ದಿಕ್ಸೂಚಿ | ಪಿಯುಸಿ ನಂತರ ಮುಂದೇನು?

Mechanical Engineering

ಪದವಿ, ಸ್ನಾತ್ತಕೋತ್ತರ ಪದವಿ ಮುಗಿಸಿಕೊಂಡು ಅಂಗಡಿಗಳಲ್ಲಿ, ಸ್ವಿಗ್ಗಿ ಅಥವಾ ಝೊಮೊಟೋಗಳಲ್ಲಿ ಕೆಲಸ ಮಾಡುವ ಅನಿವಾರ್ಯತೆಗೆ ನಮ್ಮ ಯುವ ಸಮೂಹ ತಳ್ಳಲ್ಪಡುತ್ತಿರುವುದು ವಿಷಾದನೀಯ. ಈ ಸ್ಥಿತಿ ಬದಲಾಗಬೇಕಾದರೆ, ಪಿಯುಸಿ ಬಳಿಕವಾದರೂ ಪಕ್ಕಾ ಕರಿಯರ್ ಪ್ಲಾನಿಂಗ್ ಮಾಡಿದ ನಂತರವಷ್ಟೇ ಕೋರ್ಸ್‌ಗಳ ಆಯ್ಕೆ ಮಾಡಿಕೊಳ್ಳಬೇಕಿದೆ

ಪಿಯುಸಿ ಬಳಿಕ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿತು ಕಚೇರಿಯೊಂದರ ಆಫೀಸ್ ಅಸಿಸ್ಟೆಂಟ್ ಹುದ್ದೆಯ ಇಂಟರ್‌ವ್ಯೂಗೆ ಬಂದಿದ್ದ ಆಕೆಗೆ ಕೇಳಿದೆ: "ಅಲ್ಲಮ್ಮಾ... ಎಂಜಿನಿಯರಿಂಗ್ ಮಾಡಿ ಈ ಕೆಲಸ?" ಆಕೆ ನೀಡಿದ ಉತ್ತರ ಸರಳವಾಗಿತ್ತು: "ಕ್ಯಾಂಪಸ್ ಸೆಲೆಕ್ಶನ್ ಆಗಿಲ್ಲ ಸರ್. ಮಂಗಳೂರಿನಲ್ಲಿ ನಮಗೆ ಎಂಜಿನಿಯರ್ ಕೆಲಸ ಎಲ್ಲಿ ಸಿಗುತ್ತೆ? ಬೆಂಗಳೂರಿನಲ್ಲಿ ಹುಡುಕಬೇಕು. ಮನೆಯವರು ಊರು ಬಿಟ್ಟು ಹೋಗಲು ಬಿಡುವುದಿಲ್ಲ. ಮತ್ತೇನು ಮಾಡುವುದು? ಸಿಕ್ಕಿದ ಕೆಲಸ ಮಾಡಿ ದಿನ ದೂಡುವುದು!"

ಇದು ಆಕೆಯೊಬ್ಬಳ ಸಮಸ್ಯೆಯಲ್ಲ. ಕರಿಯರ್ ಪ್ಲಾನಿಂಗ್ ಮಾಡಿಕೊಳ್ಳದೆ ಕಲಿಯುವ, ಕಲಿತ ಬಳಿಕ ವೃತ್ತಿಯ ಲಭ್ಯತೆ ಮತ್ತು ಸ್ವರೂಪಗಳ ಬಗ್ಗೆ ತಿಳಿವಳಿಕೆಯಿಲ್ಲದ ವಿದ್ಯಾರ್ಥಿಗಳ ಸಂಖ್ಯೆ ನಮ್ಮಲ್ಲಿ ಹೆಚ್ಚು. ಎಂಜಿನಿಯರಿಂಗ್‌ನಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದರೆ ಕ್ಯಾಂಪಸ್ ಸೆಲೆಕ್ಷನ್ ಆಗುತ್ತೆ, ಕೆಲಸ ಸಿಕ್ಕಿಬಿಡುತ್ತೆ ಎಂಬ ಭ್ರಮೆ ಕೂಡ ವ್ಯಾಪಕವಾಗಿದೆ. ಪ್ರತಿಯೊಂದು ವೃತ್ತಿಯು ಬಯಸುವ ಔದ್ಯೋಗಿಕ ಕೌಶಲಗಳ ಅರಿವು ನಮ್ಮ ಯುವ ಸಮೂಹಕ್ಕಿಲ್ಲ. ಪಿಯುಸಿಯ ನಂತರ ಕಲಿಯಬಹುದಾದ ಕೋರ್ಸ್‌ಗಳೇನು ಎಂಬುದೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತಿಳಿದಿಲ್ಲ.

ಎಂಜಿನಿಯರಿಂಗ್‌ನಲ್ಲಿ ಎಷ್ಟು ಬ್ರಾಂಚ್/ವಿಭಾಗಗಳಿವೆ ಎಂಬ ಕನಿಷ್ಠ ಜ್ಞಾನವೂ ಎಂಜಿನಿಯರಿಂಗ್ ಕಲಿಯಲಿಚ್ಛಿಸುವ ಹೆಚ್ಚಿನ ವಿದ್ಯಾರ್ಥಿಗಳಿಗಿಲ್ಲ. ಆದ್ದರಿಂದಲೇ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಂತಹ ವಿದ್ಯೆ ಕಲಿತು ಅಥವಾ ಇನ್ನಾವುದೇ ಪದವಿ, ಸ್ನಾತ್ತಕೋತ್ತರ ಪದವಿ ಮುಗಿಸಿಕೊಂಡು ಮಾಲ್‌ಗಳ ಬಟ್ಟೆ/ಚಪ್ಪಲಿ ಅಂಗಡಿಗಳಲ್ಲಿ, ಸ್ವಿಗ್ಗಿ/ಝೊಮೊಟೋಗಳಲ್ಲಿ ಕೆಲಸ ಮಾಡುವ ಅನಿವಾರ್ಯತೆಗೆ ನಮ್ಮ ಯುವ ಸಮೂಹ ತಳ್ಳಲ್ಪಡುತ್ತಿರುವುದು ಅಥವಾ ಸಿಕ್ಕಿದ ವೃತ್ತಿಗೆ ಸೇರಿ ಸಂತೃಪ್ತರಾಗುತ್ತಿರುವುದು.

Image
school of agriculture

ಈ ಸ್ಥಿತಿ ಬದಲಾಗಬೇಕಾದರೆ ಪಿಯುಸಿ ಬಳಿಕವಾದರೂ ಪಕ್ಕಾ ಕರಿಯರ್ ಪ್ಲಾನಿಂಗ್ ಮಾಡಿದ ನಂತರವಷ್ಟೇ ಕೋರ್ಸ್‌ಗಳ ಆಯ್ಕೆ ನಡೆಯಬೇಕು. ಸ್ನೇಹಿತರು ಆಯ್ಕೆ ಮಾಡುವ ಕೋರ್ಸ್ ಮತ್ತು ಕಾಲೇಜನ್ನೇ ಆಯ್ಕೆ ಮಾಡುವ ಕೆಟ್ಟ ಚಾಳಿ ಕೆಲವು ಪಿಯುಸಿ ವಿದ್ಯಾರ್ಥಿಗಳಲ್ಲಿದೆ. ಇದು ಸರಿಯಲ್ಲ. ಕರಿಯರ್ ಆಯ್ಕೆ ವೈಯಕ್ತಿಕವಾಗಿರಬೇಕೇ ವಿನಾ ಸಾಮೂಹಿಕವಾಗಿಯಲ್ಲ. ಭ್ರಮೆ, ಆಕರ್ಷಣೆ ಹಾಗೂ ಒತ್ತಡಗಳಿಗೆ ಒಳಗಾಗದೆ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪಿಯುಸಿ ನಂತರದ ಕಲಿಕೆಯ ಆಯ್ಕೆಯು ಪದವಿ ಬಳಿಕದ ಶಿಕ್ಷಣ ಅಥವಾ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ನಡೆಯಬೇಕು.

ಪಿಯುಸಿಯಲ್ಲಿ ಮೂರು ಪ್ರಮುಖ ವಿಭಾಗಗಳಿದ್ದು (ಕಲೆ, ವಾಣಿಜ್ಯ, ವಿಜ್ಞಾನ), ಆಯ್ಕೆಗೆ ಅನೇಕ ಐಚ್ಛಿಕ ವಿಷಯಗಳಿವೆ. ಪಿಯುಸಿ ಬಳಿಕದ ಕಲಿಕೆಯು ಈ ವಿಭಾಗ ಮತ್ತು ಆಯ್ಕೆ ಮಾಡಿಕೊಂಡಿರುವ ಐಚ್ಛಿಕ ವಿಷಯಗಳ ಆಧಾರದಲ್ಲಿ ಮುಂದುವರಿಯುತ್ತದೆ.

ಉದಾಹರಣೆಗೆ, ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿ, ಐಚ್ಛಿಕ ವಿಷಯಗಳಾದ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರ ಕಲಿತಿದ್ದರೆ, ಪಿಯುಸಿ ಬಳಿಕ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಎರಡೂ ವಿಭಾಗದ ಪದವಿ ಕೋರ್ಸ್‌ಗಳನ್ನು ಕಲಿಯಬಹುದು. ಆದರೆ, ಜೀವಶಾಸ್ತ್ರದ ಬದಲು ಸಂಖ್ಯಾಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪೂಟರ್ ಸೈನ್ಸ್‌ನಂತಹ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರೆ, ಅಂತಹ ವಿದ್ಯಾರ್ಥಿಗಳು ಮೆಡಿಕಲ್/ಜೀವಶಾಸ್ತ್ರ ಕಡ್ಡಾಯವಾಗಿರುವ ಯಾವುದೇ ಪದವಿ ಕೋರ್ಸ್‌ಗಳನ್ನು ಕಲಿಯುವಂತಿಲ್ಲ.

ಅದೇ ರೀತಿ, ಪಿಯಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿರುವವರು ಆರ್ಟ್ಸ್ ಅಥವಾ ಕಾಮರ್ಸ್ ಕ್ಷೇತ್ರಗಳ (ಬಿ.ಎ, ಬಿ.ಕಾಂ, ಬಿಬಿಎಂ, ಬಿಬಿಎ) ಕಲಿಕೆಗೆ ಅವಕಾಶವಿದೆ. ಆದರೆ, ಪಿಯುಸಿಯಲ್ಲಿ ಆರ್ಟ್ಸ್ ಅಥವಾ ಕಾಮರ್ಸ್ ಕಲಿತಿದ್ದರೆ, ಪದವಿ ಹಂತದಲ್ಲಿ ಸೈನ್ಸ್ ಕ್ಷೇತ್ರದ ಬಿ.ಎಸ್ಸಿ, ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣ ಪಡೆಯುವಂತಿಲ್ಲ. ಕೇವಲ ಆರ್ಟ್ಸ್ ಅಥವಾ ಕಾಮರ್ಸ್ ಕ್ಷೇತ್ರದ ಪದವಿ ಕೋರ್ಸ್‌ಗಳನ್ನು ಮಾತ್ರ ಕಲಿಯಬಹುದಾಗಿದೆ.

ಈ ಲೇಖನ ಓದಿದ್ದೀರಾ?: ದಿಕ್ಸೂಚಿ | ಇಲ್ಲಿದೆ ವೃತ್ತಿಪರ ಕೋರ್ಸ್‌ಗಳ ಭರಪೂರ ಮಾಹಿತಿ

ಪಿಯುಸಿ (ವಿಜ್ಞಾನ) ಬಳಿಕ ಮುಂದೇನು?

ಪಿಯುಸಿ ವಿಜ್ಞಾನ ಆಯ್ಕೆ ಮಾಡಿಕೊಂಡಿರುವವರು ವೈದ್ಯಕೀಯ (ಎಂಬಿಬಿಎಸ್), ದಂತ ವೈದ್ಯಕೀಯ (ಬಿಡಿಎಸ್), ಆಯುಷ್ ಕೋರ್ಸ್‌ಗಳಾದ ಆಯುರ್ವೇದ, ಯುನಾನಿ, ಹೋಮಿಯೋಪಥಿ, ನ್ಯಾಚುರೋಪಥಿ ಹಾಗೂ ಯೋಗ ಕಲಿಯಬಹುದಾಗಿದೆ. ಫಾರ್ಮಸಿ ವಿಭಾಗದಲ್ಲಿ ಬಿ.ಫಾರ್ಮಾ (ಬ್ಯಾಚ್ಯುಲರ್ ಇನ್ ಫಾರ್ಮಸಿ) ಮತ್ತು ಫಾರ್ಮಾ ಡಿ. (ಡಾಕ್ಟರ್ ಇನ್ ಫಾರ್ಮಸಿ) ಕೋರ್ಸ್‌ಗಳಿವೆ.

ಫಾರ್ಮ್ ಸೈನ್ಸ್ (ಕೃಷಿ ವಿಜ್ಞಾನ) ವಿಭಾಗದಲ್ಲಿ ಬಿಎಸ್ಸಿ ಅಗ್ರಿಕಲ್ಚರ್ (ಕೃಷಿ), ಬಿಎಸ್ಸಿ ಸೆರಿಕಲ್ಚರ್ (ರೇಶ್ಮೆ ಕೃಷಿ), ಬಿಎಸ್ಸಿ ಹಾರ್ಟಿಕಲ್ಚರ್ (ತೋಟಗಾರಿಕೆ), ಬಿಎಸ್ಸಿ ಫಾರೆಸ್ಟರಿ (ಅರಣ್ಯ ವಿಜ್ಞಾನ), ಬಿಎಸ್ಸಿ ಅಗ್ರಿಕಲ್ಚರ್ ಬಯೋ-ಟೆಕ್ (ಕೃಷಿ ಜೈವಿಕ ತಂತ್ರಜ್ಞಾನ), ಬಿಹೆಚ್ಎಸ್ಸಿ ಹೋಮ್ ಸೈನ್ಸ್ (ಗೃಹ ವಿಜ್ಞಾನ), ಬಿ.ಟೆಕ್ (ಕೃಷಿ ಎಂಜಿನಿಯರಿಂಗ್), ಬಿ.ಟೆಕ್ ಫುಡ್ ಟೆಕ್ನಾಲಜಿ (ಆಹಾರ ತಂತ್ರಜ್ಞಾನ), ಬಿ.ಟೆಕ್ ಡೈರಿ ಟೆಕ್ನಾಲಜಿ (ಹೈನುಗಾರಿಕೆ ತಂತ್ರಜ್ಞಾನ), ಬಿಎಫ್ಎಸ್ಸಿ ಫಿಶರೀಸ್ ಸೈನ್ಸ್ (ಮೀನುಗಾರಿಕೆ), ಬಿ.ಟೆಕ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿಎಸ್ಸಿ ಅಗ್ರಿಕಲ್ಚರ್ ಮಾರ್ಕೆಟಿಂಗ್ ಅಂಡ್ ಕೊ-ಆಪರೇಟಿವ್ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ಹಾಗೂ ಬಿವಿಎಸ್ಸಿ ಅಂಡ್ ಎಹೆಚ್ – ವೆಟರ್ನಿಟಿ ಸೈನ್ಸ್ ಅಂಡ್ ಅನಿಮಲ್ ಹಸ್ಬೆಂಡರಿ ಮುಂತಾದ ಕೋರ್ಸ್‌ಗಳಿವೆ.

ಆರೋಗ್ಯ ವಿಜ್ಞಾನ ವಿಭಾಗದ ಇತರ ಕೆಲವು ಕೋರ್ಸ್‌ಗಳು

ಬಿಎಸ್ಸಿ-ನರ್ಸಿಂಗ್, ಬ್ಯಾಚುಲರ್ ಇನ್ ಪಿಸಿಯೋಥೆರಪಿ, ಬಿಎಸ್ಸಿ- ಫುಡ್ ನ್ಯೂಟ್ರೀಶಿಯನ್ ಅಂಡ್ ಡಯಟಿಂಗ್, ಬ್ಯಾಚುಲರ್ ಇನ್ ಪ್ರಾಸ್ತೆಟಿಕ್ಸ್ ಅಂಡ್ ಆರ್ಥೊಟಿಕ್ಸ್, ಬಿಎಸ್ಸಿ-ಮೆಡಿಕಲ್ ಲಾಬ್ ಟೆಕ್ನಾಲಜಿ, ಬಿಎಸ್ಸಿ-ಕಾರ್ಡಿಕ್ ಕೇರ್ ಟೆಕ್ನಾಲಜಿ, ಬಿಎಸ್ಸಿ-ಪರ್ಫೂಶನ್ ಟೆಕ್ನಾಲಜಿ, ಬಿಎಸ್ಸಿ-ಅನಸ್ತೀಶಿಯಾ ಟೆಕ್ನಾಲಜಿ, ಬಿಎಸ್ಸಿ-ಆಪರೇಶನ್ ಥಿಯೇಟರ್ ಟೆಕ್ನಾಲಜಿ, ಬಿಎಸ್ಸಿ-ಇಮೇಜಿಂಗ್ ಟೆಕ್ನಾಲಜಿ, ಬಿಎಸ್ಸಿ-ರೇಡಿಯೋಥೆರಪಿ ಟೆಕ್ನಾಲಜಿ, ಬಿಎಸ್ಸಿ-ನ್ಯೂರೊಸೈನ್ಸ್ ಟೆಕ್ನಾಲಜಿ, ಬಿಎಸ್ಸಿ-ರೆನಲ್ ಡಯಾಲಿಸಿಸ್ ಟೆಕ್ನಾಲಜಿ, ಬಿಎಸ್ಸಿ-ರೆನ್ಪಿರೇಟರಿ ಕ್ಯಾರ್ ಟೆಕ್ನಾಲಜಿ, ಬಿಎಸ್ಸಿ-ಆಪ್ತೊಮೆಟ್ರಿ, ಬಿಎಸ್ಸಿ-ರಿಹ್ಯಾಬಿಲೇಶನ್ ಥೆರಪಿ, ಬಿಎಸ್ಸಿ-ಸ್ಪೀಚ್ ಲ್ಯಾಂಗ್ವೇಜ್ ಆಂಡ್ ಹಿಯರಿಂಗ್, ಬಿಎಸ್ಸಿ-ನ್ಯೂಕ್ಲಿಯರ್ ಮೆಡಿಕಲ್ ಟೆಕ್ನಾಲಜಿ - ಇವು ಆರೋಗ್ಯ ವಿಜ್ಞಾನ ವಿಭಾಗದಲ್ಲಿ ಲಭ್ಯವಿರುವ ಇತರ ಕೋರ್ಸ್‌ಗಳು.

ಪಿಯುಸಿ ಬಳಿಕ ಎಂಜಿನಿಯರಿಂಗ್ (ತಾಂತ್ರಿಕ ಶಿಕ್ಷಣ)

Image
mechanical engineering 2

ಕರ್ನಾಟಕ ರಾಜ್ಯದಲ್ಲಿ ವಿಶ್ವವಿದ್ಯಾನಿಲಯ ಅಂಗೀಕೃತ 42 ಎಂಜಿನಿಯರಿಂಗ್ ವಿಭಾಗಗಳಿವೆ. ಎಂಜಿನಿಯರಿಂಗ್ ಕಲಿಯಲಿಚ್ಛಿಸುವವರ ಅನುಕೂಲಕ್ಕಾಗಿ ಅವುಗಳ ವಿವರ ಇಲ್ಲಿದೆ.

ಏರೊನಾಟಿಕಲ್ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಆಟೊಮೊಬೈಲ್ ಎಂಜಿನಿಯರಿಂಗ್, ಕಂಪ್ಯೂಟರ್ ಟೆಕ್ನಾಲಜಿ, ಇನ್ಫರ್ಮೇಶನ್ ಟೆಕ್ನಾಲಜಿ, ಬಯೋ ಮೆಡಿಕಲ್ ಎಂಜಿನಿಯರಿಂಗ್, ಬಯೋ ಟೆಕ್ನಾಲಜಿ, ಸಿವಿಲ್ ಎಂಜಿನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್ ಅಂಡ್ ಪ್ಲಾನಿಂಗ್, ಸೆರಮಿಕ್ಸ್ ಅಂಡ್ ಸಿಮೆಂಟ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಕನ್‌ಸ್ಟ್ರಕ್ಶನ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಇನ್‌ಸ್ಟುಮೆಂಟೇಶನ್ ಎಂಜಿನಿಯರಿಂಗ್, ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್, ಬಿ.ಟೆಕ್ ಟೆಕ್ನಾಲಜಿ ಅಂಡ್ ಎಂಟರ್‌ಪ್ರಿನರ್ಶಿಪ್, ಎಲೆಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಶನ್ಸ್, ಇನ್ಫರ್ಮೇಶನ್ ಸೈನ್ಸ್ ಆಂಡ್ ಎಂಜಿನಿಯರಿಂಗ್, ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್, ಇಂಡಸ್ಟ್ರಿಯಲ್ ಅಂಡ್ ಪ್ರೊಡಕ್ಷನ್ ಎಂಜಿನಿಯರಿಂಗ್, ಇನ್‌ಸ್ಟುಮೆಂಟೇಶನ್ ಟೆಕ್ನಾಲಜಿ, ಮೆಡಿಕಲ್ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಮೈನಿಂಗ್ ಎಂಜಿನಿಯರಿಂಗ್, ಮರೈನ್ ಎಂಜಿನಿಯರಿಂಗ್, ಮ್ಯಾನ್ಯುಫಾಕ್ಚರಿಂಗ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಮೆಕೆಟ್ರಾನಿಕ್ಸ್ ಎಂಜಿನಿಯರಿಂಗ್, ನ್ಯಾನೊ ಟೆಕ್ನಾಲಜಿ, ಪೆಟ್ರೋಕೆಮ್ ಎಂಜಿನಿಯರಿಂಗ್, ಪೆಟ್ರೋಲಿಯಂ ಎಂಜಿನಿಯರಿಂಗ್, ಪ್ರಿಶಿಷನ್ ಮ್ಯಾನುಫ್ಯಾಕ್ಚರಿಂಗ್, ಪಾಲಿಮರ್ ಸೈನ್ಸ್ ಅಂಡ್ ಟೆಕ್ನಾಲಜಿ, ಆಟೋಮೇಶನ್ ಅಂಡ್ ರೋಬೋಟಿಕ್ ಎಂಜಿನಿಯರಿಂಗ್, ಎರೋಸ್ಪೇಸ್ ಎಂಜಿನಿಯರಿಂಗ್, ಸಿಲ್ಕ್ ಟೆಕ್ನಾಲಜಿ, ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್, ಟೂಲ್ ಎಂಜಿನಿಯರಿಂಗ್, ಟೆಕ್ಸ್‌ಟೈಲ್ ಟೆಕ್ನಾಲಜಿ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಅಂಡ್ ಮೆಶಿನ್ ಲರ್ನಿಂಗ್ - ಇವು ರಾಜ್ಯದಲ್ಲಿ ಲಭ್ಯವಿರುವ ಎಂಜಿನಿಯರಿಂಗ್ ಬ್ರಾಂಚ್‌ಗಳು.

ಮುಂದುವರಿಯುವುದು
ನಿಮಗೆ ಏನು ಅನ್ನಿಸ್ತು?
19 ವೋಟ್