ಕಾಮನ್‌ ವೆಲ್ತ್‌ ಗೇಮ್ಸ್‌ | ಭಾರತಕ್ಕೆ ಮತ್ತೆ ಎರಡು ಕಂಚು

  • ಜ್ಯೂಡೋ ಮತ್ತು ವೇಟ್‌ ಲಿಫ್ಟಿಂಗ್‌ನಲ್ಲಿ ತಲಾ ಒಂದು ಪದಕ
  • ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಸಂಖ್ಯೆ 9ಕ್ಕೆ ಏರಿಕೆ

ಕಾಮನ್ವೆಲ್ತ್‌ ಗೇಮ್ಸ್ 2022ರ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಜ್ಯೂಡೋ ಮತ್ತು ವೇಟ್‌ ಲಿಫ್ಟಿಂಗ್‌ನಲ್ಲಿ ತಲಾ ಒಂದು ಪದಕ ಬಂದಿದೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 9ಕ್ಕೆ ಏರಿದೆ.

Image

ಜ್ಯೂಡೋದಲ್ಲಿ ವಿಜಯ್ ಕುಮಾರ್ ಕಂಚಿನ ಪದಕ ಗೆದ್ದರೆ, ಭಾರ ಎತ್ತುವ ಸ್ಫರ್ಧೆಯಲ್ಲಿ ಹರ್ಜಿಂದರ್ ಕೌರ್ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. 
ವಿಜಯ್ ಕುಮಾರ್ ಯಾದವ್ ಅವರು ಕಾಮನ್‌ವೆಲ್ತ್ ಗೇಮ್ಸ್ 2022ರ ನಾಲ್ಕನೇ ದಿನ ಜ್ಯೂಡೋದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು.

ಪುರುಷರ 60 ಕೆಜಿ ಜ್ಯೂಡೋ ಟೈನಲ್ಲಿ ಸೈಪ್ರಸ್‌ನ ಪೆಟ್ರೋಸ್ ಕ್ರಿಸ್ಟೋಡೌಲಿಡ್ಸ್ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದರು. ಇದಕ್ಕೂ ಮುನ್ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜ್ಯೂಡೋ ತಾರೆ ಎಲ್ ಸುಶೀಲಾ ದೇವಿ ಬೆಳ್ಳಿ ಪದಕ ಜಯಿಸಿದ್ದರು.

ಮಹಿಳೆಯರ 71 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಹರ್ಜಿಂದರ್ ಕೌರ್ ಕಂಚಿನ ಪದಕ ಗೆದ್ದಿದ್ದಾರೆ. ಹರ್ಜಿಂದರ್ ಒಟ್ಟಾರೆ 212 ಕೆಜಿ ತೂಕ ಎತ್ತಿದ್ದರು. ಸ್ನಾಚ್‌ನಲ್ಲಿ 93 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ ನಲ್ಲಿ 119 ಕೆಜಿ ಭಾರ ಎತ್ತಿದ್ದರು. ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಸೇರಿ ಒಟ್ಟಾರೆ 9 ಪದಕಗಳು ಬಂದಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್