ಕಾಮನ್‌ವೆಲ್ತ್ ಗೇಮ್ಸ್‌ | ಭಾರತೀಯ ಬಾಕ್ಸರ್‌ಗಳ ಗೋಲ್ಡನ್‌ ಪಂಚ್‌!

  • ನೀತು ಘಂಘಾಸ್, ಅಮಿತ್ ಪಂಘಾಲ್‌ ಅವರಿಗೆ ಚಿನ್ನದ ಪದಕ
  • ಏಕಪಕ್ಷೀಯವಾಗಿ ಎದುರಾಳಿಗಳನ್ನು ಮಣಿಸಿದ ಬಾಕ್ಸರ್‌ಗಳು

ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾನುವಾರ ಭಾರತದ ಬಾಕ್ಸರ್‌ಗಳು ತಮ್ಮ ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಗಳನ್ನು ನೆಲಕ್ಕುರುಳಿಸಿದ್ದಾರೆ. ಮಹಿಳೆಯರ 48 ಕೆ.ಜಿ. ವಿಭಾಗದ ಬಾಕ್ಸಿಂಗ್‌ನಲ್ಲಿ ಹರ್ಯಾಣದ ನೀತೂ ಘಂಘಾಸ್ ಹಾಗೂ ಪುರುಷರ 51 ಕೆ.ಜಿ. ವಿಭಾಗದಲ್ಲಿ ಅಮಿತ್ ಪಂಘಾಲ್ ಅವರು ಭಾನುವಾರ ಚಿನ್ನದ ಪದಕ ಜಯಿಸಿದ್ದಾರೆ.

ಇಬ್ಬರು ಬಾಕ್ಸರ್‌ಗಳು ಏಕಪಕ್ಷೀಯವಾಗಿ ತಮ್ಮ ಎದುರಾಳಿಗಳನ್ನು ಮಣಿಸುವಲ್ಲಿ ಯಶಸ್ವಿಯಾದರು. ಕಳೆದ ಆವೃತ್ತಿಯಲ್ಲಿ ಬೆಳ್ಳಿಯ ಪದಕ ಗಳಿಸಿದ್ದ ಅಮಿತ್ ಪಂಘಾಲ್, ಯುರೋಪಿಯನ್‌ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಇಂಗ್ಲೆಂಡ್‌ನ ಕಿಯಾರನ್ ಮ್ಯಾಕ್‌ಡೊನಾಲ್ಡ್ ಅವರನ್ನು 5–0 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮತ್ತೊಂದೆಡೆ, 2019ರ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತೆ, ಇಂಗ್ಲೆಂಡ್‌ನ ಡೆಮಿ-ಜೇಡ್ ರೆಸ್ಟನ್ ಅವರನ್ನು 5–0 ಅಂತರದಿಂದ ಪರಾಭವಗೊಳಿಸುವ ಮೂಲಕ ನೀತೂ ಘಂಘಾಸ್ ಚಿನ್ನದ ಪದಕ ಗೆದ್ದಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಇತಿಹಾಸ ಸೃಷ್ಟಿಸಿದ ಅನು ರಾಣಿ

ಸೆಮಿಫೈನಲ್ ಪಂದ್ಯದಲ್ಲಿ ನೀತೂ ಘಂಘಾಸ್, ಕೆನಡಾದ ಪ್ರಿಯಾಂಕಾ ಧಿಲ್ಲೋನ್ ಅವರನ್ನು ಸೋಲಿಸಿದ್ದರು. ಎದುರಾಳಿಯ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದ್ದ ಕಾರಣ ಪಂದ್ಯದ ಮೂರನೇ ಸುತ್ತಿನಲ್ಲೇ ರೆಫರಿ ಆಟವನ್ನು ನಿಲ್ಲಿಸಿ ನೀತೂ ಅವರನ್ನು ವಿಜಯಿ ಎಂದು ಘೋಷಿಸಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ನೀತೂ ಏರಡನೇ ಸುತ್ತಿನ ಬಳಿಕ ಪಂದ್ಯ ಗೆದ್ದಿದ್ದರು.

ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ 21 ವರ್ಷದ ನೀತೂ, ಹರಿಯಾಣದ ಭಿವಾನಿ ಜಿಲ್ಲೆಯ ಧನನಾ ಗ್ರಾಮದವರು. ಪ್ರತಿದಿನ, ತಮ್ಮ ಗ್ರಾಮದಿಂದ 20 ಕಿ.ಮೀ ದೂರದಲ್ಲಿರುವ ಬಾಕ್ಸಿಂಗ್ ಕ್ಲಬ್‌ಗೆ ತೆರಳಿ ತರಬೇತಿ ಪಡೆಯುತ್ತಿದ್ದರು. ಬಾಕ್ಸರ್‌ ಆಗುವ ತಮ್ಮ ಮಗಳ ಕನಸಿಗೆ ಬಲ ತುಂಬಲು ಅವರ ತಂದೆ ತಮ್ಮ ಕೆಲಸವನ್ನು ಬಿಟ್ಟು ಮಗಳಿಗೆ  ಬೆಂಬಲವಾಗಿ ನಿಂತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್