ಕಾಮನ್‌ವೆಲ್ತ್‌ ಗೇಮ್ಸ್‌ | ಸೆಮಿಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

  • ಹರ್ಮನ್‌ಪ್ರೀತ್‌ ಸಿಂಗ್ ಹ್ಯಾಟ್ರಿಕ್‌ ಗೋಲು
  • ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್‌ ಪ್ರವೇಶ ಖಚಿತಪಡಿಸಿಕೊಂಡಿದೆ. ಅನುಭವಿ ಆಟಗಾರ ಹರ್ಮನ್‌ಪ್ರೀತ್‌ ಸಿಂಗ್ 18, 19 ಹಾಗೂ 41ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನ ನೆರವಿನಿಂದ ಭಾರತ, ವೇಲ್ಸ್ ತಂಡವನ್ನು 4-1 ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ. ಬಿ ಗುಂಪಿನಲ್ಲಿ ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಗೆಲುವು, 1 ಡ್ರಾ ಸಾಧಿಸಿದ ಭಾರತ, 10 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

ವೇಲ್ಸ್‌ ತಂಡದ ಏಕೈಕ ಗೋಲನ್ನು ಡ್ರ್ಯಾಗ್‌ ಫ್ಲಿಕ್ಕರ್‌ ಗ್ಯಾರೆತ್‌ ಫರ್ಲಾಂಗ್‌ ಅವರು 55ನೇ ನಿಮಿಷದಲ್ಲಿ ಗಳಿಸಿದರು. ಪಂದ್ಯದ ಮೊದಲ ಎರಡು ಕ್ವಾರ್ಟರ್‌ಗಳ ಹೆಚ್ಚಿನ ಸಮಯದಲ್ಲೂ ಚೆಂಡು ಭಾರತದ ಆಟಗಾರರ ನಿಯಂತ್ರಣದಲ್ಲಿತ್ತು. ಆದರೂ ಮೊದಲ ಕ್ವಾರ್ಟರ್‌ನಲ್ಲಿ ವೇಲ್ಸ್‌, ಪ್ರಬಲ ಪೈಪೋಟಿ ಒಡ್ಡಿತ್ತು. ಮೊದಲ ಕ್ವಾರ್ಟರ್‌ನ ಎಂಟನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಗಳಿಸಿದ್ದು ಬಿಟ್ಟರೆ, ಗೋಲು ಗಳಿಸುವ ಬೇರೆ ಉತ್ತಮ ಅವಕಾಶಗಳನ್ನು ಭಾರತ ಸೃಷ್ಟಿಸಲಿಲ್ಲ. ಪೆನಾಲ್ಟಿ ಕಾರ್ನರ್‌ನಲ್ಲಿ ವರುಣ್‌ ಕುಮಾರ್‌ ಗೋಲು ಗಳಿಸಲು ವಿಫಲರಾದರು.

ಈ ಸುದ್ದಿ ಓದಿದ್ದೀರಾ ? : ಅಥ್ಲೆಟಿಕ್ಸ್ ಚಾಂಪಿಯನ್​​ಶಿಪ್ | ಎರಡು ಪದಕ ಗೆದ್ದು ರೂಪಲ್‌ ಚೌಧರಿ ದಾಖಲೆ

18ನೇ ನಿಮಿಷದಲ್ಲಿ ಸತತವಾಗಿ ಎರಡು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಎರಡನೇ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್‌ಪ್ರೀತ್‌, ಭಾರತಕ್ಕೆ ಮುನ್ನಡೆ ತಂದಿತ್ತರು. 20 ನಿಮಿಷದಲ್ಲಿ ಅವರು ಪೆನಾಲ್ಟಿ ಅವಕಾಶದಲ್ಲಿ ಮತ್ತೊಂದು ಗೋಲು ಗಳಿಸಿಕೊಟ್ಟರು. 40ನೇ ನಿಮಿಷದಲ್ಲಿ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಒಂದನ್ನು ಗುರಿ ತಲುಪಿಸಿದ ಹರ್ಮನ್‌ಪ್ರೀತ್‌ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಇದಾದ ಒಂಭತ್ತು ನಿಮಿಷಗಳ ಬಳಿಕ ಗುರ್ಜಂತ್‌ ಸಿಂಗ್‌ ಮೂಲಕ ಭಾರತ ನಾಲ್ಕನೇ ಗೋಲು ಗಳಿಸಿತು.

ನಿಮಗೆ ಏನು ಅನ್ನಿಸ್ತು?
0 ವೋಟ್