ಗ್ರಾಹಕಾಯಣ | ಬ್ಯಾಂಕ್ ಸಾಲ ವಸೂಲಿ ಏಜೆಂಟರು ಕಿರುಕುಳ ಕೊಟ್ಟರೆ ಮಾಡಬೇಕಾದ್ದೇನು?

bank loan recovery agents 3

ಈಗೀಗ ಸಾಲ ತೆಗೆದುಕೊಳ್ಳುವುದು ಸಿಕ್ಕಾಪಟ್ಟೆ ಸುಲಭ. ಆದರೆ, ಸಾಲ ವಸೂಲಿ ಹೆಸರಲ್ಲಿ ನಡೆಯುವ ಕಿರುಕುಳ ಅನಾಗರಿಕ. ಇಂಥ ಪ್ರಕರಣ ಹೆಚ್ಚಾದ ಕಾರಣ, ರಿಸರ್ವ್ ಬ್ಯಾಂಕ್ ನೀತಿ ಸಂಹಿತೆ ಜಾರಿ ಮಾಡಿದೆ. ವಸೂಲಿಗಾರರು ಸಾಲಗಾರರೊಂದಿಗೆ ಹೇಗೆ ವರ್ತಿಸಬೇಕು ಮತ್ತು ತಮಗೆ ಕಿರುಕುಳವಾದಾಗ ಗ್ರಾಹಕರು ಏನು ಮಾಡಬೇಕೆಂದು ಈ ಸಂಹಿತೆ ಹೇಳುತ್ತದೆ

ಒಂದು ಕಾಲದಲ್ಲಿ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದೇ ಪ್ರಯಾಸದ ಕೆಲಸವಾಗಿತ್ತು. ಯಾವುದೇ ಬ್ಯಾಂಕ್ ಸಾಲ ನೀಡಲು ಮುಂದೆ ಬರುತ್ತಿರಲಿಲ್ಲ. ನಿಮ್ಮಲ್ಲಿರುವ ಚಿನ್ನ, ನಿವೇಶನ, ಮನೆ, ಕೃಷಿ ಭೂಮಿ ಇತ್ಯಾದಿ ಆಸ್ತಿ ಅಡವಿಟ್ಟರೂ ಸಾಲ ನೀಡಲು ಬ್ಯಾಂಕ್‍ಗಳು ಅನುಮಾನಿಸುತ್ತಿದ್ದವು. ಆದರೆ ಈಗ, ಸರ್ಕಾರಿ ಬ್ಯಾಂಕ್‍ಗಳಲ್ಲದೆ ಖಾಸಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ನೀವು ಬೇಡವೆಂದರೂ ಸಾಲ ನೀಡುತ್ತಿವೆ!

ಕೇವಲ ಮೊಬೈಲ್ ಮೂಲಕ ಒಂದು ಮೆಸೇಜ್ ಮಾಡಿದರೆ ಸಾಕು, ಹತ್ತಾರು ಅಧಿಕಾರಿಗಳು ನಿಮ್ಮ ಮನೆಗೆ ಬಂದು ಸಾಲ ನೀಡುತ್ತಾರೆ. ಅಷ್ಟೇಕೆ, ಮೆಸೇಜ್ ನೋಡಿದ ಕೂಡಲೇ ಯಾವುದೇ ದಾಖಲೆ ಕೇಳದೆಯೂ ನಿಮ್ಮ ಖಾತೆಗೆ ಹಣ ಜಮಾ ಮಾಡುತ್ತಾರೆ. ಮೆಸೇಜ್ ಮಾಡುವುದೂ ಬೇಡ, ಆನ್‍ಲೈನ್‍ನಲ್ಲಿ ಸಾಲಕ್ಕಾಗಿ ಹುಡುಕಾಡುತ್ತಿದ್ದರೂ ಸಾಕು, ನಿಮಗೇ ಅಚ್ಚರಿ ಆಗುವಂತೆ ಥಟ್ಟನೆ ಸಾಲ ದೊರೆಯುತ್ತದೆ. ಕಾಲ ಕೆಟ್ಟಿದೆ ಎಂದು ಹೇಳಿದವರಾರು? ಈ ರೀತಿ ಸುಲಭವಾಗಿ ನಿಮ್ಮ ಹಿರಿಯರಿಗೆ ಸಾಲ ದೊರೆಯುತ್ತಿತ್ತೇ?

ಆದರೆ, ಸಮಸ್ಯೆ ಆರಂಭವಾಗುವುದು ಹೀಗೆ ಸುಲವಾಗಿ ಸಿಕ್ಕ ಸಾಲ ತೆಗೆದುಕೊಂಡ ನಂತರವೇ. ಸಾಲದ ಕಂತನ್ನು ಪಾವತಿಸುತ್ತಿದ್ದರೂ ಸಾಲ ವಸೂಲಾತಿ ಎಜೆಂಟರುಗಳ ಕಾಟ ಆರಂಭವಾಗುತ್ತದೆ. ಕಂತು ಪಾವತಿಸುವುದಕ್ಕೆ ಕೇವಲ ಒಂದು ದಿನ ತಡವಾದರೂ ಅಧಿಕ ಬಡ್ಡಿ ವಿಧಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಾಲದ ಮೊತ್ತವನ್ನು ಸಂಪೂರ್ಣವಾಗಿ ತೀರಿಸಿದ್ದರೂ ನಾಲ್ಕಾರು ತಿಂಗಳ ನಂತರ, ಬಾಕಿ ಇದ್ದ ಮೊತ್ತಕ್ಕೆ ಬಡ್ಡಿ, ಚಕ್ರ ಬಡ್ಡಿ ಹಾಗೂ ದಂಡದ (ಪೆನಾಲ್ಟಿ) ಮೊತ್ತ ಸೇರಿಸಿ ಅದನ್ನು ಪಾವತಿಸುವಂತೆ ನಿಮಗೆ ದೂರವಾಣಿ, ಎಸ್ಸೆಮ್ಮೆಸ್ ಅಥವಾ ಪತ್ರ ಬರುತ್ತದೆ. ಸಾಲ ತೀರಿಸಿರುವ ಬಗ್ಗೆ ದಾಖಲೆ ನೀಡುತ್ತೇನೆ ಎಂದರೂ ವಸೂಲಾತಿ ಮಾಡುವವರು ಕೇಳುವುದಿಲ್ಲ. "ಮೊದಲು ಸಾಲ ತೀರಿಸಿ, ನಂತರ ದಾಖಲೆ ಪರಿಶೀಲಿಸುತ್ತೇನೆ," ಎಂದುಬಿಡುತ್ತಾರೆ.

Image
bank loan recovery agents 4
ಸಾಂದರ್ಭಿಕ ಚಿತ್ರ

ಬ್ಯಾಂಕ್‍ಗಳು ಸಾಲ ವಸೂಲಾತಿಗೆ ಪ್ರತ್ಯೇಕ ವ್ಯಕ್ತಿಗಳನ್ನು ನೇಮಕ ಮಾಡುತ್ತವೆ. ಸಮಸ್ಯೆ ಉದ್ಭವಿಸುವುದು ಇವರಿಂದಲೇ. ಈ ಸಾಲ ವಸೂಲಾತಿ ಏಜೆಂಟರು ಅನುಸರಿಸುವ ವಿಧಾನ ಮಿತಿ ಮೀರಿದ್ದು. ಮಧ್ಯ ರಾತ್ರಿ ದೂರವಾಣಿ ಕರೆ ಮಾಡುವುದು, ಸಾಲ ತೆಗೆದುಕೊಂಡವರ ಹೆಂಡತಿ ಅಥವಾ ಮಕ್ಕಳಿಗೆ ಫೋನ್ ಕರೆ ಮಾಡಿ ಹೆದರಿಸುವುದು, ಇತರೆ ಸಂಬಂಧಿಕರಿಗೆ ಎಸ್ಸೆಮ್ಮೆಸ್ ಮಾಡುವುದು ಅಥವಾ ಇಮೇಲ್ ಕಳುಹಿಸುವುದು ಇತ್ಯಾದಿ ತೀರಾ ಸಹಜ. ಸಾಲಗಾರರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ, ಇತರೆ ಸಹೋದ್ಯೋಗಿಗಳ ಎದುರು ಸಾಲದ ಬಗ್ಗೆ ಜೋರು ಧ್ವನಿಯಲ್ಲಿ ಮಾತನಾಡುವುದು, ಅವರು ಚಾಲನೆ ಮಾಡುತ್ತಿದ್ದ ವಾಹನ ನಿಲ್ಲಿಸಿ ಅದರ ಕೀ ತೆಗೆದುಕೊಂಡು ಹೋಗುವುದು ಇತ್ಯಾದಿ ಮಾಡುತ್ತಾರೆ. ಕೊನೆಗೆ, ಗೂಂಡಾಗಳನ್ನು ಬಿಟ್ಟು ಸಾಲಗಾರರನ್ನು ದೈಹಿಕವಾಗಿ ಥಳಿಸಿರುವ ಪ್ರಕರಣಗಳೂ ನಡೆದಿವೆ.

81 ವರ್ಷದ ಮಹಿಳೆಯೊಬ್ಬರು ಬ್ಯಾಂಕ್‍ನಿಂದ ತಮ್ಮ ಮಗನಿಗೆ ಶಿಕ್ಷಣ ಸಾಲ ಪಡೆದಿದ್ದರು. ಬ್ಯಾಂಕ್ ನೇಮಕ ಮಾಡಿದ್ದ ಏಜೆಂಟರು 375 ದೂರವಾಣಿ ಕರೆ ಮಾಡಿ ಆಕೆಯನ್ನು ಹೆದರಿಸಿದ್ದರು. ಮತ್ತೊಂದು ಪ್ರಕರಣದಲ್ಲಿ, 45 ಪ್ರಯಾಣಿಕರಿದ್ದ ಬಸ್ ನಿಲ್ಲಿಸಿ, ಮೂರು ಗಂಟೆಗಳ ಕಾಲ ತಡೆ ಒಡ್ಡಿದ್ದರು. ಕಾರಣ - ಬಸ್ ಕಂಪನಿಯವರು ಸಾಲ ಮರುಪಾವತಿ ಮಾಡಿರಲಿಲ್ಲ. ಎಷ್ಟೋ ಸಾಲಗಾರರು ಏಜೆಂಟರ ಕಾಟ ತಡೆಯಲಾರದೆ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲ ವಸೂಲಾತಿ ಏಜೆಂಟ್‍ಗಳು ಅನುಸರಿಸುವ ಕ್ರಮಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ನೈತಿಕ ಸಂಹಿತೆಯನ್ನು ಜಾರಿಗೊಳಿಸಿದೆ. ಯಾವ ಸಂದರ್ಭದಲ್ಲಿ ಮತ್ತು ಹೇಗೆ ಸಾಲಗಾರರನ್ನು ಸಂಪರ್ಕಿಸಬೇಕೆಂದು ಈ ಸಂಹಿತೆ ಹೇಳುತ್ತದೆ. ಎಲ್ಲ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಈ ಸಂಹಿತೆ ಅನ್ವಯವಾಗುತ್ತದೆ. ಸಂಹಿತೆ ಉಲ್ಲಂಘಿಸಿದ ಏಜೆಂಟರ ಬಗ್ಗೆ ಬ್ಯಾಂಕ್ ಪ್ರತೀ ತಿಂಗಳು ರಿಸರ್ವ್ ಬ್ಯಾಂಕ್‍ಗೆ ವರದಿ ಸಲ್ಲಿಸಬೇಕಿದೆ.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | ವೈದ್ಯಕೀಯ ನಿರ್ಲಕ್ಷ್ಯ ಎಂದರೇನು, ಯಾವಾಗ ದೂರು ಕೊಡಬಹುದು?

ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ನೀತಿ ಸಂಹಿತೆಯ ಪ್ರಕಾರ, ಸಾಲ ವಸೂಲಾತಿ ಏಜೆಂಟರು ಸಾಮಾನ್ಯವಾಗಿ ಬೆಳಗ್ಗೆ ಎಂಟರಿಂದ ರಾತ್ರಿ ಎಂಟು ಗಂಟೆಯವರೆಗೆ ಮಾತ್ರ ಕರೆ ಮಾಡಬೇಕು. ಕೆಲವು ಸಂದರ್ಭಗಳಲ್ಲಿ ಮಾತ್ರ ಇತರೆ ವೇಳೆಯಲ್ಲಿ ದೂರವಾಣಿ ಕರೆ ಮಾಡಬಹುದು. ಸಾಲಗಾರರೇ ದೂರವಾಣಿ ಕರೆಗೆ ಒಪ್ಪಿಗೆ ನೀಡಿದ್ದು ಅಥವಾ ಸಾಲ ವಸೂಲಾತಿ ಏಜೆಂಟ್ ಅವರನ್ನು ನೇಮಕ ಮಾಡಿರುವುದಾಗಿ ಸಾಲಗಾರರಿಗೆ ತಿಳಿಸಿದ್ದು, ಸಾಲಗಾರರು ಬೇಕೆಂದೇ ದೂರವಾಣಿ ಕರೆಗೆ ಉತ್ತರಿಸದಿದ್ದಾಗ ಮಾತ್ರ ಮೇಲೆ ತಿಳಿಸಿದ ಸಮಯದಲ್ಲಿ ದೂರವಾಣಿ ಕರೆ ಮಾಡಬಹುದು. ಅಲ್ಲದೆ, ಸಾಲಗಾರರಿಗೆ ಮಾಡಿದ ಕರೆಗಳ ವಿವರವನ್ನು ದಾಖಲಿಸಬೇಕು. ನೀತಿ ಸಂಹಿತೆಯ ಪ್ರಕಾರ, ಸಾಲ ವಸೂಲಾತಿ ಮಾಡುವ ಏಜೆಂಟರು ಅನುಸರಿಸಬೇಕಾದ ಇತರೆ ವಿಧಾನ ಹೀಗಿದೆ:

 1. ಸಾಲ ವಸೂಲಾತಿಗಾರರು ತಾವು ಯಾರೆಂದು ಮತ್ತು ಅವರ ಉದ್ದೇಶವೇನೆಂದು ಸ್ಪಷ್ಟಪಡಿಸಬೇಕು.
 2. ಸಾಲದ ವಿವರ, ಬಾಕಿ ಮೊತ್ತ ಇತ್ಯಾದಿ ತಿಳಿಸಬೇಕು.
 3. ಸಾಲ ವಸೂಲಾತಿ ಬಗ್ಗೆ ನೋಟಿಸ್ ನೀಡಬೇಕು.
 4. ಸಾಲಗಾರರು ಬ್ಯುಸಿಯಾಗಿದ್ದಲ್ಲಿ, ವಾಪಸು ಕರೆ ಮಾಡುವಂತೆ ತಿಳಿಸಬೇಕು.
 5. ಸಾಲಗಾರರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಬೇಕು.
 6. ಸಾಲ ಮತ್ತು ಅದರ ವಸೂಲಾತಿಗೆ ಮಾತ್ರ ಕರೆ ಸೀಮಿತವಾಗಿರಬೇಕು.
 7. ಕರೆ ಮಾಡಿದಾಗ ಎಜೆಂಟರು ಮತ್ತು ಬ್ಯಾಂಕ್ ದೂರವಾಣಿ ವಿವರ ನೀಡಬೇಕು.
 8. ಸಾಲ ಪಡೆಯುವುದಕ್ಕೆ ನೀಡಿದ್ದ ಆಸ್ತಿಯನ್ನು ವಶಪಡಿಸಿಕೊಳ್ಳುವ ಮುನ್ನ ಈ ಕುರಿತು ಮನ್ಸೂಚನೆ ನೀಡಿರಬೇಕು.
 9. ಸಾಲಕ್ಕೆ ಸಂಬಂಧಿಸಿದ ವ್ಯಾಜ್ಯವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವ ಅವಕಾಶ ನೀಡಬೇಕು.
 10. ಸಾಲ ವಸೂಲಾತಿ ಏಜೆಂಟರು ಸೂಕ್ತ ರೀತಿಯಲ್ಲಿ ವರ್ತಿಸಬೇಕು.
  Image
  bank loan recovery agents 1
  ಸಾಂದರ್ಭಿಕ ಚಿತ್ರ

ಒಂದು ವೇಳೆ, ಸಾಲ ವಸೂಲಾತಿ ಮಾಡುವವರು ರಿಸರ್ವ್ ಬ್ಯಾಂಕ್ ನೀಡಿರುವ ಸಂಹಿತೆಯ ಪ್ರಕಾರ ನಡೆದುಕೊಳ್ಳದಿದ್ದರೆ, ಸಾಲಗಾರರು ಈ ಕೆಳಗಿನ ಕೆಲವು ಕ್ರಮ ಕೈಗೊಳ್ಳಬಹುದು:

 1. ಏಜೆಂಟರು ದೂರವಾಣಿ ಕರೆ ಮಾಡಿದ ಕೂಡಲೇ ಅಥವಾ ಇಮೇಲ್/ಎಸ್ಸೆಮ್ಮೆಸ್ ಹಾಕಿದ ಕೂಡಲೇ ಅದನ್ನು ಯಾರು ಕಳುಹಿಸಿದ್ದಾರೋ ಅವರ ಹೆಸರು, ಬ್ಯಾಂಕ್ ವಿವರ ಮತ್ತು ಸಾಲದ ವಿವರವನ್ನು ಗುರುತು ಮಾಡಿಕೊಳ್ಳಬೇಕು. ಈ ಸಾಲ ನಿಮಗೆ ಸಂಬಂಧಪಟ್ಟಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
 2. ಕರೆ ಮಾಡುತ್ತಿರುವವರು ಅಥವಾ ಇಮೇಲ್/ಎಸ್ಸೆಮ್ಮೆಸ್ ಹಾಕಿರುವವರು ಬ್ಯಾಂಕ್ ನೇಮಕ ಮಾಡಿದ ವ್ಯಕ್ತಿಯೇ ಎಂಬುದನ್ನು ಕೂಡ ಖಾತ್ರಿಪಡಿಸಿಕೊಳ್ಳಿ.
 3. ಕರೆ ಮಾಡಿದಾಗ ನಡೆಯುವ ಸಂಭಾಷಣೆ/ಮಾತುಗಳ ಸಾರಾಂಶವನ್ನು ಬರೆದಿಟ್ಟುಕೊಳ್ಳಿ.
 4. ಸಾಲ ಮತ್ತು ಬಾಕಿ ಇರುವ ಬಗ್ಗೆ ನಿಮಗೆ ತಿಳಿದಿದೆ ಎಂದೂ, ಅದನ್ನು ಪಾವತಿಸಲು ಕ್ರಮ ಕೈಗೊಳ್ಳುವುದಾಗಿಯೂ ಏಜೆಂಟರಿಗೆ ತಿಳಿಸಿ.
 5. ಏಜೆಂಟರು ಭಯಪಡಿಸಿದರೆ ಅಥವಾ ಅವಾಚ್ಯ ಶಬ್ದಗಳಿಂದ ಬೈದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿ. ಅಗತ್ಯವಿದ್ದಲ್ಲಿ ದೂರವಾಣಿ ಕರೆ ನಿರಾಕರಿಸಬಹುದು. ಮತ್ತೊಮ್ಮೆ ತಮಗೆ ಕರೆ ಮಾಡಬಾರದೆಂದೂ ಹೇಳಬಹುದು.
 6. ಪರಿಸ್ಥಿತಿ ಸುಧಾರಿಸದೆ ಇದ್ದಲ್ಲಿ, ಏಜೆಂಟರು ಮತ್ತು ಅವರ ಕಂಪನಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಬಹುದು.
 7. ಸಾಲ ತೆಗೆದುಕೊಂಡ ಬ್ಯಾಂಕ್ ಮತ್ತು ರಿಸರ್ವ್ ಬ್ಯಾಂಕ್‍ಗೆ ದೂರು ಸಲ್ಲಿಸಬಹುದು.
 8. ಇದ್ಯಾವುದೂ ಫಲ ನೀಡದಿದ್ದಲ್ಲಿ, ಬ್ಯಾಂಕಿಂಗ್ ಒಂಬಡ್ಸ್‌ಮನ್ ಸಂಸ್ಥೆಯಲ್ಲಿ ದೂರು ದಾಖಲಿಸಬಹುದು.
ಮುಖ್ಯ ಚಿತ್ರ - ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
3 ವೋಟ್