ಕಾಮನ್‌ವೆಲ್ತ್‌ ಕ್ರಿಕೆಟ್‌ | ಫೈನಲ್‌ನಲ್ಲಿ ಎಡವಿದ ಭಾರತಕ್ಕೆ ಬೆಳ್ಳಿ

  • 3 ರನ್‌ ಅಂತರದಲ್ಲಿ 3 ವಿಕೆಟ್‌ ಕಳೆದುಕೊಂಡ ಭಾರತ
  • 9 ರನ್‌ಗಳ ಅಂತರದಲ್ಲಿ ಗೆದ್ದ ಆಸ್ಟ್ರೇಲಿಯ

ಗೆಲುವಿನತ್ತ ಮುನ್ನಡೆದು, ಕೊನೆಯ ಕ್ಷಣದಲ್ಲಿ ಎಡವಿದ ಭಾರತದ ವನಿತೆಯರು ಬರ್ಮಿಂಗ್‌ಹ್ಯಾಮ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ಟಿ20 ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯ, ಭಾರತ ತಂಡವನ್ನು 9 ರನ್‌ಗಳ ಅಂತರದಲ್ಲಿ ಸೋಲಿಸಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯ, 8 ವಿಕೆಟ್‌ ನಷ್ಟದಲ್ಲಿ 161 ರನ್‌ ಗಳಿಸಿತ್ತು. ಸವಾಲಿನ ಮೊತ್ತ ಬೆನ್ನಟ್ಟುವ ವೇಳೆ ಒಂದು ಹಂತದಲ್ಲಿ ಭಾರತದ ವನಿತೆಯರು 2 ವಿಕೆಟ್‌ ನಷ್ಟದಲ್ಲಿ 118 ರನ್‌ ಗಳಿಸಿ ಗೆಲುವಿನತ್ತ ದಾಪುಗಾಲಿಟ್ಟಿದ್ದರು. ಆದರೆ ಆ ನಂತರದಲ್ಲಿ ಮೂರು ರನ್‌ ಅಂತರದಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಪಂದ್ಯ ಕೈಚೆಲ್ಲಿತು. ಅಂತಿಮವಾಗಿ 19.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್‌ ಆಯಿತು.

ಅಂತಿಮ ಓವರ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗದ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಎರಡು ವಿಕೆಟ್‌ಗಳು ಕೈಯಲ್ಲಿದ್ದವು. ಜೆಸ್‌ ಜೊನಾಸೆನ್‌ ಬೌಲ್‌ ಎಸೆದ ಓವರ್‌ನ ಎರಡನೇ ಎಸೆತದಲ್ಲಿ ಮೇಘನಾ ಸಿಂಗ್‌ ರನೌಟ್‌ ಆದರೆ, ಮೂರನೇ ಎಸೆತದಲ್ಲಿ ಯಸ್ತಿಕಾ ಭಾಟಿಯಾ ಎಲ್‌ಬಿಡ್ಬ್ಲ್ಯೂ ಆದರು. ಅಲ್ಲಿಗೆ ಭಾರತದ ಹೋರಾಟ ಕೊನೆಗೊಂಡಿತು.

ನಾಯಕಿ ಏಕಾಂಗಿ ಹೋರಾಟ

ಒಂದೆಡೆ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡಿದರು. 43 ಎಸೆತಗಳನ್ನು ಎದುರಿಸಿದ ಕೌರ್‌, ಎರಡು ಸಿಕ್ಸರ್‌ ಮತ್ತು 7 ಬೌಂಡರಿಗಳ ನೆರವಿನಿಂದ 65 ರನ್‌ ಗಳಿಸಿ ಆಸೀಸ್‌ ಬೌಲರ್‌ಗಳಿಗೆ ಸವಾಲಾದರು. ನಾಯಕಿಗೆ ತಕ್ಕ ಸಾಥ್‌ ನೀಡಿದ ಜೆಮಿಮಾ ರಾಡ್ರಿಗಸ್‌, 33 ರನ್‌ ಗಳಿಸಿದ್ದ ವೇಳೆ ಬ್ರೌನ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಆರು ಮಂದಿ ಆಟಗಾರ್ತಿಯರು ಎರಡಂಕಿಯ ಮೊತ್ತವನ್ನೇ ದಾಟಲಿಲ್ಲ.

ಈ ಸುದ್ದಿ ಓದಿದ್ದೀರಾ ? : ಭಾರತಕ್ಕೆ 17ನೇ ಚಿನ್ನದ ಪದಕ ಗೆದ್ದುಕೊಟ್ಟ ವಿಶ್ವ ಚಾಂಪಿಯನ್‌ ಝರೀನ್‌

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯ ಪರ ಆರಂಭಿಕ ಆಟಗಾರ್ತಿ ಬೆತ್‌ ಮೂನಿ ಆಕರ್ಷಕ ಅರ್ಧಶತಕ (61) ಗಳಿಸಿದರು. ನಾಯಕಿ ಮೆಕ್‌ ಲ್ಯಾನಿಂಗ್‌  36 ರನ್‌ ಗಳಿಸಿದ್ದ ವೇಳೆ ರನೌಟ್‌ಗೆ ಬಲಿಯಾದರು.

ನಿಮಗೆ ಏನು ಅನ್ನಿಸ್ತು?
0 ವೋಟ್