ಬಡತನ, ಗಾಯದ ಸಮಸ್ಯೆ ನಡುವೆಯೂ ʻಚಿನ್ನದ ಭಾರʼ ಎತ್ತಿದ ಜೆರೆಮಿ

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಶನಿವಾರ (ಜುಲೈ 30) ಮೂರು ಪದಕ ಗೆದ್ದಿದ್ದ ಭಾರತ, ಭಾನುವಾರ (ಜುಲೈ 31) ಮತ್ತೆ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಶನಿವಾರ ವೇಟ್‌ ಲಿಫ್ಟಿಂಗ್‌ ಮಹಿಳೆಯರ 55 ಕೆಜಿ ವಿಭಾಗದಲ್ಲಿ, ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಆ ಬಳಿಕ ವೇಟ್‌ಲಿಫ್ಟಿಂಗ್‌ನಲ್ಲಿ ಪುರುಷರ 67 ಕೆಜಿ ವಿಭಾಗದಲ್ಲಿ 19 ವರ್ಷದ ಜೆರೆಮಿ ಲಾಲ್‌ರಿನುಂಗ ಒಟ್ಟು 300 ಕೆ.ಜಿ. ಭಾರ ಎತ್ತುವ ಮೂಲಕ ʻಸ್ವರ್ಣʼದ ನಗೆ ಬೀರಿದ್ದಾರೆ.

ಸ್ನ್ಯಾಚ್‌ ವಿಭಾಗದಲ್ಲಿ 140 ಕೆ.ಜಿ ಭಾರತ ಎತ್ತಿದ್ದ ಜೆರೆಮಿ ಲಾಲ್‌ರಿನುಂಗ, ಈ ವಿಭಾಗದಲ್ಲಿ ಕಾಮನ್‌ವೆಲ್ತ್‌ ಕೂಟದಲ್ಲಿ ಹೊಸ ದಾಖಲೆ ನಿರ್ಮಿಸಿದರು. ಆ ಬಳಿಕ ಕ್ಲೀನ್ ಮತ್ತು ಜರ್ಕ್‌ನ 2ನೇ ಪ್ರಯತ್ನದಲ್ಲಿ 160 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಖಾತ್ರಿ ಪಡಿಸಿದರು. ಕಳೆದ ವರ್ಷ ತಾಷ್ಕೆಂಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಗಾಯಗೊಂಡಿದ್ದ ಜೆರೆಮಿ, ಆ ಬಳಿಕ ಮೊಣಕಾಲು ಮತ್ತು ಬೆನ್ನಿನ ಗಾಯದಿಂದಾಗಿ ಸ್ಪರ್ಧಾ ಕಣದಿಂದ ದೂರವಾಗಿದ್ದರು. ಆದಾಗಿಯೂ ಬರ್ಮಿಂಗ್‌ಹ್ಯಾಮ್‌ನಲ್ಲಿ ದೇಶಕ್ಕಾಗಿ ಪದಕ ಗೆಲ್ಲುವ ಮೂಲಕ ಅಮೋಘ ಆರಂಭ ಮಾಡಿದ್ದಾರೆ.

ರಾಷ್ಟ್ರೀಯ ದಾಖಲೆ

ವೇಟ್‌ಲಿಫ್ಟಿಂಗ್‌ನಲ್ಲಿ 67 ಕೆಜಿ ವಿಭಾಗದಲ್ಲಿ ಒಟ್ಟು 306 ಕೆ.ಜಿ (141 ಕೆಜಿ ಸ್ನ್ಯಾಚ್  ಮತ್ತು 167 ಕೆಜಿ ಕ್ಲೀನ್ ಮತ್ತು ಜರ್ಕ್) ಭಾರ ಎತ್ತಿರುವ ಜೆರೆಮಿ ಲಾಲ್‌ರಿನುಂಗ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.

ಕುಟುಂಬ

ಮಿಜೋರಾಂನ ಐಜ್ವಾಲ್‌ ಮೂಲದ ಜೆರೆಮಿ ಲಾಲ್‌ರಿನುಂಗ ಅವರ ತಂದೆ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಕಾರ್ಮಿಕನಾಗಿದ್ದರು. ಇವರಿಗೆ ಐವರು ಗಂಡು ಮಕ್ಕಳು.  ಆರಂಭದ ದಿನಗಳಲ್ಲಿ ಜೆರೆಮಿ, ಬಾಕ್ಸರ್‌ ಆಗುವ ಕನಸು ಕಂಡಿದ್ದರು. ಅದೇ ದಾರಿಯಲ್ಲಿ ಅಭ್ಯಾಸವನ್ನೂ ನಡೆಸುತ್ತಿದ್ದರು. ಆದರೆ ಅಚಾನಕ್‌ ಆಗಿ ವೇಟ್‌ಲಿಫ್ಟಿಂಗ್‌ನತ್ತ ತಮ್ಮ ಚಿತ್ತವನ್ನು ಬದಲಾಯಿಸಿದರು.

ಈ ಸುದ್ದಿ ಓದಿದ್ದೀರಾ ? :ಹಿಮಾ ದಾಸ್‌ಗೆ ಚಿನ್ನ | ವೀರೇಂದ್ರ ಸೆಹ್ವಾಗ್‌ ಕಾಲೆಳೆದ ನೆಟ್ಟಿಗರು

ಯೂತ್ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಚಿನ್ನ

2018 ರ ಯೂತ್ ಒಲಿಂಪಿಕ್ಸ್‌ನಲ್ಲಿ ಪುರುಷರ 62 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಜೆರೆಮಿ, ಚೊಚ್ಚಲ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು. ಬಡತನದಿಂದ ಬಳಲುತ್ತಿದ್ದ ಜೆರೆಮಿಗೆ, ಆರ್ಮಿ ಬಾಯ್ಸ್ ಸ್ಪೋರ್ಟ್ಸ್ ಕಂಪನಿಯು ಪ್ರಾಯೋಜಕತ್ವ ನೀಡಿದ  ಕಾರಣದಿಂದಾಗಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪದಕಗಳನ್ನು ಗೆಲ್ಲಲು ಕಾರಣವಾಯಿತು.

2020ರಲ್ಲಿ ಕೋಲ್ಕತ್ತದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಜೆರೆಮಿ ಚಾಂಪಿಯನ್‌ ಆಗಿ ಸಂಭ್ರಮಿಸಿದ್ದರು. ಕಳೆದ ವರ್ಷ ತಾಷ್ಕೆಂಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲೂ ಪದಕ ಗೆದ್ದಿದ್ದ ಜೆರಿಮಿ, ಬಳಿಕ ಗಾಯಕ್ಕೆ ತುತ್ತಾಗಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್