ಮಹಿಳಾ ಹಾಕಿ | ಘಾನ ವಿರುದ್ಧ ಅಮೋಘ ಗೆಲುವಿನ ಆರಂಭ

  • ಘಾನ ವಿರುದ್ಧ ಮೊಳಗಿದ ಗೆಲುವಿನ ಗಾನ
  • ಮುಂದಿನ ಪಂದ್ಯಗಳಲ್ಲಿ ಭಾರತಕ್ಕೆ ಕಠಿಣ ಸವಾಲು

22ನೇ ಕಾಮನ್‌ವೆಲ್ತ್‌ ಗೇಮ್ಸ್‌ ಕೂಟದ ಮೊದಲ ದಿನ ನಡೆದ ಮಹಿಳಾ ಹಾಕಿ ಪಂದ್ಯದಲ್ಲಿ ಭಾರತ, ಘಾನ ವಿರುದ್ಧ ಗೆಲುವಿನ ಗಾನ ಮೊಳಗಿಸಿದೆ. ಬರ್ಮಿಂಗ್‌ಹ್ಯಾಮ್‌ ವಿಶ್ವವಿದ್ಯಾಲಯ ಹಾಕಿ ಮತ್ತು ಸ್ಕ್ವಾಶ್‌ ಸೆಂಟರ್‌ನಲ್ಲಿ ನಡೆದ ಎ ವಿಭಾಗದ ಮೊದಲ ಪಂದ್ಯದಲ್ಲಿ ಸವಿತಾ ಪೂನಿಯಾ ಬಳಗ 5-0 ಅಂತರದಲ್ಲಿ ಗೆಲುವಿನ ನಗೆ ಬೀರಿತು.

ಪಂದ್ಯ ಆರಂಭವಾಗಿ ಮೂರು ನಿಮಿಷ ಕಳೆಯುವಷ್ಟರಲ್ಲಿಯೇ ಭಾರತ ಗೋಲಿನ ಖಾತೆ ತೆರೆದಿತ್ತು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಬಳಸಿಕೊಂಡ ಗುರ್ಜಿತ್‌ ಕೌರ್‌ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಮಧ್ಯಂತರ ವಿರಾಮಕ್ಕೆ ಮೂರು ನಿಮಿಷ ಬಾಕಿ ಇರುವಷ್ಟರಲ್ಲಿ ನೇಹಾ ಎರಡನೇ ಗೋಲು ಬಾರಿಸಿದರು. ಮೂರನೇ ಗೋಲು ಸಂಗೀತಾ ಅವರ ಮೂಲಕ ದಾಖಲಾಯಿತು. ಆ ಬಳಿಕ ಪೆನಾಲ್ಟಿ ಕಾರ್ನರ್‌ ಅವಕಾಶದ ಮೂಲಕ ಗುರ್ಜಿತ್‌ ಕೌರ್‌ ತಮ್ಮ ಎರಡನೇ ಗೋಲು ದಾಖಲಿಸಿದರೆ, ಅಂತಿಮ ಕ್ಷಣದಲ್ಲಿ ಸಲೀಮಾ ಟೇಟೆ ಗೋಲು ಬಾರಿಸುವ ಮೂಲಕ ಭಾರತದ ಮುನ್ನಡೆಯನ್ನು 5ಕ್ಕೆ ಏರಿಸಿದರು.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕೊನೆಯದಾಗಿ 2006ರಲ್ಲಿ ಭಾರತದ ವನಿತೆಯರು ಪದಕ ಗೆದ್ದಿದ್ದರು. 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಕೂಟದಲ್ಲಿ ಮಹಿಳಾ ತಂಡ ಮೊತ್ತ ಮೊದಲ ಮತ್ತು ಏಕೈಕ ಚಿನ್ನದ ಪದಕ ಗೆದ್ದಿದ್ದಾರೆ.  ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ತಂಡವು ಐತಿಹಾಸಿಕ ನಾಲ್ಕನೇ ಸ್ಥಾನವನ್ನು ಗಳಿಸಿತ್ತು.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಗೆಲುವಿನತ್ತ ಧಾವಿಸಿ ಮುಗ್ಗರಿಸಿದ ಭಾರತ

ಬರ್ಮಿಂಗ್‌ಹ್ಯಾಮ್‌ನಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತಕ್ಕೆ, 30ನೇ ಶ್ರೇಯಾಂಕದಲ್ಲಿರುವ ಘಾನ ತಂಡ ಸುಲಭ ತುತ್ತಾಗಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಭಾರತಕ್ಕೆ ನಿಜವಾದ ಸವಾಲು ಎದುರಾಗಲಿದೆ. ಆಗಸ್ಟ್ 2 ರಂದು ನಡೆಯುವ ಪಂದ್ಯದಲ್ಲಿ ಭಾರತ, ಐದನೇ ಶ್ರೇಯಾಂಕದ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆ ನಂತರದಲ್ಲಿ 3 ನೇ ಶ್ರೇಯಾಂಕದಲ್ಲಿರುವ ಆಸ್ಟ್ರೇಲಿಯಾ, 8ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಹಾಗೂ ಗುಂಪು ಹಂತದಲ್ಲಿ ಕೊನೆಯದಾಗಿ 15ನೇ ಶ್ರೇಯಾಂಕದಲ್ಲಿರುವ ಕೆನಡಾ ವಿರುದ್ಧ ಹೋರಾಡಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್