ಅನುದಿನ ಚರಿತೆ | ಆತ್ಮಶ್ರೀಗಾಗಿ ನಿರಂಕುಶಮತಿಗಳು ಆಗುವುದೆಂದರೆ ಏನು? 

Dalit

ನಮ್ಮ ಗ್ರಹಿಕೆ ಮತ್ತು ಆಲೋಚನೆಯಲ್ಲಿರುವ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗೆ ಸಂಬಂಧಿಸಿದ ಸಂಗತಿಗಳನ್ನು ನಿಭಾಯಿಸುವುದು ಹೇಗೆ? ಕುವೆಂಪು ಹೇಳುವಂತೆ ಮನುಷ್ಯನಿಗೆ ಮತಿಯೇ ಅತ್ಯಂತ ಶ್ರೇಷ್ಟ, ಉತ್ಕೃಷ್ಟ ಆಯುಧ. ಈ ಆಯುಧದ ಎರಡೂ ಅಲಗುಗಳು ಸಾಂಸ್ಕೃತಿಕ ಸೂಕ್ಷ್ಮತೆ ಮತ್ತು ವಿವೇಕ

“ಮತಿ ಮಾನವನ ಸರ್ವೋತ್ಕೃಷ್ಟವಾದ ಆಯುಧ. ಮತಿಯೇ ಕತ್ತಲಲ್ಲಿ ದಾರಿ ತೋರುವ ರತ್ನದ ಕೈದೀವಿಗೆ.
ಮತಿಯ ದೆಸೆಯಿಂದಲೇ, ಪ್ರಾಣಿಮಾತ್ರವಾಗುತ್ತಿದ್ದ ನರಜೀವಿ ಮನುಷ್ಯತ್ವಕ್ಕೆ ಏರಿದ್ದಾನೆ. ಮತಿಯ ಕೃಪಾಮಹಿಮೆಯಿಂದಲೇ ನಾವು ಮನುಷ್ಯತ್ವದಿಂದ ದೇವತ್ವಕ್ಕೆ ಏರಬೇಕಾಗಿದೆ. ಮತಿ ಮನುಷ್ಯತ್ವದ ಹಕ್ಕು. ಆದ್ದರಿಂದ, ಸಹೋದರರೇ, ಮತಿ ನಿಮ್ಮ ನೆಚ್ಚಿನ ರನ್ನ ದೀವೆಗೆಯಾಗಲಿ” – ಕುವೆಂಪು.

Eedina App

ಸಾಮಾಜಿಕ ಹಿಂಸೆ, ಧಾರ್ಮಿಕ ಅಪಚಾರಗಳು ಹಾಗೂ ಸಾಂಸ್ಕೃತಿಕ ಅಶ್ಲೀಲತೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಸನ್ನಿವೇಶ ಒಂದುಕಡೆಯಾದರೆ, ರಾಜಕೀಯ ಮತ್ತು ಧಾರ್ಮಿಕ ದೃವೀಕರಣ ಮತ್ತಷ್ಟು ಇಂಬು ಪಡೆಯುತ್ತಿರುವ ದುರಿತ ಕಾಲ ಇನ್ನೊಂದು ಕಡೆ. ಆಧುನಿಕತೆ, ಕಾರ್ಪೊರೇಟ್ ಹಾವಳಿ ಹಾಗೂ ನಗರೀಕರಣದಂತ ವಿದ್ಯಮಾನಗಳು ಸ್ಪೋಟಕ ಸ್ಥಿತಿ ತಲುಪಿರುವ ಈ ಹೊತ್ತಿನ ಜಾಗತೀಕರಣದ ವಿಷಮ ಸಂದರ್ಭದಲ್ಲಿ ಬುದ್ಧ, ಗಾಂಧಿ, ಅಂಬೇಡ್ಕರ್ ಹಾಗೂ ಕುವೆಂಪು ಅವರ ಚಿಂತನೆಗಳು ಮಾತ್ರ ಏನಾದರೂ ಪರಿಹಾರ ಒದಗಿಸಬಹುದು ಎನ್ನುವುದನ್ನು ನಾನು ಇನ್ನೂ ನಂಬಿರುತ್ತೇನೆ. ಇಂತಹ ಮಹನೀಯರು ಪ್ರಚುರಗೊಳಿಸಿದ ವೈಚಾರಿಕ ನಿಲುವುಗಳು ಯಾವತ್ತಿಗೂ ತಮ್ಮ ಚೈತನ್ಯಗಳನ್ನು ಕಳೆದುಕೊಳ್ಳಲಾರವು. ಆದರೆ, ಈ ವೈಚಾರಿಕತೆ ನಮ್ಮ ಸಮೂಹಗಳ ನಂಬಿಕೆಯ ಲೋಕದಲ್ಲಿ ನೆಲೆಪಡೆಯುವ ಅವಕಾಶಗಳನ್ನು ಮಾತ್ರ ಕ್ರಮೇಣ ಕಡಿಮೆಗೊಳಿಸಲಾಗುತ್ತದೆ. ಯಾವ ವಲಯಗಳಲ್ಲಿ ಇಂತಹ ವೈಚಾರಿಕ ಚಿಂತನೆಗಳು ಅತ್ಯಂತ ಸಹಜ ವಿದ್ಯಮಾನಗಳಾಗಿರಬೇಕಿತ್ತೋ, ಅಂತಹ ವಲಯಗಳನ್ನು ಕೋಮುದ್ವೇಷ, ರಾಜಕೀಯ, ಸಾಂಸ್ಕೃತಿ ಹಾಗೂ ಸಾಮಾಜಿಕ ಪ್ರತ್ಯೇಕತೆಯನ್ನು ಪ್ರೇರೇಪಿಸುವ ಮೂಲ ಏಜನ್ಸಿಗಳನ್ನಾಗಿ ಬದಲಾಯಿಸಲಾಗಿದೆ.

ಬದುಕಿನ ಮಹತ್ವವನ್ನು ಅರಿಯುವ ಬದಲಾಗಿ ಬದುಕನ್ನು ವಿನಾಶಗೊಳಿಸುವ ಸಂಗತಿಗಳನ್ನೇ ಬಹುವಾಗಿ ಮೆಚ್ಚಿ ನಡೆಯುವಂತೆ, ನಮ್ಮ ಸಮೂಹಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಸ್ವಹಿತಾಸಕ್ತಿಯ ಗೀಳು ಮತ್ತು ಸ್ವಜನ ಪಕ್ಷಪಾತವೇ ನಮ್ಮ ಬದುಕಿನ ಮೌಲ್ಯಗಳು ಅನ್ನುವಂತೆ ಬಿಂಬಿಸುವುದಷ್ಟೇ ಅಲ್ಲ, ಬದಲಾಗಿ ಅವುಗಳೇ ನಮ್ಮ ನಂಬಿಕೆಯ ಜಗತ್ತಿನ ಮೂಲ ತತ್ವಗಳಾಗಿ ಮೈದೋರಿವೆ. ಇದಕ್ಕೆ ಕಾರಣ ತಂತ್ರಜ್ಞಾನದ ಹಾವಳಿ ಹಾಗೂ ವೈಜ್ಞಾನಿಕತೆಯ ವೈಹಾಳಿ ಅನ್ನುವ ಸಬೂಬನ್ನು ಬಿತ್ತರಿಸಲಾಗುತ್ತದೆ. ನಮ್ಮ ಸಮೂಹಗಳ ನೈತಿಕ ಅಧಪತನಕ್ಕೆ, ಸಾಂಸ್ಕೃತಿಕ ವಿವೇಕದ ವಿನಾಶಕ್ಕೆ ಖಂಡಿತವಾಗಿಯೂ ಈ ತಂತ್ರಜ್ಞಾನ ಮತ್ತು ವೈಜ್ಞಾನಿಕತೆಗಳು ಕಾರಣವಲ್ಲ. ಜಾತೀಯತೆ, ಧರ್ಮಾಂಧತೆ ಹಾಗೂ ಅನೈತಿಕ ರಾಜಕಾರಣದಂತಹ ಅಪಮೌಲ್ಯಗಳನ್ನೇ ಶಿಕ್ಷಣದ ಆಶಯಗಳನ್ನಾಗಿ ರೂಪಿಸುವ ಒತ್ತಾಯಗಳನ್ನು ನಾವು ದಿನವೂ ನೋಡುತ್ತಿದ್ದೇವೆ. ವಾಸ್ತವದಲ್ಲಿ ಸಮೂಹಗಳ ಅಧಪತನಕ್ಕೆ ಕಾರಣಗಳೇ ಈ ಜಾತಿ, ಧರ್ಮ, ರಾಜಕಾರಣ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ತಂತ್ರಜ್ಞಾನ ಹಾಗೂ ವೈಜ್ಞಾನಿಕ ಆವಿಷ್ಕಾರಗಳನ್ನು ನಮ್ಮ ಕೇಡಿನ ಮೂಲಗಳು ಎಂದು ನಂಬಿಸಲಾಗಿದೆ. ಸಮೂಹಗಳಿಗೆ ಅಂಟಿದ ಎಲ್ಲ ಬಗೆಯ ಕೇಡಿನ ಸ್ವರೂಪವನ್ನು ಬಯಲುಗೊಳಿಸಲು ಈ ತಂತ್ರಜ್ಞಾನ ಹಾಗೂ ವಿಜ್ಞಾನಗಳು ನಮಗೆ ಒತ್ತಾಸೆಯಾಗಿರುತ್ತವೆ ಅನ್ನುವುದೇ ನನ್ನ ಅಭಿಮತ.

AV Eye Hospital ad
Dalit Women

ನಾವು ದಿನವೂ ನೋಡುತ್ತಿದ್ದೇವೆ. ಭಾರತದಲ್ಲಿ ಜಾತಿಯ ಕಾರಣಕ್ಕಾಗಿಯೇ ಸಾಮಾಜಿಕ ಅಪಮಾನ, ಶೋಷಣೆ ಹಾಗೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವುದು ಅತ್ಯಂತ ಸಹಜ ನಡೆಯಾಗಿದೆ. ಅಷ್ಟೇ ಸಹಜವಾದ ಪ್ರಕ್ರಿಯೆ ಯಾವುದೆಂದರೆ, ಅದು ದಲಿತರ ಸಾವು. ದಲಿತರ ಸಾವಿಗೆ ಕಾರಣವಾಗುವ ಸಂಗತಿಗಳನ್ನು ಲೆಕ್ಕ ಹಾಕಿ ನೋಡಿದರೆ, ಅವುಗಳು ಅಸಂಖ್ಯಾತವಾದ ನೆಲೆಯಿಂದ ಕೂಡಿರುವುದು ಕಂಡುಬರುತ್ತದೆ. ವಿನಾಕಾರಣವಾಗಿ ಹಲವು ನೆಲೆಗಳಲ್ಲಿ ಇವುಗಳಿಗೆ ಕಾರಣಗಳನ್ನು ತೋರಿಸಲಾಗುತ್ತದೆ. ಪ್ರಜಾಪ್ರಭುತ್ವವನ್ನು ಒಪ್ಪಿ ನಡೆಯುವುದಷ್ಟೇ ಅಲ್ಲ, ಅದುವೇ ನಮ್ಮ ಬದುಕಿನ ಗುರಿ ಮತ್ತು ದಾರಿಯೆಂದು ನಿರ್ಧರಿಸಿದ ಮೇಲೆಯೂ ಸಾಮಾಜಿಕ ಪ್ರತ್ಯೇಕತೆಯನ್ನು, ಅಸಮಾನತೆಯನ್ನು, ಧಾರ್ಮಿಕ ಅಸಹನೆಯನ್ನು ಇನ್ನೂ ಢಾಳವಾಗಿ ಆಚರಿಸಲಾಗುತ್ತಿದೆ. ಜೊತೆಗೆ ಅವುಗಳನ್ನು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಸಮರ್ಥಿಸಲಾಗುತ್ತಿದೆ. ಅಂದರೆ, ನೀರಿನ ಮಡಿಕೆ ಮುಟ್ಟಿದ್ದಕ್ಕೆ, ಕುದುರೆ ಮೇಲೆ ಕೂತಿದ್ದಕ್ಕೆ, ದೇವಸ್ಥಾನದ ಹತ್ತಿರ ಸುಳಿದಿದ್ದಕ್ಕೆ, ಹೋಟಲ್ಲುಗಳಿಗೆ ಹೋಗಿದ್ದಕ್ಕೆ, ಶಾಲೆಗಳಲ್ಲಿ ಸಹಜವಾಗಿ ಎಲ್ಲ ಮಕ್ಕಳ ಜೊತೆ ಬೆರೆತ್ತಿದ್ದಕ್ಕೆ, ಇನ್ನೂ ಏನೇನೋ ನೆಪಗಳನ್ನು ಮುಂದೊಡ್ಡಿ, ಸವರ್ಣೀಯರು ದಲಿತರನ್ನು ಅಮಾನುಷವಾಗಿ ಕೊಲ್ಲುತ್ತಿದ್ದಾರೆ. ಈ ಕೊಲೆಗಳನ್ನು ಮುಚ್ಚಿ ಹಾಕುವ ಹುನ್ನಾರವನ್ನು ಮಾಡುವುದರ ಜೊತೆಗೆ ಅವುಗಳನ್ನು ನ್ಯಾಯಸಮ್ಮತಗೊಳಿಸಲಾಗುತ್ತದೆ.

ಪ್ರಜಾಸತ್ತಾತ್ಮಕ ಸನ್ನಿವೇಶದಲ್ಲಿ ಇಂತಹ ಅಮಾನುಷ ಕ್ರಿಯೆಗಳನ್ನು ನಿರಾಂತಕವಾಗಿ ನಡೆಸುವುದು ಕೇವಲ ತಪ್ಪು ಮಾತ್ರವಲ್ಲ. ಅದು ಅಪರಾಧವೂ, ಅಧರ್ಮವೂ ಹಾಗೂ ಅನೈತಿವೂ ಆಗಿರುತ್ತದೆ. ಇಲ್ಲಿ ಉಲ್ಲೇಖಿಸಿರುವ ಅಪರಾಧ, ಅಧರ್ಮ ಹಾಗೂ ಅನೈತಿಕತೆ ಎಂಬ ಈ ಮೂರೂ ಪದಗಳು ಮನುಷ್ಯ ಸಮಾಜದ ಅಧಪತನದ ತೀವ್ರತೆಯನ್ನು ಸೂಚಿಸುತ್ತವೆ. ಅಪರಾಧ ಎನ್ನುವುದು ಕೇವಲ ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ನೆಲೆಗೊಳಿಸಿ ನೋಡುವುದಕ್ಕಿಂತ, ಅದನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಸನ್ನಿವೇಶದಲ್ಲಿಟ್ಟು ನೋಡಿದರೆ, ನಮ್ಮ ಸಮುದಾಯ ಹಾಗೂ ವ್ಯಕ್ತಿಗಳ ಮತಿಭ್ರಷ್ಟತೆಯ ನೈಜ ಸ್ವರೂಪ ನಮಗೆ ಮನವರಿಕೆಯಾಗುತ್ತದೆ. ಏಕೆಂದರೆ, ಸಾಮಾಜಿಕವಾಗಿ ಇಲ್ಲವೇ ಸಾಂಸ್ಕೃತಿಕವಾಗಿ ಸಹ್ಯವಾಗಿರುವ ಎಷ್ಟೋ ಸಂಗತಿಗಳು, ಕಾನೂನಿನ ಪರಿಮಿತಿಯಲ್ಲಿ ಅಪರಾಧಗಳಾಗಿ ತೋರಬಹುದು. ಹಾಗಾಗಿ, ಅಪರಾಧ ಪ್ರಜ್ಞೆ ಎನ್ನುವುದು ನಮ್ಮಲ್ಲಿ ನೆಲೆಗೊಳ್ಳಬೇಕಾಗಿರುವುದು ಕೇವಲ ಕಾನೂನಾತ್ಮಕವಾಗಿ ಅಷ್ಟೆ ಅಲ್ಲದೇ, ಅದು ಸಾಮಾಜಿಕವಾಗಿಯೂ ಮತ್ತು ಸಾಂಸ್ಕೃತಿಕವಾಗಿಯೂ ಒಡಮೂಡಬೇಕು.

Inequality

ಏಕೆಂದರೆ, ಕಾನೂನಿನ ನಿಲುವುಗಳು ಹಾಗೂ ಪರಿಣಾಮಗಳು ಕೇವಲ ನಮ್ಮ ಹೊರಮೈ ನಡೆಗಳಿಗೆ (ವರ್ತನೆಯ ನಿಲುವುಗಳಿಗೆ) ಮಾತ್ರ ಕಡಿವಾಣಗಳನ್ನು ಹಾಕುತ್ತವೆ. ಅಂದರೆ, ನಮ್ಮ ಗ್ರಹಿಕೆ ಮತ್ತು ಆಲೋಚನೆಯಲ್ಲಿ ಹುದುಗಿರುವ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗೆ ಸಂಬಂಧಿಸಿದ ಸಂಗತಿಗಳನ್ನು ನಿಭಾಯಿಸುವುದು ಹೇಗೆ? ಕುವೆಂಪು ಅವರು ಹೇಳುವಂತೆ ಮನುಷ್ಯನಿಗೆ ಮತಿಯೇ ಅತ್ಯಂತ ಶ್ರೇಷ್ಟವೂ ಉತ್ಕೃಷ್ಟವೂ ಆಗಿರುವ ಆಯುಧವಾಗಿದೆ. ಈ ಆಯುಧದ ಎರಡೂ ಅಲಗುಗಳು. ಅಂದರೆ, ಸಾಂಸ್ಕೃತಿಕ ಸೂಕ್ಷ್ಮತೆ ಮತ್ತು ವಿವೇಕ ಎಂದು ಹೇಳಬಹುದು. ಮತಿ ಎಂಬ ಆಯುಧಕ್ಕೆ ಇವುಗಳನ್ನು ಲೇಪನಗೊಳಿಸುವ ಸಾಮಾಜಿಕ ಹೊಣೆಗಾರಿಕೆ ಸಮೂಹಗಳ ಬದ್ಧತೆಯೇ ಆಗಿರುತ್ತದೆ. ಅಂದರೆ, ವಿಶ್ವಮಾನವನಾಗಿ ಹುಟ್ಟಿದ ಮಗು, ಅಲ್ಪ ಮಾನವನಾಗಿ ಬದಲಾಗದಂತೆ ಕಾಪಾಡುವ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಪರಿಸರವನ್ನು ನೆಲೆಗೊಳಿಸುವುದು ಮುಖ್ಯ. ಇದು ಸಾಮಾಜಿಕ ವಿವೇಕವನ್ನು ಅಣಿಗೊಳಿಸುವ ಬಗೆಯೇ ಹೊರತು ಯಾವುದೇ ಒಂದು ನಿರ್ದಿಷ್ಟ ಐಡಿಯಾಲಜಿಯ ರಾಜಕಾರಣವನ್ನು ಮಾಡುವ ಬಗೆಯಲ್ಲ. ಈಗ ದಿಟವಾಗಿ ಆಗುತ್ತಿರುವುದು ಏನೆಂದರೆ, ಯಾವುದೇ ಒಂದು ಮತ, ಧರ್ಮ ಇಲ್ಲವೇ ರಾಜಕೀಯ ಪಕ್ಷದ ಐಡಿಯಾಲಜಿಯನ್ನು ಸಮೂಹಗಳ ಮೇಲೆ ಹೇರುವ ಹುನ್ನಾರವನ್ನು ಮಾಡಲಾಗುತ್ತದೆ. ಆದರೆ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಹಾಗೂ ಕುವೆಂಪು ಅವರ ವಿಚಾರಗಳು ಸಮೂಹಗಳ ಏಳಿಗೆಗೆ ಬೇಕಾದ ತಿಳಿವಿನ ದಾರಿಗಳು ಆಗಿರುತ್ತವೆ.

ಸಾಮಾಜಿಕ ವಾಸ್ತವದ ಚಹರೆಗಳನ್ನು ಕಾಪಾಡುವ ಇರಾದೆಯನ್ನು ಈ ತಾತ್ವಿಕ ವಿನ್ಯಾಸಗಳು ಹೊಂದಿರುತ್ತವೆ. ಅಂದರೆ, ಆಹಾರ, ಬಟ್ಟೆ, ಜಾತಿ, ಧರ್ಮ, ಲಿಂಗ ಮೊದಲಾದ ಸಾಂಸ್ಕೃತಿಕ ವಿನ್ಯಾಸಗಳನ್ನು ಛಿದ್ರಗೊಳಿಸುವ ಹುನ್ನಾರಗಳನ್ನು ಈ ತಾತ್ವಿಕ ವಿನ್ಯಾಸಗಳು ಖಂಡಿಸುತ್ತವೆ. ಯಾವುದೇ ವ್ಯತಿರಿಕ್ತ ಪರಿಣಾಮಕ್ಕೆ ಈಡಾಗುವವರು ಈ ನಾಡಿನ ಸಾಮಾನ್ಯರೇ ಹೊರತು ಯಾವುದೇ ಅಧಿಕಾರದ ವಲಯಗಳಲ್ಲಿ ಸುರಕ್ಷಿತವಾಗಿರುವ ಕೆಲವೇ ಕೆಲವು ಜನರಲ್ಲ. ಯಾವ ತಿಳಿವು ಇಲ್ಲವೇ ವಿಚಾರಕ್ಕೆ ಸಮೂಹಗಳ ದಾರಿದೀಪವಾಗುವ ಗುರಿ ಇರುವುದಿಲ್ಲವೋ, ಅಂತಹದೊಂದು ಸಿದ್ಧಾಂತಕ್ಕೆ ಸಮೂಹಗಳನ್ನು ನಿರ್ವಹಿಸುವ ಅಥವಾ ನಿರ್ದೇಶಿಸುವ ನೈತಿಕತೆ ಇರುವುದಿಲ್ಲ. ಹಾಗಾಗಿಯೇ, ಇಂತಹ ಅನೈತಿಕ ಸೈದ್ಧಾಂತಿಕ ನಿಲುವುಗಳಿಂದ ಕೂಡಿದ ಸಾಮಾಜಿಕ, ಧಾರ್ಮಿಕ ಇಲ್ಲವೇ ರಾಜಕೀಯ ಸಂಘಟನೆಗೆ ಸಮೂಹಗಳನ್ನು ಒಗ್ಗೂಡಿಸುವ ಇರಾದೆಗಿಂತ ಛಿದ್ರಗೊಳಿಸುವ ಹುನ್ನಾರವೇ ಮುಖ್ಯವಾಗುತ್ತದೆ. ಇಂತಹ ಹುನ್ನಾರ ಪರಂಪರೆಯುದ್ದಕ್ಕೂ ನಡೆದುಕೊಂಡು ಬಂದಿದೆ. ಸಮೂಹಗಳನ್ನು ನಿರಂತರವಾಗಿ ಈ ಹುನ್ನಾರಗಳಿಂದ ಕಾಪಾಡಿಕೊಂಡು ಬಂದಿರುವುದು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಹಾಗೂ ಕುವೆಂಪು ಅವರಂತಹ ವಿಚಾರಶೀಲರ ವಿಚಾರ ತತ್ವಗಳು ಅನ್ನುವುದು ಗಮನಾರ್ಹ. ಶಿಕ್ಷಣ, ರಾಜಕಾರಣ ಹಾಗೂ ಸಾಂಸ್ಕೃತಿಕ ನಿಲುವು ಇಲ್ಲವೇ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಈ ವಿಚಾರ ತತ್ವಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವುದಕ್ಕಿಂತ, ಇವುಗಳು ನಮ್ಮನ್ನು ಮುನ್ನಡೆಸುವ ದೀಪಗಳಲ್ಲ ಅನ್ನುವ ಹುಸಿನಂಬಿಕೆಯನ್ನು ಮೂಡಿಸಲಾಗುತ್ತದೆ. ಇಂತಹ ಹುಸಿನಂಬಿಕೆಗೆ ಪ್ರತಿರೋಧವನ್ನು ಒಡ್ಡುವ ಕಸುವು ಸಮೂಹಗಳಿಗೆ ದತ್ತವಾಗುವುದು ಕೇವಲ ವಿಚಾರಶೀಲರ ವೈಚಾರಿಕತೆಯಿಂದ ಮಾತ್ರ ಸಾಧ್ಯ. ಈ ವೈಚಾರಿಕ ಸಾಧ್ಯತೆ ಸಮೂಹಗಳನ್ನು ಸಬಲೀಕರಿಸುವುದಕ್ಕೆ ಅಷ್ಟೆಯಲ್ಲದೇ, ಅವರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೆಲೆಗೊಳಿಸುವುದಕ್ಕೆ ಒತ್ತಾಸೆಯಾಗುತ್ತದೆ.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಸಾಮಾನ್ಯ ಜ್ಞಾನ; ವೈಚಾರಿಕತೆ ಮತ್ತು ರಾಜಕೀಯ ನಿಲುವುಗಳು

ಈ ನಾಡಿನ ಬಹುಸಂಖ್ಯಾತ ಶ್ರೀಸಾಮಾನ್ಯರು ಹಲವು ಬಗೆಯ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಇಂತಹ ಬಿಕ್ಕಟ್ಟುಗಳಿಂದ ವಿಮೋಚನೆ ದೊರೆಯುವುದು ಮಾತಿನಿಂದ ಹಾಗೂ ಮಾತಿನ ಬಲದಿಂದಲೇ (ವೈಚಾರಿಕತೆ) ಹೊರತು ಮಾತುಗಳ ಮೂಲಕ ರವಾನಿಸುವ ಹುಸಿನಂಬಿಕೆಗಳಿಂದಲ್ಲ. ಮಾತುಗಳು ಪ್ರಜಾಸತ್ತಾತ್ಮಕ ಆಗುವುದು ಭಾಗಿತ್ವ ಪ್ರಜಾಪ್ರಭುತ್ವ ಮುಂಚೂಣಿಗೆ ಬಂದಾಗ ಮಾತ್ರ. ಅಂದರೆ, ಮಾತಿಗಿರುವ ನೈತಿಕ ಸ್ಥೈರ್ಯ ಹಾಗೂ ಸಾಮಾಜಿಕ ಪ್ರಾತಿನಿಧ್ಯ ಎಂತಹದು ಅನ್ನುವುದು ತಿಳಿಯುತ್ತದೆ. ಮಾತು ತಲೆಯೆತ್ತುವುದೆಂದರೆ, ಸಮೂಹಗಳು ತಮ್ಮ  ಬದುಕಿನ ಎಲ್ಲ ವಲಯಗಳಲ್ಲಿ ತಲೆಯೆತ್ತಿ ಬದುಕುವುದೆಂದರ್ಥ. ದಿಟ ಮಾತು ಮುಖ್ಯವಾಗಿ ಅಭಿವ್ಯಕ್ತಿಗೆ ಸಂಬಂಧಿಸಿದೆ. ಅಭಿವ್ಯಕ್ತಿ ವಿಮೋಚನೆಗೆ ಸಂಬಂಧಿಸಿದೆ. ಹಾಗಾಗಿ, ಮಾತು ಮತ್ತು ಅಭಿವ್ಯಕ್ತಿಗಳ ನಡುವೆ ಕಂದಕಗಳನ್ನು ಸೃಷ್ಟಿಸಬಾರದು. ಕೋಮು ಇಲ್ಲವೇ ಜಾತೀಯತೆಯನ್ನು ನೆಲೆಯಾಗಿಸಿಕೊಂಡ ರಾಜಕೀಯ ಸೈದ್ಧಾಂತಿಕ ನಿಲುವುಗಳಲ್ಲಿ ಕಂದಕಗಳನ್ನು ಏರ್ಪಡಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲಾಗುತ್ತದೆ.

ವಿಚಾರ ಇಲ್ಲವೇ ಯಾವುದೇ ತಿಳಿವು ಯಾವ ಸಾಮಾಜಿಕ, ರಾಜಕೀಯ ವಲಯ/ವರ್ಗಗಳನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಅನುಸರಿಸಿ, ಯಾವುದೇ ಒಂದು ಪ್ರತಿಕ್ರಿಯೆಯೂ ತನ್ನ ನಿಲುವುಗಳನ್ನು ತಾಳುವುದಾದರೆ, ಅಂತಹದೊಂದು ನಿಲುವು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೇ ಆಗಿರುತ್ತದೆ. ಅಂದರೆ, ಯಾವುದೇ ಅಭಿಪ್ರಾಯ, ಅನುಭವ ಅಭಿವ್ಯಕ್ತಿಯ ಸ್ವರೂಪವನ್ನು ಸಾರ್ವಜನಿಕರು ನಿಷ್ಪಕ್ಷಪಾತವಾಗಿ ಪರಾಮರ್ಶಿಸಲು ಸಾಧ್ಯವಾದರೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ತಾತ್ವಿಕತೆಯ ವಿನ್ಯಾಸಗಳು ಮಾತ್ರವಲ್ಲ. ಆ ಕಲ್ಪನೆಯು ಹುಟ್ಟು ಹಾಕುವ ಅರ್ಥದ ಸಾಧ್ಯತೆಗಳು ಕೂಡ ಮುಕ್ತವಾಗಿರುತ್ತವೆ. ಸಮೂಹಗಳ ಬದುಕಿನ ಒಂದು ಮುಖ್ಯ ನೆಲೆಯಾಗಿ ಅಭಿವ್ಯಕ್ತಿಯಾಗಿ ಸ್ವಾತಂತ್ರ್ಯವನ್ನು ನೋಡಬೇಕು. ಅಭಿವ್ಯಕ್ತಿ ಬರೀ (ಸ್ವಾತಂತ್ರ್ಯದ) ಹಕ್ಕಲ್ಲ ಅದು ಬದುಕು ಕೂಡ. ಏಕೆಂದರೆ, ಇದು ಮನುಷ್ಯರ ಅಂತರ್ನಿಹಿತ ಘನತೆಯ (ಇನ್ಹೆರೆಂಟ್ ಡಿಗ್ನಿಟಿ) ಪ್ರತೀಕವಾಗಿದೆ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ, ಆರ್ಥಿಕವಾಗಿ ಮುಂದುವರಿಯುತ್ತಿರುವ ಈ ಭವ್ಯ ಭಾರತದಲ್ಲಿ ದಲಿತರನ್ನು ನಡೆಸಿಕೊಳ್ಳುವ ರೀತಿಯೇ ಅತ್ಯಂತ ಅಮಾನವೀಯ ನಿಲುವು.

Dalit Koolii

ದಲಿತ ಸಮೂಹಗಳಿಗೆ ಸೇರಿದ ಮಕ್ಕಳು, ಮಹಿಳೆ, ಕೂಲಿ-ನಾಲಿ ಮಾಡಿಕೊಂಡಿರುವ ಬಹುಜನರು, ದಿನವೂ ಒಂದಿಲ್ಲೊಂದು ಕಾರಣದಿಂದ ಮೇಲ್ವರ್ಗಗಳ ಜಾತಿಯತೆ ಎಂಬ ಅಮಾನುಷವಾದ ಕ್ರಿಯೆಗೆ ಬಲಿಯಾಗುತ್ತಲೇ ಇದ್ದಾರೆ. ದಲಿತರ ಈ ಅನಿಶ್ಚಿತ ಮತ್ತು ಕ್ಷೋಭೆಗೊಂಡ ಜೀವನಕ್ಕೆ ತಕ್ಕ ರೂಪಕೊಟ್ಟು ಅವರೂ ಎಲ್ಲರಂತೆ ಸಮಾನರು ಎಂಬುದನ್ನು ತೋರಿಸಿಕೊಡುವ ಒಂದು ಸಾಮೂಹಿಕ ಪ್ರಯತ್ನ ಕರ್ನಾಟಕದ ಕಲ್ಯಾಣದಲ್ಲಿ ಬಸವಣ್ಣನ ನೇತೃತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿ ನಡೆಯಿತು. ದಿಟ, ಅದು ಅದೇ ತೀವ್ರತೆಯಲ್ಲಿ ಮುಂದುವರಿಯಲಿಲ್ಲ. ಅಷ್ಟೆ ಅಲ್ಲದೇ, ನಮ್ಮ ಸಮೂಹಗಳಲ್ಲಿ ನೆಲೆನಿಂತಿದ್ದ ಸಾಮಾಜಿಕ, ಧಾರ್ಮಿಕ, ಮೇಲು-ಕೀಳು ಎಂಬ ತಾರತಮ್ಯವನ್ನು ತೊಡೆದು ಹಾಕಲು ಬಸವಣ್ಣನಿಗೆ ಎದುರಾದ ಸಮಸ್ಯೆಗಳು ಅನೇಕ. ಈ ಬಿಕ್ಕಟ್ಟುಗಳನ್ನು ಬಗೆಹರಿಸಲು ಹಾಗೂ ಆತ್ಮಶ್ರೀತ್ವವನ್ನು ಸಮೂಹಗಳಲ್ಲಿ ನೆಲೆಗೊಳಿಸಲು ಬುದ್ಧ, ಬಸವ, ಅಂಬೇಡ್ಕರ್ ಅವರು ಅನುಸರಿಸಿದ ತತ್ವಗಳು ಎಂದರೆ, ಸ್ವಾತಂತ್ರ್ಯ, ಸಮಾನ ನ್ಯಾಯ ಹಾಗೂ ಬಾಂಧವ್ಯ ಎನ್ನಬಹುದು. ಇದೇ ತಾತ್ವಿಕತೆಗೆ ಪೂರಕವಾಗಿ ಕುವೆಂಪು ಅವರು ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಎಂಬ ತಾತ್ವಿಕ ಮಂತ್ರಗಳನ್ನು ರೂಪಿಸಿದರು. ನಿಜವಾದ ಪ್ರಜಾಪ್ರಭುತ್ವ ಮತ್ತು ಸಮಾಜವಾದವನ್ನು ನೆಲೆಗೊಳಿಸುವುದು ಈ ತತ್ವಗಳ ಗುರಿಯಾಗಿದೆ.

ಜಾತಿ ವಿನಾಶ ಇಲ್ಲವೇ ನಿರ್ಮೂಲನೆ ಎನ್ನುವುದು ಹಿತವಾಗಿ ಕೇಳಿಸುತ್ತದೆ. ಇದು ಕೇವಲ ಕೇಳಿಸುತ್ತದೆ ಹೊರತು ಆಚರಣೆಗೆ ಬರುವುದಿಲ್ಲ. ಏಕೆಂದರೆ, ನಮ್ಮನ್ನು ಎಲ್ಲ ಬಗೆಯ ಬಿಕ್ಕಟ್ಟುಗಳಿಂದ ವಿಮೋಚನೆಗೊಳಿಸಲು ರೂಪಿಸಿದ ತಾತ್ವಿಕ ಚೌಕಟ್ಟುಗಳು ಹಾಗೂ ಸಾಮಾಜಿಕ ಮೌಲ್ಯಗಳನ್ನು ನಾವು ಕೇವಲ ಬೋಧನೆಗೆ ಸೀಮಿತಗೊಳಿಸಿ, ಆಚರಣೆಯಲ್ಲಿ ಎಲ್ಲ ಬಗೆಯ ಕಂಧಾಚಾರಗಳನ್ನು ಅನುಸರಿಸುತ್ತಿದ್ದೇವೆ. ಆದ್ದರಿಂದ ದಲಿತರನ್ನು, ಮಹಿಳೆಯರನ್ನು, ಅಲ್ಪಸಂಖ್ಯಾತರನ್ನು ಹಾಗೂ ಹಿಂದುಳಿದವರನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವ ಕನಿಷ್ಠ ಸಾಮಾಜಿಕ ವಿವೇಕವೂ ನಮ್ಮಲ್ಲಿ ನೆಲೆಗೊಂಡಿಲ್ಲ. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗವುದೆಂದರೆ (ಬಿಡುಗಡೆ) ನಮ್ಮ ಮಾನಸಿಕ ಸ್ಥಿತಿ ಹಾಗೂ ಗ್ರಹಿಕೆಯಲ್ಲಿ ಅಮೂಲಾಗ್ರವಾದ ಪರಿವರ್ತನೆಯಾಗವುದು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app