ಜಾಗರ | ತೇಜಸ್ವಿ ಕಟ್ಟಿಕೊಟ್ಟ ಊರುಗಳು ಮತ್ತು ಸದಾ ಕಾಡುವ ದುರಂತ ಕತೆಗಳು

ಶತಶತಮಾನಗಳಿಂದ ಅಕ್ಷರಜ್ಞಾನ ನಿರಾಕರಿಸಲಾಗಿದ್ದರಿಂದ ಯಾವ ಬಹುಜನ ಪಾತ್ರಗಳು ನಮ್ಮ ಹಿಂದಿನ ಪುರಾಣಗಳಲ್ಲಿ ವಿವರವಾಗಿ ಕಾಣಿಸಿಕೊಳ್ಳುವುದು ಸಾಧ್ಯವಿರಲಿಲ್ಲವೋ ಅಂಥ ಪಾತ್ರಗಳನ್ನು ಅವುಗಳ ಮಾನಸಲೋಕ, ಸಾಮಾಜಿಕ ಸ್ಥಿತಿಗತಿ ಹಾಗೂ ಸಾಂಸ್ಕೃತಿಕ ಆಯಾಮಗಳೊಂದಿಗೆ ಕಡೆದಿಟ್ಟಿರುವುದು ತೇಜಸ್ವಿಯವರ ಬರಹದ ಹೆಗ್ಗಳಿಕೆ

ಕನ್ನಡದ ಕತೆ ಕಾದಂಬರಿಗಳ ಪ್ರಕಾರದಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಇಂದೂ ತಮ್ಮ ಸಮಕಾಲೀನರಿಗಿಂತ ಹೆಚ್ಚು ಪ್ರಸ್ತುತ ಆಗಿರುವುದು ಏಕೆಂದರೆ, ‘ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದಿಂದ ‘ಮಾಯಾಲೋಕ’ದವರೆಗೆ ಅವರು ಹೊಸ ಪುರಾಣವನ್ನು ಸಾಹಿತ್ಯಲೋಕದಲ್ಲಿ ಸೃಷ್ಟಿಸಿದರು. 'ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದಿಂದ ‘ಮಾಯಾಲೋಕ’ದವರೆಗಿನ ಅವರ ರಚನೆಗಳು ‘ಪುರಾಣ ಸದೃಶವಾದ ಒಂದೇ ಕೃತಿ’ ಎಂದು ನಾನು ಪರಿಭಾವಿಸುತ್ತೇನೆ.

Eedina App

ಶತಶತಮಾನಗಳಿಂದ ಅಕ್ಷರಜ್ಞಾನವನ್ನು ನಿರಾಕರಿಸಲಾಗಿದ್ದರಿಂದ ಯಾವ ಬಹುಜನ ಪಾತ್ರಗಳು ನಮ್ಮ ಹಿಂದಿನ ಪುರಾಣಗಳಲ್ಲಿ ವಿವರವಾಗಿ ಕಾಣಿಸಿಕೊಳ್ಳುವುದು ಸಾಧ್ಯವಿರಲಿಲ್ಲವೋ ಅಂಥ ಪಾತ್ರಗಳನ್ನು ಅವುಗಳ ಮಾನಸಲೋಕ, ಸಾಮಾಜಿಕ ಸ್ಥಿತಿಗತಿ ಹಾಗೂ ಸಾಂಸ್ಕೃತಿಕ ಆಯಾಮಗಳೊಂದಿಗೆ ತಮ್ಮ ಕೃತಿಗಳಲ್ಲಿ ಕಡೆದಿಟ್ಟಿದ್ದಾರೆ. ಅವರು ಕಡೆದಿರುವ ಪಾತ್ರಗಳು, ವಿವರಿಸಿರುವ ನಡೆ-ನುಡಿಗಳು ಮತ್ತು ವರ್ಣಿಸಿರುವ ಸನ್ನಿವೇಶಗಳು ಬದುಕಿನ ತಾಜಾತನವನ್ನು ಬಿಂಬಿಸುತ್ತವೆ. ಅವರ ಈ ಕೃತಿಗಳಲ್ಲಿ ಆರೋಗ್ಯಕರ ಹೊಸ ಒಳನೋಟಗಳಿವೆ. ತೇಜಸ್ವಿಯವರು ಹಳೆಯ ಪುರಾಣಗಳನ್ನು ಪುರಾಣದ ಭಾಗಗಳನ್ನು ಭವ್ಯವಾಗಿ ಮತ್ತೆ-ಮತ್ತೆ ಉದ್ದೀಪಿಸುವಂಥ, ಆ ಮೂಲಕ ಯಥಾಸ್ಥಿತಿಯನ್ನು ಪುನರ್ಮಂಡಿಸುವ/ ಪುನರ್ಸ್ಥಾಪಿಸುವ ಕೆಲಸವನ್ನು ಮಾಡಲಿಲ್ಲ. ನೇರವಾಗಿ ಬಹುಜನರ ಬದುಕಿನಲ್ಲಿರುವ ಆಧುನಿಕ ಪುರಾಣವನ್ನು ಓದುಗರಿಗೆ ಎತ್ತಿಕೊಟ್ಟರು. ಈ ದೃಷ್ಟಿಕೋನದ ಹಿನ್ನೆಲೆಯಲ್ಲಿ ನಾನು ಹಿಂದಿನ ಮೂರು ಲೇಖನಗಳಲ್ಲಿ ಮತ್ತು ಈಗ ಎರಡು ಭಾಗಗಳಲ್ಲಿ ಸೂರಾಚಾರಿ, ತುಕ್ಕೋಜಿ, ಬೋಬಣ್ಣನ ಪಾತ್ರಗಳು ಮತ್ತು ಅವರ ದುರಂತ ಕತೆಗಳನ್ನು ಅವಲೋಕಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಅದಕ್ಕೆ ಮುನ್ನ ‘ಹೊಸ ದಿಗಂತದ ಕಡೆಗೆ’ ಎಂಬ ‘ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನಕ್ಕೆ ತೇಜಸ್ವಿಯವರು ಬರೆದಿರುವ ಮುನ್ನುಡಿಯಿಂದ ಕೆಲವು ಮಾತುಗಳನ್ನು ಉಲ್ಲೇಖಿಸಬಯಸುತ್ತೇನೆ:
“ನವ್ಯ ಮಾರ್ಗದ ಸಾಂಕೇತಿಕ ಶೈಲಿ ಮತ್ತು ತಂತ್ರಗಳು ಮೊದಲನೆಯದಾಗಿ ಸಾಹಿತ್ಯದ ಅನೇಕ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಸಾಹಿತಿಗಳಿಗಿರುವ ತಿರಸ್ಕಾರಗಳನ್ನು ತೋರಿಸುತ್ತದೆ. ನಮ್ಮ ರಾಷ್ಟ್ರೀಯ ಉತ್ಪಾದನೆಯ ಬಹುಪಾಲನ್ನು ಉಚ್ಚ ವರ್ಗ ಮತ್ತು ಜಾತಿಗಳೂ, ಮಿಕ್ಕಿದ್ದನ್ನು ಮಧ್ಯಂತರ ವರ್ಗ ಮತ್ತು ಜಾತಿಗಳೂ ತಿಂದುಹಾಕುತ್ತಿರುವುದರಿಂದ ಸಾಕ್ಷರತೆ ನಿರೀಕ್ಷಿತ ಗತಿಯಲ್ಲಿ ವೃದ್ಧಿಸಿಯೇ ಇಲ್ಲ. ಈ ಕಾರಣದಿಂದಲೇ ಭಾರತದ ಗ್ರಾಮಗಳಲ್ಲಿ ಕೇವಲ ಹೆಬ್ಬೆಟ್ಟೊತ್ತುವ ನಿರಕ್ಷರ ಕುಕ್ಷಿಗಳ ಸಮುದಾಯವೊಂದನ್ನು ನಿರ್ಮಾಣ ಮಾಡುತ್ತಿದ್ದೇವೆ. ನಮ್ಮ ವಿದ್ಯಾಭ್ಯಾಸ ಯೋಜನೆಗಳು ಮತ್ತು ವಿದ್ಯಾಭ್ಯಾಸ ಕ್ರಮಗಳೆಲ್ಲವೂ ಸಾಹಿತ್ಯ, ಸಂಸ್ಕೃತಿಯನ್ನು ಕೇವಲ ಮೇಲುಜಾತಿಯವರ ಸ್ವತ್ತಾಗಿಯೇ ಉಳಿಸುವ ಯತ್ನ. ಭಾಷೆ ಮತ್ತು ಸಾಹಿತ್ಯ ಇಂದು ಹೇಗೆ ಉಳ್ಳವರ ಸ್ವತ್ತಾಗತೊಡಗಿದೆಯೆಂದರೆ, ಇನ್ನು ಭಾಷೆಯಲ್ಲಿ ಆಲೋಚನೆ ಮತ್ತು ಅಭಿವ್ಯಕ್ತಿ ಬಯಸುವುದೇ ಮೋಸಗಾರಿಕೆ ಎನ್ನುವಂತೆ ಭಾಸವಾಗತೊಡಗಿದೆ. ಅಂಥದ್ದರಲ್ಲಿ ಸಾಹಿತ್ಯದಲ್ಲೂ ಯಾಂತ್ರಿಕ ಸಾಂಕೇತಿಕೆಯೊಂದನ್ನು ಸಂಪ್ರದಾಯ ಮಾಡಿಕೊಂಡು ಸಹೃದಯ ಸ್ತೋಮವನ್ನು ಆದಷ್ಟು ಸೀಮಿತಗೊಳಿಸುವುದೇ ಸಾಹಿತ್ಯ ರಚನೆಯ ಉದ್ದೇಶಗಳಲ್ಲಿ ಒಂದನ್ನಾಗಿ ಮಾಡಿಕೊಂಡರೆ ಅದು ರೋಗಗ್ರಸ್ತ ಸಮಾಜವೆಂದಷ್ಟೇ ಹೇಳಬಹುದು.”

AV Eye Hospital ad

ಈ ಲೇಖನ ಓದಿದ್ದೀರಾ?: ಜನಪಠ್ಯ | ಅತ್ಯಾಚಾರಕ್ಕೆ ಮುಂದಾದ ಮಠದ ಸ್ವಾಮಿಯನ್ನು ಒನಕೆಯಿಂದ ಕೊಂದ ದಿಟ್ಟ ಮಹಿಳೆ - ಅಯ್ಯನ ಪದ

ಅಂಚಿಗೆ ತಳ್ಳಲ್ಪಟ್ಟು, ಕಡೆಗಣಿಸಲ್ಪಟ್ಟು ಶತಮಾನಗಳಿಂದ ಶೋಷಣೆಗೊಳಗಾದ ಜನರ ನಡುವಿನ ಒಬ್ಬ ವ್ಯಕ್ತಿ ಈವತ್ತಿನ ಅವನತಿಗೊಂಡಿರುವ ರಾಜಕಾರಣದ ಸೋಗಿನ ಮೆರವಣಿಗೆಯಲ್ಲಿ ತಲೆಯ ಮೇಲೆ ಚಡ್ಡಿಗಳನ್ನು ಹೊತ್ತು ನಡೆಯುವ ಇಂದಿನ ಸಂದರ್ಭದಲ್ಲಿ, ತೇಜಸ್ವಿಯವರು 1973ರಲ್ಲಿ ಬರೆದಿರುವ ಈ ಮಾತುಗಳು ಬಹಳ ಪ್ರಸ್ತುತ. ಪ್ರಸ್ತುತ ರಾಜಕಾರಣ ಮಾತ್ರವಲ್ಲ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯಕ್ಕೂ ಈ ಮಾತುಗಳು ಅನ್ವಯಿಸುತ್ತವೆ. ರಾಜಕಾರಣ ಮತ್ತು ಸಾಹಿತ್ಯಕ-ಸಾಂಸ್ಕೃತಿಕ ರಂಗಗಳು ಒಂದೇ ಸಮಾಜದ ಉತ್ಪನ್ನಗಳಲ್ಲವೇ? ಇಂದಿನ ಸಮಾಧಾನಕರ ವಿಷಯವೇನೆಂದರೆ, ಅದೇ ಕಡೆಗಣಿಸಲ್ಪಟ್ಟ, ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯದಿಂದ ಬಂದಿರುವ ಕೆಲವು ಲೇಖಕ-ಲೇಖಕಿಯರು ತೇಜಸ್ವಿಯವರ, ಮೇಲೆ ಉದ್ಧರಿಸಿದ ಆಶಯವನ್ನು ಬಹಳ ಸಹಜವಾಗಿ ಪರಿಣಾಮಕಾರಿಯಾಗಿ ಸಾಧಿಸಿದ್ದಾರೆ, ಸಾಧಿಸುತ್ತಿದ್ದಾರೆ. ಪಕ್ಕದ ತಮಿಳುನಾಡಿನ ಸಿನಿಮಾ ನಿರ್ದೇಶಕರುಗಳನ್ನೂ ಇಲ್ಲಿ ಪರಿಗಣಿಸಬಹುದು.

'ಅವನತಿ’ ಕತೆಯಲ್ಲಿ ಸೂರಾಚಾರಿಯು ಯಾವ ತನ್ನ ಬೆರಳುಗಳಲ್ಲಿ ಚಾಣ, ಉಳಿ ಮತ್ತಿತರ ಸಲಕರಣೆಗಳನ್ನು ಹಿಡಿದು ಸುಂದರ ಶಿಲಾಬಾಲಿಕೆಯರ ಅಂಗಾಂಗಗಳನ್ನು ತಿದ್ದಿ ತೀಡಿ ರೂಪಿಸುತ್ತಿದ್ದನೋ ಅವೇ ಬೆರಳುಗಳಲ್ಲಿ ಸುಟ್ಟ ಅರಿಶಿನ ಕೊಂಬನ್ನು ಹಿಡಿದು ಅದರ ತುದಿಯ ಕೆಂಡದಿಂದ ಶಿಲಾಬಾಲಿಕೆಯಂತೆಯೇ ಇರುವ ಗೌರಿಯ ಮೊಲೆಯ ನೀಲಿ ನರದೊಳಗೆ ಇದೆ ಎಂದು ಅವನು ನಂಬಿರುವ ಹುಳವನ್ನು ಸುಟ್ಟು ಹೊರತೆಗೆಯುವ ಚಿಕಿತ್ಸೆ ನಡೆಸಲು ಸಿದ್ಧನಾಗುವ ಅವನತಿಯನ್ನು ತಲುಪಿದರೆ, ‘ತುಕ್ಕೋಜಿ’ ಕತೆಯ ಮುಖ್ಯ ಪಾತ್ರವಾದ ತುಕ್ಕೋಜಿಯ ಪ್ರತಿಭೆಯ ಅವನತಿ ಇನ್ನೊಂದು ಬಗೆಯದು. ಅವನ ಸಿಂಪಿಗ ಪ್ರತಿಭೆಯು ಕತೆಯ ಆರಂಭದಲ್ಲಿ ಗುರಗಳ್ಳಿಯ ಜನರನ್ನು ಅಭಿರುಚಿವಂತರನ್ನಾಗಿ ಮತ್ತು ಶಿಸ್ತಿನವರನ್ನಾಗಿ ರೂಪಿಸಿದರೆ, ಕೊನೆಕೊನೆಗೆ ತುಕ್ಕು ಹಿಡಿದು ಗುರುಗಳ್ಳಿಯ ಜನರ ಹಾವಭಾವಗಳನ್ನೇ ಕುರೂಪಗೊಳಿಸುತ್ತದೆ. ಕಥಾಸಂಕಲನದ ಹೆಸರಿನ ಕತೆ, ‘ಅಬಚೂರಿನ ಪೋಸ್ಟಾಫೀಸು’ ಕತೆಯ ಮುಖ್ಯ ಪಾತ್ರ, ಬೋಬಣ್ಣನ ಅವನತಿ ಮತ್ತೊಂದು ಬಗೆಯದು. ಸಾಧಾರಣ ಮನುಷ್ಯನಂತೆ ಹೆಂಡತಿ, ಮಕ್ಕಳೊಂದಿಗೆ ಜೊತೆಯಲ್ಲಿ ಬದುಕುತ್ತಿದ್ದ ಬೋಬಣ್ಣ, ಊರಿಗೆ ಬಂದ ಹೊಸ ಪೋಸ್ಟಾಫೀಸಿನ ಪೋಸ್ಟ್ ಮಾಸ್ತರನಾಗಿ ನೇಮಕವಾದದ್ದೇ ನಿಧಾನಕ್ಕೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಪತನ ಹೊಂದುತ್ತಾನೆ.

ಹಳೇಬೀಡಿನ ಕಡೆಯಿಂದ ಇಸ್ಲಾಪುರಕ್ಕೆ ಅಲ್ಲಿ ಕಟ್ಟುವ ಈಶ್ವರ ದೇವಸ್ಥಾನದ ಶಿಲ್ಪ ಕೆಲಸವನ್ನು ವಹಿಸಿಕೊಳ್ಳುವ ಆಸೆಯಿಂದ ಬಂದಿದ್ದ ಸೂರಾಚಾರಿ, ಇಸ್ಲಾಪುರದ ಅಸಡ್ಡಾಳ ಬದುಕಿನ ವಿಧಾನ ಮತ್ತು ಧೋರಣೆಗಳ ಭಾಗವಾಗಿಬಿಡುತ್ತಾನೆ. ದೇವಸ್ಥಾನದ ಪೂಜಾರಿಗಳಾಗಬೇಕಿದ್ದ ಶಂಕರ ಭಟ್ಟರು ದೇವಸ್ಥಾನ ನಿರ್ಮಾಣಕ್ಕಾಗಿ ಶೇಖರವಾಗಿದ್ದ ದುಡ್ಡನ್ನು ತಿಂದುಹಾಕಿ, ಮರಳಿ ಉಡುಪಿಗೆ ಓಡಿಹೋಗಿದ್ದರಿಂದ ಇವನಿಗೆ ಕೆಲಸವಿಲ್ಲದಂತಾಗುತ್ತದೆ.

ತನ್ನ ದೂರದ ಸಂಬಂಧಿ ವಾಸಾಚಾರಿಯ ಮನೆಯಲ್ಲಿ ತಾತ್ಕಾಲಿಕವಾಗಿ ತಂಗಿದ್ದವನಿಗೆ ವಾಸಾಚಾರಿ ತನ್ನ ಮಗಳನ್ನು ಕಟ್ಟಿಬಿಡುತ್ತಾನೆ. ವಾಸಾಚಾರಿ ಬದುಕಿರುವವರೆಗೂ ಸೂರಾಚಾರಿ ತನ್ನ ಮನೆ ಅಳಿಯನಾಗಿರಬೇಕು ಎಂಬ ಕರಾರನ್ನು ಹಾಕಿರುತ್ತಾನೆ. ‘ಅಬಚೂರಿನ ಪೋಸ್ಟಾಫೀಸು’ ಕತೆಯ ಬೋಬಣ್ಣನಿಗೂ ಮಾಚಮ್ಮ ಮನೆ ಅಳಿಯನಾಗಿ ಇರಬೇಕೆಂಬ ಕರಾರು ಹಾಕಿ ತನ್ನ ಮಗಳಿಗೆ ಮದುವೆ ಮಾಡಿಕೊಳ್ಳುತ್ತಾಳೆ. ಈ ಇಬ್ಬರೂ ಹಿರಿಯರಿಗೆ - ಮಗಳು ಗಂಡನ ಹಿಂದೆ ಹೋಗಿಬಿಡಬಹುದು, ವಯಸ್ಸಾದ ಕಾಲಕ್ಕೆ ತಮ್ಮನ್ನು ನೋಡಿಕೊಳ್ಳುವವರು ಯಾರೂ ಇರದಂತಾಗಿಬಿಡುತ್ತದೆ ಎಂಬ ಅಭದ್ರತೆ. ಮಾಚಮ್ಮನ ಅಭದ್ರತೆಯು ಕುತ್ಸಿತತೆ ಬೆರೆತುಕೊಂಡು ತನ್ನ ಮಗಳು ಕಾವೇರಿಯ, ಇಬ್ಬರು ಮೊಮ್ಮಕ್ಕಳ ಮತ್ತು ವಿಶೇಷವಾಗಿ ಅಳಿಯ ಬೋಬಣ್ಣನ ದುರಂತವನ್ನು ಸಾಧಿಸುತ್ತದೆ. ವಾಸಾಚಾರಿಯ ಅಭದ್ರತೆಯು ನೇರವಾಗಿ ಸೂರಾಚಾರಿಯು ಅಧಃಪತನ ತಲುಪುವುದಕ್ಕೆ ಕಾರಣವಲ್ಲ. ಆದರೆ, ಅವನ ಕರಾರು, ಅಳಿಯ ಸೂರಾಚಾರಿಯನ್ನು ಇಸ್ಲಾಪುರದ ಗೋಜಲುಗಳಿಂದ ಬಿಡಿಸಿಕೊಳ್ಳಲಾಗದಂತೆ ಕಟ್ಟಿಹಾಕಿಬಿಡುತ್ತದೆ. ಪ್ರತಿಭಾವಂತ ಶಿಲ್ಪಿಯ ಪ್ರತಿಭೆಯು, ಸವೆದುಹೋದ ಒರಳುಕಲ್ಲುಗಳಿಗೆ ಉಳಿ ಹಾಕಿ ಕೊಡುವ, ಉಗ್ರದೇವತೆಗಳ, ಮಾರಿಗೊಂಬೆಗಳ ಅಕರಾಳ-ವಿಕರಾಳ ಮೂರ್ತಿಗಳನ್ನು ಮಾಡುವ, ಮಂತ್ರ-ತಂತ್ರ ಹಾಕುವ ತಾಯಿತ ಕೊಡುವ, ಮದ್ದು ತೆಗೆಯುವ ಮುಂತಾದ ಕಸುಬುಗಳನ್ನು ಮಾಡುವವನಾಗಿಬಿಡುತ್ತಾನೆ.

ಈ ಲೇಖನ ಓದಿದ್ದೀರಾ?: ಗಾಯ ಗಾರುಡಿ | ಊರಿನಲ್ಲಿ ಬೈಗುಳವಾಗಿದ್ದ ಜಾತಿಯ ಹೆಸರೊಂದು ಹೋರಾಟದಲ್ಲಿ ಆತ್ಮಾಭಿಮಾನವಾದ ಕತೆ

ಅದು ಸೂರಾಚಾರಿಯ ಅವನತಿ ಮಾತ್ರವಲ್ಲ, ಸುತ್ತಮುತ್ತಲ ಹಳ್ಳಿಗಳು ತಲುಪಿರುವ ಸಾರಾಸಗಟು ಅವನತಿ. ಹುಟ್ಟಿದ ಕೆಲವೇ ದಿನಗಳಿಗೆ ಸಾಯುವ ಮಕ್ಕಳಿಗೆ ಸಂಬಂಧಿಸಿದ ದೋಷ ತನ್ನಲ್ಲಿಲ್ಲ ಎಂದು  ಸಾಬೀತು ಮಾಡುವುದಕ್ಕಾಗಿ ತನ್ನ ಹೆಂಡತಿ ಗೌರಿಗೆ ಅಪಮಾನ ಮಾಡುವಂಥ ಮತ್ತು ಅಮಾನುಷವಾದ ಚಿಕಿತ್ಸೆ ಕೊಡಿಸಲು ಉತ್ಸಾಹಿತನಾಗಿರುವ ಕೆಳಮನೆ ಸುಬ್ಬಯ್ಯ, ಔಚಿತ್ಯರಹಿತ ಪರಿಜ್ಞಾನವಿಲ್ಲದೆ ಮಗು ಕಳೆದುಕೊಂಡಿರುವ ಎಳೆ ಬಾಣಂತಿ ಸೊಸೆಯ ಮೊಲೆಹಾಲನ್ನು ತನ್ನ ಕಣ್ಣಿನ ಚಿಕಿತ್ಸೆಗೆಂದು ವಸೂಲಿ ಮಾಡುವ ಸುಬ್ಬಯ್ಯನ ಅಪ್ಪ ಬೈರಪ್ಪ, ದಿಡ್ಡಿಗಡಿಯನ್ನು ದಾಟುತ್ತಿದ್ದಂತೆಯೇ ದೆವ್ವ ಮೆಟ್ಟಿಕೊಳ್ಳುವ ಸೂರಾಚಾರಿಯ ಹೆಂಡತಿ ಯಶೋದೆ, ಸೂರಾಚಾರಿಯ ಜೊತೆ ಸೇರಿಕೊಂಡು ಯಶೋದೆಯನ್ನು ನವೆದುಹೋಗುವಂತೆ ಭೂತೋಚ್ಛಾಟನಾ ವಿಧಾನಗಳನ್ನು ಕೈಗೊಳ್ಳುವ ಅಜಮೀರಿನ ಫಕೀರಪ್ಪ, ಚೌಕದೊಳಗೆ ಕೈಬೆರಳುಗಳ ಮೂಲಕ ಎತ್ತಿನ ವ್ಯಾಪಾರದ ಚೌಕಾಸಿಯ ಸಂಪ್ರದಾಯ, ಇತ್ಯಾದಿಗಳ ಸಂಕೀರ್ಣ ಪರಿಣಾಮವೇ ‘ಅವನತಿ’.

ಹೀಗೆ, ಇಸ್ಲಾಪುರ ಮತ್ತು ಅಕ್ಕಪಕ್ಕದ ಹಳ್ಳಿಗಳ ಜೀವನಕ್ರಮಗಳು ಮತ್ತು ಆ ಜನರ ನಡಾವಳಿಗಳು ಸೂರಾಚಾರಿಯನ್ನು ‘ಅವನತಿ’ ಕತೆಯಲ್ಲಿ ಅಡರಿಕೊಂಡರೆ, ‘ಅಬಚೂರಿನ ಪೋಸ್ಟಾಫೀಸು’ ಕತೆಯಲ್ಲಿ ಅಂಚೆ ಮೂಲಕ ಬರುವ ಒಂದು ಅರೆನಗ್ನ ಸುಂದರಿಯ ಫೋಟೋ, ಮಾಚಮ್ಮನ ಕುತ್ಸಿತತೆ, ಊರಜನರ ಸಣ್ಣತನಗಳು ಹಾಗೂ ಅಮಾಯಕತೆ ಬೋಬಣ್ಣನ ದುರಂತಕ್ಕೆ ಕಾರಣವಾಗುತ್ತದೆ. ‘ತುಕ್ಕೋಜಿ’ಯ ತುಕ್ಕೋಜಿಯ ಬದುಕಿನ ಸಮಸ್ಯೆಗಳು ಸೂರಾಚಾರಿ ಮತ್ತು ಬೋಬಣ್ಣನವರಂತೆ ಸಾಮಾಜಿಕ ಕಾರಣಗಳಿಗೆ ಬದಲಾಗಿ, ಗಂಡ-ಹೆಂಡತಿಯ ನಡುವೆ ಹುಟ್ಟಿಕೊಳ್ಳುವ ಅಕಾರಣ ವೈಷಮ್ಯದಿಂದಾಗಿ ಹುಟ್ಟಿಕೊಳ್ಳುತ್ತವೆ. ಮುಂದಿನ ಲೇಖನದಲ್ಲಿ ಬೋಬಣ್ಣನ ದುರಂತ ಮತ್ತು ತುಕ್ಕೋಜಿಯ ಬವಣೆಗಳನ್ನು ನೋಡೋಣ.

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
2 ವೋಟ್
eedina app