ಹೊಸಿಲ ಒಳಗೆ-ಹೊರಗೆ | 'ಶಾಲೆ ಬಿಟ್ಟವರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚು' ಎಂಬುದರ ನಿಜವಾದ ಅರ್ಥವೇನು?

'ಈಗ ಹಿಂದಿನಂತಿಲ್ಲ' ಎಂಬ ಡೈಲಾಗು ಹೇಳೋದು ಸುಲಭ. ಆದರೆ, ಪಠ್ಯಪುಸ್ತಕ ನೋಡಿದರೆ, ‘ಸಂಪಾದನೆ ಮಾಡುವುದು, ಅಂಗಡಿ ನಡೆಸುವುದು, ಹಣ್ಣು, ಹೂವು, ತರಕಾರಿ ಬೆಳೆಯುವುದು, ಸಾಹಸ, ಈಜಾಟ, ಆಟ...' – ಈ ಎಲ್ಲವೂ ಪುರುಷರಿಗಷ್ಟೇ ಸಂಬಂಧಿಸಿದ್ದು ಎಂಬಂಥ ವಿವರಣೆ ಇರುತ್ತದೆ, ಚಿತ್ರಗಳೂ ಅದಕ್ಕೆ ಪೂರಕ. ಇನ್ನು, ಟ್ರಾನ್ಸ್‌ಜೆಂಡರ್‌ನವರ ಸುದ್ದಿ ಕೇಳಲೇಬೇಡಿ

"ಶಿಕ್ಷಣ ವಲಯದಲ್ಲಿ ಪುರುಷ ಪ್ರಧಾನತೆ ಕಂಡು ಬರುತ್ತದೆಯೇ?" ಎಂದು ಕೇಳಿದರೆ ತಕ್ಷಣಕ್ಕೆ ಬರುವ ಉತ್ತರ, "ಹಾಗೇನಿಲ್ಲ... ಅಲ್ಲಿ ಸಮಾನತೆ ಇದೆ..." ಮೇಲ್ನೋಟಕ್ಕೆ ಹಾಗೆಯೇ ಅನಿಸುತ್ತದೆ. ಆದರೆ, ಬೇರೇನೂ ಬೇಕಾಗಿಲ್ಲ, ಈ ಹೊತ್ತಿಗೂ ಅನಕ್ಷರತೆ ಮತ್ತು ವಿವಿಧ ಹಂತಗಳಲ್ಲಿ ಮಕ್ಕಳು ಶಾಲೆ ಬಿಡುವ ಪ್ರಮಾಣ ನೋಡಿದರೆ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚಾಗಿರುವುದು ಕಂಡುಬರುತ್ತದೆ. ಇದರ ಅರ್ಥವೇನು?

Eedina App

ಶಿಕ್ಷಣದಲ್ಲಿ ಲಿಂಗ ಸಮಾನತೆಗಾಗಿ ಅನೇಕಾನೇಕ ವರುಷಗಳಿಂದ ಸೃಜನಶೀಲವಾದ ಅನೇಕ ಪ್ರಯತ್ನಗಳು ನಡೆದಿವೆ, ಅದರಿಂದ ಒಂದಷ್ಟು ಪ್ರಯೋಜನಗಳೂ ಆಗಿವೆ. ಆದರೆ, ಪುರುಷಪ್ರಧಾನತೆಯ ಮನಸ್ಥಿತಿ ಎಲ್ಲರ ಮನದಾಳದಲ್ಲಿ ಎಷ್ಟು ದಾಖಲುಗೊಂಡಿದೆಯೆಂದರೆ, ಲಿಂಗ ಸಮಾನತೆಯ ಪ್ರಕ್ರಿಯೆಗಳು ಅಳವಡಿಕೆಗೆ ಬರುವುದೇ ಬಹಳ ಕಷ್ಟ. ಇದಕ್ಕೆ ಒಂದು ಸಣ್ಣ ಉದಾಹರಣೆ ಇಲ್ಲಿದೆ...

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಅದೊಂದು ದಿನ ಇದ್ದಕ್ಕಿದ್ದಂತೆ ತನ್ನ ಹೆಸರನ್ನೇ ಮರೆತವಳ ಕತೆ

AV Eye Hospital ad

ಕೆಲವು ವರುಷಗಳ ಹಿಂದೆ ನಾಲ್ಕನೇ ತರಗತಿಯ ಪಠ್ಯದಲ್ಲಿ ಒಂದಷ್ಟು ವಾಕ್ಯಗಳನ್ನು ಕೊಟ್ಟು, ಅವುಗಳಲ್ಲಿ 'ಸರಿ-ತಪ್ಪು' ಗುರುತಿಸುವ ಅಭ್ಯಾಸವೊಂದು ಇತ್ತು. ಆ ಪೈಕಿ ಒಂದು ವಾಕ್ಯ - 'ಗಂಡಸರಿಗೆ ಅಡುಗೆ ಮನೆಯಲ್ಲಿ ಕೆಲಸವಿಲ್ಲ' ಎಂದಿತ್ತು. ಈ ವಾಕ್ಯ ಸರಿಯೇ ಅಥವಾ ತಪ್ಪೇ ಎಂದು ಮಕ್ಕಳು ಬರೆಯಬೇಕಾಗಿತ್ತು. ಮನೆಯಲ್ಲಿ ತನ್ನ ಅಪ್ಪ ಆರಾಮಾಗಿ ಮನೆಗೆಲಸ, ಅಡುಗೆ ಕೆಲಸ ಮಾಡುವುದನ್ನು ಗಮನಿಸಿದ್ದ ಮಗುವೊಂದು, ಈ ವಾಕ್ಯಕ್ಕೆ 'ತಪ್ಪು' ಎಂದು ಬರೆಯಿತು. ಅದಕ್ಕೆ ಶಿಕ್ಷಕರು ಅವಳಿಗೆ ಮನದಟ್ಟು ಮಾಡಿದ್ದು ಹೀಗೆ: "ಇಲ್ಲ, ಆ ವಾಕ್ಯ ಸರಿಯಾಗಿಯೇ ಇದೆ. ಗಂಡಸರು ಅಡುಗೆ ಮನೆಯಲ್ಲಿ ಏನು ಮಾಡುತ್ತಾರೆ? ಏನೋ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಅರೋಗ್ಯ ಸರಿ ಇಲ್ಲದಾಗ ಒಂದಿಷ್ಟು ಕೆಲಸ ಮಾಡಬಹುದು. ಹಾಗಾಗಿ, ನೀವು ಇದಕ್ಕೆ 'ಸರಿ' ಅಂತಾನೇ ಹಾಕಬೇಕು!" ಶಿಕ್ಷಕರು ಈ ಸಮಾಜದ ಭಾಗವೇ ಆಗಿದ್ದಾರೆ, ಪುರುಷಪ್ರಧಾನತೆಯನ್ನು ರಕ್ತಗತಗೊಳಿಸುವ ಕೌಟುಂಬಿಕ ವಾತಾವರಣದಲ್ಲಿ ಹೆಣ್ಣು-ಗಂಡು ಎಂಬ ಚೌಕಟ್ಟಿನಲ್ಲಿಯೇ ಬೆಳೆದಿರುತ್ತಾರೆ. ಅವರಲ್ಲೂ ಅನೇಕರಿಗೆ ಲಿಂಗತ್ವದ ಪರಿಕಲ್ಪನೆ, ಪುರುಷಪ್ರಧಾನತೆಯ ಕಡಿವಾಣಗಳ ಸ್ಪಷ್ಟತೆ ಇಲ್ಲದಿರುವುದು ಆಶ್ಚರ್ಯವೇನಲ್ಲ. ಹಾಗಾಗಿಯೇ, ಮೇಲೆ ಹೇಳಿದಂತೆ, ತಮಗೆ ಅರಿವಿಲ್ಲದಂತೆಯೇ ಪುರುಷಪ್ರಧಾನತೆಯನ್ನು ಪ್ರತಿಪಾದಿಸುತ್ತಿರುತ್ತಾರೆ.

ಹೆಣ್ಣುಮಕ್ಕಳಿಗೆ ಶಾಲೆಯಲ್ಲಿ ಸೈಕಲ್ ಕೊಡುವುದು ಬಹಳ ಒಳ್ಳೆಯ ಅಂಶ. ಬಹಳಷ್ಟು ಮಂದಿ ಹೆಣ್ಣುಮಕ್ಕಳು ಬಹಳ ಸೊಗಸಾಗಿ ಇದನ್ನು ಬಳಸುತ್ತಾರೆ, ಉಪಯೋಗ ಕೂಡಾ ಆಗಿದೆ. ಆದರೆ, ಇನ್ನೆಷ್ಟೋ ಮಂದಿ ಹೆಣ್ಣುಮಕ್ಕಳಿಗೆ ಸೈಕಲ್ ಸಿಕ್ಕಿದ್ದರೂ ಮನೆಯಲ್ಲಿ ಅಣ್ಣ-ತಮ್ಮಂದಿರೋ, ಇನ್ಯಾರೋ ಅದನ್ನು ಬಳಸಿ, ಹೆಣ್ಣುಮಕ್ಕಳಿಗೆ ಸಿಗದಂತೆ ಆಗಿದೆ. ಸಿಕ್ಕಿದ ಸೈಕಲನ್ನು ಅವಳೇ ಬಳಸಿಕೊಳ್ಳುವಂತೆ ನಿಗಾ ವಹಿಸುವ ವ್ಯವಸ್ಥೆ ಕಡಿಮೆ ಇದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪೂರಕವಾದ ಸೌಲಭ್ಯ, ಸವಲತ್ತುಗಳು ಅಂದಾಗ, ಶಾಲೆಯಲ್ಲಿ ಸಮರ್ಪಕವಾಗಿ ಶೌಚಾಲಯದ ವ್ಯವಸ್ಥೆ ಇರಬೇಕಾಗುವುದು ಇನ್ನೊಂದು ಮುಖ್ಯ ವಿಷಯ. ಎಷ್ಟೋ ಶಾಲೆಗಳಲ್ಲಿ ಇಂತಹ ವ್ಯವಸ್ಥೆಯ ಕೊರತೆ ಇದೆ.

ಟ್ರಾನ್ಸ್‌ಜೆಂಡರ್ ಮಂದಿಗಂತೂ ಶಾಲೆ ಇನ್ನೂ ಮುಕ್ತವಾಗಿ ತೆರೆದುಕೊಂಡಿಲ್ಲ. ಒಂದಷ್ಟು ಪ್ರಯತ್ನಗಳು ಈ ನಿಟ್ಟಿನಲ್ಲಿ ನಡೆಯುತ್ತಿವೆ. ಆದರೂ, ಅವರುಗಳು ಶಾಲೆಯಲ್ಲಿ ಮುಂದುವರಿಯಲಾರದಂತಹ ಘಟನೆಗಳು ನಡೆಯುತ್ತವೆ. ತರಗತಿಯೊಂದರಲ್ಲಿ ಶಿಕ್ಷಕರು ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕ ಲಿಂಗದ ಕುರಿತು ಪಾಠ ಮಾಡುತ್ತಿದ್ದರು. ಉದಾಹರಣೆಗಳನ್ನು ಕೊಡುತ್ತ, "ನೋಡಿ, ನಪುಂಸಕ ಅಂದರೆ ಇವನು," ಅಂತ ಒಬ್ಬ ಹುಡುಗನ ಕಡೆ ಬೆಟ್ಟು ಮಾಡಿ ತೋರಿಸಿದರು. ಮಕ್ಕಳೆಲ್ಲ "ಹೋ..." ಅಂತ ನಕ್ಕರು. ಆ ಹುಡುಗ ಮುದುರಿಕೊಂಡ. ಅವನಿಗೆ ಶಾಲೆ ಯಾವತ್ತೂ ಇಷ್ಟವೇ ಆಗಲಿಲ್ಲ. ಆ ಮಗು ಹುಡುಗ ಅನಿಸಿಕೊಂಡರೂ ಹುಡುಗಿಯರ ತರಹದ ವರ್ತನೆ ಇತ್ತು ಎಂಬುದೇ ಶಿಕ್ಷಕರು ಹಾಗೆ ಹೇಳಲು ಕಾರಣ. ಇಂತಹ ಅನೇಕಾನೇಕ ಸಂವೇದನಾರಹಿತ ವರ್ತನೆಗಳಿಂದಾಗಿ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಶಿಕ್ಷಣದಲ್ಲಿ ಸಿಗಬೇಕಾದ ಅವಕಾಶ ಸಿಗುತ್ತಿಲ್ಲ.

ಪಠ್ಯಗಳಲ್ಲಿ ಲಿಂಗ ಸಂವೇದನೆ ಕುರಿತಂತೆ ಚಿಂತನೆಗಳು ನಡೆಯುತ್ತಿದ್ದು, ಒಂದಷ್ಟು ಬದಲಾವಣೆಗಳು ಆಗಿರುವುದು ಸ್ವಾಗತಾರ್ಹ. ಆದರೆ, ಪಠ್ಯಪುಸ್ತಕಗಳಲ್ಲಿ ಈಗಲೂ ಪೂರ್ವಗ್ರಹದ ಚಿತ್ರಣಗಳಿರುವುದನ್ನು ಕಾಣಬಹುದು (ರಾಷ್ಟ್ರೀಯ ಶಿಕ್ಷಣ ನೀತಿಯ ಅಳವಡಿಕೆಯ ನಂತರ ಎಂತಹ ಬದಲಾವಣೆಗಳು ಬಂದಿವೆ ಎಂದು ನೋಡಬೇಕ‍‍‍‍ಷ್ಟೆ). ಸೂಕ್ಷ್ಮವಾಗಿ ಅವಲೋಕಿಸಿದರೆ ಮಾತ್ರ, ಪಠ್ಯದಲ್ಲಿ ಲಿಂಗಸಮಾನತೆಯ ಧೋರಣೆಗಳು ಹೆಣೆದುಕೊಂಡಿರುವುದು ಗಮನಕ್ಕೆ ಬರುತ್ತದೆ. ನ್ಯಾಷನಲ್ ಫೋಕಸ್ ಗ್ರೂಪ್ 2005ರಲ್ಲಿ, 'ಜೆಂಡರ್ ಇಶ್ಯೂಸ್ ಇನ್ ಎಜುಕೇಶನ್' ಎಂಬ ಹೆಸರಿನಲ್ಲಿ ಬರೆದ ಪೊಸಿಷನ್ ಪೇಪರ್‌ನಲ್ಲಿ ಮಕ್ಕಳು ಹೇಳಿದ ಈ ಸಾಲುಗಳು ಬಹಳ ಅರ್ಥಪೂರ್ಣವಾಗಿವೆ...

"ನನ್ನ ಪಠ್ಯಪುಸ್ತಕದಲ್ಲಿ ಬರೇ ಪುರುಷರು ರಾಜರು, ಸೈನಿಕರು ಆಗಿದ್ದರು ಅಂತ ಓದಿದ್ದೆ; ಆದರೆ, ಆಮೇಲೆ ಪ್ರಖ್ಯಾತ ಪುಸ್ತಕವೊಂದನ್ನು ಓದಿದಾಗಲೇ ತಿಳಿದದ್ದು, ರಾಣಿಯರೂ ಆಳುತ್ತಿದ್ದರು ಮತ್ತು ವೈರಿಗಳ ವಿರುದ್ಧ ಹೋರಾಟ ನಡೆಸಿದ್ದರು..."

"ನನ್ನ ಪಠ್ಯಪುಸ್ತಕದಲ್ಲಿ ಬರೇ ಪುರುಷರು ಡಾಕ್ಟರುಗಳಾಗಿದ್ದಾರೆ ಅಂತ ಓದಿದ್ದೆ; ಆಮೇಲೆ, ನಾನೊಬ್ಬ ಡಾಕ್ಟರನ್ನು ಕಂಡೆ, ಅವರು ಮಹಿಳೆಯಾಗಿದ್ದರು..."

"ನನ್ನ ಪಠ್ಯಪುಸ್ತಕದಲ್ಲಿ ಬರೇ ಪುರುಷರು ವ್ಯವಸಾಯದ ಕೆಲಸ ಮಾಡುತ್ತಾರೆ ಎಂದು ಓದಿದ್ದೆ; ಆದರೆ ಊರು ಸುತ್ತಾಡುವಾಗ ಮಹಿಳೆಯರು ವ್ಯವಸಾಯ ಮಾಡುವುದನ್ನು ಕಂಡೆ..."

"ಸುತ್ತಮುತ್ತ ಗಮನಿಸುವುದರ ಮೂಲಕ ತುಂಬಾ ಕಲಿಯುವುದಕ್ಕೆ ಇದೆ ಅಂತ ನಾನು ಕಲಿತೆ..."

-ಪೂಜಾ, ರಮ್ಯಾ, ಅನುಜ್, ಉತ್ಕರ್ಷ್, ಏಳನೇ ತರಗತಿ, ಬರೋಡಾ.

ವಿಸ್ತರಿಸಿ ನೋಡುವುದಾದರೆ, ಪಠ್ಯಪುಸ್ತಕಗಳಲ್ಲಿ ‘ಸಂಪಾದನೆ ಮಾಡುವುದು, ಅಂಗಡಿ ನಡೆಸುವುದು, ಹಣ್ಣು, ಹೂವು, ತರಕಾರಿ ಬೆಳೆಸುವುದು, ಸಾಹಸ ಮಾಡುವುದು, ಈಜಾಡುವುದು, ಆಟ ಆಡುವುದು – ಎಲ್ಲವೂ ಪುರುಷರೇ ಅನ್ನುವ ವಿವರಣೆ ಕಾಣುತ್ತದೆ. ಚಿತ್ರಗಳ ಸಂಖ್ಯೆ ನೋಡಿದರೂ ಪುರುಷರ ಚಿತ್ರಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಟ್ರಾನ್ಸ್‌ಜೆಂಡರ್‌ನವರ ಸುದ್ದಿಯೇ ಇಲ್ಲ ಬಿಡಿ. ಭಾಷೆಯ ಬಳಕೆಯಲ್ಲಿ ಲಿಂಗ ತಟಸ್ಥತೆ ಇಲ್ಲ.

"ಚರಿತ್ರೆಯ ಪಾಠಗಳಲ್ಲಿ, 'ಅವನು' ಹಾಗೆ ಮಾಡಿದ, ಹೀಗೆ ಮಾಡಿದ, ಅವನು ಅದು ಕಂಡುಹಿಡಿದ, ಅಂತ ಎಷ್ಟೊಂದು ಇದೆ. ಹಾಗಾದರೆ, ‘ಅವಳುʼ ಏನು ಮಾಡುತ್ತಿದ್ದಳು? ಅವಳು ಏನೂ ಮಾಡಿಲ್ಲವೇ?  ಏನನ್ನೂ ಕಂಡುಹಿಡಿದಿಲ್ಲವೇ?" - ಪುಟ್ಟ ಹುಡುಗಿಯೊಬ್ಬಳು ಈ ಪ್ರಶ್ನೆ ಕೇಳಿದ್ದಳು. ಇವೆಲ್ಲವೂ ಮಹಿಳೆಯರ ಅಸ್ಮಿತೆಯನ್ನೇ ಹೇಗೆ ಮರೆಮಾಚುತ್ತವೆ ಅನ್ನುವುದು ಕಾಳಜಿಯ ವಿಷಯ. ಇದರ ಬಗ್ಗೆ ತೀವ್ರವಾಗಿ ಚಿಂತನೆ ನಡೆಸಬೇಕಾದ ಹೊತ್ತಿನಲ್ಲಿಯೇ, "ಭಾಷಾ ಪಠ್ಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆ ತುರುಕಬಾರದು," ಎಂದು ಪಠ್ಯಪುಸ್ತಕ ಸಮಿತಿಯ ಮುಖ್ಯಸ್ಥರು ಹೇಳಿಕೆ ಕೊಡುತ್ತಾರೆ ಎನ್ನುವುದು ಎಂತಹ ವಿಪರ್ಯಾಸ.

ಒಟ್ಟಾರೆಯಾಗಿ, ಪಠ್ಯಗಳು ತುಂಬುವ ಲಿಂಗ ಸಮಾನತೆಯ ಸಂದೇಶಗಳು ಹೀಗಿರುವಾಗ, ‘ಅವ್ಯಕ್ತ ಪಠ್ಯಕ್ರಮ'ಗಳ (ಹಿಡನ್ ಕರಿಕ್ಯುಲಮ್) ಮೂಲಕ ಸಂದೇಶಗಳು ಅರಿವಿಲ್ಲದಂತೆಯೇ ಪಾಠ ಕಲಿಸುತ್ತಿರುತ್ತವೆ. ಶಾಲಾ ಆವರಣದಲ್ಲಿ ಎಲ್ಲ ಕಡೆ ಹೆಣ್ಣುಮಕ್ಕಳು ನಿರಾಳವಾಗಿ ಓಡಾಡುವಂಥ ವಾತಾವರಣ ಇಲ್ಲದಿರುವುದು, ಹೆಣ್ಣುಮಕ್ಕಳಿಗೆ ನಾಯಕತ್ವದ ಅವಕಾಶ ಕಡಿಮೆ ಪ್ರಮಾಣದಲ್ಲಿ ಸಿಗುವುದು, ಶಾಲೆಗಳಲ್ಲಿ ಕೆಲಸಗಳ ಹಂಚಿಕೆ ಲಿಂಗಾಧಾರಿತವಾಗಿಯೇ ಇರುವುದು, ಅತಿಥಿಗಳು ಬಂದಾಗ ಪ್ರಾರ್ಥನೆ ಮಾಡಲು, ಹೂವು ಕೊಟ್ಟು ಸ್ವಾಗತಿಸಲು ಹೆಣ್ಣುಮಕ್ಕಳನ್ನು ಹಾಗೂ ಭಾರ ಹೊರುವ, ಎಲೆಕ್ಟ್ರಿಕಲ್‍ಗೆ ಸಂಬಂಧಿಸಿದ ಅಥವಾ ಅಂಗಡಿಗೆ ಹೋಗುವ ಕೆಲಸಗಳನ್ನು ಮಾಡಲು ಗಂಡುಮಕ್ಕಳನ್ನು ನೇಮಿಸುವುದು, ಲಿಂಗಾಧಾರಿತವಾಗಿ ಶಿಕ್ಷೆ ನೀಡುವುದು ಅಥವಾ ಮೆಚ್ಚುಗೆ ಸೂಚಿಸುವುದು, ಪುರುಷ ಶಿಕ್ಷಕರು ಮತ್ತು ಮಹಿಳಾ ಶಿಕ್ಷಕರು ಅವರ ಕೆಲಸಗಳನ್ನು ಲಿಂಗಾಧಾರಿತವಾಗಿ ಹಂಚಿಕೊಳ್ಳುವುದು- ಹೀಗೆ ನಾನಾ ರೀತಿಯ ದೈನಂದಿನ ವರ್ತನೆಗಳಲ್ಲಿ, ಕ್ರಿಯೆಗಳಲ್ಲಿ ಲಿಂಗ ತಾರತಮ್ಯದ ಮನೋಭಾವಗಳು ಪ್ರಕಟಗೊಳ್ಳುತ್ತಿರುತ್ತವೆ. ಮಕ್ಕಳು ಇವನ್ನೆಲ್ಲ ನೋಡುತ್ತಾರೆ, ಗ್ರಹಿಸಿಕೊಳ್ಳುತ್ತಾರೆ, ತಾವೂ ಮೈಗೂಡಿಸಿಕೊಳ್ಳುತ್ತಾರೆ.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | 'ಗಂಡಿನ ಕಡೆಯವರು' ಮತ್ತು 'ಹೆಣ್ಣಿನ ಕಡೆಯವರು'

'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂದು ಹೇಳುತ್ತ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೇರಣೆ ಕೊಡುವ ಪ್ರಯತ್ನ ನಡೆಯುತ್ತದೆ. ಆದರೆ, ಈ ಮಾತಿನಲ್ಲಿಯೇ ಹೆಣ್ಣು ಕಲಿಯಬೇಕಾಗಿರುವುದು ತನ್ನ ಬೆಳವಣಿಗೆಗಾಗಿ ಅಂತ ಹೇಳುವುದಕ್ಕಿಂತ ಹೆಚ್ಚು ಅವಳು ಕಲಿತರೆ ಮತ್ತಷ್ಟು ಮಂದಿಗೆ ಉಪಯೋಗವಾಗುತ್ತದೆ ಎಂಬ ಭಾವ ಇದೆ. ಗಂಡುಮಕ್ಕಳು ಕಲಿತರೆ ಶಾಲೆ ತೆರೆದ ಹಾಗೆ ಆಗಬಾರದೇಕೆ?

ಶಿಕ್ಷಣದ ಪ್ರಾರಂಭದ ಹಂತದಿಂದ ಹಿಡಿದು ಹಂತಹಂತವಾಗಿ ನೋಡುತ್ತ ಹೋದರೂ, ಬಹಳ ಸೂಕ್ಷ್ಮವಾಗಿ ಗಮನಿಸಿದರೆ, ಕುಟುಂಬದೊಳಗೆ ಬಿತ್ತಿದ ಪುರುಷಪ್ರಧಾನತೆಯ ಚಿಂತನೆಯನ್ನು ಶಿಕ್ಷಣ ವಲಯದಲ್ಲಿ ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಪೋಷಿಸುವುದನ್ನು ಕಾಣಬಹುದು. ಅದಕ್ಕಾಗಿಯೇ ಪುರುಷಪ್ರಧಾನ ಚಿಂತನೆಗಳು ನರನಾಡಿಗಳಲ್ಲಿ ಬಹಳ ಸುಲಭವಾಗಿ ಸೇರಿಕೊಳ್ಳುತ್ತ ಹೋಗುತ್ತವೆ.

ಚಿತ್ರಗಳು - ಸಾಂದರ್ಭಿಕ | ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
5 ವೋಟ್
eedina app