ಕಾಮನ್‌ವೆಲ್ತ್ ಗೇಮ್ಸ್ | ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಅವಿನಾಶ್ ಸಬ್ಳೆ

  • ಸ್ಟೀಪಲ್‌ಚೇಸ್‌ನಲ್ಲಿ ಕೀನ್ಯಾದ ಅಥ್ಲೀಟ್‌ಗಳಿಗೆ ಸವಾಲಾದ ಸಬ್ಳೆ
  • 0.05 ಸೆಕೆಂಡ್‌ ಅಂತರದಲ್ಲಿ ಕೈತಪ್ಪಿದ ಚಿನ್ನದ ಪದಕ

ಬರ್ಮಿಂಗ್‌ಹ್ಯಾಮ್‌ನಲ್ಲಿ  ನಡೆಯುತ್ತಿರುವ 22ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಓಟಗಾರ ಅವಿನಾಶ್ ಸಬ್ಳೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. 8:11:20 ನಿಮಿಷದಲ್ಲಿ ಗುರಿ ತಲುಪಿದ ಸಬ್ಳೆ, ಬೆಳ್ಳಿ ಪದಕ ಗೆಲ್ಲುವುದರ ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ಮತ್ತು ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದರು.

ಇತ್ತೀಚೆಗಷ್ಟೇ ಓರೆಗಾನ್‌ನ ಯುಜೀನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯ ಫೈನಲ್‌ನಲ್ಲಿ ಅವಿನಾಶ್ 11ನೇ ಸ್ಥಾನ ಪಡೆದಿದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಇದುವರೆಗೂ ಹೆಚ್ಚಿನ ಕೂಟಗಳಲ್ಲಿ ಕೀನ್ಯಾದ ಅಥ್ಲೀಟ್‌ಗಳು ಮಾತ್ರ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು. ಆದರೆ ಸಬ್ಳೆ ಇದೇ ಮೊದಲ ಬಾರಿಗೆ ಪದಕ ಪೀಠದಲ್ಲಿ ತಿರಂಗಾವನ್ನು ಹಾರಾಡಿಸಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ ? : 10,000 ಮೀಟರ್ ನಡಿಗೆ | ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪ್ರಿಯಾಂಕಾ ಗೋಸ್ವಾಮಿ

ಫಿನಿಶಿಂಗ್‌ ಪಾಯಿಂಟ್‌ವರೆಗೂ ಕೀನ್ಯಾದ ಇಬ್ರಾಹಿಂ ಕಿಬಿವೋಟ್‌ಗೆ ತೀವ್ರ ಪೈಪೋಟಿ ನೀಡಿದ್ದ ಅವಿನಾಶ್‌, 0.05 ಸೆಕೆಂಡ್‌ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು.

ಮತ್ತೊಂದೆಡೆ ಬಾಕ್ಸಿಂಗ್ ಹಾಗೂ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳು ಖಚಿತವಾಗಿದೆ. ಈಗಾಗಲೇ ಅಮಿತ್, ನೀತು​ ಫೈನಲ್​ಗೆ ಲಗ್ಗೆ ಹಾಕಿದ್ದಾರೆ. ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತ ಇಲ್ಲಿಯವರೆಗೆ 10 ಚಿನ್ನ, 11 ಬೆಳ್ಳಿ ಹಾಗೂ 11 ಕಂಚಿನ ಸಾಧನೆ ಮಾಡಿದ್ದು, ಒಟ್ಟು 32 ಪದಕ ಮುಡಿಗೇರಿಸಿಕೊಂಡು ಭಾರತ 5ನೇ ಸ್ಥಾನದಲ್ಲಿದೆ. 55 ಚಿನ್ನ, 45 ಬೆಳ್ಳಿ ಹಾಗೂ 47 ಕಂಚಿನ ಪದಕದ ಸಹಿತ ಒಟ್ಟು 147 ಪದಕ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್