ಕಾಮನ್​ವೆಲ್ತ್​ ಗೇಮ್ಸ್​​ | ಚಿನ್ನ ಗೆದ್ದ ಭಾರತೀಯ ಟೇಬಲ್ ಟೆನ್ನಿಸ್ ತಂಡ

  • ಕ್ರೀಡಾಕೂಟದುದ್ದಕ್ಕೂ ಅಮೋಘ ಪ್ರದರ್ಶನ
  • ಟೇಬಲ್‌ ಟೆನ್ನಿಸ್‌ನಲ್ಲಿ ಚೀನಾ ವಿರುದ್ಧ ಗೆಲುವು

ಬರ್ಮಿಂಗ್​ಹ್ಯಾಮ್ ಕಾಮನ್​ವೆಲ್ತ್ ​ಕ್ರೀಡಾಕೂಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತ ತಂಡವು ಚಿನ್ನದ ಪದಕ ಗೆದ್ದಿದೆ. ಆಗಸ್ಟ್ 2 ಮಂಗಳವಾರ ನಡೆದ ಫೈನಲ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಸಾಧಿಸಿದೆ. ಸಿಂಗಲ್ಸ್‌ನಲ್ಲಿ ಹರ್ಮೀತ್ ದೇಸಾಯಿ 3-0 ಅಂತರದ ಜಯ ಸಾಧಿಸಿದ ನಂತರ, 3-1 ಅಂತರದಿಂದ ಸಿಂಗಾಪುರವನ್ನು ಸೋಲಿಸುವ ಮೂಲಕ ಭಾರತ ಪದಕ ಗಳಿಸಿದೆ.

2018ರ ಗೋಲ್ಡ್ ಕೋಸ್ಟ್ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತ ಚಿನ್ನ ಗೆದ್ದುಕೊಂಡಿತ್ತು. ಈ ಬಾರಿಯೂ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2018ರಂತೆ ಈ ಬಾರಿಯೂ ಭಾರತ ತಂಡದಲ್ಲಿ ಅಚಂತಾ ಶರತ್ ಕಮಲ್, ಜಿ ಸತ್ಯನ್, ಹರ್ಮೀತ್ ದೇಸಾಯಿ ಮತ್ತು ಸನಿಲ್ ಶೆಟ್ಟಿ ಕಣಕ್ಕಿಳಿದಿದ್ದರು. ನಾಲ್ಕು ವರ್ಷಗಳ ಹಿಂದೆ ಆಡಿದ ಆಟಗಾರರೇ ಇದೀಗ ಮತ್ತೊಮ್ಮೆ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದಾರೆ.

ಕ್ರೀಡಾ ಕೂಟದುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಫೈನಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿತ್ತು. ಭಾರತದ ಪರ ಹರ್ಮೀತ್ ದೇಸಾಯಿ ಮತ್ತು ಜಿ ಸತ್ಯನ್ ಜೋಡಿಯು ತಮ್ಮ ಡಬಲ್ಸ್ ಪಂದ್ಯವನ್ನು 3-0 ಅಂತರದಿಂದ ಗೆದ್ದು ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಕಾಮನ್‌ವೆಲ್ತ್‌ ಗೇಮ್ಸ್‌ ಇತಿಹಾಸದಲ್ಲಿ ಅದರ ಅತ್ಯಂತ ಅನುಭವಿ ಮತ್ತು ಅತ್ಯಂತ ಯಶಸ್ವಿ ಭಾರತೀಯ ಪ್ಯಾಡ್ಲರ್ ಅಚಂತಾ ಶರತ್ ಕಮಲ್ ಮೇಲೆ ಭಾರತದ ಭರವಸೆ ಇರಿಸಲಾಗಿತ್ತು.

ಸಿಂಗಲ್ಸ್ ಪಂದ್ಯದಲ್ಲಿ ಕಠಿಣ ಹೋರಾಟದ ನಡುವೆಯೂ 4 ಗೇಮ್‌ಗಳಲ್ಲಿ ನಡೆದ ಪಂದ್ಯದಲ್ಲಿ ಅಚಂತಾ 1-3 ಅಂತರದಿಂದ ಸೋತರು. ಇದರಿಂದ ಪಂದ್ಯವು 1-1ರಲ್ಲಿ ಸಮಬಲಗೊಂಡಿತು. ಇದರ ಹೊರತಾಗಿಯೂ, ಮುಂದಿನ ಮೂರು ಪಂದ್ಯಗಳಲ್ಲಿ ಬಲವಾಗಿ ಕಂಬ್ಯಾಕ್ ಮಾಡುವ ಮೂಲಕ ಪಂದ್ಯವನ್ನು 3-1 ರಲ್ಲಿ ಗೆದ್ದರು. ಸತ್ಯನ್ ಅವರ ವಿಜಯದ ನಂತರ ಇನ್ನೂ ಎರಡು ಪಂದ್ಯಗಳು ನಡೆದವು. ಅದರಲ್ಲಿ ಭಾರತವು ಕೇವಲ ಒಂದು ಪಂದ್ಯವನ್ನು ಗೆಲ್ಲಬೇಕಾಗಿತ್ತು. ಮುಂದಿನ ಪಂದ್ಯದಲ್ಲೇ ಹರ್ಮೀತ್ ದೇಸಾಯಿ ಜಯಗಳಿಸುವುದರೊಂದಿಗೆ ಭಾರತ ತಂಡವು ಚಿನ್ನವನ್ನು ಖಚಿತಪಡಿಸಿಕೊಂಡಿತು.

ಮಿಶ್ರ ಸ್ಪರ್ಧೆಯಲ್ಲಿ ಮೂರನೇ ಚಿನ್ನ

ಇದು ಕಾಮನ್‌ವೆಲ್ತ್‌ ಗೇಮ್ಸ್​ನ ಟೇಬಲ್ ಟೆನಿಸ್​ನಲ್ಲಿ ಭಾರತದ ಸತತ ಎರಡನೇ ಚಿನ್ನದ ಪದಕ ಮತ್ತು ಒಟ್ಟಾರೆ ಮೂರನೇ ಚಿನ್ನದ ಪದಕವಾಗಿದೆ. 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ತಂಡ ಮೊದಲ ಬಾರಿಗೆ ಪದಕ ಗೆದ್ದಿತ್ತು. ಅಚಂತ ಶರತ್ ಕಮಲ್ ಕೂಡ ಆ ತಂಡದ ಭಾಗವಾಗಿದ್ದರು. ಅಲ್ಲದೆ, 2018ರಲ್ಲೂ ಸ್ವರ್ಣ ಪದಕ ಗೆದ್ದಿದ್ದರು. ಇದೀಗ ಬರ್ಮಿಂಗ್​ಹ್ಯಾಮ್​ ಕಾಮನ್​ವೆಲ್ತ್ ಗೇಮ್ಸ್​ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯ ಟೇಬಲ್​ ಟೆನ್ನಿಸ್ ಪಟುಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್