ಗ್ರಾಹಕಾಯಣ | ಪಾರ್ಕಿಂಗ್‍ನಲ್ಲಿ ನಿಮ್ಮ ವಾಹನ ಕಾಣೆಯಾದರೆ ಯಾರು ಜವಾಬ್ದಾರಿ?

ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳು ಕಾಣೆಯಾಗುವುದು ಮಹಾನಗರಗಳಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ಹೀಗೆ ತಮ್ಮ ವಾಹನ ಕಾಣಿಸದಿದ್ದಾಗ ಏನು ಮಾಡುವುದೆಂದು ತಿಳಿಯದೆ ಸಾಕಷ್ಟು ಮಂದಿ ಪರಿತಪಿಸುವುದುಂಟು. ಆದರೆ, ನಿರಾಶರಾಗಬೇಕಿಲ್ಲ. ಪಾರ್ಕಿಂಗ್ ಸ್ಥಳದಿಂದ ನಿಮ್ಮ ವಾಹನ ನಾಪತ್ತೆಯಾಗಿದ್ದರೆ ಏನು ಮಾಡಬಹುದೆಂಬ ಮಾಹಿತಿ ಇಲ್ಲುಂಟು

ಇಸ್ಕಾನ್ ಸಂಸ್ಥೆಯ ಗುರು ಗೌರ್ ಗೋಪಾಲ ದಾಸ್ ಅವರ ಭಾಷಣಗಳು ಜಗತ್ಪ್ರಸಿದ್ದ. ಅವರು ಒಂದೆರಡು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ ಕತೆ ಪಾರ್ಕಿಂಗ್‍ಗೆ ಸಂಬಂಧಿಸಿದ್ದು:

ಅಮಿತಾಭ್ ಬಚ್ಚನ್ ಮತ್ತು ಶಶಿ ಕಪೂರ್ ನಟನೆಯ 'ದೀವಾರ್' ಹಿಂದಿ ಚಿತ್ರದ ಒಂದು ಸನ್ನಿವೇಶದಲ್ಲಿ ಅಮಿತಾಭ್ ಪಾತ್ರಧಾರಿ ತನ್ನ ಸಿರಿವಂತಿಕೆಯ ಬಗ್ಗೆ ಜಂಭಕೊಚ್ಚಿಕೊಳ್ಳುತ್ತಾನೆ. ತನ್ನ ಹತ್ತಿರ ಮನೆ, ಕಾರು, ಬಂಗಲೆ, ಹಣ ಎಲ್ಲವೂ ಇದೆ ಆದರೆ ನಿನ್ನ ಹತ್ತಿರ ಏನಿದೆ ಎಂದು ಶಶಿ ಕಪೂರ್‌ನನ್ನು ಕೇಳುತ್ತಾನೆ. ಆಗ ಪೊಲೀಸ್ ಪಾತ್ರಧಾರಿ ಶಶಿ ಕಪೂರ್ "ನನ್ನ ಬಳಿ ಅಮ್ಮ ಇದ್ದಾಳೆ," (ಮೇರೆ ಪಾಸ್ ಮಾ ಹೈ) ಎನ್ನುತ್ತಾನೆ. ಪ್ರಸ್ತುತ ಇದೇ ಸನ್ನಿವೇಶವನ್ನು ಈಗಿನ ಮುಂಬೈ ಅಥವಾ ಇನ್ಯಾವುದೇ ಮಹಾನಗರದ ಹಿನ್ನೆಲೆಯಲ್ಲಿ ಹೇಳುವುದಾದರೆ ಹೇಗಿರಬಹುದು? ಅಮಿತಾಭ್ ಪಾತ್ರಧಾರಿ, "ನನ್ನ ಹತ್ತಿರ ನಾಲ್ಕಾರು ಔಡಿ, ಬೆನ್ಝ್ ಕಾರುಗಳಿವೆ, ನಿನ್ನ ಹತ್ತಿರ ಏನಿದೆ?" ಎಂದು ಕೇಳಿದರೆ, "ನನ್ನ ಹತ್ತಿರ ಪಾರ್ಕಿಂಗ್ ಜಾಗವಿದೆ," ಎನ್ನಬೇಕಾಗುತ್ತದೆ ಶಶಿ ಕಪೂರ್.

ಈ ಹಾಸ್ಯದಲ್ಲಿ ಮಹಾನಗರಗಳ ಪಾರ್ಕಿಂಗ್ ಸಮಸ್ಯೆ ಢಾಳಾಗಿದೆ. ನಗರಗಳಲ್ಲಿ ಪಾರ್ಕಿಂಗ್ ಸಮಸ್ಯೆ ಎಷ್ಟು ಜಟಿಲವಾಗಿದೆ ಎಂದರೆ, ಇನ್ನು ಮುಂದೆ ವಾಹನ ಖರೀದಿಸಬೇಕಾದರೆ, ಪಾರ್ಕಿಂಗ್ ಸ್ಥಳ ಇದೆ ಎಂಬುದನ್ನು ಖಾತ್ರಿಪಡಿಸಬೇಕಾಗುತ್ತದೆ - ಸರ್ಕಾರ ಈ ರೀತಿಯ ಕಾನೂನು ತರುವ ಆಲೋಚನೆಯಲ್ಲಿದೆ. ಈಗಾಗಲೇ ಸಿಂಗಪೂರ್ ಮುಂತಾದ ದೇಶಗಳಲ್ಲಿ ಈ ಬಗೆಯ ಕಾನೂನು ಜಾರಿಯಲ್ಲಿದೆ.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | ಇನ್ಮುಂದೆ ಹೋಟೆಲ್‍ಗಳು ಸೇವಾ ಶುಲ್ಕ ವಿಧಿಸಿದರೆ ಧಾರಾಳವಾಗಿ ದೂರು ಕೊಡಬಹುದು

ಬೆಂಗಳೂರು ನಗರದಲ್ಲಿ ಹಾಗೂ ಹೀಗೂ ಮಾಡಿ ಪಾರ್ಕಿಂಗ್‍ಗೆ ಜಾಗ ಹುಡುಕಿ ನಿಮ್ಮ ವಾಹನ ನಿಲ್ಲಿಸಿದ್ದರೂ, ನಿಮ್ಮ ಕೆಲಸ ಮುಗಿಸಿ ಬಂದು ವಾಪಸು ಬಂದು ವಾಹನ ನೋಡುವವರೆಗೆ ಸಮಾಧಾನವಿರುವುದಿಲ್ಲ. ವಾಹನ ಅಥವಾ ಅದರ ಬಿಡಿಭಾಗಗಳು ಮಾಯವಾಗಿದ್ದರೆ ಆಶ್ಚರ್ಯವಿಲ್ಲ. ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡಿ, ಹಣ ಕೊಟ್ಟು ಟೋಕನ್ ಪಡೆದಿದ್ದರೂ ಕೆಲವೊಮ್ಮೆ ವಾಹನ ಕಳ್ಳತನವಾಗುವುದು ಅಥವಾ ಬಿಡಿಭಾಗಗಳು ಮಾಯವಾಗುವುದು ಅಪರೂಪವಲ್ಲ. ಇದಕ್ಕೆ ಪರಿಹಾರವುಂಟೇ?

ಸಿ ಕೆ ಪ್ರಸನ್ನ ಎಂಬುವವರು ಬೆಂಗಳೂರಿನ ರೈಲ್ವೆ ಇಲಾಖೆಯಲ್ಲಿ ಕಾನೂನು ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ತಮ್ಮ ದ್ವಿಚಕ್ರವನ್ನು ರೈಲ್ವೆ ನಿಲ್ದಾಣದ ಅಧಿಕೃತ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದರು. ಇದಕ್ಕಾಗಿ ಅವರು ಪಾರ್ಕಿಂಗ್ ಗುತ್ತಿಗೆದಾರನಿಗೆ ತಿಂಗಳಿಗೆ ಒಂದು ನೂರು ರೂಪಾಯಿ ಕೊಡುತ್ತಿದ್ದರು. ಒಂದು ದಿನ ಅವರು ಕೆಲಸ ಮುಗಿಸಿ ಮನೆಗೆ ಹಿಂತಿರುಗಲು ಬಂದಾಗ ಅವರ ದ್ವಿಚಕ್ರ ಕಳುವಾಗಿದ್ದು ತಿಳಿಯಿತು. ಇದರ ಬಗ್ಗೆ ಗುತ್ತಿಗೆದಾರನಿಗೆ ಮತ್ತು ರೈಲ್ವೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ಇಬ್ಬರಿಂದಲೂ ಉತ್ತರ ಬರಲಿಲ್ಲ. ಪ್ರಸನ್ನ ಅವರು ಬೆಂಗಳೂರು ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗೆ (ಈಗ ಆಯೋಗ) ದೂರು ಸಲ್ಲಿಸಿ ಪರಿಹಾರ ಕೋರಿದರು. ತಮ್ಮ ದೂರು ಅರ್ಜಿಯಲ್ಲಿ, ಪಾರ್ಕಿಂಗ್ ಗುತ್ತಿಗೆದಾರ ಮತ್ತು ರೈಲ್ವೆ ಇಲಾಖೆಯ ನಿರ್ಲಕ್ಷದಿಂದ ತಮ್ಮ ದ್ವಿಚಕ್ರ ವಾಹನ ಕಳುವಾಗಿದೆ ಎಂದು ಆರೋಪಿಸಿದರು.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | ಬ್ಯಾಂಕ್ ಸಾಲ ವಸೂಲಿ ಏಜೆಂಟರು ಕಿರುಕುಳ ಕೊಟ್ಟರೆ ಮಾಡಬೇಕಾದ್ದೇನು?

ವಿಚಾರಣೆ ಸಂದರ್ಭದಲ್ಲಿ ಪಾರ್ಕಿಂಗ್ ಗುತ್ತಿಗೆದಾರ ಹಾಜರಾಗಲಿಲ್ಲ. ರೈಲ್ವೆ ಇಲಾಖೆಯ ಅಧಿಕಾರಿಗಳ ಪರ ವಕೀಲರು ಹಾಜರಾಗಿ, ದ್ವಿಚಕ್ರ ವಾಹನ ಕಾಣೆಯಾಗಿದ್ದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ವಾದ ಮಾಡಿದರು. "ರೈಲ್ವೆ ಇಲಾಖೆಯು ವಾಹನ ಪಾರ್ಕ್ ಮಾಡಲು ಸ್ಥಳ ನೀಡಿರುವುದು ನಿಜವಾದರೂ, ಅಲ್ಲಿನ ವಾಹನಗಳನ್ನು ನೋಡಿಕೊಳ್ಳುವುದು ರೈಲ್ವೆ ಇಲಾಖೆಯ ಕರ್ತವ್ಯವಲ್ಲ," ಎಂದು ಹೇಳಿದರು. ಅಲ್ಲದೆ, "ರೈಲ್ವೆ ಇಲಾಖೆಯು ವಾಹನ ಪಾರ್ಕಿಂಗ್ ಮಾಡುವುದಕ್ಕೆ ಯಾವುದೇ ಅಧಿಕೃತ ಪಾಸ್ ನೀಡಿಲ್ಲವಾದ ಕಾರಣ, ವಾಹನ ಕಳುವಾದರೆ ಅದಕ್ಕೆ ರೈಲ್ವೆ ಇಲಾಖೆಯನ್ನು ಹೊಣೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ," ಎಂದು ವಾದ ಮಂಡಿಸಿದರು.

ಆಯೋಗವು ರೈಲ್ವೆ ಇಲಾಖೆಯ ವಾದವನ್ನು ಒಪ್ಪಲಿಲ್ಲ. "ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿರುವುದು ರೈಲ್ವೆ ಇಲಾಖೆ. ಅದಕ್ಕಾಗಿ ಗುತ್ತಿಗೆದಾರರನ್ನು ನೇಮಕ ಮಾಡಿರುವುದು ಕೂಡ ರೈಲ್ವೆ ಇಲಾಖೆ. ವಾಹನ ಸವಾರರು ಹಣ ಕೊಟ್ಟು ತಮ್ಮ ವಾಹನವನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುತ್ತಾರೆ. ಅದರ ಸುರಕ್ಷತೆಯ ಜವಾಬ್ದಾರಿ ರೈಲ್ವೆ ಇಲಾಖೆ ಮತ್ತು ಗುತ್ತಿಗೆದಾರನ ಮೇಲಿರುತ್ತದೆ. ರೈಲ್ವೆ ಇಲಾಖೆ ನೀಡಿರುವ ಪಾಸ್‍ನಲ್ಲಿ ‘ವಾಹನ ಕಳುವಾದರೆ ಅದು ರೈಲ್ವೆಯ ಇಲಾಖೆ ಜವಾಬ್ದಾರಿಯಲ್ಲ’ ಎಂದು ಮುದ್ರಿಸಿಲ್ಲವಾದ ಕಾರಣ, ವಾಹನದ ಸುರಕ್ಷತೆ ರೈಲ್ವೆ ಮತ್ತು ಗುತ್ತಿಗೆದಾರನ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ, ರೈಲ್ವೆ ಇಲಾಖೆಯು ಬಳಕೆದಾರರಿಗೆ ಸೂಕ್ತ ಪರಿಹಾರ ನೀಡಬೇಕಾಗುತ್ತದೆ," ಎಂದು ಆಯೋಗ ತೀರ್ಪು ನೀಡಿತು. ಬಳಕೆದಾರರಿಗೆ 10,000 ರೂಪಾಯಿ ಪರಿಹಾರ ಮತ್ತು ವ್ಯಾಜ್ಯದ ಖರ್ಚು-ವೆಚ್ಚಕ್ಕೆಂದು 5000 ರೂಪಾಯಿ ನೀಡಬೇಕೆಂದು ತೀರ್ಮಾನಿಸಿತು. ಅಗತ್ಯವಿದ್ದಲ್ಲಿ ರೈಲ್ವೆ ಇಲಾಖೆಯು ಈ ಮೊತ್ತವನ್ನು ಗುತ್ತಿಗೆದಾರನಿಂದ ಪಡೆದುಕೊಳ್ಳಬಹುದು ಎಂದೂ ಟಿಪ್ಪಣಿ ಬರೆಯಿತು. "ಬಳಕೆದಾರರು ವಾಹನಕ್ಕೆ ವಿಮೆ ಮಾಡಿಸಿರುವುದರಿಂದ, ವಾಹನದ ಮೊತ್ತವನ್ನು ವಿಮಾ ಕಂಪನಿಯಿಂದ ಪಡೆದುಕೊಳ್ಳಬಹುದು. ಅದಕ್ಕೆ ಪ್ರತ್ಯೇಕ ಪರಿಹಾರ ಸಾಧ್ಯವಿಲ್ಲ," ಎಂದು ಪ್ರಕರಣ ಮುಗಿಸಿತು.

ನಿಮಗೆ ಏನು ಅನ್ನಿಸ್ತು?
2 ವೋಟ್