ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಇತಿಹಾಸ ಸೃಷ್ಟಿಸಿದ ಅನು ರಾಣಿ

  • ಮಹಿಳೆಯರ ಜಾವೆಲಿನ್‌ನಲ್ಲಿ ಚೊಚ್ಚಲ ಕಂಚಿನ ಪದಕ
  • ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಆಸ್ಟ್ರೇಲಿಯದ ಸ್ಪರ್ಧಿಗಳು

ಬರ್ಮಿಂಗ್‌ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಭಾರತವನ್ನು ಪ್ರತಿನಿಧಿಸಿದ್ದ 29 ವರ್ಷದ ಅನು ರಾಣಿ, ಚೊಚ್ಚಲ ಕಂಚಿನ ಪದಕಕ್ಕೆ ಮುತ್ತಿಕ್ಕಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಅನು ರಾಣಿ, ನಾಲ್ಕನೇ ಪ್ರಯತ್ನದಲ್ಲಿ 60 ಮೀಟರ್​ ದೂರ ಎಸೆಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ, ಜಾವೆಲಿನ್ ಎಸೆತದಲ್ಲಿ  ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕೀರ್ತಿಗೆ ಅನು ಪಾತ್ರರಾಗಿದ್ದಾರೆ. ಈ ವಿಭಾಗದಲ್ಲಿ ಭಾಗವಹಿಸಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ಶಿಲ್ಪಾ ರಾಣಿ 7ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಈ ಸುದ್ದಿ ಓದಿದ್ದೀರಾ ? : ಟ್ರಿಪಲ್ ಜಂಪ್​ನಲ್ಲಿ ಇತಿಹಾಸ ನಿರ್ಮಿಸಿದ ಎಲ್ಡೋಸ್ ಪೌಲ್, ಅಬ್ದುಲ್ಲಾ ಅಬೂಬಕರ್‌

64.03 ಮೀಟರ್‌ ದೂರ ದಾಖಲಿಸಿದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ಮೆಕೆಂಝಿ ಲಿಟ್ಲ್‌ ಚಿನ್ನದ ಪದಕ ಗೆದ್ದರೆ, ಆಸ್ಟ್ರೇಲಿಯದವರೇ ಆದ  ಕೆಲ್ಸೆ ಲೀ ಬಾರ್ಬರ್‌ 63.52 ಮೀಟರ್ ಜಾವೆಲಿನ್‌ ಎಸೆಯುವ ಮೂಲಕ ಬೆಳ್ಳಿಯ ಪದಕ ಗೆದ್ದರು. ರಾಣಿಗಿಂತ ಮೊದಲು, 2010 ಮತ್ತು 2018ರ ಆವೃತ್ತಿಗಳಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ಕಾಶಿನಾಥ್ ನಾಯಕ್ ಮತ್ತು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಕ್ರಮವಾಗಿ ಕಂಚು ಮತ್ತು ಚಿನ್ನದ ಪದಕ ಗೆದ್ದಿದ್ದರು.

ಇತ್ತೀಚೆಗಷ್ಟೇ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಜಾವೆಲಿನ್ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ಅನುರಾಣಿ, ಏಳನೇ ಸ್ಥಾನಿಯಾಗಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್