ಕಾಮನ್‌ವೆಲ್ತ್‌ ಗೇಮ್ಸ್‌ | ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಮತ್ತೊಂದು ಪದಕ

  • ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಪದಕ
  • 109 ಕೆಜಿ ವಿಭಾಗದಲ್ಲಿ ಲವ್‌ಪ್ರೀತ್ ಸಿಂಗ್ ಕಂಚಿನ ಪದಕ

ಕಾಮನ್‌ವೆಲ್ತ್‌ ಕ್ರೀಡಾಕೂಟದ ಆರನೇ ದಿನವಾದ ಇಂದು ಭಾರತ ಶುಭಾರಂಭ ಮಾಡಿದೆ. ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತ ಮತ್ತೊಂದು ಪದಕ ಗೆದ್ದಿದ್ದು, ಪುರುಷರ 109 ಕೆಜಿ ವಿಭಾಗದಲ್ಲಿ ಲವ್‌ಪ್ರೀತ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.

ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್‌ಗಳ ಪದಕ ಬೇಟೆ ಮುಂದುವರಿದಿದೆ. ಈಗಾಗಲೇ ಈ ವಿಭಾಗದಲ್ಲಿ ಭಾರತಕ್ಕೆ ಒಟ್ಟು 8 ಪದಕಗಳು ಸಿಕ್ಕಿದ್ದು, ಲವ್‌ಪ್ರೀತ್ ಗೆದ್ದ ಪದಕ ಸೇರಿ 9 ಪದಕಗಳು ಭಾರ ಎತ್ತುವಿಕೆಯಲ್ಲೇ ಬಂದಂತಾಗಿದೆ.

ಸ್ನ್ಯಾಚ್ ಸುತ್ತಿನಲ್ಲಿ ಮೂರನೇ ಪ್ರಯತ್ನದಲ್ಲಿ 163 ಕೆಜಿ ಎತ್ತುವ ಮೂಲಕ ಲವ್‌ಪ್ರೀತ್ ಸಿಂಗ್ ಮೂರನೇ ಸ್ಥಾನಿಯಾಗಿ ಅಂತಿಮ ಸುತ್ತಿಗೆ ಪ್ರವೇಶಿಸಿದರು. ಒಟ್ಟು 355 ಕೆಜಿಯನ್ನು ಯಶಸ್ವಿಯಾಗಿ ಎತ್ತುವ ಮೂಲಕ ಪದಕ ತಮ್ಮದಾಗಿಸಿಕೊಂಡರು.

ಕ್ಯಾಮರೂನ್‌ನ ಜೂನಿಯರ್ ಪೆರಿಕ್ಲೆಕ್ಸ್ ನ್ಗಡ್ಜಾ ನ್ಯಾಬಾಯೆಯು ಚಿನ್ನ ಗೆದ್ದರೆ, ಸಮೋವಾದ ಜಾಕ್ ಹಿಟಿಲಾ ಒಪೆಲೋಜ್ ಬೆಳ್ಳಿ ಪಡೆದರು. ಮಂಗಳವಾರ ಭಾರತ ತಂಡ ಕೀಡಾಕೂಟದಲ್ಲಿ ಮಹತ್ವದ ಸಾಧನೆ ಮಾಡಿದೆ. ದೇಶದಲ್ಲಿ ಜನಪ್ರಿಯವಲ್ಲದ ಲಾನ್ ಬೌಲ್‌ನಲ್ಲಿ ಬಂಗಾರ ಗೆಲ್ಲುವ ಮೂಲಕ ಮಹಿಳಾ ತಂಡ ಇತಿಹಾಸ ನಿರ್ಮಿಸಿದೆ.

ಈ ಸುದ್ದಿ ಓದಿದ್ದೀರಾ? ಎದುರಾಳಿಯನ್ನು 39 ನಡೆಗಳಲ್ಲಿ ಸೋಲಿಸಿದ ಪ್ಯಾಲೇಸ್ತೀನಿನ 8 ವರ್ಷದ ಬಾಲೆ!

ಪುರುಷರ ಟೇಬಲ್ ಟೆನಿಸ್ ತಂಡವು, ಸಿಂಗಾಪುರ ವಿರುದ್ಧದ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಮತ್ತೊಂದೆಡೆ ಪುರುಷರ 96 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ವಿಕಾಸ್ ಠಾಕೂರ್ ಬೆಳ್ಳಿ ಪದಕ ಗೆದ್ದರೆ, ಬ್ಯಾಡ್ಮಿಂಟನ್‌ನಲ್ಲಿ ಮಲೇಷ್ಯಾ ವಿರುದ್ಧ ಸೋತ ಭಾರತ ಮಿಶ್ರ ತಂಡವು ಬೆಳ್ಳಿಗೆ ತೃಪ್ತಿಪಟ್ಟಿತು.

ಕ್ರೀಡಾಕೂಟದ 6ನೇ ದಿನವಾದ ಇಂದು, ವೇಟ್‌ಲಿಫ್ಟಿಂಗ್‌ನ ಇನ್ನೂ ಎರಡು ವಿಭಾಗದಲ್ಲಿ ಅಂತಿಮ ಸುತ್ತು ನಡೆಯಲಿದೆ. ಹೀಗಾಗಿ ಈ ವಿಭಾಗದಲ್ಲಿ ಭಾರತ ಪದಕ ಗೆಲ್ಲುವ ನಿರೀಕ್ಷೆ ಇದೆ. ಅಥ್ಲೆಟಿಕ್ಸ್, ಸ್ಕ್ವಾಷ್‌ ಸೇರಿದಂತೆ ಭಾರತ ಮಹಿಳಾ ಕ್ರಿಕೆಟ್ ತಂಡದ ಪಂದ್ಯ ಕೂಡಾ ನಡೆಯುತ್ತಿದೆ. ಮಹಿಳೆಯರ ಹಾಕಿ ತಂಡವು ಕೆನಡಾ ವಿರುದ್ಧ ಮುನ್ನಡೆ ಸಾಧಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್