ಕಾಮನ್‌ವೆಲ್ತ್‌ ಗೇಮ್ಸ್‌ | ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌ನಲ್ಲಿ ಭಾರತಕ್ಕೆ ಗೆಲುವು

  • ಶ್ರೀಲಂಕಾ ವಿರುದ್ಧ 5-0 ಅಂತರದಲ್ಲಿ ಗೆಲುವು
  • ಸ್ಕ್ವಾಷ್‌ನಲ್ಲಿ ಅನಾಹತ್ ಸಿಂಗ್‌‌ ಚೊಚ್ಚಲ ಗೆಲುವು

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ವೇಟ್‌ ಲಿಫ್ಟಿಂಗ್‌ನ ಪುರುಷರ 55 ಕೆಜಿ ವಿಭಾಗದಲ್ಲಿ ಭಾರತದ ಸಂಕೇತ್ ಮಹಾದೇವ್‌ ಸರ್ಗರ್‌ ಭಾರತಕ್ಕೆ ಮೊದಲ ಪದಕ ತಂದಿತ್ತರು. ಸ್ನ್ಯಾಚ್‌ ಮತ್ತು ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ ಒಟ್ಟು 248 ಕೆ.ಜಿ ಭಾರ ಎತ್ತಿದ ಸಂಕೇತ್‌, ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ.

ಆ ಬಳಿಕ ನಡೆದ ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌ ಹಾಗೂ ಸ್ಕ್ವಾಷ್‌ ಕ್ರೀಡೆಗಳಲ್ಲಿ ಭಾರತೀಯ ಸ್ಪರ್ಧಿಗಳು ಅಜೇಯರಾಗಿ ಮುನ್ನಡೆದಿದ್ದಾರೆ.

ಬ್ಯಾಡ್ಮಿಂಟನ್‌| ಶ್ರೀಲಂಕಾ ವಿರುದ್ಧ 5-0 ಅಂತರದಲ್ಲಿ ಗೆಲುವು

ಬ್ಯಾಡ್ಮಿಂಟನ್‌ ಮಿಶ್ರ ತಂಡ ವಿಭಾಗದಲ್ಲಿ ಭಾರತ, ಶ್ರೀಲಂಕಾ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಲಂಕಾದ ಡಯಾಸ್ ಮತ್ತು ಹೆಂಡೆಹೆವಾ ಅವರನ್ನು 21-14 ಮತ್ತು 21-9 ನೇರ ಗೇಮ್‌ಗಳಲ್ಲಿ ಸೋಲಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ  ಲಕ್ಷ್ಯ ಸೇನ್ ಲಂಕಾದ  ನಿಲುಕಾ ಕರುಣರತ್ನೆ ಅವರನ್ನು 21-18 ಮತ್ತು 21-5 ನೇರ ಗೇಮ್‌ಗಳಲ್ಲಿ ಸೋಲಿಸಿದರು.  ಆ ಮೂಲಕ 2-0 ಮುನ್ನಡೆ ಸಾಧಿಸಿತು. ಮಹಿಳಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್, ವಿದಾರ ವಿದಾನಗೆ ವಿರುದ್ಧ 21-3, 21-9 ಅಂತರದಲ್ಲಿ ಗೆಲುವು ಸಾಧಿಸಿದರು. ಪುರುಷರ ಜೋಡಿ ವಿಭಾಗದಲ್ಲಿ ಚಿರಾಗ್ ಶೆಟ್ಟಿ ಮತ್ತು ಸುಮೀತ್ ರೆಡ್ಡಿ ಲಂಕಾದ ಡಯಾಸ್ ಮತ್ತು ಅಬೇವಿಕ್ರಮ ಅವರನ್ನು 21-10 ಮತ್ತು 21-13 ನೇರ ಗೇಮ್‌ಗಳಲ್ಲಿ ಸೋಲಿಸಿ ಭಾರತ 4-0 ಮುನ್ನಡೆ ಸಾಧಿಸಲು ನೆರವಾದರು. ಅಂತಿಮ ಪಂದ್ಯದಲ್ಲಿ  ಜಾಲಿ-ಗೋಪಿಚಂದ್ ಮಹಿಳಾ ಜೋಡಿಯು ಹೆನಾಹೆವಾ-ವಿದಾನಗೆ ಅವರನ್ನು 21-18 ಮತ್ತು 21-6 ರಿಂದ ಸೋಲಿಸಿದರು. ಆ ಮೂಲಕ ಭಾರತವು ಶ್ರೀಲಂಕಾ ವಿರುದ್ಧ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.

ಟೇಬಲ್‌ ಟೆನಿಸ್‌ |

ಟೇಬಲ್‌ ಟೆನಿಸ್‌ ಮಹಿಳಾ ವಿಭಾಗದಲ್ಲಿ ಭಾರತ, ಗಯಾನ ತಂಡವನ್ನು 3-0 ಅಂತರದಲ್ಲಿ ಸೋಲಿಸಿದೆ.

ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ ಮತ್ತು ರೀತ್ ಟೆನ್ನಿಸನ್,  ಡಬಲ್ಸ್‌ ವಿಭಾಗದಲ್ಲಿ ಶ್ರೀಜಾ ಮತ್ತು ರೀತ್ ಜೋಡಿ, ತಮ್ಮ ಮೂರೂ ಪಂದ್ಯಗಳನ್ನು ಗೆದ್ದು ಮುಂದಿನ ಸುತ್ತು ಪ್ರವೇಶಿಸಿದರು.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತಕ್ಕೆ ಮೊದಲ ಪದಕ ತಂದ ಸಂಕೇತ್‌ ಸರ್ಗರ್

ಸ್ಕ್ವಾಷ್‌ನಲ್ಲಿ ಅನಾಹತ್ ಸಿಂಗ್‌‌ ಚೊಚ್ಚಲ ಗೆಲುವು

ಕಾಮನ್‌ವೆಲ್ತ್‌ ಗೇಮ್ಸ್‌ ನಲ್ಲಿ ಭಾಗವಹಿಸುತ್ತಿರುವ ಭಾರತದ ಅತ್ಯಂತ ಕಿರಿಯ ಅಥ್ಲೀಟ್‌ ಅನಾಹತ್ ಸಿಂಗ್‌, ಸ್ಕ್ವಾಷ್‌ ಆಟದ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚೊಚ್ಚಲ ಗೆಲುವಿನ ನಗೆ ಬೀರಿದ್ದಾರೆ.  14 ವರ್ಷದ ಆಟಗಾರ್ತಿ ಅನಾಹತ್ ಸಿಂಗ್‌,  ಗ್ರೆನಡೈನ್ಸ್‌ನ ಸೇಂಟ್ ವಿನ್ಸೆಂಟ್ ವಿರುದ್ಧ  11-5, 11-2, 11-0 ಅಂತರದಲ್ಲಿ ಗೆದ್ದು ಮುನ್ನಡೆದಿದ್ದಾರೆ.

ಅಂಡರ್-15 ಮಟ್ಟದಲ್ಲಿ ಈ ವರ್ಷ ಏಷ್ಯನ್ ಜೂನಿಯರ್ ಸ್ಕ್ವಾಷ್ ಮತ್ತು ಜರ್ಮನ್ ಓಪನ್‌ನಲ್ಲಿ ಅನಾಹತ್ ಸಿಂಗ್‌ ಚಾಂಪಿಯನ್ ಆಗಿದ್ದಾರೆ. ಸಿಂಗ್‌ ಇದೇ ಮೊದಲ ಬಾರಿಗೆ ಹಿರಿಯರ ಮಟ್ಟದಲ್ಲಿ ಆಡುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್