ಅರ್ಥ ಪಥ | ಢಾಕಾದ ಖಾದರ್ ಮಿಯಾ ಮತ್ತು ದೆಹಲಿಯ ಹಿಂದು ವ್ಯಾಪಾರಿ

AMR Eedina

ಆರ್ಥಿಕ ಬೆಳವಣಿಗೆಗೂ ಮನುಷ್ಯತ್ವಕ್ಕೂ ನೇರ ಸಂಬಂಧ ಇದೆ ಎಂಬುದು ನಿರ್ವಿವಾದ. ಈ ಸೂಕ್ಷ್ಮದ ಕುರಿತು ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್, ಮನಮೋಹನ್ ಸಿಂಗ್, ರಘುರಾಂ ರಾಜನ್ ಅವರು ಬೇರೆ-ಬೇರೆ ಸಂದರ್ಭದಲ್ಲಿ ಆಡಿದ ಮಾತುಗಳ ಗುಚ್ಛ ಇಲ್ಲುಂಟು. ಈ ಮೂವರೂ ಒಕ್ಕೊರಲಿನಿಂದ ಹೇಳಹೊರಟದ್ದನ್ನು ಕಾಣುವ ಮನಸ್ಥಿತಿ ಈ ಹೊತ್ತಿನ ತುರ್ತು

“ನಾನು ಢಾಕಾದಲ್ಲಿ ನಮ್ಮ ಮನೆಯ ತೋಟದಲ್ಲಿ ಒಂದು ಮಧ್ಯಾಹ್ನ ಆಡುತ್ತಿದ್ದೆ. ಈಗ ಢಾಕಾ ಬಾಂಗ್ಲಾದೇಶದ ರಾಜಧಾನಿ. ನನಗಾಗ ಹತ್ತು ವರ್ಷವಿದ್ದಿರಬಹುದು. ಒಬ್ಬ ಮನುಷ್ಯ ಕರುಣಾಜನಕವಾಗಿ ಅಳುತ್ತ ಓಡಿಬಂದ. ರಕ್ತ ಸುರಿಯುತ್ತಿತ್ತು. ಯಾರೋ ಅವನ ಬೆನ್ನನ್ನು ಚಾಕುವಿನಿಂದ ಇರಿದಿದ್ದರು. ಅದು ಕೋಮುಗಲಭೆಗಳ ಕಾಲ. ಈ ಘಟನೆ ನಡೆದದ್ದು ಸ್ವಾತಂತ್ರ್ಯಪೂರ್ವದಲ್ಲಿ; ಭಾರತ-ಪಾಕಿಸ್ತಾನ ವಿಭಜನೆಗೆ ಮೊದಲು. ಇರಿತಕ್ಕೆ ಒಳಗಾದ ಮನುಷ್ಯನ ಹೆಸರು ಖಾದರ್ ಮಿಯಾ. ದಿನಗೂಲಿ ಮಾಡಿ ಜೀವನ ನಡೆಸುತ್ತಿದ್ದ ಒಬ್ಬ ಮುಸಲ್ಮಾನ. ಸಿಗುತ್ತಿದ್ದ ಪುಡಿಗಾಸಿಗೆ ನೆರೆಹೊರೆಯ ಮನೆಗಳಲ್ಲಿ ಕೆಲಸ ಮಾಡಲು ಬರಲೇಬೇಕಾಗಿದ್ದ ಪರಿಸ್ಥಿತಿ. ಹೀಗೆ ಕೆಲಸ ಹುಡುಕಿ ಬರುತ್ತಿದ್ದಾಗ ಹಿಂದುಗಳೇ ಹೆಚ್ಚಾಗಿದ್ದ ನಮ್ಮ ಬಡಾವಣೆಯಲ್ಲಿ ಯಾರೋ ಕೋಮುವಾದಿ ದುರುಳರು ಅವನನ್ನು ಇರಿದಿದ್ದರು. ನಾನು ಅವನಿಗೆ ನೀರು ಕೊಟ್ಟೆ. ಹಾಗೆಯೇ ಸಹಾಯಕ್ಕಾಗಿ ಮನೆಯೊಳಗಿದ್ದ ದೊಡ್ಡವರನ್ನು ಕೂಗಿ ಕರೆದೆ. ನಮ್ಮ ತಂದೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಗಲಭೆಯ ಸಮಯದಲ್ಲಿ ದ್ವೇಷಿಸುವವರೇ ಹೆಚ್ಚಾಗಿ ಇರುವ ಬಡಾವಣೆಗೆ ಹೋಗಬೇಡ ಎಂದು ಅವನ ಹೆಂಡತಿ ಹೇಳುತ್ತಿದ್ದಳು ಎನ್ನುವ ಮಾತನ್ನು ಆಸ್ಪತ್ರೆಗೆ ಹೋಗುವಾಗ ನಮ್ಮ ತಂದೆಗೆ ಅವನು ಪದೇ-ಪದೇ ಹೇಳುತ್ತಿದ್ದನಂತೆ. ಆದರೆ, ಖಾದಿರ್ ಮಿಯಾ ಕೆಲಸ ಹುಡುಕಿಕೊಂಡು ಹೊರಗೆ ಹೋಗಲೇಬೇಕಿತ್ತು. ಒಂದಿಷ್ಟು ಸಂಪಾದಿಸಲೇಬೇಕಿತ್ತು. ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ.  ಇಂತಹ ಆರ್ಥಿಕ ಅ-ಸ್ವಾತಂತ್ರ್ಯದಿಂದಾಗಿ ಅವನ ಜೀವವೇ ಹೋಯಿತು. ಅವನು ಆಸ್ಪತ್ರೆಯಲ್ಲಿ ಅಸುನೀಗಿದ...”

- ತಮ್ಮನ್ನು ತುಂಬಾ ಕಲಕಿದ ಈ ಘಟನೆಯನ್ನು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಸುಮಾರು ಕಡೆ ಉಲ್ಲೇಖಿಸಿದ್ದಾರೆ. ಬಡತನದಿಂದಾಗಿ ಮಿಯಾ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಂಡ. ಪಾಪ... ಸುರಕ್ಷಿತವಲ್ಲದ ಸ್ಥಳದಲ್ಲೂ ಕೆಲಸ ಮಾಡಲೇಬೇಕಾದ ಪರಿಸ್ಥಿತಿ ಅವನದು. ಸೇನ್ ಹೇಳುವಂತೆ, "ಬಡತನದ ರೂಪದಲ್ಲಿ ವ್ಯಕ್ತವಾಗುವ ಆರ್ಥಿಕ ಅ-ಸ್ವಾತಂತ್ರ್ಯ*ದಿಂದ ಮನುಷ್ಯನು ಇನ್ನುಳಿದ ಸ್ವಾತಂತ್ರ್ಯಗಳನ್ನೂ ಕಳೆದುಕೊಳ್ಳುತ್ತಾನೆ. ಖಾದರ್ ಮಿಯಾನ ಕುಟುಂಬಕ್ಕೆ ಕೂಲಿಗೆ ಹೋಗದೆ, ಹಾಗೆಯೇ ಬದುಕಲು ಸಾಧ್ಯವಾಗಿದ್ದಿದ್ದರೆ, ಅಂತಹ ಭಯಾನಕ ಹೊತ್ತಿನಲ್ಲಿ ಚೂರುಪಾರು ಸಂಪಾದಿಸಲು ತಮ್ಮನ್ನು ದ್ವೇಷಿಸುವ ಜನರಿರುವ ಬಡಾವಣೆಗೆ ಹೋಗಬೇಕಾಗುತ್ತಿರಲಿಲ್ಲ. ಆರ್ಥಿಕ ಅ-ಸ್ವಾತಂತ್ರ್ಯವು ಸಾಮಾಜಿಕ ಅ-ಸ್ವಾತಂತ್ರ್ಯವನ್ನು ಸೃಷ್ಟಿಸುತ್ತದೆ. ಹಾಗೆಯೇ, ಸಾಮಾಜಿಕ ಅಥವಾ ರಾಜಕೀಯ ಅ-ಸ್ವಾತಂತ್ರ್ಯಗಳು ಕೂಡ ಆರ್ಥಿಕ ಅ-ಸ್ವಾತಂತ್ರ್ಯಕ್ಕೆ ಕಾರಣವಾಗುತ್ತವೆ.”

Amarthya Sen 2
ಅಮರ್ತ್ಯ ಸೇನ್

ಅಭಿವೃದ್ಧಿ ಎನ್ನುವುದನ್ನು ಜನರು ಅನುಭವಿಸುತ್ತಿರುವ ನಿಜವಾದ ಸ್ವಾತಂತ್ರ್ಯವನ್ನು ಮತ್ತಷ್ಟು ವಿಸ್ತರಿಸುವ ಪ್ರಕ್ರಿಯೆಯಾಗಿ ನೋಡುತ್ತಾರೆ ಸೇನ್. ಸಾಮಾನ್ಯವಾಗಿ ಅಭಿವೃದ್ಧಿ ಎನ್ನುವುದನ್ನು ನಿವ್ವಳ ರಾಷ್ಟ್ರೀಯ ಉತ್ಪನ್ನ ಅಥವಾ ವೈಯಕ್ತಿಕ ವರಮಾನದ ಹೆಚ್ಚಳ ಅಥವಾ ಕೈಗಾರಿಕೀಕರಣ ಅಥವಾ ತಾಂತ್ರಿಕ ಬೆಳವಣಿಗೆ, ಇಲ್ಲವೇ ಸಾಮಾಜಿಕ ಆಧುನೀಕರಣ ಇವುಗಳೊಂದಿಗೆ ಸಮೀಕರಿಸಿ ನೋಡಲಾಗುತ್ತದೆ. ಆದರೆ, ಸೇನ್ ಅವರು, ಮಾನವ ಸ್ವಾತಂತ್ರ್ಯವನ್ನೇ ಕೇಂದ್ರವಾಗಿಟ್ಟುಕೊಂಡು ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಇಂತಹ ಒಂದು ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು, ಹಿಂಸೆ ಮಾಮೂಲಿ ಆಗಿಬಿಟ್ಟಿರುವ ಇಂದಿನ ಸಂದರ್ಭದಲ್ಲಿ ತುಂಬಾ ಮುಖ್ಯ.

AV Eye Hospital ad

ರಘುರಾಂ ರಾಜನ್ ಇತ್ತೀಚೆಗೆ ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಾಳಿಗಳ ಬಗ್ಗೆ ಇನ್ನೊಂದು ರೀತಿಯ ಆತಂಕವನ್ನು ವ್ಯಕ್ತಪಡಿಸುತ್ತಾರೆ. "ಭಾರತ ‘ಅಲ್ಪಸಂಖ್ಯಾತರ ವಿರೋಧಿ’ ದೇಶ ಅನ್ನುವ ಭಾವನೆ ಮೂಡಿಬಿಟ್ಟರೆ, ಭಾರತದ ಉತ್ಪನ್ನಗಳು ಮಾರುಕಟ್ಟೆ ಕಳೆದುಕೊಳ್ಳುತ್ತವೆ," ಎಂಬುದು ಅವರ ಮಾತು.

“ಇಂಡಿಯಾ ಅಲ್ಪಸಂಖ್ಯಾತರನ್ನು ಗೌರವಿಸುತ್ತದೆ ಅನ್ನುವ ಭಾವನೆ ತುಂಬಾ ಮುಖ್ಯ. ಆಗಷ್ಟೇ ವ್ಯಾಪಾರದ ವಿಷಯದಲ್ಲಿ ಭಾರತ ವಿಶ್ವಾಸಾರ್ಹ ಪಾಲುದಾರ ಮತ್ತು ಅಲ್ಲಿ ಬಂಡವಾಳ ಹೂಡಬಹುದು ಅಂತ ಜಗತ್ತು ಭಾವಿಸುತ್ತದೆ. ಚೀನಾ ಕೂಡ ಅಲ್ಪಸಂಖ್ಯಾತರನ್ನು, ಅದರಲ್ಲೂ ಟಿಬೇಟಿಯನ್ನರನ್ನು ನಡೆಸಿಕೊಂಡ ರೀತಿಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದೆ. ನಾವು ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಂಡರೆ, ನಮ್ಮ ದೇಶದ ಬಗ್ಗೆ ಜಗತ್ತಿನಲ್ಲಿ ಬೇರೆಯದೇ ಆದ ಚಿತ್ರ ಮೂಡುತ್ತದೆ. ಅದು ಬೇರೆ ದೇಶದ ಬಳಕೆದಾರರಿಗೆ ಮಾತ್ರವಲ್ಲ, ಬೇರೆ ಸರ್ಕಾರಗಳಿಗೂ ನಮ್ಮ ದೇಶವನ್ನು ಪಾಲುದಾರನಾಗಿ ನಂಬಬಹುದೇ, ನಮ್ಮ ಜೊತೆ ಭಾರತ ನಿಲ್ಲುತ್ತದೆಯೇ ಎಂಬ ಅನುಮಾನವನ್ನು ಸೃಷ್ಟಿಸುತ್ತದೆ,” ಎಂದಿದ್ದಾರೆ ರಾಜನ್.

Raghuram Rajan 2
ರಘುರಾಂ ರಾಜನ್

“ಈಗ ಉಕ್ರೇನ್ ಬಗ್ಗೆ ಇರುವ ಚಿತ್ರ ನೋಡಿ. ಉಕ್ರೇನಿಗೆ ಯಾಕೆ ಇಷ್ಟೊಂದು ನೆರವು ಹೋಗುತ್ತಿದೆ? ಜೆಲೆನ್ಸಿಕಿ ಪ್ರಜಾಸತ್ತೆಯ ಪ್ರತಿನಿಧಿಯಾಗಿ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಧೈರ್ಯವಾಗಿ ಹೋರಾಡುತ್ತಿರುವ ವ್ಯಕ್ತಿಯಾಗಿ ಬಿಂಬಿತವಾಗಿರುವುದು ಅದಕ್ಕೆ ಬಹುಮಟ್ಟಿಗೆ ಕಾರಣ. ಇದಕ್ಕಿಂತ ಹಿಂದಿನ ಉಕ್ರೇನಿನ ವಾಸ್ತವವನ್ನು ಮರೆತುಬಿಡಿ. ಉಕ್ರೇನಿನ ಒಳಗೇ ಭ್ರಷ್ಟಾಚಾರ, ಸರ್ವಾಧಿಕಾರ ಪ್ರವೃತ್ತಿ ಇತ್ಯಾದಿಗಳೆಲ್ಲವೂ ಇದ್ದವು. ಆದರೆ ಈಗ, ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಆಡಳಿತ ಹೊಂದಿರುವ ಎಲ್ಲ ರಾಷ್ಟ್ರಗಳೂ ಅದರೊಂದಿಗೆ ಸೇರಿಕೊಳ್ಳಲು ತಯಾರಿವೆ. ಇದರಲ್ಲಿ ಕೇವಲ ಪಾಶ್ಚಾತ್ಯ ರಾಷ್ಟಗಳು ಮಾತ್ರವಲ್ಲದೆ, ಜಪಾನ್, ಕೊರಿಯಾ ಇತ್ಯಾದಿ ದೇಶಗಳೂ ಕೈಜೋಡಿಸಲು ತಯಾರಿವೆ. ಅದರ ಬಗ್ಗೆ ಮೂಡಿರುವ ಸಾರ್ವಜನಿಕ ಗ್ರಹಿಕೆ ತುಂಬಾ ಮುಖ್ಯ. ಭಾರತಕ್ಕೂ ಅದಿತ್ತು. ಈಗ ಕಳೆದುಕೊಳ್ಳುತ್ತಿದ್ದೇವೆ. ನಾವು ತುಂಬಾ ಎಚ್ಚರದಿಂದಿರಬೇಕು," ಎಂಬುದು ರಾಜನ್ ಕಿವಿಮಾತು.

“ನಮ್ಮದು ಪ್ರಜಾಸತ್ತಾತ್ಮಕ ರಾಷ್ಟ್ರ, ನಮ್ಮಲ್ಲಿ ಪ್ರಜೆಗಳನ್ನು ಗೌರವದಿಂದ ನೋಡಲಾಗುತ್ತದೆ ಅನ್ನುವ ಭಾವನೆ ವಿಶ್ವದಲ್ಲೆಲ್ಲೆಡೆ ಬೆಳೆಯಬೇಕು. ಜೊತೆಗೆ, ನಮ್ಮದು ಸಾಪೇಕ್ಷವಾಗಿ ಬಡದೇಶವಾಗಿದ್ದರೆ ಜಗತ್ತು ನಮ್ಮ ದೇಶವನ್ನು ಅನುಕಂಪದಿಂದ ನೋಡುತ್ತದೆ. ‘ನಾನು ನ್ಯಾಯುತವಾಗಿ ನಡೆದುಕೊಳ್ಳಲು ಪ್ರಯತ್ನಿಸುತ್ತಿರುವ ದೇಶದಿಂದ ಸರಕುಗಳನ್ನು ಕೊಳ್ಳುತ್ತಿದ್ದೇನೆ’ ಅನ್ನುವ ಭಾವನೆ ಅಲ್ಲಿಯ ಬಳಕೆದಾರರಲ್ಲಿ ಮೂಡುತ್ತದೆ. ಹಾಗಾಗಿ, ಮಾರುಕಟ್ಟೆ ಬೆಳೆಯುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ, ಈ ದೇಶ ಸರ್ವಾಧಿಕಾರಿಗಳನ್ನು ಬೆಂಬಲಿಸುತ್ತದೆ, ಈ ದೇಶ ತನ್ನ ಅಲ್ಪಸಂಖ್ಯಾತರನ್ನು ದಮನಿಸುತ್ತದೆ ಇತ್ಯಾದಿ, ಇತ್ಯಾದಿ ವಿಷಯಗಳನ್ನೇ ನಮ್ಮ ದೇಶದ ಬಗ್ಗೆ ದಿನವೂ ಓದುತ್ತಿದ್ದರೆ ತೊಂದರೆಯಾಗುತ್ತದೆ. ನಮ್ಮ ದೇಶದ ಬಗ್ಗೆ ಹೀಗೆ ಮಾತನಾಡುತ್ತಿರುವುದು ಕೇವಲ 'ನ್ಯೂಯಾರ್ಕ್ ಟೈಮ್ಸ್' ಮತ್ತು 'ಎಕನಾಮಿಸ್ಟ್' ಪತ್ರಿಕೆಗಳು ಮಾತ್ರವಲ್ಲ, ಒಂದು ದೊಡ್ಡ ಜನರ ಗುಂಪೇ ಮಾತನಾಡುತ್ತಿದೆ. ಜೊತೆಗೆ, ಈ ದೇಶ ಉಳಿದ ಸರ್ವಾಧಿಕಾರಿ ದೇಶಗಳಂತೆ ಎಷ್ಟು ಜನ ಸತ್ತರು ಅನ್ನೋ ಮಾಹಿತಿಯನ್ನು ಮುಚ್ಚಿಡುತ್ತೆ ಎಂಬಂತಹ ಒಂದೊಂದೇ ದನಿ ಸೇರಿಕೊಂಡು, ನಮ್ಮ ಬಗ್ಗೆ ಬೇಡದ ಒಂದು ಚಿತ್ರವನ್ನು ಜಗತ್ತಿಗೆ ಕಟ್ಟಿಕೊಡುತ್ತವೆ,” ಎಂದು ರಾಜನ್ ವಿವರಿಸಿದ್ದಾರೆ.

ಇದನ್ನು ಓದಿದ್ದೀರಾ?: ಕಾಲದಾರಿ | ನ್ಯಾಯ ಕೊಡುವವರು ಇದನ್ನೆಲ್ಲ ಸರಿ ಮಾಡಬೇಕಲ್ಲವೇ?

ಮನಮೋಹನ್ ಸಿಂಗ್ ಇತ್ತೀಚಿನ ಜಾಗತಿಕ ಬೆಳವಣಿಗೆಯ ಬಗ್ಗೆ ಬರೆಯುತ್ತ, “ಭಾರತಕ್ಕೆ ಈಗ ವಿಶಿಷ್ಟವಾದ ಅವಕಾಶವಿದೆ. ಭಾರತವನ್ನು ಒಂದು ಹೊಸ ಜಾಗತಿಕ ಶಕ್ತಿಯಾಗಿ ರೂಪಿಸಬಹುದು. ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಜಾಗರೂಕತೆಯಿಂದ ಜಾಗತಿಕ-ಆರ್ಥಿಕ ಕಾರ್ಯತಂತ್ರವನ್ನು ರೂಪಿಸುವ ಮೂಲಕ, ಭಾರತದ ಆರ್ಥಿಕ ಚರಿತ್ರೆಯಲ್ಲಿ ವಿಶೇಷ ತಿರುವನ್ನು ತರಬಹುದು. ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಭಾರತ ಬಹುಮುಖ್ಯ ಸ್ಥಾನವನ್ನು ಪಡೆದುಕೊಳ್ಳಬಹುದು. ಆದರೆ, ಅದಕ್ಕೆ ಮೊದಲು ನಮ್ಮೊಳಗಿನ ಕೋಮು ವೈಷಮ್ಯವನ್ನು ನಿವಾರಿಸಿಕೊಳ್ಳಬೇಕು. ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿರುವ, ಶಾಂತಿಯುತ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ದೇಶವಾಗಿ ಹೊರಹೊಮ್ಮಬೇಕು. ಭಾರತ ಶಾಂತಿ, ಸಾಮರಸ್ಯ ಹಾಗೂ ಪ್ರಗತಿಯ ದೂತನಾಗಿ ಹೊರಹೊಮ್ಮಲಿ ಅಂತ ಉತ್ಕಟತೆಯಿಂದ ಆಶಿಸುತ್ತೇನೆ,” ಎಂದಿದ್ದಾರೆ.

ಹೀಗೆ, ಸಾಕಷ್ಟು ಮಂದಿ ಅರ್ಥಶಾಸ್ತ್ರಜ್ಞರು ಆರ್ಥಿಕ ಪ್ರಗತಿಗೆ ಕೋಮು ಸಾಮರಸ್ಯ ಅನಿವಾರ್ಯ ಅಂತ ವಾದಿಸಿದ್ದಾರೆ. ಅದಕ್ಕಾಗಿ ಹಲವು ಉದಾಹರಣೆಗಳನ್ನು ಕೂಡ ನೀಡಿದ್ದಾರೆ. ಮತ್ತೂ ಕೆಲವರು, "ಕೋಮು ಗಲಭೆಯಿಂದ 2017ರಲ್ಲಿ ಭಾರತ 1190.51 ಬಿಲಿಯನ್ ಡಾಲರ್ ಕಳೆದುಕೊಂಡಿದೆ. ಅಂದರೆ, ಜಿಡಿಪಿಯ ಶೇಕಡ 9ರಷ್ಟನ್ನು ಕಳೆದುಕೊಂಡಿದೆ. ನಾವು ಶಿಕ್ಷಣಕ್ಕೆ (ಶೇಕಡ ಮೂರು) ಆರೋಗ್ಯಕ್ಕೆ (ಶೇಕಡ ಒಂದು) ಮಾಡುವ ಖರ್ಚಿಗಿಂತ ಹೆಚ್ಚು ಸಂಪತ್ತನ್ನು ಈ ಕೆಟ್ಟ ಹಿಂಸೆಯಲ್ಲಿ ಬಹುಪಟ್ಟು ಕಳೆದುಕೊಳ್ಳುತ್ತಿದ್ದೇವೆ..." ಮುಂತಾಗಿ, ಅಂಕಿ-ಅಂಶಗಳನ್ನು ಕೊಟ್ಟು ಹಿಂಸೆಯ ಘೋರತೆಯನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ.

Manmohan Singh 3
ಮನಮೋಹನ್ ಸಿಂಗ್

ಇಲ್ಲಿ ಇವರನ್ನೆಲ್ಲ ತಪ್ಪು ತಿಳಿಯುವುದು ಬೇಡ. "ಹಿಂಸೆಯಿಂದ ಆರ್ಥಿಕತೆಗೆ ತೊಂದರೆಯಾಗುತ್ತದೆ; ಹಾಗಾಗಿ ಹಿಂಸೆ ತಪ್ಪಬೇಕು," ಅಂತಷ್ಟೇ ಇವರು ಹೇಳುತ್ತಿಲ್ಲ. ಏಕೆಂದರೆ, ಹಿಂಸೆಯೇ ತಪ್ಪು. ಅದಕ್ಕೊಂದು ಸಮರ್ಥನೆ ಇಲ್ಲ. ಅದು ಸೃಷ್ಟಿಸುವ ಉಳಿದ ಸಮಸ್ಯೆಗಳು ಈಗಾಗಲೇ ಆಗಿರುವ ನೋವನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ. ದೇಶವನ್ನು, ಮನಸ್ಸನ್ನು, ಬೆಳವಣಿಗೆಗೆ ಬೇಕಾದ ವಾತಾವರಣವನ್ನು ಇನ್ನಷ್ಟು ಹಾಳುಮಾಡುತ್ತವೆ. 'ಹಿಂಸೆ ಒಳ್ಳೆಯದಲ್ಲ' ಅನ್ನುವುದಕ್ಕೆ ಇದು ಹೆಚ್ಚುವರಿ ಕಾರಣ ಅನ್ನುವುದು ಇವರೆಲ್ಲರ ಅಭಿಪ್ರಾಯ.

ಆದರೆ, ಕೆಲವೇ ಮಂದಿ ಬಯಸಿದರೆ ಹಿಂಸೆ ಇಲ್ಲವಾಗಿಬಿಡುತ್ತದೆಯೇ? ಎಸ್ ರಾಧಾಕೃಷ್ಣನ್ ಹೇಳುತ್ತಾರೆ: “ಭಾರತ ಒಂದು ಸಿಂಫೋನಿ ಆರ್ಕೆಸ್ಟ್ರಾ ಇದ್ದಂತೆ. ಅದರಂತೆ ಇಲ್ಲೂ ಹಲವು ವಾದ್ಯಗಳಿರುತ್ತವೆ. ಎಲ್ಲದಕ್ಕೂ ತನ್ನದೇ ಆದ ವಿಶೇಷ ನಾದವಿರುತ್ತದೆ. ಎಲ್ಲವೂ ಸೇರಿಕೊಂಡು ಸುಸಂಗತವಾದ ಒಂದು ಸಾಂಗೀತಿಕ ರಚನೆ ಹೊಮ್ಮುತ್ತದೆ. ಇಂತಹ ಒಂದು ಹೊಂದಾಣಿಕೆಯನ್ನೇ ನಮ್ಮ ದೇಶ ಯಾವಾಗಲೂ ಪ್ರತಿಪಾದಿಸುತ್ತ ಬಂದಿದೆ.” ಕುವೆಂಪು, "ನಮ್ಮದು ಸರ್ವಜನಾಂಗದ ಶಾಂತಿಯ ತೋಟ,” ಅಂತ ಹೇಳಿದ್ದಾರೆ. ಅಂದಾಕ್ಷಣ ನಾವು ಬದಲಾಗಿಬಿಡುತ್ತೇವೆಯೇ? ‘ಮಿಲೆ ಸುರ್ ಮೇರಾ ತುಮ್ಹಾರ’ ಅಂತ ಒಟ್ಟಾಗಿ ಹಾಡಿಬಿಟ್ಟರೆ ಒಂದಾಗಿಬಿಡುತ್ತೇವೆಯೇ? ಇಲ್ಲ... ಅವೆಲ್ಲ ನಮ್ಮನ್ನು ತಟ್ಟುವುದಿಲ್ಲ.

ಪರಸ್ಪರ ಪ್ರೀತಿ ಅನ್ನೋದು ಒಳಗಿನಿಂದ ಮೂಡಿಬರಬೇಕು. ಇತ್ತೀಚಿನ ಗಲಭೆಯ ಸಮಯದಲ್ಲಿ ದೆಹಲಿಯಲ್ಲಿ ಒಬ್ಬ ಹಿಂದು ವ್ಯಾಪಾರಿ ಹೇಳಿದ ಮಾತು ನಮ್ಮ ಬದುಕಿಗೆ, ನಮ್ಮ ಪ್ರಗತಿಗೆ, ನಮ್ಮ ಭವಿಷ್ಯಕ್ಕೆ ಇರುವ ಒಂದು ಭರವಸೆ: “ನಾನೊಬ್ಬ ಹಿಂದು. ಇವನೊಬ್ಬ ಮುಸ್ಲಿಂ. ನಾವಿಬ್ಬರೂ ಗೆಳೆಯರು. ಸಂಕಟದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತೇವೆ. ದೊಂಬಿ ನಮ್ಮ ಬದುಕನ್ನು ಹಾಳುಗೆಡವಲು ಹೊರಟಿದೆ. ಮತ್ತೆ ಬುಲ್ಡೋಜರ್ ಮಸೀದಿಯನ್ನು ನೆಲಸಮ ಮಾಡಲು ಬಂದರೆ ಒಬ್ಬನೇ ಆದರೂ ಪರವಾಗಿಲ್ಲ, ನಾನು ಅಡ್ಡ ನಿಲ್ಲುತ್ತೇನೆ.”

...ಇಂತಹ ದನಿಗಳು ಹೆಚ್ಚಲಿ ಅಂತ ಹಾರೈಸೋಣ.

*ಅಮರ್ತ್ಯ ಸೇನ್ ಅವರು ಬಳಸಿರುವ 'Unfreedom' ಎಂಬ ಇಂಗ್ಲಿಷ್ ಪದದ ಕನ್ನಡ ರೂಪವಾಗಿ, ಅನಿವಾರ್ಯವಾಗಿ 'ಅ-ಸ್ವಾತಂತ್ರ್ಯ' ಎಂಬ ಪದ ಬಳಸಲಾಗಿದೆ.
ನಿಮಗೆ ಏನು ಅನ್ನಿಸ್ತು?
1 ವೋಟ್
eedina app