ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತಕ್ಕೆ 100 ರನ್‌ ಗೆಲುವಿನ ಗುರಿಯಿಟ್ಟ ಪಾಕಿಸ್ತಾನ

  • ಮಳೆಯಿಂದಾಗಿ ತಡವಾಗಿ ಪಂದ್ಯ ಪ್ರಾರಂಭ
  • ಭಾರತದ ಗೆಲುವಿಗೆ ಸುಲಭ ಸವಾಲು

ಕಾಮನ್‌ವೆಲ್ತ್‌ ಕ್ರೀಡಾಕೂಟದ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಭಾರತದ ವನಿತೆಯರು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 99 ರನ್‌ಗಳಿಗೆ ನಿಯಂತ್ರಿಸಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ಮಳೆಯಿಂದಾಗಿ 30 ನಿಮಿಷಗಳ ಕಾಲ ಪಂದ್ಯ ತಡವಾಗಿ ಪ್ರಾರಂಭವಾಗಿತ್ತು. ಈ ಹಿನ್ನಲೆಯಲ್ಲಿ ಓವರ್‌ಗಳ ಸಂಖ್ಯೆಯನ್ನು 18ಕ್ಕೆ ಕಡಿತಗೊಳಿಸಲಾಯಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ, ಹರ್ಮನ್‌ ಪ್ರೀತ್‌ ಕೌರ್‌ ಬಳಗದ ಬಿಗು ಬೌಲಿಂಗ್‌ ದಾಳಿ ಎದುರಿಸಲಾಗದೆ  ಕೇವಲ 99 ರನ್‌ ಗಳಿಸುವಷ್ಟರಲ್ಲೇ ಆಲೌಟ್‌ ಆಯಿತು. ಆರಂಭಿಕ ಆಟಗಾರ್ತಿ ಮುನೀಬಾ ಅಲಿ ಗಳಿಸಿದ 32 ರನ್‌ ಗರಿಷ್ಠ ಸ್ಕೋರ್‌ ಎನಿಸಿಕೊಂಡಿತು. ಉಳಿದಂತೆ ಅಲಿಯಾ ರಿಯಾಝ್‌ 18 ರನ್‌, ನಾಯಕಿ ಬಿಸ್ಮಾ ಮರೂಫ್‌ 17 ರನ್‌ ಗಳಿಸಿದರು. ಐವರು ಆಟಗಾರ್ತಿಯರು ಎರಡಂಕಿಯ ಮೊತ್ತ ದಾಟುವ ಮೊದಲೇ ಪೆವಿಲಿಯನ್‌ ಸೇರಿಕೊಂಡರು.

ಭಾರತದ ಪರ ಬೌಲಿಂಗ್‌ನಲ್ಲಿ ಸ್ನೇಹ್‌ ರಾಣಾ ಮತ್ತು ರಾಧಾ ಯಾದವ್‌ ತಲಾ ಎರಡು ವಿಕೆಟ್‌ ಪಡೆದರೆ, ಶೇಫಾಲಿ ವರ್ಮಾ, ರೇಣುಕಾ ಸಿಂಗ್‌ ಹಾಗೂ ಮೆಘನಾ ಸಿಂಗ್‌ ತಲಾ ಒಂದು ವಿಕೆಟ್‌ ಪಡೆದರು.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತಕ್ಕೆ ಎರಡನೇ ಚಿನ್ನದ ಪದಕ

ಉಭಯ ತಂಡಗಳೂ ಇಂದಿನ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿವೆ. ಪಂದ್ಯ ಗೆಲ್ಲುವ ತಂಡ ಸೆಮಿಫೈನಲ್‌ ಹಂತಕ್ಕೆ ಪ್ರವೇಶ ಪಡೆಯುವ ಸಾಧ್ಯತೆಯೂ ಇದೆ. ಕೂಟದ ಮೊದಲ ಪಂದ್ಯದಲ್ಲಿ ಹರ್ಮನ್‌ ಪ್ರೀತ್‌ ಕೌರ್‌ ಸಾರಥ್ಯದ ಭಾರತ, ಆಸ್ಟ್ರೇಲಿಯ ತಂಡಕ್ಕೆ ಶರಣಾಗಿತ್ತು. ಸೋಲಿನಂಚಿಗೆ ತಲುಪಿದ್ದರೂ, ಹೋರಾಟ ಕೈ ಬಿಡದ ಆಸೀಸ್‌ ವನಿತಯೆರು ರೋಚಕ ಗೆಲುವು ದಾಖಲಿಸಿದ್ದರು. ಮತ್ತೊಂದೆಡೆ ಪಾಕಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾರ್ಬಾಡೋಸ್‌ ವಿರುದ್ಧ ಮುಗ್ಗರಿಸಿತ್ತು.

ಉಭಯ ತಂಡಗಳು ಈವರೆಗೆ 11 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 9 ಪಂದ್ಯಗಳಲ್ಲಿ ಭಾರತ ಗೆಲುವು ಕಂಡಿದ್ದರೆ, ಪಾಕಿಸ್ತಾನ ಕೇವಲ ಎರಡು ಪಂದ್ಯಗಳಲ್ಲಷ್ಟೇ ಗೆಲ್ಲಲು ಶಕ್ತವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್