ಕಾಮನ್‌ವೆಲ್ತ್‌ ಗೇಮ್ಸ್‌ | ಬ್ಯಾಕ್‌ ಸ್ಟ್ರೋಕ್‌ ಈಜು; ಫೈನಲ್‌ಗೆ ಕನ್ನಡಿಗ ಶ್ರೀಹರಿ

  • ಬೆಂಗಳೂರಿನ 21 ವರ್ಷದ  ಈಜುಪಟು ಶ್ರೀಹರಿ ನಟರಾಜ್‌
  • 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ ಫೈನಲ್‌ನಲ್ಲಿ ನಿರಾಸೆ 

ಕಾಮನ್‌ವೆಲ್ತ್‌ ಕ್ರೀಡಾಕೂಟದ ಪುರುಷರ ವಿಭಾಗದ 50 ಮೀ. ಬ್ಯಾಕ್‌ಸ್ಟ್ರೋಕ್‌ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್‌ ಅವರು ಫೈನಲ್‌ ಪ್ರವೇಶಿಸಿದ್ದಾರೆ. 25.38 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಬೆಂಗಳೂರಿನ 21 ವರ್ಷದ  ಈಜುಪಟು ಶ್ರೀಹರಿ, ಹೀಟ್ಸ್‌ನಲ್ಲಿ 8ನೇ ಸ್ಥಾನ ಪಡೆದರು. ಆ ಮೂಲಕ ಕಾಮನ್‌ವೆಲ್ತ್‌ ಗೇಮ್ಸ್‌  ಇತಿಹಾಸದಲ್ಲಿಯೇ  100 ಮತ್ತು 50 ಮೀ. ಬ್ಯಾಕ್‌ಸ್ಟ್ರೋಕ್‌ ಈಜು ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ  ಮೊಟ್ಟ ಮೊದಲ ಭಾರತೀಯ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡರು.

ಫಿನಾ ವಿಶ್ವಚಾಂಪಿಯನ್‌ಶಿಪ್‌ನಲ್ಲಿ 24.40 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದ್ದ ಶ್ರೀಹರಿ, ಬರ್ಮಿಂಗ್‌ಹ್ಯಾಮ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅದಾಗಿಯೂ, ಭಾನುವಾರ (ಜುಲೈ 31) ಸೆಮಿಫೈನಲ್‌ ತಲುಪಲು ತೆಗೆದುಕೊಂಡಿದ್ದ 25.52 ಸೆಕೆಂಡ್‌  ಸಮಯವನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳುವಲ್ಲಿ ಶ್ರೀಹರಿ ಯಶಸ್ವಿಯಾದರು.

100 ಮೀಟರ್‌ ಫೈನಲ್‌ನಲ್ಲಿ ನಿರಾಸೆ !

ಇದಕ್ಕೂ ಮೊದಲು 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ ಈಜು ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ್ದ ಶ್ರೀಹರಿ, ಪ್ರತಿಸ್ಪರ್ಧಿಗಳಿಂದ ದೂರವೇ ಉಳಿದರು. 54.31 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ನಟರಾಜ್‌, 7ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರು. ಈ ವಿಭಾಗದಲ್ಲಿ 53.77 ಸೆಕೆಂಡ್‌ಗಳ ರಾಷ್ಟ್ರೀಯ ದಾಖಲೆಯನ್ನು ಶ್ರೀಹರಿ ಹೊಂದಿದ್ದಾರೆ. 50 ಮೀ. ಸ್ಪ್ಲಿಟ್ ತನಕ ಶ್ರೀಹರಿ 5ನೇ ಸ್ಥಾನದಲ್ಲಿದ್ದರು. ಆ ಬಳಿಕ ಇನ್ನಷ್ಟು ಹಿನ್ನಡೆ ಕಂಡರು.‌

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ದಾಖಲೆಯೊಂದಿಗೆ ಭಾರತಕ್ಕೆ ಮೂರನೇ ಚಿನ್ನದ ಪದಕ

100 ಮೀಟರ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ 18 ವರ್ಷದ ಪೀಟರ್ ಕೋಟ್ಸ್ ಚಿನ್ನ (53.78 2 ಸೆ), ಇಂಗ್ಲೆಂಡ್‌ನ ಬೋಡಿ ವಿಲಿಯಮ್ಸ್ ಬೆಳ್ಳಿ 53,91 ಸೆ) ಮತ್ತು ಆಸ್ಟ್ರೇಲಿಯದ ಬ್ರಾಡ್ಲಿ ವುಡ್‌ವರ್ಡ್ ಕಂಚು ಗೆದ್ದರು (54.06 ಸೆ.).

ಕಾಮನ್‌ವೆಲ್ತ್ ಗೇಮ್ಸ್‌ನ ಈಜು ವಿಭಾಗದಲ್ಲಿ ಭಾರತ ಇದುವರೆಗೂ  ಕೇವಲ ಏಕೈಕ ಪದಕವನ್ನಷ್ಟೇ ಗೆಲ್ಲಲು ಶಕ್ತವಾಗಿದೆ. 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪ್ರಶಾಂತ್ ಕರ್ಮಾಕರ್ ಭಾರತದ ಪದಕದ ಬರವನ್ನು ನೀಗಿಸಿದ್ದರು. ಇನ್ನೊಂದೆಡೆ, ಭಾರತದ ಅನುಭವಿ ಈಜುಪಟು ಸಾಜನ್ ಪ್ರಕಾಶ್, 200 ಮೀಟರ್ ಬಟರ್‌ ಸ್ಪರ್ಧೆಯಲ್ಲಿ 'ಫಸ್ಟ್ ರಿಸರ್ವ್' ಆಗಿ ಸ್ಪರ್ಧೆ ಮುಗಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್