ಬರ್ಮಿಂಗ್‌ಹ್ಯಾಮ್‌ನಲ್ಲಿ ಬೆಳಗಿದ ಭಾರತ; ಅಥ್ಲೆಟಿಕ್ಸ್‌ನಲ್ಲಿ ಹೊಸ ಸಾಧನೆ

ಈ ಬಾರಿ 215 ಕ್ರೀಡಾಪಟುಗಳೊಂದಿಗೆ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದ ಭಾರತೀಯ ಕ್ರೀಡಾಪಟುಗಳು 22 ಚಿನ್ನ, 16 ಬೆಳ್ಳಿ, 23 ಕಂಚು ಸೇರಿದಂತೆ ಒಟ್ಟು 61 ಪದಗಳೊಂದಿಗೆ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ. ವೇಟ್‌ಲಿಫ್ಟರ್‌ ಸಂಕೇತ್‌ ಸರ್ಗರ್ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಆರಂಭವಾಗಿದ್ದ ಭಾರತದ ಪದಕ ಬೇಟೆಯ ಅಭಿಯಾನ, ಪುರುಷರ ಹಾಕಿ ತಂಡದ ಬೆಳ್ಳಿ ಪದಕದೊಂದಿಗೆ ತೆರೆಬಿದ್ದಿದೆ.

22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ವರ್ಣರಂಜಿತ ತೆರೆಬಿದ್ದಿದೆ. ಆ ಮೂಲಕ ಕಳೆದ 11 ದಿನಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಚಿನ್ನ-ಬೆಳ್ಳಿ-ರಜತ ಪದಕಗಳ ಸಾಧನೆಯ ಸುದ್ದಿಗಳಿಗೂ ವಿರಾಮ ಬಿದ್ದಿದೆ.

ಈ ಬಾರಿ 215 ಕ್ರೀಡಾಪಟುಗಳೊಂದಿಗೆ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದ ಭಾರತೀಯ ಕ್ರೀಡಾಪಟುಗಳು 22 ಚಿನ್ನ, 16 ಬೆಳ್ಳಿ, 23 ಕಂಚು ಸೇರಿದಂತೆ ಒಟ್ಟು 61 ಪದಗಳೊಂದಿಗೆ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ. ವೇಟ್‌ಲಿಫ್ಟರ್‌ ಸಂಕೇತ್‌ ಸರ್ಗರ್ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಆರಂಭವಾಗಿದ್ದ ಭಾರತದ ಪದಕ ಬೇಟೆಯ ಅಭಿಯಾನ, ಪುರುಷರ ಹಾಕಿ ತಂಡದ ಬೆಳ್ಳಿ ಪದಕದೊಂದಿಗೆ ತೆರೆಬಿದ್ದಿದೆ.

ಹಾಗೆ ನೋಡಿದರೆ ಕಾಮನ್‌ವೆಲ್ತ್‌ ಕೂಟದಲ್ಲಿ ಇದು ಭಾರತೀಯ ಸ್ಪರ್ಧಿಗಳ ಸರ್ವಶ್ರೇಷ್ಠ ಸಾಧನೆಯೇನೂ ಅಲ್ಲ. 2010ರ ನವದೆಹಲಿ ಕಾಮನ್‌ವೆಲ್ತ್ ಕೂಟದಲ್ಲಿ ಭಾರತ 38 ಚಿನ್ನದ ಪದಕ ಸೇರಿದಂತೆ ಒಟ್ಟು 101 ಪದಕಗಳನ್ನು ಗೆದ್ದಿತ್ತು. ಇದು ಈವರೆಗಿನ ಭಾರತದ ಶ್ರೇಷ್ಠ ಸಾಧನೆಯಾಗಿದೆ. 2010ರಲ್ಲಿ 101, 2002ರಲ್ಲಿ 69, 2018ರಲ್ಲಿ 66, 2014ರಲ್ಲಿ 64 ಪದಕಗಳನ್ನು ಗೆದ್ದ ಸಾಧನೆ ಮಾಡಿತ್ತು.

ಆಸ್ಟ್ರೇಲಿಯಗೆ ಮೊದಲ ಸ್ಥಾನ

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 67 ಚಿನ್ನದ ಪದಕ ಸೇರಿದಂತೆ ಒಟ್ಟು 178 ಪದಕಗಳೊಂದಿಗೆ ಆಸ್ಟ್ರೇಲಿಯ ಮೊದಲ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ. 57 ಚಿನ್ನದ ಪದಕ ಸೇರಿದಂತೆ ಒಟ್ಟು 176 ಪದಕಗಳೊಂದಿಗೆ ಇಂಗ್ಲೆಂಡ್‌ ದ್ವಿತೀಯ ಹಾಗೂ 26 ಚಿನ್ನದ ಪದಕ ಸೇರಿದಂತೆ ಒಟ್ಟು 92 ಪದಕಗಳೊಂದಿಗೆ ಕೆನಡಾ ಮೂರನೇ ಸ್ಥಾನಿಯಾಗಿದೆ. ಆ ನಂತರದಲ್ಲಿ ಭಾರತವಿದೆ.    

ಮೂರನೇ ಅತಿಹೆಚ್ಚು ಪದಕ

2002ರ ಮ್ಯಾಂಚೆಸ್ಟರ್‌ ಕೂಟದಲ್ಲಿ 30 ಚಿನ್ನದ ಪದಕ ಒಳಗೊಂಡಂತೆ 69 ಪದಕ ಜಯಿಸಿರುವುದು ವಿದೇಶಿ ನೆಲದಲ್ಲಿ ಭಾರತದ ಉತ್ತಮ ಪ್ರದರ್ಶನವಾಗಿದೆ. 2018ರ ಗೋಲ್ಡ್‌ಕೋಸ್ಟ್‌ ಕೂಟದಲ್ಲಿ 26 ಚಿನ್ನ ಸೇರಿದಂತೆ 66 ಪದಕಗಳು ಭಾರತಕ್ಕೆ ಲಭಿಸಿತ್ತು. 2006ರ ಮೆಲ್ಬರ್ನ್‌ ಕೂಟದಲ್ಲಿ ಭಾರತಕ್ಕೆ 22 ಚಿನ್ನ ದೊರೆತಿದ್ದರೂ, ಒಟ್ಟು ದೊರೆತದ್ದು 50 ಪದಕ. ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತದ ಪ್ರದರ್ಶನ, ವಿದೇಶಿ ನೆಲದಲ್ಲಿ ಮೂರನೇ ಶ್ರೇಷ್ಠ ಸಾಧನೆಯಾಗಿದೆ.

ಶೂಟಿಂಗ್‌, ಆರ್ಚರಿ ಇಲ್ಲದೆಯೂ 61 ಪದಕ

ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತಕ್ಕೆ ಅತಿಹೆಚ್ಚು ಪದಕಗಳು ಲಭಿಸಿರುವುದು ಶೂಟಿಂಗ್‌ ಮತ್ತು ಆರ್ಚರಿ ವಿಭಾಗದಲ್ಲಿ. ಶೂಟಿಂಗ್‌ ಒಂದರಲ್ಲೇ ಭಾರತ ಇದುವರೆಗೂ ಒಟ್ಟು 135 ಪದಕಗಳನ್ನು ಗೆದ್ದಿದೆ. ಇದರಲ್ಲಿ 63 ಚಿನ್ನ, 44 ಬೆಳ್ಳಿ ಹಾಗೂ 28 ಕಂಚಿನ ಪದಕಗಳು ಸೇರಿದೆ. ಸ್ಟಾರ್‌ ಶೂಟರ್‌ ಜಸ್ಪಾಲ್‌ ರಾಣಾ ಒಬ್ಬರೇ ಒಟ್ಟು 15 ಪದಕಗಳನ್ನು ಗೆದ್ದಿರುವುದು ದಾಖಲೆಯಾಗಿದೆ. ಈ ಬಾರಿ ಶೂಟಿಂಗ್‌ ಮತ್ತು ಆರ್ಚರಿಯನ್ನು ಕೈಬಿಟ್ಟ ಕಾರಣ ಭಾರತಕ್ಕೆ ಭಾರಿ ಹಿನ್ನಡೆಯಾದಂತಾಗಿದೆ.

ಶರತ್‌ ಕಮಾಲ್‌ ಟ್ರಿಪಲ್‌ ಚಿನ್ನ !

ಭಾರತದ ಅತ್ಯಂತ ಅನುಭವಿ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್, ಬರ್ಮಿಂಗ್‌ಹ್ಯಾಮ್‌ನಲ್ಲಿ ಮೂರು ಚಿನ್ನದ ಪದಕ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. 5 ಕಾಮನ್‌ವೆಲ್ತ್ ಗೇಮ್ಸ್‌ ಕೂಟಗಳಲ್ಲಿ ಭಾಗವಹಿಸಿರುವ ಶರತ್‌, ತಮ್ಮ ಪದಕಗಳ ಸಂಖ್ಯೆಯನ್ನು 13ಕ್ಕೆ ಹೆಚ್ಚಿಸಿಕೊಂಡರು.

ಪುರುಷರ ಸಿಂಗಲ್ಸ್‌ನಲ್ಲಿ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿ ಈ ಬಾರಿಯ ಗೇಮ್ಸ್‌ನಲ್ಲಿ ಮೂರನೇ ಚಿನ್ನದ ಪದಕ ಗೆದ್ದರು. 2006ರಲ್ಲಿ ಮೊದಲ ಬಾರಿಗೆ ಸಿಂಗಲ್ಸ್ ಚಿನ್ನ ಗೆದ್ದಿದ್ದ 40 ವರ್ಷದ ಶರತ್, 16 ವರ್ಷಗಳ ನಂತರ ಮತ್ತೆ ಗೆದ್ದು ಬಂಗಾರದ ಪದಕ ತನ್ನದಾಗಿಸಿಕೊಂಡರು. ಶ್ರೀಜಾ ಅಕುಲಾ ಅವರೊಂದಿಗೆ ಮಿಶ್ರ ಡಬಲ್ಸ್ ಮತ್ತು ಸುಭಜಿತ್ ಸಹಾ ಅವರೊಂದಿಗೆ ಡಬಲ್ಸ್ ಈವೆಂಟ್‌ನಲ್ಲಿ ಶರತ್‌, ಎರಡು ಚಿನ್ನವನ್ನು ಗೆದ್ದಿದ್ದಾರೆ.

ಅಥ್ಲೆಟಿಕ್ಸ್‌ನಲ್ಲಿ ಎಂಟು ಪದಕ !

Image

ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತ ಒಟ್ಟು 8 ಪದಕಗಳನ್ನು ಗೆಲ್ಲುವ ಮೂಲಕ ಅಚ್ಚರಿಯ ಸಾಧನೆ ಮಾಡಿದೆ. ಸ್ಟಾರ್‌ ಅಥ್ಲೀಟ್‌ ನೀರಜ್‌ ಚೋಪ್ರಾ ಅವರ ಅನುಪಸ್ಥಿತಿಯಲ್ಲೂ 1 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಜಯಿಸಿದೆ. ವಿದೇಶದಲ್ಲಿ ನಡೆದ ಕೂಟಗಳ ಅಥ್ಲೆಟಿಕ್ಸ್‌ನಲ್ಲಿ ಭಾರತದ ಶ್ರೇಷ್ಠ ಸಾಧನೆ ಈ ಬಾರಿ ಮೂಡಿಬಂದಿದೆ.

ಟ್ರಿಪಲ್‌ ಜಂಪ್‌, ಹೈಜಂಪ್‌, ವೇಗದ ನಡಿಗೆ, ಮಹಿಳಾ ಜಾವೆಲಿನ್‌, ಸ್ಟೀಪಲ್‌ ಚೇಸ್‌ನಲ್ಲಿ ವಿಭಾಗಗಳಲ್ಲಿ ಇದೇ ಮೊದಲ ಬಾರಿಗೆ ದೇಶಕ್ಕೆ ಪದಕ ಬಂದಿದ್ದು, ದೇಶದ ಕ್ರೀಡಾಳುಗಳು ಅಚ್ಚರಿಯ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಸ್ಪರ್ಧಿಗಳು ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೇರಳದ ಎಲ್ದೋಸ್‌ ಪೌಲ್‌ ಚಿನ್ನದ ಪದಕ ಮತ್ತು  ಅಬ್ದುಲ್ಲಾ ಅಬೂಬಕರ್‌ ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು. ಸ್ಕ್ವಾಷ್‌, ಜುಡೋ ಹಾಗೂ ಅಷ್ಟೊಂದು ಜನಪ್ರಿಯತೆ ಹೊಂದಿರದೇ ಇರುವ ಲಾನ್‌ ಬಾಲ್ಸ್‌ನಲ್ಲಿ ನಾಲ್ವರನ್ನೊಳೊಗೊಂಡ ಭಾರತೀಯ ಮಹಿಳಾ ತಂಡ ಚೊಚ್ಚಲ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.

ಬ್ಯಾಡ್ಮಿಂಟನ್‌ನಲ್ಲಿ ಹೊಸ ಇತಿಹಾಸ

ಕುಸ್ತಿ, ವೇಟ್‌ಲಿಫ್ಟಿಂಗ್‌, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌ ಮತ್ತು ಟೇಬಲ್ ಟೆನಿಸ್‌ನಲ್ಲಿ ಭಾರತ ಈ ಬಾರಿ ಹೆಚ್ಚು ಚಿನ್ನ ಗೆದ್ದುಕೊಂಡಿದೆ. ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 10 ಪದಕ ಪಡೆದಿರುವುದು ಭಾರತೀಯರ ಸಾರ್ವಕಾಲಿಕ ಸಾಧನೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆಯನ್ನು ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ, ರವಿ ದಹಿಯಾ, ವಿನೇಶ್‌ ಫೋಗಾಟ್‌ ಮೂಡಿಸಿದ್ದಾರೆ. ಬ್ಯಾಡ್ಮಿಂಟನ್‌ನಲ್ಲೂ ಭಾರತ ಪ್ರಾಬಲ್ಯ ಮೆರೆದಿದ್ದು, ಮೂರು ಚಿನ್ನದ ಪದಕ ಬಗಲಿಗೆ ಹಾಕಿಕೊಂಡ ಭಾರತದ ಸ್ಪರ್ಧಿಗಳು ಇತಿಹಾಸ ರಚಿಸಿದರು. ಮೊದಲ ಬಾರಿಗೆ ಪಿ ವಿ ಸಿಂಧು ಚಿನ್ನ ಗೆದ್ದಿದ್ದಾರೆ. ಲಕ್ಷ್ಯ ಸೇನ್‌ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸುವತ್ತ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಪಿ ವಿ ಸಿಂಧು ಮತ್ತು ಲಕ್ಷ್ಯಸೇನ್‌ ಅವರು ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರೆ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಈ ಸುದ್ದಿ ಓದಿದ್ದೀರಾ ? : ಏಷ್ಯಾಕಪ್‌ಗೆ ಟೀಮ್‌ ಇಂಡಿಯಾ ಪ್ರಕಟ; ವಿರಾಟ್‌ ಕೊಹ್ಲಿಗೆ ನಿರ್ಣಾಯಕ ಸರಣಿ

ಕ್ರಿಕೆಟ್‌ನಲ್ಲಿ ಬೆಳ್ಳಿ

ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಸೇರ್ಪಡೆಯಾಗಿದ್ದ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಚಿನ್ನದ ಪದಕ ಗೆಲ್ಲುವ ಅಪೂರ್ವ ಅವಕಾಶ ಒದಗಿಬಂದಿತ್ತು. ಆದರೆ ಗೆಲುವಿನತ್ತ ದಾಪುಗಾಲಿರಿಸಿದ್ದ ತಂಡ, ಅಂತಿಮ ಕ್ಷಣದಲ್ಲಿ ಎಡವಿತು. ಮೂರು ರನ್‌ ಅಂತರದಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ, ಎದುರಾಳಿ ಆಸ್ಟ್ರೇಲಿಯಗೆ 9 ರನ್‌ಗಳಿಂದ ಶರಣಾಯಿತು.

ಒಟ್ಟಿನಲ್ಲಿ ಭಾರತದ ಕ್ರೀಡಾಪಟುಗಳು ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಪ್ರದರ್ಶನದ ಮಟ್ಟವನ್ನು ಮತ್ತಷ್ಟು ಎತ್ತರಕ್ಕೇರಿಸುತ್ತಿದ್ದು, ಮುಂದಿನ ಒಲಿಂಪಿಕ್ಸ್‌ ಕೂಟದಲ್ಲಿ ಭಾರತಕ್ಕೆ ಭರವಸೆ ಮೂಡಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180