ಕಾಮನ್‌ವೆಲ್ತ್‌ ಗೇಮ್ಸ್‌ | ಕುಸ್ತಿ ಅಖಾಡದಲ್ಲಿ ಮುಂದುವರಿದ ಪದಕ ಬೇಟೆ

  • ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಚಿನ್ನ ಗೆದ್ದ ವಿನೇಶಾ ಪೋಗಟ್‌ 
  • ಪುರುಷರ 74 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಗೆದ್ದ ನವೀನ್

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದ ಕುಸ್ತಿ ಅಂಗಣದಲ್ಲಿ ಭಾರತ ಸ್ವರ್ಣ ನಗೆ ಬೀರಿದೆ.

ರವಿ ಕುಮಾರ್, ನವೀನ್‌ ಮತ್ತು ವಿನೇಶಾ ಪೋಗಟ್‌ ಚಿನ್ನ ಗೆದ್ದರೆ, ಪೂಜಾ ಗೆಹ್ಲೋಟ್ ಹಾಗೂ ಪೂಜಾ ಸಿಹಾಗ್ ಕಂಚು ತಮ್ಮದಾಗಿಸಿಕೊಂಡರು. ಶುಕ್ರವಾರ 3 ಚಿನ್ನ ಸೇರಿ 6 ಪದಕ ಗೆದ್ದಿದ್ದ ಭಾರತ, ಶನಿವಾರ ಮತ್ತೆ 3 ಸ್ವರ್ಣ ಪದಕಕ್ಕೆ ಕೊರಳೊಡ್ಡಿತು.

ಶನಿವಾರ ನಡೆದ ಪುರುಷರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ರವಿ  10–0 ಅಂತರದಲ್ಲಿ ನೈಜೀರಿಯದ ಎಬಿಕ್ವೆನಿಮೊ ವೆಲ್ಸನ್‌ ವಿರುದ್ಧ ಕೇವಲ 2.16 ನಿಮಿಷಗಳಲ್ಲಿ ಗೆದ್ದರು. 19 ವರ್ಷದ ನವೀನ್‌, ಪುರುಷರ 74 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಪಾಕಿಸ್ತಾನದ ಮುಹಮ್ಮದ್‌ ಶರೀಫ್‌ ತಾಹಿರ್‌ ಅವರನ್ನು 9–0 ರಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಎರಡು ಸುತ್ತುಗಳಲ್ಲೂ ಎದುರಾಳಿಗೆ ನವೀನ್‌ ಯಾವುದೇ ಅಂಕ ಬಿಟ್ಟುಕೊಡಲಿಲ್ಲ.‌

ವಿನೇಶಾಗೆ ಹ್ಯಾಟ್ರಿಕ್‌ ಚಿನ್ನ

ಕಾಮನ್‌ವೆಲ್ತ್‌ ಕ್ರೀಡಾಕೂಟದ ಕಳೆದೆರಡು ಆವೃತ್ತಿಗಳಲ್ಲೂ ಬಂಗಾರದ ಪದಕ ಸಂಪಾದಿಸಿದ್ದ ವಿನೇಶ್ ಪೋಗಟ್, ಮಹಿಳೆಯರ 53 ಕೆ.ಜಿ. ಸ್ಪರ್ಧೆಯಲ್ಲಿ ಮತ್ತೆ ಚಿನ್ನದ ಪದಕ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಗೌರವವನ್ನು ಅವರು ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ನಾಲ್ವರು ಸ್ಪರ್ಧಿಗಳು ಮಾತ್ರ ಕಣದಲ್ಲಿದ್ದರು.

ಮೊದಲ ಸುತ್ತಿನಲ್ಲಿ ಕೆನಡಾದ ಸಮಂತಾ ಸ್ಟಿವರ್ಟ್‌ ಅವರನ್ನು ಕೇವಲ 36 ಸೆಕೆಂಡುಗಳಲ್ಲಿ ನೆಲಕ್ಕೆ ಕೆಡವಿ ಶುಭಾರಂಭ ಮಾಡಿದರು. ಆ ಬಳಿಕ ನೈಜೀರಿಯದ ಮರ್ಸಿ ಅಡೆಕುರೆಯೊ ಎದುರು 6–0 ಅಂತರದಿಂದ ಜಯಿಸಿದರು. ಕೊನೆಯ ಕುಸ್ತಿಯಲ್ಲಿ ಅವರು ಶ್ರೀಲಂಕಾದ ಚಮೋದ್ಯ ಕೇಶನಿ ಮದುರವಲಗೆ ಅವರನ್ನು ನೆಲಕ್ಕುರುಳಿಸಿ ಅಜೇಯ ಸಾಧನೆ ಮಾಡಿದರು.

ಈ ಸುದ್ದಿ ಓದಿದ್ದೀರಾ ? : 10,000 ಮೀಟರ್ ನಡಿಗೆ | ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪ್ರಿಯಾಂಕಾ ಗೋಸ್ವಾಮಿ

ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಪೂಜಾ ಗೆಹ್ಲೋಟ್‌, 76 ಕೆ.ಜಿ ವಿಭಾಗದಲ್ಲಿ ಪೂಜಾ ಸಿಹಾಗ್, ಹಾಗೂ  97 ಕೆ.ಜಿ. ವಿಭಾಗದಲ್ಲಿ ದೀಪಕ್ ನೆಹ್ರಾ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ನಿಮಗೆ ಏನು ಅನ್ನಿಸ್ತು?
0 ವೋಟ್