ಮುಳ್ಳುಹಾದಿಗೆ ಮಣ್ಣು ಹೊತ್ತವರು | ನಾಚಬೇಡಿ ಹೆಣ್ತನಕೆ, ತಲೆಯೆತ್ತಿ ನಿಲ್ಲಿರಿ: ವಿಜಯಾ ದಬ್ಬೆ

ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕಿಯೊಬ್ಬರು ಸಹವರ್ತಿಗಳೊಂದಿಗೆ ಕೊಂಗಳ್ಳಿ ಗುಡಿಗೆ ಹೋದರು (1979). ಭಕ್ತಾದಿಗಳು, ಅರ್ಚಕ ವರ್ಗ ಹೆಣ್ಣುಮಕ್ಕಳು ಗುಡಿಗೆ ಬಂದದ್ದು ಕಂಡು ಅಪ್ರತಿಭರಾಗಿ ಹೆದರಿಸಿದರು, ಬೆದರಿಸಿದರು. ಇದಕ್ಕೆಲ್ಲ ಅಂಜದ ಗುಂಪು ಗುಡಿಯೊಳಗೆ ಹೋಗಿಬಂತು. ಆ ಉಪನ್ಯಾಸಕಿ ವಿಜಯಾ ದಬ್ಬೆ

ಮೈಸೂರಿಗೆ 100 ಕಿಲೋಮೀಟರ್ ದೂರವಿರುವ, ಚಾಮರಾಜನಗರ-ಈರೋಡ್ ಗಡಿಯಲ್ಲಿರುವ ಕೊಂಗಳ್ಳಿ ಎಂಬ ಊರಿನಲ್ಲೊಂದು ಮಲ್ಲಪ್ಪ ಯಾನೆ ಮಲ್ಲಿಕಾರ್ಜುನ ಸ್ವಾಮಿಯ ದೇವಾಲಯವಿದೆ. 1,200 ವರ್ಷದಷ್ಟು ಹಳೆಯದೆಂದು ಹೇಳಲಾಗುವ ಈ ಪುಟ್ಟ ಗುಡಿಯ ವಿಚಿತ್ರವೆಂದರೆ, ಅಲ್ಲಿಗೆ ಹೆಣ್ಣುಮಕ್ಕಳು ಹೋಗುವಂತಿಲ್ಲ. ದಟ್ಟ ಕಾಡಿನ ನಡುವೆ ಗುಡ್ಡದ ಮೇಲಿರುವ ಈ ಗುಡಿಗೆ ಮಲ್ಲಿಕಾರ್ಜುನ ಸ್ವಾಮಿ ತಪಸ್ಸಿಗೆ ಬರುವನಂತೆ; ಅವನ ಧ್ಯಾನಕ್ಕೆ ತೊಂದರೆಯಾಗಬಾರದು ಎಂದು ಮಹಿಳೆಯರಿಗೆ ಪ್ರವೇಶವಿಲ್ಲವಂತೆ! ಅಪ್ಪಿತಪ್ಪಿ ಬಂದ ಹೆಣ್ಣುಗಳು ಕಲ್ಲಾಗಿದ್ದಾರೆ, ರಕ್ತ ಕಾರಿ ಸಾಯುತ್ತಾರೆ ಮುಂತಾದ ಮೂಢನಂಬಿಕೆಗಳು ಚಾಲ್ತಿಯಲ್ಲಿವೆ.

1979ನೆಯ ಇಸವಿ. ಕವಿ, ವಿಮರ್ಶಕಿ, ಸಂಶೋಧಕಿ, ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕಿಯೊಬ್ಬರು ತಮ್ಮ ಸಹವರ್ತಿಗಳೊಂದಿಗೆ ಕೊಂಗಳ್ಳಿ ಗುಡಿಗೆ ಹೋದರು. ಭಕ್ತಾದಿಗಳು ಮತ್ತು ಅರ್ಚಕ ವರ್ಗ ಹೆಣ್ಣುಮಕ್ಕಳು ಗುಡಿಗೆ ಬಂದದ್ದು ಕಂಡು ಅಪ್ರತಿಭರಾಗಿ ಹೆದರಿಸಿದರು, ಬೆದರಿಸಿದರು. "ನಿಷಿದ್ಧ ಗೆರೆ ದಾಟಿದರೆ ರಕ್ತಕಾರಿ ಸಾಯುತ್ತೀರಿ," ಎಂದರು. "ಪ್ರತಿ ತಿಂಗಳೂ ರಕ್ತ ಹರಿಸುವವರೇ ನಾವು," ಎಂದುಕೊಳ್ಳುತ್ತ, ಅದ್ಯಾವುದಕ್ಕೂ ಅಂಜದ ಗುಂಪು ಗುಡಿಯೊಳಗೆ ಹೋಗಿಬಂತು. ನೂಕುನುಗ್ಗಾಟ, ಗದ್ದಲದ ನಡುವೆ ದೇವಾಲಯ ಹೊಕ್ಕು ತಿರುಗಿ ಬಂದುಬಿಟ್ಟರು. ಬಂದ ಮೇಲೆ, "ಕೊಂಗಳ್ಳಿಗೆ ಹೋಗಿಬಂದೆವು. ಅವರ ನಿರೀಕ್ಷೆಯಂತೆ ನಮಗೇನೂ ಆಗಿಲ್ಲ. ನಾವು ಆಸ್ತಿಕರೋ, ಅಲ್ಲವೋ ಎನ್ನುವುದಕ್ಕಿಂತ ಈ ಕಾಲದಲ್ಲಿ ತಾರತಮ್ಯ ತೋರಿಸಲು ಹೆಣ್ಣುಹುಟ್ಟು ಒಂದು ಆಧಾರವಾಗುವುದನ್ನು ಸಹಿಸಲಾರೆವು," ಎಂದು ಘೋಷಿಸಿದರು. ತಾನು, ತನ್ನ ಸರ್ಕಾರಿ ಕೆಲಸ, ಮೇಲಾಧಿಕಾರಿಗಳ ಆಗ್ರಹಕ್ಕೆ ಗುರಿಯಾಗುವ ಅಪಾಯ, ಕೆಲವರ ಕೋಪ, ಹಲವರ ನೀರಸ ಪ್ರತಿಕ್ರಿಯೆಗಳ ನಡುವೆ ಆ ಜಾಗೃತ ಮಹಿಳೆ ತನ್ನ ಚಿಂತನೆಗೆ ತಕ್ಕಂತೆ ನಡೆದುಕೊಂಡಿರುವೆ ಎಂದು ಧೈರ್ಯವಾಗಿ ನಿಂತರು.

ಆಕೆ ವಿಜಯಾ ದಬ್ಬೆ. ಸಾಹಿತಿ, ಸಂಘಟಕಿ, ಅಧ್ಯಾಪಕಿ, ಹೋರಾಟಗಾರ್ತಿ, ಸಂಶೋಧಕಿ ಮುಂತಾಗಿ ನಾನಾ ರಂಗಗಳಲ್ಲಿ ತಲಸ್ಪರ್ಶಿಯಾಗಿ ತೊಡಗಿಕೊಳ್ಳುತ್ತಿದ್ದ ಮಹಿಳೆ. ಒಂದೇ ವ್ಯಕ್ತಿತ್ವಕ್ಕೆ ಹಲವು ಮಜಲಿನ ಸಾಧನೆಗಳು ಸಾಧ್ಯವಿದ್ದಾಗಲೂ ಎಷ್ಟೋ ಜನರಿಗೆ ತಮ್ಮ ಶಕ್ತಮುಖಗಳ ಪರಿಚಯ ಆಗಿರುವುದಿಲ್ಲ. ಆದರೆ, ವಿಜಯಾ ತನ್ನ ಸಾಧ್ಯತೆಗಳನ್ನು ಅರಿತು, ಅದನ್ನು ಸಾಕಾರಗೊಳಿಸಲು ಬದ್ಧತೆಯಿಂದ ನಡೆದ ಹೆಣ್ಣುಜೀವ. ಆಕ್ಟಿವಿಸ್ಟ್, ಅಕೆಡೆಮಿಶಿಯನ್, ಸೃಜನಶೀಲ ಬರಹಗಾರ್ತಿ ಮುಂತಾದ ವಿಶೇಷಣಗಳೆಲ್ಲ ಹದವಾಗಿ ಮಿಳಿತಗೊಂಡ ಸುಮನಸ ಚೇತನ.

ಕನ್ನಡ ಅಕ್ಷರಲೋಕದ ಅನನ್ಯ ಜೀವ ವಿಜಯಾ ದಬ್ಬೆ 49ನೆಯ ವಯಸ್ಸಿನಲ್ಲಿ ರಸ್ತೆ ಅಪಘಾತಕ್ಕೊಳಗಾದರು. ಕೋಮಾ ಸ್ಥಿತಿಯಲ್ಲಿ ಕೆಲವು ಕಾಲ ಕಳೆದ ಬಳಿಕ ಪ್ರಜ್ಞೆ ಮರಳಿದರೂ ನೆನಪುಗಳು ಕಾಣೆಯಾಗಿದ್ದವು. ಇದ್ದಕ್ಕಿದ್ದಂತೆ ಕನ್ನಡದ ಆಗಸದಲ್ಲೊಂದು ಹೆಣ್ಣುಖಾಲಿ ಬಂದೆರಗಿ ಸಾಹಿತ್ಯಲೋಕ ದಿಙ್ಮೂಢವಾಯಿತು. ಆದರೆ, 2018ರಲ್ಲಿ 67ನೆಯ ವಯಸ್ಸಿಗೆ ಇನ್ನಿಲ್ಲವಾದ ವಿಜಯಾ, ಇವತ್ತಿಗೂ ಜಾಗೃತ ಮಹಿಳೆಯರ ಚಟುವಟಿಕೆ-ಚಿಂತನೆ-ಬರಹಗಳಲ್ಲಿ, ಮಹಿಳಾ ಗುಂಪುಗಳ ಸಮತಾ ಗೀತೆಗಳಲ್ಲಿ ಬತ್ತದ ಸ್ಫೂರ್ತಿ ಚಿಲುಮೆಯಾಗಿ ಹರಿಯುತ್ತಿದ್ದಾರೆ.

* * *

Image

1951ರ ಜೂನ್ 1ರಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದಬ್ಬೆಯಲ್ಲಿ ಹುಟ್ಟಿದ ವಿಜಯಾ, ಕೃಷ್ಣಮೂರ್ತಿ ಮತ್ತು ಸೀತಾಲಕ್ಷ್ಮಿ ದಂಪತಿಗಳ ಒಂಬತ್ತು ಮಕ್ಕಳಲ್ಲಿ ಹಿರಿಯಳು. ಅವಳಿಗೆ ಇಬ್ಬರು ತಮ್ಮಂದಿರು, ಆರು ಜನ ತಂಗಿಯರು. ಪ್ರಾಥಮಿಕ ಶಿಕ್ಷಣವನ್ನು ಜಾವಗಲ್‍ನಲ್ಲಿ ಮುಗಿಸಿದ ವಿಜಯಾ, ಎಂಟನೆಯ ತರಗತಿಯವರೆಗೂ ಕಬಡ್ಡಿ ಆಡುತ್ತಿದ್ದಳು. ಪ್ರಬಂಧ, ಚರ್ಚಾಸ್ಪರ್ಧೆಗಳಿಗೆಂದು ಎಲ್ಲೇ ಹೋಗಲಿ, ಬಹುಮಾನ ಅವಳಿಗೇ ಕಟ್ಟಿಟ್ಟದ್ದು. ಒಮ್ಮೆ ವಿಜಯಾ ಪದವಿ ಓದುವಾಗ ಅಕ್ಕ-ತಂಗಿ-ತಮ್ಮಂದಿರೆಲ್ಲ ದಬ್ಬೆಯಿಂದ ಏಳು ಕಿಲೋಮೀಟರ್ ಇರುವ ನಂದೀಪುರಕ್ಕೆ ನಡೆದುಹೋದರು. ವಾಪಸು ಬರುವಾಗ ದಾರಿ ತಪ್ಪಿತು. ಕಿರಿಯರು ಹೋ ಎಂದು ಅಳಲು ಶುರುಮಾಡಿದರೆ ಹಿರಿಯಕ್ಕ, "ಅಳೋದು ಯಾಕೆ? ಇದೂ ಭೂಮಿನೇ ಅಲ್ವಾ? ಇಲ್ಲೇ ಇರಣ ಬಿಡಿ," ಎಂದು ಅವರನ್ನು ಸಮಾಧಾನಿಸಿ ಧೈರ್ಯ ಹೇಳಿದಳು. ಅಕ್ಕ ಹೇಳಿದ್ದನ್ನೇ ನಂಬಿದ ಕಿರಿಯರು ತಾವಿನ್ನು ಅಲ್ಲೇ ಎಲ್ಲೋ ವಾಸಿಸುವುದೆಂದು ಭಾವಿಸಿ ಅಕ್ಕನ ಹಿಂದೆ ನಡೆದುಬಂದರೆ ಏನಾಶ್ಚರ್ಯ, ಅವಳು ಅವರನ್ನು ಮನೆ ತಲುಪಿಸಿದ್ದಳು!

ಪದವಿ ಶಿಕ್ಷಣವನ್ನು ಹಾಸನದಲ್ಲಿ ಪಡೆದ ಅಕ್ಕ, ಎಂ.ಎ ಮಾಡಲೇಬೇಕೆಂದು ಹಠ ಹಿಡಿದು ಮೈಸೂರಿಗೆ ಹೋದಳು. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಹಿಡಿಯಿತು. ತಮ್ಮ, ತಂಗಿಯರೂ ಮೈಸೂರಿನಲ್ಲಿದ್ದ ಅಕ್ಕನ ಬಾಡಿಗೆ ಕೋಣೆ ಸೇರಿದರು. ಹದಿವಯಸ್ಸಿನ, ಹೆಣ್ಣಮಕ್ಕಳೇ ಹೆಚ್ಚಿರುವ ಮನೆ ಎಂದು ರಾತ್ರಿ ಅವರ ಮನೆಯ ಮೇಲೆ ಕಲ್ಲು ಬೀಳುತ್ತಿತ್ತು. ಕೈಯಲ್ಲಿ ಕೋಲು ಹಿಡಿದು ಮನೆ ಒಳಗೆ-ಹೊರಗೆ ಓಡಾಡುತ್ತ ಅಕ್ಕ ವಿಜಯಾ ಕಾವಲು ಕಾದಳು. ಕವಿಗೋಷ್ಠಿ, ವಿಚಾರ ಸಂಕಿರಣಗಳಿಗೆ ಹೋಗಿಬಂದ ಬಳಿಕ ಎಲ್ಲರನ್ನು ಸುತ್ತ ಕೂರಿಸಿಕೊಂಡು ತಾನು ತಿಳಿದದ್ದನ್ನು ಹಂಚುತ್ತಿದ್ದಳು. ಕವಿತೆಯನ್ನು ಓದಿಸಿ ಅರ್ಥ ಮಾಡಿಸುತ್ತಿದ್ದಳು.

ಅಕ್ಕನಿಗೆ ಮನೆಗೆಲಸದಲ್ಲಿ ಶ್ರದ್ಧೆ, ಶಿಸ್ತು ಬಹಳ. ಅವಳ ಅಡುಗೆ ಮನೆ ಅಲಂಕೃತ. ಮಣ್ಣಿನ ಹೂಜಿ, ಕಂಚಿನ ದೀಪ, ಬಿದಿರಿನ ಬುಟ್ಟಿ, ಕಂಚಿನ ಬುದ್ಧ, ಮರದ ಆನೆ, ಉಲ್ಲನ್ನಿನ ಪಕ್ಷಿಗಳೆಲ್ಲ ಅಲ್ಲಿ ಕಾಣುತ್ತಿದ್ದವು. ಹಾಗಂತ ಬರಿಯ ಮನೆಗೆಲಸವನ್ನೇ ಮಾಡುತ್ತ ಕೂರಲಿಲ್ಲ. ಓದಿನಲ್ಲಿ, ಬರವಣಿಗೆಯಲ್ಲಿ ಮುಳುಗಿಬಿಡುವಳು. ಬಲು ಜೀವನಪ್ರೀತಿಯ ಅಕ್ಕನಿಗೆ ಗಿಡ, ಮರ, ಹೂವೆಂದರೆ ಇಷ್ಟ. ಹೂದೋಟ, ಕೈದೋಟಗಳಲ್ಲೂ ಕೈಯಾಡಿಸುತ್ತಿದ್ದಳು. ಮನೆಗೆಲಸದ ಸಹಾಯಕಿಯನ್ನು ಸಖಿಯಂತೆ ಕಾಣುತ್ತಿದ್ದಳು. ಸೊಪ್ಪು, ಅವರೆಕಾಯಿ ಮಾರುತ್ತ ಬರುವ ಹೆಣ್ಣುಮಕ್ಕಳಿಗೂ, "ಒಂದು ಲೋಟ ಟೀ ಕುಡಿದು ಹೋಗು, ಸುಸ್ತಾಗಿದೀ," ಎನ್ನುವ ಕಕ್ಕುಲಾತಿಯ ಜೀವವಾಗಿದ್ದಳು. ಇಂಥ ಅಕ್ಕನಿಂದ ಸೋದರಿತ್ವ ಎಂದರೇನೆನ್ನುವುದನ್ನು ಬರಿಯ ಒಡಹುಟ್ಟಿದವರಷ್ಟೇ ಅಲ್ಲ, ಒಡನಾಡಿದವರೆಲ್ಲ ಕಲಿತರು.

ಎಂ.ಎ ಮುಗಿಸಿದ ಬಳಿಕ ತುಮಕೂರು ಮತ್ತು ಆನಂದಪುರ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ತಲಾ ಆರು ತಿಂಗಳು ಕೆಲಸ ಮಾಡಿದ ವಿಜಯಾ, ಉನ್ನತ ಶಿಕ್ಷಣ ಪಡೆಯಲು ಕೆಲಸ ಬಿಟ್ಟು, 1973ರಲ್ಲಿ ಮೈಸೂರಿಗೆ ಬಂದರು. ತನಗೆ ಕಾಯದೇ ತಮ್ಮ, ತಂಗಿಯರಿಗೆ ಮದುವೆ ಮಾಡಿಬಿಡಿ ಎಂದವರ ಧೃಢ ನಿರ್ಧಾರವನ್ನು ಮನೆಯವರು ಒಪ್ಪಿಕೊಂಡರು. ಓದುತ್ತ, ಕೆಲಸ ಮಾಡುತ್ತ ಮನೆಯವರ ಮದುವೆ, ಓದು, ಕುಟುಂಬ ನಿರ್ವಹಣೆಗೆ ವಿಜಯಾ ಹೆಗಲಾದರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ನಿಷಿದ್ಧ ಗಡಿಗಳ ದಾಟಿದ ಡಾಕ್ಟರ್ ರುಕ್ಮಾಬಾಯಿ

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಬಂದ ವಿಜಯಾ, ಹಾ ಮಾ ನಾಯಕರ ಶಿಷ್ಯೆಯಾದರು. ಕವಿ ನಾಗಚಂದ್ರನನ್ನು ಕುರಿತು ಪಿಎಚ್‍ಡಿ ಮಾಡುತ್ತಲೇ ಅಧ್ಯಾಪನ ಮಾಡುವ ಅವಕಾಶವನ್ನು ಹಾಮಾನಾ ಕಲ್ಪಿಸಿದರು. ಸಂಶೋಧನಾ ಪ್ರಬಂಧ ಸಲ್ಲಿಸಿದ ಬಳಿಕ ಅದೇ ಸಂಸ್ಥೆಯಲ್ಲಿ ಅಧ್ಯಾಪನ ಮುಂದುವರಿಸಿದರು. ಡಿ ವಿಜಯಾ ಬೋಧಕರಾಗಿ ಅಲ್ಲಿ ನೇಮಕವಾದ ಮೊದಲ ಮಹಿಳೆ. ಹಾಮಾನಾ, ಎಲ್ ಬಸವರಾಜು, ಜೀ ಶಂ ಪರಮಶಿವಯ್ಯ, ಟಿ ವಿ ವೆಂಕಟಾಚಲ ಶಾಸ್ತ್ರಿ, ಸಿಪಿಕೆ ಮೊದಲಾದ ದಿಗ್ಗಜರಿದ್ದ ಸಂಸ್ಥೆಯ ಘನತೆಗೆ, ವಿದ್ವತ್ತಿನ ಮಟ್ಟಕ್ಕೆ ತಮ್ಮ ದೀರ್ಘ ಅಧ್ಯಯನ, ಸಂಶೋಧನೆಯ ತಿಳಿವನ್ನೂ ಸೇರಿಸಿದರು. ಹಾಮಾನಾ ಗುರು, ಮಾರ್ಗದರ್ಶಿಯಾಗಿದ್ದರೂ ಅವಶ್ಯವಿರುವಲ್ಲಿ ಭಿನ್ನಮತ ವ್ಯಕ್ತಪಡಿಸುತ್ತಿದ್ದರು. 1976ರಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಲೇಖಕಿಯರ ಸಮ್ಮೇಳನ ಏರ್ಪಡಿಸಿತು. "ಎಲ್ಲ ಸಮ್ಮೇಳನಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಡಿ. ಅವರಿಗೇ ಪ್ರತ್ಯೇಕ ಸಮ್ಮೇಳನ ನಡೆಸುವುದು ನನಗೆ ಸಮ್ಮತವಲ್ಲ," ಎಂದು ಸಂಸ್ಥೆಯ ನಿರ್ದೇಶಕರಾದ ಹಾಮಾನಾ ಮುಂದೆಯೇ ಹೇಳಿ ಪಾಲ್ಗೊಳ್ಳಲು ನಿರಾಕರಿಸಿದರು.

ನಿಷ್ಠುರ ಸತ್ಯಗಳನ್ನು ನಿಧಾನವಾಗಿ, ಆದರೆ ಧೃಢವಾಗಿ ಹೇಳುತ್ತಿದ್ದ ವಿಜಯಾ ಮೇಡಂ ಬಹುಬೇಗ ಎಲ್ಲರ ಅಚ್ಚುಮೆಚ್ಚಿನ ಅಧ್ಯಾಪಕಿಯಾದರು. ವಿಶಿಷ್ಟ ಒಳನೋಟಗಳಿರುತ್ತಿದ್ದ ಅವರ ಪಾಠ ಕೇಳಲೆಂದೇ ತರಗತಿಗೆ ಬಂದು ಕೂರುವ ವಿದ್ಯಾರ್ಥಿಗಳಿರುತ್ತಿದ್ದರು. ಮೆಲುಮಾತಿನಲ್ಲಿ ಹೊಸ-ಹೊಸ ವಿಷಯಗಳನ್ನು ಹೇಳುವ, ಹೊಸ ಪರಿಕಲ್ಪನೆಗಳು ಮೊಳೆಯುವಂತೆ ಮಾಡುವ ವಿಜಯಾ ವಿದ್ಯಾರ್ಥಿ ಬಳಗಕ್ಕೆ ಹತ್ತಿರವಾದರು. ವರ್ಜೀನಿಯಾ ವುಲ್ಫ್, ಕೇಟ್ ಮಿಲೆಟ್, ಸಿಮೊನ್ ದ ಬುವಾ, ಮೇರಿ ವುಲ್‍ಸ್ಟನ್‍ಕ್ರಾಫ್ಟ್ ಮೊದಲಾದ ಚಿಂತಕಿಯರನ್ನು ಪಾಠದ ನಡುನಡುವೆ ಪರಿಚಯಿಸುತ್ತ ವಿದ್ಯಾರ್ಥಿಗಳಲ್ಲಿ ಸಮತೆಯ ಭಾವವನ್ನು, ಲಿಂಗಸಮಾನತೆಯ ಚಿಂತನೆಗಳನ್ನು ಬೆಳೆಸಲು ಪ್ರಯತ್ನಿಸಿದರು. ಅಧ್ಯಾಪನ, ಒಡನಾಟ, ಭಾಷಣ, ಬರಹಗಳ ಮೂಲಕ ಸ್ತ್ರೀವಾದದ ಸ್ಪಷ್ಟ ರೂಪವನ್ನು ಬಿತ್ತಿದ ವಿಜಯಾ, ಬರಹಗಾರರ ಬದುಕು, ಸಾಂಸ್ಕೃತಿಕ ಪರಿಸರ, ಕಾಲಗಳನ್ನು ವಿಶ್ಲೇಷಿಸಿ ಸಾಹಿತ್ಯ ವಿಮರ್ಶೆ ಮಾಡುವ, ಮಹಿಳೆಯ ಕಣ್ಣೋಟದಿಂದ ನೋಡುವ ಹೊಸ ಸಾಧ್ಯತೆಗಳನ್ನು ತೋರಿಸಿದರು. ಹಾಮಾನಾ ಇನ್ನಿಲ್ಲವಾದ ಬಳಿಕ ಅವರ ಹೆಸರಿನಲ್ಲಿ 75,000 ರೂಪಾಯಿ ಠೇವಣಿಯಿಟ್ಟು, ಪ್ರತೀ ವರ್ಷ ಹೆಚ್ಚು ಅಂಕ ಗಳಿಸಿದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಬಹುಮಾನ ಕೊಡುವ ಯೋಜನೆ ರೂಪಿಸಿದರು.

1979ರಲ್ಲಿ ಆರಂಭವಾದ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಕೆಲ ಕಾಲ ತಮ್ಮನ್ನು ತೊಡಗಿಸಿಕೊಂಡ ಅವರು, ವಿಚಾರ ಸಂಕಿರಣ, ಸಮಾವೇಶ, ಕಮ್ಮಟಗಳಲ್ಲಿ ಭಾಗವಹಿಸಿದರು. ಯಾವುದೇ ಒಂದು ಸಂಘಟನೆ, ಸಿದ್ಧಾಂತಕ್ಕೆ ಕಟ್ಟುಬೀಳಲೊಪ್ಪದ ವಿಜಯಾ, ಸರ್ವರೊಳಗೊಂದೊಂದು ನುಡಿಗಲಿತು ನೇರ-ನಿಷ್ಠುರ ಪ್ರಜ್ಞೆಯಾಗಿ ಬೆಳೆದರು.

ಈ ವೇಳೆಗೆ ಜೈನ ದೇವಾಲಯಗಳ ಅಧ್ಯಯನಕ್ಕಾಗಿ ಭಾರತಕ್ಕೆ ಬಂದಿದ್ದ ನೆದರ್‌ಲ್ಯಾಂಡಿನ ರಾಬರ್ಟ್ ಜೆಯ್ಡನ್ ಬೋಸ್ ಪರಿಚಿತರಾದರು. ಸ್ನೇಹ ಪ್ರೇಮವಾಗಿ 1982ರಲ್ಲಿ ಬಾಳಸಂಗಾತಿಗಳಾದರು. ಮಗಳು 'ಚಾರುಮತಿ' ಕುಟುಂಬವನ್ನು ವಿಸ್ತರಿಸಿದಳು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಘನತೆ ಇಲ್ಲದ ವೃತ್ತಿ ಬೇಡವೆಂದ ಹೋಮೈ ವ್ಯಾರಾವಾಲಾ

ಸಮಾನ ನಾಗರಿಕ ಸಂಹಿತೆ, ಮಹಿಳೆಯರ ದೇವಾಲಯ ಪ್ರವೇಶ, ಕೌಟುಂಬಿಕ ದೌರ್ಜನ್ಯ, ರಾಜಕೀಯದಲ್ಲಿ ಮಹಿಳೆ, ನ್ಯಾಯವ್ಯವಸ್ಥೆಯಲ್ಲಿ ಮಹಿಳೆ, ವಿಶ್ವಸುಂದರಿ ಸ್ಪರ್ಧೆ ಮುಂತಾಗಿ ಯಾವ ವಿಷಯವೇ ಆಗಲಿ, ಮಹಿಳಾ ಘನತೆಯು ಪರಿಗಣಿಸಬೇಕಾದ ಮುಖ್ಯ ವಿಷಯ ಎಂದು ವಿಜಯಾ ಹೇಳುತ್ತಿದ್ದರು. ಬೆಂಗಳೂರಿನಲ್ಲಿ ಏರ್ಪಾಟಾದ ವಿಶ್ವಸುಂದರಿ ಸ್ಪರ್ಧೆಯ ವಿರುದ್ಧ ದನಿ ಎತ್ತಿದವರಲ್ಲಿ ಅವರೂ ಒಬ್ಬರು. "ಉದ್ಯಮಿಗಳ ಲಾಭಕ್ಕಾಗಿ ಮಾಡುವ ದೇಹದ ಈ ಅತಿರೇಕದ ವೈಭವೀಕರಣ ಬಿಟ್ಟು ನಮ್ಮ ಗಮನ ಬೇರೆಡೆಗೆ ಹರಿಯಬೇಕಿದೆ. ನಮ್ಮ ಸಮಾಜದ ಅತಿ ಸಾಮಾನ್ಯ ಮಹಿಳೆಯರ ಬದುಕಿನಲ್ಲಿಯೂ ಸೌಂದರ್ಯವಿದೆ. ಊಹಿಸಿಕೊಳ್ಳಲೂ ಕಷ್ಟವಾಗುವಂಥ ಸಮಸ್ಯೆ, ಸಂಕಟಗಳ ಮಧ್ಯದಿಂದ ಜನಬೆಂಬಲವಿಲ್ಲದೆ, ಧನಬಲವಿಲ್ಲದೆ ಈ ಸಾಮಾನ್ಯೆಯರು ತಮ್ಮ ಆತ್ಮಸ್ಥೈರ್ಯದಿಂದ, ಮನುಷ್ಯ ಪ್ರೀತಿಯಿಂದ, ಸಹನೆಯಿಂದ ಹೋರಾಡಿದ್ದಾರೆ. ಹೀಗೆ, ಕೋಟ್ಯಂತರ ಮಹಿಳೆಯರು ಜೀವನಪರ್ಯಂತ ತೋರಿಸಿದ ಶ್ರದ್ಧೆ, ಪ್ರೀತಿ, ತಾಳ್ಮೆ, ಹೋರಾಟದಲ್ಲಿ ವಿಶ್ವ ಸೌಂದರ್ಯವಿದೆ, ಸೃಷ್ಟಿಯ ಚೆಲುವಿದೆ. ಈ ಸೌಂದರ್ಯಕ್ಕೆ ನಮನ ಸಲ್ಲಬೇಕು," ಎಂದು ತಮ್ಮ ಸೌಂದರ್ಯದ ಪರಿಕಲ್ಪನೆಯನ್ನು ಮುಂದಿಟ್ಟರು.

ಇವತ್ತಿಗೂ ಜನಪ್ರಿಯ ಮಹಿಳಾ ಆಶಯ ಗೀತೆಯಾಗಿರುವ, 'ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ...' ಎಂಬ ಅವರ ಕವಿತೆ ವಿಜಯಾರ ಆಶಯಗಳನ್ನು ಸಮರ್ಥವಾಗಿ ಪ್ರತಿಪಾದಿಸುತ್ತದೆ. ಹೆಣ್ಣು ಬಂಡಾಯ ಮತ್ತು ಶಕ್ತಿಯನ್ನು ಜೊತೆಜೊತೆಗೇ ಬಡಿದೆಬ್ಬಿಸುತ್ತವೆ.

ಬರಹ-ಬದುಕು

ಕಾವ್ಯ, ವಿಮರ್ಶೆ, ಅನುವಾದ, ಪ್ರವಾಸ ಕಥನ, ವ್ಯಕ್ತಿಚಿತ್ರ, ಸಂಶೋಧನೆ ಮೊದಲಾದ ವಿವಿಧ ಪ್ರಕಾರಗಳಲ್ಲಿ ಬರವಣಿಗೆ ಮಾಡಿದ ಅವರ ಮೊದಲ ಕವನ ಸಂಕಲನ 'ಇರುತ್ತವೆ' 1975ರಲ್ಲಿ ಪ್ರಕಟವಾಯಿತು. ಮೊದಲು ಡಿ ವಿಜಯಾ ಎಂಬ ಹೆಸರಿನಲ್ಲಿ ಬರೆಯುತ್ತಿದ್ದವರು ಹಲವು 'ವಿಜಯ'ರು ಕನ್ನಡ ಸಾಹಿತ್ಯದಲ್ಲಿ ಬರತೊಡಗಿದ ಬಳಿಕ ವಿಜಯಾ ದಬ್ಬೆ ಎಂದು ಊರಿನ ಹೆಸರನ್ನು ಸೇರಿಸಿಕೊಂಡರು. ನಾಲ್ಕು ಕವನ ಸಂಕಲನ, ಆರು ವಿಮರ್ಶಾ ಬರಹಗಳು, ಮೂರು ಸಂಶೋಧನಾ ಗ್ರಂಥಗಳು, ಮೂರು ಸಂಪಾದಿತ ಕೃತಿಗಳು, ಒಂದು ವ್ಯಕ್ತಿಚಿತ್ರ, ಒಂದು ಪ್ರವಾಸ ಕಥನ, ಎರಡು ಅನುವಾದದ ಹೊತ್ತಗೆಗಳು ಸೇರಿದಂತೆ ಒಟ್ಟು 20 ಪುಸ್ತಕಗಳನ್ನು ಪ್ರಕಟಿಸಿದರು.

ನಾಗಚಂದ್ರನ ಬಗೆಗೆ ಪಿಎಚ್‍ಡಿ ಮಾಡಿದ ವಿಜಯಾ, ನಯಸೇನ ಎಂಬ ಮತ್ತೊಬ್ಬ ಕವಿಯ ಬದುಕು, ಸಾಹಿತ್ಯದ ಬಗೆಗೆ ಸಂಶೋಧನೆ ನಡೆಸಿದರು. ಬಳಿಕ ತಮ್ಮ ಬರವಣಿಗೆಯನ್ನು ಮಹಿಳಾ ಅಸ್ಮಿತೆಯ ವಿವಿಧ ಮಜಲುಗಳ ಶೋಧನೆಗೆ ಮೀಸಲಿಟ್ಟು, ಮಹಿಳಾ ಸಾಹಿತ್ಯ, ವಿಮರ್ಶೆಯ ಕಡೆಗೆ ಗಮನ ಹರಿಸಿದರು. ಕನ್ನಡ ಸಾಹಿತ್ಯ, ಕನ್ನಡ ಮಹಿಳಾ ಸಾಹಿತ್ಯ ವಿಪುಲವಾಗಿದ್ದರೂ, ಮಹಿಳಾ ವಿಮೋಚನೆಯ ಕನಸುಗಳ ದಾರಿ ಬರಹಗಳಲ್ಲಿ ಅನಾವರಣಗೊಂಡಿದ್ದರೂ, ಸ್ತ್ರೀವಾದದ ತಾತ್ವಿಕತೆಯನ್ನು ಸೈದ್ಧಾಂತಿಕವಾಗಿ ಕಟ್ಟುವ ಕೆಲಸ ಆಗಿರಲಿಲ್ಲ. ಈ ಲೋಪ ಗುರುತಿಸಿ ಕ್ರಿಯಾಶೀಲರಾದ ವಿಜಯಾ, ಸಾಹಿತ್ಯವನ್ನು ಹೆಣ್ಣುನೋಟದಿಂದ ಓದಿ, ವಿಮರ್ಶೆ ಮಾಡಿದರು. ಸಂಚಿ ಹೊನ್ನಮ್ಮನಿರಲಿ, ಜನಪದ ಕಥಾನಕಗಳಿರಲಿ, ಮಾಸ್ತಿ-ಚದುರಂಗ-ಕಾರಂತ-ಅನುಪಮಾ ನಿರಂಜನ-ತ್ರಿವೇಣಿಯವರ ಸಾಹಿತ್ಯವಿರಲಿ - ಎಲ್ಲವನ್ನೂ ಮಹಿಳಾ ದೃಷ್ಟಿಕೋನದಿಂದ ಅರ್ಥೈಸುವ, ಸ್ತ್ರೀವಾದಿ ಪರಿಕಲ್ಪನೆಗಳ ಚೌಕಟ್ಟಿನಲ್ಲಿ ವಿಮರ್ಶೆಗೆ ಒಳಪಡಿಸುವ ಹೊಸಮಾರ್ಗದೆಡೆಗೆ ವಿಜಯಾ ತೋರುಬೆರಳಾದರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಧೈರ್ಯವೇ ಮೈವೆತ್ತ ದಾರಿದೀಪ - ಶಾಂತಮ್ಮ

ಮರೆವಿಗೆ ಸರಿದಿದ್ದ ಕನ್ನಡದ ಹಲವು ಲೇಖಕಿಯರನ್ನು ವಿಸ್ಮೃತಿಯ ಪರದೆಯಿಂದೀಚೆಗೆ ತಂದದ್ದು ವಿಜಯಾ ಅವರ ಮತ್ತೊಂದು ಸಾಧನೆ. ಹೆಸರು ಬಿಟ್ಟು ಮತ್ತಾವ ವಿವರಗಳೂ ದೊರಕದ ಮೊದಲ ಬರಹಗಾರ್ತಿಯರ ಬದುಕು, ಬರಹಗಳನ್ನು ಶೋಧಿಸತೊಡಗಿದರು. ಅಂಥವರಲ್ಲಿ ನಂಜನಗೂಡು ತಿರುಮಲಾಂಬಾ, ಸರಸ್ವತಿ ಬಾಯಿ ಗೌಡ, ಶ್ಯಾಮಲಾದೇವಿಯವರ ಬರಹಗಳನ್ನು ಸಂಪಾದಿಸಿ, ವಿವರವಾಗಿ ಪ್ರಸ್ತಾವನೆ ಬರೆದರು.

ಧಾರವಾಡದ ಶ್ಯಾಮಲಾದೇವಿ ವೇಶ್ಯಾಕುಲದ ತಮ್ಮ ಸಂಪ್ರದಾಯ ಮುರಿದು ಮದುವೆಯಾಗಿದ್ದರು. ಮೊದಲು ವರದಿಗಾರ್ತಿಯಾಗಿ, ಬಳಿಕ ಸಂಪಾದಕಿಯಾಗಿ 1940-42ರಲ್ಲಿ 'ಜಯ ಕರ್ನಾಟಕ' ಪತ್ರಿಕೆಯಲ್ಲಿದ್ದರು. ಅಖಿಲ ಭಾರತ ಮಹಿಳಾ ಸಾಹಿತ್ಯ ಪರಿಷತ್ ಸದಸ್ಯೆ, ಮಕ್ಕಳ ಕೂಟದ ನಿರ್ದೇಶಕಿ, ಧಾರವಾಡ ನಗರಸಭಾ ಸದಸ್ಯೆ ಮೊದಲಾಗಿ ಹಲವು ಪಾತ್ರಗಳನ್ನು ನಿಭಾಯಿಸಿದ ಶ್ಯಾಮಲಾ, 43ರ ಹರೆಯದಲ್ಲೇ ಬದುಕು ಮುಗಿಸಿ ನಡೆದುಬಿಟ್ಟರು. ಅವರ ಬಗೆಗೆ ಏನೆಂದರೆ ಏನೂ ವಿವರ ಲಭ್ಯವಿರಲಿಲ್ಲ. ಧಾರವಾಡಕ್ಕೆ ಹೋಗಿ, ಅವರ ಸಮಕಾಲೀನ ಮಹಿಳೆಯರು, ವ್ಯಕ್ತಿಗಳನ್ನು ಕಂಡು, ಪತ್ರಿಕಾ ಕಚೇರಿಗಳನ್ನು ಹೊಕ್ಕು, ಶ್ಯಾಮಲಾರ ಪ್ರಕಟಿತ, ಅಪ್ರಕಟಿತ, ಲಭ್ಯ, ಅಲಭ್ಯ ಬರಹಗಳನ್ನೆಲ್ಲ ಒಂದೆಡೆ ಕಲೆ ಹಾಕಿದ ವಿಜಯಾ, ಅದಕ್ಕೊಂದು ಪ್ರವೇಶಿಕೆ ಬರೆದರು. 1989ರಲ್ಲಿ 'ಶ್ಯಾಮಲಾ ಸಂಚಯ' ಹೊರತಂದರು.

ಹಾಗೆಯೇ, 13 ವರ್ಷ ಓಡಾಡಿ ನಂಜನಗೂಡು ತಿರುಮಲಾಂಬಾರ ಸಾಹಿತ್ಯ ಸಂಗ್ರಹಿಸಿ 'ಹಿತೈಷಿಣಿಯ ಹೆಜ್ಜೆಗಳು' ಎಂಬ ಸಂಪುಟವಾಗಿ ಪ್ರಕಟಿಸಿದರು. 17 ಕಾದಂಬರಿ, ನಾಟಕ, ಪ್ರಬಂಧಗಳನ್ನು ಬರೆದಿದ್ದ ತಿರುಮಲಾಂಬಾ, 'ಕರ್ನಾಟಕ ನಂದಿನಿ,' 'ಸನ್ಮಾರ್ಗದರ್ಶಿ' ಎಂಬ ಪತ್ರಿಕೆಗಳನ್ನು ನಡೆಸಿದ್ದರು. ಅವರ ಬದುಕು, ನಡೆ, ಬರವಣಿಗೆಗಳನ್ನು ಸಂಪುಟದಲ್ಲಿ ದಾಖಲಿಸಿ ವಿಮರ್ಶಾತ್ಮಕ ಪ್ರವೇಶಿಕೆ ಬರೆದರು.

ಅದೇ ರೀತಿ, ಉತ್ತರ ಕರ್ನಾಟಕದ ಸರಸ್ವತಿ ದೇವಿ ಗೌಡ ಎಂಬ ಲೇಖಕಿಯ ಕಾವ್ಯ, ಕತೆ, ನಾಟಕ, ಪ್ರಬಂಧಗಳ ಸಂಕಲನ 'ಸಾರ ಸರಸ್ವತಿ’ 1997ರಲ್ಲಿ ಬಂದಿತು. ಇದಾದ ಬಳಿಕ ಅಂದಿನ ಜನಪ್ರಿಯ ಲೇಖಕಿಯಾಗಿದ್ದ ಅನುಪಮಾ ನಿರಂಜನ ಅವರ ಸಾಹಿತ್ಯ ಕುರಿತು ಬರೆದರು. ನಮ್ಮ ನಡುವಿನ ಜನಪ್ರಿಯ, ಸಫಲ ಲೇಖಕಿಯ ಅದುವರೆಗಿನ ಸಾಹಿತ್ಯವನ್ನು ಆರೋಗ್ಯಕರ ವಿಮರ್ಶೆಗೊಳಪಡಿಸಿ, ಆಕೆಯ ವಿಶೇಷತೆಯನ್ನೂ, ಮಿತಿಗಳನ್ನೂ, ಸಾಧ್ಯತೆಗಳನ್ನೂ ಪ್ರಾಮಾಣಿಕವಾಗಿ ತಿಳಿಸುವುದು ಸಾಧಾರಣ ಸಂಗತಿಯಲ್ಲ. ಈ ಸವಾಲನ್ನು ಸಮರ್ಥವಾಗಿ ವಿಜಯಾ ನಿಭಾಯಿಸಿದರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಹಳ್ಳಿಯತ್ತ ಚಿತ್ತ ನೆಟ್ಟ ಡಾಕ್ಟರ್ ಕಾವೇರಿ ನಂಬೀಶನ್

ಕನ್ನಡದಲ್ಲಿ ಮರೆವಿಗೆ ಸಂದ ಬಹಳಷ್ಟು ಲೇಖಕಿಯರಿದ್ದು, ಅವರ ಬಗೆಗೆ ಏನಾದರೂ ಮಾಡಬೇಕೆಂಬ ಹಂಬಲ ಅವರನ್ನು ಹಗಲಿರುಳೂ ಕಾಡುತ್ತಿತ್ತು. 1960ನೇ ಇಸವಿಗಿಂತ ಮೊದಲಿನ ಲೇಖಕಿಯರ ಸಾಹಿತ್ಯವನ್ನು ಸಂಗ್ರಹಿಸಿ, ವರ್ಗೀಕರಿಸಿ, ಪ್ರಸ್ತಾವನೆ ಬರೆದು ಹತ್ತು ಸಂಪುಟಗಳಲ್ಲಿ ಪ್ರಕಟಿಸುವ ಬೃಹತ್ ಯೋಜನೆ ಹಾಕಿಕೊಂಡರು. ತಮ್ಮ ಜೊತೆಗೆ ಈ ಕೆಲಸ ಮಾಡಲು ಆಸಕ್ತಿ ಇರುವ ಬಳಗವನ್ನು ಗುರುತಿಸಿಕೊಂಡರು. ವಿವಿಧ ಗ್ರಂಥಾಲಯಗಳನ್ನು ಹತ್ತಿಳಿದು, ಕಪಾಟುಗಳ ಧೂಳು ಜಾಡಿಸಿ ಹಳೆಯ ಪುಸ್ತಕಗಳನ್ನು ಪಡೆದು, ಮನೆಗಳ ಖಾಸಗಿ ಗ್ರಂಥಾಲಯವನ್ನೂ ಬಿಡದೆ ಹೊಕ್ಕು, ಸಂಗ್ರಹ ಕಾರ್ಯ ಆರಂಭಿಸಿದರು. ಕೊಡಗಿನ ಗೌರಮ್ಮ, ಶಾಂತಾಬಾಯಿ ನೀಲಗಾರ, ಸರಸ್ವತಿಬಾಯಿ ರಾಜವಾಡೆ, ವಾಸಂತಿಬಾಯಿ ಪಡುಕೋಣೆ, ಮಕ್ಕಳ ಕೂಟದ ಕಲ್ಯಾಣಮ್ಮ ಮೊದಲಾದವರ ಬಗೆಗೆ ಸಾಕಷ್ಟು ವಿವರ ಸಂಗ್ರಹಿಸಿದರು. ತಿರುಮಲಾಂಬಾ ಅವರ 'ಸುಶೀಲೆ' (1913ರಲ್ಲಿ ಪ್ರಕಟಿತ) ಕನ್ನಡದ ಮೊದಲ ಕಾದಂಬರಿ ಅಲ್ಲ; ಬದಲಿಗೆ, ಶಾಂತಾಬಾಯಿ ನೀಲಗಾರ ಅವರ 'ಸದ್ಗುಣಿ ಕೃಷ್ಣಾಬಾಯಿ’ (1908ರಲ್ಲಿ ಪ್ರಕಟಿತ) ಕನ್ನಡದ ಮೊದಲ ಕಾದಂಬರಿ ಎಂದು ಮಾಹಿತಿ ತಿದ್ದುಪಡಿ ಮಾಡಿದರು. ಆದರೆ, ಸಮತಾ ಅಧ್ಯಯನ ಕೇಂದ್ರದ ಚಟುವಟಿಕೆಗಳಲ್ಲಿ ಅನಿವಾರ್ಯವಾಗಿ ತೊಡಗಿಕೊಳ್ಳುವಂತಾದಾಗ ಸಂಪುಟಗಳ ಕೆಲಸ ಹಿಂದೆ ಬಿತ್ತು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುದಾನ ಪ್ರವಾಸ ಸಾಹಿತ್ಯ ಯೋಜನೆಯಡಿ ಒಡಿಶಾ ಹೋಗಿಬಂದು 'ಉರಿಯ ಚಿಗುರ ಉತ್ಕಲೆ' ಎಂಬ ಅನನ್ಯ ಪ್ರವಾಸ ಕಥನ ಬರೆದ ವಿಜಯಾ, ಅನುದಾನದ ಒಂದು ರೂಪಾಯಿಯೂ ವ್ಯರ್ಥವಾಗದಂತೆ ನೋಡಿಕೊಂಡರು. ಪ್ರವಾಸ ಕಥನದಲ್ಲಿರುವ ಒಂದು ಪ್ಯಾರಾ ಅವರ ಆತ್ಮಾವಲೋಕನದ ವ್ಯಕ್ತಿತ್ವವನ್ನು ಕಟ್ಟಿಕೊಡುವಂತಿದೆ. ಬಿಸಿಲಲ್ಲಿ ಸುತ್ತಿ ದಣಿದು ಕೂರಲೊಂದು ಪಾಳುಮಂಟಪ ಕಂಡು ಅದರೆಡೆಗೆ ನಡೆಯುತ್ತಾರೆ. ಅಲ್ಲಾಗಲೇ ಕೆಲವು ದಾರಿಹೋಕರು, ಅಪರಿಚಿತರು ಇರುತ್ತಾರೆ. ಆಗ ವಿಜಯಾ ಬರೆಯುತ್ತಾರೆ: "ಬೈರಾಗಿಣಿಯಾಗಿ ಸುತ್ತುವ ಕನಸ ಮಂಡಿಗೆಯನ್ನು ನಾನೆಷ್ಟೇ ತಿಂದಿದ್ದರೂ, ಅಂಥ ಜೀವನಶೈಲಿಗೆ ನಾನಿನ್ನೂ ಒಗ್ಗಿಕೊಂಡಿರಲಿಲ್ಲ. ಸಾರ್ವಜನಿಕ ಜಾಗದಲ್ಲಿ ಮಲಗುವುದಕ್ಕೆ ಇದ್ದ ಸಂಕೋಚ ಮುರಿಯುವಂಥದಾಗಿರಲಿಲ್ಲ. ಧಗೆಯಲ್ಲಿ ಬೇಯುತ್ತ ಕಣ್ಣೆಳೆಯುತ್ತಿದ್ದರೂ ಸಂಕೋಚದಲ್ಲಿ ಕಂಬ ಒರಗಿ ಕೂತೆ. ಈ ಶಿಷ್ಟಾಚಾರಕ್ಕಿಷ್ಟು ಬೆಂಕಿ ಎನ್ನಿಸಿ ತಣ್ಣನೆಯ ನೆಲಕ್ಕೆ ಬೆನ್ನು ಕೊಟ್ಟೆ."

ಕಂಡದ್ದನ್ನು, ಓದಿದ್ದನ್ನು ತನ್ನ ಪ್ರಜ್ಞೆಯ ಸ್ತರಗಳಿಗೆ ಇಳಿಸಿಕೊಳ್ಳುತ್ತಿದ್ದುದರಿಂದಲೇ ವಿಜಯಾರ ಬರವಣಿಗೆಗೆ ಅಧಿಕೃತತೆ ಒದಗಿಬರುತ್ತಿತ್ತು. ಸ್ತ್ರೀ ಸಂವೇದನೆಯ ಮೂಲಕ ಸ್ತ್ರೀವಾದವನ್ನು ಎತ್ತಿ ತೋರಿಸುತ್ತಿದ್ದುದರಿಂದ ಅದು ಬರಿಯ ತಾತ್ವಿಕ ಪ್ರತಿಪಾದನೆಯಾಗದೆ ಜೀವಂತ ಪ್ರಣಾಳಿಕೆಯಂತೆ ಬರಹಗಳಲ್ಲಿ ಅರಳಿಕೊಂಡಿತು.

ತಮ್ಮ ತಿರುಗಾಟದ ವ್ಯಾಪ್ತಿಯನ್ನು ಹಿಮಾಲಯದ ತನಕ ವಿಸ್ತರಿಸಿ, 1993ರಲ್ಲಿ ಚಾರಣಕ್ಕೆ ಹೋದರು. ಬೆಟ್ಟವೇರುವುದು ರೂಢಿಯಾಗಲೆಂದು ಚಾಮುಂಡಿ ಬೆಟ್ಟವನ್ನು ತಿಂಗಳುಗಟ್ಟಲೆ ಏರಿಳಿದರು. "15,000 ಅಡಿಗಳ ಹಿಮಾಲಯ ಪರ್ವತ ಏರಿ ಬರುವುದರಲ್ಲಿ ಇಲ್ಲಿ ಮೈಸೂರಿನ ಮನೆಯಲ್ಲಿ ತಂದೆ, ಮಗಳು ಪಾತ್ರೆ, ಬಟ್ಟೆಯ ಒಂದು ಪರ್ವತ ಸಿದ್ಧ ಮಾಡಿಟ್ಟಿದ್ದರು," ಎಂದು ಗೇಲಿ ಮಾಡುತ್ತ, ಅಮ್ಮಂದಿರ ತಿರುಗಾಟದ ಸಾಧ್ಯತೆ, ಸವಾಲುಗಳನ್ನು ತೆರೆದಿಟ್ಟರು.

ಸಮತಾ

Image

ವಿಶ್ವದ ಹಲವೆಡೆ ನಡೆದ, ನಡೆಯುತ್ತಿರುವ ಮಹಿಳಾ ಚಳವಳಿ, ಹೋರಾಟಗಳನ್ನು ಗಮನಿಸುತ್ತಿದ್ದ ವಿಜಯಾ, ಸಿ ಜಿ ಮಂಜುಳಾ ಅವರ ಪುಸ್ತಕದ ಮುನ್ನುಡಿಯಲ್ಲಿ ತಮ್ಮ ಅಭಿಪ್ರಾಯವನ್ನು ಹೀಗೆ ದಾಖಲಿಸಿದ್ದಾರೆ:

"ಮಹಿಳಾ ಆಂದೋಲನ ಎನ್ನುವುದು ಒಂದೆರಡು ವಿಷಯಗಳ ಮಾರ್ಪಾಟಿಗಾಗಿ ಕೆಲವು ಕ್ಷಣ ನಡೆಸುವ ಆವೇಶದ ಪ್ರದರ್ಶನವಲ್ಲ. ಬೊಬ್ಬಿರಿಯುವಿಕೆಯಲ್ಲ. ಆಳವಾದ ಹಳೆಯ ಬೇರುಗಳನ್ನು ಕೀಳುವ, ಹೊಸ ಸಸಿಗಳನ್ನು ನೆಟ್ಟು ಬೆಳೆಸುವ ಈ ಕೆಲಸ ಶ್ರಮದಾಯಕವಾದದ್ದು. ಬಣ್ಣರಹಿತವಾದದ್ದು. ಲಕ್ಷಾಂತರ ಜನ ಕೈ ಸೇರಿಸಿ ನೂರಾರು ಮಗ್ಗುಲುಗಳಲ್ಲಿ ಪ್ರೀತಿಯಿಂದ ಮಾಡಬೇಕಾದದ್ದು. ನಾವೆಲ್ಲರೂ ನಮ್ಮ-ನಮ್ಮ ಜಾಗದಿಂದ ನಮ್ಮ-ನಮ್ಮ ಶಕ್ತಿಯಲ್ಲಿ ಈ ಕೆಲಸವನ್ನು ಮಾಡುತ್ತಾ ಹೋಗಬೇಕು."

ನಾವು ಏನು ಹೇಳುತ್ತೇವೆ, ಕೇಳುತ್ತೇವೆ, ಓದುತ್ತೇವೆ, ಬರೆಯುತ್ತೇವೆ ಎನ್ನುವುದು ಎಷ್ಟು ಮುಖ್ಯವೋ ಅದಕ್ಕಿಂತ ನಾವೇನು ಮಾಡುತ್ತಿದ್ದೇವೆ ಎನ್ನುವುದು ಹೆಚ್ಚು ಮುಖ್ಯ. ವಿಜಯಾ ತಾವು ಬರೆದಂತೆ, ಹೇಳಿದಂತೆ ಕೆಲಸದಲ್ಲಿ ತೊಡಗಿಕೊಂಡರು. ಹಲವು ಮಗ್ಗುಲುಗಳಿಂದ ಶಕ್ತಿ ಮೀರಿ ಕೆಲಸ ಮಾಡಿದರು. ಮಹಿಳಾಪರ ಕಾಳಜಿ, ಚಿಂತನೆ, ಸಾಮೂಹಿಕ ಪ್ರಯತ್ನಗಳಲ್ಲಿನ ನಂಬಿಕೆಯ ಫಲವಾಗಿ ಮೈಸೂರಿನ ಸಮತಾ ವೇದಿಕೆ, ಸಮತಾ ಅಧ್ಯಯನ ಕೇಂದ್ರ ಸಂಸ್ಥೆಗಳು ರೂಪು ತಳೆದವು. ಸಮಾನಮನಸ್ಕ ಸಂಗಾತಿಗಳೊಂದಿಗೆ ಆರಂಭದಿಂದಲೂ ಈ ಸಂಸ್ಥೆಗಳಿಗೆ ದುಡಿದರು.

ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಮಹಿಳೆಯರು ಬೆಳೆಯಬೇಕೆಂಬ ಆಶಯದಿಂದ 1978ರಲ್ಲಿ ಆರಂಭವಾದದ್ದು 'ಸಮತಾ ವೇದಿಕೆ.' ನಂತರ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿರುವಾಗಲೇ ಸಂವಾದ, ಚರ್ಚೆ, ವಿಚಾರ ವಿನಿಮಯ, ಅಧ್ಯಯನಗಳ ಮೂಲಕ ಹೆಣ್ಣುಮಕ್ಕಳು ತಮ್ಮ ಪ್ರಜ್ಞೆಯನ್ನು ವಿಸ್ತಾರಗೊಳಿಸಿಕೊಳ್ಳಲೆಂದು 'ಸಮತಾ ಅಧ್ಯಯನ ಕೇಂದ್ರ' ಆರಂಭವಾಯಿತು. ತಮ್ಮ ಅರಿವನ್ನು ಸಮಾಜದಲ್ಲಿ ತೊಡಗಿಸಲು ಈ ವೇದಿಕೆ, ಕೇಂದ್ರ, ತರಗತಿಯ ಕೋಣೆಗಳು ಅವರಿಗೆ ಸಹಾಯ ಮಾಡಿದವು. ಒಮ್ಮೆ ರಿಮ್ಯಾಂಡ್ ಹೋಮಿನಿಂದ ಬಿಡುಗಡೆಯಾದ ಹೆಣ್ಣುಮಗಳು ಸೀದಾ ಕನ್ನಡ ಅಧ್ಯಯನ ಸಂಸ್ಥೆಗೆ ಅವರನ್ನು ಹುಡುಕಿ ಬಂದಳು. ಎಲ್ಲಿ ಹೋಗಲಿ, ಹೇಗೆ ಬದುಕಲಿ ಎಂಬ ಅನಿಶ್ಚಿತತೆಯ ಭಾರದಿಂದ ನಲುಗಿಹೋಗಿದ್ದಳು. ಅಲ್ಲಿದ್ದವರನ್ನೆಲ್ಲ ಸೇರಿಸಿ, ಅವಳ ಸಮಸ್ಯೆ ವಿವರಿಸಿದರು. ಹಾಸಲು, ಹೊದೆಯಲು, ಅಡುಗೆ ಮಾಡಲು ಅವಶ್ಯ ವಸ್ತುಗಳನ್ನು ಕೊಡಿಸಿದರು. ವಿದ್ಯಾರ್ಥಿಗಳಲ್ಲೂ ನೆರವಾಗುವ ಭಾವನೆ ಉದ್ದೀಪಿಸಲು ಎಲ್ಲರೆದುರು ಅವಳಿಗೆ ಮಾರ್ಗದರ್ಶನ ಮಾಡಿದರು. ಇದರಂತಹ ಅನೇಕ ಪ್ರಕರಣಗಳು 'ಶಕ್ತಿಧಾಮ' ಎಂಬ ಮಹಿಳಾ ಪುನರ್ವಸತಿ ಕೇಂದ್ರದ ಆರಂಭಿಕ ರೂಪುರೇಷೆಯನ್ನು ಹಾಕಲು ಅವರ ಸ್ನೇಹಬಳಗಕ್ಕೆ ಪ್ರೇರಣೆ ನೀಡಿದವು. 1999ರಲ್ಲಿ ಕರ್ನಾಟಕ ಲೇಖಕಿಯರ ಸಂಘ ನೀಡುವ ಅನುಪಮಾ ಪ್ರಶಸ್ತಿ ಬಂದಾಗ, 10,000 ರೂಪಾಯಿ ಮೊತ್ತವನ್ನು ಸಮತಾ ಅಧ್ಯಯನ ಕೇಂದ್ರಕ್ಕೆ ನಿವೇಶನ ಪಡೆಯಲು ಬಳಸಿದರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ನಿಜ ಹೇಳಬೇಕೆಂದರೆ...: ನೀನಾ ಗುಪ್ತಾ

ಇಂತಹ ವಿಜಯಾಗೆ ಕಷ್ಟಗಳು ಬಾರದೆ ಇರಲಿಲ್ಲ. ವಿರೋಧಿಗಳು ಇಲ್ಲದಿರಲಿಲ್ಲ. ಒಮ್ಮೆ ಪರೀಕ್ಷಾ ಫಲಿತಾಂಶ ಬಂದ ಬಳಿಕ, ಕಡಿಮೆ ಅಂಕ ಬಂದು ನಪಾಸಾದ ಕೆಲವು ತಿಳಿಗೇಡಿ ವಿದ್ಯಾರ್ಥಿಗಳು ಅವರ ಬಗೆಗೆ ಅಶ್ಲೀಲವಾಗಿ ಗೋಡೆಬರಹ ಮಾಡಿದರು! ಈ ಘಟನೆಯಿಂದ ತುಂಬ ನೊಂದರೂ ವಿಜಯಾ ನಿರ್ಲಿಪ್ತರಾಗಿರಲು ಪ್ರಯತ್ನಿಸಿದ್ದರು. ವಾಸ್ತವವಾಗಿ ಅವರು ಆ ವರ್ಷ ಮೌಲ್ಯಮಾಪನ ಮಾಡಿರಲೇ ಇಲ್ಲ. ಆದರೂ ಅಪಮಾನ ಎದುರಿಸಬೇಕಾಯಿತು. ಅದಾದ ಬಳಿಕ ವಿಶ್ವವಿದ್ಯಾಲಯದ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು, ಬರಹ, ಸಂಘಟನೆಯ ಕೆಲಸದಲ್ಲಿ ತೊಡಗಿಕೊಂಡರು.

ಅನುಪಮಾ ಪ್ರಶಸ್ತಿ ಬಂದ 15 ದಿನಕ್ಕೆ ರಸ್ತೆ ಅಪಘಾತದಲ್ಲಿ ವಿಜಯಾ ತಲೆಗೆ ಗಹನವಾದ ಹೊಡೆತ ಬಿತ್ತು. ಪ್ರಜ್ಞಾಶೂನ್ಯರಾಗಿ ಆಸ್ಪತ್ರೆ ಸೇರಿದ ವಿಜಯಾ, ಕೆಲ ಕಾಲದ ಬಳಿಕ ಪ್ರಜ್ಞೆ ಮರಳಿ ಪಡೆದರು. ಆದರೆ, ನೆನಪಿನ ಶಕ್ತಿ ಸಂಪೂರ್ಣ ಕುಂದಿತ್ತು. ಮಗುವಿನಂತೆ ಮನೆಯವರ ಸಹಾಯದಿಂದ ಮರೆತದ್ದನ್ನು ಮತ್ತೆ ಕಲಿತರು. ಆದರೂ ಅಂದಿನ ವಿಜಯಾ ದಬ್ಬೆ ಮತ್ತೆ ಕಾಣಿಸಲೇ ಇಲ್ಲ ಎನ್ನಬಹುದು.

* * *

ಇವತ್ತಿಗೂ ಬಾಯ್ತುಂಬ ಸಾಮಾಜಿಕ ನ್ಯಾಯದ ಮಾತನಾಡುವ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದ ಗೆಳೆಯರಿಗೆ ಸ್ತ್ರೀವಾದ ಎಂದರೆ ಅನುಮಾನ, ಅಸಹನೆ, ಟೀಕೆ, ಅಸಡ್ಡೆ. ಅಚ್ಚರಿಯೆಂದರೆ, ಮಹಿಳೆಯರಲ್ಲೂ ಈ ಧೋರಣೆಯಿರುವುದು. ಅಂಥವರೆಲ್ಲ ಒಂದು ಜೀವಂತ ಮಾದರಿಗಾಗಿ ವಿಜಯಾ ದಬ್ಬೆಯವರ ಬದುಕು, ಬರಹಗಳತ್ತ ನೋಡಬೇಕು. ಪ್ರಾಮಾಣಿಕತೆ, ವೈಚಾರಿಕತೆ, ದಿಟ್ಟತನ, ಸಾಮೂಹಿಕತೆಯ ಸ್ಫೂರ್ತಿ ಮೈವೆತ್ತಂತಿದ್ದ ವಿಜಯಾ, ಕೌಟುಂಬಿಕ ಮಹಿಳೆ ಸಾಮಾಜಿಕ ಮಹಿಳೆಯಾಗಬೇಕಾದ ಅಗತ್ಯವನ್ನು, ಅಕೆಡೆಮಿಕ್ ಮಹಿಳೆ ಬಡಿವಾರದ ವರ್ಗ ಅಸ್ಮಿತೆ ದಾಟಬೇಕೆನ್ನುವುದನ್ನು, ಬರಹಗಾರ್ತಿಯು ಸಾಮಾಜಿಕ ಕಾರ್ಯಕರ್ತೆಯಾಗಬೇಕಾದ ಅನಿವಾರ್ಯತೆಯನ್ನು ಬದುಕಿ ತೋರಿಸಿದರು.

'ನಾನು ನೀನು ಅವಳು ಇವಳು ಹೆಣ್ಣಾಗಿ ನೊಂದವರು, ಕೈಗೆ ಕೈ ಜೋಡಿಸೋಣ ಹೊಸ ಜಗತ್ತು ನಮ್ಮದು’ ಎಂಬ ಅವರ ಸಾಲುಗಳು - 'ನನ್ನ ನೋವು ನನ್ನದಷ್ಟೇ ಅಲ್ಲ, ಪರಿಹಾರದ ದಾರಿ ನನಗೊಬ್ಬಳಿಗೇ ತೆರೆಯುವುದಿಲ್ಲ. ಲೋಕದ ಒಂದು ಭಾಗ ನಾನು’ ಎಂಬ ವಿಶ್ವಾತ್ಮಕತೆಯ ಸೋದರಿತ್ವವನ್ನು ಹೆಣ್ಣುಜೀವಗಳಲ್ಲಿ ಉದ್ದೀಪಿಸುತ್ತವೆ. 'ಹಿಂಸೆಯಿಲ್ಲದ ಪ್ರೀತಿ ಎಲ್ಲಿದ್ದರೂ ಸರಿ, ಅದ ಹುಡುಕಬೇಕು/ ಸಿಗಲಿ, ಸಿಗದಿರಲಿ, ಶುಭವೆನ್ನಿ, ಶುಭವೆನ್ನಿ," ಎಂದ ವಿಜಯಕ್ಕನ ಚಿಂತನೆಗಳು ದಾರಿ ದಣಿವು ನೀಗುವ ಹಾರೈಕೆಯಂತಿವೆ.

ನಿಮಗೆ ಏನು ಅನ್ನಿಸ್ತು?
8 ವೋಟ್