ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತದ ಮೊದಲ ದಿನದ ಸ್ಪರ್ಧೆಗಳ ವಿವರ

  • ಈಜು: ಕರ್ನಾಟಕದ ಶ್ರೀಹರಿ ನಟರಾಜ್ ಮೇಲೆ ನಿರೀಕ್ಷೆ
  • ಸೈಕ್ಲಿಂಗ್, ಟ್ರಯಥ್ಲಾನ್, ಜಿಮ್ನಾಸ್ಟಿಕ್ ವಿಭಾಗದಲ್ಲಿ ಭಾರತ ಸ್ಪರ್ಧೆ

22ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಶುಕ್ರವಾರದಿಂದ (ಇಂಗ್ಲೆಂಡ್‌ ಕಾಲಮಾನ) ಸ್ಪರ್ಧೆಗಳೂ ಆರಂಭಗೊಳ್ಳಲಿದ್ದು, ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಪಾಲ್ಗೊಳ್ಳದೇ ಇರುವುದು ಮತ್ತು ಶೂಟಿಂಗ್‌ ವಿಭಾಗಕ್ಕೆ ಅವಕಾಶ ನೀಡದೇ ಇರುವುದು ಭಾರತಕ್ಕೆ ಹಿನ್ನಡೆಯಾಗಿದೆ. ಅದಾಗಿಯೂ, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಕುಸ್ತಿ, ಹಾಕಿ ಹಾಗೂ ಮಹಿಳಾ ಕ್ರಿಕೆಟ್‌ನಲ್ಲಿ ಪದಕದ ನಿರೀಕ್ಷೆಗಳು ಹೆಚ್ಚಿವೆ.

ಮೊದಲ ದಿನ ನಡೆಯುವ ಸೈಕ್ಲಿಂಗ್, ಈಜು, ಟ್ರಯಥ್ಲಾನ್ ಹಾಗೂ ಜಿಮ್ನಾಸ್ಟಿಕ್ ಕ್ರೀಡೆಗಳಲ್ಲಿ ಭಾರತ ಸ್ಪರ್ಧೆಗಿಳಿಯಲಿದೆ. ಪುರುಷರ ಟ್ರಯಥ್ಲಾನ್‌ನಲ್ಲಿ ಆದರ್ಶ್ ಎಂ.ಎಸ್ ವಿಶ್ವನಾಥ್ ಯಾದವ್, ಮಹಿಳೆಯರ ವಿಭಾಗದಲ್ಲಿ ಸಂಜನಾ ಜೋಶಿ, ಪ್ರಜ್ಞಾ ಮೋಹನ್ ಕಣಕ್ಕಿಳಿಯಲಿದ್ದಾರೆ. ಸೈಕ್ಲಿಂಗ್ ಪುರುಷರ ಪರ್ಸೂಟ್ ತಂಡ ವಿಭಾಗ, ಸ್ಪ್ರಿಂಟ್‌ ತಂಡ ವಿಭಾಗ, ಮಹಿಳೆಯರ ಸ್ಪ್ರಿಂಟ್‌ ತಂಡ ವಿಭಾಗಗಳಲ್ಲಿ ಭಾರತ ಸ್ಪರ್ಧಿಸಲಿದೆ.

ಜಿಮ್ನಾಸ್ಟಿಕ್ ವಿಭಾಗದಲ್ಲಿ ಅರ್ಹತಾ ಮತ್ತು ಫೈನಲ್‌ ಸುತ್ತು ಶುಕ್ರವಾರವೇ ನಡೆಯಲಿದೆ. ಪುರುಷರ ಈಜು 400 ಮೀ. ಫ್ರೀ ಸ್ಟೈಲ್‌ನಲ್ಲಿ ಕುಶಾಗ್ರ ರಾವತ್ ಸ್ಪರ್ಧಿಸಲಿದ್ದು, ಫೈನಲ್‌ಗೆ ಪ್ರವೇಶಿಸುವ ನಿರೀಕ್ಷೆ ಇದೆ. ಇದೇ ವೇಳೆ 50 ಮೀ. 100 ಮೀ. ಬ್ಯಾಕ್‌ಸ್ಟೋಕ್ ಸ್ಪರ್ಧೆಗಳಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ ಸ್ಪರ್ಧಿಸಲಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಇಂಗ್ಲೆಂಡ್‌ | ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

ಶನಿವಾರದಿಂದ ವೇಟ್‌ಲಿಫ್ಟಿಂಗ್‌ ಆರಂಭವಾಗಲಿದ್ದು, ಈ ವಿಭಾಗದಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲುವ ಸಾಧ್ಯತೆಯಿದೆ. 7 ವನಿತಾ ಸ್ಪರ್ಧಿಗಳು ಸೇರಿದಂತೆ ಒಟ್ಟು 15 ಮಂದಿ ಈ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಗೋಲ್ಟ್‌ಕೋಸ್ಟ್‌ನಲ್ಲಿ ನಡೆದ ಕಳೆದ ಆವೃತ್ತಿ ಕಾಮನ್‌ವೆಲ್ತ್‌ ಕೂಟದ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತವೇ ಅಗ್ರಸ್ಥಾನ ಪಡೆದಿತ್ತು. ಟೋಕಿಯೋ ಒಲಿಂಪಿಕ್ಸ್‌ನ ರಜತ ಪದಕ ವಿಜೇತೆ ಮೀರಾಭಾಯಿ ಚಾನು, ಬರ್ಮಿಂಗ್‌ಹ್ಯಾಮ್‌ನಲ್ಲೂ ಭಾರತದ ಪದಕ ಬೇಟೆಗೆ ಆರಂಭ ಒದಗಿಸುವ ನಿರೀಕ್ಷೆಯಿದೆ. ಚಾನು ಜೊತೆಗೆ ಪೂನಂ ಯಾದವ್‌, ಜೆರೆಮಿ ಲಾಲ್ರಿನುಂಗ ಹಾಗೂ ಗುರುರಾಜ ಪೂಜಾರಿಯ ಮೇಲೂ ಸ್ವರ್ಣ ನಿರೀಕ್ಷೆಯಿದೆ. 2018ರಲ್ಲಿ ಭಾರತ 5 ಚಿನ್‌ ಮತ್ತು ತಲಾ 2 ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿತ್ತು.

ಕ್ರಿಕೆಟ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಟೇಬಲ್ ಟೆನಿಸ್, ಹಾಕಿ ಮತ್ತು ಸ್ಕ್ವಾಷ್‌ನಲ್ಲಿ ನಡೆಯಲಿರುವ ಲೀಗ್‌ ಪಂದ್ಯಗಳಲ್ಲಿ ಮೊದಲನೇ ದಿನ ಭಾರತ ಶುಭಾರಂಭ ಕಾಣುವ ಹಂಬಲದಲ್ಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್