ಕಾಮನ್‌ವೆಲ್ತ್‌ ಗೇಮ್ಸ್‌ | ಪಾಕಿಸ್ತಾನ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

  • ಸ್ಮೃತಿ ಮಂದನ ಬಿರುಸಿನ ಅರ್ಧಶತಕ
  • ಅಂಕಪಟ್ಟಿಯಲ್ಲಿ ಖಾತೆ ತೆರೆದ ಭಾರತ

ಪಾಕಿಸ್ತಾನ ನೀಡಿದ್ದ 100 ರನ್‌ಗಳ ಸುಲಭ ಗುರಿಯನ್ನು ಕೇವಲ 2 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿದ್ದ ಭಾರತದ ವನಿತೆಯರು, ಕಾಮನ್‌ವೆಲ್ತ್‌ ಕ್ರೀಡಾಕೂಟದ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಮೊದಲ ಗೆಲುವಿನ ನಗೆ ಬೀರಿದ್ದಾರೆ.

ಆರಂಭಿಕ ಆಟಗಾರ್ತಿ ಸ್ಮೃತಿ ಮಂದನ ಬಿರುಸಿನ ಅರ್ಧಶತಕ ಗಳಿಸುವ ಮೂಲಕ ಕೇವಲ 11. 4 ಓವರ್‌ಗಳಲ್ಲೇ ತಂಡವನ್ನು ಗೆಲುವಿನ ದಡ ದಾಟಿಸಿದರು.

ಮಳೆಯಿಂದಾಗಿ 18 ಓವರ್‌ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ, ಕೇವಲ 99 ರನ್‌ಗಳಿಸುವಷ್ಟರಲ್ಲೇ ಆಲೌಟ್‌ ಆಗಿತ್ತು. ಸುಲಭ ಗುರಿಯನ್ನು ಬೆನ್ನಟ್ಟುವ ವೇಳೆ ಎಲ್ಲಿಯೂ ಎಡವದ ಹರ್ಮನ್‌ ಪ್ರೀತ್‌ ಕೌರ ಬಳಗ, ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು.

42 ಎಸೆತಗಳನ್ನು ಎದುರಿಸಿದ ಸ್ಮೃತಿ ಮಂದನ,  ಮೂರು ಸಿಕ್ಸರ್‌ ಮತ್ತು ಎಂಟು ಬೌಂಡರಿಗಳ ನೆರವಿನಿಂದ 63 ರನ್‌ಗಳಿಸಿ ಅಜೇಯರಾಗುಳಿದರು. ಶೆಫಾಲಿ ವರ್ಮಾ 16 ರನ್ ಗಳಿಸಿದರೆ, ಸಬ್ಬಿನೇನಿ ಮೇಘನಾ 14 ರನ್‌ಗಳಿಸಿ ಒಮೈಮಾ ಸುಹೈಲ್‌ಗೆ ವಿಕೆಟ್‌ ಒಪ್ಪಿಸಿದರು. ಆಗಸ್ಟ್‌ ಮೂರರಂದು ನಡೆಯುವ ಮುಂದಿನ ಪಂದ್ಯದಲ್ಲಿ ಭಾರತ ಬಾರ್ಬಡೋಸ್‌ ತಂಡವನ್ನು ಎದುರಿಸಲಿದೆ. ಬಾರ್ಬಡೋಸ್‌ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಕೂಟದ ಮೊದಲ ಪಂದ್ಯದಲ್ಲಿ ಹರ್ಮನ್‌ ಪ್ರೀತ್‌ ಕೌರ್‌ ಸಾರಥ್ಯದ ಭಾರತ, ಆಸ್ಟ್ರೇಲಿಯಾ ತಂಡಕ್ಕೆ ಶರಣಾಗಿತ್ತು. ಸೋಲಿನಂಚಿಗೆ ತಲುಪಿದ್ದರೂ, ಹೋರಾಟವನ್ನು ಕೈ ಬಿಡದ ಆಸೀಸ್‌ ವನಿತೆಯರು ರೋಚಕ ಗೆಲುವು ದಾಖಲಿಸಿದ್ದರು.

ಪಾಕಿಸ್ತಾನ 99 ರನ್‌ಗಳಿಗೆ ಆಲೌಟ್‌ !

ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ್ದ ಪಾಕಿಸ್ತಾನ 99 ರನ್‌ಗಳಿಸುವಷ್ಟರಲ್ಲಿ ಆಲೌಟ್‌ ಆಗಿತ್ತು. ಆರಂಭಿಕ ಆಟಗಾರ್ತಿ ಮುನೀಬಾ ಅಲಿ ಗಳಿಸಿದ 32 ರನ್‌ ಗರಿಷ್ಠ ಸ್ಕೋರ್‌ ಎನಿಸಿಕೊಂಡಿತು. ಉಳಿದಂತೆ ಅಲಿಯಾ ರಿಯಾಝ್‌ 18 ರನ್‌, ನಾಯಕಿ ಬಿಸ್ಮಾ ಮರೂಫ್‌ 17 ರನ್‌ಗಳಿಸಿದರು. ಐವರು ಆಟಗಾರ್ತಿಯರು ಎರಡಂಕಿಯ ಮೊತ್ತವನ್ನು ದಾಟುವ ಮೊದಲೇ ಪೆವಿಲಿಯನ್‌ ಸೇರಿಕೊಂಡರು.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತಕ್ಕೆ ಎರಡನೇ ಚಿನ್ನದ ಪದಕ

ಭಾರತದ ಪರ ಬೌಲಿಂಗ್‌ನಲ್ಲಿ ಸ್ನೇಹ್‌ ರಾಣಾ ಮತ್ತು ರಾಧಾ ಯಾದವ್‌ ತಲಾ ಎರಡು ವಿಕೆಟ್‌ ಪಡೆದರೆ, ಶೇಫಾಲಿ ವರ್ಮಾ, ರೇಣುಕಾ ಸಿಂಗ್‌ ಹಾಗೂ ಮೆಘನಾ ಸಿಂಗ್‌ ತಲಾ ಒಂದು ವಿಕೆಟ್‌ ಪಡೆದರು. ಉಭಯ ತಂಡಗಳು ಇದುವರೆಗೆ 12 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ಭಾರತ ಗೆಲುವು ಕಂಡಿದ್ದರೆ, ಪಾಕಿಸ್ತಾನ ಕೇವಲ ಎರಡು ಪಂದ್ಯಗಳಲ್ಲಷ್ಟೇ ಗೆಲ್ಲಲು ಶಕ್ತವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್