ಮೈಕ್ರೋಸ್ಕೋಪು | ಟೊಮ್ಯಾಟೊ ತಿಂದು ಬಿಸಿಲಲ್ಲಿ ಅಡ್ಡಾಡಲು ಇನ್ನು ತಯಾರಿ ನಡೆಸಬಹುದು

Tomoto 9

ಇಂಗ್ಲೆಂಡಿನ ಜಾನ್ ಇನ್ನಿಸ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು 'ಡಿ' ಜೀವಸತ್ವವನ್ನು ತಯಾರಿಸುವಂತಹ ಟೊಮ್ಯಾಟೊವನ್ನು ಸೃಷ್ಟಿಸಿದ್ದಾರಂತೆ. ಇದರ ಫಲವಾಗಿ ಮುಂದೆ ಪಠ್ಯಪುಸ್ತಕದಲ್ಲಿ ಟೊಮ್ಯಾಟೊ ಎ, ಬಿ, ಸಿ ಅಷ್ಟೇ ಅಲ್ಲ, 'ಡಿ' ಜೀವಸತ್ವವನ್ನೂ ಒದಗಿಸುವ ತರಕಾರಿ ಎಂದು ಹೇಳಬೇಕಾಗಬಹುದು. ಇದಕ್ಕಾಗಿ ಪಠ್ಯದ ಪರಿಷ್ಕರಣೆಯೂ ಆಗಬೇಕಾಗಬಹುದು

ಡಿ ಫಾರ್ ಟೊಮ್ಯಾಟೊ...

- ಇದೇನಿದು ಮತ್ತೆ ಪಠ್ಯಪುಸ್ತಕದ ಪರಿಷ್ಕರಣೆ ಹೀಗೆ ತಪ್ಪಾಗಿ ಆಗುತ್ತಿದೆಯೇ ಎಂದು ಗಾಬರಿಯಾಗಬೇಡಿ. ಶಾಲಾ ಪಠ್ಯಗಳಲ್ಲಿ ಟೊಮ್ಯಾಟೊ ಎ, ಬಿ ಮತ್ತು ಸಿ ಜೀವಸತ್ವಗಳ, ಅರ್ಥಾತ್ ವಿಟಮಿನ್ನುಗಳ ಆಕರ ಎಂದು ಬಣ್ಣಿಸುವುದನ್ನು ಓದಿರುತ್ತೀರಿ. ಈ ಪಾಠವನ್ನು ಈಗ ತಿದ್ದಬೇಕಾಗಿದೆ. ಇಂಗ್ಲೆಂಡಿನ ಜಾನ್ ಇನ್ನಿಸ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು 'ಡಿ' ಜೀವಸತ್ವವನ್ನು ತಯಾರಿಸುವಂತಹ ಟೊಮ್ಯಾಟೊವನ್ನು ಸೃಷ್ಟಿಸಿದ್ದಾರಂತೆ. ಇದರ ಫಲವಾಗಿ ಮುಂದೆ ಪಠ್ಯಪುಸ್ತಕದಲ್ಲಿ ಟೊಮ್ಯಾಟೊ ಎ, ಬಿ, ಸಿ ಅಷ್ಟೇ ಅಲ್ಲ, 'ಡಿ' ಜೀವಸತ್ವವನ್ನೂ ಒದಗಿಸುವ ತರಕಾರಿ ಎಂದು ಹೇಳಬೇಕಾಗಬಹುದು. ಪಠ್ಯದ ಪರಿಷ್ಕರಣೆ ಆಗಬೇಕಾಗಬಹುದು.

ಜೀವಸತ್ವ ಅಂದರೆ ವಿವರಿಸಬೇಕಿಲ್ಲ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ನಡೆದ ವೈದ್ಯಕೀಯ ಸಂಶೋಧನೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಜೀವಸತ್ವಗಳು ಮತ್ತು ಆರೋಗ್ಯದಲ್ಲಿ ಅವುಗಳ ಪಾತ್ರದ ಪತ್ತೆ. ಚಿಟಿಕೆ ಪ್ರಮಾಣದಲ್ಲಿ ಸೇವಿಸಿದರೂ, ದೇಹದ ಆರೋಗ್ಯದ ಮೇಲೆ ಮಹತ್ತರ ಪರಿಣಾಮವನ್ನು ಬೀರುವ ಈ ವಸ್ತುಗಳನ್ನು ಜೀವಕ್ಕೆ ಅತ್ಯಗತ್ಯ ಎನ್ನುವ ಕಾರಣದಿಂದ ವಿಟಮಿನ್ನುಗಳು ಅಥವಾ ಜೀವಸತ್ವ ಎಂದು ಹೆಸರಿಸಿದ್ದಾರೆ. ಇಂತಹ ಒಟ್ಟು ಹದಿಮೂರು ಜೀವಸತ್ವಗಳಿವೆ. ರಾಸಾಯನಿಕ ರಚನೆಗಳಲ್ಲಿಯಾಗಲೀ, ಜೈವಿಕ ಕ್ರಿಯೆಯಲ್ಲಾಗಲೀ ಯಾವುದೇ ರೀತಿಯ ಹೋಲಿಕೆ ಇಲ್ಲದಿದ್ದರೂ, ದೇಹದ ಆರೋಗ್ಯದ ಮೇಲೆ ಇವುಗಳ ಪ್ರಭಾವವನ್ನು ಕಂಡು, ಇವೆಲ್ಲವನ್ನೂ ಜೀವಸತ್ವ ಎಂದು ವರ್ಗೀಕರಿಸಿ ಎ, ಬಿ, ಸಿ, ಡಿ, ಇ ಮತ್ತು ಕೆ ಎಂದು ಹೆಸರಿಸಿದ್ದಾರೆ. ಟೊಮ್ಯಾಟೊ ಇವುಗಳಲ್ಲಿ ಎ, ಬಿ ಹಾಗೂ ಸಿ ಜೀವಸತ್ವಗಳನ್ನು ಒದಗಿಸುವ ತರಕಾರಿ. ಅದು ಈಗ 'ಡಿ' ಜೀವಸತ್ವವನ್ನೂ ಒದಗಿಸುವಂತೆ ಜಾನ್ ಇನ್ನಿಸ್ ಸಂಶೋಧನಾ ಸಂಸ್ಥೆಯ ಕೇಥೀ ಮಾರ್ಟಿನ್ ಮತ್ತು ಸಂಗಡಿಗರು ಮಾಡಿದ್ದಾರಂತೆ.

Image
Tomoto 5

ನಮ್ಮ ದೇಹಕ್ಕೆ ಅಗತ್ಯವಾದ ಹದಿಮೂರು ಜೀವಸತ್ವಗಳಲ್ಲಿ 'ಡಿ' ಜೀವಸತ್ವ ಸ್ವಲ್ಪ ವಿಶೇಷವಾದದ್ದು. ಇದನ್ನು ನಮ್ಮ ದೇಹವೇ ತಯಾರಿಸಿಕೊಳ್ಳುತ್ತದೆ. ಆದರೆ, ಅದಕ್ಕೆ ಬೇಕಾದ ಮೂಲವಸ್ತುಗಳು ಮಾತ್ರ ಆಹಾರದಿಂದ ಒದಗಬೇಕು. ಮೂಲವಸ್ತುಗಳಿದ್ದರಷ್ಟೇ ಆಗದು, ಬಿಸಿಲೂ ಬೇಕು. ಏಕೆಂದರೆ, ಈ ಮೂಲವಸ್ತುಗಳು ಚರ್ಮದಲ್ಲಿರುವ ಜೀವಕೋಶದಲ್ಲಿಯಷ್ಟೇ ಸೇರಿಕೊಂಡು, ಬಿಸಿಲಿನಲ್ಲಿರುವ ಊದಾತೀತ ಅಂದರೆ ಅಲ್ಟ್ರಾವಯಲೆಟ್ (ಯೂವಿ) ಕಿರಣಗಳನ್ನು ಹೀರುತ್ತವೆ. ತನ್ಮೂಲಕ 'ಡಿ' ಜೀವಸತ್ವವಾಗಿ ಬದಲಾಗುತ್ತವೆ. ಆಹಾರದಲ್ಲಿಯೂ ಹಣ್ಣು, ತರಕಾರಿಗಿಂತಲೂ, ಹಾಲು, ಮೊಟ್ಟೆ ಹಾಗೂ ಮೀನಿನಲ್ಲಿಯೇ ಈ ಮೂಲವಸ್ತುಗಳು ಹೆಚ್ಚು. ಅಮ್ಮಂದಿರು ಪುಟ್ಟ ಮಕ್ಕಳ ಮೈಗೆ ಎಣ್ಣೆ ಹಚ್ಚಿ, ಬಿಸಿಲು ಕಾಯಲು ಬಿಡುತ್ತಾರಲ್ಲ, ಆಗಲೂ ಚರ್ಮ ಹೊಕ್ಕ ಎಣ್ಣೆ ಬಿಸಿಲಿನಲ್ಲಿರುವ ಯೂವಿ ಕಿರಣಗಳನ್ನು ಹೀರಿಕೊಂಡು 'ಡಿ' ಜೀವಸತ್ವವನ್ನು ತಯಾರಿಸುತ್ತದೆ. ಏಕೆಂದರೆ, 'ಡಿ' ಜೀವಸತ್ವ ನಮ್ಮ ದೇಹದ ಆರೋಗ್ಯಕ್ಕೆ ಬಲು ಮುಖ್ಯ.

'ಡಿ' ಜೀವಸತ್ವದ ಕೊರತೆಯಿಂದ ಮಕ್ಕಳಲ್ಲಿ ರಿಕೆಟ್ಸ್ ಎನ್ನುವ ಕಾಯಿಲೆ ಕಾಣಿಸುತ್ತದೆ. ಇಂತಹ ಮಕ್ಕಳಲ್ಲಿ ಮೂಳೆಗಳ ಬೆಳೆವಣಿಗೆ ಕುಂಠಿತ ಆಗುವುದರಿಂದ ಹೆಳವರಂತೆ ತೋರುತ್ತಾರೆ. ವೃದ್ಧರಲ್ಲಿಯೂ ಮೂಳೆಗಳ ಆರೋಗ್ಯಕ್ಕೆ 'ಡಿ' ಜೀವಸತ್ವ ಅಗತ್ಯ. ಜೊತೆಗೆ, ಇದು ಸೋಂಕು ರೋಗಗಳ ವಿರುದ್ಧ ಹೋರಾಡಲು ದೇಹವನ್ನು ಅಣಿಗೊಳಿಸುತ್ತದೆ. ಹೀಗಾಗಿಯೇ, ಕಳೆದ ವರ್ಷ ಕೋವಿಡ್ ಕೋಟಲೆ ಹೆಚ್ಚಿದ್ದ ಸಂದರ್ಭದಲ್ಲಿ ಯುರೋಪು ರಾಷ್ಟ್ರಗಳಲ್ಲಿ 'ಡಿ' ಜೀವಸತ್ವದ ಗುಳಿಗೆಗಳಿಗೆ ಜನ ದುಂಬಾಲು ಬಿದ್ದಿದ್ದರು. ಇಷ್ಟು ಪ್ರಮುಖವಾದ ಜೀವಸತ್ವ ತರಕಾರಿಗಳಲ್ಲಿ ದೊರೆಯುವುದಿಲ್ಲ ಎನ್ನುವುದನ್ನು ದುರಂತ ಎನ್ನಬೇಕೋ, ದುರ್ಭಾಗ್ಯ ಎನ್ನಬೇಕೋ ಗೊತ್ತಿಲ್ಲ. ಪ್ರಪಂಚಾದ್ಯಂತ 'ಡಿ' ಜೀವಸತ್ವದ ಕೊರತೆಯಿಂದ ಏನಿಲ್ಲವೆಂದರೂ ನೂರು ಕೋಟಿ ಜನತೆ ತೊಂದರೆ ಅನುಭವಿಸುತ್ತಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

Image
Tomoto 8
ಸಾಂದರ್ಭಿಕ ಚಿತ್ರ

ನಮ್ಮ ದೇಹ 'ಡಿ' ವಿಟಮಿನ್ನನ್ನು ತಯಾರಿಸಲು ಬೇಕಾದ ಮೂಲವಸ್ತುಗಳಲ್ಲಿ 7-ಡಿಹೈಡ್ರಾಕ್ಸಿ ಕೊಲೆಸ್ಟರಾಲ್ (7ಡಿಎಚ್ಸಿ) ಎನ್ನುವುದು ಪ್ರಮುಖವಾದದ್ದು. ಇದು ಕೊಲೆಸ್ಟರಾಲ್ ಸಂಬಂಧಿ. ಇದರಿಂದಲೇ ನಮ್ಮ ದೇಹಕ್ಕೆ ಅಗತ್ಯವಾದ ಸ್ಟಿರಾಯಿಡ್ ಹಾರ್ಮೋನುಗಳು, ನರ ಸಂಕೇತವನ್ನು ಸಾಗಿಸುವ ದೂತರಸಗಳು ತಯಾರಾಗಬೇಕು. 7-ಡಿಎಚ್ಸಿ ಮುಖ್ಯವಾಗಿ ಹಾಲು, ಮೊಟ್ಟೆ ಹಾಗೂ ಮೀನಿನಲ್ಲಿ ಹೆಚ್ಚಾಗಿ ದೊರಕುತ್ತದೆ. ತರಕಾರಿಗಳಲ್ಲಿ ಇದು ಕೇವಲ ಅಣಬೆಗಳಲ್ಲಿ ಅತಿ ಹೆಚ್ಚು. ಹೀಗಾಗಿ ಸಸ್ಯಾಹಾರಿಗಳಿಗೆ, ಅದರಲ್ಲಿಯೂ ಬಿಸಿಲಿನಲ್ಲಿ ಓಡಾಡದ ಕೆಲಸ ಮಾಡುವವರಿಗೆ 'ಡಿ' ಜೀವಸತ್ವದ ಕೊರತೆ ಕಾಡುವುದು ಹೆಚ್ಚು. ವಯಸ್ಸಾದವರಿಗೆ ತೊಂದರೆ ಹೆಚ್ಚುವುದು ಇದೇ ಕಾರಣಕ್ಕಾಗಿಯೇ. ಕೇಥೀ ಮಾರ್ಟಿನ್ ಇದನ್ನು ಈಗ ತಯಾರಿಸುವ ಟೊಮ್ಯಾಟೊ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಇವರು ಕುಲಾಂತರಿ ಸಸ್ಯ ತಂತ್ರಜ್ಞಾನಗಳಲ್ಲಿ ಅತ್ಯಂತ ನವೀನವೆನ್ನಿಸಿದ ಕ್ರಿಸ್ಪರ್ ತಂತ್ರಜ್ಞಾನವನ್ನು ಉಪಯೋಗಿಸಿದ್ದಾರೆ.

ಟೊಮ್ಯಾಟೊಗಳಲ್ಲಿ 7-ಡಿಎಚ್ಸಿ ಅಲ್ಪ ಪ್ರಮಾಣದಲ್ಲಿ ತಯಾರಾಗುತ್ತದೆ. ಪ್ರಾಣಿಗಳಲ್ಲಿ ಇದು ಕೊಲೆಸ್ಟರಾಲ್ ತಯಾರಿಕೆಯಲ್ಲಿಯೂ, ಟೊಮ್ಯಾಟೊವಿನಲ್ಲಿ ಸಸ್ಯಗಳಿಗೆ ಬೇಕಾದ ಫೈಟೊಸ್ಟೀರಾಲುಗಳ ತಯಾರಿಕೆಯಲ್ಲಿಯೂ ಇದು ಬಳಕೆಯಾಗುತ್ತದೆ. ಇವೆರಡೂ ಎರಡು ವಿಭಿನ್ನ ರಾಸಾಯನಿಕ ಕ್ರಿಯೆಗಳ ಸರಣಿ. ವಿಶೇಷವೆಂದರೆ, ಟೊಮ್ಯಾಟೊನಲ್ಲಿ ಈ ಎರಡೂ ಸರಣಿಗಳಿದ್ದರೂ, ನಡುವೆ ಒಂದು ಕಿಣ್ವದ ಚಟುವಟಿಕೆಯಿಂದಾಗಿ 7-ಡಿಎಚ್ಸಿ ಸಸ್ಯಗಳಿಗೆ ಬೇಕಾದ ಫೈಟೊಸ್ಟೀರಾಲುಗಳ ತಯಾರಿಕೆಯ ಕಡೆಗೆ ಹೊರಳುತ್ತದೆಯೇ ಹೊರತು, ಕೊಲೆಸ್ಟರಾಲ್ ಕಡೆಗಲ್ಲ. ಕೇಥೀ ಮಾರ್ಟಿನ್ ಅವರ ತಂಡ ಈ ಸಂಧಿ ಕ್ರಿಯೆಯನ್ನು ತಡೆಗಟ್ಟಿಬಿಟ್ಟರೆ, ಆಗ 7-ಡಿಎಚ್ಸಿ ಫೈಟೊಸ್ಟೀರಾಲ್ ಆಗದೆ ಹಾಗೆಯೇ ಉಳಿಯಬಲ್ಲುದಲ್ಲವೇ? ಟೊಮ್ಯಾಟೋವನ್ನೂ 'ಡಿ' ಜೀವಸತ್ವವನ್ನೊದಗಿಸುವ ಆಕರವಾಗಿಸಬಹುದಲ್ಲವೇ ಎಂದು ಯೋಚಿಸಿದ್ದಾರೆ. ಅಷ್ಟೇ ಅಲ್ಲ, ಕ್ರಿಸ್ಪರ್ ತಂತ್ರವನ್ನು ಬಳಸಿ ಹೀಗೊಂದು ಪರಿವರ್ತನೆ ಸಾಧ್ಯ ಎಂದು ನಿರೂಪಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಜೋಪಾನ... ಅಡುಗೆಮನೆಯ ಹೊಗೆ ನಿಮ್ಮ ದೃಷ್ಟಿ ಕಿತ್ತುಕೊಳ್ಳಬಹುದು

7-ಡಿಎಚ್ಸಿಯನ್ನು ಪರಿವರ್ತಿಸುವ 7-ಡಿಎಚ್ಸಿ ರೆಡಕ್ಟೇಸ್ ಎನ್ನುವ ಕಿಣ್ವವೊಂದಿದೆ. ಈ ಕಿಣ್ವದ ತಯಾರಿಕೆಯನ್ನೇ ಕ್ರಿಸ್ಪರ್ ತಂತ್ರದಿಂದ ಕೇಥೀ ಮಾರ್ಟಿನ್ ತಂಡ ತಡೆಗಟ್ಟಿದೆ. ಹೀಗಾಗಿ, ಟೊಮ್ಯಾಟೋವಿನಲ್ಲಿ 7-ಡಿಎಚ್ಸಿ ಪ್ರಮಾಣ ಅಧಿಕವಾಯಿತಂತೆ. ಹೀಗೆ, ಟೊಮ್ಯಾಟೋವನ್ನು 7-ಡಿಎಚ್ಸಿಯ ಅರ್ಥಾತ್ 'ಡಿ' ಜೀವಸತ್ವದ ಆಕರವನ್ನಾಗಿ ಪರಿವರ್ತಿಸಿದ್ದಾರೆ. ಹಾಗೆ, ಸಸ್ಯಗಳಿಗೆ ಬೇಕಾದ ಫೈಟೊಸ್ಟೀರಾಲ್ ಗತಿ ಎಂದು ಚಿಂತಿಸಿದಿರಾ? ಟೊಮ್ಯಾಟೋನಲ್ಲಿ ಅಣುಗಳ ಸಂಖ್ಯೆ ಸಮಾನವಾಗಿದ್ದರೂ, ಜೋಡಣೆಯಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸ ಇರುವ 7-ಡಿಎಚ್ಸಿಯ ಹಲವು ಸಮರೂಪಿಗಳಿವೆ. ಇವುಗಳಲ್ಲಿ ಕೆಲವಷ್ಟೇ ಫೈಟೊಸ್ಟೀರಾಲ್ ಆಗಬಲ್ಲವು. ಹಾಗೆ ಆಗದಂತಹ 7-ಡಿಎಚ್ಸಿಯ ರೆಡಕ್ಟೇಸ್ ಕಿಣ್ವದ ಕ್ರಿಯೆಯನ್ನಷ್ಟೇ ಇವರು ಕ್ರಿಸ್ಪರ್ ತಂತ್ರದಿಂದ ತಡೆಗಟ್ಟಿದ್ದಾರೆ. ಕ್ರಿಸ್ಪರ್ ತಂತ್ರ ಹೊಸ ತಳಿಗುಣಗಳನ್ನು ಸೇರಿಸುವುದರ ಬದಲಿಗೆ, ಇರುವ ತಳಿಗುಣಗಳ ಚಟುವಟಿಕೆಯನ್ನು ನಿರ್ಬಂಧಿಸುವ ಅಥವಾ ಆ ತಳಿಗುಣಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸವನ್ನು ತರುವ ತಂತ್ರ.

ಹಾಗಿದ್ದರೆ, ನಾಳೆಯೇ 'ಟೊಮ್ಯಾಟೊ ಫಾರ್ ಡಿ ವಿಟಮಿನ್' ಎನ್ನಬಹುದೇ ಎಂದಿರಾ? ತಾಳಿ. ಕ್ರಿಸ್ಪರ್ ಎನ್ನುವುದು ಕುಲಾಂತರಿ ಗಿಡಗಳನ್ನು ತಯಾರಿಸುವ ಇತ್ತೀಚಿನ ತಂತ್ರವಷ್ಟೇ. ಈ ಹಿಂದೆಯೂ ಇತರೆ ಅನುಕೂಲಿ ಟೊಮ್ಯಾಟೊ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯಗಳು ನಡೆದಿದ್ದುವು. ಕಸಿ ಮಾಡುವಂತಹ ತಂತ್ರಗಳ ಜೊತೆಗೆ ಪ್ರನಾಳ ಕೃಷಿ ತಂತ್ರಗಳನ್ನು ಸೇರಿಸಿ ಟೊಮ್ಯಾಟೊ ಮತ್ತು ಆಲೂಗೆಡ್ಡೆಗೆ ಮದುವೆ ಮಾಡುವ ಪ್ರಯತ್ನ ನಡೆದಿತ್ತು. ನೆಲದ ಮೇಲೆ ಟೊಮ್ಯಾಟೋ, ನೆಲದಡಿಯಲ್ಲಿ ಆಲೂಗೆಡ್ಡೆಯನ್ನು ಹೀಗೆ ಪಡೆಯಬಹುದೆನ್ನುವ ಆಸೆ ನಿರಾಸೆಯಾಗಿತ್ತು. ಅದೇ ರೀತಿಯಲ್ಲಿ ಟೊಮ್ಯಾಟೊ ಕಾಯಿ ಮಾಗುವುದಕ್ಕೆ ಕಾರಣವಾದ ಕಿಣ್ವವೊಂದನ್ನು ಬದಲಾಯಿಸಿ, ದೀರ್ಘ ಬಾಳಿಕೆ ಬರುವ ಟೊಮ್ಯಾಟೊ ತಯಾರಿಸುವ ಹುನ್ನಾರವೂ ಇತ್ತು. ಇದನ್ನು ಬಿ.ಟಿ ಹತ್ತಿಯನ್ನು ರೂಪಿಸಿದಂತಹುದೇ ಜೀನ್ ವರ್ಗಾವಣೆ ತಂತ್ರವನ್ನು ಬಳಸಿ ತಯಾರಿಸಲಾಗಿತ್ತು. ಅದುವೂ ಫಲ ಕೊಡಲಿಲ್ಲ. ಅಂತಹ ಕಾಯಿ ತಯಾರಾಯಿತಾದರೂ, ಜನ ಅದನ್ನು ಮೆಚ್ಚಲಿಲ್ಲ. ಈ ರೀತಿಯಲ್ಲಿ ತಳಿಯನ್ನು ಬದಲಿಸುವುದಕ್ಕಾಗಿ ಉಪಯೋಗಿಸುವ ತಂತ್ರಗಳಲ್ಲಿ ಕ್ರಿಸ್ಪರ್ ಇತ್ತೀಚಿನದು ಅಷ್ಟೆ. ಇದರಿಂದ ತಯಾರಾದ ತಳಿ ನಿರ್ದಿಷ್ಟ ಫಲವನ್ನು ಕೊಡುತ್ತದೆಯೋ ಇಲ್ಲವೋ ಕಾದುನೋಡಬೇಕು.

Image
Tomoto 4
ಸಾಂದರ್ಭಿಕ ಚಿತ್ರ

ಟೊಮ್ಯಾಟೋ ಅಷ್ಟೆ ಅಲ್ಲ. ಅದರ ಜಾತಿಗೇ ಸೇರಿದ ಆಲೂಗೆಡ್ಡೆ, ಬದನೆಕಾಯಿಗಳಲ್ಲಿಯೂ 7-ಡಿಎಚ್ಸಿ ಇದೆ. ಅದನ್ನು ಸಂಸ್ಕರಿಸುವ ಎರಡು ವಿಧಾನಗಳೂ ಇವೆ. ಅದರ ಸಮರೂಪಿಗಳೂ ಇವೆ. ಹೀಗಾಗಿ, ಈ ತಂತ್ರವನ್ನು ಬಳಸಿ, ಟೊಮ್ಯಾಟೋವನ್ನಷ್ಟೆ ಅಲ್ಲ, 'ಡಿ' ಜೀವಸತ್ವ ಕೊಡಬಲ್ಲ ಆಲೂಗೆಡ್ಡೆ, ಬದನೆಕಾಯಿಗಳನ್ನೂ ತಯಾರಿಸಬಹುದು ಎನ್ನುವುದು ಕೇಥೀ ಮಾರ್ಟಿನ್ ಅವರ ಆಶಯ. ಅವರ ಆಶಯವೇನೇ ಇರಲಿ, ಮುಂದಿನ ಪಠ್ಯ ಪರಿಷ್ಕರಣೆಯಲ್ಲಿ 'ಡಿ ಫಾರ್ ಟೊಮ್ಯಾಟೊ' ಜೊತೆಗೆ 'ಡಿ ಫಾರ್ ಪೊಟ್ಯಾಟೊ,' 'ಡಿ ಫಾರ್ ಬ್ರಿಂಜಾಲ್' ಎಂದೆಲ್ಲ ಪರಿಷ್ಕರಿಸಬಹುದು ಎಂದಿರಾ? ಗೊತ್ತಿಲ್ಲ. ಏಕೆಂದರೆ, ಈ ಟೊಮ್ಯಾಟೋ ತಿಂದ ಮೇಲೂ ಬಿಸಿಲಿಗೆ ನಾವು ಮೈಯೊಡ್ಡಿಕೊಳ್ಳಬೇಕಾದದ್ದು ಅವಶ್ಯ. ಅದನ್ನೇ ಮರೆತವರಿಗೆ ಯಾವ ಹಣ್ಣು, ತರಕಾರಿ ತಿನ್ನಿಸಿದರೂ ಫಲವಿಲ್ಲ ಅಲ್ಲವೇ?

ಕೇಥೀ ಮಾರ್ಟಿನ್ ತಂಡದ ಸಂಶೋಧನೆಯ ವಿವರಗಳನ್ನು 'ನೇಚರ್ ಪ್ಲಾಂಟ್ಸ್' ಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಓದಬಹುದು.

ನಿಮಗೆ ಏನು ಅನ್ನಿಸ್ತು?
4 ವೋಟ್