ಅನುದಿನ ಚರಿತೆ | ದೇವನೂರರ ಪುಸ್ತಕ ಮತ್ತು ವರ್ತಮಾನದ ಬಿಕ್ಕಟ್ಟಿನ ಆಳ-ಅಗಲ

ಜನರ ಬದುಕನ್ನು ಹಸನುಗೊಳಿಸದ ಧರ್ಮ ಎಷ್ಟೊಂದು ಅಪಾಯಕಾರಿ ಎಂದರಿಯುವಲ್ಲಿ ನಾವು ಸೋತಿದ್ದೇವೆ. ಈ ಸೋಲನ್ನು ಮೀರಿ ಬದುಕಿನ ದಾರಿಗಳನ್ನು ಮತ್ತೆ ಸಂಪಾದಿಸಬೇಕಿದೆ. ಏಕೆಂದರೆ, ಇವತ್ತು ಬಂಡವಾಳಶಾಹಿ ವರ್ಗವೂ ಧರ್ಮಾಂಧತೆಯನ್ನು ಬಳಸಿಕೊಂಡು ತಮ್ಮ ಅಭಿವೃದ್ಧಿಯ ಪಥವನ್ನು ಮತ್ತಷ್ಟು ವಿಸ್ತಾರಗೊಳಿಸುವ ಹುನ್ನಾರವನ್ನು ನಡೆಸಿದೆ

ದೇವನೂರ ಮಹಾದೇವ ಅವರು ಈಚೆಗೆ 'ಆರ್ ಎಸ್ ಎಸ್ - ಆಳ ಮತ್ತು ಅಗಲ' ಎಂಬ ಕಿರು ಹೊತ್ತಗೆ ಹೊರತಂದಿದ್ದಾರೆ. ಈ ಹೊತ್ತಗೆಯ ವಿವರಗಳನ್ನು ಕುರಿತು ವಿಶ್ಲೇಷಿಸುವ ಬದಲಾಗಿ, ಅಲ್ಲಿ ಮಂಡಿಸಿದ ಒಂದು ಸಾಮಾಜಿಕ-ರಾಜಕೀಯ ಕಥನದ (ಸೋಶಿಯೋ-ಪೊಲಿಟಿಕಲ್ ಡಿಸ್ಕೋರ್ಸ್) ನಿಲುವುಗಳು ಹೇಗೆ ನಮ್ಮ ಸದ್ಯದ ಬಿಕ್ಕಟ್ಟುಗಳನ್ನು ಅರ್ಥೈಸುವ ಟೂಲ್-ಕಿಟ್ ಆಗಿವೆ ಎಂಬುದನ್ನು ಅರಿಯುವ ಪ್ರಯತ್ನವನ್ನು ಮಾತ್ರ ಈ ಟಿಪ್ಪಣಿಯಲ್ಲಿ ಮಾಡಲಾಗಿದೆ.

ಮಹಾದೇವ ಅವರ ಈ ನಿರೂಪಣೆಯನ್ನು ಕಥನವೆಂದು ಕರೆಯಲು ಕಾರಣವಿದೆ. ಯಾವುದೇ ಒಂದು ಚಾರಿತ್ರಿಕ, ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನವಾಗಿ ಬೆಳೆದಿರುವ ಇಂತಹ ‘ಸ್ಥಿತಿ’ಯನ್ನು ಒಬ್ಬ ಸೃಜನಶೀಲ ಬರಹಗಾರ ಒಂದು ಕಥನವಾಗಿ ಕಟ್ಟಿಕೊಟ್ಟಿದ್ದಾರೆ. ಯಾವುದೇ ಬಗೆಯ ಅನುಭವ ತೀವ್ರತೆಯನ್ನು ತಮ್ಮ ಪಾತ್ರಗಳ ಮೂಲಕ ಮೇಳೈಸುವ ತಮ್ಮ ಕಲಾವಂತಿಕೆಯನ್ನು ಇಲ್ಲಿ ವೈಚಾರಿಕ ತೀವ್ರತೆಯ ಲಯಗಳನ್ನು ಉದ್ದೀಪಿಸುವ ತಂತ್ರವನ್ನಾಗಿಸಿದ್ದಾರೆ. ಹಾಗಾಗಿಯೇ, ಈ ಹೊತ್ತಗೆಯನ್ನು ಸಾಮಾಜಿಕ-ರಾಜಕೀಯ ಕಥನ ಅಂತ ಕರೆದದ್ದು. ಕಥನ ಎನ್ನುವುದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ವಿನ್ಯಾಸಗಳನ್ನು ಪ್ರತಿಬಿಂಬಿಸುವ ಜೊತೆಗೆ, ಅವುಗಳು ಚಾರಿತ್ರಿಕವಾಗಿ ರೂಪುಗೊಂಡ ಬಗೆಗಳನ್ನು ವಿವರಿಸುತ್ತದೆ. ಅಧಿಕಾರ ಸಂಬಂಧಗಳು ಹೇಗೆ ನೆಲೆಗೊಳ್ಳುತ್ತವೆ ಮತ್ತು ಒಂದು ಐಡಿಯಾಲಜಿಕಲ್ ಪ್ರಕ್ರಿಯೆ ಯಾವ ಸ್ವರೂಪದಲ್ಲಿ ಮೈದೋರುತ್ತದೆ ಅನ್ನುವುದನ್ನು ಈ (ಸಂ)ಕಥನವು ಅನಾವರಣಗೊಳಿಸುತ್ತದೆ.

ಸಮಾಜ ಮತ್ತು ಐಡಿಯಾಲಜಿಗಳ ನಡುವೆ ಅನುಸಂಧಾನದ ನಂಟಸ್ತಿಕೆ ಇರುವುದಿಲ್ಲ. ಧರ್ಮಕೇಂದ್ರಿತ ಆಚರಣೆ ಮತ್ತು ನಂಬಿಕೆಗಳು ಜನರ ಬದುಕಿನ ಸಹಜ ರೂಢಿಗಳಾಗುವುದಿಲ್ಲ. ಇವುಗಳನ್ನು ಜನರ ಮೇಲೆ ಬಲವಂತವಾಗಿ ಹೇರಲಾಗುತ್ತದೆ. ಇಂತಹ ಹೇರಿಕೆಯಿಂದ ಜನಸಮೂಹಗಳಲ್ಲಿ ಸಹಬಾಳ್ವೆ ನೆಲೆಗೊಳ್ಳಲಾರದು. ಬದಲಾಗಿ, ಅಂತಹ ಸಮೂಹಗಳು ನಿರಂತರವಾಗಿ ಸಂಘರ್ಷಕ್ಕೆ ಹಾತೊರೆಯುತ್ತವೆ. ಜೊತೆಯಾಗಿ ಬದುಕುವ ಸಮೂಹಗಳ ನಡುವಣ ಸಾಮರಸ್ಯಕ್ಕೆ ಬಿಕ್ಕಟ್ಟುಗಳು ಎದುರಾಗುತ್ತವೆ. ಬಿಕ್ಕಟ್ಟನ್ನು ಎದುರಿಸಿ ಸಹಬಾಳ್ವೆಯನ್ನು ಅನುಸರಿಸುವ ಮನೋಧರ್ಮ ನಮ್ಮ ಬದುಕಿನ ಪ್ರಕ್ರಿಯೆಯಲ್ಲಿಯೇ ಸಾಕಾರಗೊಳ್ಳಬೇಕು (embodies). ಪರಿಣಾಮವಾಗಿ ಹೇರಿಕೆಯ ಆಚರಣೆಗಳನ್ನು ಪ್ರತಿರೋಧಿಸುವ ಗುಣ ನಮ್ಮ ಸಮೂಹಗಳ ಒಡಲಲ್ಲಿ ಅಂತಸ್ಥವಾಗುತ್ತದೆ. ಸಹಬಾಳ್ವೆಯ ಬದುಕಿಗೆ ಏನು ಅಡ್ಡಿಯಾಗಿದೆ, ಅದನ್ನು ನಾವು ಹೇಗೆ ಎದುರುಗೊಳ್ಳಬೇಕು ಎನ್ನುವ ವೈಚಾರಿಕ ಹಂದರವನ್ನು ಮಹಾದೇವ ಅವರು ಈ ಕಿರು ಹೊತ್ತಗೆಯಲ್ಲಿ ಮಂಡಿಸಿದ್ದಾರೆ. ಚರಿತ್ರೆಯ ಹುನ್ನಾರಗಳ ಪರಿಣಾಮವಾಗಿ ವರ್ತಮಾನದ ಬಿಕ್ಕಟ್ಟುಗಳು ಏರ್ಪಡುವಂತೆ, ಚರಿತ್ರೆಯನ್ನೇ ಒಂದು ಹುನ್ನಾರದ ಅಸ್ತ್ರವನ್ನಾಗಿ ಬಳಸಿಕೊಂಡರೆ, ಅದರಿಂದ ಮೈದೋರುವ ಬಿಕ್ಕಟ್ಟುಗಳು ಎಂತಹವು ಎನ್ನುವುದನ್ನು ಈ ಹೊತ್ತಗೆ ಅತ್ಯಂತ ನಿಚ್ಚಳವಾಗಿ ಪ್ರಕಟಿಸುತ್ತದೆ.

Image

ಯಾವುದೇ ಒಂದು ವಾಸ್ತವವನ್ನು ಗ್ರಹಿಸುವುದಕ್ಕೆ ಒಂದು ತಾತ್ವಿಕ ಚೌಕಟ್ಟು ಬೇಕಾಗುತ್ತದೆ, ಇಂತಹದೊಂದು ತಾತ್ವಿಕ ಚೌಕಟ್ಟನ್ನು ಮಹಾದೇವ ಅವರು 'ಆರ್ ಎಸ್ ಎಸ್: ಆಳ ಮತ್ತು ಅಗಲ' ಪುಸ್ತಿಕೆಯಲ್ಲಿ ರೂಪಿಸಿದ್ದಾರೆ. ಈ ಪಠ್ಯದಲ್ಲಿ ಅಡಕಗೊಳಿಸಿದ ವಿಚಾರಗಳನ್ನು ಸಂವಹನಗೊಳಿಸುವಲ್ಲಿ ಈ ಚೌಕಟ್ಟೇ ಒಂದು ಮಹತ್ವದ ಸಂವಹನ ಸಾಧನವಾಗಿದೆ ಎನ್ನುವುದು ವಿಶೇಷ. ಪರಿಣಾಮವಾಗಿ, ಆರೆಸ್ಸೆಸ್‌ನಂತಹ ಸಂಘಟನೆಯ ವಿಚಾರ ಮತ್ತು ಸೈದ್ಧಾಂತಿಕ ನಿಲುವುಗಳ ಮೂಲಕ ಹೊರಹೊಮ್ಮುವ ನೈತಿಕತೆ ಅಥವಾ ಅನೈತಿಕತೆ ಎಂತಹದು ಅನ್ನುವುದನ್ನೂ ಇದು ಬಹಿರಂಗಗೊಳಿಸುತ್ತದೆ. ಸಂಸ್ಕೃತಿ, ಸಮಾಜ, ಶಿಕ್ಷಣ ಹಾಗೂ ರಾಜಕಾರಣದಂತಹ ಸಮೂಹಕೇಂದ್ರಿತ ವಲಯಗಳನ್ನು ತನ್ನ ತಾತ್ವಿಕತೆಯನ್ನು ಆಚರಿಸುವ ಏಜನ್ಸಿಯನ್ನಾಗಿ ರೂಪಿಸಿಕೊಳ್ಳುವ ಆರೆಸ್ಸೆಸ್‌ನ ಮನೋಧರ್ಮ ಹೇಗೆ ಸಮೂಹ ವಿರೋಧಿಯಾಗಿದೆ ಎಂಬ ಕಟುಸತ್ಯವನ್ನು ಅರ್ಥೈಸುವುದೇ ಈ ಪುಸ್ತಕದ ಮಹತ್ವದ ನಿಲುವಾಗಿದೆ. ವಿಶೇಷವಾಗಿ, ಮಹಾದೇವ ಅವರು ಈ ಕಥನದ ಮುಖೇನ, ಸಮೂಹಗಳಲ್ಲಿ ನೆಲೆಗೊಳ್ಳಬೇಕಾದ ವೈಚಾರಿಕ ವಿನ್ಯಾಸದ ಸ್ವರೂಪವನ್ನು ವಿವರಿಸಿದ್ದಾರೆ. ಇದಕ್ಕಾಗಿ ಅವರು ಹಲವು ರೂಪಕ, ಪ್ರತಿಮೆ ಹಾಗೂ ಸಮೂಹಗಳನ್ನು ಪ್ರತಿನಿಧಿಸುವ ವಿದ್ಯಮಾನಗಳನ್ನು ಯಥೇಚ್ಛವಾಗಿ ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ಅಸಂಖ್ಯಾತ ಜನರ ಬದುಕನ್ನು ಬಾಧಿಸುವ ಇಂತಹ ವೈಚಾರಿಕ ಆಚರಣೆಗಳನ್ನು (ಡಿಸ್ಕರ್ಸಿವ್ ಪ್ರಾಕ್ಟೀಸಸ್) ಬಿಡಿಸಿ ನೋಡುವ ಪಠ್ಯವಾಗಿ ಈ ಪುಸ್ತಿಕೆ ನಮಗೆ ಸಿಕ್ಕಿದೆ. ಅಂದರೆ, ವೈಚಾರಿಕತೆಯ ಉತ್ಪಾದಕರು ಯಾರು? ಅದನ್ನು ಹಂಚುವವರು ಯಾರು? ಅದರ ಉಪಭೋಗಿಗಳು ಯಾರು? ಪರಿಣಾಮಗಳು ಎಂತಹವು? ಎಂಬೆಲ್ಲ ಸಂಗತಿಗಳು ಇಲ್ಲಿ ಮೈಪಡೆದಿವೆ. ಆದ್ದರಿಂದಲೇ ಈ ಪುಸ್ತಕದ ವಿಶ್ವಾಸಾರ್ಹತೆ ಹೆಚ್ಚಾಗಿದೆ.

ಕಾಲದ ಗತಿಯನ್ನು ನಿರ್ಧರಿಸುವವರು ಯಾರು? ಕಾಲದ ಅಗತ್ಯವನ್ನು ಪೂರೈಸುವವರು ಯಾರು? ಈ ಎರಡು ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವೂ ಹೌದು ಮತ್ತು ಜಟಿಲವೂ ಹೌದು. ಸುಲಭ ಯಾಕೆಂದರೆ, ಇವತ್ತಿನ ಈ ಸ್ಥಿತಿಗೆ ಇವರು ಇಲ್ಲವೇ ಅವರು ಕಾರಣ ಎಂದು ಹೇಳುವುದು ಅತೀ ಸರಳವಾದದ್ದು. ಜಟಿಲವೂ ಏಕೆಂದರೆ, ವರ್ತಮಾನದ ಯಾವುದೇ ಒಂದು ವಿದ್ಯಮಾನಕ್ಕೆ, ಮತ್ತದರ ಸಂಕೀರ್ಣ ನಿಲುವುಗಳಿಗೆ ಹಲವು ಬಗೆಯ ಚಾರಿತ್ರಿಕ ಒತ್ತಾಸೆಗಳು ಕಾರಣವಾಗಿರುತ್ತವೆ. ಇಂತಹ ಕಾರಣಗಳನ್ನು ಕೂಡ ಕೇವಲ ವರ್ಗೀಕರಿಸಿ ವಿವರಿಸಲು ಸಾಧ್ಯವಿಲ್ಲ. ಅಂದರೆ, ಯಾವುದೇ 'ಕಾಲದ ಬಿಕ್ಕಟ್ಟು' ಎನ್ನುವುದು ಸರಳರೇಖಾತ್ಮಕ ಆಗಿರುವುದಿಲ್ಲ. ಅದು ಅತ್ಯಂತ ಸಂಕೀರ್ಣವಾಗಿರುತ್ತದೆ. ಈ ಸಂಕೀರ್ಣತೆಯನ್ನು ಅರ್ಥೈಸಿಕೊಳ್ಳುವುದು ಕೂಡ ಬಹುತೇಕವಾಗಿ ದುಸ್ತರವಾಗಿರುತ್ತದೆ. ಚರಿತ್ರೆಯ ಹುನ್ನಾರದಿಂದ ಮೈದೋರಿದ ಪ್ರತಿಯೊಂದು ಚಟುವಟಿಕೆಯ ಹಿಂದೆ ಅನೇಕ ಬಗೆಯ ಹಿತಾಸಕ್ತಿಗಳ ಕೈವಾಡಗಳು ಇರುತ್ತವೆ. ಉದಾಹರಣೆಗೆ, ಮುಸ್ಲಿಂ ರಾಜರು ಮತ್ತು ಸಾಮ್ರಾಜ್ಯಗಳು ಭಾರತದಲ್ಲಿ ನೆಲೆ ಪಡೆದುಕೊಂಡ ಗಳಿಗೆಯಿಂದಲೂ ಭಾರತ ದೇಶದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ನಿಗಾ ಇಟ್ಟು ನೋಡಿದರೆ, ಧರ್ಮಕೇಂದ್ರಿತ ಹುನ್ನಾರಗಳು ಹೇಗೆ ಮೈಪಡೆದವು ಎಂಬ ವಾಸ್ತವ ನಮಗೆ ನಿಚ್ಚಳವಾಗುತ್ತದೆ.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಒಂದೇ ಧರ್ಮ, ಜಾತಿ, ಜನಾಂಗದ ಕುರುಹು ಯಾವತ್ತಿಗೂ ಅಪಾಯಕಾರಿ

ಇಲ್ಲಿ ಧರ್ಮ ಎಂದು ಹೇಳಿರುವುದು ಕೇವಲ ನಿರ್ದಿಷ್ಟ ಧರ್ಮವನ್ನು ಮಾತ್ರ ಆರೋಪಿಸಲು ಅಲ್ಲ. ಬದಲಾಗಿ, ಯಾವೆಲ್ಲ ಧರ್ಮಗಳು ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯವನ್ನು ಪಡೆದುಕೊಂಡಿದ್ದವೋ, ಆ ಎಲ್ಲ ಧರ್ಮಗಳನ್ನೂ ಗಮನದಲ್ಲಿಟ್ಟುಕೊಂಡು, ಈ ಧರ್ಮ ಎನ್ನುವ ಪರಿಭಾಷೆಯನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಧರ್ಮ ರಾಜಕಾರಣ ಹೇಗೆ ಸಾಮ್ರಾಜ್ಯ ರಾಜಕಾರಣಕ್ಕೆ ಕುಮ್ಮಕ್ಕನ್ನು ನೀಡಿತು ಅನ್ನುವುದನ್ನು ವಿವರಿಸಿಕೊಂಡರೆ, ಕಾಲದ ಬಿಕ್ಕಟ್ಟಿಗೆ ಕಾರಣವಾಗುವ ಧರ್ಮಸೂತ್ರಗಳು ನಮಗೆ ಸ್ಪಷ್ಟವಾಗುತ್ತವೆ. ಜಾತಿ ವ್ಯವಸ್ಥೆ ಮತ್ತು ಧರ್ಮದ ಮೂಲಕ ಪ್ರೇರೇಪಿತಗೊಂಡ ಹುನ್ನಾರಗಳು ಅತ್ಯಂತ ಪ್ರಬಲವಾಗಿದ್ದ ಕಾಲದಲ್ಲಿಯೇ, ಭಾರತಕ್ಕೆ ವಸಾಹತುಶಾಹಿ ಪ್ರಭುತ್ವದ ಪ್ರವೇಶವಾಯಿತು. ಭಾರತದ ಸಮೂಹಗಳ ಬದುಕಿನ ಬಿಕ್ಕಟ್ಟಿಗೆ ಯಾವ ಧರ್ಮ ಮತ್ತು ಜಾತಿ ವ್ಯವಸ್ಥೆಯಂತಹ ಅಸ್ತ್ರಗಳು ಕಾರಣವಾಗಿದ್ದವೋ, ಅದೇ ಅಸ್ತ್ರವನ್ನು ಬ್ರಿಟಿಶರು ಇನ್ನಷ್ಟು ಹರಿತಗೊಳಿಸಿ, ಅತ್ಯಂತ ಜಾಣ್ಮೆಯಿಂದ ಭಾರತದ ಜನಸಮೂಹಗಳ ಮೇಲೆ ಪ್ರಯೋಗಿಸಲು ಶುರು ಮಾಡಿದರು. ಯಾರು ಇಲ್ಲಿಯವರೆಗೆ ಈ ಅಸ್ತ್ರವನ್ನು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬಳಸಿಕೊಂಡಿದ್ದರೋ, ಅವರಿಗೆ ಬ್ರಿಟಿಶರಿಂದ ಇನ್ನಷ್ಟು ಲಾಭವೇ ಆಯಿತು. ಅಂದರೆ, ಶೋಷಕರ ಬಲ ಇಮ್ಮಡಿಗೊಂಡಿತು. ಪರಿಣಾಮವಾಗಿ ಶೋಷಣೆ ಇನ್ನಷ್ಟು ತೀವ್ರಗೊಂಡಿತು. ಅಷ್ಟೇ ಅಲ್ಲದೆ, ಶೋಷಣೆಯ ಸ್ವರೂಪ ಹೊಸ ವಿನ್ಯಾಸವನ್ನು ಪಡೆದುಕೊಂಡಿತು. ಅಂದರೆ, ಹಿಂದುತ್ವ ಎಂಬ ರಾಜಕೀಯ ಆಯುಧವನ್ನು ಸಾಣೆ ಹಿಡಿಯುವ ಕೆಲಸ ಇಲ್ಲಿಂದಲೇ ಶುರುವಾಯಿತು. ಸಾಮಾಜಿಕ ಕ್ಷೋಭೆಗೆ ಬೇಕಾಗುವ ತಾಲೀಮು ನಡೆದಿದ್ದು ಇಲ್ಲಿಂದ ಎನ್ನುವುದು ಗಮನಾರ್ಹ. ‘ಸಾಮ್ರಾಜ್ಯ’ ಚಕ್ರಾಧಿಪತ್ಯ ಕಟ್ಟಬೇಕಾದರೆ ಏಕರೂಪದ ಧರ್ಮ ಇರಬೇಕು, ಏಕರೂಪದ ಆಚರಣಾ ವ್ಯವಸ್ಥೆ ಇರಬೇಕು. ಈ ಕಾರಣದಿಂದಲೇ ಎಲ್ಲ ಸಾಮ್ರಾಜ್ಯಗಳೂ, ಅವು ಯಾವುದೇ ಸಿದ್ಧಾಂತಕ್ಕೆ ಸೇರಿದವುಗಳಾಗಿರಲಿ, ಬಲಾತ್ಕಾರವಾಗಿಯಾದರೂ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಏಕರೂಪ ತರಲು ಹವಣಿಸುತ್ತವೆ. ಭಿನ್ನರೂಪಗಳ ನಿರಾಕರಣೆ ಸಾಮಾಜಿಕ ಸ್ಥಿರತೆಯ ರೂಪ ತಾಳುತ್ತದೆ. ಬ್ರಿಟಿಷರ ಧಾರ್ಮಿಕ ಮತ್ತು ಸಾಂಸ್ಕೃತಿಕ ನೀತಿಯ ಗುರಿ ಇದ್ದದ್ದೇ ಈ ರೀತಿಯ 'ಏಕರೂಪತೆ ನಿರ್ಮಿಸುವ ಕಡೆಗೆ’ (ಡಿ ಆರ್ ನಾಗರಾಜ್). ಈ ಮಾತುಗಳು ಹೇಳುತ್ತಿರುವ ವಾಸ್ತವ ಇವತ್ತು ನಮ್ಮ ಕಣ್ಣೆದುರಿದೆ. ಫುಕೋ ಹೇಳುವ, "Practices, which form the objects of which they speak," ಎಂಬ ಈ ಮಾತು ಇವತ್ತಿನ ಬಿಕ್ಕಟ್ಟನ್ನೇ ಕುರಿತು ಹೇಳಿದಂತಿದೆ. ದೇವನೂರ ಮಹಾದೇವ ಅವರ 'ಆರ್ ಎಸ್ ಎಸ್- ಆಳ ಮತ್ತು ಅಗಲ' ಎನ್ನುವ ಕಿರು ಹೊತ್ತಗೆಯು ಮಂಡಿಸುತ್ತಿರುವ ಇಡೀ ಕಥನದ (ಡಿಸ್ಕೋರ್ಸ್) ತಾತ್ಪರ್ಯವೇ ಇದಾಗಿದೆ.

Image

ಧರ್ಮದ ಪ್ರಾಬಲ್ಯ ಎಂತಹದು? ಅದು ಸೃಷ್ಟಿಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳು ಯಾವವು? ಇವುಗಳ ಪರಿಣಾಮದಿಂದ ಭಾರತದಲ್ಲಿ ಏರ್ಪಟ್ಟ ವರ್ಣ ಪದ್ಧತಿ ಹಾಗೂ ಜಾತಿ ಕೇಂದ್ರಿತ ಅನಿಷ್ಟಗಳು ಮತ್ತು ಅಸ್ಪೃಶ್ಯತೆಯ ಸವಾಲುಗಳ ಕುರಿತು ಇವತ್ತು ಹೊಸದಾಗಿ ವ್ಯಾಖ್ಯಾನ ಮಾಡಲು ಏನು ಕೂಡ ಬಾಕಿಯಿಲ್ಲ. ಎಲ್ಲವೂ ಬಯಲಾಗಿದೆ. ಆದರೆ, ಈ ಮತ್ತು ಆ ಧರ್ಮವು ಸೃಷ್ಟಿಸಿದ ಕಣ್ಕಟ್ಟು ಮಾತ್ರ ಇಂದಿಗೂ ಮುಂದುವರಿಯುತ್ತಿದೆ. ಜನರು ಸಹಜವಾಗಿ ಬದುಕುವುದಕ್ಕೆ ಇದು ಬಿಡುವಂತೆ ಕಾಣಿಸುತ್ತಿಲ್ಲ. ಜನರ ಬದುಕನ್ನು ಹಸನುಗೊಳಿಸದ ಧರ್ಮ ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ಅರಿಯುವಲ್ಲಿ ನಾವು ಸೋತಿದ್ದೇವೆ. ಈ ಸೋಲನ್ನು ಮೀರಿ ಬದುಕಿನ ದಾರಿಗಳನ್ನು ಮರುಸಂಪಾದಿಸುವ ಜರೂರಿದೆ. ಏಕೆಂದರೆ ಇವತ್ತು ಬಂಡವಾಳಶಾಹಿ ವರ್ಗವೂ ಧರ್ಮಾಂಧತೆಯನ್ನು ಬಳಸಿಕೊಂಡು ತಮ್ಮ ಅಭಿವೃದ್ಧಿಯ ಪಥವನ್ನು ಮತ್ತಷ್ಟು ವಿಸ್ತಾರಗೊಳಿಸುವ ಹುನ್ನಾರವನ್ನು ನಡೆಸಿದೆ. ಇಂತಹ ಹುನ್ನಾರದಿಂದ ಯಾರು ಲಾಭವನ್ನು ಪಡೆಯುತ್ತಾರೆ ಅನ್ನುವುದು ಕೂಡ ಮುಖ್ಯ. ಏಕೆಂದರೆ, ಯಾರು ಅಥವಾ ಯಾವ ಜಾತಿ-ವರ್ಗದವರು ವರ್ಣಪದ್ಧತಿಯಿಂದ ಲಾಭ ಪಡೆದುಕೊಂಡರೋ ಅವರೇ ವಸಾಹತೀಕರಣದಿಂದಲೂ ಮತ್ತು ಅಭಿವೃದ್ಧಿಯ ರಾಜಕಾರಣದಿಂದಲೂ ಹಾಗೂ ಇಂಗ್ಲಿಶ್ ಶಿಕ್ಷಣದಿಂದಲೂ ಲಾಭವನ್ನು ಪಡೆದುಕೊಂಡಿದ್ದಾರೆ. ಇದೇ ಸಂತಾನವೇ ಇವತ್ತು ಬಂಡವಾಳಶಾಹಿ, ಕೋಮುವಾದ ಹಾಗೂ ಹಿಂದುತ್ವದ ಪರವಾಗಿ ತಮ್ಮ ವಾದಗಳನ್ನು ಮಂಡಿಸುತ್ತಿದೆ. ಈ ಎಲ್ಲ ಬೆಳವಣಿಗೆಯನ್ನು ಬಗ್ಗುಬಡಿಯಲು ಪರ್ಯಾಯ ವೈಚಾರಿಕ ಮಾದರಿಗಳನ್ನು ರೂಪಿಸಬೇಕಾಗಿದೆ. ಈ ಪ್ರಕ್ರಿಯೆಯ ಭಾಗವಾಗಿಯೇ ಮಹಾದೇವ ಅವರು ಈ ಪುಸ್ತಿಕೆ ತಂದಿದ್ದಾರೆ. ಅತಿಗೆ ಹೋಗದೆ ಅರಿವಿನ ಕ್ರಾಂತಿ ಆಗಲಾರದು ಎನ್ನುವ ಬ್ಲೇಕ್ ಕವಿಯ ಈ ಮಾತು ವರ್ತಮಾನದ ಬಿಕ್ಕಟ್ಟುಗಳನ್ನು ಬಗೆಹರಿಸುವುದಕ್ಕೆ ಪರ್ಯಾಯ ಮಾದರಿಗಳ ಮಹತ್ವವನ್ನು ಹೇಳುತ್ತದೆ. ಮಹಾದೇವ ಅವರು ಕೂಡ ಈ ಅತಿಗೆ ಹೋಗಿ ಹೊಸ ಪರ್ಯಾಯ ಮಾರ್ಗಗಳ ಹುಡುಕಾಟಕ್ಕೆ ಅಣಿಯಾಗಿದ್ದಾರೆ. ಅಂದರೆ, ಸಾಮಾಜಿಕ ಪ್ರಾಬಲ್ಯ ಎಂತಹದು, ಸಾಮಾಜಿಕ ಭಿನ್ನತೆ ಎಂದರೇನು, ನಮ್ಮ ಅಸ್ತಿತ್ವ, ಅಸ್ಮಿತೆ ಮತ್ತು ಪ್ರಾತಿನಿಧ್ಯವನ್ನು ಕಾಪಾಡಿಕೊಳ್ಳಲು ನಮ್ಮ ಪ್ರತಿರೋಧದ ಸ್ವರೂಪ ಯಾವುದು? ಹೇಗಿರಬೇಕು? ಯಾವಾಗ ಅದು ಪ್ರಕಟಗೊಳ್ಳಬೇಕು? ಎಂಬಿತ್ಯಾದಿ ಮಹತ್ವದ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಯನ್ನು ನಾವು ಹೊರಬೇಕಿದೆ ಎಂಬ ಮಾತನ್ನು ಮಹಾದೇವ ಅವರು ಈ ಹೊತ್ತಗೆಯ ಚರ್ಚೆಗಳ ಮೂಲಕ ಒತ್ತಾಯಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್