ದಿಕ್ಸೂಚಿ | ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?

ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿಗೆ ದಾಖಲಾಗಲೇಬೇಕೆಂದೇನಿಲ್ಲ. ಅದರ ಹೊರತಾಗಿಯೂ ಕಲಿಯಲು ನೂರಾರು ಕೋರ್ಸುಗಳಿವೆ. ಪಿಯುಸಿ ನಂತರ ನಿರ್ದಿಷ್ಟ ಪದವಿ ಅಥವಾ ಇತರ ಕೋರ್ಸುಗಳನ್ನು ಪಕ್ವತೆಯೊಂದಿಗೆ ಕಲಿಯುವ ಕರಿಯರ್ ಪ್ಲಾನಿಂಗ್ ಇರುವವರು ಮಾತ್ರ ಪಿಯುಸಿಯಲ್ಲಿ ಅದಕ್ಕನುಸಾರವಾದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು

ಎಸ್‌ಎಸ್‌ಎಲ್‌ಸಿ ನಂತರ ಎರಡು ವರ್ಷಗಳ ಪಿಯುಸಿ (ಕಲೆ, ವಾಣಿಜ್ಯ ಹಾಗೂ ವಿಜ್ಞಾನ), ಮೂರು ವರ್ಷಗಳ ಡಿಪ್ಲೊಮಾ ಇಂಜಿನಿಯರಿಂಗ್, ಮೂರು ವರ್ಷಗಳ ಪ್ಯಾರಾ ಮೆಡಿಕಲ್ ಡಿಪ್ಲೊಮಾ, ಒಂದು ವರ್ಷದ ಐಟಿಐ (ತಾಂತ್ರಿಕ ಮತ್ತು ತಾಂತ್ರಿಕೇತರ), ಎರಡು ವರ್ಷಗಳ ಐಟಿಐ (ತಾಂತ್ರಿಕ), ಗವರ್ನ್ಮೆಂಟ್ ಟೂಲ್ ರೂಂ ಆಂಡ್ ಟ್ರೈನಿಂಗ್ ಸೆಂಟರ್‌ನಲ್ಲಿ, ಟೂಲ್ ಆಂಡ್ ಡೈ ಮೇಕಿಂಗ್‌ನಲ್ಲಿ ಡಿಪ್ಲೊಮಾ ಮತ್ತು ಅಲ್ಪಕಾಲಿಕ ಕೌಶಲಾಭಿವೃದ್ಧಿ ಕೋರ್ಸ್‌ಗಳು, ಪ್ಲಾಸ್ಟಿಕ್ ಟೆಕ್ನಾಲಜಿ ಮತ್ತು ಲೆದರ್ ಆಂಡ್ ಫೂಟ್‌ವೇರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಮತ್ತು ಅಲ್ಪಕಾಲಿಕ ಸರ್ಟಿಫಿಕೇಟ್ ಕೋರ್ಸ್‌ಗಳು, ಇಂಟೀರಿಯರ್ ಡಿಸೈನಿಂಗ್, ಫ್ಯಾಶನ್ ಡಿಸೈನಿಂಗ್, ಹೋಟೆಲ್/ಹಾಸ್ಪಿಟಲ್ ಮೇನೇಜ್‌ಮೆಂಟ್ ಹಾಗೂ ಫೈರ್ ಆಂಡ್ ಸೇಫ್ಟಿಯಲ್ಲಿ ಡಿಪ್ಲೊಮಾ ಮತ್ತಿತರ ಕಂಪ್ಯೂಟರ್ ಕೋರ್ಸ್‌ಗಳನ್ನು ಕಲಿಯಬಹುದು.

ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಒಎಸ್) ಮತ್ತು ಹೆಣ್ಮಕ್ಕಳ ಐಟಿಐನಲ್ಲಿರುವ ನೂರಾರು ಅಲ್ಪಕಾಲಿಕ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಆಯ್ಕೆಮಾಡಿಕೊಳ್ಳಬಹುದು.

ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿರುವವರೂ ಬದುಕನ್ನು ಕಟ್ಟಿಕೊಳ್ಳಬಹುದು. ವಿದ್ಯಾರ್ಥಿಗಳು ಮೊದಲಿಗೆ, ಬಂದಿರುವ ಫಲಿತಾಂಶವನ್ನು ಯಥಾವತ್ತಾಗಿ ಸ್ವೀಕರಿಸಿ, ಆತ್ಮ ಸ್ಥೈರ್ಯವನ್ನು ಕಳಕೊಳಕೊಳ್ಳದೆ ತಮ್ಮ ಕರಿಯರ್ ಪ್ಲಾನ್ ಮಾಡಿಕೊಳ್ಳಬೇಕು. ಬಂದಿರುವ ಅಂಕ ತೃಪ್ತಿದಾಯಕ ಅಲ್ಲದಿದ್ದಲ್ಲಿ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿಗಳಿಗೆ ಅರ್ಜಿ ಹಾಕಬಹುದು ಅಥವಾ ಮರು ಮೌಲ್ಯಮಾಪನಕ್ಕೆ ಚಲನ್ ಕಟ್ಟಬಹುದು. ಒಂದೆರಡು ವಿಷಯಗಳಲ್ಲಿ ಅನುತ್ತೀರ್ಣರಾಗಿರುವವರು ಮರು ಪರೀಕ್ಷೆ (ಸಂಪ್ಲಿಮೆಂಟರಿ ಪರೀಕ್ಷೆ) ಬರೆದು ಪಾಸಾಗಲು ಪ್ರಯತ್ನಿಸಬಹುದು.

ವಿಫಲರಾದರೆ, ಎಸ್‌ಎಸ್‌ಎಲ್‌ಸಿ ಫೇಲಾದವರೂ ಕಲಿಯಬಹುದಾದ ಅನೇಕ ಕೋರ್ಸುಗಳಿದ್ದು, ಅವುಗಳನ್ನು ಆಯ್ಕೆ ಮಾಡಿ ಶಿಕ್ಷಣ ಮುಂದುವರಿಸಬಹುದು. ಎಸ್‌ಎಸ್‌ಎಲ್‌ಸಿ ಪಾಸಾಗಲೇಬೇಕೆಂಬ ಹಠವಿದ್ದರೆ ಮುಂದಿನ ವರ್ಷ ಪರೀಕ್ಷೆ ಬರೆಯಬಹುದು. ನೇರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಅವಕಾಶವಿದ್ದು, ಕೆಲವು ಕೋಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರುಗೊಳಿಸುತ್ತವೆ. ಅವುಗಳ ಪ್ರಯೋಜನ ಪಡೆಯಬಹುದು. 

Image
ಐಟಿಐ ಕಲಿಕೆಯ ವಿದ್ಯಾರ್ಥಿಗಳು

ಎಸ್‌ಎಸ್‌ಎಲ್‌ಸಿ ಪಾಸಾಗಿ, ಪಿಯುಸಿ ಕಲಿಯದೆ ಇತರೆ ಕೋರ್ಸುಗಳನ್ನು ಆಯ್ಕೆ ಮಾಡಿ ವೃತ್ತಿಯನ್ನು ಕಂಡುಕೊಳ್ಳುವ ವಿದ್ಯಾರ್ಥಿಗಳಿಗೆ ಪಿಯಸಿ ಕಲಿಯಲೇಬೇಕೆಂಬ ಇರಾದೆಯಿದ್ದರೆ, ವೃತಿಯಲ್ಲಿರುವಾಗಲೂ ನೇರವಾಗಿ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಯನ್ನು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಅಥವಾ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಒಎಸ್)ನಲ್ಲಿ ಬರೆಯಬಹುದು. ಆಯ್ದ ಕೆಲವು ಪ್ರದೇಶಗಳಲ್ಲಿ ಸಂದ್ಯಾ ಕಾಲೇಜು (Evening College)ಗಳಿದ್ದು ಅಲ್ಲೂ ಸಂಜೆ ಹೊತ್ತಲ್ಲಿ ಪಿಯುಸಿ ಕಲಿತು ಪಾಸಾಗಬಹುದು.

ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿಗೆ ದಾಖಲಾಗಲೇಬೇಕು ಎಂದೇನಿಲ್ಲ. ಪಿಯುಸಿಯ ಹೊರತಾಗಿಯೂ ಕಲಿಯಬಹುದಾದ ನೂರಾರು ಕೋರ್ಸ್‌ಗಳು ಲಭ್ಯವಿದೆ. ಪಿಯುಸಿಯ ನಂತರ ನಿರ್ದಿಷ್ಟ ಪದವಿ ಅಥವಾ ಇತರ ಕೋರ್ಸುಗಳನ್ನು ಪಕ್ವತೆಯೊಂದಿಗೆ ಕಲಿಯುವ ಕರಿಯರ್ ಪ್ಲಾನಿಂಗ್ ಇರುವವರು ಮಾತ್ರ ಪಿಯುಸಿಯಲ್ಲಿ ಅದಕ್ಕನುಸಾರವಾದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.

ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾಗಿದ್ದರೂ ಎರಡು ವರ್ಷ ಪಿಯುಸಿ ಕಲಿತು, ನಂತರ ಪದವಿ ಅಥವಾ ಇತರ ಕೋರ್ಸುಗಳನ್ನು ಕಲಿಯುವಷ್ಟು ಕಾಲ ಕಾಯದೆ, ಕೂಡಲೇ ವೃತ್ತಿಯೊಂದನ್ನು ಕಂಡುಕೊಳ್ಳಬೇಕೆಂಬ ತುರ್ತು/ಅನಿವಾರ್ಯತೆಯಿರುವವರು ಪಿಯುಸಿ ಹೊರತುಪಡಿಸಿ ಲಭ್ಯವಿರುವ ಕೋರ್ಸುಗಳನ್ನು ತಮ್ಮ ಕರಿಯರ್ ಪ್ಲಾನ್‌ನಂತೆ ಆಯ್ಕೆ ಮಾಡಬಹುದು. 

ಪಿಯುಸಿ (ಪದವಿ ಪೂರ್ವ ಶಿಕ್ಷಣ)
ಇದು ಎರಡು ವರ್ಷದ ಕೋರ್ಸ್‌. ಯಾವುದೇ ಪದವಿ ಮತ್ತು ಶಿಕ್ಷಕ/ಕಿ ತರಬೇತಿ (ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಶನ್–ಡಿಎಲ್ ಎಎಡ್)ಯನ್ನು ಕಲಿಯಲು ಪಿಯುಸಿ ಕನಿಷ್ಠ ವಿದ್ಯಾಹರ್ತೆಯಾಗಿದೆ. ಒಟ್ಟು ಆರು ವಿಷಯಗಳನ್ನು (ಎರಡು ಭಾಷಾ ವಿಷಯ ಮತ್ತು ನಾಲ್ಕು ಐಚ್ಚಿಕ ವಿಷಯಗಳು) ಇಲ್ಲಿ ಕಲಿಯಬೇಕು. ಪಿಯುಸಿಯಲ್ಲಿ ಮೂರು ಪ್ರಮುಖ ವಿಭಾಗಗಳಿವೆ. ವಿಜ್ಞಾನ (ಸೈನ್ಸ್), ವಾಣಿಜ್ಯ (ಕಾಮರ್ಸ್) ಮತ್ತು ಕಲೆ (ಆರ್ಟ್ಸ್). ಇವುಗಳಲ್ಲೂ ಅನೇಕ ಉಪ ವಿಭಾಗಗಳು ಮತ್ತು ಆಯ್ಕೆಗೆ ಹಲವು ಐಚ್ಛಿಕ ವಿಷಯಗಳಿಗೆ. ಎರಡು ಭಾಷಾ ವಿಷಯಗಳ ಆಯ್ಕೆಗೆ ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರಬಿಕ್, ಫ್ರೆಂಚ್, ಉರ್ದು ಹಾಗೂ ಸಂಸ್ಕೃತ ಮುಂತಾದ ಭಾಷೆಗಳಿವೆ.

ಈ ಲೇಖನ ಓದಿದ್ದೀರಾ? ದಿಕ್ಸೂಚಿ | ಕರಿಯರ್ ಪ್ಲಾನಿಂಗ್ ಮಾಡುವುದು ಹೇಗೆ?

ಪಿಯುಸಿ ಆರ್ಟ್ಸ್ (ಕಲೆ)
ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಭೂ ವಿಜ್ಞಾನ, ತರ್ಕಶಾಸ್ತ್ರ, ಐಚ್ಚಿಕ ಕನ್ನಡ, ಮನಶಾಸ್ತ್ರ, ಶಿಕ್ಷಣ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮೂಲಭೂತ ಗಣಿತ ಮತ್ತು ಗ್ರಹ ವಿಜ್ಞಾನ ಇತ್ಯಾದಿ ವಿಷಯಗಳು ಆಯ್ಕೆಗೆ ಲಭ್ಯವಿದೆ. 

ಪಿಯುಸಿ ಕಾಮರ್ಸ್ (ವಾಣಿಜ್ಯ)
ವಾಣಿಜ್ಯ ವಿಭಾಗದಲ್ಲಿ ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ, ವ್ಯಾಪಾರ ಅಧ್ಯಯನ, ಲೆಕ್ಕಪತ್ರ ನಿರ್ವಹಣೆ, ವ್ಯಾಪಾರ ಗಣಿತ, ಕಂಪ್ಯೂಟರ್ ಸೈನ್ಸ್‌, ಇತಿಹಾಸ, ಭೂಗೋಳ ಶಾಸ್ತ್ರ ಮತ್ತು ರಾಜಕೀಯ ವಿಜ್ಞಾನ ಇತ್ಯಾದಿ ವಿಷಯಗಳು ಆಯ್ಕೆಗೆ ಲಭ್ಯವಿದೆ.

ಪಿಯುಸಿ ಸೈನ್ಸ್‌ (ವಿಜ್ಞಾನ)
ವಿಜ್ಞಾನ ವಿಭಾಗದಲ್ಲಿ ಇತಿಹಾಸ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ, ಗ್ರಹ ವಿಜ್ಞಾನ, ಮನಶಾಸ್ತ್ರ ಮತ್ತು ಭೂ ವಿಜ್ಞಾನ ಇತ್ಯಾದಿ ವಿಷಯಗಳು ಆಯ್ಕೆಗೆ ಲಭ್ಯವಿದೆ.

ಪಿಯುಸಿ ಆರ್ಟ್ಸ್, ಕಾಮರ್ಸ್ ಅಥವಾ ಸೈನ್ಸ್‌ ನಾಲ್ಕು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಕರಿಯರ್ ಪ್ಲಾನ್‌ಗೆ ಅನುಗುಣವಾಗಿ, ಪಿಯುಸಿಯ ಬಳಿಕ ಕಲಿಯುವ ಪದವಿ ಅಥವಾ ಇತರ ಕೋರ್ಸುಗಳಿಗೆ ಪೂರಕವಾದ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲ ಕಾಲೇಜುಗಳಲ್ಲೂ ಮೇಲಿನ ಎಲ್ಲ ಐಚ್ಛಿಕ ವಿಷಯಗಳು ಇರಬೇಕೆಂದಿಲ್ಲ. ಮೊದಲಿಗೆ ಐಚ್ಛಿಕ ವಿಷಯಗಳ ಆಯ್ಕೆ, ನಂತರ ಅದನ್ನು ಕಲಿಸುವ ಕಾಲೇಜಿನ ಹುಡುಕಾಟ ನಡೆಯಬೇಕು.

Image

ನೆನಪಿಡಿ
ಪಿಯುಸಿ ಕಲಿತಾಗಲಿ ಕರಿಯರ್ ಪ್ಲಾನ್ ಮತ್ತೆ ಮಾಡೋಣ ಎಂಬ ಅಸಡ್ಡೆ ಬೇಡ. ಪಿಯುಸಿಯಲ್ಲಿನ ನಿರ್ದಿಷ್ಟ ವಿಭಾಗ ಮತ್ತು ಐಚ್ಛಿಕ ವಿಷಯಗಳ ಆಯ್ಕೆಯು ವಿದ್ಯಾರ್ಥಿಗಳ ಮುಂದಿನ (ಪದವಿ ಅಥವಾ ಇತರ ಕೋರ್ಸುಗಳ) ಕಲಿಕೆಯ ಹಾದಿಯನ್ನು ಸೀಮಿತಗೊಳಿಸುತ್ತವೆ ಎಂಬುದು ತಿಳಿದಿರಲಿ. ಉದಾಹರಣೆಗೆ ಪಿಯಸಿಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿ, ಐಚ್ಛಿಕ ವಿಷಯ ಪಿಸಿಎಂಬಿ ಆಯ್ಕೆ ಮಾಡಿಕೊಂಡರೆ ಮೆಡಿಕಲ್/ಇಂಜಿನಿಯರಿಂಗ್ ಎರಡನ್ನೂ ಕಲಿಯಬಹುದು. ಆದರೆ ಪಿಸಿಎಂಸಿ ತಗೊಂಡರೆ ಇಂಜಿನಿಯರಿಂಗ್ ಮತ್ತು ಇತರ ಕೋರ್ಸುಗಳನ್ನು ಕಲಿಯಬಹುದೇ ವಿನಹ, ಮೆಡಿಕಲ್ ಮಾಡುವಂತಿಲ್ಲ. ಮೆಡಿಕಲ್‌ಗೆ ಪಿಸಿಬಿ ಹಾಗೂ ಇಂಜಿನಿಯರಿಂಗ್‌ಗೆ ಪಿಸಿಎಂ ಕಡ್ಡಾಯ.
  
ಅದೇ ರೀತಿ, ಪಿಯಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿ ನಂತರ ಪದವಿ ಕಲಿಯುವಾಗ ಆರ್ಟ್ಸ್ ಅಥವಾ ಕಾಮರ್ಸ್ ಕ್ಷೇತ್ರಗಳ (ಬಿಎ, ಬಿಕಾಂ, ಬಿಬಿಎಂ) ಆಯ್ಕೆಗೆ ಅವಕಾಶಗಳಿವೆ. ಆದರೆ, ಪಿಯುಸಿಯಲ್ಲಿ ಆರ್ಟ್ಸ್ ಅಥವಾ ಕಾಮರ್ಸ್ ಆಯ್ಕೆ ಮಾಡಿಕೊಂಡು, ಪದವಿ ಹಂತದಲ್ಲಿ ಸೈನ್ಸ್‌ ಕ್ಷೇತ್ರದ (ಬಿಎಸ್ಸಿ, ಮೆಡಿಕಲ್, ಇಂಜಿನಿಯರಿಂಗ್) ಶಿಕ್ಷಣ ಪಡೆಯುವಂತಿಲ್ಲ. ಕೇವಲ ಆಟ್ಸ್ ಅಥವಾ ಕಾಮರ್ಸ್ ಕ್ಷೇತ್ರದ ಪದವಿ ಕಲಿಯಬಹುದು. 

ನ್ಯಾಶಿನಲ್ ಸ್ಕಿಲ್ ಕ್ವಾಲಿಫಿಕೇಶನ್ಸ್ ಫ್ರೇಮ್‌ವರ್ಕ್
ನ್ಯಾಶಿನಲ್ ಸ್ಕಿಲ್ ಕ್ವಾಲಿಫಿಕೇಶನ್ಸ್ ಫ್ರೇಮ್‌ವರ್ಕ್ (ಎನ್‌ಎಸ್‌ಕ್ಯುಎಫ್) ಯೋಜನೆಯಡಿ ಕಳೆದ ಕೆಲವು ವರ್ಷಗಳಿಂದ ರಾಜ್ಯದ ಆಯ್ದ ಹಲವು ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯುಸಿಯ ಜೊತೆಗೆ ಹೆಚ್ಚುವರಿ ವಿಷಯವಾಗಿ ಇನ್ಫೊರ್ಮೇಶನ್ ಟೆಕ್ನಾಲಜಿ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕ್ಯಾರ್ ಹಾಗೂ ಬ್ಯೂಟಿ ಆಂಡ್ ವೆಲ್‌ನೆಸ್ ನಂತಹ ಕೋರ್ಸುಗಳನ್ನು ಸೇರಿಸಿಕೊಳ್ಳಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಕರ್ನಾಟಕ ರಾಜ್ಯದಲ್ಲಿರುವ ನೋಂದಾಯಿತ ಪಿಯುಸಿ (ಸರಕಾರಿ, ಅನುದಾನಿತ ಹಾಗೂ ಖಾಸಗಿ) ಕಾಲೇಜುಗಳ ಜಿಲ್ಲಾವಾರು ವಿವರಗಳನ್ನು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್ pue.pue.karnataka.gov.in ನಲ್ಲಿ ಪಡೆಯಬಹುದು.

ನಿಮಗೆ ಏನು ಅನ್ನಿಸ್ತು?
9 ವೋಟ್