲ್ಲಿ ನಡೆಯಿತು. ಜವಾಲ್ಕರ್ ಅವರು ಈ ಹಾಡುಗಳಲ್ಲಿ ಕೆಲವನ್ನು ಸಂಗ್ರಹಿಸಿ 'ಛತ್ರಪತಿ ಪದ್ಯ ಸಂಗ್ರಹ' ಎಂಬ ಪುಸ್ತಿಕೆಯನ್ನು ಪ್ರಕಟಿಸಿದರು.

Image
Balagangadhara Tilak
ಬಾಲಗಂಗಾಧರ ತಿಲಕ್

ಜೇಡಿ ಮತ್ತು ಜವಾಲ್ಕರ್ ಅವರನ್ನು ಹಣಿಯಲು ತಿಲಕರ ಸಮೂಹ ಒಂದು ಪಡೆಯನ್ನು ಪೋಷಿಸಿತು. ಅದಕ್ಕೆ ಪ್ರತಿಯಾಗಿ ಜವಾಲ್ಕರ್ ಮತ್ತು ಜೇಡೆ ಸಹ ಒಂದು ಪಡೆಯನ್ನು ಕಟ್ಟಿದರು. ಇದೆಲ್ಲ ಯಾವ ಹಂತಕ್ಕೆ ಹೋಯಿತೆಂದರೆ, ಗಣೇಶೋತ್ಸವ ಸಂದರ್ಭದಲ್ಲಿ ಈ ಎರಡೂ ಪಡೆಗಳ ನಡುವೆ ಹಾಡಿನ ಸಮರ ಮಾತ್ರವಲ್ಲ ಹೊಡಿ-ಬಡಿ ಸಹ ಆಗಿಹೋಯಿತು. ಅಷ್ಟೊಂದು ತೀವ್ರವಾಗಿತ್ತು ತಿಲಕರ ದೇಶಪ್ರೇಮದ ರಾಜಕೀಯ ಮತ್ತು ಬ್ರಾಹ್ಮಣೇತರರ ಮಾನವ ಕೇಂದ್ರಿತ ದೇಶಪ್ರೇಮದ ರಾಜಕೀಯ. ಇಷ್ಟೆಲ್ಲದರ ನಡುವೆ ತಿಲಕರ ಮನೆಯೊಳಗಿನಿಂದ ಕ್ರಾಂತಿಯ ಕಿಡಿ ಹುಟ್ಟಿಬಂದರೆ ಅದು ಪವಾಡ ಎಂದು ಯಾರಿಗಾದರೂ ಅನ್ನಿಸಿದರೆ ಆಶ್ಚರ್ಯವಿಲ್ಲ.

ತಂದೆಯಾದ ಬಾಲಗಂಗಾಧರ್ ತಿಲಕ್ ಅವರ ನೋಟ, ನಿಲುವುಗಳಿಗಿಂತ ಭಿನ್ನ ಅನ್ನುವುದಕ್ಕಿಂತ ವಿರುದ್ಧವಾದ ನೋಟ, ನಿಲುವು ಹೊಂದಿದ್ದ ಶ್ರೀಧರ ಪಂಥ್, ಅಸ್ಪೃಶ್ಯತೆ, ಬಾಲ್ಯ ವಿವಾಹ, ವಿಧವಾ ಶಿರಮುಂಡನವನ್ನು ವಿರೋಧಿಸುತ್ತಿದ್ದರು ಮತ್ತು ಅದನ್ನು ಕೊನೆಗೊಳಿಸುವ ಕನಸಿಟ್ಟುಕೊಂಡಿದ್ದರು. ಸಮೀಪದಿಂದ ಗಮನಿಸಿದರೆ ತಿಳಿಯುತ್ತದೆ, ಶ್ರೀಧರ ಪಂಥ್ ಅದೆಷ್ಟು ಚೆನ್ನಾಗಿ ಅಂಬೇಡ್ಕರ್ ಅವರ ವಿಚಾರಗಳನ್ನು ಅರ್ಥೈಸಿಕೊಂಡಿದ್ದರು ಮತ್ತು ಅವರ ರಾಜಕೀಯ ದೃಷ್ಟಿಯನ್ನು ತಮ್ಮದಾಗಿಸಿಕೊಂಡಿದ್ದರು ಎಂದು. ಬಾಲ್ಯ ವಿವಾಹ, ವಿಧವಾ ಶಿರಮುಂಡನ ಇವೆಲ್ಲವೂ - ಅಂಬೇಡ್ಕರ್ ಅವರು ಆಧಾರ ಸಮೇತ ತೋರಿಸಿಕೊಡುವಂತೆ - ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕುವ ಏಕೈಕ ಇರಾದೆಯಿಂದ ಹುಟ್ಟಿಕೊಂಡ ಪದ್ಧತಿಗಳು. ಇವುಗಳನ್ನು ಬದಲಾಯಿಸುವುದು ಎಂದರೆ ಜಾತಿ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿ, ನೆಲಕ್ಕುರುಳಿಸುವುದು. ಕೇವಲ ಸನ್ನಡತೆಯ 'ಅಸ್ಪೃಶ್ಯತೆ ತಪ್ಪು' ಎಂಬ ಮೇಲ್ಪದರಿನ ರಾಜಕೀಯ ನಂಬಿಕೆ ಅವರದ್ದಾಗಿರಲಿಲ್ಲ. ಅಂಬೇಡ್ಕರ್ ಅವರಂತೆಯೇ, ಸಂಪೂರ್ಣ ವ್ಯವಸ್ಥೆಯ ರೂಪವನ್ನೇ ಬದಲಾಯಿಸುವ ಕನಸು ಅವರದ್ದು.

ತಾವು ಪ್ರತಿಪಾದಿಸುತ್ತಿದ್ದ ಸಮಾನತೆಯನ್ನು ಸಮಾಜದಲ್ಲಿ ಸ್ಥಾಪಿಸುವುದಕ್ಕಾಗಿ ಶ್ರೀಧರ ಪಂಥ್, ನಿರಂತರ ಶ್ರಮಿಸುತ್ತಿದ್ದರು. ಅದಕ್ಕಾಗಿಯೇ ಅವರು ತಮ್ಮ ತಂದೆಯಾದ ಬಾಲಗಂಗಾಧರ ತಿಲಕರ ಜೊತೆ, "ರಾಜಕೀಯ ಸ್ವಾತಂತ್ರ್ಯ ಮತ್ತು ಸಮಾಜ ಸುಧಾರಣೆ ಜೊತೆಜೊತೆಯಾಗಿ ಸಾಗಬೇಕು," ಎಂದು ಜಗಳವಾಡುತ್ತಿದ್ದರು. ಯಾಕೆಂದರೆ, ದೇಶಪ್ರೇಮಿಯಾದ ತಿಲಕರಿಗೆ ರಾಜಕೀಯ ಸ್ವಾತಂತ್ರ್ಯ ಮಾತ್ರ ಮುಖ್ಯವಾಗಿತ್ತೇ ಹೊರತು ಸಮಾಜ ಸುಧಾರಣೆ, ಸಾಮಾಜಿಕ ಬದಲಾವಣೆ ಅಲ್ಲ. ಹಾಗಾಗಿ, ಶ್ರೀಧರ ಪಂಥ್ ಅವರ ನಿಲುವುಗಳು ಬಾಲಗಂಗಾಧರ ತಿಲಕರ ಸಮೂಹದೊಳಗೆ ಬಹಳಷ್ಟು ಅಸಮಾಧಾನ ಹುಟ್ಟಿಹಾಕಿದ್ದವು.

Image
Samaja Smatha Sangha
ಸಮಾಜ ಸಮತಾ ಸಂಘದ ಸದಸ್ಯರೊಂದಿಗೆ ಅಂಬೇಡ್ಕರ್ (ಬಾಂಬೆ, 1927)

ಈ ಅಸಮಾಧಾನಗಳು ಅತಿರೇಕಕ್ಕೆ ತಲುಪಲು ಮೂರು ಸಂಗತಿಗಳು ದಾರಿ ಮಾಡಿಕೊಟ್ಟವು. ಮೊದಲನೆಯದಾಗಿ, ಅಂಬೇಡ್ಕರ್ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದ ಮೇಲೆ ಶ್ರೀಧರ ಪಂಥ್ ಅವರ ರಾಜಕೀಯ ನಿಲುವು, ಪ್ರಜ್ಞೆ ಉಗ್ರವಾಯಿತು. ಪುಣೆಯಲ್ಲಿ ದಲಿತ ವಿದ್ಯಾರ್ಥಿಗಳ ಸಮಾವೇಶ ನಡೆದ ಮೇಲೆ, ಅಂಬೇಡ್ಕರ್ ಅವರನ್ನು ಗಾಯಕ್ವಾಡ್ ವಾಡೆಗೆ ಕರೆದುಕೊಂಡು ಹೋಗಿ ಚಹಾಕೂಟ ಏರ್ಪಡಿಸಿದ್ದು ಇದಕ್ಕೆ ನಿದರ್ಶನ. ಇದಾದ ಬೆನ್ನಿಗೆ, 'ಸಮಾಜ ಸಮತಾ ಸಂಘ'ವನ್ನು ಆರಂಭಿಸಿದ್ದು ಮತ್ತು ಗಾಯಕ್ವಾಡ ವಾಡೆಯಲ್ಲಿ 'ಚಾತುರ್ವರ್ಣ್ಯ ವಿಧ್ವಾಮ್ಸಕ್ ಸಮಿತಿ' ಕಚೇರಿ ತೆರೆದು, ಆ ಹೆಸರಿನ ಬೋರ್ಡ್ ನೇತುಹಾಕಿದ್ದು ಸಹ ಮೇಲ್ಜಾತಿಯ ಜನರ ಅಸಮಾಧಾನಕ್ಕೆ ಕಾರಣವಾಯಿತು. ಅದಕ್ಕಿಂತಲೂ ಮುಖ್ಯವಾಗಿ, ಕೇಸರಿ-ಮರಾಠ ಟ್ರಸ್ಟಿನ ಸದಸ್ಯರ ಕೆಂಗಣ್ಣಿಗೆ ಗುರಿಯಾಯಿತು. ಬಾಲಗಂಗಾಧರ ತಿಲಕರ ಅನುಯಾಯಿಗಳಾಗಿದ್ದ ಅವರುಗಳಿಗೆ ಇದೆಲ್ಲ ನುಂಗಲಾರದ ತುತ್ತಾಗಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ವಿರೋಧಿ ಪಡೆಗೆ ಸಹಿಲಾಗದ್ದೆಂದರೆ, ಶ್ರೀಧರ ಪಂಥ್ ತಮ್ಮ ಮನೆಯಲ್ಲಿ ಒಂದು ಬೃಹತ್ ಸಹಭೋಜನ ಕೂಟ ಏರ್ಪಡಿಸಿದ್ದು ಮತ್ತು ಅದಕ್ಕೆ ನೂರಾರು ದಲಿತರನ್ನು ಕರೆದದ್ದು. ಅದರಲ್ಲಿ ಅಸ್ಪೃಶ್ಯ ಸಮುದಾಯದಿಂದ ಬಂದ, 'ಛತ್ರಪತಿ ಮೇಳ'ದ ಭಾಗವಾಗಿದ್ದ ಅನೇಕ ಹಾಡುಗಾರರು ಸಹ ಇದ್ದರು. ಆ ಸಹಭೋಜನ ಕೂಟದ ಮುಖ್ಯ ಅತಿಥಿ ಬಾಬಾ ಸಾಹೇಬ್ ಅಂಬೇಡ್ಕರ್ ಆಗಿದ್ದರು.

ಶ್ರೀಧರ ಪಂಥ್ ಆಯೋಜಿಸಿದ್ದ ಈ ಸಹಭೋಜನ ಕೂಟವನ್ನು ತಡೆಯಲು ಕೇಸರಿ-ಮರಾಠ ಟ್ರಸ್ಟಿನ ಸದಸ್ಯರು ಬಹಳಷ್ಟು ಪ್ರಯತ್ನಪಟ್ಟರು. ಅದ್ಯಾವುದೂ ಸಫಲವಾಗದೆ ಹೋದಾಗ, ಅಂಬೇಡ್ಕರ್ ಸಹಭೋಜನಕ್ಕೆ ಬರುವ ಹೊತ್ತಿಗೆ ಗಾಯಕ್ವಾಡ್ ವಾಡೆಗೆ ಸರಬರಾಜಾಗುತ್ತಿದ್ದ ವಿದ್ಯುತ್ ಕಡಿತ ಮಾಡಲಾಯಿತು. ಇದರಿಂದ ಸಣ್ಣ ಕೋಲಾಹಲ ಸೃಷ್ಟಿಯಾಯಿತು. ಆಗ ಶ್ರೀಧರ ಪಂಥ್, ತಮ್ಮ-ತಮ್ಮ ಮನೆಯಿಂದ ಲ್ಯಾಂಟೀನು, ಹಣತೆ, ದೀಪಗಳನ್ನು ತರುವಂತೆ ಕೋರಿಕೊಂಡರು. ತಮ್ಮ ನಾಯಕ ಅಂಬೇಡ್ಕರ್ ಆಗಮನಕ್ಕೆ ಎದುರು ನೋಡುತ್ತಿದ್ದ ಅವರೆಲ್ಲರೂ, ತಮ್ಮ ಮತ್ತೊಬ್ಬ ನಾಯಕನ ಮಾತಿಗೆ ಸ್ಪಂದಿಸಿದರು. ಗಾಯಕ್ವಾಡ ವಾಡೆಯಲ್ಲಿ ಅಂದು ನೂರಾರು ದೀಪಗಳ ನಡುವೆ ಸಹಭೋಜನ ಶಾಂತಿಯುತವಾಗಿ ನಡೆಯಿತು.

ಆದರೆ, ಅದರ ನಂತರ ನಡೆದದ್ದು ಭೀಕರವಾದದ್ದು. ಬಾಲಗಂಗಾಧರ ತಿಲಕರ ದೇಹಾಂತ್ಯದ ನಂತರ, ಕೇಸರಿ-ಮರಾಠ ಟ್ರಸ್ಟಿನ ಸದಸ್ಯರೆಲ್ಲ ಸೇರಿ, ತಿಲಕರು ನಡೆಸುತ್ತಿದ್ದ ಪತ್ರಿಕೆಗಳು ಪ್ರಗತಿಪರರಾದ ಶ್ರೀಧರ ಪಂಥ್ ಇಲ್ಲವೇ ಅವರ ಸಹೋದರ ರಾಂಭವು ಅವರ ಕೈಗೆ ಹೋಗಬಾರದೆಂದು ವ್ಯವಸ್ಥಿತವಾಗಿ ಯೋಜಿಸಿ, ಅವರ ವಿರುದ್ಧ ಕಾನೂನಾತ್ಮಕ ಸಮರ ಆರಂಭಿಸಿದರು. ಅದು ಸಾಲದೆಂಬಂತೆ, ಅಂಬೇಡ್ಕರ್ ಸಂಪರ್ಕಕ್ಕೆ ಬಂದು ಶ್ರೀಧರ್ ಪಂಥ್ ಅವರ ನಿಲುವುಗಳು ನಡೆಗಳಾಗುವುದನ್ನು ಕಂಡು ಕೆಂಡಾಮಂಡಲವಾದ ಟ್ರಸ್ಟಿನ ಸದಸ್ಯರು, ಪಂಥ್ ಅವರ ಸಂಪ್ರದಾಯವಾದಿ ಸಂಬಂಧಿಕರ ಜೊತೆ ಸೇರಿ, ಪಂಥ್ ಮತ್ತು ರಾಂಭವು ಅವರಿಗೆ ಮಾನಸಿಕ ಕಿರುಕುಳ ನೀಡಲಾರಂಭಿಸಿದರು. ಅವರಿಬ್ಬರ ವಿರುದ್ಧ ಅಪಪ್ರಚಾರ ನಡೆಸುತ್ತ, ಜನಾಭಿಪ್ರಾಯವನ್ನು ಅವರ ವಿರುದ್ಧ ತಿರುಗಿಸಲು ಶುರು ಹಚ್ಚಿಕೊಂಡರು. ಆ ಸಂದರ್ಭದಲ್ಲಿ ಪಂಥ್ ಅವರ ಕೆಲವು ಹಿತೈಷಿ ಸಂಬಂಧಿಕರು, ಈ ರಗಳೆಗಿಂತ ರಾಜಕೀಯ ನಿಲವುಗಳನ್ನು ಬದಿಗೊತ್ತಿ ಸಂಪ್ರದಾಯಬದ್ಧವಾಗಿ ಕೆಲಸ ಮಾಡಿಕೊಂಡಿರುವಂತೆ ಸೂಚಿಸಿದರು. ಆದರೆ, ಪಂಥ್ ಅವರಿಗೆ ಅದು ಸರಿತೋರಲಿಲ್ಲ. ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳಲು ಅವರು ತಯಾರಿರಲಿಲ್ಲ. ಇನ್ನೊಂದೆಡೆ, ಕಿರುಕುಳ, ಮಾನಸಿಕ ಹಿಂಸೆ ತಡೆದುಕೊಳ್ಳಲೂ ಆಗುತ್ತಿರಲಿಲ್ಲ. ತಾನು ಬೆಳೆದ ಪರಿಸರವೇ, ತನ್ನ ಸುತ್ತಲಿದ್ದ ಜನರೇ, ತನ್ನ ಸಂಬಂಧಿಕರೇ ಈ ಬಗೆಯಲ್ಲಿ ವಿಷಕಾರಿಕೊಳ್ಳುತ್ತಿದ್ದದ್ದು ಅವರನ್ನು ಅಧೀರರನ್ನಾಗಿಸಿತು. ಆದರೆ, ತಮ್ಮ ವಿಚಾರದ ಬಗೆಗೆ ಸಂಪೂರ್ಣ ಸ್ಪಷ್ಟತೆ ಇದ್ದ ಕಾರಣ, ರಾಜಿ ಆಗಲು ಅವರಿಗೆ ಅಸಾಧ್ಯವಾಗಿತ್ತು. ಮೃದು ಹೃದಯ, ಸ್ಫುಟವಾದ ವಿಚಾರ ಇವುಗಳ ನಡುವೆ ಒಂದು ಸಮತೋಲನ ಕಷ್ಟವಾಯಿತೇನೋ... 1928ರ ಮೇ 25ರಂದು, ಪುಣೆ-ಮುಂಬೈ ಮಾರ್ಗದಲ್ಲಿ ಚಲಿಸುವ ರೈಲೊಂದಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರು.

Image
Book Cover 2
ಶ್ರೀಧರ ಪಂಥ್ ಮತ್ತು ಅಂಬೇಡ್ಕರ್ ಸಹಚರ್ಯದ ಕುರಿತು ಶತ್ರುಘ್ನ ಜಾಧವ್ ಬರೆದ (ಹಿಂದಿಗೆ ಅನುವಾದಗೊಂಡ) ಪುಸ್ತಕದ ಮುಖಪುಟ

ಪಂಥ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪುಣೆಯ ಕಲೆಕ್ಟರ್ ಅವರಿಗೆ ಮತ್ತು ಪತ್ರಿಕೆಗಳಿಗೆ ಒಂದು ಹಾಗೂ ಬಾಬಾ ಸಾಹೇಬ್ ಅವರಿಗೆ ಒಂದು ಪತ್ರವನ್ನು ಬರೆದು ರವಾನಿಸಿದ್ದರು. ಅವರು ಅಂಬೇಡ್ಕರ್ ಅವರಿಗೆ ಬರೆದ ಪತ್ರದ ಅನುವಾದ ಇಲ್ಲಿದೆ:

"ಈ ಪತ್ರ ನಿಮಗೆ ಕೈ ಸೇರುವ ಮುನ್ನ ನಾನು ಇಹಲೋಕ ತ್ಯಜಿಸಿರುವ ಸುದ್ದಿ ನಿಮ್ಮ ಕಿವಿಗೆ ಬಿದ್ದಿರುತ್ತದೆ. ಸಮಾಜ ಸಮತಾ ಸಂಘದ ಕಾರ್ಯ ಇನ್ನೂ ವ್ಯಾಪಕವಾಗಿ ಬೆಳೆಯಲು, ಸುಶಿಕ್ಷಿತ ಸಮಾಜ ಸುಧಾರಕ ಯುವಕರು ಈ ಚಳವಳಿಯತ್ತ ಆಕರ್ಷಿತರಾಗಬೇಕು. ನಿಮ್ಮ ಏಕೋನಿಷ್ಠ ಪರಿಶ್ರಮ ನನ್ನಲ್ಲಿ ಅತೀವ ಸಂತಸ ಮೂಡಿಸಿದೆ ಮತ್ತು ಭಗವಂತ ನಿಮ್ಮ ಕೆಲಸವನ್ನು ಯಶಸ್ವಿಗೊಳಿಸುತ್ತಾನೆ ಎಂಬ ಬಗ್ಗೆ ನನಗೆ ನಂಬಿಕೆ ಇದೆ. ಮಹಾರಾಷ್ಟ್ರದ ಯುವಕರು ಅಸ್ಪೃಶ್ಯತೆಯನ್ನು ಕೊನೆಗೊಳಿಸುವ ಕಾರ್ಯಕ್ಕೆ ಸಜ್ಜಾದರೆ, ಇನ್ನು ಐದೇ ಐದು ವರ್ಷದಲ್ಲಿ ಗುರಿ ತಲುಪಲು ಸಾಧ್ಯ. ನನ್ನ ದಲಿತ ಸಹೋದರರ ದೂರನ್ನು ಕೃಷ್ಣನಿಗೆ ತಲುಪಿಸಲು ನಾನು ಮುಂದೆ ಸಾಗುತ್ತಿದ್ದೇನೆ. ನಮ್ಮ ಸಂಗಾತಿಗಳಿಗೆ ನನ್ನ ಸಲಾಂ ತಿಳಿಸಿ."

ನಿಮ್ಮವ
ಶ್ರೀಧರ ಬಲವಂತ್ ತಿಲಕ್

ಸ್ನೇಹಿತನ ಪತ್ರ ಮನೆಯ ವಿಳಾಸಕ್ಕೆ ತಲುಪಿದ ದಿನ ಅಂಬೇಡ್ಕರ್ ಜಳಗಾವ್ ಹೋಗಿದ್ದರು. ಅಲ್ಲಿ ಅವರು ಭಾಷಣ ಮಾಡಿ ಬಂದು ಆಸೀನರಾಗುತ್ತಿದ್ದಂತೆಯೇ ಅವರಿಗೆ ಟೆಲಿಗ್ರಾಂ ಮೂಲಕ ಶ್ರೀಧರ ಅವರ ಸಾವಿನ ಸುದ್ದಿ ತಲುಪಿತು. ಸ್ವತಃ ಅಂಬೇಡ್ಕರ್ ಬರೆದುಕೊಂಡಂತೆ, ಮೊದಲಿಗೆ ಇದು ಸುಳ್ಳು ಸುದ್ದಿ ಆಗಿರಲಿ ಎಂದು ಆಶಿಸಿದರಂತೆ. ಆದರೆ, ಟೆಲಿಗ್ರಾಂ ಬಂದದ್ದು ಪುಣೆಯ ಸಮಾಜ ಸಮತಾ ಸಂಘದ ಕಚೇರಿಯಿಂದಾದ ಕಾರಣ ಅದು ಸುಳ್ಳಾಗಿರಲು ಸಾಧ್ಯವಿಲ್ಲ ಎಂದು ಮನವರಿಕೆಯಾಯಿತು.

ಈ ಲೇಖನ ಓದಿದ್ದೀರಾ?: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 3 | 'ಹಿಂದೂಗಳು ನನ್ನ ಬಗ್ಗೆ ರೋಸಿಹೋಗಿದ್ದಾರೆಂದು ಗೊತ್ತು'

ಜಳಗಾವ್‌ನಿಂದ ಮುಂಬೈ ಬರುವಾಗ ದಾರಿಯುದ್ದಕ್ಕೂ ಶ್ರೀಧರ ಅವರನ್ನೇ ನನಪಿಸಿಕೊಳ್ಳುತ್ತ, 32 ವರ್ಷದ ಯುವಕನ ಸಾವು ಸಹಜ ಸಾವಾಗಿರಲು ಸಾಧ್ಯವಿಲ್ಲ, ಇದರ ಹಿಂದೆ ಯಾರದ್ದೋ ಕೈವಾಡವಿದೆ ಅಂದುಕೊಂಡರಂತೆ ಅಂಬೇಡ್ಕರ್. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮನೆ ಸೇರಿ ಪತ್ರಿಕೆ ಓದಲು ಚಡಪಡಿಸುತ್ತಿದ್ದ ಅವರು, ಮುಂಬೈಯಲ್ಲಿ ತನ್ನ ಮನೆ ತಲುಪಿದಾಗ, ದಿನಪತ್ರಿಕೆಗಳ ಮೇಲೆ ಶ್ರೀಧರ ಪಂಥ್ ಅವರ ಸುಂದರ ಕೈಬರಹದಲ್ಲಿ ಬರೆದಿದ್ದ ಕೊನೆಯ ಪತ್ರ ಕಂಡಿತು. ಅದನ್ನು ಓದುತ್ತಿದ್ದಂತೆ ಅಂಬೇಡ್ಕರ್ ಕಣ್ಣೀರಾದರು.

ಶ್ರೀಧರ ಪಂಥ್ ಮತ್ತು ಅಂಬೇಡ್ಕರ್ ಸಹಚರ್ಯದ ಕುರಿತು ಪುಸ್ತಕ ಬರೆದ ಶತ್ರುಘ್ನ ಜಾಧವ್ ಪ್ರಕಾರ, ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಕಣ್ಣೀರಿಟ್ಟ ಕ್ಷಣಗಳು ಕೆಲವೇ ಕೆಲವು: ಬರೋಡಾದಲ್ಲಿ ಅವರ ಮೇಲೆ ಹಲ್ಲೆ ಮಾಡಲು ಬಂದ ಪಾರ್ಸಿಗಳು "ಜಾಗ ಖಾಲಿ ಮಾಡು..." ಎಂದಾಗ, ಪತ್ನಿ ರಮಾಬಾಯಿ ತೀರಿಕೊಂಡಾಗ ಹಾಗೂ ಶ್ರೀಧರ ಪಂಥ್ ಆತ್ಮಹತ್ಯೆ ಮಾಡಿಕೊಂಡಾಗ. ಮುಂದೆ ಶ್ರೀಧರರ ನೆನಪಿನಲ್ಲಿ ಬರೆದ ಒಂದು ಪುಟ್ಟ ಶ್ರದ್ಧಾಂಜಲಿ ಲೇಖನದಲ್ಲಿ ಅಂಬೇಡ್ಕರ್ ಅವರು, ಶ್ರೀಧರ ಪಂಥ್ ಸಾವಿಗೆ ಕೇಸರಿ-ಮರಾಠ ಟ್ರಸ್ಟ್ ಮತ್ತು ಸಂಪ್ರದಾಯವಾದಿ ಪುಣೆಯ ಜನತೆಯನ್ನು ಹೊಣೆಯಾಗಿಸುತ್ತಾರೆ. ಲೋಕದ ಡೊಂಕಿನ ಕುರಿತು ಮೃದು ಧೋರಣೆ ತೋರದ ಶ್ರೀಧರ ಅವರನ್ನು ಓರ್ವ ಉತ್ತಮ ಚಿಂತಕ ಮತ್ತು ಲೇಖಕ ಎಂದು ಬಣ್ಣಿಸುವ ಅಂಬೇಡ್ಕರ್, ಅವರ ಸಾವಿಗೆ ಬೇಸರಿಸುತ್ತ, ಅವರಂಥ ಯುವಕ ಮತ್ತಷ್ಟು ಬಾಳಿದ್ದರೆ ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ ಒಳ್ಳೆಯದಾಗುತ್ತಿತ್ತು ಎನ್ನುತ್ತಾರೆ.

ಅದೇ ಲೇಖನದಲ್ಲಿ ಅಂಬೇಡ್ಕರ್, ತಾನು ನಡೆಸುತ್ತಿದ್ದ 'ಮೂಕನಾಯಕ' ಪತ್ರಿಕೆಯನ್ನು ಶ್ರೀಧರ ಪಂಥ್ ಅವರ ತಂದೆ ಬಾಲಗಂಗಾಧರ ತಿಲಕ್ ಹೇಗೆ ಹೀಯಾಳಿಸುತ್ತಿದ್ದರು, ದೀನ ದಲಿತರ ಕುರಿತಾಗಿ ತುಚ್ಛವಾಗಿ ಬರೆಯುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. "...ಅಂಥ ಜಾತಿವಾದಿಯನ್ನು 'ಲೋಕಮಾನ್ಯ' ಎಂದು ಕರೆಯಲು ಸಾಧ್ಯವಿಲ್ಲ. 'ಲೋಕಮಾನ್ಯ' ಎಂಬ ಬಿರುದಿಗೆ ನಿಜವಾಗಿಯೂ ಅರ್ಹತೆ ಉಳ್ಳ ವ್ಯಕ್ತಿ ಬಾಲಗಂಗಾಧರ ತಿಲಕರಲ್ಲ, ಬದಲಾಗಿ ಅವರ ಪುತ್ರ ಶ್ರೀಧರ ಪಂಥ್. ಯಾಕೆಂದರೆ, ತನ್ನ ಜಾತಿಯ ಲೋಕವನ್ನು ಮಾತ್ರ ಲೋಕ ಎಂದು ಭಾವಿಸದೆ, ಸಂಪೂರ್ಣ ಮಾನವ ಲೋಕವನ್ನು ತನ್ನದು ಎಂದು ಭಾವಿಸಿದ ಮತ್ತು ಅದಕ್ಕಾಗಿ ಶ್ರಮಿಸಿದ ವ್ಯಕ್ತಿ ಶ್ರೀಧರ ಪಂಥ್..." - ಹೀಗೆ ಹೇಳುತ್ತ ಅಂಬೇಡ್ಕರ್, ಶ್ರೀಧರ ಪಂಥ್‌ರನ್ನು ನಿಜವಾದ ಲೋಕಮಾನ್ಯ ಎಂದು ಬಣ್ಣಿಸುತ್ತಾರೆ.

ನಿಮಗೆ ಏನು ಅನ್ನಿಸ್ತು?
6 ವೋಟ್