ಜತೆಗಿರುವನೇ ಚಂದಿರ? | ಮಲ್ಲೇನಹಳ್ಳಿಯ ವೆಂಕಟರಮಣ ಮಾಮ ಮತ್ತು ಗುಡ್ಡದ ಗುಡಿಸಲು

ಅಮ್ಮಿಯ ಒತ್ತಾಯಕ್ಕೆ ಮಣಿದು ಅಬ್ಬ, ಅವರಿವರ ಬಳಿಯಿದ್ದ ಹಾರೆ, ಗುದ್ದಲಿ, ಪಿಕಾಸಿಗಳನ್ನೆಲ್ಲ ಹೊಂಚಿಕೊಂಡು ಆ ಗುಡ್ಡದ ಒಂದಿಷ್ಟು ಜಾಗವನ್ನು ಕಡಿಯಲು ಮುಂದಾದನು. ಅಷ್ಟರಲ್ಲಿ ಗುಡ್ಡದ ಅರ್ಧ ಭಾಗದವರೆಗೂ ಮನೆಗಳೆದ್ದಿದ್ದು, ಅಬ್ಬನಿಗೆ ಗುಡ್ಡದ ಮಧ್ಯಭಾಗದಲ್ಲಿ ಜಾಗ ಸಿಕ್ಕಿತ್ತು. ಅಮ್ಮಿ ಅಬ್ಬನ ಸರಿಸಮವಾಗಿ ತನ್ನ ಶಕ್ತಿ ಮೀರಿ ಆ ಕೆಲಸಕ್ಕೆ ಒತ್ತಾಸೆಯಾಗಿ ನಿಂತಳು

ಮಲ್ಲೇನಹಳ್ಳಿಯ ವೆಂಕಟರಮಣ ಮಾಮ, ಅಬ್ಬನ ಆಪ್ತ ಸ್ನೇಹಿತ. ನೋಡಲು ಸುಂದರ. ದಪ್ಪಗೆ, ಗುಂಡಗೆ, ಬೆಳ್ಳಗೆ ಗುಂಗುರು ಕೂದಲಿದ್ದ ಮಾಮನಿಗೆ ಇಬ್ಬರು ಹೆಂಡಂದಿರು. ಇಬ್ಬರಿಗೂ ಇಬ್ಬಿಬ್ಬರು ಮಕ್ಕಳು. ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು. ಸಾಕಷ್ಟು ಆಸ್ತಿ, ಜಮೀನು ಇದ್ದ ಮಾಮ ಎರಡು ಕುಟುಂಬದೊಂದಿಗೂ ಅನ್ಯೋನ್ಯವಾಗಿದ್ದರು. ಅಷ್ಟೆಲ್ಲ ಜವಾಬ್ದಾರಿಯನ್ನು ಅನಾಯಾಸವಾಗಿ ಹೊತ್ತುಕೊಂಡಿದ್ದ ಮಾಮ, ಸ್ವಲ್ಪ ಹೆಚ್ಚೇ ಕುಡಿತದಿಂದ ಮನಸ್ಸಿನ ಭಾರವನ್ನು ಕೊಂಚ ಕಡಿಮೆ ಮಾಡಿಕೊಂಡಿದ್ದರು. ಮಾಮನ ಕಣ್ಣುಗಳು ಯಾವಾಗಲೂ ಕೆಂಡದಂತೆ ಕೆಂಪೇರಿರುತ್ತಿದ್ದರೂ, ಒಂದು ದಿನವೂ ತಮ್ಮ ಸ್ಥಿತಪ್ರಜ್ಞತೆ ಕಳೆದುಕೊಂಡವರಲ್ಲ.

Eedina App

ನಾವು ಕೊಪ್ಪಲಿನ ಮನೆ ಬಿಟ್ಟು ಮಲ್ಲೇನಹಳ್ಳಿಗೆ ಹೋದಾಗ, ಮಾಮ ಮತ್ತವರ ಕುಟುಂಬದವರು ತಮ್ಮ ಮನೆಯವರೆನ್ನುವಂತೆಯೇ ನಮ್ಮನ್ನು ಅದೆಷ್ಟು ಪ್ರೀತಿಯಿಂದ ಕಂಡರೆಂದರೆ, ಮನೆಯ ಸಾಮಾನುಗಳನ್ನು ಇಡಲೆಂದು ಅವರ ಮನೆಯ ಪಡಸಾಲೆಯಲ್ಲಿ ಸ್ಟೋರ್ ರೂಮಿನಂತಿದ್ದ ಒಂದು ಪುಟ್ಟ ಕೋಣೆಯನ್ನು ನಮಗೆ ಬಿಟ್ಟುಕೊಟ್ಟರು. ನಾನು ಹುಟ್ಟುವುದಕ್ಕೂ ಮೊದಲೇ ಅಬ್ಬ-ಅಮ್ಮಿ ಇಬ್ಬರೂ ದೊಡ್ಡಣ್ಣ ಮತ್ತು ದಿನಣ್ಣನೊಟ್ಟಿಗೆ ಇದೇ ಕೋಣೆಯಲ್ಲಿ ವಾಸವಾಗಿದ್ದರೆಂದು ಅಮ್ಮಿ ಹೇಳುತ್ತಿದ್ದಳು. ಅಮ್ಮಿ ಕೋಣೆಯ ಒಂದು ಮೂಲೆಯಲ್ಲಿ ಅಡುಗೆ ಮಾಡಲೆಂದು ಮೂರು ಇಟ್ಟಿಗೆಗಳನ್ನು ಒಲೆಯಂತೆ ಜೋಡಿಸಿಕೊಂಡಿದ್ದಳು. ನಾವೆಲ್ಲರೂ ಒಟ್ಟಿಗೆ ಅವರ ಮನೆಯಲ್ಲಿಯೇ ಇರಬೇಕೆಂದು ಮಾಮ ಬಯಸುತ್ತಿದ್ದರು. ಆದರೆ ಅಬ್ಬ-ಅಮ್ಮಿ, ಆ ಕೋಣೆಯ ಒಂದು ಮೂಲೆಯಲ್ಲಿ ಅಡುಗೆ ಪಾತ್ರೆಗಳನ್ನಿಟ್ಟುಕೊಂಡು, ಇನ್ನೊಂದು ಮೂಲೆಯಲ್ಲಿ ಅಡುಗೆ ಮಾಡಿ ಊಟ ಮುಗಿದ ನಂತರ ಎಲ್ಲ ಪಾತ್ರೆಗಳನ್ನು ಒಲೆಕಟ್ಟೆಯ ಮೇಲೆ ಒಟ್ಟಿ, ಅಲ್ಲೇ ಚಾಪೆ ಹಾಸಿ ಮಲಗುತ್ತಿದ್ದರು. ಆ ಕೋಣೆಯಲ್ಲಿ ಜಾಗವಿಲ್ಲದಿದ್ದ ಕಾರಣಕ್ಕೆ ನಾನು ಮತ್ತು ದಿನಣ್ಣ ಮಾಮನ ಮನೆಯಲ್ಲಿಯೇ ಅವರ ಮಕ್ಕಳೊಟ್ಟಿಗೆ ನೆಲದಲ್ಲಿ ಚಾಪೆ ಹಾಸಿಕೊಂಡು ಸಾಲಾಗಿ ಮಲಗುತ್ತಿದ್ದೆವು. ನನ್ನನ್ನು "ಮಗ್ಳೇ... ಮಗ್ಳೇ..." ಎನ್ನುತ್ತ ಬಾಯಿ ತುಂಬಾ ಕರೆದು, ತೊಡೆಯ ಮೇಲೆ ಕೂರಿಸಿಕೊಂಡು ಕೆನ್ನೆಯ ಮೇಲೆ ಲೊಚಲೊಚನೆ ಮುತ್ತಿಕ್ಕುತ್ತಿದ್ದರು ಮಾಮ.

ಅವರ ಮನೆಯಲ್ಲಿದ್ದ ಅಷ್ಟೂ ದಿನ ಯಾವುದೇ ಭೇದ ಭಾವದ ಸೋಂಕೂ ಇಲ್ಲದೆ ಬೆಳೆದೆವು. ಅವರ ಮನೆಯ ಅಡುಗೆಕೋಣೆಯಿಂದ ಹಿಡಿದು ಮನೆಯ ಮೂಲೆಯಲ್ಲೆಲ್ಲ ಹೊಕ್ಕಾಡುತ್ತಿದ್ದೆವು. ಈ ಮೊದಲು ನಮ್ಮನ್ನು ಅಡುಗೆಕೋಣೆಯವರೆಗೂ ಬಿಟ್ಟುಕೊಂಡವರಿರಲಿಲ್ಲ. ಕೆಲವರು ಮನೆಯ ಬಾಗಿಲಲ್ಲಿಯೇ ತಡೆಯುತ್ತಿದ್ದರು. ಕೆಲವರು ಹಜಾರದವರೆಗೆ ಬಿಟ್ಟುಕೊಳ್ಳುತ್ತಿದ್ದರು. ಆದರೆ, ವೆಂಕಟರಮಣ ಮಾಮನ ಮನೆಯಲ್ಲಿ ನಾನು ಮೊದಲ ಬಾರಿಗೆ ಸ್ವೇಚ್ಛೆಯಿಂದ ಓಡಾಡಿದ್ದೆ. ಬೇಕಾದ್ದು ತೆಗೆದು ತಿಂದಿದ್ದೆ. ಆ ಮನೆಯಲ್ಲಿ ನಮ್ಮನ್ನು ಯಾರೂ ಗದರಲಿಲ್ಲ. ನಾನು ಮುಟ್ಟಿದ ವಸ್ತುಗಳನ್ನು ಹುಣಸೆ ಹಾಕಿ ತೊಳೆಯಲಿಲ್ಲ. ಬದಲಿಗೆ ಅವರ ಮನೆಯ ಹಂಡೆಗಳಿಗೆ ನಾನೇ ನೀರು ತುಂಬಿಸುತ್ತಿದ್ದೆ. ಕಾಲುವೆಯಲ್ಲಿ ಮನೆಯ ಪಾತ್ರೆಗಳನ್ನೆಲ್ಲ ತೊಳೆದುಕೊಡುತ್ತಿದ್ದೆ. ಒಂದು ಸಂಕ್ರಾಂತಿ ಹಬ್ಬದಲ್ಲಿ ಅವರ ಮನೆಯ ಹೆಣ್ಣುಮಕ್ಕಳ ಜೊತೆ ನನಗೂ ಅವರದೇ ಒಂದು ಸೀರೆ ಉಡಿಸಿ ಎಳ್ಳು ಬೀರಲು ಅವರೊಟ್ಟಿಗೆ ಕಳುಹಿಸಿದ್ದರು. ನಾನು ನೇತಾಡುವ ಸೆರಗಿಗೆ ಜೀವವನ್ನು ಗಂಟು ಹಾಕಿಕೊಂಡು ಒಂದು ರೀತಿಯ ನಾಚಿಕೆ, ಭಯ, ಮುಜುಗರ ಎಲ್ಲವನ್ನೂ ಹೊತ್ತುಕೊಂಡು ಅವರ ಹಿಂದೆಯೇ ಓಡಾಡಿದ್ದೆ.

AV Eye Hospital ad

ಅವರ ಮನೆಯ ಗದ್ದೆ ನಾಟಿ ಇದ್ದಾಗ ನಾನು ದಿನವಿಡೀ ಗದ್ದೆಯ ಕೆಸರಲ್ಲಿ ಮೊಣಕಾಲಿನ ತನಕ ಮುಳುಗಿ, ನನಗೆ ತಿಳಿದಂತೆ ಪೈರುಗಳನ್ನು ಕಿತ್ತು ನೆಲದ ಆಳಕ್ಕೆ ಚುಚ್ಚುತ್ತಿದ್ದೆ. ನಾನು ಸಣ್ಣವಳಾದ್ದದ್ದರಿಂದ ಜೊತೆಯಲ್ಲಿದ್ದ ಹೆಂಗಸರೆಲ್ಲ ನನ್ನನ್ನು ಬಾಯಿ ತುಂಬಾ ಹೊಗಳುತ್ತ, ಅಲ್ಲಲ್ಲೇ ತಿದ್ದುತ್ತ, ನಾಟಿ ಮಾಡುವ ಕಲೆಯನ್ನು ನನಗೆ ಚೆನ್ನಾಗಿ ಕಲಿಸಿದ್ದರು. ದಿನಣ್ಣ, ಅವರ ಗಂಡುಮಕ್ಕಳ ಜೊತೆ ಸೇರಿಕೊಂಡು ಪೈರಿನ ಕಂತೆಗಳನ್ನು ಗದ್ದೆಯಿಂದ ಗದ್ದೆಗೆ ಎಸೆಯುತ್ತಿದ್ದನು. ನಾಟಿಯ ಮಧ್ಯದಲ್ಲೇ ನಾವು ಗದ್ದೆ ಬದುವಿಗೆ ಸಿಕ್ಕಿಕೊಂಡಿದ್ದ ಏಡಿಗಳನ್ನು ಹಿಡಿದು ಒಂದು ಬಟ್ಟೆಯ ತುಂಡಲ್ಲಿ ಕಟ್ಟಿಡುತ್ತಿದ್ದೆವು. ಕಳೆಯ ಸಮಯದಲ್ಲೂ ನಾನು ಗದ್ದೆಯೊಳಗೆ ಇಳಿಯುತ್ತಿದ್ದ ಉತ್ಸಾಹಕ್ಕೆ ಆ ಊರಿನ ಹೆಂಗಸರು ಕಳೆ ಕೀಳುವುದನ್ನೂ ಕಲಿಸಿಕೊಟ್ಟಿದ್ದರು. ಅವರ ಗದ್ದೆಯ ಮಧ್ಯದಲ್ಲಿ ಒಂದು ದೊಡ್ಡ ಸೀಬೆ ಮರವಿತ್ತು. ಅದರಲ್ಲಿ ಒಂದೊಂದು ಹಿಡಿಯಷ್ಟು ಗಾತ್ರದ ಸೀಬೆಕಾಯಿ ಬಿಡುತ್ತಿದ್ದವು. ನಾವು ನಾಟಿಯ ಮಧ್ಯೆ ಓಡಿಹೋಗಿ ಆ ಮರ ಹತ್ತಿ, ಹಣ್ಣು ಕಿತ್ತುಕೊಂಡು ಮರದ ಮೇಲೆಯೇ ತಿನ್ನುತ್ತಿದ್ದೆವು.

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಭದ್ರಮ್ಮನ ಮೊಮ್ಮಗಳು ಭವ್ಯಳ ಬೂಟು ಕದ್ದ ಪ್ರಸಂಗ

ವೆಂಕಟರಮಣ ಮಾಮ ಮತ್ತು ಅಬ್ಬನ ದೋಸ್ತಿಯ ಬಗ್ಗೆ ವಿವರಿಸುವಾಗ ಅಮ್ಮಿ, ನಾನು ಹುಟ್ಟುವುದಕ್ಕೂ ಮೊದಲೇ ನಡೆದಿದ್ದ ಘಟನೆಯೊಂದನ್ನು ಆಗಾಗ ನೆನಪಿಸಿಕೊಳ್ಳುತ್ತಾಳೆ. ಒಮ್ಮೆ ಅಬ್ಬ ಮೈಸೂರಿಗೆ ಹೋಗಿದ್ದಾಗ ಹಸಿ ಭಂಗಿಸೊಪ್ಪಿನ ಕಟ್ಟುಗಳನ್ನು ತಂದಿದ್ದನಂತೆ. ಅದನ್ನು ಗುಟ್ಟಾಗಿ ಅಮ್ಮಿಯ ಕೈಯಲ್ಲಿಟ್ಟು ರಾಮರಸ ಮಾಡಲು ಹೇಳಿದನಂತೆ. ಅಮ್ಮಿ ಅದನ್ನು ಚೆನ್ನಾಗಿ ಕುದಿಸಿ, ಸಕ್ಕರೆ ಸುರಿದು ಪಾನಕದಂತೆ ಮಾಡಿ, ಮನೆಯಲ್ಲಿದ್ದ ಹೆಂಗಸರು, ಗಂಡಸರು, ಮಕ್ಕಳು, ಮುದುಕರು ಎಲ್ಲರೂ ಕುಡಿದು, ಎರಡು ರಾತ್ರಿ-ಒಂದು ಹಗಲು ಯಾರಿಗೂ ಎಚ್ಚರವಿಲ್ಲದೆ ಮಲಗಿದ್ದವರು - ನಂತರ ನಿಧಾನಕ್ಕೆ ಒಬ್ಬೊಬ್ಬರೇ ಸರದಿಯಂತೆ ಕಣ್ಣು ಹೊಸಕುತ್ತ ಎದ್ದಿದ್ದರೆಂದು ಅಮ್ಮಿ-ಅಬ್ಬನ ಮೇಲಿನ ಪ್ರೀತಿಗೆ ಕೊಂಚ ಸಿಟ್ಟು ಬೆರೆಸಿ, "ಹಂಗ್ ಮಾಡಿತ್ತು ನಿಮ್ಮಪ್ಪ..." ಎನ್ನುತ್ತಿದ್ದಳು.  

ನಾವು ಮಲ್ಲೇನಹಳ್ಳಿಯಲ್ಲಿದ್ದಾಗಲೇ ಸರ್ಕಾರದ ಯೋಜನೆಯೊಂದರಲ್ಲಿ, ಬಾಡಿಗೆ ಮನೆಯಲ್ಲಿದ್ದವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಅಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಅವಕಾಶ ಕಲ್ಪಿಸಿದ್ದರು. ಮತ್ತೊಬ್ಬರ ಮುಂದೆ ಏನನ್ನೂ ಬೇಡದ ಸ್ವಾಭಾಮಾನಿಯಾಗಿದ್ದ ಅಬ್ಬನನ್ನು ಅಮ್ಮಿ ದುಂಬಾಲು ಬಿದ್ದು, ಬಲವಂತದಿಂದ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ರಾಜುರಾವ್ ಅವರ ಮನೆ ಬಾಗಿಲಿಗೆ ಕರೆದುಕೊಂಡು ಹೋಗಿ, ಜಾಗದ ವಿಷಯದಲ್ಲಿ ವಿನಂತಿಸಿಕೊಂಡಿದ್ದಳು. ಎಷ್ಟೋ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಇದ್ದುದನ್ನು ಗಮನಿಸಿದ್ದ ಅವರು, ಗುಡಿಸಲು ಕಟ್ಟಿಕೊಳ್ಳಲು ಅನುಮತಿ ನೀಡಿದರಂತೆ.

ಆ ಜಾಗವೊಂದು ಕಲ್ಲುಬಂಡೆಗಳಿಂದ ಕೂಡಿದ ಇಳಿಜಾರಾದ ದೊಡ್ಡ ಗುಡ್ಡ. ಗುಡ್ಡದ ತಳಭಾಗದಲ್ಲಿ ಆಗಿನ್ನೂ ಒಂದೊಂದೇ ಗುಡಿಸಲುಗಳು ಮೇಲೇಳುತ್ತಿದ್ದವು. ಜನರು ತಮ್ಮ ಬಳಿಯಲ್ಲಿದ್ದ ಹಾರೆ, ಗುದ್ದಲಿ, ಪಿಕಾಸಿಗಳನ್ನೆಲ್ಲ ಬಳಸಿ ಆ ಗುಡ್ಡವನ್ನು ಕಡಿದು ಸಪಾಟು ಮಾಡಿ, ನಾಲ್ಕು ಗಳಗಳನ್ನು ನಿಲ್ಲಿಸಿ, ಸುತ್ತಲೂ ನೆರಿಕೆ ಕಟ್ಟಿ, ಮೇಲೆ ಹುಲ್ಲು ಹೊದಿಸಿ, ತಮ್ಮ ಜಾಗದ ಸುತ್ತಲೂ ಬೇಲಿ ಕಟ್ಟಿಕೊಳ್ಳುತ್ತಿದ್ದರು.‌ ಖಾಲಿ-ಖಾಲಿಯಾಗಿದ್ದ ಆ ಕಲ್ಲುಗುಡ್ಡದ ಬುಡದಲ್ಲಿ ಸ್ವಲ್ಪ ದಿನಗಳಲ್ಲೇ ಅಸಂಖ್ಯ ಗುಡಿಸಲುಗಳು ಎದ್ದುನಿಂತವು. ಅಬ್ಬನ ಎಷ್ಟೋ ಜನ ಸ್ನೇಹಿತರು ಈ ಗುಡ್ಡದಲ್ಲಿ ಹೀಗೆ ಮನೆ ಕಟ್ಟಿಕೊಂಡಿದ್ದರು. ಗುಡಿಸಲು ಕಟ್ಟಿಕೊಳ್ಳಲು ಅನುಮತಿ ಸಿಕ್ಕಿದ್ದರೂ ಅಬ್ಬ ಇನ್ನೂ ಮೀನಮೇಷ ಎಣಿಸುತ್ತಲೇ ಇದ್ದ. ಅಬ್ಬ, ಮನಸ್ಸು ಮಾಡುವ ಹೊತ್ತಿಗೆ ಗುಡ್ಡದ ಅರ್ಧ ಭಾಗದವರೆಗೂ ಗುಡಿಸಲುಗಳೆದ್ದಿದ್ದವು.

ಕೊನೆಗೆ, ಅಮ್ಮಿಯ ಒತ್ತಾಯಕ್ಕೆ ಮಣಿದು, ಅಬ್ಬ ಅವರಿವರ ಬಳಿಯಿದ್ದ ಹಾರೆ, ಗುದ್ದಲಿ, ಪಿಕಾಸಿಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಆ ಗುಡ್ಡದ ಒಂದಿಷ್ಟು ಜಾಗವನ್ನು ಕಡಿಯಲು ಮುಂದಾದನು. ಅಷ್ಟರಲ್ಲಿ ಗುಡ್ಡದ ಅರ್ಧ ಭಾಗದವರೆಗೂ ಮನೆಗಳೆದ್ದಿದ್ದು, ಅಬ್ಬನಿಗೆ ಗುಡ್ಡದ ಮಧ್ಯಭಾಗದಲ್ಲಿ ಜಾಗ ಸಿಕ್ಕಿತ್ತು. ಅಮ್ಮಿ ಕೂಡ ಅಬ್ಬನ ಸರಿಸಮವಾಗಿ ತನ್ನ ಶಕ್ತಿ ಮೀರಿ ಆ ಕೆಲಸಕ್ಕೆ ಒತ್ತಾಸೆಯಾಗಿ ನಿಂತಳು. ಅಬ್ಬ-ಅಮ್ಮಿ ಹಗಲು, ರಾತ್ರಿ, ಬಿಸಿಲು, ಮಳೆ ಎನ್ನದೆ ಆ ಗುಡ್ಡವನ್ನು ಅಗೆಯುತ್ತಿದ್ದರೆ, ನಾವು ಆ ಗುಡ್ಡವನ್ನು ಅಂಬೆಗಾಲಿಡುತ್ತ ಎಣಗಾಡಿ ಹತ್ತಿ, ದೊಡ್ಡ-ದೊಡ್ಡ ಬಂಡೆಗಳ ಮೇಲೆ ಕೂತು, ಚೂಪುಗಲ್ಲುಗಳಿಂದ ಕೆತ್ತಿ-ಕೆತ್ತಿ ಬಂಡೆಗಳ ಮೇಲೆ ಚಿತ್ರಗಳನ್ನು ಮೂಡಿಸುತ್ತಿದ್ದೆವು. ಆ ಗುಡ್ಡದ ಪೊದೆಗಳಲ್ಲಿ ಸಿಗುತ್ತಿದ್ದ ನಾನಾ ಬಗೆಯ ಹಣ್ಣುಗಳನ್ನು ಪೊದೆಯೊಳಗೆ ನುಗ್ಗಿ ಕಿತ್ತು ತಂದು ಆ ಬಂಡೆಗಳ ಮೇಲೆ ಕೂತು ತಿನ್ನುತ್ತಿದ್ದೆವು. ಅಲ್ಲೇ ಕಣ್ಣಾಮುಚ್ಚಾಲೆಯಂತಹ ಆಟಗಳನ್ನೂ ಆಡುತ್ತಿದ್ದೆವು.

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಅಮ್ಮಿ ರಾರಾಜಿಸುತ್ತಿದ್ದಾಳೆ - ಕೆಲವೊಮ್ಮೆ ಶಾಹಿರಾಬಾನು, ಕೆಲವೊಮ್ಮೆ ಸಾವಿತ್ರಮ್ಮ

ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅಬ್ಬ-ಅಮ್ಮಿ ಸೇರಿ ಪುಟ್ಟ ಜಾಗವನ್ನು ಒಪ್ಪ ಮಾಡಿ, ನಾಲ್ಕು ಗಳಗಳನ್ನು ನೆಟ್ಟೇಬಿಟ್ಟರು. ನನಗೆ ಎಲ್ಲಿಲ್ಲದ ಖುಷಿ. ಸ್ವಂತ ಸೂರೊಂದು ಸಿಕ್ಕ ಆನಂದವನ್ನು ನಾನು ಆಗಲೇ ಅನುಭವಿಸಿದ್ದೆ. ಅಬ್ಬ ಇಳಿಜಾರಾದ ನೆಲವನ್ನು ಸಮತಟ್ಟು ಮಾಡದೆ, ಇಳಿಜಾರಿಗೇ ಗಳಗಳನ್ನು ನೆಟ್ಟಿದ್ದರಿಂದ ಆ ಗುಡಿಸಲಿನ ಒಳಹೊಕ್ಕರೆ ಅದೊಂದು ರೀತಿ ಜಾರುಬಂಡೆಯಂತೆ ಅನ್ನಿಸಿ ಹಿತವೆನ್ನಿಸುತ್ತಿತ್ತು.

ಮತ್ತೂ ಒಂದೆರಡು ದಿನಗಳಲ್ಲಿ ಸುತ್ತಲೂ ತೆಂಗಿನ ನೆರಿಕೆ ಬಂದು ಕೂತು, ಛಾವಣಿಯು ಬೆಚ್ಚಗೆ ಹುಲ್ಲು ಹೊದ್ದುಕೊಂಡು ಎಲ್ಲರ ಮುಖದಲ್ಲೂ ನಿರಾಳತೆಯನ್ನು ಮೂಡಿಸಿತ್ತು. ಅಮ್ಮಿ ಮನೆಯ ಸಾಮಾನುಗಳನ್ನು ತಂದು ಗುಡಿಸಲಿನಲ್ಲಿಟ್ಟು, ಮೂರು ಇಟ್ಟಿಗೆಗಳನ್ನು ಒಲೆಯಂತೆ ಜೋಡಿಸಿ ಅಂದಿನ ರಾತ್ರಿ ಆ ಬೆಚ್ಚನೆಯ ಗೂಡಲ್ಲಿ ಬೇಯಿಸಿದ್ದನ್ನೇ ಹಬ್ಬದಡುಗೆಯಂತೆ ಸವಿದಿದ್ದೆವು. ಹಿಗ್ಗಿನಲ್ಲಿ ಕುಣಿಯುತ್ತಿದ್ದ ಬುಡ್ಡಿ ದೀಪದ ಮಿಣುಕು ಬೆಳಕಲ್ಲಿ ಇಡೀ ಬದುಕೇ ಬೆಳಗಿತ್ತು.

ಅಂದು ಸಂಜೆಗೂ ಮುನ್ನವೇ ಕುಡಿದು ಮತ್ತಿನಲ್ಲಿ ತೇಲುತ್ತ ಬಂದ ಅಬ್ಬ, ಇದ್ದಬದ್ದ ಪಾತ್ರೆ, ಪಗಡೆ, ಬಟ್ಟೆ, ಚಾಪೆ-ಹೊದಿಕೆಗಳನ್ನೆಲ್ಲ ಗಂಟು ಕಟ್ಟಲು ಅಮ್ಮಿಗೆ ತಾಕೀತು ಮಾಡಿದನು. ಪರಿಪರಿಯಾಗಿ ಬೇಡಿಕೊಂಡರೂ ಮರುಮಾತನಾಡಲೂ ಅವಕಾಶ ಕೊಡದೆ ಅಮ್ಮಿಗೆ ಚೆನ್ನಾಗಿ ಹೊಡೆದು, ಬಯ್ದು ಕಟ್ಟಿದ್ದ ಗಂಟುಗಳನ್ನು ಹೆಗಲಿಗೇರಿಸಿಕೊಂಡು ಆ ಗುಡಿಸಲಿನಿಂದ ಅಮ್ಮಿಯನ್ನು ಎಳೆದುಕೊಂಡು ಹೊರಟುಬಿಟ್ಟನು. ಅಮ್ಮಿ ತನ್ನ ಬಗಲಿನಲ್ಲೂ ಗಂಟುಗಳನ್ನು ಇರುಕಿಕೊಂಡು ಅಬ್ಬನ ಹಿಂದೆಯೇ ಅಳುತ್ತ ನಡೆಯುತ್ತಿದ್ದಳು. ಏನಾಗಿದೆ ಎಂಬ ಅರಿವೂ ಇಲ್ಲದೆ ಅಮ್ಮಿಯ ಅಳುವಿಗೆ ನಾವೂ ಸ್ಪಂದಿಸುತ್ತ ಅವರು ಹಿಂದೆಯೇ ಹೆಜ್ಜೆ ಹಾಕಿದೆವು.

ಅಂದು ಕೆಲಸಕ್ಕೆ ಹೋದ ಅಬ್ಬನಿಗೆ ಸ್ನೇಹಿತನೊಬ್ಬ, "ಎಳೇ ಮಕ್ಳುನ್ನ ಕಟ್ಕೊಂಡು ಆ ಗುಡ್ಡುದ್ ಕೆಳಗೆ ಹೆಂಗಿರ್ತೀಯೋ...? ಮಳೆಗಾಲದಲ್ಲಿ ಇಡೀ ಗುಡ್ಡುದ್ ನೀರು ಮನೇಗ್ ನುಗ್ತದೆ," ಎಂದು ಹೇಳಿದ್ದ ಮಾತನ್ನು ದಾರಿಯುದ್ದಕ್ಕೂ ಹೇಳುತ್ತ, "ನನ್ ಮಕ್ಳು ಸಾಯ್ಲಿ ಅಂತ ಹಿಂಗ್ ಮಾಡಿದ್ದೀಯಾ?" ಎಂದು ಅಮ್ಮಿಗೆ ಹೊಡೆಯುತ್ತಿದ್ದ. ಕೈಯಲ್ಲಿದ್ದ ಆಟಿಕೆಯನ್ನು ಯಾರೋ ಅಪರಿಚಿತರು ಕಸಿದುಕೊಂಡಂತೆ ನನ್ನ ಮನಸ್ಸು ಘಾಸಿಗೊಂಡಿದ್ದರೆ, ತನ್ನದೇ ಒಂದಂಗ ತನ್ನ ಮೈಯಿಂದ ಜಾರಿಹೋದಂತೆ ಅಮ್ಮಿ ಒದ್ದಾಡಿದ್ದಳು. ಅಂದಿನ ಅಬ್ಬನ ಆ ನಿರ್ಧಾರದಲ್ಲಿ ನಮ್ಮ ಜೀವದ ಬಗ್ಗೆ ಅವನಿಗಿದ್ದ ಕಾಳಜಿ ಎದ್ದು ಕಂಡರೂ, ಆ ನಿರ್ಧಾರದಲ್ಲಿ ನಮ್ಮ ಭವಿಷ್ಯದ ಬದುಕಿನ ಬಗೆಗಿನ ಮುಂದಾಲೋಚನೆ ಕಾಣದೆ ಚಡಪಡಿಸಿದ್ದೆವು. ನನಗಂತೂ ಅಂದು ಆ ಗೂಡನ್ನು ಬಿಟ್ಟು ಬರಲು ಮನಸ್ಸೇ ಇರಲಿಲ್ಲ. ಈಗಲೂ ಸೋಮವಾರಪೇಟೆಯ ರಸ್ತೆಯಲ್ಲಿ ಓಡಾಡುವಾಗ ಆ ಗುಡ್ಡವನ್ನೊಮ್ಮೆ ಆಸೆಗಣ್ಣುಗಳಿಂದ ನೋಡಿ ನನ್ನ ಬಾಲ್ಯವನ್ನು ಕಣ್ತುಂಬಿಸಿಕೊಂಡು ತೆರಳುತ್ತೇನೆ. ಅಲ್ಲಿ ಈಗಿರುವ ಅಂದಚಂದದ ಮನೆಗಳ ಗರ್ಭದೊಳಗೆ ಇನ್ನೂ ಆ ಗೂಡು ಉಸಿರಾಡುತ್ತಿರುವಂತೆ ಭಾಸವಾಗುತ್ತದೆ. ಅಲ್ಲಿಂದ ಮುಂದೆ ನಾವು ಕೂಡಿಗೆ ಸರ್ಕಲ್ ಸಮೀಪದ ಹಾರಂಗಿ ಹೊಳೆಯ ಬದಿಯಲ್ಲಿದ್ದ ಏಳುಮಲೈ ಅನ್ನುವವರ ಮನೆಯಲ್ಲಿ ಸಾಮಾನುಗಳನ್ನು ಸುರಿದು, ಮುಂದಿನ ಬದುಕಿಗೆ ಬಾಡಿಗೆ ಕಟ್ಟಲು ತಯಾರಾದೆವು.

(ಮುಂದುವರಿಯುವುದು)

ಮುಖ್ಯ ಚಿತ್ರ ಮತ್ತು ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app